ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸಿನಲ್ಲಿ ಕಾರ್ನಾಡ್, ಡಂಕನ್ ಕೌಮಾರ್ಯ ಹರಣ!

By Prasad
|
Google Oneindia Kannada News

Girish Karnad's autobiography part 12
ಆನ್ ಡಂಕನ್ ಫ್ರೆಂಚ್ ಸಾಹಿತ್ಯದ ವಿದ್ಯಾರ್ಥಿನಿ. ಪ್ಯಾರಿಸ್ಸಿನಲ್ಲಿ ಇವರ ಮಿತ್ರ ಕೃಷ್ಣ ಬಸರೂರ್ ವಾಸಿಸುತ್ತಾನೆ ಎಂದು ತಿಳಿದಾಗ ಅಲ್ಲಿ ಜೊತೆಗೆ ಪ್ರವಾಸ ಮಾಡ ಬಯಸಿದಳು. ಅವಳಿಗೇನೋ ಸಂಶೋಧನೆ ಮಾಡುವುದಿತ್ತು. ಬಸರೂರನ ಮನೆಯಲ್ಲೇ ಇಳಿದುಕೊಂಡರು. ಅವಳಿಗೆ ಫ್ರೆಂಚ್ ಭಾಷೆ ಮಾತ್ರವಲ್ಲ, ಸಾಹಿತ್ಯ, ಇತಿಹಾಸ, ಪೋಲಿ ಜೋಕ್ಸ್ ಕೂಡ ಗೊತ್ತಿದ್ದವಂತೆ. ಅವಳ ಬಾಯ್‌ಫ್ರೆಂಡ್ ರಾಬಿನ್ ಎಂಬವ ಮದುವೆಯಾಗದೆಯೇ ದೇಹಸಂಗ ಬೇಡ ಎಂದು ಹಟ ಹಿಡಿದಿದ್ದ. ಅವಳಿಗೆ ಮದುವೆ ಮುಖ್ಯವಲ್ಲ, ಅನುಭವ ಮುಖ್ಯವಾಗಿತ್ತು.

ಆನ್ ಡಂಕನ್ ಹಾಗೂ ಗಿರೀಶ ಇಬ್ಬರೂ ಪ್ಯಾರಿಸ್ಸಿನಲ್ಲಿ ಸಮೀಪ ಬಂದರು. ಇಬ್ಬರ ಕೌಮಾರ್ಯ ಹರಣವಾಗಿತ್ತು. ಮುಂದೆ ಅವರಿಗೆ ಮುಜಗರವಾಗುವಂತಹ ಘಟನೆಗಳು ನಡೆದದ್ದನ್ನು ವಿವರಿಸುತ್ತಾರೆ. ಇವರ ಹಾಸ್ಟೆಲ್ ರೂಮಿಗೆ ಬಂದು ತೊಂದರೆ ಕೊಡಲು ಆರಂಭಿಸಿದಳು. ಪರೀಕ್ಷೆಯ ಪರಿಣಾಮವಾದ ಮೇಲೆ ಇವರು ಭಾರತಕ್ಕೆ ಮರಳಿದರು. ಮುಂದೆ ಅವಳು ಕೆಂಬ್ರಿಜ್‌ನಲ್ಲಿ ಫ್ರೆಂಚ್ ಪ್ರಾಧ್ಯಾಪಕಳಾದಳು. ಭಾರತೀಯ ವಿದ್ಯಾರ್ಥಿಗಳನ್ನು ಕಂಡರೆ ಅವಳಿಗೆ ಒಂದು ಬಗೆಯ ತಿರಸ್ಕಾರವಿತ್ತು. 20 ವರ್ಷಗಳ ನಂತರ ಅವಳು ಆತ್ಮಹತ್ಯೆಮಾಡಿಕೊಂಡ ಸುದ್ದಿ ಇವರಿಗೆ ಬಂತಂತೆ.

