ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ನಾಡರ ಆತ್ಮಕತೆ 18 : ವಂಶವೃಕ್ಷ ಚಿತ್ರಕತೆ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

1970ರಲ್ಲಿ ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್‌ನೊಂದಿಗಿದ್ದ ಏಳು ವರ್ಷದ ಒಪ್ಪಂದ ಮುಗಿದಿತ್ತು. ಮದ್ರಾಸ್ ಕೆಲಸ ಬಿಟ್ಟು ಧಾರವಾಡದಲ್ಲಿ ನೆಲೆಯೂರುವ ಇಚ್ಛೆಯಿಂದ ಸಾರಸ್ವತಪುರದಲ್ಲಿ, ಒಂದು ಮನೆ ಕೊಂಡರು. ಆ ವೇಳೆಗೆ ಜಿ.ವಿ.ಅಯ್ಯರ್ ಅವರು ಭೈರಪ್ಪನವರ ಲೋಕಪ್ರಿಯ ಕಾದಂಬರಿಯಾದ ವಂಶವೃಕ್ಷವನ್ನು ಆಧರಿಸಿ ಒಂದು ಚಿತ್ರ ತೆಗೆಯಲು ಹೊರಟಿದ್ದರು. ಅದನ್ನು ನಿರ್ದೇಶಿಸಲು ಬಿ.ವಿ.ಕಾರಂತರಿಗೆ ಕೇಳಿದರು.

ಕಾರಂತರು ಕಾರ್ನಾಡರನ್ನು ತಮ್ಮೊಂದಿಗೆ ಸೇರಲು ಆಮಂತ್ರಿಸಿದರು. ಸಂಸ್ಕಾರ ಚಿತ್ರದ ಯಶಸ್ಸಿನಿಂದಾಗಿ ಗಿರೀಶರಿಗೆ ಚಿತ್ರಜಗತ್ತಿನಲ್ಲಿ ಆಸಕ್ತಿ ಉಂಟಾಗಿತ್ತು. ಅವರಿಗೆ ಆ ಚಿತ್ರ ನಿರ್ದೇಶಿಸುವ ಅವಕಾಶ ದೊರೆತಿರಲಿಲ್ಲ. ಆದ್ದರಿಂದ ತಮ್ಮನ್ನು ಸಹಾಯಕ ನಿರ್ದೇಶಕ ಮಾಡಲು ಕೇಳಿದರು. ಕಾರಂತರು ಬಹಳ ಸಂತೋಷದಿಂದ ಅವರನ್ನು ಸಹಾಯಕ ಏಕೆ? ಜಂಟಿ ನಿರ್ದೇಶಕರಾಗಿರಿ ಎಂದು ಆಮಂತ್ರಿಸಿದರು. ಆಗ ಭೈರಪ್ಪನವರು ದೆಹಲಿಯಲ್ಲಿದ್ದರು. ಅಯ್ಯರ್, ಕಾರಂತ, ಕಾರ್ನಾಡ ದಿಲ್ಲಿಗೆ ಹೋಗಿ ಲೇಖಕರನ್ನು ಭೆಟ್ಟಿಯಾಗಿ ಚರ್ಚಿಸಿದರು.

ವಂಶವೃಕ್ಷವನ್ನು ಚಿತ್ರೀಕರಿಸಲು ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯನವರಂತಹ ಅತಿರಥ- ಮಹಾರಥರೆಲ್ಲ ಹವಣಿಸಿದ್ದರು. ಭೈರಪ್ಪನವರು ಒಪ್ಪಿರಲಿಲ್ಲ. ಈ ವೇಳೆಗೆ ಅಯ್ಯರರ ಜೀವನದಲ್ಲಿ ಕಾರಂತರ ಮರುಪ್ರವೇಶವಾಗಿತ್ತು. ಇಬ್ಬರೂ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಕಾರಂತರಿಗೆ ಮನೆಯಲ್ಲಿ ಅಡಿಗೆಗೆ ಗತಿಯಿಲ್ಲದಾಗ, ಅಯ್ಯರ್ ಮತ್ತು ಅವರ ಹೆಂಡತಿ ಹೋಟಲ್‌ನಿಂದ ಎರಡು ರೈಸ್-ಪ್ಲೇಟ್ ತರಿಸಿದಾಗ, ಕಾರಂತರೊಂದಿಗೆ ಹಂಚಿಕೊಂಡಿದ್ದರಂತೆ.

