ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಗ್ದತ್ತ ವಧು ವರಿಸಲು ಗಿರೀಶರಿಗೆ ತಗುಲಿದ್ದು 14 ವರ್ಷ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

ಪುಣೆಯ ಫಿಲ್ಮ್ ಇನಸ್ಟಿಟ್ಯೂಟಿನ ಇತಿಹಾಸದ ಬಗ್ಗೆ ಬರೆಯುತ್ತಾರೆ ಗಿರೀಶ. 1960ರಲ್ಲಿಯೇ ಭಾರತ ಸರಕಾರ ಅಂದಿನ ಪರಿಸ್ಥಿತಿಯಲ್ಲಿ ಸಿನೆಮಾ ಉದ್ಯಮಕ್ಕಾಗಿ ಒಂದು ಶಿಕ್ಷಣಕೇಂದ್ರ ಆರಂಭಿಸುವ ಯೋಜನೆ ರೂಪಿಸಿದ್ದು, ಅದಕ್ಕೆ ಮದ್ರಾಸಿನಿಂದ ಉತ್ಸಾಹದ ಸ್ವಾಗತ ದೊರೆತದ್ದು, ತಮಿಳುನಾಡು ಸರಕಾರ ಇಂಥ ಸಂಸ್ಥೆಗೆ ಬೇಕಾಗುವ ಸ್ಥಳ, ಧನಸಹಾಯ, ಪುರುಷಶಕ್ತಿ ಒದಗಿಸಲು ಮುಂದೆ ಬಂದದ್ದು, ಅದೇ ವೇಳೆಗೆ ಪುಣೆಯಲ್ಲಿಯ ಪ್ರಖ್ಯಾತ ಪ್ರಭಾತ ಸ್ಟುಡಿಯೋ ಮಾರಾಟಕ್ಕೆ ಬಂದದ್ದು, ಮೂರು ದೊಡ್ಡ ದೊಡ್ಡ ಸ್ಟುಡಿಯೋ, ರಸಾಯನ ಸಾಲೆ, ಧ್ವನಿಸ್ಟುಡಿಯೋ, ಕ್ಯಾಮರಾಗಳು ಇತರ ಉಪಕರಣಗಳು ಸಹಿತ ಬಹಳ ಅಗ್ಗದಲ್ಲಿ ಮಾರಲು ಮುಂದೆ ಬಂದದ್ದು, ಸರಕಾರ ಅದನ್ನು ಕೊಂಡು ಅಲ್ಲೇ ಇನ್‌ಸ್ಟಿಟ್ಯೂಟ್ ಪ್ರಾರಂಭಿಸಲು ನಿಶ್ಚಯಿಸಿದ್ದು, ಮದ್ರಾಸಿನವರು ಇದನ್ನು ವಿಶ್ವಾಸಘಾತವೆಂದು ರೊಚ್ಚಿಗೆದ್ದು ತನ್ನದೇ ಸ್ವತಂತ್ರ ಇನ್‌ಸ್ಟಿಟ್ಯೂಟ್ ಪ್ರಾರಂಭಿಸಿದ್ದು, ಫಿಲ್ಮ್ ಇತಿಹಾಸದ ದಾಖಲೆಗಳಿಗಾಗಿ ಒಂದು ಫಿಲ್ಮ್ ಆರ್ಕೇವ್ ಕೂಡ ಪ್ರಾರಂಭಿಸಿದ್ದರ ಬಗ್ಗೆ ವಿವರವಾಗಿ ಬರೆಯುತ್ತಾರೆ.

