ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರ್ತಿಯವರ 'ಸಂಸ್ಕಾರ'ದ ಗುಂಗಿನಲ್ಲಿ ಗಿರೀಶ್

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Girish Karnad's autobiography part 16
ಓಯುಪಿಯಲ್ಲಿ ಅವರ ವರಿಷ್ಠರಾಗಿದ್ದ ರವಿ ದಯಾಳರು ಗಿರೀಶರಿಗೆ ಮದ್ರಾಸ್ ಪ್ಲೇಯರ್ಸ್ ಎಂಬ ಹವ್ಯಾಸಿ ರಂಗ ತಂಡ ನಡೆಸುತ್ತಿದ್ದ ಮಾಲತಿ-ಅಶೋಕ ದಂಪತಿಗಳ ಪರಿಚಯ ಮಾಡಿಕೊಟ್ಟರು. ಅವರು ವರ್ಷಕ್ಕೆ ಎರಡು ಇಂಗಿಷ್ ನಾಟಕ ಪ್ರಯೋಗಿಸುತ್ತಿದ್ದರು. 1965ರಲ್ಲಿ ಅವರು ಅಮೇರಿಕನ್ ನಾಟಕಕಾರ ಟೆನ್ನೆಸೆ ವಿಲಿಯಮ್ಸ್‌ನ ದಿ ನೈಟ್ ಆಫ್ ಇಗ್ಯುನಾ ನಾಟಕ ಪ್ರಯೋಗಿಸಲು ಹಮ್ಮಿಕೊಂಡಿದ್ದರು. ಅಶೋಕ ನಾಟಕದ ಪುರುಷ ಪ್ರಧಾನ ಪಾತ್ರದಲ್ಲಿದ್ದರು, ಸ್ನೇಹಾ ರೆಡ್ಡಿ ನಾಯಕಿಯ ಪಾತ್ರ ವಹಿಸಿದ್ದರು. ಎಸ್.ವಿ.ಕೃಷ್ಣಮೂರ್ತಿಯವರ ನಿರ್ದೇಶನ. ಗಿರೀಶರಿಗೆ ಒಂದು. ಚಿಕ್ಕ ಪಾತ್ರವಿತ್ತು(ಟ್ರಕ್ ಡ್ರೈವರನದು). ಕಡಲತೀರದಲ್ಲಿ ಸೆಟ್ ಹಾಕಿಸಿ ಮೆಕ್ಸಿಕೋದ ವಾತಾವರಣವನ್ನು ಪುನರ್‌ನಿರ್ಮಿಸಲಾಗಿತ್ತು. ನಾಟಕ ಅತ್ಯಂತ ಯಶಸ್ವಿಯಾಗಿತ್ತು.

ಮದ್ರಾಸ್ ಪ್ಲೇಯರ್ಸ್‌ದ ಸದಸ್ಯರೆಲ್ಲ ಮೇಲುಸ್ತರದ ಸುಶಿಕ್ಷಿತ ವರ್ಗಕ್ಕೆ ಸೇರಿದವರು. ಕೃಷ್ಣಮೂರ್ತಿಯವರ ತಂದೆ ಮದ್ರಾಸ್ ಗವರ್ನರ್ ಆಗಿದರು. ಹೆಂಡತಿ ಲಕ್ಷ್ಮಿ ಕೆಂಬ್ರಿಜ್‌ನಲ್ಲಿ ಶಿಕ್ಷಣ ಪಡೆದಿದ್ದಳು. ಅವರ ಮಾವ ಐಸಿಎಸ್ ಕೇಡರ್‌ನವರು, ರಿಸರ್ವಬ್ಯಾಂಕ್ ಗವರ್ನರ್ ಆಗಿದ್ದರು. ಪಟ್ಟಭಿರಾಮ ರೆಡ್ಡಿ ಅವರು ತೆಲಗು ನವ್ಯ ಕವಿ, ಚಿತ್ರನಿರ್ಮಾಪಕ, ಅವರ ತಂದೆ ಗಣಿಮಾಲಿಕರಾಗಿದ್ದರು, ಹೆಂಡತಿ ಸ್ನೇಹಾ ನೃತ್ಯಕಲಾವಿದೆ. ಅಮ್ಮೂ ಮೆಥ್ಯೂ ಭೌತಶಾಸ್ತ್ರ ಪ್ರಾಧ್ಯಾಪಕಿ. ಕೆಂಬ್ರಿಜ್‌ನಲ್ಲಿ ಲಕ್ಷ್ಮಿಯ ಜೊತೆಗಿದ್ದಳು. ವ್ಯಂಗ ಚಿತ್ರಕಾರ ಅಬು ಅಬ್ರಹಾಮನ ತಂಗಿ. ಮದ್ರಾಸ ಪ್ಲೇಯರ್ಸ್ ಗುಂಪಿನಲ್ಲಿ ಗಿರೀಶನೇ ಬಡವ. ಕಾರಣ ಅವನ ಬಳಿ ಒಂದೇ ಕಾರು ಇದೆ ಎಂದು ವೈಎನ್‌ಕೆ ಚೇಷ್ಟೆ ಮಾಡುತ್ತಿದ್ದರಂತೆ.