ಆಕ್ಸ್‌ಫರ್ಡ್ ದಿನಗಳ ಅತ್ಯುತ್ತಮ ಅಂಶವೆಂದರೆ ಗಿರೀಶ ಯೂನಿಯನ್ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು. ಆಕ್ಸ್‌ಫರ್ಡ್ ಯೂನಿಯನ್ನಿನ ಅಧ್ಯಕ್ಷ ತಾನಾಗಬೇಕೆಂದು ಹಲವಾರು ವರ್ಷ ಮೊದಲೇ ಕನಸು ಕಂಡಿದ್ದರು. ಆಕ್ಸಫರ್ಡ್ ಯೂನಿಯನ್ ಜಗತ್ತಿನಲ್ಲೇ ಅತ್ಯಂತ ವಿಖ್ಯಾತವಾದ ಚರ್ಚಾಸಂಸ್ಥೆಯಾಗಿದ್ದು ಅಲ್ಲಿ ತಮ್ಮ ಬಾವುಟವನ್ನು ಊರಲು ಗಿರೀಶ ತವಕಿಸುತ್ತಿದ್ದರು. ಇತಿಹಾಸದಲ್ಲೇ ಪ್ರಖ್ಯಾತವಾಗಿದ್ದ ಆಕ್ಸಫರ್ಡ್ ಯೂನಿಯನ್ನಿನ ಚರ್ಚೆಯ ಬಗ್ಗೆ ಗಿರೀಶ ತಮ್ಮ ತಂದೆಯಿಂದ ಕೇಳಿದ್ದರು.

1933ರಲ್ಲಿ ಯೂನಿಯನ್ನಿನಲ್ಲಿ ಚರ್ಚೆಗೆಂದು ಮಂಡಿಸಲಾದ ವಿಷಯ: ಎಂಥ ಪರಿಸ್ಥಿತಿಯಲ್ಲೂ ನಾವು ನಮ್ಮ ದೇಶ ಅಥವಾ ರಾಜನ ಪರವಾಗಿ ಯುದ್ಧಮಾಡಲು ಸಿದ್ಧರಿಲ್ಲ. ಠರಾವು ಬಹುಮತದಿಂದ ಪಾಸಾಯಿತು. ಮುಂದಿನ ವಾರವೇ ಬ್ರಿಟನ್ನಿನ ಪ್ರಮುಖ ರಾಜಕಾರಣಿ ವಿನ್ಸ್‌ಟನ್ ಚರ್ಚಿಲ್ ಅವರ ಮಗ ರ‍್ಯಾಂಡಾಲ್ಫ್ ಚರ್ಚಿಲ್ ಆಕ್ಸಫರ್ಡ್‌ಗೆ ಧಾವಿಸಿ ಬಂದು, ಇಂಥ ರಾಷ್ಟ್ರಘಾತುಕ ಗೊತ್ತುವಳಿಯನ್ನು ಠರಾವು ಪುಸ್ತಕದಿಂದ ಅಳಿಸಿಹಾಕಬೇಕು ಎಂದು ವಾದಿಸಿದ. ಆಗ ಗದ್ದಲ ಪ್ರಾರಂಭವಾಗಿತ್ತು. ಈ ಠರಾವನ್ನು ಎತ್ತಿಹಿಡಿದ ವಿದ್ಯಾರ್ಥಿಗಳನ್ನು ದ್ರೋಹಿಗಳೆಂದು ಆಪಾದನೆ ಹೊರಿಸಲಾಯಿತು. ಈ ಚರ್ಚೆ ಕಿಂಗ್ ಅಂಡ್ ಕಂಟ್ರೀ ಡಿಬೇಟ್ ಎಂದೇ ಪ್ರಖ್ಯಾತವಾಯ್ತು.

