• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ನಾಡರ ಆಡಾಡತ ಆಯುಷ್ಯದ ಸುತ್ತಮುತ್ತ-2

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

ಭಾಲಚಂದ್ರನ ಮಕ್ಕಳೆಲ್ಲ ಕಾರ್ನಾಡ ಹೆಸರನ್ನೇ ಪಡೆದಿದ್ದರು. ಭಾಲಚಂದ್ರನ ಹಿರಿಯ ಮಗಳಿಗೆ ಜನ್ಮಪತ್ರದ ದಾಖಲೆ ಬೇಕಾಗಿತ್ತು. ಧಾರವಾಡ ಮುನ್ಸಿಪಾಲಿಟಿ ದಾಖಲೆ ನೋಡಿದಾಗ ಅಲ್ಲಿ ತಂದೆಯ ಹೆಸರು ಭಾಲಚಂದ್ರ ರಘುನಾಥ ಕಾರ್ನಾಡ ಆಗಿರದೆ, ಭಾಲಚಂದ್ರ ಆತ್ಮಾರಾಮ ಗೋಕರ್ಣ ಎಂದಿತ್ತು. ಭಾಲಚಂದ್ರನ ಚಿಕ್ಕಪ್ಪ ಹೊಟ್ಟೆಯುರಿಯಿಂದ ನಾಮ ಪಲ್ಲಟ ಮಾಡಿದ್ದ. ಇದರಿಂದ ಮನೆಯಲ್ಲಾದ ಮನಸ್ತಾಪಗಳ ಬಗ್ಗೆ (ನಂತರ ನಡೆದ ಕಟುವಾದ ಪತ್ರವ್ಯವಹಾರಗಳ ಬಗ್ಗೆ) ಗಿರೀಶ ಬರೆಯುತ್ತಾರೆ.

ಡಾ| ಕಾರ್ನಾಡರು 1978ರಲ್ಲಿ ತಮ್ಮ ವಯಸ್ಸಿನ ತೊಂಭತ್ತರಲ್ಲಿ ಧಾರವಾಡಲ್ಲಿ ತೀರಿಕೊಂಡಾಗ ವಸಂತ ಮುಂಬೈಯಿಂದ ಬಂದ. ಡಾಕ್ಟರರು ನಾಸ್ತಿಕರಾಗಿದ್ದರು. ತಾವು ಸತ್ತರೆ ಕಾಕಪಿಂಡ ಬೇಡ, ಕಳ್ಳ ಬ್ರಾಹ್ಮಣರಿಗೆ ಮನೆಯಲ್ಲಿ ಕಾಲಿಡಲು ಬಿಡಬೇಡಿ ಎಂದು ಹೇಳಿದ್ದರಂತೆ. ಎಲ್ಲ ವಿಧಿ ಶಾಸ್ತ್ರೋಕ್ತವಾಗಿ ಆಗಬೇಕೆಂದು ತಾಯಿ ಪಟ್ಟು ಹಿಡಿದಾಗ ಹಿರಿಯ ಮಗನೇ ಮುಂದಾಗಬೇಕಾಯ್ತು. ವಸಂತ ಹೋಮ ಮಾಡಬೇಕಾಗಿತ್ತು. ಹಿಂದೆ ವಸಂತ ಅಣ್ಣ ಭಾಲಚಂದ್ರನೊಡನೆ ಮಾತು ಬಿಟ್ಟಿದ್ದರು. ಗಿರೀಶ ವಸಂತನಿಗೆ ಹೇಳಿದರು. ಚಿಕ್ಕಂದಿನಿಂದಲೂ ಭಾಲಚಂದ್ರನನ್ನೇ ಹಿರಿಯ ಮಗನೆಂದು(ಅಣ್ಣನೆಂದು) ನಂಬಿದ್ದೇವೆ, ಅವನು ತನ್ನ ಹೆಸರು ಕೂಡ ಬದಲಾಯಿಸಿದ್ದಾನೆ, ಅವನೇ ಕರ್ಮ ಮಾಡಲು ಅಧಿಕಾರಿಯಾಗಿದ್ದಾನೆ ಎಂದು ವಾದಿಸಿ ವಸಂತನ ಮನ ಒಲಿಸಿದರು. ಈ ನಿರ್ಣಯಕ್ಕೆ ಗಣ್ಯರಿಂದ, ಹೋಮ ನಡೆಸಿಕೊಡಲು ಬಂದ ಪುರೋಹಿತರಿಂದ ಕೂಡ ವಿರೋಧ ಬಂತು. ತಾಯಿ ಕೂಡ ಗಿರೀಶನನ್ನು ಬದಿಗೆ ಕರೆದು ಅವನನ್ನು ನಾವು ದತ್ತು ತೆಗೆದುಕೊಂಡಿಲ್ಲವಲ್ಲ ಎಂದರಂತೆ. ಹೆಸರು ಬದಲಿಸುವ ಬದಲು ದತ್ತಕ ಯಾಕೆ ತೆಗೆದುಕೊಳ್ಳಲಿಲ್ಲ? ಎಂಬ ಗಿರೀಶರ ಮರುಪ್ರಶ್ನೆಗೆ ಉತ್ತರವಿಲ್ಲದೆ ತಾಯಿ ಒಪ್ಪಿಗೆ ಕೊಟ್ಟರಂತೆ. ವಿಧಿಗಳೆಲ್ಲ ಸಾಂಗವಾಗಿ ನಡೆದವು, ವೈಕುಂಠ ಸಮಾರಾಧನೆಯೂ ನಡೆಯಿತಂತೆ.

ಗಿರೀಶರ ಆತ್ಮ ಕತೆಗಳು ನನ್ನನ್ನು ಆಕರ್ಷಿಸಿದ್ದಕ್ಕೆ ಮುಖ್ಯ ಕಾರಣ ಅವರ ಜೀವನದಲ್ಲಿ ನಡೆದ ಅದ್ಭುತ ಘಟನೆಗಳು. ಎಲ್ಲಕ್ಕಿಂತ ಹೆಚ್ಚಿನದೆಂದರೆ ಅವರ ಮುಚ್ಚುಮರೆ ಇಲ್ಲದ ಪ್ರಾಮಾಣಿಕ ಚಿತ್ರಣ. ಅದಕ್ಕೊಂದು ಉದಾಹರಣೆ ಕೊಡಬೇಕೆಂದರೆ ಅವರ ತಾಯಿ ಮುಂದೆ ಪತಿಯಾದ ಡಾಕ್ಟರ್ ಕಾರ್ನಾಡರೊಡನೆ ಮದುವೆಯಾಗದೇ ಐದು ವರ್ಷ ಅವರ ಜೊತೆಗೆ ಕಳೆದದ್ದನ್ನು, ಮುಂದೆ ತಮ್ಮ ಮಗಳು ಶಾಲ್ಮಲಿ (ರಾಧಾ) ತನ್ನ ಪ್ರಿಯಕರನೊಂದಿಗೆ ಐದು ವರ್ಷ ಸಹಬಾಳ್ವೆ ನಡೆಸಿ ನಂತರ ಮದುವೆಯಾದ ಘಟನೆಯೊಡನೆ ಹೋಲಿಸುತ್ತಾರೆ. ಇದು ಸತ್ಯಕಥನವಾಗಿರಬಹುದು, ಆದರೆ ಇನ್ನೊಬ್ಬರಿಗೆ ಹೇಳುವಾಗ ಎಂಟೆದೆ ಬೇಕಾಗುತ್ತದೆ.

