ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ನಾಡರ ಆತ್ಮಕಥೆ 11 : ಗಿರೀಶರ ಲಂಡನ್ ಗೆಳೆಯರು

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Girish Karnad's autobiography part 11
ಆಕ್ಸಫರ್ಡ್‌ನಲ್ಲಿಯ ಮೊಡ್ಲಿನ್ ಕಾಲೇಜಿನಲ್ಲಿ ಮೊದಲನೆಯ ಮಧ್ಯಾಹ್ನ ಊಟಕ್ಕೆ ಕುಳಿತಾಗ ಒಬ್ಬ ಅತ್ಯಂತ ಸ್ಫುರದ್ರೂಪಿ ಹುಡುಗ ಬಂದು ಮಾತಾಡಿಸುತ್ತಾನೆ. ತನ್ನ ಹೆಸರು ರಿಶಾದ್ ತಲ್ಯಾರಖಾನ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಅವನು ವಯಸ್ಸಿನಲ್ಲಿ ಚಿಕ್ಕವನಾಗಿದ್ದ. ಮುಂಬೈಯಲ್ಲಿ ಪಾಶ್ಚಾತ್ಯ ವಾತಾವರಣದಲ್ಲಿ ಬೆಳೆದಿದ್ದ. ಸ್ಕೂಲಿನ ಕೊನೆಯ ಎರಡು ವರ್ಷ ಇಂಗ್ಲೆಂಡಿನ ಪಬ್ಲಿಕ್ ಸ್ಕೂಲ್‌ವೊಂದರಲ್ಲಿ ಓದಿದ್ದ. ಉತ್ತಮ ನರ್ತಕ, ಚಿತ್ರಕಾರ, ದ್ವಂದ್ವ ಪ್ರವೀಣ.

ಗಿರೀಶ ತಾವು ಜೀವನದಲ್ಲಿ ನೋಡಿರುವ ಅತ್ಯಂತ ಸುಂದರ ಮಹಿಳೆಯರಲ್ಲೊಬ್ಬರಾದ ನಿರ್ಮಲಾ ರಿಶಾದ್‌ನ ಗೆಳತಿ. ಅವಳು ರಿಶಾದ್‌ನನ್ನು ನೋಡಲಿಕ್ಕೆ ಬಂದಾಗಲೆಲ್ಲ ಅವಳ ಕಣ್ಣು ಕುಕ್ಕಿಸುವ ಲಾವಣ್ಯ ನೋಡಲು ಕಾಲೇಜಿನ ವಿದ್ಯಾರ್ಥಿಗಳು ರಿಶಾದನ ಕೋಣೆಯಲ್ಲಿ ಮುಕುರುತ್ತಿದ್ದರಂತೆ. ನಿರ್ಮಲಾ ಒಮ್ಮೆ ರಜೆಯಲ್ಲಿ ಪ್ರಯಾಣಕ್ಕೆ ಹೋದಾಗ ಸ್ವಿತ್ಝರ್ಲಂಡಿನಲ್ಲಿ ನೆಲೆಸಿರುವ ಭಾರತೀಯ ಆಗರ್ಭ ಶ್ರೀಮಂತ, ಬ್ಯಾರನ್ ಪೆಟಿಟ್‌ನನ್ನು ಭೆಟ್ಟಿಯಾದಳು, ಮದುವೆಯಾದಳು. ರಿಶಾದ್ ವಿಷಣ್ಣತೆಯಲ್ಲಿ ಮುಳುಗಿದ. ಹಲವು ವರ್ಷಗಳ ಮೇಲೆ ಬ್ಯಾರನ್ ತೀರಿಕೊಂಡ, ನಿರ್ಮಲಾ ಲಂಡನ್ನಿಗೆ ಬಂದಳು, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರಿಶಾದನನ್ನು ಅವನ ಮಡದಿ ನಾತಾಶಾಳೊಂದಿಗೆ ಶುಶ್ರೂಷೆ ಮಾಡಿದಳು.