ಮದ್ರಾಸ್ ಪ್ಲೇಯರ್ಸ್ ಸೇರಿದ್ದರಿಂದ ಕೆಲವು ಲಾಭಗಳಾದವು. ಹವ್ಯಾಸಿ ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರಿಂದ ಅದರ ಅನಿವಾರ್ಯ ದೌರ್ಬಲ್ಯ, ಜೊತೆಗೆ ಅಲ್ಲಿರುವ ಶಿಸ್ತು, ಕಲಿಯುವ ಅವಕಾಶ, ಇವೆಲ್ಲ ದೊರೆತವು. ಅತ್ಯುತ್ತಮ ನಾಟಕಗಳ ಸಂಭಾಷಣೆ ಕಂಠಗತವಾದುದರಿಂದ ನಾಟಕದ ಮಾತಿನ ಲಯವೇ ಬೇರೆ ಎನ್ನುವುದು ಗಿರೀಶರಿಗೆ ತಿಳಿದಿತ್ತು. ನಾಟಕದ ಗಮಕ ಗೊತ್ತಿರುವುದರಿಂದ ಸ್ವಂತದ ನಾಟಕ ಇಂಗ್ಲಿಷಿಗೆ ಅನುವಾದಿಸುವುದು ಸುಲಭವಾಯ್ತು. ಶೇಕ್ಸಪಿಯರನ ನಂತರ ಶ್ರೇಷ್ಠನೆನಿಸಿದ ನಾಟಕಕಾರ ಚೆಕಾಫ್‌ನ್ ದಿ ಚೇರಿ ಆರ್ಚರ್ಡ್ ನಾಟಕ ಅಮ್ಮೂ ಮ್ಯಾಥ್ಯೂ ಅವರ ಮಹಿಳಾ ಕಾಲೇಜಿನಲ್ಲಿ ಪ್ರಯೋಗಗೊಂಡಾಗ ದಿಗ್ದರ್ಶಿಸುವ ಹೊಣೆ ಗಿರೀಶರ ಪಾಲಿಗೆ ಬಂದಿತ್ತು. ಚೆಕಾಫ್‌ನ ಅದ್ಭುತ ಕಲಾವಿಶ್ವವನ್ನು ಅಭ್ಯಾಸ ಮಾಡುವ ಅವಕಾಶ ತಮಗೆ ದೊರೆಯಿತು.

ಆ ಕಾಲದಲ್ಲಿ ಟಿ.ವಿ. ಬಂದಿರಲಿಲ್ಲ. ಶ್ರೇಷ್ಠ ಸಂಗೀತಗಾರರಿಗೆ, ನರ್ತಕರಿಗೆ, ಕಲಾವಿದರಿಗೆ ದರ್ಶಕ ವರ್ಗ ಸುಲಭವಾಗಿ ದೊರೆಯುತ್ತಿತ್ತು. ಮಹಾನ್ ಕಲಾಕಾರರ ಪರಿಚಯವಾಗುತ್ತಿತ್ತು. ಶ್ರೇಷ್ಠ ನರ್ತಕಿ ಬಾಲ ಸರಸ್ವತಿ, ಶ್ರೇಷ್ಠ ಗಾಯಕಿ ಸುಬ್ಬುಲಕ್ಷ್ಮೀ ಮೂಲತಃ ದೇವದಾಸಿಯರಾಗಿದ್ದರೂ ಅವರಿಗೆ ದೊರೆತ ಮಾನ ಸನ್ಮಾನಗಳು ಅವರ್ಣನೀಯವಾಗಿದ್ದವು ಎಂದು ಬರೆಯುತ್ತಾರೆ.