ಗಿರೀಶರು ಬಾಲ್ಯದಲ್ಲಿ ಕಳೆದ ಶಿರಸಿಯ ಜೀವನ ಅವರ ಮುಂದಿನ ಜೀವನದಲ್ಲಿ ಹೇಗೆ ಉಪಯುಕ್ತವಾಯಿತು ಎಂಬುದನ್ನು ಮಾರ್ಮಿಕವಾಗಿ ಚಿತ್ರಿಸುತ್ತಾರೆ. ಶಿರಸಿಯ ಸುತ್ತಲಿನ ದಟ್ಟ ಅಡವಿ, ಹಳ್ಳ-ಕೊಳ್ಳಗಳು, ಅವುಗಳಗುಂಟ ಓಡುವ ಇಕ್ಕಟ್ಟಾದ ಚಕ್ಕಡಿ ದಾರಿಗಳು, ಅಡಿಕೆಯ ತೋಟವನ್ನು ಸೀಳಿ ಹೋಗುವ ಕಾಲದಾರಿಗಳು, ಅದರಾಚೆಗಿದ್ದ ಹಳ್ಳಿಯ ಜೀವನ ಅವರಿಗೆ ಪರಿಚಿತವಾದ ಪರಿಯನ್ನು ಬಣ್ಣಿಸುತ್ತಾರೆ.

ಕಾರ್ನಾಡ ದಂಪತಿಗಳು ಸಮಾಜಮುಖಿಗಳು, ದೊಡ್ಡ ಮನಸ್ಸಿನವರು. ಒಬ್ಬ ಮಹಿಳೆ ದೀನಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದು ಅಲ್ಲೇ ತೀರಿಕೊಂಡಳು. ಅವಳಿಗೆ ಹರಯದ ಮಗ, ಹದಿವಯಸ್ಸಿನ ಮೂರು ಹುಡುಗಿಯರು, ಆಮೇಲೊಬ್ಬ ಚಿಕ್ಕ ಮಗ ಇದ್ದರು. ಆ ಹೆಂಗಸಿನ ಗಂಡ ಒಬ್ಬ ಸೂಳೆಯ ಜೊತೆಗೆ ಮನೆಮಾಡಿಕೊಂಡಿರುವದರಿಂದ ಮಕ್ಕಳ ಪರಿವೆ ಇರಲಿಲ್ಲವೆಂಬ ಸಂಗತಿ ಆಸ್ಪತ್ರೆಯ ನೌಕರರಿಂದ ತಿಳಿದಾಗ ಇಬ್ಬರು ಹುಡುಗಿಯರಿಗೆ ಹುಬ್ಬಳ್ಳಿ-ಧಾರವಾಡದ ತಮ್ಮ ಸಂಬಂಧಿಕರಲ್ಲಿ ಆಶ್ರಯ ಕೊಡಿಸಿ, ಮೂರನೆಯವಳಾದ ವಿಮಲಾ ಎಂಬವಳನ್ನು ತಮ್ಮ ಮನೆಯಲ್ಲೇ ಬೆಳೆಸಿದರು. ಅವಳು ಮನೆಯಲ್ಲಿ ಗಿರೀಶರ ಮೂರು ವರ್ಷದ ತಂಗಿ ಲೀನಾಳನ್ನು ನೋಡಿಕೊಂಡು, ಶಾಲೆ ಸೇರಿ, ಮುಂದೆ ವಿಶಾರದದ ವರೆಗೆ ಓದಿದಳಂತೆ.

ಕ್ರಿಸ್ತೀಯ ಸಮಾಜದವರೊಡನೆ ಕಾರ್ನಾಡರ ಸಂಬಂಧ ಚೆನ್ನಾಗಿತ್ತು ಎಂದು ಬರೆಯುತ್ತಾರೆ. (ಎಮ್.ವಿ.ಕಾಮತರ ಆತ್ಮಚರಿತ್ರೆ ನೆನಪಾಗುತ್ತದೆ.) ಇವರ ತಾಯಿಯ ಸ್ನೇಹಿತೆಯಾದ ಮಿಸೆಸ್ ಫರ್ನಾಂಡಿಸ್ ತಾನು ಬಳಸದೆ ಇದ್ದ ಒಂದು ಪಿಟೀಲನ್ನು ಧನುಷ್ಯ ಸಮೇತ ಇವರ ಅಣ್ಣ ವಂತನಿಗೆ ಕಾಣಿಕೆಯಾಗಿ ಕೊಟ್ಟರಂತೆ. ಮುಂದೆ ಅವನು ಸ್ವಾಧ್ಯಾಯದಿಂದ ಆ ವಾದ್ಯದ ಮೇಲೆ ಪ್ರಭುತ್ವ ಪಡೆದಾಗ ಅದರ ಶ್ರೇಯ ತಾನು ತೆಗೆದುಕೊಳ್ಳದೆ ಅವನ ಪರಿಶ್ರಮಕ್ಕೆ ಇತ್ತದ್ದು ಆ ಮಹಿಳೆಯ ಹಿರಿಮೆ ಎನ್ನುತ್ತಾರೆ.

