ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಘಲಕ್ ನಾಟಕಕ್ಕೆ ರಾಮಾನುಜನ್ ಶಭಾಸ್‌ಗಿರಿ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Girish Karnad's autobiography part 14
ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್‌ನ (ಓ.ಯು.ಪಿ.) ಭಾರತೀಯ ಶಾಖೆ 1912ರಲ್ಲಿ ಆರಂಭವಾಯ್ತು. ಇದರ ಮುಖ್ಯ ಆಫೀಸು ಮಂಬಯಿಯಲ್ಲಿತ್ತು, ಮದ್ರಾಸ್ ಮತ್ತು ಕಲಕತ್ತಾಗಳಲ್ಲಿ ಉಪಶಾಖೆಗಳಾದವು. ಪ್ರತಿಯೊಂದು ಉಪಶಾಖೆಯಲ್ಲಿ ಒಬ್ಬ ಮ್ಯಾನೇಜರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಇದ್ದರು. ಮ್ಯಾನೇಜರರೆಲ್ಲ ಇಂಗ್ಲಿಷ್ ಜನರೇ ಆಗಿದ್ದರೂ ಭಾರತದಲ್ಲಿ ಹಲವಾರು ವರ್ಷ ದುಡಿದಿದ್ದರಿಂದ ಅವರು ಈ ದೇಶವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ರವಿ ದಯಾಳ ಎಂಬ ಭಾರತೀಯ, ಆಕ್ಸಫರ್ಡಿನಲ್ಲಿ ಗಿರೀಶರಿಗಿಂತ ಒಂದು ವರ್ಷ ಮುಂದೆ ಇದ್ದರು. ಅವರು ಮದ್ರಾಸಿನಲ್ಲಿ ಅಸಿಸ್ಟಂಟ್ ಮೆನೇಜರ್ ಆಗಿದ್ದರು. ಮುಂಬೈ ತರಬೇತಿ ಆದಮೇಲೆ ಅವರ ಜಾಗೆಗೆ ಇವರನ್ನು ಪೋಸ್ಟ್ ಮಾಡಿದ್ದರು.

ಮುಂಬೈಯಲ್ಲಿ ಜನರಲ್ ಮ್ಯಾನೇಜರ್ ಹಾಕಿನ್ಸ್ ಎಂಬವರಿದ್ದರು. ಓ.ಯು.ಪಿ.ಯಲ್ಲಿ ಇವರ ಕೆಲಸವೆಂದರೆ ಹಸ್ತಪ್ರತಿಯನ್ನು ತಿದ್ದಿ ಮುದ್ರಣಕ್ಕಾಗಿ ಪುಸ್ತಕಗಳನ್ನು ಅಣಿಗೊಳಿಸುವದು, ಮುದ್ರಕರೊಡನೆ ವ್ಯವಹರಿಸುವದು, ಪ್ರೂಫ್ ತಿದ್ದುವದು, ಮಾರಾಟದ ಏಜೆಂಟರೊಡನೆ ವ್ಯವಹರಿಸುವದು, ಪ್ರಚಾರ ವಿನ್ಯಾಸ ಪುಸ್ತಕದ ಮುಖಚಿತ್ರ ತೀರ್ಮಾನಿಸುವದು, ಸ್ಟಾಕ್ ಲೆಕ್ಕ ಇಡುವದು, ಪಠ್ಯಪುಸ್ತಕ ಪ್ರಾಧಿಕಾರದೊಂದಿಗೆ ತಮ್ಮ ಯೋಜನೆ ಚರ್ಚಿಸುವದು, ಕೊನೆಗೆ ಲಂಡನ್‌ದಿಂದ ತರಿಸಿದ ಪುಸ್ತಕಗಳನ್ನು ಮಾರುವದು. ಲಂಡನ್ ಆಫೀಸಿಗಾಗಿ ದುಡ್ಡು ಮಾಡುವುದೇ ಭಾರತೀಯ ಶಾಖೆಯ ಉದ್ದೇಶವಾಗಿತ್ತು. ಮ್ಯಾಕ್‌ಮಿಲನ್, ಓರಿಯಂಟ ಲಾಂಗಮನ್ಸ್ ಇವರ ಪ್ರತಿಸ್ಪರ್ಧಿಗಳಾಗಿದ್ದರು.