ಹೋಮಿ ಭಾಭಾ ಫೆಲೋಶಿಪ್ : ಮದ್ರಾಸಿನ ಕೆಲಸ ಬಿಟ್ಟಾಗ ಹೋಮಿ ಭಾಭಾ ಫೆಲೋಶಿಪ್ ಇವರನ್ನು ಅರಸಿಕೊಂಡು ಬಂತು. ಇವರನ್ನು ಸಂದರ್ಶಿಸಿದ ಅಲ್‌ಕಾಝಿ ಇವರನ್ನು, ಫೆಲೋಶಿಪ್ ಅವಧಿಯಲ್ಲಿ ರಿಸರ್ಚ್ ಪೇಪರ್ ಬರೆಯುವಿರಾ? ಎಂದು ಕೇಳಿದ್ದರು. ಇವರಿಗೆ ಹೊಸ ಸಾಮಗ್ರಿಗಳನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳಬೇಕಾಗಿತ್ತು. ಈ ಫೆಲೋಶಿಪ್ ತಿಂಗಳಿಗೆ 25,000 ತರುತ್ತಿತ್ತು. ಅಲ್ಲದೆ ವಿದೇಶ ಸಂಚಾರದ ಅನುಕೂಲ ಒದಗಿಸುತ್ತಿತ್ತು. ಈ ಫೆಲೋಶಿಪ್ ಬರುವ ಮೊದಲೇ ಸಾಂಪ್ರದಾಯಿಕ ಸಾಧ್ಯತೆಗಳನ್ನು, ಸಂಗೀತವನ್ನು ಬಳಸಿ ಒಂದು ನಾಟಕ ಬರೆದಿದ್ದರು. ಅದೇ ಹಯವದನ. ಅದನ್ನು ಸತ್ಯದೇವ ದುಬೆ ಹಾಗೂ ಕಾರಂತ ಮೆಚ್ಚಿದ್ದರು.

ತಮ್ಮ ಫೆಲೋಶಿಪ್ ಅವಧಿ ಪೂರ್ಣಗೊಂಡಾಗ ಆ ನಾಟಕವನ್ನು ತಮ್ಮ ಸಾಧನೆ ಎಂದು ಕೊಡಬಹುದಾಗಿತ್ತು. ಆದ್ದರಿಂದ ಭಾರತ ಪ್ರವಾಸದಲ್ಲಿ ಹೆಚ್ಚಿನ ಕಾಲ ಕಳೆದರು. ವಂಶವೃಕ್ಷ ಚಿತ್ರೀಕರಣದಲ್ಲಿ ತೊಡಗಿದರು. ಸುದೈವದಿಂದ ಅಮೆರಿಕೆಯ ಸ್ಟೇಟ್ ಡಿಪಾರ್ಟ್‌ಮೆಂಟ್ ಇವರನ್ನು ಒಂದು ತಿಂಗಳು ಆಮಂತ್ರಿಸಿತ್ತು. ನ್ಯೂಯಾರ್ಕ್ ಚಲನಚಿತ್ರ -ನಾಟಕ ಎರಡಕ್ಕೂ ಚೈತನ್ಯದ ಸೆಲೆಯಾಗಿರುವ ನಗರ. ಆದರೆ ಖರ್ಚಿನ ನಗರ. ಅಲ್ಲಿ ಹೋಮಿ ಭಾಭಾ ಫೆಲೋಶಿಪ್ ನೆರವಾಯಿತು. ಅಲ್ಲಿ ಪ್ರಸಿದ್ಧ ಚಿತ್ರಗಳನ್ನು, ಮುಂದೆ ಇವರ ಅರ್ಧಾಂಗಿ ಯಾಗಲಿರುವ ಸರಸ್ವತಿಯವರೊಡನೆ ನೋಡಿದರು.