ಅಲ್ಲಿಯ ಪಾದ್ರಿಯೊಡನೆ ಗಿರೀಶರ ತಂದೆಗೆ ಉತ್ತಮ ಸ್ನೇಹವಿತ್ತು. ಒಮ್ಮೆ ಚಿತ್ರಾಪುರ ಮಠದ ಗುರುಗಳು ಇವರ ಮನೆಗೆ ಭೆಟ್ಟಿ ನೀಡಿದಾಗ ಮನೆಯಲ್ಲಿ ಸರಿಯಾದ ಎತ್ತರದ ಆಸನವಿರಲಿಲ್ಲವೆಂದು ತಿಳಿದಾಗ ಫಾದರ್ ಫಿಗರೇಡೋ ಅವರು ಅಲ್ಲಿ ಬಿಶಪ್‌ರು ಬಂದಾಗ ತಾವು ಬಳಸುವ ಪೀಠವನ್ನು ಇವರಿಗೆ ಎರವಲಾಗಿ ಕೊಟ್ಟಿದ್ದರಂತೆ.

ಪುಣೆಯಿಂದ ಶಿರಸಿಗೆ ಬಂದುದರಿಂದ ಅಣ್ಣ ವಸಂತ ಹಾಗೂ ಪ್ರೇಮಾಳ ಶಿಕ್ಷಣ ತಲೆಕೆಳಗಾಗಿತ್ತು. ಅಲ್ಲಿ ಮರಾಠಿ ಮಾಧ್ಯಮದಲ್ಲಿ ಶಿಕ್ಷಣವಾಗಿತ್ತು. ಇಲ್ಲಿ ಕನ್ನಡಕ್ಕೆ ಬದಲಾಯಿಸುವುದು ಬಹಳ ಕಠಿಣವಾಗಿತ್ತು. ಅವರನ್ನು ಧಾರವಾಡಕ್ಕೆ ರವಾನಿಸಲಾಯಿತಂತೆ. ವಸಂತ ಅಲ್ಲಿಯ ಹೈಸ್ಕೂಲಿನಲ್ಲಿ ಒಂದು ವರ್ಷ ಮುಗಿಸಿ, ಶಿರಸಿಯ ಮಾರಿಕಾಂಬಾ ಹೈಸ್ಕೂಲಿನಲ್ಲಿ ಎರಡನೆಯ ವರ್ಷದಲ್ಲಿ ದಾಖಲಾದ. ಪ್ರೇಮಾ ಶಿರಸಿಯ ಕಾನ್ವೆಂಟ್ ಶಾಲೆಯನ್ನು ಸೇರಿದಳು.

