ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ನಾಡರ ಆಡಾಡತ ಆಯುಷ್ಯದ ಸುತ್ತಮುತ್ತ-6

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Girish Karnads autobiography
1952ರಿಂದ 1960ರವರೆಗೆ ಎಂಟು ವರ್ಷ ನಾನು ಧಾರವಾಡದಲ್ಲಿದ್ದೆ. ನಂತರ ನನಗೆ ಮುಂಬೈಯಲ್ಲಿ ಪ್ರಾಧ್ಯಾಪಕ ಕೆಲಸ ಸಿಕ್ಕಿತೆಂದು ಮುಂಬೈಗೆ ಬಂದೆ. ಆದರೆ ಎಲ್ಲ ಸೂಟಿಗಳನ್ನು(ಬೇಸಿಗೆ, ದೀಪಾವಳಿ, ಕ್ರಿಸ್‌ಮಸ್) ನಾನು ಧಾರವಾಡದಲ್ಲಿ ಕಳೆಯುತ್ತಿದ್ದೆ. ಕಾರ್ನಾಡ ಧಾರವಾಡದಲ್ಲಿದ್ದದ್ದು ಆರು ವರ್ಷ (1952 ರಿಂದ 1958). ಎರಡು ವರ್ಷ ಬಾಸೆಲ್ ಮಿಶನ್ ಸ್ಕೂಲಿನ ವಿದ್ಯಾರ್ಥಿಯಾಗಿದ್ದರು. 1954ರಿಂದ 1958, ನಾಲ್ಕು ವರ್ಷ, ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ನನಗಿಂತ ಎರಡು ವರ್ಷ ಹಿಂದೆ ಇದ್ದರು. ನಾನು ನಿಜವಾಗಿಯೂ ಜನತಾ ಕಾಲೇಜಿನ ವಿದ್ಯಾರ್ಥಿಯಾಗಿದ್ದರೂ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯ ಎಲ್ಲ ಲಾಭ ಪಡೆದಿದ್ದೆ. ಇದಕ್ಕೆ ಕಾರಣ ಗೋಕಾಕರ ಸಮೀಪದ ಸಂಪರ್ಕ. (ವಿವರ ನಾ ಕಂಡ ಗೋಕಾಕ ಪುಸ್ತಕದಲ್ಲಿ ಬರೆದಿರುವೆ).

ಕರ್ನಾಟಕ ಕಾಲೇಜಿನಲ್ಲಿ ಕಮಲ ಮಂಡಲ ಎಂಬ ಸಾಹಿತ್ಯ ಸಂಘವನ್ನು ಗೋಕಾಕರು ಪ್ರಾರಂಭಿಸಿದ್ದರು. ಅಲ್ಲಿ ಗಿರೀಶ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾಗ ಒಂದು ಕವಿತೆ ಓದಿದ್ದರು. ಅವರ ಪದ್ಯ ನನಗೆ ಬಹಳ ಸೇರಿತ್ತು. ನಾನು