ಕಾಲಿ ಬ್ಯಾನರ್ಜಿ ಎಂಬ ಇನ್ನೊಬ್ಬ ವಿದ್ಯಾರ್ಥಿಯ ಪರಿಚಯವಾಗುತ್ತದೆ. ಅವನ ಪೂರ್ತಿ ಬ್ರಿಟಿಷ್ ಉಚ್ಚಾರದ ಮೋಹದ ಬಗ್ಗೆ ಬರೆಯುತ್ತಾರೆ. ಮಿತ್ರರೆಲ್ಲ ರೆಸ್ಟಾರೆಂಟಿಗೆ ಹೋದಾಗ ತನಗೆ ಏನೂ ಬೇಡ ಎಂದವನು, ನಂತರ ವೇಟರಿಗೆ ಹೇಳಿ ಒಂದು ಖಾಲಿ ಪ್ಲೇಟು ತರಿಸಿ, ಚಮಚ ಮುಳ್ಳು(ಫೋರ್ಕ್) ತರಿಸಿ, ಎಲ್ಲರಿಂದ ಸ್ವಲ್ಪ ಸ್ವಲ್ಪ ಬೇಡಿ ಪಡೆದು, ಹೊಟ್ಟೆತುಂಬ ಉಂಡು, ಮತ್ತೆ ಬಿಲ್ಲು ಬಂದಾಗ ತನಗೂ ಅದಕ್ಕೂ ಸಂಬಂಧ ಇಲ್ಲದವರಂತೆ ಕೈಕಟ್ಟಿ ಕೂತಿರುತ್ತಿದ್ದನಂತೆ. ಆದರೂ ಕಾಲಿ ಇವರ ಮಿತ್ರನಾಗಿ ಉಳಿದನಂತೆ. ಜಾನ್ ಎಂಬ ಇನ್ನೊಬ್ಬ ಮಿತ್ರ, ಇತಿಹಾಸದ ವಿದ್ಯಾರ್ಥಿ. ಯಾವಾಗಲೂ ಪಾಪ್ ಸಾಂಗ್ಸ್ ರೆಕಾರ್ಡಿನಲ್ಲಿ ಹಾಕಿ ಕೇಳುತ್ತಿದ್ದ. ಬದಿಯ ರೂಮಿನಲ್ಲೇ ಇದ್ದ. ಗಿರೀಶರಿಗೆ 22 ವರ್ಷ ಇದ್ದಾಗ ಅವನಿಗೆ 18 ಮಾತ್ರ. ಅವನಿಗೆ ಬಹಳ ಗೆಳತಿಯರು. ಭಾರತದ ಸಮಗ್ರ ಇತಿಹಾಸವನ್ನು ಲಲಿತವಾಗಿ ಸಾಮಾನ್ಯ ವಾಚಕರಿಗಾಗಿ ಬರೆದು ಲೋಕಪ್ರಿಯ ಇತಿಹಾಸಕಾರನಾದ ಎಂದು ಬರೆಯುತ್ತಾರೆ. ತನ್ನ ವಾಗ್ದತ್ತ ವಧು ಜ್ಯೂಲಿಯಾಳೊಂದಿಗೆ ಧಾರವಾಡಕ್ಕೆ ಬಂದು ಮೂರುದಿನ ಇದ್ದ, ಮುಂದೆ ಹಿಮಾಚಲಪ್ರದೇಶಕ್ಕೆ ಹೋಗಿ ಅವಳನ್ನು ಮದುವೆಯಾದ.

