ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ನಾಡರಿಗೆ ರೋಡ್ಸ್ ಸ್ಕಾಲರ್ಶಿಪ್ ಸಿಕ್ಕ ಪ್ರಸಂಗ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Girish Karnads autobiography part8
ತನ್ನ ಉತ್ಕರ್ಷ ಸಾಧಿಸಲು, ಹೊಸ ದಿಗಂತದ ಪರಿಚಯ ಮಾಡಿಕೊಳ್ಳಲು ಮುಂಬಯಿಗೆ ಹೋಗಬೇಕೆಂದು ನಿಶ್ಚಯಸಿ, ದೇಶದಾದ್ಯಂತ ಖ್ಯಾತಿ ಪಡೆದ ಮುಂಬಯಿ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗಕ್ಕೆ ಎಂ.ಎ.ಗಾಗಿ ಅರ್ಜಿಸಲ್ಲಿಸಿ, ಪ್ರವೇಶ ದೊರೆತೊಡನೆ ಗಿರೀಶ ಮುಂಬಯಿಗೆ ಹೊರಟರು. ಮಾತುಂಗಾದಲ್ಲಿ ಕರ್ನಾಟಕ ಬಿಲ್ಡಿಂಗ್ಸ್, ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಜೇನುಗೂಡು ಎಂದೇ ಪ್ರಸಿದ್ಧವಾಗಿತ್ತು. ಅದು ಸಹಕಾರಿ ಗೃಹ ಸಂಸ್ಥೆಯಾಗಿತ್ತು. ಅಲ್ಲಿ ಒಂದು ಮೂರುಕೋಣೆಗಳ ಮತ್ತು ಜೊತೆಗೆ ವಿಶಾಲ ಗ್ಯಾಲರಿ ಇದ್ದ ಮನೆಯನ್ನು ಡಾ| ಕಾರ್ನಾಡರು ಮೊದಲೇ ಖರೀದಿಸಿದ್ದರು. ಆ ಮನೆಯಲ್ಲಿ ಅಣ್ಣ ವಸಂತನೊಡನೆ ಗಿರೀಶ ವಾಸಿಸಲು ಪ್ರಾರಂಭಿಸಿದರು.

ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದ ಕ್ಲಾಸುಗಳು ಮುಂಬಯಿ ವಿಶ್ವವಿದ್ಯಾಲಯದ ಫೋರ್ಟ್ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದವು. ವಿಶ್ವವಿದ್ಯಾಲಯದ ಸುತ್ತಲೂ ಬುಕ್‌ಸ್ಟಾಲ್‌ಗಳ ಹಾಗೂ ಹೋಟೆಲ್‌ಗಳ ಆಕರ್ಷಣೆ ಇತ್ತು. ಬೆಳಗಾವಿಯ ಲಿಂಗರಾಜ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ, ವಿ.ಜಿ. ಎಂದೇ ಪ್ರಸಿದ್ಧರಾಗಿದ್ದ ಪ್ರೊ|ವಿ.ಜಿ.ಕುಲಕರ್ಣಿಯವರ ಮಗ ಅಶೋಕ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡಲು ಮುಂಬೈಗೆ ಬಂದಿದ್ದರು. ಚರ್ಚಾಕೂಟ ನಾಟಕ ಸ್ಪರ್ಧೆಗಳಿಂದಾಗಿ, ಪ್ರೊ ರಾಮಾನುಜನ್ ಅವರ ಸಂಪರ್ಕದಿಂದಾಗಿ ಧಾರವಾಡದಲ್ಲಿ ಅಶೋಕ ಹಾಗೂ ಗಿರೀಶರ ಸ್ನೇಹವಾಗಿತ್ತು. ಮುಂಬೈಯಲ್ಲಿ ಆ ಸ್ನೇಹ ಹೆಚ್ಚು ಆತ್ಮೀಯವಾಯ್ತು.