ಅಭಿನಂದಿಸಿ ನನ್ನ ಪರಿಚಯ ಮಾಡಿಕೊಂಡೆ. ತಮ್ಮ ಕವಿತೆಯಲ್ಲಿ ಅವರು ಜೀವನವನ್ನು ಸಮುದ್ರಕ್ಕೆ ಹೋಲಿಸಿದ್ದರು. ಅಲ್ಲಿರುವ ಕರಾಳ ಶಾರ್ಕುಗಳಿಂದ ನಾವು ತಪ್ಪಿಸಿಕೊಳ್ಳಬೇಕು ಎಂಬ ಒಂದು ಸಾಲು ಇತ್ತು. ನಾವು ಕನ್ನಡ ಮಾಧ್ಯಮದಿಂದ ಬಂದದ್ದರಿಂದ ಯಾರಾದರೂ ಇಂಗ್ಲಿಷಿನಲ್ಲಿ ಚೆನ್ನಾಗಿ ಮಾತಾಡಿದರೆ, ನಮಗೆ ತಿಳಿಯದ ಶಬ್ದ ಬಳಸಿದರೆ ಅವರ ಬಗ್ಗೆ ನಮಗೆ ಗೌರವ. ಶಾರ್ಕ ಇದರ ಅರ್ಥ ಏನೆಂದು ಗಿರೀಶರನ್ನು ಕೇಳಿದ್ದೆ. ಕೃಷ್ಣ ಬಸರೂರ ಮೊದಲು ಜನತಾ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಅವರು ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿದ್ದರು. ಉಮರ ಖಯ್ಯಾಮ ಮೊದಲಾದ ಹಲವಾರು ಕವಿಗಳ ಪದ್ಯಗಳನ್ನು ಪುಂಖಾನುಪುಂಕವಾಗಿ ಉದ್ಧರಿಸಿದಾಗ ನನಗೆ ಬಹಳ ಖುಶಿಯಾಗಿತ್ತು. ಮುಂದೆ ಅವರು ಬಿ.ಎ.ಕ್ಲಾಸಿಗೆ ಇಂಗ್ಲಿಷ್ ಮೇಜರ್ ಆಯ್ಕೆ ಮಾಡಿದ್ದರಿಂದ ಕರ್ನಾಟಕ ಕಾಲೇಜಿಗೆ ಬಂದಿದ್ದರು. ನಾಲ್ಕು ವರ್ಷ ಗಿರೀಶರ ಮೈತ್ರಿ ಗಾಢವಾಗಿತ್ತು. ಅವರು ಆತ್ಮಕಥನದಲ್ಲಿ ಬರೆಯದೆ ಇರುವ ಅವರ ಜೀವನದ ಕೆಲವು ಮಹತ್ವದ ಘಟನೆಗಳು ನನ್ನ ನೆನಪಿನಲ್ಲಿವೆ. ಅವರ ಒಪ್ಪಿಗೆ ಪಡೆದು ಕೆಲವನ್ನಿಲ್ಲಿ ಬರೆಯುವೆ.

ಆ ಕಾಲದಲ್ಲಿ ಬಿ.ಎ.ಕ್ಲಾಸಿನಲ್ಲಿ ಪ್ರಥಮ ದರ್ಜೆ ಪಡೆಯುವುದು ಸುಲಭವಾಗಿರಲಿಲ್ಲ. ಒಬ್ಬರೋ ಇಬ್ಬರೋ ಪಡೆಯುತ್ತಿದ್ದರು. ಖಾತ್ರಿಯಾಗಿ ಪ್ರಥಮ ದರ್ಜೆ ಪಡೆಯಲು ಗಿರೀಶ ಗಣಿತ ವಿಷಯವನ್ನು ಆರಿಸಿದ್ದರು. ಸ್ಕಾಲರ್‌ಶಿಪ್ ಪಡೆದು