• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಕಲೆಯಲ್ಲೂ ಪಾರಂಗತರಾಗಿದ್ದ ಕಾರ್ನಾಡ್!

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

ಚಿಕ್ಕ ವಯಸ್ಸಿನಲ್ಲೇ ಗಿರೀಶರು ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಓದಿದ್ದರು, ಅಷ್ಟೇ ಅಲ್ಲ ಆಂಗ್ಲ ಲೇಖಕರೊಂದಿಗೆ ಪತ್ರವ್ಯವಹಾರ ಕೂಡ ಮಾಡಿದ್ದರು. ಟಿ.ಎಸ್.ಎಲಿಯಟ್, ಡಬ್ಲ್ಯೂ.ಎಚ್. ಆಡೆನ್‌ರಂತಹ ಮಹಾನ್ ಕವಿಗಳ; ಅಗಾಥಾ ಕ್ರಿಸ್ತಿ, ಪಿ.ಜಿ. ವೋಡ್‌ಹೌಸ್‌ರಂತಹ ಜನಪ್ರಿಯ ಕಾದಂಬರಿಕಾರರ ರೇಖಾಚಿತ್ರ ಬಿಡಿಸಿದ್ದರು. ಲೇಖಕರಿಗೆ ತಾವು ಬಿಡಿಸಿದ ರೇಖಾಚಿತ್ರ ಕಳಿಸಿ ಅವರ ಹಸ್ತಾಕ್ಷರ ಪಡೆದಿದ್ದರು. ಕರ್ನಾಟಕ ಕಾಲೇಜಿನಲ್ಲಿ ನಡೆದ ಒಂದು ಕಲಾಪ್ರದರ್ಶನದಲ್ಲಿ ಅವುಗಳ ಪ್ರದರ್ಶನವಾದಾಗ ಮಿತ್ರರೆಲ್ಲರಿಗೂ ಆಶ್ಚರ್ಯವಾಗಿತ್ತು. ಚಿತ್ರ ಬಿಡಿಸಿದಾಗ(1955) ಅವರು ಇಂಟರ್ ಆರ್ಟ್ಸ್ ವಿದ್ಯಾರ್ಥಿಯಾಗಿದ್ದರು. ಚಿತ್ರಕಲೆಯಲ್ಲೂ ಅವರಿಗೆ ಪರಿಣತಿ ಇತ್ತು.

‘ನನ್ನ ಆರು ವರ್ಷಗಳ ಮೇಲೂ ನಿರಂತರ ನೆರಳು ಚೆಲ್ಲಿದ ವ್ಯಕ್ತಿ ಕವಿ ಬೇಂದ್ರೆ ಎಂದು ಗಿರೀಶ ಬರೆಯುತ್ತಾರೆ. ಬೇಂದ್ರೆಯವರು 1944ರಿಂದ ಹನ್ನೆರಡು ವರ್ಷ ಸೊಲ್ಲಾಪುರದಲ್ಲಿ ಡಿ.ಎ.ವಿ.ಕಾಲೇಜಿನಲ್ಲಿ ಕನ್ನಡ ಪ್ರಧ್ಯಾಪಕರಾಗಿದ್ದರು. ನಿವೃತ್ತರಾದ ಮೇಲೆ, 1956ರಲ್ಲಿ, ಧಾರವಾಡದ ಸಾಧನಕೆರೆಯ ತಮ್ಮ ಮನೆಯಲ್ಲಿ ಕಾಯಂ ವಾಸಿಸಲು ಕುಟುಂಬ ಸಮೇತ ಬಂದರು. ಗಿರೀಶರು ಧಾರವಾಡದಲ್ಲಿ ಕಳೆದ ಆರು ವರ್ಷಗಳಲ್ಲಿ ಕೊನೆಯ ಎರಡು ವರ್ಷ ಮಾತ್ರ ಅವರನ್ನು ಕಾಣಬಹುದಾಗಿತ್ತಲ್ಲ ಎಂದು ಸಂಶಯ ಬರಬಹುದು. ಆದರೆ ರಜೆಯ ದಿನಗಳಲ್ಲಿ ಬೇಂದ್ರೆ ಧಾರವಾಡಕ್ಕೆ ಬರುತ್ತಿದ್ದರು. ಧಾರವಾಡದಲ್ಲಿ ಸದಾ ಬೇಂದ್ರೆಯವರ ಉಪಸ್ಥಿತಿಯ ಅರಿವಾಗುತ್ತಿತ್ತು. ಧಾರವಾಡ ಎಂದರೆ ಬೇಂದ್ರೆ ಎನ್ನುವಷ್ಟರ ಅವರ ಪ್ರಭಾವವಿತ್ತು.