ಆಕ್ಸ್ ಫರ್ಡ್ ನಲ್ಲಿ ಕ್ರಾಂತಿ : ಯೂನಿಯನ್ನಿನ ಪ್ರತಿ ಚರ್ಚಾಕೂಟವನ್ನು ನಾಲ್ಕು ವಿದ್ಯಾರ್ಥಿ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಮಧ್ಯದಲ್ಲಿ ಅಧ್ಯಕ್ಷ, ಅವನ ಬಲಕ್ಕೆ ಲೈಬ್ರೇರಿಯನ್, ಎಡಕ್ಕೆ ಕೋಶಾಧ್ಯಕ್ಷ, ಎದುರಿಗೆ ಕಾರ್ಯದರ್ಶಿ. ಈ ನಾಲ್ಕೂ ಹುದ್ದೆಗಳಿಗಾಗಿ ಪ್ರತಿ ಟರ್ಮಿನ ಕೊನೆಗೆ ಚುನಾವಣೆ ನಡೆಯುತ್ತದೆ. ಯೂನಿಯನ್ನಿನ ಗಮನ ಸೆಳೆಯಲು ಬಯಸುವ ಹೊಸ ವಿದ್ಯಾರ್ಥಿ ಮೊದಲು ಫ್ಲೋರ್ ಸ್ಪೀಚ್ ಕೊಡಬೇಕು. ಆತನು ಚೆನ್ನಾಗಿ ಮಾತಾಡಿದರೆ ಅಧ್ಯಕ್ಷ ಅವನಿಗೆ ಪೇಪರ್ ಸ್ಪೀಚ್ ಕೊಡಲು ಅವಕಾಶ ಕೊಡುತ್ತಾನೆ. ಅಲ್ಲಿ ಯಶಸ್ಸು ಪಡೆದರೆ ಚುನಾವಣೆಗೆ ನಿಲ್ಲಬಹುದು.

ಗಿರೀಶರ ಮೊದಲನೆಯ ಭಾಷಣವೇ ಯಶಸ್ವಿಯಾಯಿತು. ಚುನಾವಣೆಯಲ್ಲಿ ಗೆದ್ದು ಕಾರ್ಯದರ್ಶಿ ಹುದ್ದೆ ಪಡೆದರು. ಅದಕ್ಕಾಗಿ ಒಂದು ಕಪ್ಪು ಶೇರವಾನಿ ಹೊಲಿಸಿದರಂತೆ. ಮುಂದೆ ಇವರು ಅವಿರೋಧಿಯಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಆಗ ಇವರು ಲೈಬ್ರೇರಿಯನ್ ಆಗಿದ್ದರು, ಪ್ರತಿಸ್ಪರ್ಧಿ ಕೋಶಾಧ್ಯಕ್ಷ ಆಗಿದ್ದ. ಇಬ್ಬರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಒಂದು ಪತ್ರಿಗಾಮಿ ನಿರ್ಣಯದ ವಿರುದ್ಧ ಕೋಶಾಧ್ಯಕ್ಷ ರಾಜೀನಾಮೆ ಇತ್ತ. ಆಗ ಗಿರೀಶ ಅವಿರೋಧವಾಗಿ ಆಯ್ಕೆಗೊಂಡರು. ತಾವು ನಾಲ್ಕನೆಯ ಭಾರತೀಯ ಅಧ್ಯಕ್ಷರಾದ ವಿಷಯ ದಾಖಲಿಸುತ್ತಾರೆ.