ಇಂಗ್ಲಂಡಿಗೆ ಉಚ್ಚ ಶಿಕ್ಷಣಕ್ಕೆ ಹೋಗುವ ಗುರಿ ಅವರದಾಗಿತ್ತು. ಆ ಕಾಲದಲ್ಲಿ ಇಂಟರ್ ಆರ್ಟ್ಸ್‌ನಲ್ಲಿ ಪ್ರಥಮ ದರ್ಜೆ ಪಡೆಯುವುದೂ ಕಠಿಣವಾಗಿತ್ತು. ತಿಪ್ಪಾ ಕುಲಕರ್ಣಿ ಎಂಬ ಮೇಧಾವಿ ವಿದ್ಯಾರ್ಥಿನಿ ಇಂಟರ್ ಆರ್ಟ್ಸ್‌ನಲ್ಲಿ 62 ಪರ್ಸೆಂಟ್ ಪಡೆದು ಹೆಸರು ಗಳಿಸಿದ್ದರು. ನನ್ನ ಮಿತ್ರ ವಾದಿರಾಜ ಪಂಚಮುಖಿ 63 ಪರ್ಸೆಂಟ್ ಪಡೆದು ವಿಕ್ರಮ ಸಾಧಿಸಿದ್ದರು. ಗಿರೀಶ ಕಾರ್ನಾಡ 67 ಪರ್ಸೆಂಟ್ ಪಡೆದು ಹೊಸ ವಿಕ್ರಮ ಸಾಧಿಸಿದರು. ಅದನ್ನು ನಂತರ ಯಾರೂ ಮುರಿಯಲಿಲ್ಲ. ಶ್ರಮದಾನ, ಭಾಷಣ ಹಾಗೂ ಲೇಖನ ಸ್ಪರ್ಧೆ, ನಾಟಕ, ಎನ್.ಸಿ.ಸಿ. ಮುಂತಾದ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿದ ಗಿರೀಶ್ ಕಾಲೇಜಿನಲ್ಲಿ ಸೆಲಿಬ್ರಿಟಿ ಆಗಿದ್ದರು. ಬಿ.ಎ.ಕ್ಲಾಸಿನಲ್ಲಿದ್ದಾಗ ಪಠ್ಯೇತರ ಒಲವುಗಳಿಂದಾಗಿ ಇವರಿಗೆ ಪ್ರಥಮ ದರ್ಜೆ ದೊರೆಯಲಿಕ್ಕಿಲ್ಲ ಎಂದು ಕೆಲವರು ನಿರೀಕ್ಷಿಸಿದ್ದರು. ಕೊನೆಯ ಎರಡು ತಿಂಗಳು ಅಜ್ಞಾತವಾಸದಲ್ಲಿದ್ದು, ಅಭ್ಯಾಸದಲ್ಲಿ ಪೂರ್ತಿ ಗಮನ ಕೊಟ್ಟರು. ಇವರು ಪ್ರಥಮ ದರ್ಜೆ ಪಡೆದರಲ್ಲದೆ ವಿಶ್ವವಿದ್ಯಾಲಯಕ್ಕೆ ಪ್ರಥಮಸ್ಥಾನ ಗಳಿಸಿ ಕೆಲವರ ನಿರೀಕ್ಷೆ ಸುಳ್ಳಾಗಿಸಿದರು.

ಜನತಾ ಕಾಲೇಜಿನವರು ಲೋಕಮಾನ್ಯ ಟಿಳಕರ ಜನ್ಮಶತಾಬ್ದಿಯ ನಿಮಿತ್ತ ಒಂದು ಅಖಿಲ ಕರ್ನಾಟಕ ಮಟ್ಟದಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಬಂಧ ಸ್ಪರ್ಧೆಯನ್ನು 1956ರಲ್ಲಿ ಏರ್ಪಡಿಸಿದ್ದರು. ಇಂಗ್ಲಿಷ ಹಾಗೂ ಹಿಂದಿ ಭಾಷೆಯಲ್ಲಿ ಗಿರೀಶರಿಗೇ ಪ್ರಥಮಸ್ಥಾನ. ನನ್ನ ಸಹಪಾಠಿ ಆರ್.