ಪ್ರೊ|ರಾಮಾನುಜನ್ ಅವರ ಇಂಗ್ಲಿಷ್ ಕವಿತೆಗಳ ಟೈಪ್‌ಗೊಂಡ ಪ್ರತಿಗಳು ಇವರ ಬಳಿಯಲ್ಲಿದ್ದವು. ಅವನ್ನು ಓ.ಯು.ಪಿ.ಯಿಂದ ಪ್ರಕಟಿಸುವ ಆಸೆ ಇವರದು. ಇವನ್ನು ಲಂಡನ್ನಿನಲ್ಲಿರುವ ಜಾನ್ ಸ್ಟಾಲ್‌ವರ್ದಿಗೆ ಕಳಿಸಲು ಸಿದ್ಧಪಡಿಸಿದ ಪದ್ಯಗಳನ್ನು ಹಾಕಿನ್ಸರಿಗೆ ತೋರಿಸಿದರು. ಅವರು ಮೂಗು ಮುರಿದು, ಇವನ್ನು ಕಾವ್ಯ ಅಂತ ಯಾಕೆ ಕರೆಯಬೇಕು? ಗದ್ಯವನ್ನೇ ತುಂಡುತುಂಡಾಗಿ ಕತ್ತರಿಸಿ ಪದ್ಯದ ಹಾಗೆ ಕಾಣುವಂತೆ ಅಂಟಿಸಿದಂತಿದೆ ಎಂದರು. ಸರಿ, ಲಂಡನ್ನಿಗೆ ಕಳಿಸುವುದೇ ಇದ್ದರೆ ಸಮುದ್ರಮಾರ್ಗವಾಗಿ ಕಳಿಸು, ಏರ್ಮೇಲ್ ಬೇಡ. ಇದು ನಿನ್ನ ಸ್ವಂತದ ಶಿಫಾರಸು ಎನ್ನುವುದನ್ನು ಸ್ಪಷ್ಟಪಡಿಸು ಎಂದಿದ್ದರು ಹಾಕಿನ್ಸ್.

ಜಾನ್ ಸ್ಟಾಲ್‌ವರ್ದಿಯ ಉತ್ತರ ಬಂತು. Ramanujan is already a good poet, and potentially a very good one. His rhythms are sure but relaxed in the approved American style of the moment, his voice, however, is his own and India's. (ರಾಮಾನುಜನ್ ಈಗಾಗಲೇ ಒಳ್ಳೆಯ ಕವಿಯಾಗಿದ್ದು, ಇನ್ನೂ ಅತ್ಯುತ್ತಮ ಕವಿ ಆಗುವ ಸಾಧ್ಯತೆಗಳಿವೆ. ಇಂದು ಅಮೇರಿಕೆಯಲ್ಲಿ ಒಪ್ಪಿತವಾಗಿರುವ ರೀತಿಯಲ್ಲಿ ಅವರ ಲಯ ಅಳ್ಳಕವಾಗಿದೆ. ಅವರ ಧ್ವನಿ ಮಾತ್ರ ಸ್ವಂತದ್ದು, ಇಂಡಿಯಾದ್ದು.)