Girish Karnad's autobiography part 18

ಕಾರಂತ್-ಕಾರ್ನಾಡ್ ಹೆಗಲಿಗೆ ನಿರ್ದೇಶನ : ಕಾರಂತ ದೆಹಲಿಗೆ ಬಂದು, ಹಿಂದಿಯಲ್ಲಿ ಎಂ.ಎ. ಪದವಿ ಗಳಿಸಿ, ಕನ್ನಡ ಶಾಲೆಯಲ್ಲಿ ಹಿಂದೀ ಟೀಚರ್ ಆಗಿದ್ದರು. ಅಯ್ಯರ್ ಪಂತಲು ಗುಂಪು ಸೇರಿದ್ದರು. ತಾವೇ ಸ್ವತಂತ್ರವಾಗಿ ಚಿತ್ರ ನಿರ್ಮಿಸಲು ಹೋಗಿ ಕೈ ಸುಟ್ಟುಕೊಂಡಿದ್ದರು. ಸಾಲಗಾರರ ಕಾಟ ತಪ್ಪಿಸಿಕೊಂಡು ದಿಲ್ಲಿಗೆ ಓಡಿಹೋಗಿ ಕಾರಂತರ ಆಶ್ರಯ ಪಡೆದಿದ್ದರು. ವಂಶವೃಕ್ಷ ಕಾದಂಬರಿಯನ್ನು ಕಲಾತ್ಮಕವಾಗಿ ಚಿತ್ರಸಲು ಬಯಸಿ ಭೈರಪ್ಪನವರನ್ನು ಕಂಡು ಅಪ್ಪಣೆ ಕೇಳಿದ್ದರು. ಕಾರಂತರು ನಿರ್ದೇಶಿಸುವುದಾದರೆ ಒಪ್ಪಿಗೆ ಕೊಡುತ್ತೇನೆಂದು ಭೈರಪ್ಪ ಹೇಳಿದ್ದರು. ಕಾರಂತರಿಗೆ ಚಿತ್ರೋದ್ಯಮದ ಅನುಭವವಿಲ್ಲವಲ್ಲ ಎಂದು ಅಯ್ಯರ್ ಹೇಳಿದಾಗ, ಭೈರಪ್ಪ, ಉಳಿದವರ ಯಶಸ್ಸಿಗಿಂತ ಕಾರಂತರು ಮಾಡಿದ ತಪ್ಪುಗಳೇ ಹೆಚ್ಚು ಕಲಾತ್ಮಕವಾಗಿರುವುದು ಸಾಧ್ಯ ಎಂದಿದ್ದರಂತೆ.