ಇವರಿಗಿಂತ ಮೊದಲು ಆಯ್ಕೆಗೊಂಡ ಭಾರತೀಯರೆಂದರೆ 1) ಬಹದೂರ ಸಿಂಗ್, ಮುಂದೆ ಐಎಫ್‌ಎಸ್ ಅಧಿಕಾರಿಯಾದರು, 2) ಡಿ.ಎಫ್. ಕರಾಕಾ, ಕರಂಟ ಪತ್ರಿಕೆಯ ಸಂಪಾದಕರಾದರು, 3) ರಾಘವನ್ ಐಯ್ಯರ್, ಮುಂದೆ ಆಕ್ಸಫರ್ಡ್‌ನಲ್ಲಿ ಪ್ರಾಧ್ಯಾಪಕರಾದರು. ಅಲ್ಲಿಯವರೆಗೆ ಮಹಿಳೆಯರಿಗೆ ಯೂನಿಯನ್ನಿನ ಸದಸ್ಯತ್ವವಿರಲಿಲ್ಲ. ಇವರು ಅಧ್ಯಕ್ಷರಾದಾಗ ಗೊತ್ತುವಳಿ ಪಾಸಾಗಿ ಮಹಿಳೆಯರಿಗೂ ಸದಸ್ಯತ್ವ ದೊರೆಯಿತು. ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿತ್ತು. ಈ ಐತಿಹಾಸಿಕ ಪಲ್ಲಟ ತಮ್ಮ ಅಧ್ಯಕ್ಷತೆಯಲ್ಲಿ ಸಂಭವಿಸಿದ್ದು ತಮಗೆ ತೃಪ್ತಿ ನೀಡಿತ್ತು ಎಂದು ಗಿರೀಶ ಬರೆಯುತ್ತಾರೆ. ಬಹಳ ವರ್ಷಗಳ ನಂತರ, 1976ರಲ್ಲಿ, ಪಾಕಿಸ್ತಾನದ ಭಾವೀ ಪ್ರಧಾನಿ ಬೇನಝಿರ್ ಭುಟ್ಟೋ ಯೂನಿಯನ್ನಿನ ಅಧ್ಯಕ್ಷಳಾದಳಂತೆ.

ಇವರು ಅಧ್ಯಕ್ಷರಾಗಿದ್ದಾಗ ಆಮಂತ್ರಿಸಿದ ಅತಿಥಿ ವಕ್ತಾರರಲ್ಲಿ ರ‍್ಯಾಂಡಾಲ್ಫ್ ಚರ್ಚಿಲ್ ಒಬ್ಬರಾಗಿದ್ದರಂತೆ. ತಂದೆ ವಿನ್‌ಸ್ಟನ್ ಚರ್ಚಿಲ್ ಮಹಾ ಬುದ್ಧಿವಂತ ರಾಜಕಾರಣಿ. ಮಗನನ್ನು ದುರ್ಲಕ್ಷಿಸಿದ್ದ. ತಾಯಿಯು ಕೂಡ ಮಗನನ್ನು ದುರ್ಲಕ್ಷಿಸಿದ್ದರಿಂದ ಮಗ ಉಡಾಳನಾಗಿದ್ದ. ಸಭೆಗೆ ಕುಡಿದು ಬಂದಿದ್ದ. ಅಸಭ್ಯ ವರ್ತನೆಯನ್ನು ಖಂಡಿಸಿ ಅವನನ್ನು ಸಭೆಯ ಹೊರಗೆ ಕಳಿಸಬೇಕಾಗುತ್ತದೆ ಎಂದು ಗಿರೀಶ ಹೇಳಿದ ನಂತರ ಸಭ್ಯನಾಗಿ ವರ್ತಿಸಿದನಂತೆ. ಮರುದಿನ ಒಬ್ಬ ವಿದ್ಯಾರ್ಥಿಯ ಮೂಲಕ ವಿನ್‌ಸ್ಟನ್ ಚರ್ಚಿಲ್‌ನ ಜೊತೆಗೆ ಊಟಕ್ಕೆ ಬರಬಹುದು ಎಂಬ ಸಂದೇಶ ಅವನಿಂದ ಬಂತು. ಗಿರೀಶರಿಗೆ ಆ ಸಂದೇಶ ಬಂದಾಗ ಗಿರೀಶ ರೂಮಿನಲ್ಲಿ ಇರಲಿಲ್ಲ. ಹಾಗಾಗಿ ಶತಮಾನದ ಶ್ರೇಷ್ಠ ರಾಜಕಾರಣಿಯವರೊಂದಿಗೆ ಊಟಮಾಡುವ ಅವಕಾಶ ತಪ್ಪಿಹೋಯಿತು. ಯೂನಿಯನ್ನಿನ ಅಧ್ಯಕ್ಷನಾಗಿದ್ದರಿಂದ ಗಿರೀಶರಿಗೆ ಇಂಗ್ಲೆಂಡದ ರಾಜಕಾರಣಿಗಳು, ಬುದ್ಧಿಜೀವಿಗಳು, ಕಲಾವಿದರು ಪರಿಚಿತರಾದರು. ರಾಜ್ಯಶಾಸ್ತ್ರ ಇವರ ಪಾಠ್ಯ ವಿಷಯವಾಗಿತ್ತು. ಇವರಿಗೆ ರಾಜ್ಯಶಾಸ್ತ್ರದ ಪ್ರಾತ್ಯಕ್ಷಿಕ ಅನುಭವ ಯೂನಿಯನ್ನಿನ ಅನುಭವದಿಂದ ದೊರೆತಿತ್ತು.