ಗಿರೀಶ ಇನ್ನೂ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಅವರ ಶಿಕ್ಷಕರಾದ ವರದರಾಜ ಹುಯಿಲಗೋಳ ಅವರು ಗಿರೀಶರನ್ನು ಬೇಂದ್ರೆಯವರ ಮನೆಗೆ ಕರೆದುಕೊಂಡು ಹೋಗಿದ್ದರು. ಗಿರೀಶ ತಾವು ಬರೆದ ಒಂದು ಕವಿತೆ ಓದಿದ್ದರು. ಅದರಲ್ಲಿ ಅಸ್ತಿತ್ವವಾದದ ವಿಚಾರದ ಪ್ರಭಾವವಿತ್ತು. ಬೇಂದ್ರೆಯವರು ಸ್ನೇಹಪೂರ್ವಕವಾಗಿ ಮಾತಾಡಿದರು. Existentialism ಶಬ್ದವನ್ನು ಅಸ್ತಿತ್ವವಾದ ಎಂದು ಭಾಷಾಂತರಿಸುವದು ತಪ್ಪು. ಅಸ್ತಿತ್ವ ಎಂದರೆ Being. ಅದು Existenceಗಿಂತ ಗಹನವಾದ ಕಲ್ಪನೆ ಎಂದೆಲ್ಲ ವಿವೇಚಿಸಿ, ಜೀನ್ ಪೌಲ್ ಸಾತ್ರ(ಫ್ರೆಂಚ ಲೇಖಕ) ಏನು ಹೇಳುತ್ತಾನೆ ಎನ್ನುವದು ಮುಖ್ಯವಲ್ಲ. ಅದನ್ನು ನೀನು ಹೇಗೆ ಮೈಗೂಡಿಸಿಕೊಂಡಿದ್ದೀ ಎಂಬುದು ಮುಖ್ಯ ಎಂದು ಬೇಂದ್ರೆ ಹೇಳಿದಾಗ ಅವರ ಮಾತು ನಾಟಿತು ಎನ್ನುತ್ತಾರೆ. ಅವರ ಮನೆಯಿಂದ ಹೊರಟಾಗ ಕೈಯಲ್ಲಿ ಒಂದು ಚಮಚ ಸಕ್ಕರೆ ಹಾಕಿ, ನಿನ್ನ ಕವಿತೆಯೊಳಗಿನ ಮಹತ್ವದ ವಿಚಾರಗಳಿದ್ದ ಸಾಲುಗಳನ್ನು ದಪ್ಪ ಅಕ್ಷರದಲ್ಲಿ ಮುದ್ರಿಸು ಎಂದು ಸಲಹೆ ಕೊಟ್ಟರಂತೆ. ಅವರ ಚೇಷ್ಟೆ ಅನಿರೀಕ್ಷಿತವಾಗಿರಲಿಲ್ಲ ಎನ್ನುತ್ತಾರೆ ಗಿರೀಶ.