ಸತ್ಯಜಿತ್ ರಾಯ್ ಅವರ ಪಾಥೇರ್ ಪಾಂಚಾಲಿ ಚಿತ್ರಕ್ಕೆ ದೊರೆತ ಅದ್ಭುತ ಜಾಗತಿಕ ಯಶಸ್ಸು, ವೇನಿಸ್ ಉತ್ಸವದಲ್ಲಿ ದೊರೆತ ಅಂತಾರಾಷ್ಟ್ರೀಯ ಮನ್ನಣೆ. ಈ ಹಿನ್ನೆಲೆಯಲ್ಲಿ ಚಿತ್ರ ರಸಗ್ರಹಣ ಪಾಠ ಮಾಡುವ ಪ್ರೊ. ಸತೀಶ ಬಹಾದೂರ್ ಪ್ರಕಾರ ಭಾರತದಲ್ಲಿ ಇರುವ ಒಬ್ಬನೇ ನಿರ್ದೇಶಕ ಸತ್ಯಜಿತ್ ರಾಯ್, ಒಬ್ಬನೇ ವಿಮರ್ಶಕ ಅಂದರೆ ತಾನು ಎಂದು ಬಹಿರಂಗವಾಗಿ ವಿದ್ಯಾರ್ಥಿಗಳಿಗೆ ಸಾರುತ್ತಿದ್ದ ದಿನಗಳಲ್ಲಿ ರಾಜ ಕಪೂರ್, ಬಿಮಲ್ ರಾಯ್, ಮೆಹಬೂಬ, ಗುರುದತ್ತ ಅಂಥವರಿಗೂ ಗೌರವ ಇಲ್ಲದಿರುವ ವಾತಾವರಣ. ಆಗ ಕಲಾತ್ಮಕ ಚಿತ್ರಗಳಿಗೆ ಬೆಂಬಲವಿರಲಿಲ್ಲ. ನಿರ್ದೇಶನದ ವಿದ್ಯಾರ್ಥಿಗಳಿಗೆ ಒಟ್ಟು ಭವಿಷ್ಯ ಅಂಧಃಕಾರಪೂರ್ಣವಾಗಿದ್ದಾಗ ಫಿಲ್ಮ್ ಫೈನಾನ್ಸ್ ಕಾರ್ಪೋರೇಶನ್ ನೀಡಿದ ಧನದ ಸಹಾಯದಿಂದ ಪದವೀಧರರಲ್ಲಿ ಕೆಲವರಿಗಾದರೂ ರೂಪಕ ಚಿತ್ರಗಳನ್ನು ನಿರ್ದೇಶಿಸುವ ಅವಕಾಶ ದೊರೆತ ಸಂದರ್ಭದ ಬಗ್ಗೆ ಬರೆಯುತ್ತಾರೆ. ಆಗಿನ ಕಾಲದಲ್ಲಿ ರೆಕಾರ್ಡಿಂಗ್ ವಿದ್ಯಾರ್ಥಿಗಳಿಗಿಂತ ಎಡಿಟಿಂಗ್ ವಿದ್ಯಾರ್ಥಿಗಳ ಪರಿಸ್ಥಿತಿ ಚೆನ್ನಾಗಿತ್ತು.

Girish Karnad's autobiography part 20

ನಿರ್ದೇಶನದ ವಿದ್ಯಾರ್ಥಿಗಳು ಡಿಪ್ಲೊಮಾ ಚಿತ್ರ ನಿರ್ಮಿಸುವಾಗ ಸಹವಿದ್ಯಾರ್ಥಿಗಳನ್ನು (ಅಭಿನಯದ ವಿದ್ಯಾರ್ಥಿಗಳನ್ನು) ಬಳಸದೇ ಪುಣೆಯ ಮರಾಠಿ ರಂಗದ ನಟ-ನಟಿಯರನ್ನು ಬಳಸುತ್ತಿದ್ದಾಗ ಅವರಲ್ಲಿ ಬೆಳೆದ ಅತೃಪ್ತಿ, ಮತ್ತು ಅನೇಕ ಕಾರಣಗಳಿಂದ ಇನ್‌ಸ್ಟಿಟ್ಯೂಟ್‌ನಲ್ಲಿ ವಿದ್ಯಾರ್ಥಿಗಳ ಮುಷ್ಕರ ನಡೆದದ್ದು, ಅದನ್ನು ಎದುರಿಸುವ ಸಂಕಷ್ಟಗಳ ಬಗ್ಗೆ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. ನಟನಟಿಯರು ಅನ್ನ ಸತ್ಯಾಗ್ರಹ ಪ್ರಾರಂಭಿಸಿದಾಗ, ಗವರ್ನಿಂಗ್ ಕೌನ್ಸಿಲ್ಲಿನ ಸದಸ್ಯರನ್ನು ಘೇರಾವ್ ಮಾಡಿದ ಸಂದರ್ಭ; ಸೂಚನಾ-ಪ್ರಸಾರಣ ಮಂತ್ರಾಲಯದ ಸಚಿವ ಅಬ್ದುಲ್ ಜಮಾಲ್ ಕಿದ್ವಾಯಿ, ಹೃಷಿಕೇಶ ಮುಖರ್ಜಿ, ಮೃಣಾಲ್ ಸೇನ ಮುಂತಾದವರು ಸಿಕ್ಕಿದ್ದು, ಕೂಡಲೇ ಚಿತ್ರ ಸಂಸ್ಥಾನದ ನಿಯಮಗಳನ್ನು ಬದಲಿಸಲು ವಿದ್ಯಾರ್ಥಿಗಳ ಒತ್ತಾಯ, ಅದರಿಂದ ಪಾರಾದ ಪ್ರಸಂಗದ ಬಗ್ಗೆ ಗಿರೀಶ ಬರೆಯುತ್ತಾರೆ.