ಜಿ.ಕುಲಕರ್ಣಿಯವರಿಗೆ ಕನ್ನಡದಲ್ಲಿ ಪ್ರಥಮ ಬಹುಮಾನ ದೊರೆತಿತ್ತು. ಕರ್ನಾಟಕ ವಿಶ್ವ ವಿದ್ಯಾಲಯದವರು ಅಂತರ್ ಕಾಲೇಜು ಭಾಷಣ ಸ್ಪರ್ಧೆಯನ್ನು ಜನತಾ ಕಾಲೇಜಿನ ಬಯಲು ಸಭಾಗೃಹದಲ್ಲಿ ಏರ್ಪಡಿಸಿದ್ದರು. ಜನ ಕಿಕ್ಕಿರಿದು ತುಂಬಿದ್ದರು. (ಆ ಕಾಲದಲ್ಲಿ ಟಿ.ವಿ.ಮೊದಲಾದ ಆಕರ್ಷಣೆಗಳಿರಲಿಲ್ಲ). ಇಂಗ್ಲಿಷ್ ಆಶುಭಾಷಣ (Extempore Speech) ಸ್ಪರ್ಧೆಯಲ್ಲಿ ಗಿರೀಶರ ಪಾಲಿಗೆ ಬಂದ ವಿಷಯ: ಕಮ್ಯೂನಿಝಂದಿಂದ ಮಾತ್ರ ದೇಶದ ಉದ್ಧಾರ ಸಾಧ್ಯ ಎಂಬುದಾಗಿತ್ತು. ಅವರ ಭಾಷಣ ಅದ್ಭುತವಾಗಿತ್ತು. ಕಾರ್ಲ ಮಾರ್ಕ್ಸ್, ಸ್ಟ್ಯಾಲಿನ್ ಮೊದಲಾದವರ ವಿಚಾರ ಉದ್ಧರಿಸಿದರು. ಇವರಿಗೆ ಪ್ರಥಮ ಬಹುಮಾನ ದೊರೆಯಿತು. ತೀರ್ಪುಗಾರರಲ್ಲಿ ಒಬ್ಬರು ನ್ಯಾಯಾಧಿಶರಾಗಿದ್ದರು (ಜಿಲ್ಲೆಯ ಮುಖ್ಯನ್ಯಾಯಾಧೀಶ ಶ್ರೀನಾಯಕ್). ನ್ಯಾಯಾಧೀಶರೂ ಗಿರೀಶರನ್ನು ಅಭಿನಂದಿಸಿದರು. ಅವರು ಎರಡು ಮಾತು ಹೇಳಿದರು. ನಿನ್ನ ಭಾಷಣ ಮೊದಲೇ ತಯಾರಿಮಾಡಿಕೊಂಡು ಬಂದ ಭಾಷಣ ಎಂದು ಸಂಶಯ ಬರುವಷ್ಟು ಪರಿಪೂರ್ಣವಾಗಿತ್ತು. ನಿನ್ನ ವಾದ ಸರಣಿ ಚೆನ್ನಾಗಿತ್ತು, ಆದರೆ ನಿನ್ನ ವಿಚಾರಕ್ಕೆ ನನ್ನ ಸಹಮತವಿಲ್ಲ. ಆಗ ಕಾರ್ನಾಡ ಉತ್ತರಿಸಿದ್ದರು. ನೀವು ನನ್ನ ಭಾಷಣ ಮೆಚ್ಚಿದ್ದಕ್ಕೆ ನಾನು ಉಪಕೃತ. ನನ್ನ ಭಾಷಣದ ವಿಚಾರ ನನಗೇ ಸಹಮತವಿಲ್ಲ. ಆ ವಿಷಯ ನನ್ನ ಪಾಲಿಗೆ ಬಂದದ್ದರಿಂದ ವಕೀಲರಂತೆ ಪರವಾಗಿ ಮಾತಾಡಬೇಕಾಯಿತು. ಎಲ್ಲರೂ ಮುಕ್ತ ಮನದಿಂದ ನಕ್ಕೆವು.