ತುಘಲಕ್ ನಾಟಕದ ಸೃಷ್ಟಿ : ಇವರ ಮೊದಲ ನಾಟಕ ಯಯಾತಿ ಯಶಸ್ವಿಯಾಗಿದ್ದರಿಂದ ಜಿ.ಬಿ.ಜೋಶಿಯವರು ಇನ್ನೊಂದು ನಾಟಕ ಬರೆಯಲು ಬೆನ್ನುಹತ್ತಿದರು. ಇವರ ಬಳಿ ಮನೋಹರ ಗ್ರಂಥ ಮಾಲೆ ಪ್ರಕಟಿಸಿದ ನಡೆದು ಬಂದ ದಾರಿಯ ಎರಡು ಬೃಹತ್ ಸಂಪುಟಗಳಿದ್ದವು. ಅದರಲ್ಲಿ ಕೀರ್ತಿಯವರು ಬರೆದ ಮುನ್ನುಡಿಗಳು ಇವರಿಗೆ ಗೊತ್ತೇ ಇರದ ವಿಶ್ವದ ಹೊಸ ಬಾಗಿಲು ತೆರೆದವು. ಅವರ ಒಂದು ಟಿಪ್ಪಣಿ ಇವರ ಗಮನ ಸೆಳೆಯಿತು: . . ಆದರೆ ಐತಿಹಾಸಿಕ ವಿಷಯವನ್ನು ಉಪಯೋಗಿಸಿಕೊಂಡು ಅದರ ಮುಖಾಂತರವಾಗಿ ಸತ್ಯದ ಹೊಸ ಪದರುಗಳನ್ನು ಹುಡುಕಿ ತೆಗೆಯುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಹಳೆಯದನ್ನು ಪುನರುಜ್ಜೀವಿಸುವದರ ಜೊತೆಗೆ ಹಳೆಯದನ್ನು ಹೊಸತಾಗಿ ನೋಡುವ ದೃಷ್ಟಿಯೊಂದು ನಮ್ಮಲ್ಲಿ ಬರಬೇಕು. ಇತಿಹಾಸದ ಕಚ್ಚಾ ಮಾಲನ್ನುಪಯೋಗಿಸಿಕೊಂಡು ಹೊಸ ಕಲಾಕೃತಿಗಳು ಹುಟ್ಟಬೇಕಾಗಿವೆ. ಈ ಮಾತುಗಳು ಗಿರೀಶರ ಮೇಲೆ ಪ್ರಭಾವ ಬೀರಿದವು.