ಮಳೆಗಾಲ ಮುಗಿದೊಡನೆ ಉತ್ತರ ಕರ್ನಾಟಕದ ನಾಟಕ ಕಂಪನಿಗಳು ಶಿರಸಿಯಲ್ಲಿ ಕ್ಯಾಂಪು ಮಾಡುತ್ತಿದ್ದವು. 1945ರಿಂದ 48ರವರೆಗೆ ಪ್ರತಿ ವರ್ಷ ಗೋಕಾಕ, ಜಮಖಂಡಿ ಇತ್ಯಾದಿ ಕಂಪನಿಗಳ ನಾಟಕಗಳನ್ನು ನೋಡುವ ಭಾಗ್ಯ ತನ್ನದಾಗಿತ್ತು ಎಂದು ಗಿರೀಶ ಬರೆಯುತ್ತಾರೆ. ಶಿರಸಿ ಊರು ಮಲೇರಿಯಾದ ಬೀಡಾಗಿದ್ದರಿಂದ ನಾಟಕದವರು ಇವರ ತಂದೆಯ ಮರ್ಜಿ ಕಾಯ್ದುಕೊಳ್ಳುವುದು ಅಗತ್ಯವಾಗಿತ್ತು. ತಂದೆಯವರು ಸರಕಾರಿ ನೌಕರರಾಗಿದ್ದರಿಂದ ನಾಟಕ ಪ್ರಯೋಗಕ್ಕೆ ಫ್ರೀ ಪಾಸು ಬಂದೇ ಬರುತ್ತಿದ್ದವು. ಗಿರೀಶರ ತಂದೆತಾಯಿಗೆ ನಾಟಕದಲ್ಲಿ ವಿಶೇಷ ಆಸಕ್ತಿ ಇತ್ತು. ಪುಣೆಯಲ್ಲಿ ಅವರು ಮರಾಠಿ ರಂಗಭೂಮಿ ಉತ್ಕರ್ಷದ ಕಾಲದಲ್ಲಿದ್ದಾಗ ಮರಾಠಿ ನಾಟಕಗಳನ್ನು ನೋಡಿದ್ದರು. ಅವರು ಅವುಗಳ ಬಗ್ಗೆ ಉತ್ಸಾಹದಿಂದ ಮಾತಾಡುತ್ತಿದ್ದರು. ಅವರ ತಾಯಿ ಹದಿವಯಸ್ಸಿಗೆ ಬರುವಾಗ ಬಾಲಗಂಧರ್ವರ ನಾಟಕಗಳನ್ನು ಮೆಚ್ಚಿದ್ದರು, ಅವರಂತೆ ಸೀರೆ ಉಡುವದು, ಒಂದುಕಾಲ ಮೇಲೆ ನೆಗೆದು ಅವರಂತೆ ನಿರ್ಗಮಿಸುವದನ್ನು ಅನುಕರಿಸುತಿದ್ದರಂತೆ.

1947ರಲ್ಲಿ ಹುಲಿಮನೆ ಶಾಸ್ತ್ರಿಗಳ ಜಯಕರ್ನಾಟಕ ನಾಟಕ ಮಂಡಳಿ ಶಿರಸಿಗೆ ಬಂದಿತ್ತು. ಕಂಪನಿಯ ಅಭಿರುಚಿ, ನಿರ್ಮಾಣದ ಗುಣಮಟ್ಟ ಗಿರೀಶರ ತಂದೆತಾಯಿಗೆ ಬಹಳ ಸೇರಿತ್ತಂತೆ. ಆ ಸಲ ಬೇಗ ಮಳೆಗಾಲ ಬಂದದ್ದರಿಂದ ಬೇರೆ ಊರಿಗೆ ಸಾಗುವದೂ ಕಷ್ಟವಾಗಿತ್ತು. ಭಾರತದ ವಿಭಜನೆಯ ಹಿನ್ನೆಲೆಯಲ್ಲಿ ಹೊಸ ನಾಟಕ ಬರೆದು ಪ್ರಯೋಗಿಸಿದರು. ಶಾಸ್ತ್ರಿಗಳ ಪರಿಚಯ ಕಾರ್ನಾಡ ಕುಟುಂಬಕ್ಕೆ ನಿಕಟವಾಗಿದ್ದರಿಂದ ಹೊಸದಾಗಿ ಸೃಷ್ಟಿಸುವ ಪ್ರಕ್ರಿಯೆಯನ್ನು ಸನಿಹದಿಂದ ನೋಡುವ ಅದ್ಭುತ ಅವಕಾಶ ಸಿಕ್ಕಿತೆಂದು ಗಿರೀಶ ನೆನೆಯುತ್ತಾರೆ. ಮುಂದೊಮ್ಮೆ (1997ರಲ್ಲಿ) ಬಿ.ಬಿ.ಸಿ.