ರಾಮನುಜನ್ ಅವರ ಕವನ ಸಂಗ್ರಹ ದಿ ಸ್ಟ್ರೈಡರ್ಸ್ (The Striders) ಓ.ಯು.ಪಿ.ಯವರು ಪ್ರಕಟಿಸಿದರು. ರಾಮಾನುಜನ್ ಅವರಿಗೆ ಅತ್ಯಾನಂದವಾಗಿತ್ತು. ನನ್ನ ಜೀವನದಲ್ಲಿ ನನಗೆ ವೈಯಕ್ತಿಕವಾಗಿ ಆನಂದವಿತ್ತ ಕೆಲವು ಘಟನೆಗಳಲ್ಲಿ ಇದು ಒಂದು ಎಂದು ಗಿರೀಶರಿಗೆ ಪತ್ರ ಬರೆದರು. ರಾಮನುಜನ್ ಅವರು ಕವಿಯಾಗಿ ಭಾರತದಲ್ಲಿ ಮನ್ನಣೆ ಕಾಣಲೇ ಇಲ್ಲ. ಮುಂದೆ ಏಳು ವರ್ಷಗಳ ನಂತರ ಪೆಂಗ್ವಿನ್‌ದವರು ರಾಮಾನುಜನ್ ಅವರ ಸ್ಪೀಕಿಂಗ್ ಆಫ್ ಶಿವ(ಶಿವ ಶರಣರ ವಚನಗಳ ಅನುವಾದ) ಪ್ರಕಟಿಸಿದಾಗ, ತಡವಾಗಿಯಾದರೂ ಅವರ ಪ್ರತಿಭೆಗೆ ಮನ್ನಣೆ ಸಿಕ್ಕಿತು.

ಸ್ಟ್ರೈಡರ್ಸ್ ಕವನ ಸಂಗ್ರಹದ ಪ್ರಕಾಶನದಿಂದ ರಾಮಾನುಜನ್ ಅವರಿಗೆ ಒಂದು ಲಾಭವಾಯಿತಂತೆ. ಅವರು ಕೆಲಸಮಾಡುತ್ತಿದ್ದ ಶಿಕ್ಯಾಗೋ ವಿಶ್ವವಿದ್ಯಾಲಯದಲ್ಲಿ ಅವರ ಕೆಲಸ ಕಾಯಂ ಆಯಿತು. ಅದಕ್ಕಾಗಿ ಅವರೊಂದು ವಿದ್ವತ್ಪೂರ್ಣ ಪುಸ್ತಕ ಬರೆಯಬೇಕಾಗಿತ್ತು. ಅವರ ಗ್ರಂಥಕ್ಕಾಗಿ ಕಾಯದೆ ವಿಶ್ವವಿದ್ಯಾಲಯದವರು ಅವರ ಕವನ ಸಂಗ್ರಹಕ್ಕೆ ಮನ್ನಣೆ ಕೊಟ್ಟರು. 1965ರಲ್ಲಿ ರಾಮಾನುಜನ್ ಮದ್ರಾಸಿಗೆ ಬಂದಾಗ ಗಿರೀಶ ತಮ್ಮ ಎರಡನೆಯ ನಾಟಕ ತುಘಲಕ್ದ ಹಸ್ತಪ್ರತಿ ತಿದ್ದುತ್ತಿದ್ದರಂತೆ. ರಾಮಾನುಜನ್ ಅದನ್ನೋದಿ, ಇದು ಯಯಾತಿಗಿಂತ ಪ್ರಬುದ್ಧವಾದ ನಾಟಕ. ನಮ್ಮಲ್ಲಂತೂ ಇಂಥ ನಾಟಕವೇ ಬಂದಿಲ್ಲ ಎಂದಿದ್ದರು.