ಇತಿಹಾಸ ಗ್ರಂಥ ಓದಲು ಪ್ರಾರಂಭಿಸಿದರು. 14ನೆಯ ಶತಮಾನದ ಮುಹಮ್ಮದ ತುಘಲಕನ ಆಳ್ವಿಕೆ ಇವರನ್ನು ಆಕರ್ಷಿಸಿತು. ಇವರು ಹುಡುಕುತ್ತಿದ್ದ ಸಾಮಗ್ರಿ ಸಿಕ್ಕಿದ್ದು ಮುಹಮ್ಮದನ ಹುಚ್ಚು ಕಾರಭಾರದಲ್ಲಿ. ಆಗ ಅಸ್ತಿತ್ವವಾದದ ಪ್ರಭಾವವಿತ್ತು. ಕಾಮೂನ ಕಾಲಿಗುಲಾ ನಾಟಕ ಆಕರ್ಷಿಸಿತು. ಮುಹಮ್ಮದನು ದಿಲ್ಲಿಯ ಸುಲ್ತಾನರಲ್ಲೇ ಅತ್ಯಂತ ಪ್ರತಿಭಾಶಾಲಿ, ಆದರೂ ಹುಚ್ಚನೆಂದೆ ಸಾಬೀತಾದ. ಅವನು ಸಾರ್ವಜನಿಕ ಪ್ರಾರ್ಥನೆಯನ್ನೇ ಐದು ವರುಷ ನಿಲ್ಲಿಸಿಬಿಟ್ಟಿದ್ದ. ಬರೆಯುತ್ತಿದ್ದಂತೆ ಈ ನಾಟಕ ಹೊಸ ಅನುಭವ ನೀಡಿತು. ಲೈಬ್ರರಿಯಲ್ಲಿ ಕಲೆಹಾಕಿದ ಅನುಭವ ಅರಗಿಸಿಕೊಳ್ಳಬೇಕಾಗಿತ್ತು. ನಾಟಕದ ಕೊನೆಯಲ್ಲಿ ಬರುವ ಒಂದು ವಾಕ್ಯ: ಅಗಸ ತೊಳೆದಷ್ಟು ಕೊಳೆಯನ್ನು ಯಾವ ಧರ್ಮಗುರುವೂ ತೊಳೆದಿಲ್ಲ. ಇದನ್ನು ನಾಟಕ ಬರೆಯುವ ಎರಡು ವರ್ಷ ಮೊದಲೇ ಗಿರೀಶ ತಮ್ಮ ಡೈರಿಯಲ್ಲಿ ಬರೆದಿಟ್ಟಿದ್ದರಂತೆ. ಇದರ ಪರಿಣಾಮವಾಗಿ ಅಝೀಝ ಅಗಸನಾದ ಎಂದು ನೆನಪಿಸುತ್ತಾರೆ. ನಾಟಕ ಮುಗಿಸಲು ಎರಡು ವರ್ಷ ಹಿಡಿಯಿತು.

ಆಕ್ಸಫರ್ಡ್‌ನಲ್ಲಿ ಪ್ರಥಮ ದರ್ಜೆ ಸ್ವಲ್ಪದಲ್ಲಿ ತಪ್ಪಿಹೋಯಿತು. ಅದು ಒಳ್ಳೆಯದಾಯಿತು ಎನ್ನುತ್ತಾರೆ. ಪ್ರಥಮ ದರ್ಜೆ ದೊರೆತಿದ್ದರೆ ಅಲ್ಲಿಯೇ ಪ್ರಾಧ್ಯಾಪಕ ಕೆಲಸ ದೊರೆಯಬಹುದಾಗಿತ್ತು. ಆಕ್ಸಫರ್ಡ್ ಪ್ರೆಸ್ಸಿನ ಮ್ಯಾನೇಜರ್ ಕೆಲಸ ದೊರೆತು ಮತ್ತೆ ಭಾರತಕ್ಕೆ ಬರುವಂತಾಯಿತು. ಸಿನೆಮಾ, ರಂಗಭೂಮಿ, ಸಾಹಿತ್ಯ, ಕಲಾಪ್ರಪಂಚದಲ್ಲಿ ಒಂದು ಅದ್ಭುತ ಚೈತನ್ಯದ ಹೆಬ್ಬಾಗಿಲು ಇವರ ದಾರಿ ಕಾಯುತ್ತಿತ್ತು.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 12. In this episode Karnad writes about his participation in Oxford Union election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X