ದೆಹಲಿಯಲ್ಲಿ ಕಾರಂತರು ಅಧ್ಯಾಪಕರಾಗಿದ್ದುಕೊಂಡೇ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಸೇರಿ ತರಬೇತಿ ಪಡೆದಿದ್ದರು. ಪ್ರೇಮಾಳನ್ನು ಮದುವೆಯಾಗಿ ಸಂಸಾರ ಹೂಡಿದ್ದರು. ಅವಳನ್ನು ಡ್ರಾಮಾ ಸ್ಕೂಲಿಗೆ ಸೇರಿಸಿದ್ದರು. ನಾಟಕ ಅಕಾಡೆಮಿಯ ಕಾರ್ಯದರ್ಶಿ ಸುರೇಶ ಅವಸ್ಥಿ ಅವರ ಪ್ರೋತ್ಸಾಹದಿಂದ ಕಾರಂತರು ಸ್ಥಾನಿಕ ನಾಟ್ಯ ಸಂಸ್ಥೆಗಳಿಗಾಗಿ ದೇಶದಾದ್ಯಂತ ಕಮ್ಮಟ ನಡೆಸಿದರು. ಒಬ್ಬಂಟಿಗರಾಗಿ ಅಲೆದಾಡಿದರು. ಭಾರತೀಯ ರಂಗಭೂಮಿಗೆ ಅವರಷ್ಟು ಸೇವೆ ಹಿಂದೆ ಯಾರೂ ಮಾಡಿರಲಿಲ್ಲ. ಸಂಸ್ಕಾರ ಮತ್ತು ವಂಶವೃಕ್ಷ ಕಾದಂಬರಿಗಳಲ್ಲಿ ಹಲವಾರು ಅಂಶಗಳಲ್ಲಿ ಹೋಲಿಕೆ ಇತ್ತು. ಅವು ತಮ್ಮದೇ ರೀತಿಯಲ್ಲಿ ಜನಮನ ಸೆಳೆದಿದ್ದವು. ಅವುಗಳ ಬಗ್ಗೆ ಚರ್ಚೆ ಆಗುತ್ತಿತ್ತು.

ಸಂಸ್ಕಾರ ತಮಗೆ ಹುಚ್ಚು ಹಿಡಿಸಿತ್ತು. ವಂಶವೃಕ್ಷದ ಚಿತ್ರಕಥೆ ಬರೆಯುವ ಪ್ರಕ್ರಿಯೆ ಆಸ್ವಾದಕರವಾಗಿತ್ತು ಎಂದು ಗಿರೀಶ ಬರೆಯುತ್ತಾರೆ. ಪ್ರೀಮಿಯರ್ ಸ್ಟುಡಿಯೋದ ಒಡೆಯ ಎಮ್.ಎಸ್.ಬಸವರಾಜಯ್ಯ ಫೈನಾನ್ಸ್ ಮಾಡಲು ಮುಂದೆಬಂದರು. ಅಯ್ಯರ್ ತಮ್ಮ ಜೀವನದಲ್ಲಿ ಮೋಸ, ವಂಚನೆ, ಸಾಲಗಾರ ಕಪಿಮುಷ್ಟಿಯಲ್ಲಿ ಸಿಲುಕಿದ್ದವರು. ತಾವು ಯಾವಯಾವ ರೀತಿಯಲ್ಲಿ ಮೋಸಮಾಡಿ ಗೆದ್ದದ್ದು, ಸೋತದ್ದು, ದುಡ್ಡುಮಾಡಿದ್ದು ನಿರ್ದಾಕ್ಷಿಣ್ಯವಾಗಿ ನಗುತ್ತ ವಿವರಿಸುತ್ತಿದ್ದರಂತೆ. ಸುಬ್ಬರಾವ್ ಸಂಪಾದಿಸುತ್ತಿದ್ದ ಮೇನಕಾ ಎಂಬ ಪತ್ರಿಕೆಯಲ್ಲಿ ಆತ್ಮಕಥೆ ಬರೆಯಲು ಪ್ರಾರಂಭಿಸಿದ್ದರು. ಅದರಲ್ಲಿ ತಮ್ಮ ಕುಕೃತ್ಯಗಳನ್ನೂ ಬಣ್ಣಿಸಿದ್ದರಂತೆ. ಇದನ್ನು ನೋಡಿ ವೈಎನ್ಕೆ, ಬೇಡ ಅಯ್ಯರ್, ಅದೆಲ್ಲ ಸಾಕುಮಾಡಿ ಎಂದಾಗ ಬರೆಯುವುದನ್ನು ನಿಲ್ಲಿಸಿಬಿಟ್ಟರಂತೆ.

