• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ನಾಡರ ಆತ್ಮಕತೆ 19 : ಪುಣೆ ಫಿಲ್ಮ್ ಸಂಸ್ಥೆ ಹೊಣೆ

By ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

1974ರಲ್ಲಿ ಪುಣೆಯಲ್ಲಿರುವ ಫಿಲ್ಮ್ ಅಂಡ್ ಟೆಲಿವಿಜನ್ ಇನ್‌ಸ್ಟಿಟ್ಯೂಟ್ನ ನಿರ್ದೇಶಕ(ಡೈರೆಕ್ಟರ್) ಪದವಿ ಗಿರೀಶರಿಗೆ ದೊರೆತದ್ದು ಅವರ ಜೀವನದಲ್ಲಿಯ ಮಹತ್ವಪೂರ್ಣ ಬೆಳವಣಿಗೆಯಾಗಿತ್ತು. ಆಗ ಅವರು ತಾಯಿ-ತಂದೆಯವರೊಡನೆ ಧಾರವಾಡದಿಂದ ಬಂದು ಪುಣೆಯಲ್ಲಿ, ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಬಂಗ್ಲೆಯಲ್ಲಿ ವಾಸ್ತವ್ಯ ಹೋಡಿದ್ದರು. ಇದು ವಿಶೇಷವಾಗಿ ಅವರ ತಾಯಿಗೆ ಸಂತಸವನ್ನು ನೀಡಿತ್ತು. ತಾಯಿಯವರು ಬಾಲ್ಯದಲ್ಲಿ ಕೆಲ ವರ್ಷ ಪುಣೆಯಲ್ಲಿದ್ದರು. ಅವರಿಗೆ ಮರಾಠಿ ಸಾಹಿತ್ಯ ಹಾಗೂ ಕಲೆಯ ಬಗ್ಗೆ ವಿಶೇಷ ಆಸಕ್ತಿ ಇತ್ತು. ಗಿರೀಶರು ಇನ್‌ಸ್ಟಿಟ್ಯೂಟ್‌ನ ಮೂರನೆಯ ಡೈರೆಕ್ಟರ್ ಆಗಿದ್ದರು. (ಮೊದಲನೆಯವರು ಜಗತ್ ಮುರಾರಿ, ಎರಡನೆಯವರು ದೀಕ್ಷಿತ ಎಂಬ ಆಕಾಶವಾಣಿಯ ನಿವೃತ್ತ ಅಧಿಕಾರಿ).

ಅಭಿನಯಕ್ಕಾಗಿ 20 ಸೀಟುಗಳಿದ್ದವು (10 ಪುರುಷರಿಗೆ, 10 ಸ್ತ್ರೀಯರಿಗೆ). ಅವರ ಸ್ಕ್ರೀನ್ ಟೆಸ್ಟ್ ನಡೆಯುತ್ತಿತ್ತು. ಅದು ಇವರಿಗೆ ಸ್ವಯಂವರದಂತೆ ಹಾಸ್ಯಾಸ್ಪದವೆನಿಸುತ್ತಿತ್ತು. ಆದ್ದರಿಂದ ಆ ಸ್ಕ್ರೀನ್-ಟೆಸ್ಟ್‌ನ್ನು ಇವರು ರದ್ದು ಮಾಡಿಬಿಟ್ಟರು. ಅದಕ್ಕೆ ಕೆಲವು ಪ್ರಾಧ್ಯಾಪಕರಿಂದ, ವಿಶೇಷವಾಗಿ ಅಭಿನಯ ವರ್ಗದ ಪ್ರಾಧ್ಯಾಪಕ ರೋಶನ್ ತನೇಜಾ ಅವರಿಂದ ವಿರೋಧ ಬಂತು. ಗಿರೀಶ ಇದನ್ನು ಲೆಕ್ಕಿಸಲಿಲ್ಲ. ಆ ವರ್ಷ ರಾಷ್ಟ್ರೀಯ ನಾಟ್ಯ ವಿದ್ಯಾಲಯದಿಂದ ಬಂದ ಒಬ್ಬ ಬಡಕಲು ದೇಹದ, ಮುಖದಮೇಲೆ ಮೈಲಿ(ಸ್ಮಾಲ್‌ಪಾಕ್ಸ್)ಕಲೆ ಇದ್ದ, ಉದ್ದು ಮುಖದ, ಸುಕ್ಕಿದ ಗಲ್ಲದ ವಿದ್ಯಾರ್ಥಿಗೆ, ಸ್ಕ್ರೀನ್ ಟೆಸ್ಟ್ ಆಧಾರವಾಗಿದ್ದರೆ, ಸೀಟು ದೊರೆಯುತ್ತಿರಲಿಲ್ಲ. ಮುಂದೆ ಅವನೇ ದೊಟ್ಟ ನಟನಾಗಿ, ವಿಶ್ವ ವಿಖ್ಯಾತಿ ಪಡೆದ. ಅವನ ಹೆಸರು ಓಂ ಪುರಿ. ಅವನಿಗೆ ಫಿಲ್ಮ್‌ಫೇರಿನ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ದೊರೆತಾಗ, ಅವನು ತೆಗೆದ ಉದ್ಗಾರ, "ಗಿರೀಶ ಕಾರ್ನಾಡ ಫಿಲ್ಮ್ ಇನ್ಸಿಟ್ಯೂಟ್ ನಿರ್ದೇಶಕರಾಗಿರದಿದ್ದರೆ, ನಾನು ನಟನಾಗುತ್ತಿರಲಿಲ್ಲ, ನನಗೆ ಈ ಬಹುಮಾನ ಸಿಗುತ್ತಿರಲಿಲ್ಲ" ಎಂದು.