ಗಿರೀಶಗೆ ಗಿರೀಶ್ ಕೊಟ್ಟ ಕಾಟ : ಆಗ ಗಿರೀಶ ಕಾಸರವಳ್ಳಿ ವಿದ್ಯಾರ್ಥಿಯಾಗಿದ್ದರು. ಅವರಿಂದ ಗಿರೀಶ ಕಾರ್ನಾಡರಿಗೆ ಆದ ತೊಂದರೆಗಳು, (ಕಾರಂತರೊಡನೆ ಚೋಮನ ದುಡಿ ಚಿತ್ರದಲ್ಲಿ ಸಹಾಯಕರಾಗಿ ಹೋಗಿ ತಡವಾಗಿ ಮರಳಿದ್ದು, ಅದರಿಂದ ಪರೀಕ್ಷೆಯ ವೇಳಾಪತ್ರಿಕೆಯಲ್ಲಿ ಸೃಷ್ಟಿಸಿದ ಗೊಂದಲ.) ಅಭಿನಯ ವಿಭಾಗದಲ್ಲಿ ವಿದ್ಯಾರ್ಥಿಗಳಾಗಿದ್ದ ಜಸಪಾಲ್ ಹಾಗೂ ನಸೀರ್ ಅವರಿಂದ ಉಂಟಾದ ತೊಂದರೆ. ಆದರೂ ನಸೀರರಿಗೆ ಶಾಮ ಬೆನಗಲ್ ಅವರ ಪರಿಚಯ ಮಾಡಿಸಿ (ನಿಶಾಂತ, ಮಂಥನಗಳಲ್ಲಿಯ ಪಾತ್ರದಿಂದ) ಅವರಿಗೆ ಉತ್ತಮ ನಟರಾಗುವ ಅವಕಾಶ ಕಲ್ಪಿಸಿಕೊಟ್ಟದ್ದು. ನಿರ್ದೇಶನ ವಿದ್ಯಾರ್ಥಿಗಳು ಒಂದು ಚಿತ್ರಲೇಖನ ಬರೆಯುವುದು ಕಡ್ಡಾಯವಾಗಿದ್ದಾಗ, ಕಾಸರವಳ್ಳಿ ನಾಲ್ಕು ಪುಟಗಳ (ಘಟಶ್ರಾದ್ಧದ ಬಗ್ಗೆ) ಬರೆದದ್ದು, ಕೇತನ್ ಮೆಹತಾ ಅರ್ಧ ಚಿತ್ರಕಥೆಯನ್ನೇ ಬರೆದಿದ್ದರೂ ಅದರಲ್ಲಿರುವ ಅವನ ಪ್ರತಿಭೆಯನ್ನು ಬಾಹ್ಯ ಪರೀಕ್ಷಕರಾಗಿ ಬಂದ ನಬೇಂದು ಘೋಷ್ ಮೆಚ್ಚಿ ಪೂರ್ಣ ಗುಣ ಕೊಟ್ಟ ಪ್ರಸಂಗ ಬರೆದು ವಾಚಕರಿಗೆ ಹೊಸ ಜಗದಪರಿಚಯ ಮಾಡಿಕೊಡುತ್ತಾರೆ.