ಗಿರೀಶ ಬೇಂದ್ರೆಯವರ ಬಗ್ಗೆ ಬರೆಯುತ್ತಾರೆ: ಬೇಂದ್ರೆ ಕುಳ್ಳರು. ಯಾವ ಗುಂಪಿನಲ್ಲು ಅವರು ತೀರ ಗಿಡ್ಡರಾಗಿರುವದು ಎದ್ದು ಕಾಣುತ್ತಿತ್ತು. ಬಹುಶಃ ಇದೇ ಕಾರಣಕ್ಕಾಗಿ ಮಾತನಾಡಲಾರಂಭಿಸಿದರೆ ದನಿ ಎತ್ತರಿಸಿ, ತಾರಸ್ವರದಲ್ಲಿ ಮಾತನಾಡಿ, ಸುತ್ತಮುತ್ತಲಿನ ಜನ ತಮ್ಮನ್ನು ದುರ್ಲಕ್ಷಿಸುವುದನ್ನೇ ಅಸಾಧ್ಯಗೊಳಿಸಿಬಿಡುತ್ತಿದ್ದರು. ಮೀಸೆ, ಟೊಪ್ಪಿಗೆ, ಕೊಡೆ, ಧೋತರ, ಕುರುಚಲು ಗಡ್ಡ... ಆದರೆ ಅವರ ಸ್ವರೂಪ ಹೀಗಿದ್ದರೂ ಮುಖದಲ್ಲಿ ಮಾತ್ರ ವಿಲಕ್ಷಣ ಚೈತನ್ಯವಿತ್ತು. ಕಣ್ಣಾಗಿನ ಬೆಳಕೇನಽ ಮಾರ‍್ಯಾಗಿನ ತುಳಕೇನ ಎಂಬ ಅವರ ಸಾಲುಗಳು ಅವರನ್ನೇ ಬಣ್ಣಿಸುತ್ತಿದ್ದವೆನ್ನಬಹುದು. ಅವರು ತಮ್ಮ ಕವಿತೆಯನ್ನೋದಲಾರಂಭಿಸಿದರೆ ಆ ವಾಚನದಲ್ಲಿ ಅವರ ಇಡಿಯ ದೇಹ ಪಾಲ್ಗೊಳ್ಳುತ್ತಿತ್ತು. ಎಡಗೈಯಲ್ಲಿ ಪುಸ್ತಕ ಹಿಡಿದರೆ, ಬಲಗೈಯನ್ನು ಬೀಸುತ್ತ, ತೋರಬೆರಳಿನಿಂದ ಕವಿತೆಯ ಮರ್ಮವನ್ನೇ ತಿವಿಯುತ್ತ, ನಗುತ್ತ, ಹುಬ್ಬುಗಂಟು ಹಾಕುತ್ತ, ತಲೆ ಅಲ್ಲಾಡಿಸುತ್ತ ಓದುವ ಅವರ ದನಿಯ ಕಾಂತಿ, ಚೈತನ್ಯ, ಶ್ರೋತೃಗಳನ್ನು ರೋಮಾಂಚಿತಗೊಳಿಸಿಬಿಡುತ್ತಿದ್ದವು. ಅಂಥ ಸಮಯದಲ್ಲಿ 1929ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಅವರು ಹಕ್ಕಿ ಹಾರುತಿದೆ ನೋಡಿದಿರಾ? ಕವಿತೆ ಓದಿ ಸಭಿಕರಲ್ಲಿ ಉಂಟುಮಾಡಿದ ಕಲ್ಲೋಲವನ್ನು ಸುಲಭವಾಗಿ ಕಲ್ಪಿಸುವಂತಿತ್ತು.

ಧಾರವಾಡದ ನೆನಪುಗಳನ್ನು ಹಂಚಿಕೊಳ್ಳುವಾಗ ಧಾರವಾಡದಲ್ಲಿ ಅವರ ತುಘಲಕ್ ನಾಟಕದ ಬಿಡುಗಡೆ ಸಮಾರಂಭದ ಬಗ್ಗೆ ಬರೆಯುತ್ತಾರೆ. ಬೇಂದ್ರೆಯವರು ನಾಟಕದ ಬಗ್ಗೆ ಬಹಳ ಪ್ರಶಂಸೆ ಮಾಡಿ ಮಾತಾಡಿದ್ದರು. ಗಿರೀಶ ಆಗ ಮದ್ರಾಸಿನಲ್ಲಿ ಕೆಲಸಮಾಡುತ್ತಿದ್ದರು. ಅವರು ಆ ಸಭೆಗೆ ಬಂದಿರಲಿಲ್ಲ. ಸುದೈವದಿಂದ ನಾನು ಆಗ ಧಾರವಾಡದಲ್ಲಿದ್ದೆ. ಆ ಸಭೆ ವರ್ಣನಾತೀತವಾಗಿತ್ತು. ಬೇಂದ್ರೆಯವರ ಭಾಷಣ ಅದ್ಭುತವಾಗಿತ್ತು. ಬೇಂದ್ರೆಯವರ ಭಾಷಣದ ಸಾರಾಂಶವನ್ನು ಬರೆದು ಗಿರೀಶರಿಗೆ ಪತ್ರ ಬರೆದಿದ್ದೆ. (ತುಘಲಕ್ ನಾಟಕವು ಬಂಗಾರದ ಗಟ್ಟಿಯಂತಿದೆ. ಇದನ್ನು ಬರೆಯಲು ಇತಿಹಾಸದ ಎಲ್ಲ ಗ್ರಂಥಗಳನ್ನು ಗಿರೀಶ ಅಭ್ಯಾಸ ಮಾಡಿದ್ದು ಗೊತ್ತಾಗುತ್ತದೆ. ಅವನೊಬ್ಬ ಹುಚ್ಚ ಬುದ್ಧಿವಂತ ರಾಜ. ನಮ್ಮ ದಿಲ್ಲಿಯ ರಾಜರು ಬುದ್ಧಿವಂತರು ಆದರೆ ಅವರ ಹುಚ್ಚುತನ ಕಡಿಮೆಯಿಲ್ಲ. ಅವನು ಚೀನದ ಮೇಲೆ ದಾಳಿ ಮಾಡಲು ಹೊರಟಿದ್ದ. ಈಗ ಚೀನದವರೇ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಒಂದು ವೇಳೆ ಈ ನಾಟಕವನ್ನು ದಿಲ್ಲಿಯಲ್ಲಿ ಆಡಿದರೆ ಅವನಿಗೆ ಮತ್ತೆ ಧಾರವಾಡಕ್ಕೆ ಬರಲಿಕ್ಕೆ ಬಿಡುವುದಿಲ್ಲ ಎಂದು ಬೇಂದ್ರೆ ನುಡಿದಿದ್ದರು). ಕೀರ್ತಿ ಕುರ್ತಕೋಟಿಯವರು ಗಿರೀಶರಿಗೆ ಹೇಳಿದ್ದರಂತೆ, ಬೇಂದ್ರೆಯವರಿಂದ ಹೊಗಳಿಸಿಕೊಂಡ ಪುಣ್ಯವಂತರು ಇಬ್ಬರೇ. ಗಂಗವ್ವ ಗಂಗಾಮಾಯಿಯನ್ನು ಬರೆದ ಶಂಕರ ಮೊಕಾಶಿ ಪುಣೇಕರ್ ಮತ್ತೆ ನೀನು (ಗಿರೀಶ) ಎಂದು.