ದಿಲೀಪ್ ಧವನ್ ಎಂಬ ಹುಡುಗನ ಆಯ್ಕೆಯಾಗಿರಲಿಲ್ಲ, ಅವನು ವೇಟಿಂಗ್ ಲಿಸ್ಟಿನಲ್ಲಿ ಮೊದಲಿಗನಾಗಿದ್ದ. ಅವನು ನೋಡಲು ಸ್ಫುರದ್ರೂಪಿಯಾಗಿದ್ದ ಆದರೆ ಸಂದರ್ಶನದ ವೇಳೆ ಹೆಚ್ಚಿನ ಪ್ರತಿಭೆ ತೋರಿಸಲಿಲ್ಲ. ಅಭಿನಯದ ಪ್ರಾಧ್ಯಾಪಕ ಪ್ರೊ.ತನೇಜಾ ಅವರು ಶಿಫಾರಸು ಮಾಡಿದರೂ ಅವನಿಗೆ ಅವಕಾಶ ದೊರೆಯಲಿಲ್ಲ. ಅವನು 13 ಸಿನೆಮಾ ಪ್ರೊಡ್ಯೂಸರರಿಂದ ಶಿಫಾರಸು ಪತ್ರ ತಂದಿದ್ದ. ಹಿಂದೆಂದೂ ಇನ್‌ಸ್ಟಿಟ್ಯೂಟ್ ಸಂದರ್ಶಿಸದ ಪ್ರಖ್ಯಾತ ಸಿನೆ ನಟ ರಾಜ ಕಪೂರ್ ಸ್ವತಃ ಬಂದು ಅವನಿಗೆ ಒಂದು ಸೀಟ್ ಕೊಡಲು ಗಿರೀಶರಿಗೆ ಬಿನ್ನಹಿಸಲು ಬಂದಾಗ ಈ ಪ್ರಸಂಗ ಶಿಖರ ತಲುಪಿತ್ತು. ಆ ನಾಟಕೀಯ ಪ್ರಸಂಗದ ಬಗ್ಗೆ ಬರೆಯುತ್ತಾರೆ. ರಾಜಕಪೂರರ ಮಾನ ಉಳಿಸಲು ಒಂದು ಸೀಟು ಹೆಚ್ಚಿಸಬೇಕಾದ ಪ್ರಸಂಗದ ಬಗ್ಗೆ ಬರೆಯುತ್ತಾರೆ.