ಯವರು ಭಾರತ ಸ್ವಾತಂತ್ರ್ಯದ 50 ವರ್ಷದ ನೆನಪಿಗಾಗಿ ಒಂದು ನಾಟಕ ಬರೆಯಲು ಗಿರೀಶರಿಗೆ ಆಮಂತ್ರಿಸಿದಾಗ, ಅವರು ಬರೆದ ನಾಟಕ ಟಿಪೂ ಸುಲ್ತಾನ ಕಂಡ ಕನಸು. ಆಗ ಅವರಿಗೆ ಶಾಸ್ತ್ರಿಗಳ ಟಿಪೂ ಸುಲ್ತಾನ ನಾಟಕ ನೆನಪಾಗಿತ್ತಂತೆ, ಒಂಭತ್ತು ವರ್ಷದ ಬಾಲಕನ ಮೇಲೆ ಆ ನಾಟಕ ಆಳವಾದ ಪ್ರಭಾವ ಬೀರಿದ್ದನ್ನು ನೆನೆಯುತ್ತಾರೆ.

ಶಿರಸಿಯಲ್ಲಿ ಕಳೆದ ಕೊನೆಯ ವರ್ಷ ಮಹಿಳಾ ಸಮಾಜದವರು ಶಿವಮೊಗ್ಗೆಯಿಂದ ಓಂಕಾರ ಎಂಬ ನೃತ್ಯ ಶಿಕ್ಷಕರನ್ನು ಕರೆಸಿ ನೃತ್ಯವರ್ಗ ಆರಂಭಿಸಿದರಂತೆ. ಆ ಕ್ಲಾಸಿಗೆ ಇವರು ಕೂಡ ತಂಗಿ ಲೀನಾಳ ಜೊತೆಗೆ ಹೋಗುತ್ತಿದ್ದರಂತೆ. ಮೂರು ನಾಲ್ಕು ತಿಂಗಳಲ್ಲಿ ಇವರಿಗೂ ನೃತ್ಯದ ತರಬೇತಿ ದೊರೆಯಿತು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಇವರೂ ಗುರುಗಳ ಜೊತೆಗೆ ಮೂರು-ನಾಲ್ಕು ನೃತ್ಯಗಳ ಪ್ರಯೋಗ ಮಾಡಿದರು. ಮೂವತ್ತೆರಡು ವರ್ಷಗಳ ನಂತರ (1984ರಲ್ಲಿ) ಇವರಿಗೆ ತೆಲುಗು ಚಿತ್ರ ನಿರ್ದೇಶಕ ಜಂಧಿಯಾಲ ಅವರಿಂದ ಒಂದು ಪ್ರಸ್ತಾವ ಬಂತು. ಅದು ದ್ವಿಭಾಷಾ ಚಿತ್ರ. ಅದರಲ್ಲಿ ಇವರಿಗೆ ಒಂದು ಪಾತ್ರ. ಅದು ನಾಟ್ಯಾಚಾರ್ಯನದು. ಚಿತ್ರದಲ್ಲಿ ಕುಣಿಯಬೇಕಾಗಿಲ್ಲ ಎಂದು ನಿರ್ದೇಶಕರು ಹೇಳಿದರು. ಶೂಟಿಂಗ್ ವೇಳೆಯಲ್ಲಿ ಹೋಟಲಿನಲ್ಲಿ ಏಕಾಕಿ ಕುಳಿತು ಬೇಸರವಾದಾಗ, ನೃತ್ಯ ನಿರ್ದೇಶಕ ಶೇಷು ಅವರಿಗೆ ಕೆಲವು ಮುದ್ರೆಗಳನ್ನು, ಭಂಗಿಗಳನ್ನು ಹೇಳಿಕೊಡಲು ಕೇಳಿದರಂತೆ. ಮುಂದೆ ಗುರುಗಳು ಒಂದೆರಡು ನೃತ್ಯ ಮಾಡಬಹುದಲ್ಲ ಎಂದರಂತೆ. ಬೆಳಿಗ್ಗೆ ಆರು ಗಂಟೆಗೆ ಕೂಚಿಪುಡಿಯಲ್ಲಿ ತರಬೇತಿ ಶುರುವಾಯಿತಂತೆ. ಚಿತ್ರದಲ್ಲಿ ಆರೇಳು ನೃತ್ಯಗಳನ್ನು, ಅದರೊಡನೆ ಒಂದು ತಾಂಡವ ನೃತ್ಯವನ್ನೂ ಮಾಡಿದರು. ನೃತ್ಯಕಲೆ ಸೈಕಲ್ ತುಳಿಯುವಂತೆ, ಈಜಿನಂತೆ ಒಮ್ಮೆ ಮೈಗೂಡಿದ ಬಳಿಕ ಎಂದೂ ಮರೆತು ಹೋಗದಂಥ ಕಲೆ ಎಂಬುದು ಆಗ ಅರ್ಥವಾಯಿತಂತೆ.

