• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಢಾಣೂಕರ್ ಕಾಲೇಜಿನ ನೆನಪುಗಳು - ಭಾಗ 4

By Prasad
|

ಮುಂಬೈನ ಎಮ್ಎಲ್ ಢಾಣೂಕರ್ ಕಾಲೇಜಿನಲ್ಲಿ ಲೇಖಕ ಜೀವಿ ಕುಲಕರ್ಣಿಯವರು ಕಳೆದ ಎಂದೂ ಮರೆಯದ ದಿನಗಳ ನೆನಪುಗಳ ಮೆರವಣಿಗೆ ಮುಂದುವರಿದಿದೆ. ಕಾಲೇಜಿನಲ್ಲಿನ ಆತ್ಮೀಯ ವಾತಾವರಣ, ಕನ್ನಡ ವಿದ್ಯಾರ್ಥಿಗಳು, ತಾವು ಬರೆದು ಪ್ರದರ್ಶಿಸಿದ ನಾಟಕಗಳ ಬಗ್ಗೆ ಅಂಕಣಕಾರರು ಇಲ್ಲಿ ಬರೆದಿದ್ದಾರೆ.

* ಡಾ. 'ಜೀವಿ' ಕುಲಕರ್ಣಿ, ಮುಂಬೈ

ಎರಡನೆಯ ವರ್ಷ ಮತ್ತೆ ಪ್ರಾಂಶುಪಾಲ ಲಿಮೆ ಅವರು ನನ್ನನ್ನು ಕರೆಸಿ ಕೇಳಿದರು. ಈ ವರ್ಷ ಯಾವ ನಾಟಕ ಬರೆಯುತ್ತೀರಿ? ಎಂದು. ಹೊಸ ನಾಟಕವನ್ನು ಪ್ರಯೋಗಿಸಲು ತಯಾರಿ ನಡೆಸಿದ್ದೇನೆ ಎಂದು ಹೇಳಿದೆ. ಮೊದಲನೆಯ ವರ್ಷ ಕನ್ನಡ ನಾಟಕದ ಯಶಸ್ಸಿನಿಂದಾಗಿ ಪ್ರೇಕ್ಷರಲ್ಲಿ ಹೆಚ್ಚಿನ ಕುತೂಹಲವಿತ್ತು. ನಾನು ಪ್ರಜಾಪ್ರಭುತ್ವ ಎಂಬ ನಾಟಕವನ್ನು ಬರೆದೆ. ಹೆಚ್ಚು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡುವ ಹೆಚ್ಚು ದೃಶ್ಯಗಳಿರುವ ನಾಟಕ ಬರೆಯಲು ವಸ್ತು ಹುಡುಕತೊಡಗಿದೆ.

ಮಾಧವ ಕಾಮತ್ ಎಂಬ ಒಬ್ಬ ವ್ಯಕ್ತಿ ನನ್ನ ಹಾಸ್ಟೇಲ್ ರೂಮಿಗೆ ಆಗಾಗ ಬರುತ್ತಿದ್ದರು. ಅವರು ನನ್ನ ಸಾಹಿತ್ಯಾಭಿಮಾನಿಯಾಗಿದ್ದರು. ಅವರು ಅರ್ಥಶಾಸ್ತ್ರದಲ್ಲಿ ಎಂ.ಎ. ಪದವೀಧರರಾಗಿದ್ದರು. ಒಂದು ಶಿಪ್ಪಿಂಗ್ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದರು. ಅವರು ಪರೇಲ್‌ನಲ್ಲಿರುವ ಬಂಗಾಲಿ ಅಸೋಸಿಯೇಶನ್ನಿಗೆ ಹೋಗಿ ಬಂಗಾಲಿ ಕಲಿಯುತ್ತಿದ್ದರು. ಒಮ್ಮೆ ಅವರು ನನಗೆ ಶ್ರೀವಳ್ಳಿ ಕಣ್ಣನ್ ಎಂಬ ತಮಿಳು ಲೇಖಕ ಬರೆದ ಕೊನೆಗೆ ಬಂದವ ಎಂಬ ಕತೆ ಓದಿ ತೋರಿಸಿದರು. ಅದರಿಂದ ಸ್ಫೂರ್ತಿ ಪಡೆದು ನಾನು ಪ್ರಜಾಪ್ರಭುತ್ವ ನಾಟಕದ ಕತೆ ಹೆಣೆದೆ.