ಕೆಲವು ತಿಂಗಳ ಅವಧಿಯಲ್ಲಿ, ಅಭಿನಯದ ವಿದ್ಯಾರ್ಥಿನಿಯ ತಂದೆ ಮುಂಬೈಯಲ್ಲಿ ಕೊಟ್ಟ ಔತಣಕೂಟಕ್ಕೆ ಗಿರೀಶ ಆಗಮಿಸಿದಾಗ, ಅಲ್ಲಿ ನೌಕರಿ ದೊರೆಯದ ಪದವೀಧರರ ಒಂದು ಗುಂಪೇ ಸೇರಿತ್ತು. ಅವರೆಲ್ಲ ಅಂದರು. "ನಾವು ಇನ್ನೂರು ಪದವೀಧರರು ಕೆಲಸವಿಲ್ಲದೆ ಒದ್ದಾಡುತ್ತಿದ್ದೇವೆ. ಯಾವ ಪ್ರೊಡ್ಯೂಸರರೂ ಕೆಲಸ ಕೊಡ್ತಾಯಿಲ್ಲ. ಪ್ರತಿ ವರ್ಷ 20 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತೀರಿ, ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿಸುತ್ತೀರಿ. ಅಭಿನಯದ ಕೋರ್ಸ್ ಇಡುವುದರಲ್ಲಿ ಯಾವ ಪುರುಷಾರ್ಥವಿದೆ?" ಅವರ ಮಾತಿನಿಂದ ಪ್ರಭಾವಿತರಾದ ಗಿರೀಶರು ಮರುವರ್ಷದಿಂದ (1975) ಅಭಿನಯದ ಪಾಠಕ್ರಮಮನ್ನೇ ರದ್ದುಗೊಳಿಸಿದರು. ಇದು ಬಹಳ ಟೀಕೆಗೆ ಗುರಿಯಾಯಿತು.

ಸಂಸ್ಕಾರ ಚಿತ್ರದ ಧಿಡೀರ್ ಯಶಸ್ಸಿನಿಂದ, ಮುಂದೆ ವಂಶವೃಕ್ಷಕ್ಕೆ ಜಂಟಿ ನಿರ್ದೇಶಕನೆಂದು ರಾಷ್ಟ್ರೀಯ ಬಹುಮಾನ ಬಂದಾಗ, ಇವರಿಗೆ ಫಿಲ್ಮ್ ಜಗತ್ತಿನಲ್ಲಿ ಮನ್ನಣೆ ದೊರೆಯತೊಡಗಿತು. 1972ರಲ್ಲಿ ಇನ್‌ಸ್ಟಿಟ್ಯೂಟಿನ ನಿರ್ದೇಶನದ ಅಭ್ಯಾಸಕ್ರಮಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಗಳ ಆಯ್ಕೆ ಸಮಿತಿಯ ಸದಸ್ಯನಾಗಲು ಆಮಂತ್ರಣ ಬಂದಿತ್ತು. ಮೃಣಾಲ್ ಸೇನ್ ಸಮಿತಿಯ ಅಧ್ಯಕ್ಷರಾಗಿದ್ದರು. ಅವರೊಂದಿಗೆ ಕಳೆದ ಮೂರು ನಾಲ್ಕು ದಿನ ಉತ್ತೇಜಕವಾಗಿದ್ದವು. ಮೃಣಾಲ್ ಸೇನ್ ಗಿರೀಶರ ಸಂಸ್ಕಾರ ಚಿತ್ರದ ಅಭಿನಯ ಮೆಚ್ಚಿ ದಿರ್ಘವಾದ ಟೆಲಿಗ್ರಾಮ್ ಕಳಿಸಿದ್ದರಂತೆ.