ಅಶೋಕ ವಡಾಲಾದ ಯುನಿವರ್ಸಿಟಿ ಹಾಸ್ಟೆಲ್‌ನಲ್ಲಿ ಇರುತ್ತಿದ್ದರು. ವಾಡಾಲಾ ಮಾತುಂಗಾಕ್ಕೆ ಸಮೀಪವಾಗಿ ಇದ್ದುದರಿಂದ, ಗಿರೀಶ ಹೆಚ್ಚಿನ ಸಮಯ ಅವನ ಜೊತೆಗೆಯಲ್ಲಿ ಕಳೆಯುತ್ತಿದ್ದರು. ಮೇಘನಾದ ದೇಸಾಯಿ ಎಂಬವ ಅರ್ಥಶಾಸ್ತ್ರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಅವನು ಚರ್ಚಾಕೂಟ ಹಾಗೂ ಗುಜರಾತಿ ನಾಟಕಗಳಲ್ಲಿ ತೊಡಗಿರುತ್ತಿದ್ದ. ಅವನೂ ಗಿರೀಶರ ಸ್ನೇಹಿತನಾದ. ಮುಂದೆ ಅವನು ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್‌ನ (London School of Economics) ನಿರ್ದೇಶಕನಾದ. ಬ್ರಿಟನ್ನಿನ ಲೇಬರ್ ಪಕ್ಷದ ದೀಪ್ತ ಸದಸ್ಯನೆಂದು ಖ್ಯಾತಿ ಪಡೆದು ಲಾರ್ಡ್ ದೇಸಾಯಿಯಾಗಿದ್ದ. ಮುಂದೆ 2000ದಲ್ಲಿ ಲಂಡನ್ನಿನ ಒಂದು ಔತಣಕೂಟದಲ್ಲಿ ಕಂಡಾಗ ಗಿರೀಶ್ ಎಂದು ಕೂಗಿ ಕರೆದಿದ್ದ, ಕೂಡಿ ಕಳೆದ ಹಿಂದಿನ ದಿನಗಳ ಆತ್ಮೀಯತೆಯನ್ನು ಅವನು ತೋರಿದ್ದ.

ದಿನದಲ್ಲಿ ಹೆಚ್ಚಿನ ವೇಳೆ ಗಿರೀಶರು ಯುನೈಟೆಡ್ ಸ್ಟೇಟ್ಸ್ ಇನ್ಫಾರ್ಮೇಶನ್ ಸರ್ವಿಸ್ ಮತ್ತು ಬ್ರಿಟಿಶ ಕೌನ್ಸಿಲ್ ಲೈಬ್ರರಿಗಳಲ್ಲಿ ಕಳೆಯುತ್ತಿದ್ದರು. ಅವರ ಲಕ್ಷ್ಯವೆಲ್ಲ ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವುದಾಗಿತ್ತು, ಅದೂ ಸ್ಕಾಲರ‍್ಶಿಪ್ ಪಡೆದು. ಆಗಾಗ ಮಿತ್ರರೊಂದಿಗೆ ನಾಟಕಗಳನ್ನು ನೋಡುತ್ತಿದ್ದರು. ಬೌದ್ಧಿಕತೆಯ ಮತ್ತು ನಾಟಕೀಯತೆಯ ಪರಮಸಿದ್ಧಿ ಎಂದು ಹೆಸರಾಗಿದ್ದ ಪು.ಲ.ದೇಶಪಾಂಡೆಯವರ ಮರಾಠಿ ನಾಟಕ ತುಝೇ ಆಹೆ ತುಝಪಾಶೀ, ಪೃಥ್ವೀರಾಜ ಕಪೂರ್ ಮತ್ತು ಝೋಹರ ಸಹಗಲ್ ಅಭಿನಯಿಸಿದ ಪಠಾಣ ಎಂಬ ಹಿಂದೀ ನಾಟಕ, ಆಕ್ಸಫರ್ಡ್ ಪ್ಲೇಹೌಸ್ ಕಂಪನಿಯ, ಫ್ರಾಂಕ್ ಹೌಸರ್ ನಿರ್ದೇಶಿಸಿದ, ಶೇಕ್ಸಪಿಯರನ ಟ್ವೆಲ್ಥ್ ನೈಟ್(Twelfth Night) ಮುಂತಾದ ನಾಟಕಗಳನ್ನು ವೀಕ್ಷಿಸಿದ್ದನ್ನು ನೆನೆಯುತ್ತಾರೆ.