ಗಿರೀಶ ನಿರ್ದೇಶಕರಾಗಿದ್ದಾಗ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ, ಆಗ ಅವರ ಮೇಲೆ ಬಂದ ಒತ್ತಡಗಳು, ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳು ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ದಬ್ಬಾಳಿಕೆಯನ್ನು ಟೀಕಿಸಿದ್ದು. ಅವರಿಗೆ ಬುದ್ಧಿ ಕಲಿಸಲು ಪಾಶ್ಚಾತ್ಯ ಸಮಾಜದಲ್ಲಿ ನಡೆಯುವ ಅನ್ಯಾಯ, ಅಲ್ಲಿ ಕರಿಯರನ್ನು ಪಶುಗಳಂತೆ ನಡೆಸಿಕೊಳ್ಳುವುದನ್ನು ತೋರಿಸುವ ಚಿತ್ರ ನಿರ್ಮಿಸುವ ಪ್ರಸ್ತುತಿ, ಅದರಲ್ಲಿ ವಿ.ಸಿ ಶುಕ್ಲಾ ಅವರ ಕಾರಭಾರು ಮುಂತಾದ ರೋಚಕ ಪ್ರಸಂಗಗಳ ಬಗ್ಗೆ ವಿವರಿಸಿದ್ದಾರೆ. ಎರಡು ವರ್ಷಗಳ ಕರಾರು ಮುಗಿದ ಮೇಲೆ ಮುಂದುವರಿಯಲು ವರಿಷ್ಠರು ಬಯಸಿದರೂ ಗಿರೀಶರು ನಿವೃತ್ತಿ ಪಡೆದರು. ಇವರ ಸ್ಥಳಕ್ಕೆ ಕನ್ನಡಿಗರೇ ಆದ ಎನ್.ವಿ.ಕೆ. ಮೂರ್ತಿ ಬಂದರು. ಅಷ್ಟರಲ್ಲಿ ಗಿರೀಶರಿಗೆ ಶ್ಯಾಮ ಬೆನಗಲ್ ಅವರ ಮಂಥನ ಚಿತ್ರದಲ್ಲಿ ಒಂದು ಪಾತ್ರ ದೊರೆತದ್ದರಿಂದ ರಾಜಕೋಟಕ್ಕೆ ತೆರಳಿದರು.

ಭಾಸ್ಕರ್ ಚಂದಾವರಕರರ್ ಪರಿಚಯ ಇವರಿಗೆ 16ನೇ ವಯಸ್ಸಿನಿಂದ ಇತ್ತು. ಪುಣೆಯ ಇನಸ್ಟಿಟ್ಯೂಟ್‌ನಲ್ಲಿ ಅವರು ಸಂಗೀತ ನಿರ್ದೇಶಕರಾಗಿದ್ದರು. ವಂಶವೃಕ್ಷಕ್ಕೆ ಅವರು ಉತ್ತಮ ಸಂಗೀತ ನೀಡಿದ್ದರು. ಅವರು ಸಂಗೀತದಲ್ಲಿ ವಿಕ್ರಮ ಸಾಧಿಸಿದ್ದು ಒಂದನೊಂದು ಕಾಲದಲ್ಲಿ ಎಂಬ ಗಿರೀಶರ ಚಿತ್ರಕ್ಕೆ ಸಂಗೀತ ನೀಡಿದಾಗ. ಆ ಚಿತ್ರವನ್ನು ನೋಡಿದ ಸತ್ಯಜಿತ್ ರಾಯ್ ಗಿರೀಶರಿಗೆ ಹೇಳಿದ್ದರಂತೆ, "ಭಾಸ್ಕರನಿಗೆ ಹೇಳು ಅವನ ಸಂಗೀತ ಬ್ರಿಲಿಯಂಟ್ ಆಗಿದೆ. ಎಲ್ಲಿಯೂ ಒಂದು ಕೂಡ ಅಪಶ್ರುತಿ ಇಲ್ಲ" ಎಂದು. ಆದರೆ ರಂಗಭೂಮಿಯ ಮೇಲೆ ಭಾಸ್ಕರನ ಹೆಸರನ್ನು ಪ್ರಖ್ಯಾತಗೊಳಿಸಿದ್ದು ವಿಜಯ ತೆಂಡೂಲಕರರ ನಾಟಕ ಘಾಶೀರಾಮ ಕೊತವಾಲ. ಮಹಾರಾಷ್ಟ್ರದ ಭಕ್ತಿಸಂಗೀತದ ಪರಂಪರೆಯನ್ನೇ ಬಳಸಿ, ಪುಣೆಯ 18ನೆಯ ಶತಮಾನದ ದರಬಾರಿನಲ್ಲಿ ನಡೆದ ಅಕೃತ್ಯಗಳನ್ನು ಧ್ವನಿಪೂರ್ಣವಾಗಿ ಸ್ಫುಟಗೊಳಿಸಿತ್ತು.