2009ರಲ್ಲಿ ಗಿರೀಶರ ಮಗಳು ಶಾಲ್ಮಲೆಯ ಮದುವೆಯಾದಾಗ ಜಾನ್ ಜ್ಯೂಲಿಯಾಳೊಡನೆ ಬಂದಿದ್ದ. ಪ್ರಥಮ ಭೆಟ್ಟಿಯಾದ 49 ವರ್ಷಗಳ ನಂತರ ಭೆಟ್ಟಿಯಾಗಿದ್ದ. ಆ ಮದುವೆಗೆ ರಿಶಾದ್ ಹಾಗೂ ಅವನ ಹೆಂಡತಿ ನಾತಾಶಾ ಬಂದಿದ್ದರಂತೆ. ಅವರ ಉಪಸ್ಥಿತಿ ಅರ್ಧ ಶತಮಾನದ ಕಾಲಾವಧಿ ಹಾಗೂ ಮಹಾಸಾಗರಗಳ ಅಂತರವನ್ನು ಮೀರಿತ್ತು, ಅವರ ಸ್ನೇಹ ಜೀವಂತವಾಗಿ ಸ್ಪಂದಿಸಿತ್ತು ಎನ್ನುತ್ತಾರೆ.

ಇಂಗ್ಲೆಂಡಿನಲ್ಲಿಯ ಗೆಳತಿಯರು : ತಮ್ಮ ಓರಿಗೆಯ ಭಾರತೀಯರಿಗೆ ಬಿಳಿಯ ಹುಡುಗಿ ಎಂದರೆ ಕೈಗೆ ಸಿಗದ ಅಪ್ಸರೆ ಎಂಬ ಭಾವನೆ. ಹೇಗಾದರೂ ಮಾಡಿ ಬಿಳಿಯ ಹುಡುಗಿಯನ್ನು ಪಡೆಯಬೇಕು ಎಂಬ ಬಯಕೆ. ಆಕ್ಸಫರ್ಡ್ ಮತ್ತು ಕೆಂಬ್ರಿಜ್‌ಗಳಲ್ಲಿ ಪುರುಷರಿಗಾಗಿ ಸ್ತ್ರೀಯರಿಗಾಗಿ ಬೇರೆ ಬೇರೆ ಕಾಲೇಜುಗಳಿದ್ದವು. ಹುಡುಗಿಯರು ರಾತ್ರಿ ಹತ್ತು ಗಂಟೆಯೊಳಗಾಗಿ ಹುಡುಗರ ಕಾಲೇಜು ಬಿಟ್ಟು ಹೊರಬೀಳಬೇಕಾಗಿತ್ತು. ಈ ಲಕ್ಷ್ಮಣ ರೇಖೆಯನ್ನು ದಾಟಿ ಹುಡುಗಿ ಹುಡುಗನ ರೂಮಿನಲ್ಲಿದ್ದರೆ, ಆ ಹುಡುಗನನ್ನು ಕಾಲೇಜಿನಿಂದ ಹೊರಗೆ ಹಾಕುವ ಸಂಪ್ರದಾಯವಿತ್ತು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಕೊರತೆ ಇದ್ದುದರಿಂದ ಹಲವಾರು ಮಹಿಳಾ ಸಂಸ್ಥೆಗಳು ತಲೆಯೆತ್ತಿದ್ದವು. ಎಷ್ಟೋ ವಿದ್ಯಾರ್ಥಿಗಳು ಡಿಗ್ರಿ ಪಡೆಯುವಾಗಲೇ ಹೊರಗಿನಿಂದ ಹೆಂಡತಿಯನ್ನು ಪಡೆದ ಉದಾಹರಣೆಗಳೂ ಇದ್ದವು. ಆಕ್ಸಫರ್ಡ್‌ನಲ್ಲಿ ವಿದ್ಯಾರ್ಥಿಗಳು ಸಂಜೆಯ ಪಾರ್ಟಿಯಲ್ಲಿ ತರುಣ-ತರುಣಿಯರ ಆಗಮನ, ಮೊದಲು ಮಾತುಕತೆ, ಪರಿಚಯ, ಕುಡಿತ, ಬೆಳಕಿನಲ್ಲೇ ನರ್ತನದಿಂದ ಆರಂಭವಾದರೂ, ಕೆಲ ಸಮಯದಲ್ಲೇ ದೀಪಗಳು ಒಂದೊಂದಾಗಿ ಆರಿಹೋಗಲಾರಂಭಿಸಿ, ದೇಹಗಳು ಒಂದಕ್ಕೊಂದು ಅಂಟಿಕೊಳ್ಳಲು ಆರಂಭಿಸುತ್ತಿದ್ದವು. ಆಕ್ಸಬ್ರಿಜ್‌ನ ಪ್ರತಿಯೊಂದು ಕಾಲೇಜು ಮೂರು ವರ್ಷಗಳಿಗೊಮ್ಮೆ ಒಂದು ವೈಭವಪೂರ್ಣವಾದ, ಇಡಿಯ ರಾತ್ರಿ ನಡೆಯುವ ನರ್ತನಸಂಧ್ಯೆಯಾಗಿತ್ತಂತೆ.