ಅವರಿಗೆ ನಾಟ್ಯಲೇಖನದಲ್ಲಿ ಪರಿಣತ ತಂತ್ರಜ್ಞತೆಯ ಅನುಭವ ಅತ್ಯಂತ ತೀವ್ರವಾಗಿ ಬಂದದ್ದು ನಾಟಕ ನೋಡುವಾಗ ಅಲ್ಲ, ಒಂದು ಚಿತ್ರಪಟ ನೋಡಿದಾಗ ಎಂದು ಬರೆಯುತ್ತಾರೆ. ಅದು ಡೇವಿಡ್ ಲೀನ್ ನಿರ್ದೇಶಿಸಿದ ದಿ ಬ್ರಿಜ್ ಆನ್ ದಿ ರಿವರ್ ಕ್ವಾಯ್ . ಆ ಚಿತ್ರವನ್ನು ನೋಡುತ್ತಿದ್ದಂತೆ ಯಾರೋ ಚಲನಚಿತ್ರ ಲೇಖನದ- ಅಂದರೆ ಒಂದು ದೃಷ್ಟಿಯಿಂದ ನಾಟ್ಯಲೇಖನದ- ಪಾಠ ಹೇಳಿಕೊಡುತ್ತಿದ್ದಾರೆ ಎಂಬ ಅನುಭೂತಿ ಅವರಿಗಾಯಿತಂತೆ. ಇದು ತಮ್ಮನ್ನು ಸಂಪೂರ್ಣ ಅಲ್ಲಾಡಿಸಿದ ಚಿತ್ರವೆಂದೂ, ನೋಡುವಾಗ ಕೆಲವು ಸಲ ಉಸಿರಾಡಿಸುವದೇ ಕಠಿಣವಾಯಿತೆಂದೂ, ಹಲವಾರು ದಿನ ತಾವು ನಾಟ್ಯಲೇಖನದ ಕಮ್ಮಟವೊಂದರಲ್ಲಿ ದುಡಿದು ಬಹಳಷ್ಟು ಹೊಸದನ್ನು ಕಲಿತು ಬಂದ ಗುಂಗು ಹಿಡಿಸಿತ್ತೆಂದು ಬರೆಯುತ್ತಾರೆ. ಇದೇ ಹೊತ್ತಿಗೆ ರಾಮಾನುಜನ್ ಅವರು ಓದಲುಕೊಟ್ಟ ಕ್ರಿಯಾತ್ಮಕ ಲೇಖನ ಕೈಪಿಡಿಯಂತಿದ್ದ Understanding Poetry ಎಂಬ ಪುಸ್ತಕ ನವ್ಯ ವಿಮರ್ಶೆಯ ಲಕ್ಷಣ ಗ್ರಂಥವಾಗಿತ್ತು. ಇದು ಗಿರೀಶರ ಮೇಲೆ ಪ್ರಭಾವ ಬೀರಿತ್ತು.

ರೋಡ್ಸ್ (Rhodes) ಸ್ಕಾಲರ್ಶಿಪ್ ಪಡೆದು ಆಕ್ಸ್‌ಫರ್ಡ್‌ಗೆ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಪ್ರಯತ್ನಿಸಲು ಹೇಳಿದವರು ಧಾರವಾಡದ ಪ್ರೊ|ಕೆ.ಜೆ.ಶಹಾ. ಗಿರೀಶರಿಗೆ ಸ್ಕಾಲರ್ಶಿಪ್ ಸಂದರ್ಶನಕ್ಕಾಗಿ ದಿಲ್ಲಿಯಿಂದ ಕರೆ ಬಂತು. ಭಾರತಕ್ಕೆ ಒಂದೇ ಸ್ಕಾಲರ್ಶಿಪ್ ಇತ್ತು, ಆಯ್ಕೆಯ ಕಾರ್ಯಾಗಾರ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿತ್ತು. ಆ ಕಾಲೇಜು ಭಾರತದ ಅತ್ಯುತ್ತಮ ಕಾಲೇಜಿನಲ್ಲಿ ಒಂದಾಗಿದ್ದು ಭಾರತದ ಆಕ್ಸ್‌ಫರ್ಡ್-ಕೆಂಬ್ರಿಜ್ ಎಂಬ ಖ್ಯಾತಿ ಇತ್ತು. 2-3 ವರ್ಷಗಳಲ್ಲಿ ಒಮ್ಮೆಯಾದರೂ ಈ ಕಾಲೇಜಿನ ವಿದ್ಯಾರ್ಥಿಗೆ ಈ ಸ್ಕಾಲರ್ಶಿಪ್ ದೊರಕುತ್ತಿತ್ತಂತೆ. ಸ್ಕಾಲರ್ಶಿಪ್‌ಗಾಗಿ ಅರ್ಜಿ ಮಾಡುವಾಗ ಪ್ರತಿಯೊಬ್ಬ ಅಭ್ಯರ್ಥಿ ಒಂದು ಆತ್ಮಚರಿತ್ರಯನ್ನು ಬರೆದು, ತಾನು ಯಾವ ಕ್ಷೇತ್ರದಲ್ಲಿ ಎಂಥ ಯಶಸ್ಸು ಗಳಿಸಿದ್ದೇನೆಂಬುದನ್ನು ವರ್ಣಿಸಿ ತನ್ನ ಅರ್ಹತೆಯನ್ನು ಸಿದ್ಧಗೊಳಿಸಬೇಕಾಗಿತ್ತು.