ಋಣಮಾನಗಳ ಪೂರ್ಣ ವರ್ತುಳ : ಕಾರಂತರು ಪುಣೆಯಲ್ಲಿ ಘಾಶೀರಾಮ ಕೊತವಾಲ ನಾಟಕದ ಪ್ರಯೋಗ ನೋಡಿದರು. ಅದರಲ್ಲಿ ನಟರನ್ನು ರಂಗದ ಮೇಲೆ ತೆರೆದು ಮುಚ್ಚುವ ಪರದೆಯಂತೆ ಯೋಜಿಸಿದ ರೀತಿಗೆ, ಅದಕ್ಕಿಂತಲೂ ಹೆಚ್ಚಾಗಿ ಭಕ್ತಿ ಸಂಗೀತವನ್ನು ರಾಜಕೀಯ ಹಿಂಸೆಯ ವಿಮರ್ಶೆಯಾಗಿ ಹೆಣೆಯುವ ಕಲ್ಪನೆಗೆ ಮರುಳಾದರು. ಅದನ್ನು ಸದೇಹ ಎತ್ತಿ ಬೆಂಗಳೂರಲ್ಲಿ ಜಡಭರತರ ಸತ್ತವರ ನೆರಳುನಾಟಕ ಪ್ರಯೋಗದಲ್ಲಿ ಉಪಯೋಗಿಸಿಕೊಂಡರು. ಸತ್ತವರ ನೆರಳು ಯಶಸ್ವಿಯಾದಾಗ, ಅದರ ಮಾದರಿ ಘಾಶೀರಾಮ ಕೊತವಾಲದಲ್ಲಿ ಪ್ರಯೋಗವಾಗಿತ್ತು ಎಂಬುದನ್ನು ವೈಯಕ್ತಿಕ ಚರ್ಚೆಯಲ್ಲೂ ಒಪ್ಪಿಕೊಳ್ಳಲಿಲ್ಲ! ವಿಜಯ ತೆಂಡೂಲಕರ್ ಕೂಡ ತನ್ನ ನಾಟಕಕ್ಕೆ ಸ್ಫೂರ್ತಿ ಸತ್ಯದೇವ ದುಬೆ ಅವರು ಪ್ರಯೋಗಿಸಿದ (ಕಾರ್ನಾಡ ಲಿಖಿತ) ಹಯವದನದಿಂದಲೇ ಸಿಕ್ಕಿತೆಂಬುದನ್ನು ಎಂದೂ ಒಪ್ಪಿಕೊಳ್ಳಲಿಲ್ಲವಾದ್ದರಿಂದ ಮರಾಠಿ-ಕನ್ನಡಗಳಲ್ಲಿ ಈ ಋಣಮಾನಗಳ ಪೂರ್ಣ ವರ್ತುಳ ಪೂರ್ಣವಾಯಿತೆಂದು ವರ್ಣಿಸಬಹುದು! ಎಂಬ ಉದ್ಗಾರ ಗಿರೀಶರದು.

