ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೆಂದಿಗೂ ಮರೆಯಲಾಗದ ವಿದ್ಯಾರ್ಥಿ ವಸಂತ

By * ಡಾ. 'ಜೀವಿ' ಕುಲಕರ್ಣಿ, ಮುಂಬೈ
|
Google Oneindia Kannada News

MV Kini and Gokak
ನಾನೆಂದಿಗೂ ಮರೆಯಲಾಗದ ಇನ್ನೊಬ್ಬ ವಿದ್ಯಾರ್ಥಿ ಎಂದರೆ ವಸಂತ. (ಎಮ್.ವಿ.ಕಿಣಿ). ಈಗ ಅವನು ಬಹಳ ದೊಡ್ದ ಮನುಷ್ಯ. ಮುಂಬೈ ಹೈಕೋರ್ಟಿನಲ್ಲಿ ಹಾಗೂ ದೆಹಲಿಯ ಸುಪ್ರೀಂ ಕೋರ್ಟಿನಲ್ಲಿ ಬಹು ದೊಡ್ಡ ಹೆಸರು ಗಳಿಸಿದ ಅಡ್ವೊಕೇಟ್. ಅವನು ನನ್ನ ಜೀವನದಲ್ಲಿ ಬಹಳ ಹತ್ತಿರದ ಸಂಬಂಧವನ್ನಿಟ್ಟುಕೊಂಡ ವಿದ್ಯಾರ್ಥಿಮಿತ್ರ. ಅವನ ಬಗ್ಗೆ ಬರೆಯದಿದ್ದರೆ ನನ್ನ ಢಾಣೂಕರ್ ಕಾಲೇಜಿನ ನೆನಪುಗಳು ಅಪೂರ್ಣವಾಗಿ ಉಳಿಯುತ್ತವೆ. ಕಾಲೇಜಿನಲ್ಲಿರುವಾಗ ನನ್ನ ಬಳಿ ಬರುತ್ತಿದ್ದ, ಆದರೆ ಕಾಲೇಜು ಬಿಟ್ಟ ಮೇಲೆ ಅವನ ಸಂಬಂಧ ಇನ್ನಷ್ಟು ಘನಿಷ್ಟವಾಗುತ್ತ ನಡೆಯಿತು. ಗೋಕಾಕರು ತಮ್ಮ ಕೊನೆಯ ದಿನಗಳನ್ನು ಮುಂಬೈಯಲ್ಲಿ ಕಳೆದಾಗ, ನಾನು ಅವರ ಬಗ್ಗೆ ಪಿಎಚ್.ಡಿ. ಮಾಡುತ್ತಿದ್ದಾಗ ವಸಂತ ನಮ್ಮ ಜೀವನದಲ್ಲಿ ಮುಖ್ಯಪಾತ್ರ ವಹಿಸಿದ.

ಗೋಕಾಕರನ್ನು ಮುಂಬೈಯ ಯಾವುದೇ ಸಭೆಗೆ ಕರೆದುಕೊಂಡು ಹೋಗಲು ವಸಂತ ತನ್ನ ಕಾರು ಮತ್ತು ಡ್ರೈವರನ್ನು ಕಳಿಸುತ್ತಿದ್ದ. ಗೋಕಾಕರ ಇಂಗ್ಲಿಷ್ ಕವನಗಳ ಕವನ ಸಂಗ್ರಹ ಪ್ರಕಟವಾಗಲು ಸಹಾಯ ಒದಗಿಸಿದ. ತನ್ನ ಟೈಪಿಸ್ಟ್ ರನ್ನು ಗೋಕಾಕರ ಮನೆಗೆ ಕಳಿಸುತ್ತಿದ್ದ. ಜೀವಿ ನಿನ್ನ ಗುರು ಆಗಿದ್ದರು, ಅವರಿಗೆ ನೀನು ಸಹಾಯ ಮಾಡಿದರೆ ಅಡ್ಡಿಯಿಲ್ಲ. ನನಗೇಕೆ ಮಾಡುವಿ? ಎಂದಾಗ, ವಿನಮ್ರನಾಗಿ ಹೇಳಿದ್ದ, ಸರ್, ನೀವೂ ನನ್ನ ಗುರುಗಳು. ನೀವು ಗುರೂಣಾಂಗುರು. ನನ್ನ ಗುರುಗಳ ಗುರುಗಳು ಅಂದಾಗ ಗೋಕಾಕರು ಮೂಕ ವಿಸ್ಮಿತರಾಗಿದ್ದರು.