ಆ ವರ್ಷ ನಿರ್ದೇಶನ ವರ್ಗಕ್ಕೆ ಆಯ್ಕೆಯಾದವರಲ್ಲಿ ಕೇತನ್ ಮೆಹತಾ, ಸಯೀದ ಮಿರ್ಜಾ, ಕುಂದನ ಶಹಾ, ವಿಧು ವಿನೋದ್ ಚೋಪ್ರಾ ಮತ್ತು ಗಿರೀಶ ಕಾಸರವಳ್ಳಿ ಇದ್ದರಂತೆ. 1973ರಲ್ಲಿ ಕಾಡು ಚಿತ್ರದ ನಿರ್ದೇಶನದಲ್ಲಿ ತೊಡಗಿದ್ದರು. ಆ ವರ್ಷ ಇನ್‌ಸ್ಟಿಟ್ಯೂಟ್‌ನಲ್ಲಿ ಚಿತ್ರ ರಸಗ್ರಹಣ ಕಲಿಸುತ್ತಿದ್ದ ಪ್ರಾ. ಸತೀಶ ಬಹಾದೂರ ಅವರಿಂದ ಒಂದು ಪತ್ರ ಬಂತು. ನಿನಗೆ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕನಾಗುವುದರಲ್ಲಿ ಆಸಕ್ತಿಯಿದ್ದರೆ ದಿಲ್ಲಿಯ ಮಂತ್ರಾಲಯದಿಂದ ಪ್ರಸ್ತಾವ ಬರುವಂತಿದೆ ಎಂದು. ಎರಡೇ ಚಿತ್ರಗಳ ಅನುಭವವಿತ್ತು. ಆದರೆ, ಆಕ್ಸಫರ್ಡ್ ಪ್ರೆಸ್ಸಿನಿಂದಾಗಿ, ಆಡಳಿತದ ಉತ್ತಮ ಅನುಭವವಿತ್ತು. 1974 ಜನೆವರಿ ಮೊದಲ ತಾರೀಖಿಗೆ ಹೊಸ ಕೆಲಸದಲ್ಲಿ ತೊಡಗಿದರು. ಮೊದಲ ನಿರ್ದೇಶಕ ಮುರಾರಿ ಚಿತ್ರಜಗತ್ತಿನವರು. ಅವರಿದ್ದಾಗ ವಿದ್ಯಾರ್ಥಿಗಳ ಮೂರು ಮುಷ್ಕರಗಳಾದವು. ದೀಕ್ಷಿತರ ವೇಳೆಗೆ ಮುಷ್ಕರಗಳಾಗಲ್ಲಿಲ್ಲ.

ಗಿರೀಶ ನಿರ್ದೇಶಕರಾದಾಗ ಅನೇಕ ಬದಲಾವಣೆಗಳು ಕಂಡುಬಂದವು. ಸಮಯಕ್ಕೆ ಸರಿಯಾಗಿ ಬರದ ಕೆಲಸಗಾರರೆಲ್ಲ ಸರಿಯಾಗಿ ಬರಲು ಆರಂಭಿಸಿದರು. ಕ್ಯಾಂಟೀನಿನಿಂದ ನಿರ್ದೇಶಕರ ಕ್ಯಾಬಿನ್‌ಗೆ ಪ್ರತಿದಿನ ಬರುವ ಪುಕ್ಕಟೆ ಹಾಲನ್ನು ನಿಲ್ಲಿಸಿಬಿಟ್ಟರು. ವಾಹನಗಳನ್ನು ವೈಯಕ್ತಿಕ ಕೆಲಸಕ್ಕಾಗಿ ಬಳಸುವುದನ್ನೂ ನಿಲ್ಲಿಸಿದರು. ಯಾರೇ ವೈಯಕ್ತಿಕ ಕೆಲಸಕ್ಕಾಗಿ ವಾಹನ ಬಳಸುವ ಪ್ರಸಂಗ ಬಂದರೆ ಅದಕ್ಕೆ ನಿಗದಿತ ಹಣವನ್ನು ತುಂಬಬೇಕು ಎಂದು ನಿಯಮ ಮಾಡಿದರು. ಗಿರೀಶರಿಗಾಗ ಮೂವತ್ತೈದು ವರ್ಷದ ತಾರುಣ್ಯ. ಸರಕಾರದವರು ಇನ್‌ಸ್ಟಿಟ್ಯೂಟ್ ಪ್ರಾರಂಭಿಸುವ ಯೋಜನೆ ರೂಪಿಸಿದಾಗ ಮದ್ರಾಸಿನಿಂದ ಜಾಗೆ ಒದಗಿಸುವ ಆಫರ್ ಬಂದಿತ್ತು.