ಚಿತ್ರದ ಸಂಗೀತಕ್ಕಾಗಿ ಭಾಸ್ಕರ್ ಚಂದಾವರ್ಕರ್ ಅವರನ್ನು ಕೇಳಿದ್ದರಂತೆ. ಚಂದಾವರ್ಕರ್ ಶಿಫಾರಸು ಮಾಡಿದ ಸ್ವರ್ಣಪದಕ ಗಳಿಸಿದ ಛಾಯಾಗ್ರಾಹಕ ಶರೀಫ್ ಎಂಬ ಮುಸ್ಲಿಮ್ ಕಲಾವಿದ ಇವರನ್ನು ಸೇರಿದ. ನಂಜಿನಗೂಡಿನಲ್ಲಿ ಆರಿಸಿದ್ದ ಮನೆ ಅಪ್ಪಟ ಸಂಪ್ರದಾಯಸ್ಥರದು. ಬ್ರಾಹ್ಮಣರ ಮನೆಯಲ್ಲಿ ಓಡಾಡುವದು ಸುಲಭವಾಗಲಿ ಎಂದು ಶರೀಫನಿಗೆ ಗುರು ಎಂಬ ನಾಮಕರಣ ಮಾಡಿದ್ದರಂತೆ. ಮುಖ್ಯಪಾತ್ರ ಮೊದಲು ಅಯ್ಯರ್ ಮಾಡಬೇಕೆಂದು ವಿಚಾರಿಸಿದ್ದರು. ಮುಂಬಯಿಯಲ್ಲಿ ಕನ್ನಡ ಮತ್ತು ಕೊಂಕಣಿ ರಂಗಭೂಮಿಯ ಹೆಸರಾಂತ ನಟ ತಲಗೇರಿ ವೆಂಕಟರಾಯರ ಹೆಸರನ್ನು ಗಿರೀಶರ ತಾಯಿ ಸೂಚಿಸಿದ್ದರು. ತಾಯಿ ಮಗನಿಗೆ ಹೇಳದೆ ವೆಂಕಟರಾಯರನ್ನು ಬೆಂಗಳೂರಿಗೆ ಕಳಿಸಿಬಿಟ್ಟರಂತೆ. ಅವರನ್ನು ಕಂಡ ಅಯ್ಯರ್ ಅವರನ್ನು ಬಹಳ ಮೆಚ್ಚಿದರಂತೆ.

ಕಾತ್ಯಾಯಿನಿ ಪಾತ್ರಕ್ಕೆ ಶಾರದಾ : ಇನ್ನು ಕಾತ್ಯಾಯನಿಯ ಪಾತ್ರಕ್ಕೆ ಬಹಳ ಹುಡುಕಬೇಕಾಯಿತು. ಫಿಲ್ಮ್ ಆದರೆ ಬೇಡಪ್ಪ ಎಂಬ ಪಲ್ಲವಿಯನ್ನು ಸಂಸ್ಕಾರದ ವೇಳೆಯಲ್ಲಿ ಬಹಳ ಕೇಳಿದ್ದರು. ಆ ಪಾತ್ರಕ್ಕೆ ನನ್ನ ಹೊರತು ಯಾರಿದ್ದಾರೆ ಎಂದು ಕಲ್ಪನಾ ಮೂದಲಿಸಿದ್ದನ್ನು ಕೇಳಿ ಗಿರೀಶ ಹಾಗೂ ಕಾರಂತ ಸಿಡಿಮಿಡಿಗೊಂಡರು. ಒಂದು ದಿನ ಶಾರದಾ ಎಂಬ ಯುವತಿಯನ್ನು ವೈಎನ್ಕೆ ಅವರ ಮನೆಯಲ್ಲಿ ನೋಡಿದರಂತೆ. ಅವಳು ಈ ಪಾತ್ರಕ್ಕೆ ತಕ್ಕವಳು ಎಂದು ಅಂದುಕೊಂಡರು. ತಂದೆಯವರನ್ನು ಭೆಟ್ಟಿಯಾಗಿ ಒಪ್ಪಿಗೆ ಪಡೆಯಬೇಕು ಎಂದಾಗ ಇವರಿಗೆ ತಲೆ ಜಜ್ಜಿದಂತಾಯಿತು. ಅವಳ ತಂದೆ ವೆಂಕಾಜಿರಾವ್ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿ. ಅವರು ವಂಶವೃಕ್ಷ ಕಾದಂಬರಿ ಓದಿದ್ದರು. ಅದನ್ನು ಓದಿದಾಗ ಅವರಿಗೆ ಜ್ವರ ಬಂದಿತ್ತಂತೆ. ಮಗಳು ಶಾರದಾ ಇದರಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ ಎಂದರು. ಕೊನೆಗೆ ಅವರನ್ನು ಮನವೊಲಿಸಿ ಒಪ್ಪಿಗೆ ಪಡೆದರಂತೆ.