ಸಂದರ್ಶನಕ್ಕಾಗಿ ಧರಿಸಲು ಒಂದು ಸೂಟು ಕೂಡ ಗಿರೀಶರ ಬಳಿ ಇರಲಿಲ್ಲ. ಇವರ ವಾಕ್ಪಟುತ್ವಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ನೀಡಿದ ದಟ್ಟ ನೀಲಿ ಬಣ್ಣದ ಬ್ಲೇಝರ್ ಇತ್ತು. ಅದಕ್ಕೆ ಮ್ಯಾಚ್ ಆಗುವಂತಹ ನೀಲಿ ಪ್ಯಾಂಟು ಹೊಲಿಸಿದರು. ಸಂದರ್ಶನದ ಮೊದಲನೆಯ ದಿನ ಸಂದರ್ಶನ ಸಮಿತಿಯ ಸದಸ್ಯರೊಡನೆ ಪಾಶ್ಚಾತ್ಯ ಪದ್ಧತಿಯ ಡಿನ್ನರ್ ಇರುತ್ತಿತ್ತು. ಪಶ್ಚಾತ್ಯ ಪದ್ಧತಿಯ ಊಟದ ಅನುಭವ ಇವರಿಗೆ ಇರಲಿಲ್ಲ. ಒಂದು ಪಾಶ್ಚಾತ್ಯ ಶಿಷ್ಟಾಚಾರದ ಕೈಪಿಡಿ ಕೊಂಡು ಮೊದಲೇ ಅಭ್ಯಾಸ ಮಾಡಿದ್ದರು. ಊಟಕ್ಕೆ ಮೊದಲು ಸೂಪ್ ಬರುತ್ತದೆ, ಅದಕ್ಕೆ ಯಾವ ಸ್ಪೂನ್ ಬಳಸಬೇಕು ಎಂಬುದರಿಂದ ಹಿಡಿದು ಊಟದ ಎಲ್ಲ ವಿಧಾನದ ಬಗ್ಗೆ ಮಾರ್ಗದರ್ಶನವಿತ್ತು. ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳೆಲ್ಲ ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಾವಿಣ್ಯ ಪಡೆದವರಾಗಿದ್ದರು. ಕಾಲೇಜಿನ ಇಂಗ್ಲಿಷ್ ವಾತಾವರಣ ಯಾರನ್ನಾದರೂ ಕಕ್ಕಾವಿಕ್ಕಿಗೊಳಿಸುವಂತೆ ಇತ್ತಂತೆ.

ಅಚ್ಚುಕಟ್ಟಾಗಿ ಸೂಟ್ ಧರಿಸಿದ ಒಬ್ಬ ಅಭ್ಯರ್ಥಿ ತನ್ನ ಸಂದರ್ಶನ ಮುಗಿಸಿ ಹೊರಗೆ ಬಂದಾಗ ಇತರರು ಕುತೂಹಲದಿಂದ ಏನು ಪ್ರಶ್ನೆ ಕೇಳಿದರು ಎಂದು ವಿಚಾರಿಸುತ್ತಿದ್ದರು. ಒಂದು ಪ್ರಶ್ನೆಯ ಬಗ್ಗೆ ಅವನಲ್ಲಿ ಉತ್ತರವಿಲ್ಲದಾಗ ಅವನು, ಈ ವಿಷಯ ನನ್ನ ವಿಶೇಷಜ್ಞಾನದ ಹೊರಗೆ ಇದೆ, ಆದ್ದರಿಂದ ನಾನು ಉತ್ತರ ಕೊಡಲು ಅಸಮರ್ಥ ಎಂದು ಧೈರ್ಯದಿಂದ ಹೇಳಿದ್ದನಂತೆ. ಸಂದರ್ಶಕರು ಕೂಡಲೇ, ಒಬ್ಬ ರೋಡ್ಸ್ ಅಭ್ಯರ್ಥಿಗೆ ಇಷ್ಟಾದರೂ ಗೊತ್ತಿರಬೇಕು ಎಂದಿದ್ದರಂತೆ. ಸ್ಕಾಲರ್ಶಿಪ್ ಪಡೆದವರ ಹೆಸರು ಘೋಷಿಸಿದಾರ ಇತರರ ಮುಖ ಮಂಕಾಗಿದ್ದಾಗ ಸಮಿತಿಯ ಕಾರ್ಯದರ್ಶಿಯವರು ಮುಂದಿನ ವರ್ಷ ಪ್ರಯತ್ನಿಸಿರಿ ಎಂದಿದ್ದರಂತೆ. ಗಿರೀಶರಿಗೆ ಯಶ ದೊರೆಯಲಿಲ್ಲ. ಮುಂದಿನ ವರ್ಷ ಹೆಚ್ಚಿನ ತಯಾರಿಯಿಂದ ಬರಬೇಕು ಎಂದು ನಿರ್ಧರಿಸಿದರು. ಆಂಗ್ಲ ಪತ್ರಿಕೆಗಳಲ್ಲಿ ಬರುವ ಲೇಖನ, ಪ್ರಬಂಧ, ವಾರ್ತೆ, ಸಂಪಾದಕೀಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಟಿಪ್ಪಣಿ ಮಾಡಿದರು. ಕೆಲವು ಉತ್ತಮ ಜೋಕುಗಳನ್ನೂ, ಅಂಕಿ ಸಂಖ್ಯೆಗಳನ್ನು ಉರುಹಾಕಿದರಂತೆ.