ಸ್ಟುವರ್ಟ್ ಎಂಬವನ ಕೈಯಲ್ಲಿ ಇವರು ಏಳು ವರ್ಷ ಅಸಿಸ್ಟಂಟ್ ಮ್ಯಾನೇಜರ್ ಆಗಿದ್ದ ದಿನಗಳನ್ನು ನೆನೆಯುತ್ತ, ತಾವು ಅವನಿಂದ ಎಷ್ಟೋ ವಿಷಯ ಕಲಿತರೆಂದು ಬರೆಯುತ್ತಾರೆ. 1970ರಲ್ಲಿ ಹಾಕಿನ್ಸ್ ನಿವೃತ್ತರಾದಾಗ ರವಿ ದಯಾಳ ಜನರಲ್ ಮ್ಯಾನೇಜರ್ ಆದರಂತೆ. ಭಾರತೀಯ ವಿಶ್ವವಿದ್ಯಾಲಯದ ಬುದ್ಧಿವಾದಿಗಳ ನಿಕಟ ಪರಿಚಯ ಅವರಿಗೆ ಇತ್ತು. ಆಶೀಷ್ ನಂದಿ, ಸುಧೀರ್ ಕಕ್ಕರ್, ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ವೀಣಾ ದಾಸ್ ಮೊದಲಾದ ವಿಚಾರವಂತರನ್ನು ಸಂಪರ್ಕಿಸಿ ಅವರ ಕೃತಿಗಳನ್ನು ಓ.ಯು.ಪಿ.ಯಿಂದ ಪ್ರಕಾಶನಗೊಳಿಸಿ ಭಾರತದ ಓ.ಯು.ಪಿ.ಯನ್ನು ಲಂಡನ್ನದ ಮಟ್ಟಕ್ಕೇರಿಸಿದರಂತೆ.

ತುಘಲಕ್ ನಾಟಕದ ಹಿಂದೀ ಅನುವಾದದ ಪ್ರಯೋಗ ದೆಹಲಿಯಲ್ಲಿ ನಡೆದಾಗ ಅದನ್ನು ನೋಡಿ ಬಹಳ ಪ್ರಭಾವಿತರಾದವರು ಅಲೇಕ್ ಪದಮಸಿ. ಲಿಂಟಾಸ್ ಜಾಹೀರಾತು ಕಂಪನಿಯ ಕಾಪಿಚೀಫ್ ಆಗಿದ್ದರು, ನಂತರ ಅಧ್ಯಕ್ಷರಾದರು. ಮುಂಬೈಯಲ್ಲಿ ಇಂಗ್ಲಿಷ್ ನಾಟಕಗಳನ್ನು ಪ್ರಯೋಗಿಸುವಲ್ಲಿ ಅವರು ಅಗ್ರೇಸರರಾಗಿದ್ದರು. ಈ ನಾಟಕವನ್ನು ಇಂಗ್ಲಿಷಿಗೆ ಅನುವಾದಿಸಲು ಗಿರೀಶರ ಬೆನ್ನುಹತ್ತಿದರು. ಅವರ ಸ್ನೇಹಕ್ಕೆ ಮಣಿದು ಗಿರೀಶ ಇಂಗ್ಲಿಷಿನಲ್ಲಿ ಅನುವಾದಿಸಿದರು. ಅದರ ಪ್ರಯೋಗ ಮುಂಬೈಯಲ್ಲಿ ಬಹಳ ದೊಡ್ಡ ಪ್ರಮಾಣದಿಂದ ಭುಲಾಭಾಯಿ ಆಡಿಟೋರಿಯಂನಲ್ಲಿ ನಡೆಯಿತು. ನಾಟಕಕ್ಕಾಗಿ ಭವ್ಯವಾದ ಸೆಟ್ ತಯಾರಿಸಲಾಗಿತ್ತು. ಚಿತ್ರನಟ ಕಬೀರ ಬೇಡಿ ತುಘಲಕನ ಪಾತ್ರ ವಹಿಸಿದ್ದ.

ನಂತರ ಗಿರೀಶ ಮದ್ರಾಸ ಕೆಲಸ ಬಿಟ್ಟರು. ರವಿ ದಯಾಳ ಜನರಲ್ ಮ್ಯಾನೇಜರ್ ಆಗಿದ್ದರು. ತುಘಲಕ್ ನಾಟವನ್ನು ಆಕ್ಸಫರ್ಡ್ ಪ್ರೆಸ್‌ನಿಂದ ಪ್ರಕಟಿಸುವುದಾಗಿ ಹೇಳಿದರು. ಗಿರೀಶ ಬೇಡ ಎಂದರು. ಕಾರಣ, ಅನುವಾದ ಪುಸ್ತಕ ಯಾರು ಕೊಳ್ಳುವರು ಎಂಬುದು ಅವರ ಸಮಸ್ಯೆಯಾಗಿತ್ತು. ರವಿ ಒಪ್ಪಲಿಲ್ಲ. ಗಿರೀಶ ಹೇಳಿದರು, ಓ.ಯು.ಪಿ.ಯ ಭೂತಪೂರ್ವ ಸದಸ್ಯ ಎಂಬ ಹಕ್ಕಿನಿಂದ ನಾನು ಈ ಯೋಜನೆಯನ್ನು ನಿಷೇಧಿಸುತ್ತೇನೆ (ವೆಟೋ ಹಾಕುತ್ತೇನೆ). ರವಿ ಪಟ್ಟು ಬಿಡಲಿಲ್ಲ. ಪ್ರಕಟಿಸಿದರು. ಲಕ್ಷಾಂತರ ಪ್ರತಿಗಳು ಮಾರಾಟಗೊಂಡವು. ಆಗ ತಾನೇ ಇಂಗ್ಲಿಷ್ ಅಭ್ಯಾಸಕ್ಕಾಗಿ ಭಾರತೀಯ ನಾಟಕಗಳ ತೀವ್ರ ಅಭಾವವಿತ್ತು. ಇಂಗ್ಲಿಷ್ ಅಭ್ಯಾಸದಲ್ಲಿ ಪಠ್ಯವಾಗಿ ಬಳಸಬಹುದಾದಂತಹ ಯೋಗ್ಯತೆಯ ನಾಟಕ ಒಂದೂ ಇರಲಿಲ್ಲ. ಈ ಕೊರತೆಯನ್ನು ರವಿ ಗಮನಿಸಿದ್ದರು. ಈ ವಿಚಾರ ಗಿರೀಶರಿಗೆ ಹೊಳೆದಿರಲಿಲ್ಲ.

ಮುಂದೆ 2007ರಲ್ಲಿ ಗಿರೀಶ ಪಾಕಿಸ್ತಾನ ಸಂದರ್ಶಿಸಿದಾಗ ಲಾಹೋರ್ ವಿಶ್ವವಿದ್ಯಾಲಯದಲ್ಲಿ ತುಘಲಕ್ ನಾಟಕ ಪಠ್ಯವಾಗಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಗಿತ್ತು. ಅಲ್ಲಿಯ ಪ್ರಾಧ್ಯಾಪಕ ಶಾಇಸ್ತಾ ಸಿರಾಜುದ್ದೀನ ಹೇಳಿದರಂತೆ, ಅವರು ಟಾಮ್ ಸ್ಟಾಪರ್ಡನಂಥ ನಾಟಕಕಾರನ ಕೃತಿಗಳ ಅಭ್ಯಾಸ ಮುಗಿಸಿ ತುಘಲಕ್, ನಾಗಮಂಡಲದಂಥ ನಾಟಕಗಳತ್ತ ಹೊರಳಿದಾಗ ವಿದ್ಯಾರ್ಥಿಗಳ ಉತ್ಸಾಹ ಚೈತನ್ಯ ಇಮ್ಮಡಿಯಾಗುತ್ತಿತ್ತಂತೆ. ಕರಾಚಿಯಲ್ಲಿಯ ನ್ಯಾಶನಲ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ನ್ ವಿದ್ಯಾರ್ಥಿಗಳು ತುಘಲಕ್ ಇಂಗ್ಲಿಷ್ ನಾಟಕದ ಕೆಲವು ದೃಶ್ಯಗಳನ್ನು, ತಾವೇ ಇಂಗ್ಲಿಷಿನಿಂದ ಅನುವಾದಿಸಿದ ಉರ್ದು ಅನುವಾದವನ್ನು ಆಡಿ ತೋರಿಸಿದಾಗ ಗಿರೀಶ ಮನದಲ್ಲೇ ರವಿ ದಯಾಳರನ್ನು ಸ್ಮರಿಸಿ ತಾವು ಉಪಕೃತರು ಎಂಬ ಭಾವ ವ್ಯಕ್ತಪಡಿಸಿದರಂತೆ.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 14. In this episode Karnad writes about successful of Tughalaq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X