ಹಯವದ ನಾಟಕ ಪ್ರದರ್ಶನ : 1972ರಲ್ಲಿ ಬಿ.ವಿ.ಕಾರಂತರು ದೆಹಲಿಯಲ್ಲಿ ದಿಶಾಂತರ ಸಂಸ್ಥೆಗಾಗಿ ಹಯವದನ ಪ್ರದರ್ಶಿಸಿದರು. ಅದೇ ವೇಳೆಗೆ ಸತ್ಯದೇವ ದುಬೆ ಅವರು ಮುಂಬಯಿಯಲ್ಲಿ ಅಮರೇಶ ಪುರಿ, ಸುನೀಲಾ ಪ್ರಧಾನ, ಹಾಗೂ ಅಮೋಲ ಪಾಲೇಕರರೊಂದಿಗೆ ಹಯವದನ ನಾಟಕವನ್ನು ಹಿಂದಿಯಲ್ಲಿ ಪ್ರಯೋಗಿಸಿದರು. ಎರಡೂ ಪ್ರಯೋಗಗಳಿಗೂ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು. ಪಾರಂಪರಿಕ ರಂಗಸಾಮಗ್ರಿಯನ್ನು, ವಿಶೇಷತಃ ಸಂಗೀತ-ನೃತ್ಯಗಳನ್ನು, ಬಳಸಿ ರೂಪಗೊಂಡ ಪ್ರಪ್ರಥಮ ಅಧುನಿಕ ನಾಟಕ ಎಂದು ಈ ನಾಟಕಕ್ಕೆ ಸ್ವಾಗತ ದೊರೆಯಿತು. ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿ ಸುರೇಶ ಅವಸ್ಥಿ ಇದನ್ನು ದಿ ಥ್ಯೇಟರ್ ಆಫ್ ದಿ ರೂಟ್ಸ್ ಎಂದು ವರ್ಣಿಸಿದರು, ಇದು ನಾಟ್ಯಶಾಸ್ತ್ರದ ಪುನರಾಗಮನ ಎಂದು ಘೋಷಿಸಿದರು. ಸತ್ಯದೇವ ದುಬೆ ಹಯವದನ ನಾಟಕವನ್ನು ದೆಹಲಿಯಲ್ಲಿ ಪ್ರಯೋಗಿಸಿದಾಗ ಪ್ರಧಾನಿ ಇಂದಿರಾ ಗಾಂಧಿ ಬಂದು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರಂತೆ.

ಗಿರೀಶ ಕಾರ್ನಾಡರಿಗೆ ಅದು ಹೆಮ್ಮೆಯ ವರ್ಷವಾಗಿತ್ತು. ಸಂಗೀತ-ನಾಟಕ ಅಕಾಡೆಮಿಯ ಪುರಸ್ಕಾರವೂ ದೊರೆತಿತ್ತು. ಈ ನಾಟಕವನ್ನು ನೋಡಿ ಸ್ಫೂರ್ತಿಗೊಂಡ ಮರಾಠಿ ನಾಟಕಕಾರ ವಿಜಯ ತೆಂಡೂಲಕರ್ ಅವರು ಜಾನಪದ ಮಾಧ್ಯಮ ಬಳಸಿ ನಾಟಕ ಬರೆದರು. ಅದೇ ಘಾಶೀರಾಮ್ ಕೊತ್ವಾಲ್. ಹಬೀಬ ತನವೀರರು ಹಯವದನದ ಇಂಗ್ಲಿಷ್ ಅನುವಾದವನ್ನು ಶಿಕ್ಯಾಗೋದ ಎನ್ಯಾಕ್ಟ್ ದಲ್ಲಿ ಓದಿ ಸ್ಫೂರ್ತಿಗೊಂಡು ಚರಣದಾಸ್ ಚೋರ್ ಬರೆದು 19734ರಲ್ಲಿ ಪ್ರಯೋಗಿಸಿದರು. ಘಾಶೀರಾಮ್ ಕೊತ್ವಾಲ್ ಹಾಗೂ ಚರಣದಾಸ್ ಚೋರ್ ಇವೆರಡೂ ಭಾರತೀಯ ರಂಗದ ಇತಿಹಾಸದಲ್ಲಿ ಮೈಲುಗಲ್ಲುಗಳೆಂದು ಘೋಷಿತವಾದವು. ಅರ್ಥಾತ್ ಎರಡೂ ಕೃತಿಗಳಿಗೆ ಗಿರೀಶ ಕಾರ್ನಾಡರ ಹಯವದನವೇ ಸ್ಫೂರ್ತಿಯಾಗಿತ್ತು ಎಂಬುದನ್ನು ಇಬ್ಬರೂ ಎಂದೂ ಒಪ್ಪಿಕೊಳ್ಳಲಿಲ್ಲ ಎಂದು ಖೇದದಿಂದ ಗಿರೀಶರು ನೆನೆಯುತ್ತಾರೆ.