ಮರು ವರ್ಷ ಗಿರೀಶರು ತಮ್ಮ ಪ್ರತ್ಯುತ್ಪನ್ನ ಮತಿಯನ್ನು ಪ್ರದರ್ಶಿಸಿ ಯಶಸ್ವಿಯಾದರು. ಸಂದರ್ಶನ ಸಮಿತಿಯ ಚೇರ‍್ಮನ್ ಲವರಾಜ್ ಕುಮಾರ ಅವರು, That's all, Mr. Karnad, thank you ಎಂದರು. ಪರಿಣಾಮದ ಘೋಷಣೆ ಕೇಳಲು ಎಲ್ಲ ಅಭ್ಯರ್ಥಿಗಳು ಕಾತರದಿಂದ ಕಾಯುತ್ತಿರುವಾಗ ಗಿರೀಶ ಕರ್ನಾಡ ಎಂದ ಹಾಗಾಯಿತು. ಇತರರು ಬಂದು ಕೈಕುಲುಕಿಸಿದಾಗ ಅದು ತಾವೇ ಎಂದು ಅರಿವಾಯಿತು. ಆಕ್ಸ್‌ಫರ್ಡನಲ್ಲಿ ಯಾವ ಕಾಲೇಜು ಸೇರಬೇಕೆಂದು ತಿಳಿಯದೇ ಇದ್ದಾಗ ಲವರಾಜ್ ಕುಮಾರರೇ ಮೊಡ್ಲಿನ್ ಕಾಲೇಜು ಸೇರಲು ಸೂಚಿಸಿದರಂತೆ. ಮನೆಗೆ ಉದ್ದನೆಯ ಸಂದೇಶ ಬರೆದು ಟೆಲಿಗ್ರಾಮ್ ಫಾರ್ಮ್ ತುಂಬುವಾಗ, ಲವರಾಜರು ಅದನ್ನೆಲ್ಲ ಕಾಟುಹಾಕಿ ತಂದೆ ತಾಯಿಗೆ ಅಷ್ಟು ಉದ್ದ ಸಂದೇಶವೇಕೆ? ನನಗೆ ರೋಹ್ಡ್ಸ್ ದೊರೆಯಿತು(I get the Rhodes) ಇಷ್ಟು ಬರೆದರೆ ಸಾಕು ಎಂದರಂತೆ. ಕಳೆದ ವರ್ಷವೂ ನಿನಗೆ ಮತ್ತು ಸ್ಕಾಲರ್ಶಿಪ್ ಪಡೆದವನಿಗೆ ಸರಿಸಾಟಿಯಾದ ಗುಣಾಂಕ ದೊರೆತಿದ್ದವು. ಅವನಿಗೆ 25 ವರ್ಷ ನಿನಗೆ 20 ವರ್ಷ, ನಿನಗೆ ಇನ್ನೊಂದು ಚಾನ್ಸ್ ಇದೆಯೆಂದು ನಿನ್ನನ್ನು ಆರಿಸಲಿಲ್ಲ ಎಂದು ಸದಸ್ಯರೊಬ್ಬರು ಹೇಳಿದರು. ಆಯ್ಕೆಗೊಂಡ ವ್ಯಕ್ತಿ ಅಭ್ಯಾಸ ಮುಂದುವರಿಸಲಿಲ್ಲ ನಿನಗೇ ಕೊಟ್ಟಿದ್ದರೆ ಒಳ್ಳೆಯದಾಗುತ್ತಿತ್ತು ಎಂದರಂತೆ.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 8. In this episode Karnad writes about how he got Rhodes scholarship in Oxford University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X