ವಸಂತ ಕಿಣಿಯ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳು ನೆನಪಾಗುತ್ತವೆ. ಅವನು ವಿದ್ಯಾರ್ಥಿಯಾಗಿದ್ದಾಗ ನಮ್ಮ ನಾಟಕಗಳಲ್ಲಿ ಭಾಗವಹಿಸಿರಲಿಲ್ಲ. ಕನ್ನಡ ಸಂಘದ ಕ್ರಿಯಾಶೀಲ ವ್ಯಕ್ತಿಯೂ ಆಗಿರಲಿಲ್ಲ. ಆದರೆ ನನ್ನ ಎಲ್ಲ ಚಟವಟಿಕೆಗಳನ್ನು ಬಹಳ ಹತ್ತರದಿಂದ ನೋಡಿದ್ದ. ಹಲವು ವರ್ಷಗಳ ನಂತರ ಅವನ ಭೆಟ್ಟಿ ಲೋಕಲ್ ಟ್ರೇನ್‌ನಲ್ಲಿ ಆದಾಗ ನನ್ನ ಬಳಿಗೆ ಬಂದು ತನ್ನ ಢಾಣೂಕರ್ ಕಾಲೇಜಿನ ನೆನಪುಗಳನ್ನು ಹಂಚಿಕೊಂಡ. ನನ್ನ ನಾಟಕಗಳನ್ನು ಅವನು ಮರೆತಿರಲಿಲ್ಲ. ಪ್ರಜಾಪ್ರಭುತ್ವ ನಾಟಕವನ್ನು ಅವನು ಬಹಳ ಮೆಚ್ಚಿದ್ದ. ಎಲ್ಲಿದೆ ನರಕ? ನಾಟಕದಲ್ಲಿ ವಕೀಲರ ಪಾತ್ರದಿಂದ ಪ್ರಭಾವಿತನಾಗಿದ್ದ. ಅವನು ಒಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ. ಎರಡನೆಯ ಸಲ ಭೆಟ್ಟಿಯಾದಾಗ ಕೆಲವು ವರ್ಷಗಳೇ ಕಳೆದಿದ್ದವು. ಅವನು ಆಗ ಬ್ಯಾಂಕ್ ನೌಕರಿಯನ್ನು ಬಿಟ್ಟು ಸ್ವತಂತ್ರವಾಗಿ ವಕೀಲವೃತ್ತಿ ಪ್ರಾರಂಭಿಸಿದ್ದ.

ಅಂಧೇರಿ ಕಾಲೇಜಿನ ಕನ್ನಡ ಸಂಘದ ವಾರ್ಷಿಕೋತ್ಸವಕ್ಕೆ ನಮ್ಮ ವಿದ್ಯಾರ್ಥಿಗಳು ಹಣ ಸಂಗ್ರಹಿಸುತ್ತಿದ್ದರು. ನಾನು ನಮ್ಮ ಕಾರ್ಯದರ್ಶಿಗೆ ಕಿಣಿಯ ವಿಳಾಸ ಕೊಟ್ಟು ಸ್ವಲ್ಪ ಹಣ ಸಹಾಯ ಪಡೆಯಲು ಸೂಚಿಸಿದ್ದೆ. ನಮ್ಮ ಕಾರ್ಯದರ್ಶಿ ಅವನನ್ನು ಕಂಡಾಗ ಢಾಣೂಕರ್ ಕಾಲೇಜಿನ ಜೀವನದ ಬಗ್ಗೆ, ನಾನು ಪ್ರಯೋಗಿಸುತ್ತಿದ್ದ ನಾಟಕಗಳ ಬಗ್ಗೆ ಭಾವಪರವಶನಾಗಿ ಹೇಳಿದ್ದ. ನಿಮ್ಮ ವಾರ್ಷಿಕೋತ್ಸವದ ಬಜೆಟ್ ಎಷ್ಟು? ಎಂದು ಕೇಳಿದ್ದ. ನಮ್ಮ ಕಾರ್ಯದರ್ಶಿ ಒಂದು ಮೊತ್ತ ಹೇಳಿದ. ಕೂಡಲೇ ಐದು ನೂರು ರೂಪಾಯಿ ಕೊಟ್ಟು, ನಿಮಗೆ ಹಣ ಕೊರತೆ ಏನಾದರೂ ಉಂಟಾದರೆ ಮತ್ತೆ ಬಾ. ಕಡಿಮೆ ಬಿದ್ದಷ್ಟು ಹಣ ನಾನು ಕೊಡುತ್ತೇನೆ ಎಂದಿದ್ದ.

ಎಂ.ವಿ. ಕಿಣಿ ನಂತರ ಬಹಳ ದೊಡ್ದ ನ್ಯಾಯವಾದಿ ಎಂದು ಹೆಸರು ಗಳಿಸಿದ. ಹಲವಾರು ರಾಷ್ಟೀಕೃತ ಬ್ಯಾಂಕುಗಳ ಲೀಗಲ್ ಅಡ್‌ವೈಸರ್ ಆಗಿ. ಏರ್‌ಪೋರ್ಟ್ ಅಥಾರಿಟಿಯ ಪ್ರಧಾನ ಕಾಯಿದೆ ಸಲಹೆಗಾರನಾಗಿ, ದೇಶದ ಅತ್ಯಂತ ಪ್ರಮುಖ ನ್ಯಾಯವಾದಿಯಾಗಿ ಬೆಳೆದ. ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಿಗೆ ಧನ ಸಹಾಯ ಮಾಡಲು ಸದಾ ಮುಂದೆ ಬರುತ್ತಿದ್ದ. ಅವನ ಜೊತೆ ಕಳೆದ ಕೆಲವು ಅವಿಸ್ಮರಣೀಯ ಪ್ರಸಂಗಗಳು ನೆನಪಾಗುತ್ತವೆ.