ಸಂಸ್ಕಾರದ ಗುಂಗು : 1965ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಲನ ಕಾರವಾರದಲ್ಲಿ ನೆರೆದಿತ್ತು. ಗಿರೀಶ ತನ್ನ ಆಫೀಸ್ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಧಾರವಾಡಕ್ಕೆ ಬಂದರು. ಅಲ್ಲಿಂದ ಕೀರ್ತಿನಾಥ ಕುರ್ತಕೋಟಿಯವರೊಡನೆ ಕಾರವಾರಕ್ಕೆ ಹೋಗುವವರಿದ್ದರು. ಧಾರವಾಡದಲ್ಲಿ ಮನೋಹರ ಗ್ರಂಥಮಾಲೆಗೆ ಬಂದ ಒಂದು ಒಳ್ಳೆಯ ಕಾದಂಬರಿಯ ಹಸ್ತಪ್ರತಿಯನ್ನು ಓದಲು ಗಿರೀಶರಿಗೆ ದೊರೆತಿತ್ತು. ಅದು ಅನಂತಮೂರ್ತಿಯವರ ಸಂಸ್ಕಾರ. ಅದನ್ನು ಓದಿದ ಮೇಲೆ ಇಡೀ ರಾತ್ರಿ ಗಿರೀಶರಿಗೆ ನಿದ್ದೆ ಬರಲಿಲ್ಲ. ಆ ಕೃತಿ ಅವರ ಮೇಲೆ ಬಹಳ ಪ್ರಭಾವ ಬೀರಿತ್ತು. ಕಾದಂಬರಿಯ ಓದು ಇವರನ್ನು ಹೊಸ ವಿಶ್ವಕ್ಕೆ ಕರೆದೊಯ್ದಿತ್ತು. ಅವರ ಜೀವನದಲ್ಲಿ ಮೊದಲ ಸಲ ಒಬ್ಬ ಸಮಕಾಲೀನ ಲೇಖಕ ಅವರಲ್ಲಿ ಮತ್ಸರವನ್ನುಂಟು ಮಾಡಿದ್ದ. ರಾಮಾನುಜನ್ ಹೇಳಿದ ಒಂದು ಮಾತು ನೆನಪಾಯಿತು, ಭಾಷಾಂತರವೆಂದರೆ ಯಾರೋ ಇನ್ನೊಬ್ಬರು ಸೃಷ್ಟಿಸಿದ ಶ್ರೇಷ್ಠ ಕೃತಿಯನ್ನು ತನ್ನದಾಗಿಸಿಕೊಳ್ಳುವ ವಿಧಾನ. ಮೂಲಕೃತಿಯ ಬಗ್ಗೆ ಹೊಟ್ಟೆಕಿಚ್ಚು ಉಂಟಾಗದಿದ್ದರೆ ಒಳ್ಳೆಯ ಅನುವಾದ ಸಾಧ್ಯವಿಲ್ಲ ಎಂದು.

ಕಾರವಾರ ಸಾಹಿತ್ಯ ಸಮ್ಮೇಲನಕ್ಕೆ ಹೋಗಿ. ಸಮ್ಮೇಲನದ ರೂವಾರಿ ದಾಮೋದರ ಚಿತ್ತಾಲರ ಮನೆಯಲ್ಲಿ ಉಳಿದುಕೊಂಡು, ಸಮ್ಮೇಲನದ ಅಧ್ಯಕ್ಷ ಕಡೆಂಗೋಡ್ಲು ಶಂಕರ ಭಟ್ಟರಿಂದ ಹಿಡಿದು, ನಿರಂಜನ, ಚಿತ್ತಾಲ, ಶಾಂತಿನಾಥರನ್ನೊಳಗೊಂಡು ತಮ್ಮ ತಲೆಮಾರಿನ ಚಂಪಾ, ಲಂಕೇಶ, ಪೂಚಂತೇ, ಕಂಬಾರರ ವರೆಗೆ ಎಲ್ಲರೊಡನೆ ಪರಿಚಯ- ಹರಟೆ, ಹಾಸ್ಯ ವಿನೋದದಲ್ಲಿ ಕಾಲ ಕಳೆದರು. ನಂತರ ಧಾರವಾಡಕ್ಕೆ ಬಂದಾಗ ಜಿ.ಬಿ.ಜೋಶಿಯವರ ಅಟ್ಟದಲ್ಲಿ ಸಂಸ್ಕಾರ ಕಾದಂಬರಿಯನ್ನು ಆಧರಿಸಿ ಒಂದು ಚಿತ್ರಪಟ ನಿರ್ಮಿಸಬೇಕೆಂದು ನಿರ್ಧರಿಸಿದರು. ಬೆಂಗಳೂರಲ್ಲಿ ವೈಎನ್ಕೆಯವರೊಡನೆ ಮಾತಾಡಿದಾಗ ಅವರು ಆ ಸಾಹಸದಲ್ಲಿ ತಾವೂ ಒಂದಾಗಲು ಒಪ್ಪಿಕೊಂಡರು.