ರಿಶಾದನನ್ನು ಕಾಣಲು ಇಬ್ಬರು ಚಿಕ್ಕಮ್ಮನ ಹೆಣ್ಣುಮಕ್ಕಳು ಬರುತ್ತಿದ್ದರು. ರಿಶಾದನ ತಂದೆ ಪಾರಸಿ, ತಾಯಿ ಬಂಗಾಲಿ. ಚಿಕ್ಕಮ್ಮ ಪ್ರಸಿದ್ಧ ಕವಿ ಆಡೆನ್‌ನ(W.H.Auden) ತಮ್ಮನ ಹೆಂಡತಿ. ಅನಿತಾ ಹಾಗೂ ರೀತಾ ಆಕೆಯ ಮಕ್ಕಳು. ಅನಿತಾ ದುಂಡುಮುಖದ ಹಾಸ್ಯವದನೆ, ಕವಿತೆ ಬರೆಯುತ್ತಿದ್ದಳು, ಅವಿವಾಹಿತೆ. ರೀತಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ. ನಲವತ್ತು ವರ್ಷಗಳ ಬಳಿಕ ಗಿರೀಶರಿಗೆ ರೀತಾ ಭೆಟ್ಟಿಯಾದಳು. ರೀತಾ ನಗುತ್ತ ನೆನಪಿಸಿದಳು, ನಾನು ಇಡೀ ರಾತ್ರಿ ನಿನ್ನ ಕೋಣೆಯಲ್ಲಿ ಸಿಕ್ಕ ಟ್ರ್ಯಾಜಿಕ್ ಥೀಮ್ಸ್ ಇನ್ ವೆಸ್ಟರ್ನ್ ಲಿಟರೇಚರ್ ಪುಸ್ತಕ ಓದುತ್ತ ಕಳೆದೆ. ಅವಳ ಜೀವನದಲ್ಲಿಯೂ ದುರಂತ ಘಟನೆ ನಡೆದುದರ ಬಗ್ಗೆ ಗಿರೀಶ ಬರೆಯುತ್ತಾರೆ.

ರೀತಾನ ಚಿಕ್ಕಪ್ಪ ಆಡೆನ್ ವಿಶ್ವ ವಿಖ್ಯಾತ ಕವಿ. ಕವಿತೆ ಬರೆದೇ ಅವನು ಕೋಟ್ಯಾಧೀಶನಾಗಿದ್ದ ಅಮೇರಿಕೆಯಲ್ಲಿ ನೆಲೆಸಿದ್ದ. ಅವನು ಸಲಿಂಗಸಖ. ಮದುವೆಯಾಗಿರಲಿಲ್ಲ. ಮಕ್ಕಳಿಲ್ಲ. ಅವನ ಆಸ್ತಿಪಾಸಿಯೆಲ್ಲಾ ರೀತಾ ಮತ್ತು ಅನಿತಾರಿಗೆ ಬರಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಆಡೆನ್ ಒಬ್ಬ ತರುಣ ಕವಿ ಚೆಸ್ಟರ್ ಕಾಲ್‌ಮನ್(Chester Kallman) ಎಂಬವನನ್ನು ಪ್ರೀತಿಸಿದ್ದ. ಅವರಿಬ್ಬರೂ ಗಂಡ-ಹೆಂಡಿರಂತೆ ಆಮರಣ ಜೊತೆಗಿರಬೇಕೆಂದು ಆತ ಬಯಸಿದ್ದ. ಕಾಲ್‌ಮನ್ ಅಂಥ ದೀರ್ಘ ಸಂಬಂಧ ಒಪ್ಪಲಿಲ್ಲ. ಆಡೆನ್ ಬೇನೆಯಿಂದ ನರಳಿ ಸಾಯುವ ಮುನ್ನ ತನ್ನ ಎಲ್ಲ ಆಸ್ತಿ ಕಾಲ್‌ಮನ್‌ನ ಹೆಸರಿಗೆ ಬರೆದುಬಿಟ್ಟ. ಕಾಲ್‌ಮನ್‌ಗೆ ಹತ್ತಿರದ ಸಂಬಂಧಿಕರಾರೂ ಇರಲಿಲ್ಲ. ಅವನೂ ಒಂದು ವಿಲ್ ಮಾಡಿ ತನಗೆ ಬಂದ ಆಸ್ತಿಯನ್ನು ರೀತಾ-ಅನಿತಾಗೆ ಬರೆದಿದ್ದ. ಆಡೆನ್ ತೀರಿದ ಎರಡೇ ವರ್ಷಗಳಲ್ಲಿ ಕಾಲ್‌ಮನ್ ತೀರಿದ್ದ. ಅವನ ಮೃತ್ಯುಪತ್ರ ನಾಪತ್ತೆಯಾಗಿತ್ತು. ಹೀಗಾಗಿ ಅವನ ಆಸ್ತಿಯೆಲ್ಲ ದೂರದ ಯಾವುದೋ ಹೆಂಗಸಿಗೆ ಹೋಯಿತು. ರೀತಾ-ಅನಿತಾರಿಗೆ ಆಸ್ತಿ ಕನ್ನಡಿಯ ಗಂಟಾಯಿತು.

2000ದಲ್ಲಿ ಗಿರೀಶ ನೆಹರು ಸೆಂಟರ್‌ಗೆ ನಿರ್ದೇಶಕರಾಗಿದ್ದಾಗ ರಿಶಾದ ಭೆಟ್ಟಿಯಾಗಿದ್ದ. ರೀತಾ ಒಮ್ಮೆ ಶಸ್ತ್ರಕ್ರಿಯೆ ಮಾಡುವಾಗ ಪ್ರಜ್ಞೆ ಕಳೆದುಕೊಂಡಿದ್ದಳು. ಮುಂದೆ ಯಾರನ್ನೂ ಭೆಟ್ಟಿಯಾಗದೆ ಒಂದು ಕೋಣೆಯೊಳಗೆ ಏಕಾಕಿಯಾಗಿರುವ ವಿಷಯ ತಿಳಿಸಿದ. ಆಕೆಯನ್ನು ಊಟಕ್ಕೆ ಆಮಂತ್ರಿಸಿ ನೋಡು ಎಂದೂ ಹೇಳಿದ. ಗಿರೀಶ ಆಮಂತ್ರಿಸಿದರು. ಗಿರೀಶ, ಅವರ ಹೆಂಡತಿ ಸರಸ, ರಿಶಾದ, ಅವನ ಹೆಂಡತಿ ನಾತಾಶಾ, ಈ ನಾಲ್ವರ ಪಾರ್ಟಿಯಲ್ಲಿ ರೀತಾ ಬರಲು ಒಪ್ಪಿದಳು. ಆಗ ಟ್ರ್ಯಾಜಿಕ್ ಥೀಮ್ಸ್ ಇನ್ ವೆಸ್ಟರ್ನ್ ಲಿಟರೇಚರ್ ಪುಸ್ತಕ ನೆನಸಿಕೊಂಡು ಗಿರೀಶ ರೀತಾ ಹೊಟ್ಟೆತುಂಬ ನಕ್ಕರಂತೆ. ಕಾಮನ್‌ವೆಲ್ಥ್ ಬಾಲ್‌ನ ಒಂದು ಸಂಜೆಯ ಸಂಬಂಧ. ನಲವತ್ತು ವರ್ಷಗಳ ಮೇಲೆ ತನ್ನ ಗೃಹಬಂಧನ ತೊರೆದು ರೀತಾ ಬಂದದ್ದು ಗಿರೀಶರಿಗೆ ಆನಂದ ತಂದಿತ್ತು.