ಪುಣೆಯ ಪ್ರಭಾತ್ ಸ್ಟುಡಿಯೋ ಬಹಳ ಕಡಿಮೆ ಬೆಲೆಗೆ ಮಾರಾಟಕ್ಕಿದ್ದಾಗ, ಸರಕಾರ ಇದನ್ನು ಕೊಂಡು ಇನ್‌ಸ್ಟಿಟ್ಯೂಟ್ ಇಲ್ಲೇ ಪ್ರಾರಂಭಿಸಿದರು. ಪ್ರಭಾತ್ ಸ್ಟುಡಿಯೋ ವಿ. ಶಾಂತಾರಾಮ ಅವರದು. ಅವರು ಕೂಡ ಬಹಳ ಶಿಸ್ತಿನ ಮನುಷ್ಯ. ಕೆಲವು ಕೆಲಸಗಾರರು ಗಿರೀಶರನ್ನು ಎರಡೆನೆಯ ಶಾಂತಾರಾಮ ಎಂದು ಕರೆದರು. (ಇವರಿಗೆ ಶಾಂತಾರಮರ ಹಾಗೆ ಗುಂಗುರಗೂದಲಿದ್ದವು). ಆ ಹೋಲಿಕೆ ಇವರಿಗೆ ಸಂತಸ ತರಲಿಲ್ಲ. ಇದಕ್ಕೆ ವಿರುದ್ಧವಾಗಿ ವಂಶವೃಕ್ಷದಲ್ಲಿ ಇವರು ಸತ್ಯಜಿತ್ ರಾಯ್ ಅವರನ್ನು ಹೋಲುತ್ತಾರೆ ಎಂದು ಕೆಲವರು ಅಂದಾಗ ಇವರಿಗೆ ಸಂತಸವಾಗಿತ್ತು. ಈ ಮಾತನ್ನು ನಿತಿನ್ ಬೋಸ್ ಎಂಬ ಶ್ರೇಷ್ಠ ಬಂಗಾಲಿ ನಿರ್ದೇಶಕ ಸತ್ಯಜಿತ ರಾಯ್ ಅವರಿಗೆ ಹೇಳಿದಾಗ, ಅವರು, Who is this imposter? (ಯಾರು ಈ ಛದ್ಮವ್ಯಕ್ತಿ?) ಎಂದಿದ್ದರಂತೆ. ಆಗ ಇವರು ಹೊಟ್ಟೆ ತುಂಬಾ ನಕ್ಕಿದ್ದರಂತೆ.

ಟೆಲಿವಿಜನ್ ಮಾಧ್ಯಮ 1970ರಷ್ಟಕ್ಕೆ ಭಾರತವನ್ನು ಆವರಿಸಿತ್ತು. ಅದರ ಬೆಳವಣಿಗೆ ಕೈಮೀರಿ ಹೋಗುವ ಮೊದಲು ಅದನ್ನು ಹಿಡಿತದಲ್ಲಿಡಲು, ದೂರದರ್ಶನದ ಒಂದು ರಾಷ್ಟ್ರೀಯ ಮಟ್ಟದ ಟೆಲಿವಿಜನ್ ತರಬೇತಿ ಕೇಂದ್ರವನ್ನು ಆರಂಭಿಸಬೇಕೆಂದಿತ್ತು. ಸೂಚನೆ ಬಂದಿದ್ದರಿಂದ ಜಸ್ಟಿಸ್ ಖೋಸ್ಲಾ ಅವರ ನೇತೃತ್ವದಲ್ಲಿ ಒಂದು ನಿಯೋಗ ಪುಣೆಗೆ ಬಂತು. ಟೆಲಿವಿಜನ್ ಡೈರೆಕ್ಟರ್ ಜನರಲ್ ಆಗಿದ್ದ ಪಿ.ವಿ.ಕೃಷ್ಣಮೂರ್ತಿಯವರು ಹೆಚ್ಚಿನ ಆಸಕ್ತಿ ವಹಿಸಿದ್ದರು. ಫಿಲ್ಮ್ ಮತ್ತು ಟೆಲಿವಿಜನ್ ಎರಡು ಭಾಗ ಮಾಡುವುದು ಕಾರ್ನಾಡರಿಗೆ ಸರಿ ಬರಲಿಲ್ಲ. ಮೂರ್ತಿಯವರು ಕೊಂಚ ದರ್ಪದಿಂದ ಎಲ್ಲ ತೀರ್ಮಾನ ತೆಗೆದುಕೊಂಡವರಂತೆ ಮಾತಾಡಿದರು.