ವಂಶವೃಕ್ಷದಲ್ಲಿಯ ಪೃಥ್ವಿ ಎಂಬ ಪಾತ್ರ ಚಿಕ್ಕದಾದರೂ ಕಾನಕಾನಹಳ್ಳಿ ಗೋಪಿ ಅವನನ್ನು ಒದಗಿಸಿದರು. ಹೊಟೇಲಿನಲ್ಲಿ ಚೇಂಜ್ ಕೊಡಲು ದುಡ್ಡಿಲ್ಲವೆಂದು ಗೋಪಿ ಚಡಪಡಿಸುತ್ತ ಇದ್ದಾಗ, ನ್ಯಾಶನಲ್ ಕಾಲೇಜಿನ ಸಂಪತ್ಕುಮಾರ ಎಂಬ ತರುಣ ವಿದ್ಯಾರ್ಥಿ ತಾನು ಚೇಂಜ್ ಕೊಡಲು ಮುಂದಾದ, ಆ ತರುಣನಿಗೆ ವೈಎನ್ಕೆಯವರ ಮನೆಗೆ ಹೋಗಿ ಗಿರೀಶರನ್ನು ಕಾಣಲು ಹೇಳಿದರಂತೆ. ಸ್ಫುರದ್ರೂಪಿ ಹುಡುಗ ನಾಯಕನಾಗಲು ಲಾಯಕ್ಕು ಎಂದುಕೊಂಡರು. ಗಿರೀಶ ಅವರನ್ನು ತನ್ನಂತೆ ಸಂದರ್ಶನಕ್ಕೆ ಬಂದ ನಟನೆಂದು ಭಾವಿಸಿ, ಆ ತರುಣ ತನ್ನ ಬಗ್ಗೆ ಹೇಳಿಕೊಂಡ. ನನಗೆ ಕೆಲ ಫಿಲ್ಮ್ ಆಫರ್ ಇದ್ದವು. ಹಿಂದಿಯಲ್ಲಿ ಮಾಲಾ ಸಿನ್ಹಾ ಅವಳೊಡನೆ ಆಫರ್ ಇದೆ, ಓಟ್-ಡೋರ್ ಶೂಟಿಂಗಿಗೆ ಹೋಗಬೇಕಾಗಿದೆ ಎಂದನಂತೆ. ತಾನು ಮಾತಾಡುತ್ತಿದ್ದುದು ನಟನಲ್ಲ ನಿರ್ದೇಶಕ ಗಿರೀಶ ಎಂದು ತಿಳಿದಾಗ ಅವನಿಗೆ ಮುಜಗರವಾಯಿತಂತೆ. ಅವನು ವಂಶವೃಕ್ಷದಲ್ಲಿ ಚೆನ್ನಾಗಿ ನಟಿಸಿದ. ಅವನ ಅಭಿನಯ ನೋಡಿ ಮುಂದೆ ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಎಂಬ ತಮ್ಮ ಚಿತ್ರದಲ್ಲಿ ಪ್ರಧಾನ ಪಾತ್ರ ಕೊಟ್ಟು ಅವನಿಗೆ ವಿಷ್ಣುವರ್ಧನ್ ಎಂಬ ನಾಮಕರಣ ಮಾಡಿದರು. ಮುಂದಿನ ಕಥೆ ನಿಮಗೆ ಗೊತ್ತೇ ಇದೆ.