ಗ್ರೀಸ್ ಪ್ರವಾಸ : ಮೊದಲನೆಯ ವರ್ಷ ಡಿಸೆಂಬರ್ ತಿಂಗಳಲ್ಲಿ ಗ್ರೀಸಿಗೆ ಪ್ರವಾಸ ಮಾಡಲು ಒಂದು ಅಗ್ಗದ ಯಾತ್ರೆಯ ಜಾಹೀರಾತು ನೋಡಿ ಅರ್ಜಿಹಾಕುತ್ತಾರೆ. ಗುಂಪಿನ ಪ್ರವಾಸದಲ್ಲಿ ಸುರಕ್ಷಿತತೆ ಇತ್ತು. ಮೊದಲೇ ಹಣತುಂಬಿದ್ದರಿಂದ ನಂತರ ಆರ್ಥಿಕ ಮುಗ್ಗಟ್ಟಿನ ಅಪಾಯವಿರಲಿಲ್ಲ. ಎಲ್ಲ ವ್ಯವಸ್ಥೆ ಪ್ರವಾಸಿ ಸಂಸ್ಥೆಯೇ ನೋಡಿಕೊಳ್ಳುತ್ತಿತ್ತು.

ಮೊದಲನೆಯ ದಿನವೇ ಹೆಲನ್ ಬರ್ಟನ್ ಎಂಬ ಸಹಪ್ರವಾಸಿಯ ಪರಿಚಯವಾಯಿತು. ಹುಡುಗಿಯರ ಮಾನದಿಂದ ಕುಳ್ಳಿ, ಅಷ್ಟೇನು ರೂಪವತಿಯಲ್ಲ. ಅದರೆ ಹರಿತವಾದ ವ್ಯಂಗ್ಯ ಬುದ್ಧಿಯಿದ್ದಾಕೆ. ಉಳಿದವರಿಗಿಂತ ವಿಸ್ತಾರವಾಗಿ ಓದಿ ತಿಳಿದುಕೊಂಡಾಕೆ. ಆಕೆಯ ಜೊತೆಗೆ ಹರಟೆಹೊಡೆಯುವಾಗ ವಿಷಯಗಳಿಗೆ ಕೊರತೆಯೇ ಇರುತ್ತಿರಲಿಲ್ಲ. ಪ್ರವಾಸದಲ್ಲಿ ಅಥೆನ್ಸಿನ ಜಗದ್ವಿಖ್ಯಾತ ಸಂಗಮರವರಿ ಕಲ್ಲಿನ ಸ್ತಂಭಗಳನ್ನು ಕಂಡು ಬೆರಗಾದರು. ಸೋಫೋಕ್ಲಿಸ್, ಈಸ್ಕಿಲಸ್‌ರಂಥ ಮೇಧಾವಿ ನಾಟಕಕಾರರ ಪ್ರದರ್ಶನವನ್ನು ಕಂಡಂತಹ ಎಂಪಿಥೇಟರಿನ ವಿಸ್ತೃತ ರಂಗಭೂಮಿಯ ಮೇಲೆ ನಿಂತು ರೋಮಾಂಚಿತಗೊಂಡರು. ಪ್ರವಾಸದಲ್ಲಿ ಜೊತೆಗೆ ಯಾರಾದರೂ ಬೇಕು. ಗ್ರೀಸಿನ ಪ್ರಯಾಣ ಅಷ್ಟೊಂದು ರಸವತ್ತಾಗಿರಲಿಕ್ಕೆ ಕಾರಣ ಹೆಲೆನ್‌ಳ ಸಾನ್ನಿಧ್ಯ ಎಂದು ಬರೆಯುತ್ತಾರೆ. ಮೊದಲನೆಯ ರಾತ್ರಿ ಇವರ ರೈಲು ಯುರೋಪಿನೊಳಗಿಂದ ಹಾಯ್ದು ಹೋಗುತ್ತಿರುವಾಗ ಹೆಲೆನ್ ಬಂದು ಇವರ ಹಾಸಿಗೆ ಸೇರಿದ್ದಳು. ಆದರೆ ಅವಳು ತನ್ನ ಕೌಮಾರ್ಯವನ್ನು ಕಳೆದುಕೊಂಡಿರಲಿಲ್ಲ ಎಂದು ಬರೆಯುತ್ತಾರೆ. ಹೆಲೆನ್‌ಳ ಲೆಕ್ಕದಲ್ಲಿ ಮದುವೆಯ ಸಂಭಾವ್ಯತೆ ಇಲ್ಲದಿದ್ದರೆ ಸಂಭೋಗಕ್ಕೆ ಅವಕಾಶವಿರಲಿಲ್ಲ.

ಗಿರೀಶರ ಇನ್ನೊಬ್ಬ ಮಿತ್ರ ಸಂಜಯ ಘೋಷ್. ಕೆಂಬ್ರಿಜ್‌ನಲ್ಲಿ ಭೌತಶಾಸ್ತ್ರದಲ್ಲಿ ಪ್ರಥಮ ವರ್ಗ ಪಡೆದು ಈಗ ಆಕ್ಸಫರ್ಡ್‌ನ ಹಾರ‍್ವೆಲ್ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರತನಾಗಿದ್ದ. ಸಂಜಯ ಆಕ್ಸಫರ್ಡ್‌ನಲ್ಲಿ ಒಂದು ಸಣ್ಣ ಮನೆ ಹಿಡಿದಿದ್ದ. ಸೆಸ್ಕಿಯಾ ಡಚ್ ಹೆಣ್ಣುಮಗಳು. ಇಂಗ್ಲಿಷ್ ಕಲಿಯಲು ಕೆಂಬ್ರಿಜ್‌ಗೆ ಬಂದಳು. ಸಂಜಯನ ವಾಗ್ದತ್ತ ವಧುವಾದಳು. ಆ ಕಾಲದಲ್ಲಿ ಸಹಬಾಳ್ವೆ ಜೀವನ ಪದ್ಧತಿಯಾಗಿರಲಿಲ್ಲ. ಅವಳು ಸಂಜಯನ ಜೊತೆಗೆ ಆಕ್ಸಫರ್ಡ್‌ಗೆ ಬಂದರೂ ಬೇರೆ ಕೋಣೆಯಲ್ಲಿ ವಾಸಿಸುತ್ತದ್ದಳು. ಸೆಸ್ಕಿಯಾ ತಂದೆತಾಯಿಯನ್ನು ಕಳೆದುಕೊಂಡಿದ್ದಳು. ಆಮ್ಸಟರ್ ಡ್ಯಾಮ್‌ಗೆ ಮರಳುವ ಒತ್ತಡ ಇರಲಿಲ್ಲ. ಸಂಜಯನೊಂದಿಗೆ ಮದುವೆಗಾಗಿ ಕಾಯುತ್ತಿದ್ದಳು. ಸಂಜಯನ ಅಕ್ಕ ಚಿತ್ರಕಲೆಯ ಅಭ್ಯಾಸ ಮಾಡಲು ಬ್ರಿಟನ್ನಿಗೆ ಬಂದದ್ದರಿಂದ ಇಬ್ಬರ ಜೀವನ ತಲೆಕೆಳಗಾಯಿತು. ಇವರ ದುಗುಡವನ್ನು ತಮ್ಮ ಅಂಜುಮಲ್ಲಿಗೆ ನಾಟಕದಲ್ಲಿ ಬಳಸಿಕೊಂಡಿರುವುದಾಗಿ ಗಿರೀಶ ಬರೆಯುತ್ತಾರೆ.