* ಹವ್ಯಕ ಸಮಾಜದವರು ನನ್ನ ನಾಟಕ ಕಾದಿರುವಳು ಶಬರಿ ಪ್ರಯೋಗಿಸಿದ್ದರು. ವಿಶ್ವೇಶರಯ್ಯ ಹಾಲ್‌ನಲ್ಲಿ ದೊಡ್ಡ ಸಮಾರಂಭವಿತ್ತು. ಗಜಾನನ ಯಾಜಿ ನಾಟಕ ನಿರ್ದೇಶಿಸಿದ್ದರು. ಮುಖ್ಯ ಅತಿಥಿ ಎಂ.ವಿ.ಕಿಣಿ. ಲೇಖಕನಾದ ನನಗೆ ಹೂಗುಚ್ಛ ಕೊಟ್ಟರು, ಕಿಣಿಯವರಿಗೆ ದೊಡ್ಡ ಹಾರ ಹಾಕಲು ಹೊರಟಾಗ, ಆ ಹಾರವನ್ನು ಹಾಕಿಸಿಕೊಳ್ಳದೆ, ಅದನ್ನು ನನ್ನ ಕೊರಳಿಗೆ ಹಾಕಿದರು ಅಷ್ಟೇ, ಅಲ್ಲ ಸಭೆಯಲ್ಲಿ ನನಗೆ ಪಾದಮುಟ್ಟಿ ನಮಸ್ಕರಿಸಿದರು. ತಾವು ನನ್ನ ಶಿಷ್ಯ ಎಂದು ಅಭಿಮಾನದಿಂದ ಸಾರಿದರು.
* ಅಂಧೇರಿ ಕಾಲೇಜು ಜ್ಯೂನಿಯರ್ ಕಾಲೇಜಿನ ಶ್ರೇಷ್ಠ ವಿದ್ಯಾರ್ಥಿ ಪಾರಿತೋಷಕ ಕೊಡಲು ತಮ್ಮ ತಾಯಿಯ ಹೆಸರಿನಲ್ಲಿ ಆರ್ಥಿಕ ಅನುದಾನ ನೀಡಿದರು. ಪ್ರಥಮ ಸಲ ಆ ಬಹುಮಾನ ವಿತರಿಸಲು ಮುಖ್ಯ ಅತಿಥಿಯಾಗಿ ಬಂದರು. ಯೋಗಾಯೋಗವೆಂಬಂತೆ ಆ ವರುಷದ ಬಹುಮಾನ (ರಮಾಬಾಯಿ ಕಿಣಿ ಶೀಲ್ಡ್) ನನ್ನ ಮಗ ಹರ್ಷವರ್ಧನನಿಗೆ ದೊರೆತಾಗ ಬಹಳ ಅಭಿಮಾನ ಪಟ್ಟಿದ್ದರು.
* ನಾನು ಗೋಕಾಕರ ಬಗ್ಗೆ ಇಂಗ್ಲಿಷ್‌ನಲ್ಲಿ ಪಿಎಚ್‌ಡಿ ಮಾಡಲು ಹೊರಟಾಗ ನನಗೆ ಕಿಣಿ ಹುರಿದುಂಬಿಸಿದರು ಅಷ್ಟೇ ಅಲ್ಲ ಅದಕ್ಕೆ ತಗಲುವ ವೆಚ್ಚವನ್ನೆಲ್ಲ ಸ್ಕಾಲರ್ಶಿಪ್ ರೀತಿಯಲ್ಲಿ ಕೊಡಲು ಮುಂದಾದರು.
* ನನ್ನ ಮೇಲಿನ ಅಭಿಮಾನದಿಂದ ತಮ್ಮ ಮಗಳು ಹಾಗೂ ಮಗನನ್ನು ನಮ್ಮ ಕಾಲೇಜಿಗೆ ಕಳಿಸಿದರು.
* ಪ್ರಥಮ ಸಲ ನಾನು ಅಮೇರಿಕೆಗೆ ತೆರಳುವ ಮುನ್ನ YOGA SHIBIRA ಎಂಬ ಪುಸ್ತಿಕೆಯನ್ನು ನಾನು ಬರೆದೆ. ಆ ಪುಸ್ತಕ ಬರೆಸಿದ ಶ್ರೇಯ ಕಿಣಿಯವರಿಗೆ ಸಲ್ಲುತ್ತದೆ. ಅವರು ಯೋಗಾಭ್ಯಾಸದ ಪ್ರಥಮ ಶಿಷ್ಯರಾಗಿದ್ದರು.

English summary
Memories of ML Dahalunkar College by Kannada columnist GV Kulkarni, Mumbai. GV Kulkarni remembers another student of his, Mr MV Kini (Vasanth).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X