ಮದ್ರಾಸ್ ತಲುಪಿದಾಗ ಮದ್ರಾಸ್ ಪ್ಲೇಯರ್ಸ್ ಹೊಸ ನಾಟಕದ ರಂಗತಾಲೀಮಿನಲ್ಲಿ ತೊಡಗಿದ್ದರು. ಇವರು ತಾಲೀಮಿನುದ್ದಕ್ಕೂ ಎಲ್ಲರೊಡನೆ ಸಂಸ್ಕಾರ ಕಾದಂಬರಿಯ ಬಗ್ಗೆ ಮಾತಾಡಿದರು. ಮಿತ್ರ ವಾಸುದೇವ ಚಿತ್ರಕಾರ, ನಾಟಕ ಸಾಹಿತ್ಯದಲ್ಲಿ ಅಭಿರುಚಿಯುಳ್ಳವ. ಚಿತ್ರೀಕರಣದ ಮಾತು ಬಂದಾಗ ಅವನು ಉತ್ತೇಜಿತಗೊಂಡ. ಉಳಿದವರಿಗೆ ಚಿತ್ರ ನಿರ್ಮಾಣದ ಕಲ್ಪನೆಯೇ ಅವ್ಯವಹಾರ್ಯ, ವಿಚಿತ್ರವೆನಿಸಿರಬೇಕು. ಪಟ್ಟಭಿರಾಮ ರೆಡ್ಡಿಗೆ ಮಾತ್ರ ಫಿಲ್ಮ್ ಮಾಧ್ಯಮದಲ್ಲಿ ಗತಿ ಇತ್ತು. ಪಟ್ಟಾಭಿರಾಮರ ಹೆಂಡತಿ ಸ್ನೇಹಾ ಅತ್ಯುತ್ತಮ ನರ್ತಕಿಯಾಗಿದ್ದಳು. ಅಭಿನಯದಲ್ಲೂ ಪ್ರವೀಣೆ. ಅಯನೆಸ್ಕೋನ ದಿ ಲೆಸನ್ ಎಂಬ ಏಕಾಂಕದಲ್ಲಿ ಮನೆಗೆಲಸದ ಆಳಾಗಿ ಆಕೆ ಅಭಿನಯಿಸಿದ್ದಳು. ಅವಳು ಎಬ್ಬಿಸಿದ ಭೀತಿಯ ತರಂಗಗಳು ಯಾವ ವ್ಯಾವಸಾಯಿಕ ಅಭಿನೇತ್ರಿಯ ಕಲಾತ್ಮಕ ಘನತೆಗೂ ಸಮಾನವಾಗಿದ್ದವು. ಸ್ನೇಹಾಗೆ ಚಲನಚಿತ್ರ ನಾಯಕಿಯಾಗಬೇಕೆಂಬ ಬಯಕೆ ಇತ್ತು. ಕನ್ನಡ ಪುಸ್ತಕವನ್ನೇ ಎದುರಿಗೆ ಇಟ್ಟು ಅದನ್ನು ಭಾಷಾಂತರಿಸುವ ಕೆಲಸ ಗಿರೀಶ ಮಾಡಿದರು, ಪಟ್ಟಾಭಿಯವರ ಮನೆಯಲ್ಲಿ ಓದಿ ತೋರಿಸಿದರು. ಕಾದಂಬರಿಯ ಪ್ರತಿಭೆ ಎಲ್ಲರ ಕಣ್ಣು ಕುಕ್ಕಿಸಿತು. ಪಟ್ಟಾಭಿ ಚಿತ್ರ ನಿರ್ಮಿಸಲು ಸಿದ್ಧರಾದರು.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 16. In this episode Karnad writes about UR Anantha Murthy's novel Samskara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X