ಸಂಜಯ ಸೆಸ್ಕಿಯ ಮದುವೆಯಾಗಲು ನಿಶ್ಚಯಿಸುತ್ತಾನೆ. ಸಂಜಯನ ತಾಯಿಯೊಬ್ಬರೇ ಕಲಕತ್ತೆಯಿಂದ ಮದುವೆಗೆ ಬರುತ್ತಾರೆ. ಅವರಿಬ್ಬರು ಹನಿ-ಮೂನ್ ಮುಗಿಸಿ ಮರಳುವ ದಿನ ಅಕ್ಕ ನೀಲಾ ಚಾರ‍್ವೆಲ್ ನದಿಯಲ್ಲಿ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ನೀಲಾಳ ನಿಧನದಿಂದ ಸಂಜಯ-ಸೆಸ್ಕಿಯಾರ ವೈವಾಹಿಕ ಜೀವನ ಕುಸಿದುಬೀಳುತ್ತದೆ. ಅವರ ವೈವಾಹಿಕ ಜೀವನ ಮತ್ತೆ ಚಿಗುರುತ್ತದೆ ಎಂಬ ಭರವಸೆ ಗಿರೀಶರಿಗೆ ಇರುತ್ತದೆ. ಒಂದುವೇಳೆ ಅದು ಮುರಿದುಬಿದ್ದರೆ ತಾವು ಅವಳನ್ನು ಮದುವೆಯಾಗುವುದಾಗಿ ಹೇಳುತ್ತಾರೆ. ಗಿರೀಶ ಭಾರತಕ್ಕೆ ಮರಳುತ್ತಾರೆ. ಒಂದು ವರ್ಷದ ಮೇಲೆ ಸಂಜಯ ಒಂದು ಗ್ರೀಟಿಂಗ್ ಕಾರ್ಡ್ ಕಳಿಸುತ್ತಾನೆ. ಅದರಲ್ಲಿ, ನನಗೊಬ್ಬ ಮಗ ಹುಟಿದ್ದಾನೆ. ಅದರ ಶ್ರೇಯಸ್ಸು ನಿನಗೆ ಸಲ್ಲಬೇಕು ಎಂದು ಬರೆದಿರುತ್ತಾನೆ. ಇಪ್ಪತ್ತು ವರ್ಷಗಳ ಮೇಲೆ ನ್ಯೂಯಾರ್ಕಿನಲ್ಲಿ ಭೆಟ್ಟಿಯಾಗುತ್ತಾರೆ. ಗಿರೀಶ, ಸರಸ, ಸಂಜಯ, ಸೆಸ್ಕಿಯಾ ಊಟ ಮಾಡುತ್ತಿದ್ದಾಗ, ಹಳೆಯದಿನ ನೆನೆದು ಗಿರೀಶ ಹೇಳುತ್ತಾರೆ, ನನ್ನ ಸೆಸ್ಕಿಯಾ ಪ್ರೀತಿ ಪ್ಲೆಟೋನಿಕ್ ಆಗಿತ್ತು. (ಆ ಪ್ರೀತಿಗೆ ಲೈಂಗಿಕ ಆಯಾಮವಿರಲಿಲ್ಲ) ಎಂದಾಗ ಸಂಜಯ ಮೌನವಾಗಿದ್ದ, ಸೆಸ್ಕಿಯಾ ನಿರ್ವಿಕಾರವಾಗಿ ಭೋಜನ ಮುಂದುವರಿಸಿದ್ದಳು.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 11. In this episode Karnad writes about his friends in London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X