ಹೇಮಾಮಾಲಿನಿ ಜೊತೆ ಗಾಸಿಪ್ : ಪುಣೆಯಲ್ಲಿ ಎರಡು ವರ್ಷವಿದ್ದಾಗ ಗಿರೀಶರ ಜೀವನದಲ್ಲಿ ಪ್ರವೇಶಿಸಿದ ಇನ್ನೊಬ್ಬ ವ್ಯಕ್ತಿ ಜಯಾ ಚಕ್ರವರ್ತಿ (ಹೇಮಾಮಾಲಿನಿಯ ತಾಯಿ). ಅವಳು ನಿರ್ಮಿಸುತ್ತಿರುವ ಸ್ವಾಮಿ ಚಿತ್ರದಲ್ಲಿ ಗಿರೀಶರಿಗೆ ಮುಖ್ಯ ಪಾತ್ರಕ್ಕೆ ಆಹ್ವಾನಿಸಿದ್ದರು. ಇದರ ಹಿಂದೆ ಒಂದು ಕಾರಣವಿತ್ತು. ತನ್ನ ಮಗಳು ಹೇಮಾ ಮಾಲಿನಿಗೆ ಯೋಗ್ಯ ವರ ಹುಡುಕುತ್ತಿದ್ದಳು. ಆಗ ಹೇಮಾಮಾಲಿನಿ-ಧರ್ಮೇಂದರ್ ಪ್ರೇಮ ಪ್ರಕರಣ ಎಲ್ಲರ ಬಾಯಲ್ಲಿತ್ತು. ಅದನ್ನು ಕೊನೆಗಾಣಿಸಿ ಹೇಮಾಳಿಗೊಂದು ಶಿಷ್ಟ ವೈವಾಹಿಕ ಜೀವನ ಕಲ್ಪಿಸಿಕೊಡುವದು ತಾಯಿಯ ಉದ್ದೇಶವಾಗಿತ್ತು. ಹೇಮಾಮಾಲಿನಿ ಆ ಕಾಲದ ಅತಿ ಯಶಸ್ವಿ ತಾರೆ. ಭಾರತದ ಪುರುಷರೆಲ್ಲ ಆಕೆಯನ್ನು ಬಯಸುತ್ತಾರೆ ಎಂಬ ಮಾತು ಪತ್ರಿಕೆಯಲ್ಲಿ ಸಾಮಾನ್ಯವಾಗಿತ್ತು. ಗಿರೀಶರಿಗೆ ಊಟದ ಔತಣ ಬರತೊಡಗಿತು. ಸ್ವಾಮಿ ಚಿತ್ರದ ಯಶಸ್ಸಿನ ಪರಿಣಾಮವಾಗಿ ಜಯಾ ಚಕ್ರವರ್ತಿ ರತ್ನದೀಪ ಚಿತ್ರ ಆರಂಭಿಸಿ ಅದರಲ್ಲಿ ಗಿರೀಶರಿಗೆ ಮುಖ್ಯಪಾತ್ರ ಕೊಡಲು ಇಚ್ಛಿಸಿದಳು. ಇವರು ಖುಜರಾಹೋದಲ್ಲಿ ಚಿತ್ರೀಕರಣ ನಡೆಸಿದಾಗ ಒಂದು ಸಂಜೆ ಹೇಮಾ ಗಿರೀಶರನ್ನು ಅಡ್ಡಾಡಲು ಬರಲು ಕರೆದಳು. ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಪತ್ರಿಕೆಗಳು ಆಡಿಕೊಳ್ಳುತ್ತಲಿವೆ. ಅದಕ್ಕೆ ನೀವೇನೆನ್ನುತ್ತೀರಿ? ಆಗ ಗಿರೀಶ ಉತ್ತರಿಸಿದರು, ಪತ್ರಿಕೆ ಆಡಿಕೊಳ್ಳುವುದು ಮಹತ್ವದ್ದಲ್ಲ, ನನ್ನ ವಾಗ್ದತ್ತ ವಧು ಅಮೇರಿಕೆಯಲ್ಲಿದ್ದಾಳೆ. ನಾವು ಮದುವೆಯಾಗುವುದೆಂದು ನಿಶ್ಚಯಿಸಿದ್ದೇವೆ ಎಂದು.

1961ರಲ್ಲಿ ಆಗ್ರಾ ನಗರದಲ್ಲಿ ಬನಾರಸಿದಾಸ್ ಎಂಬ ಜೈನ ವ್ಯಾಪಾರಿ ಹಿಂದಿ ಆಡುಮಾತಿನಲ್ಲಿ(ಬ್ರಜ) ಅರ್ಧಕಥಾನಕ ಎಂಬ ಆತ್ಮ ಚರಿತ್ರೆ ಪ್ರಥಮ ಪುರುಷದಲ್ಲಿ ಬರೆದಿದ್ದಾನಂತೆ. ಅವನು ಅಂದಿನರಾಜಕೀಯ-ಸಾಮಾಜಿಕ-ಧಾರ್ಮಿಕ ಘಟನೆಗಳನ್ನು ನಮೂದಿಸುತ್ತಾನೆ. ಪ್ರಾಮಾಣಿಕತೆಯಿಂದ ತನ್ನ ಖಾಸಗೀ ಜೀವನದ ಬಗ್ಗೆ ಕೂಡ ಬರೆಯುತ್ತಾನೆ. ಒಂದು ವೇಳೆ ಗಿರೀಶರು ಬೇಂದ್ರೆಯವರ ಕಾವ್ಯಕ್ಕೆ ಮರುಳಾಗದಿದ್ದರೆ ತಮ್ಮ ಆತ್ಮಕಥೆಗೆ ಅರ್ಧಕಥಾನಕ ಎಂಬ ಹೆಸರನ್ನೇ ಇಡುತ್ತಿದ್ದರಂತೆ. ಈಗ ಬರೆದದ್ದು ಅರ್ಧ ಆಗಿದೆ, ಎರಡನೆಯ ಭಾಗ ಬರೆಯುತ್ತಿದ್ದಾರೆ. ನೋಡ ನೋಡತ ದಿನಮಾನ ಎಂದು ಕರೆಯಲು ನಿಶ್ಚಯಿಸಿದ್ದಾರೆ.