ಗಿರೀಶ-ಕಾರಂತ ಜಂಟಿ ನಿರ್ದೇಶನ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಇಬ್ಬರ ಕೊರತೆಗಳನ್ನು ಪರಸ್ಪರ ಅನುಭವದಿಂದ ತುಂಬಿಕೊಂಡರಂತೆ. ಒಂದು ದಿನ ಕಾರಂತರು, ನನಗಿಂತ ಹೆಚ್ಚು ಗೊತ್ತಿದ್ದ ಒಬ್ಬ ಮನುಷ್ಯ ನನಗೆ ಭೆಟ್ಟಿಯಾದರೆ ನಾನು ಸುಮ್ಮನಿದ್ದು ಅವನನ್ನೇ ಅಭ್ಯಾಸ ಮಾಡುತ್ತೇನೆ. ಮುಂದೆ ಅವನ ಸಾಮರ್ಥ್ಯಗಳನ್ನು ಕಲಿತು ಅವನನ್ನು ದಾಟಿ ಹೋಗಬಲ್ಲೆ ಎಂಬ ಆತ್ಮವಿಶ್ವಾಸ ನನಗಿದೆ ಎಂದಿದ್ದರು. ಇದು ಗಿರೀಶರನ್ನು ಉದ್ದೇಶಿಸಿ ಹೇಳಿದ್ದೆಂದು ಗಿರೀಶರಿಗೆ ಅರ್ಥವಾಯಿತು. ಆದರೆ ಇಬ್ಬರಲ್ಲಿ ಯಾವ ತಕರಾರು ಇರಲಿಲ್ಲ. ನಟ ಉದಯಕುಮಾರ ಇವರನ್ನು ಮೆಚ್ಚಿದ್ದನಂತೆ.

ಚಿತ್ರದ ಸಂಕಲನ ಪ್ರೀಮಿಯರ್ ಸ್ಟುಡಿಯೋದಲ್ಲಾಯಿತು. ಅದಕ್ಕಾಗಿ ಫಿಲ್ಮ್ ಇನ್‌ಸ್ಟಿಟ್ಯೂಟಿನ ಸ್ವರ್ಣ ಪದಕ ಗೆದ್ದ ಅರುಣಾ ರಾಜೆ ಪತಿ ವಿಕಾಸರೊಂದಿಗೆ ಅಲ್ಲಿ ಬಂದಿದ್ದಳು. ಬಹಳ ಚೆನ್ನಾಗಿ ಹೊಸ ಅಲೆಯ ಚಿತ್ರಗಳಿಂದ ಪ್ರೇರಿತಳಾಗಿ ಹೊಸ ರೀತಿಯಿಂದ ಸಂಕಲನ ಮಾಡಿದ್ದಳು ಎಂದು ನೆನೆಯುತ್ತಾರೆ. ಭಾಸ್ಕರ್ ಚಂದಾವರಕರರ ಸಂಗೀತ ಮಧುರವಾಗಿತ್ತು. ಚಿತ್ರ ಬಿಡುಗಡೆಗೊಂಡಾಗ ಪತ್ರಿಕೆಗಳಿಂದ ಭರ್ಜರಿ ಪ್ರಸಿದ್ಧಿ ದೊರಕಿತ್ತು. ರಾಜ್ಯ ಪ್ರಶಸ್ತಿಗಳ ಸುರಿಮಳೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ ತಲಗೇರಿ ವೆಂಕಟರಾಯರು), ಅತ್ಯುತ್ತಮ ನಟಿ(ಶಾರದಾ), ಸಂಕಲನ, ಕತೆ ಸಂಭಾಷಣೆ ಹೀಗೆ ಪ್ರಶಸ್ತಿಗಳ ಸರಮಾಲೆ!

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 18. In this episode Karnad writes about the making of Vamshavruksha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X