ಮುಂದೆ ಕರ್ನಾಟಕ ಸರಕಾರಕ್ಕಾಗಿ ಬೇಂದ್ರೆಯವರ ಮೇಲೆ ಒಂದು ಸಾಕ್ಷ್ಯಚಿತ್ರ ತಯಾರಿಸುವ ಅವಕಾಶ ಗಿರೀಶರಿಗೆ ಬಂದಾಗ ಸಾಕ್ಷ್ಯಚಿತ್ರದ ಚಿತ್ರಕಥೆಯನ್ನು ಕೀರ್ತಿನಾಥರಿಂದ ಬರೆಸಿದ್ದರು. ಗೋವಿಂದ ನೆಹಲಾನಿ ಛಾಯಗ್ರಹಣ ಮಾಡಿದ್ದರು. ಕರ್ನಾಟಕ ಕಾಲೇಜಿನ ಒಂದು ಶಾಟ್ ತೆಗೆಯಬಹುದೇ ಎಂದು ಬೇಂದ್ರೆಯವರಿಗೆ ಕೇಳಿದಾಗ, ತಮ್ಮ ಜೀವನದಲ್ಲಿ ಅದಕ್ಕೇನೂ ಮಹತ್ವವಿಲ್ಲ ಎಂದಿದ್ದರಂತೆ. ಗಿರೀಶರು ತಮ್ಮ ಆತ್ಮಕತೆಗಳ ಶೀರ್ಷಿಕೆ ಬೇಂದ್ರೆಯವರ ಕವಿತೆ ನನ್ನ ಕಿನ್ನರಿಯ ಮೊದಲ ಸಾಲಿನಿಂದ ಪಡೆದದ್ದಾರೆ ಎಂದು ಬರೆಯುತ್ತಾರೆ. ಮುಂದೆ ತಮ್ಮ ಮಗಳ ನಾಮಕರಣ ಮಾಡುವಾಗ ಅವರಿಗೆ ಹೊಳೆದ ಹೆಸರು ಶಾಲ್ಮಲಿ. ಬೇಂದ್ರೆಯವರ ಸಣ್ಣ ಸೋಮವಾರ ಕವಿತೆಯಲ್ಲಿ ಬರುವ ಕೆಲವು ಸಾಲುಗಳಿಂದ ಸ್ಫೂರ್ತರಾಗಿ ಆ ಹೆಸರು ಆರಿಸಿದರಂತೆ. ಧಾರವಾಡದ ಸೋಮೇಶ್ವರದಲ್ಲಿ ಜನಿಸಿದ ಶಾಲ್ಮಲಾ ನದಿಯನ್ನು ಬೇಂದ್ರೆಯವರು ಅಕ್ಕರೆಯಿಂದ, ಶಾಲ್ಮಲಿ ಸಣ್ಣ ಬಾಲಿ | ಕಿವಿಯಲ್ಲಿ ತಾಳೆವಾಲಿ| ಎಂದು ಕರೆಯುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 7.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more