ಅಂತರ್ ವಿಶ್ವವಿದ್ಯಾಲಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಗಿರೀಶ ಭಾಗವಹಿಸಿದ್ದರು, ವಾಲ್ಟೇರ್ ಮೊದಲಾದ ಕಡೆಗೆ ಹೋಗಿ ಬಂದಿದ್ದರು, ಅಲ್ಲಿಯೂ ಪ್ರಥಮಸ್ಥಾನ ಗಳಿಸಿದ್ದರು. ಅಮೆರಿಕೆಯ ವಿಶ್ವವಿದ್ಯಾಲಯಗಳಿಂದ ಆಯ್ಕೆಗೊಂಡ ವಿದ್ಯಾರ್ಥಿಗಳು ಧಾರವಾಡಕ್ಕೆ ಬಂದಿದ್ದರು. ನಾಲ್ಕು ವಿದ್ಯಾರ್ಥಿಗಳ ಡಿಬೇಟ್ ಆಯೋಜಿಸಲಾಗಿತ್ತು. ನಗರ ಸಭೆಯ ಸಭಾಭವನ ಕಿಕ್ಕಿರಿದು ತುಂಬಿತ್ತು. ವಿಷಯ ಮಂಡನೆ ಗಿರೀಶ ಕಾರ್ನಾಡ ಮತ್ತು ಲುಯಿ ಮೆನೆಜಿಸ್ ಮಾಡಿದರೆ ವಿಷಯವನ್ನು ವಿರೋಧಿಸಿ ಮಾತಾಡಿದವರು ಅಮೇರಿಕೆಯ ವಿದ್ಯಾರ್ಥಿಗಳು. ಭಾಷೆ, ವಾಕ್ಪಟುತ್ವ, ವಿಷಯದ ಗಾಂಭೀರ್ಯ, ಎಲ್ಲ ದೃಷ್ಟಿಯಿಂದ, ನಮ್ಮವರು ಅಮೇರಿಕೆಯ ವಿದ್ಯಾರ್ಥಿಗಳಿಗಿಂತ ಬಹಳ ಉಚ್ಚ ಮಟ್ಟದಲ್ಲಿದ್ದರು.

ವಿ.ಕೃ.ಗೋಕಾಕರ ಕಾವ್ಯ ಸಂಗ್ರಹ ದ್ಯಾವಾಪೃಥಿವೀ 1957ರಲ್ಲಿ ಧಾರವಾಡದ ಪರಾಗ ಪ್ರಕಾಶನದಿಂದ ಪ್ರಕಟವಾಯಿತು. ಗೋಕಾಕರು ಜಪಾನ ಪ್ರವಾಸ ಮಾಡಿದಾಗ ಆಕಾಶದಿಂದ ಭೂಮಿಯನ್ನು ವೀಕ್ಷಿಸಿದ್ದನ್ನು ಕಾವ್ಯಮಯವಾಗಿ ವಿಮಾನದಲ್ಲೇ ಬರೆದಿದ್ದರು. ಅದರಲ್ಲಿ ಎರಡು ಭಾಗ: ನೆಲದಿಂದ ಆಕಾಶ ವೀಕ್ಷಿಸಿದ್ದು ನೀರದ, ಆಕಾಶದಿಂದ ನೆಲದೆಡೆಗೆ ನೋಡಿದ್ದು ಇಳಾಗೀತ. ಈ ಕಾವ್ಯದ ಪ್ರಥಮ ವಾಚನವನ್ನು ಅವರ ಮನೆಯಲ್ಲಿ ನಾನು ಕೇಳಿದ್ದೆ. ಅದಕ್ಕೆ ಬೇಂದ್ರೆಯವರು ಮುನ್ನುಡಿ ಬರೆದರು. ಅದರ ಒಂದು ಪ್ರತಿಯನ್ನು ಡಿ.ವಿ.ಜಿ.ಯವರಿಗೆ ಕಳಿಸಿದ್ದರು. ಅವರ ಮೆಚ್ಚುಗೆಯ ಪತ್ರ ಓದುವ ಅವಕಾಶ ನನಗೆ ದೊರೆತಿತ್ತು. ಅದರ ಬಿಡುಗಡೆಯ ಸಮಾರಂಭದ ತಯಾರಿಯಲ್ಲಿ ತೊಡಗಿದ್ದೆ. ಹಲವು ತಿಂಗಳಿಂದ ಅದರ ಬಗ್ಗೆ ಮಾತಾಡಲು ನಾವು ಸಿದ್ಧತೆ ಮಾಡಿದ್ದೆವು. ಗಿರೀಶ ಕಾರ್ನಾಡರಿಗೆ ಗೋಕಾಕರ ನವ್ಯ ಕಾವ್ಯದ ಬಗ್ಗೆ ಹೆಚ್ಚಿನ ಗೌರವ ಇರಲಿಲ್ಲ. (ಆಡಿಗರ ಬಗ್ಗೆ ಹೆಚ್ಚಿನ ಒಲವಿತ್ತು). ಗೋಕಾಕರನ್ನು ವಿದ್ಯಾಗುರುಗಳು ಎಂದು ಗೌರವಿಸಿತ್ತಿದ್ದರು, ಆದರೆ ಅವರ ಸಾಹಿತ್ಯದಲ್ಲಿ ಆಸಕ್ತಿ ಇರಲಿಲ್ಲ.