ಗಿರೀಶರು ದಿಲ್ಲಿಗೆ ಫೋನ್ ಮಾಡಿದರು. ಮರುದಿನ ದಿಲ್ಲಿಗೆ ಹೋದರು. ಎಡಿಶನಲ್ ಸೆಕ್ರೆಟರಿ ದೇಶರಾಜ ಸಿಂಘ್ ಅವರನ್ನು ಭೆಟ್ಟಿಯಾದರು, ವಿಷಯವನ್ನು ಚರ್ಚಿಸಿದರು. ಅವರು ಮಂತ್ರಿಗಳೊಡನೆ ಮಾತಾಡುವುದು ಒಳ್ಳೆಯದೆಂದು ಮಂತ್ರಿಗಳ ಕಡೆಗೆ ಕರೆದೊಯ್ದರು. ಆಗ ಇಂದ್ರಕುಮಾರ ಗುಜರಾಲ್ ಮಂತ್ರಿಯಾಗಿದ್ದರು ಇವರನ್ನುದ್ದೇಶಿಸಿ ಗಿರೀಶ ಕಾರ್ನಾಡ ಅಂದರು, "ಫಿಲ್ಮ್ ಮತ್ತು ಟೆಲಿವಿಜನ್ ಇಬ್ಭಾಗವಾಗುವದನ್ನು ನಾನಂತೂ ನೋಡಲಾರೆ, ಸಹಿಸಲಾರೆ. ಹಾಗೆ ಆಗುವುದಾದರೆ ನಾನು ರಾಜೀನಾಮೆ ಕೊಡುವೆ" ಎಂದು. ಆಗ ಗುಜರಾಲ್ ಅಂದರು, "ನನಗಂತೂ ಇಬ್ಭಾಗವಾಗುವ ಯೋಚನೆ ಗೊತ್ತೇ ಇರಲಿಲ್ಲ. ಗಿರೀಶ ಅಂದದ್ದು ಸರಿ. ಟಿ.ವಿ.ಕೇಂದ್ರ ಇನ್‌ಸ್ಟಿಟ್ಯೂಟ್‌ನ ಅಂಗವಾಗಿಯೇ ಉಳಿಯತಕ್ಕದ್ದು. ಇನ್‌ಸ್ಟಿಟ್ಯೂಟ್‌ನ ಆವಾರ ವಿಭಜನೆಯಾಗತಕ್ಕದ್ದಲ್ಲ" ಎನ್ನುತ್ತಲೇ ಅಲ್ಲಿಂದಲೇ ಕಟ್ಟುನಿಟ್ಟಾದ ಅಪ್ಪಣೆ ಇತ್ತರು.

ಈಗ ಇನ್‌ಸ್ಟಿಟ್ಯೂಟ್ ಕ್ಯಾಂಪಸ್- ತಮ್ಮ ಭಾವನಾ ವಿಶ್ವದ ಪ್ರಭಾತ್ ಸ್ಟುಡಿಯೋದ ಆವಾರ- ಇಂದಿಗೂ ಅವಿಚ್ಛಿನ್ನವಾಗಿ ಉಳಿದಿದ್ದರೆ ಅದರ ಶ್ರೇಯಸ್ಸು ತಮಗೆ ಸಲ್ಲಬೇಕು ಎಂದು ಗಿರೀಶ ಬರೆಯುತ್ತಾರೆ.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 19. In this episode Karnad writes about his stint in Pune Film and Television Institute on India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X