ಶಿರಸಿಯ ಮಾರಿಕಾಂಬಾ ಹೈಸ್ಕೂಲಿನಲ್ಲಿ ಸುಮಾರು ಐನೂರು ವಿದ್ಯಾರ್ಥಿಗಳು. ಒಂದು ಶನಿವಾರ ವಿವಿಧವಿನೋದಾವಳಿ ಇದ್ದರೆ ಇನ್ನೊಂದು ಶನಿವಾರ ಚರ್ಚಾಕೂಟ (debate) ಇರುತ್ತಿತ್ತು. ಅದರಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತಿತ್ತು. ಮುಂದೆ ಆಕ್ಸ್‌ಫರ್ಡನಲ್ಲಿ ಗಿರೀಶ ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದುದರ ಶ್ರೇಯಸ್ಸು ಮಾರಿಕಾಂಬಾ ಹೈಸ್ಕೂಲಿನ ಶನಿವಾರ ಸಭೆಗೆ ಸೇರಬೇಕು ಎಂದು ಬರೆಯುತ್ತಾರೆ. 1984ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ ಆ ಘಟನೆಯನ್ನು ಕುರಿತು ಗಿರೀಶ ಒಂದು ಕವಿತೆ ಬರೆದು ಶನಿವಾರದ ಸಭೆಯಲ್ಲಿ ಓದಿದರಂತೆ. ಅವರ ವಿಜ್ಞಾನದ ಶಿಕ್ಷಕರಾದ ಪೈ ಮಾಸ್ತರರು ಇವರನ್ನು ಸೋಮವಾರ ತಮ್ಮ ರೂಮಿಗೆ ಬರಹೇಳಿದರಂತೆ. ಅವರನ್ನು ಕಂಡಾಗ ಅವರು, ನಿನಗೆ ಕವಿಯಾಗೋದಿದ್ದರೆ ನೀನು ಛಂದಸ್ಸು ಕಲಿಯಬೇಕು ಎಂದರು. ಆಗ ಇವರಿಗೆ ಆಶ್ಚರ್ಯ ಕಾದಿತ್ತು. ಮೊದಲು ಹಲವರಿಂದ ಛಂದಸ್ಸು ಕಲಿಯಲು ಪ್ರಯತ್ನಿಸಿದ್ದರು, ಆದರೆ ಅದು ಕಠಿಣವೆಂದು ಇತರರು ನಿರುತ್ಸಾಹಗೊಳಿಸಿದ್ದರು. ಶಾಲೆ ಮುಗಿದೊಡನೆ ಸಂಜೆ ಪೈ ಮಾಸ್ತರರು ಛಂದಸ್ಸಿನ ಪಾಠ ಪ್ರಾರಂಭಿಸಿದರು. ಹ್ರಸ್ವ, ದೀರ್ಘ, ಗುರುಲಘುಗಳಿಂದ ಆರಂಭಿಸಿ, ಮಾತ್ರೆ, ಗಣ, ಆದಿಪ್ರಾಸ, ಅಂತ್ಯಪ್ರಾಸ, ಮಾತ್ರಾವೃತ್ತ, ಅಕ್ಷರವೃತ್ತ ಇವುಗಳ ವರೆಗೆ ಎಲ್ಲವನ್ನು ಸಹನೆಗೆಡದೆ ಕಲಿಸಿದರು. ನಂತರ ತಾವು ಕವಿಯಾಗದಿದ್ದರೂ ಪೈ ಮಾಸ್ತರರು ಹೇಳಿಕೊಟ್ಟ ಪಾಠ ಮುಂದೆ ಭಾಷೆಯ ಲಯವನ್ನು, ರಭಸವನ್ನು, ಲಾಲಿತ್ಯವನ್ನು ನಿಯಂತ್ರಿಸುವ ಕಲೆಯಲ್ಲಿ ತಮಗೆ ಭದ್ರ ಬುನಾದಿಯಾದುದನ್ನು ನೆನೆಯುತ್ತಾರೆ. ನಂತರ ಇವರ ಕತೆ-ಕವಿತೆಗಳನ್ನು ಗಂಭೀರವಾಗಿ ಓದಿ ಮಾರ್ಗದರ್ಶನ ಮಾಡಿದವರು ಜಿ.ಕೆ.ಹೆಗಡೆ ಮಾಸ್ತರರು ಎಂದು ನೆನೆಯುತ್ತಾರೆ. ಅವರ ಪಾಠ ಎಷ್ಟು ರಸಮಯವಾಗಿತ್ತೆಂದರೆ ಎಡಿಶನಲ್ ಇಂಗ್ಲಿಷ್ ವಿದ್ಯಾರ್ಥಿನಿಯಾದ ಅವರ ಅಕ್ಕ ಪ್ರೇಮಾ ಕೂಡ ಅವರ ಕನ್ನಡ ಕ್ಲಾಸಿನಲ್ಲಿ ಬಂದು ಕೂಡುತ್ತಿದ್ದರಂತೆ.

ಆ ಕಾಲದಲ್ಲಿ ಶಿರಸಿಯಲ್ಲಿ ಅತ್ಯಂತ ಲೋಕಪ್ರಿಯವಾದ ನಾಟಕವೆಂದರೆ ದೇವದಾಸಿ ಆಗಿತ್ತಂತೆ. ಮುಂದೆ ಮುಂಬಯಿಯಲ್ಲಿ ಇವರ ಯಯಾತಿ ನಾಟಕ ನೋಡಿದ ಮರಾಠಿ ನಾಟಕಕಾರ ವಿಯಜ್ ತೆಂಡೂಲ್ಕರರು ಸೋಜಿಗಪಟ್ಟು ಗಿರೀಶರನ್ನು ಕೇಳಿದ್ದರಂತೆ, ಮರಾಠಿ ನಾಟಕಗಳಲ್ಲಿ ಪೌರಾಣಿಕ ಪಾತ್ರಗಳನ್ನು ಚಿತ್ರಿಸುವ ವಿಶಿಷ್ಟ ಪದ್ಧತಿಯಿದೆ. ಆದರೆ ನಿನ್ನ ಪಾತ್ರಗಳು ಸಮಕಾಲೀನವೆನಿಸುವಷ್ಟು ಜೀವಂತವಾಗಿವೆ. ಹೇಗದು? ಎಂದು. ಆಗ ಗಿರೀಶ ಉತ್ತರಿಸಿದ್ದರು, ಅವೆಲ್ಲ ನನಗೆ ಹಿಂದೆಯೇ ಶಿರಸಿಯ ಬೀದಿಗಳಲ್ಲಿ ಪರಿಚಿತವಾಗಿದ್ದವು ಎಂದು.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Aadadata Aayushya' in his column Jeevana Mattu Sahitya. Here is part 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X