ಮದುವೆಗಾಗಿ 14 ವರ್ಷ ಕಾದ ಗಿರೀಶ : ಗಿರೀಶ 1976 ಜನೆವರಿ 1ನೆಯ ದಿನಾಂಕ ಪುಣೆ ಬಿಟ್ಟು ಬೆಂಗಳೂರಿಗೆ ಬಂದು ಕಾವೇರಿ ಹೊಟೇಲಿನಲ್ಲಿ ತಂಗಿದ್ದರು. ಆಗ ಅವರ ಗೆಳತಿ ಸರಸ್ವತಿ ಕೊಡಗಿನಿಂದ ಬಂದು ಅಲ್ಲೇ ಇಳಿದುಕೊಂಡಿದ್ದರು. ಇವರು, "ನನ್ನನ್ನು ಮದುವೆಯಾಗುತ್ತೀಯಾ?" ಎಂದು ಸರಸ್ವತಿಗೆ ಕೇಳಿದರು. ಸರಸ್ವತಿ ಡಾಕ್ಟರ್ ಆಗಿ ಅಮೇರಿಕೆಯಲ್ಲಿ ದುಡಿಯುತ್ತಿದ್ದರು. "ಸ್ವಲ್ಪ ಸಮಯ ಬೇಕು. ಪ್ರತೀಕ್ಷೆ ಮಾಡಲು ಸಿದ್ಧನಾಗಿದ್ದೀಯೇನು?" ಎಂದು ಸರಸ್ವತಿ ಕೇಳಿದಾಗ ಇವರು ಒಪ್ಪಿದರು. ಇವರ ಚಿತ್ರ ಮಂಥನ ಯಶಸ್ವಿಯಾಯಿತು. ಜಯಾ ಚಕ್ರವರ್ತಿಯ ಸ್ವಾಮಿ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ, ವಿಮರ್ಶಕರ ಕಣ್ಣಲ್ಲಿ ದಿಗ್ವಿಜಯ ಸಾಧಿಸಿತ್ತು. ಬಿ.ವಿ.ಕಾರಂತರೊಡನೆ ತಬ್ಬಲಿಯು ನೀನಾದೆ /ಗೋಧೂಲಿ ದ್ವಿಭಾಷಾ ಚಿತ್ರ ನಿರ್ದೇಶಿಸಿದರು. ಅವರು 42 ವರ್ಷ ತಲುಪಿದ್ದರು. ಆಗ ಸರಸ್ವತಿ ನ್ಯೂಯಾರ್ಕನಿಂದ ಪತ್ರ ಬರೆದರು. ಆಗಲಿ, ನಿನ್ನನ್ನು ಮದುವೆಯಾಗುತ್ತೇನೆ ಎಂದು. ಇಬ್ಬರು ಗಿರೀಶರ ತಾಯಿಯ ಇಚ್ಛೆಯಂತೆ ಆರ್ಯ ಸಮಾಜದ ಪದ್ಧತಿಯಿಂದ ಮುಂಬೈಯಲ್ಲಿ ಮದುವೆಯಾದರು. ವಾಗ್ದತ್ತ ವಧುವನ್ನು ವರಿಸಲು ಗಿರೀಶರಿಗೆ 14 ವರ್ಷ ಹಿಡಿದವು. (ಮುಗಿಯಿತು)

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 20. In this episode Karnad writes about his stint in Pune Film Institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X