ನನಗೆ ದ್ಯಾವಾಪೃಥುವೀಯ ಉದ್ಘಾಟನೆಯ ದಿನ ಆ ಪುಸ್ತಕದ ಬಗ್ಗೆ ಗಿರೀಶರಿಂದ ಭಾಷಣ ಮಾಡಿಸಬೇಕೆಂಬ ಬಲವಾದ ಇಚ್ಛೆ ನನಗಿತ್ತು. ಗೋಕಾಕರನ್ನು ಕೇಳಿದೆ. ಅವರು ಒಪ್ಪಿದರು. ಆದರೆ ಗಿರೀಶ ಮಾತನಾಡುವ ಬಗ್ಗೆ ಅವರಿಗೆ ಸಂಶಯವಿತ್ತು. ದ್ಯಾವಾಪೃಥುವೀಯ ಒಂದು ಪ್ರತಿಯನ್ನು ಪಡೆದು ಗಿರೀಶರಿಗೆ ಕೊಟ್ಟೆ. ಎರಡೇ ದಿನಗಳಲ್ಲಿ ಪುಸ್ತಕವನ್ನು ಓದಿ ಮಾತಾಡಬೇಕಾಗಿತ್ತು. ಗಿರೀಶ ಒಪ್ಪಿದ್ದರಿಂದ ನನಗೆ ಬಹಳ ಸಂತೋಷವಾಯಿತು. ಉದ್ಘಾಟನ ಸಮಾರಂಭದಲ್ಲಿ ಹಿರಿಯ ಸಾಹಿತಿಗಳೆಲ್ಲ ನೆರೆದಿದ್ದರು. ಗೋಕಾರ ಆಪ್ತವಲಯದವರಾದ ನಾನು, ಆರ್.ಜಿ. ಕುಲಕರ್ಣಿ ಮಾತಾಡಿದೆವು. ಎಲ್ಲ ಭಾಷಣಗಳಲ್ಲಿ ಗಿರೀಶರ ಭಾಷಣವೇ ಬಹಳೇ ಪ್ರಭಾವಿಯಾಗಿತ್ತು. ಅಷ್ಟು ಸ್ವಲ್ಪ ಸಮಯದಲ್ಲಿ ಪುಸ್ತಕವನ್ನು ಓದಿ ಚೆನ್ನಾಗಿ ಮಾತಾಡಿದ್ದು ಗಿರೀಶರ ಪ್ರತಿಭೆ ಹಾಗೂ ವಾಗ್‌ವೈಖರಿಗೆ ಒಂದು ನಿದರ್ಶನವಾಗಿತ್ತು. (ಗೋಕಾಕರ ಜನ್ಮಶತಾಬ್ದಿಯ ಸಮಾರಂಭವನ್ನು ಬೆಂಗಳೂರಲ್ಲಿ ಸಾಹಿತ್ಯ ಅಕಾಡೆಮಿ ಹಾಗೂ ಭಾರತೀಯ ವಿದ್ಯಾಭವನ ಏರ್ಪಡಿಸಿದಾಗ ನಾನೂ ಒಂದು ಪ್ರಬಂಧ ಓದಿದೆ. ಅನಿಲ ಗೋಕಾಕರ ದೂರಧ್ವನಿಯ ಕರೆಯನ್ನು ಮನ್ನಿಸಿ ತಮ್ಮ ಗುರುಗೋಕಾಕರ ಮೇಲಿನ ಗೌರವದಿಂದ ಗಿರೀಶ ಸಭೆಗೆ ಬಂದದ್ದು ನನಗೆ ಹೆಚ್ಚಿನ ಸಂತಸವನ್ನು ನೀಡಿತ್ತು.)

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X