ಮುಂಬೈಯಲ್ಲಿಯ ಒಂದು ಬೀದಿ ಈ ನಾಟಕದ ಕ್ರಿಯೆ ನಡೆಯುವ ಸ್ಥಳ. ಮುನಸಿಪಲ್ ಕರ್ಮಚಾರಿಗಳು ಸ್ಟ್ರೈಕ್‌ನಿಂದಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ರಸ್ತೆಯ ಬದಿಯಲ್ಲಿ ಒಂದು ನಾಯಿಯ ಶವ ಬಿದ್ದಿದೆ. ಕೊಳೆತು ನಾರುತ್ತಿದೆ. ಜನರು ನೋಡುತ್ತಾರೆ, ಹೇಸಿಕೆಪಡುತ್ತಾರೆ. ಎಲ್ಲರೂ ಮುನಸಿಪಲ್ ಕಾರ್ಪೊರೇಶನ್ನಿನ ಬೇಜವಾಬ್ದಾರಿಯ ಬಗ್ಗೆ ಮಾತಾಡುತ್ತಾರೆ. ಭ್ರಷ್ಟ ನಾಯಕರ ಬಗ್ಗೆ, ಕೆಟ್ಟ ದೇಶದ ಬಗ್ಗೆ, ವೈಫಲ್ಯಗೊಂಡ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುತ್ತಾರೆ. ಆದರೆ ಯಾರಿಗೂ ತಮ್ಮ ಜವಾಬ್ದಾರಿ ಏನು, ತಾವೇನು ಮಾಡಬೇಕೆಂಬುದೇ ಹೊಳೆಯುವುದಿಲ್ಲ. ಮೊದಲ ದೃಶ್ಯದಲ್ಲಿ ಆ ದಾರಿಯಲ್ಲಿ ಹಾಯ್ದು ಹೋಗುವ ಕಾಮ್ರೆಡ್ ಗಣೇಶ್ ಅ ಹಾಗೂ ಮಿಲ್ ಕೂಲಿಕಾರರು ಬರುತ್ತಾರೆ. ಸೋವಿಯಟ್ ರಶಿಯಾದ ರಸ್ತೆಗಳು ಸ್ವಚ್ಛವಾಗಿವೆ ಅನ್ನುತ್ತಾರೆ. ರಸ್ತೆ, ನಗರ, ದೇಶ ಸುಧಾರಿಸಬೇಕಾದರೆ ಕಮ್ಯುನಿಜಂ ಒಂದೇ ಉಪಾಯ ಎನ್ನುತ್ತಾರೆ. ನಾಯಿ ಸತ್ತದ್ದು ಟ್ರಕ್ಕು ಹಾಯ್ದೊ, ಕಾರ್ ಡಿಕ್ಕಿಹೊಡೆದೋ ಎಂದು ಕಾರ್ಮಿಕರು ಚರ್ಚಿಸುತ್ತಾರೆ. ಪಾರ್ಟಿ ಮೀಟಿಂಗಿಗೆ ತೆರಳುತ್ತಾರೆ.

ನಂತರ ಆ ದಾರಿಯಲ್ಲಿ ಹಾಯ್ದು ಹೋದ ಮಡಿವಂತ ಭಟ್ಟರು ನಾಯಿಯ ಸ್ಪರ್ಶವಾದುದರಿಂದ ಮೈಲಿಗೆಯಾಯಿತು ಎಂದು ಗೋಳಿಡುತ್ತಾರೆ. ಅವರ ಪೂಜೆಯ ಮನೆಯ ಹುಡುಗ, ಕಾಲೇಜು ವಿದ್ಯಾರ್ಥಿ, ಅವರನ್ನು ಮೈಲಿಗೆಯಾದ ಸ್ಥಿತಿಯಲ್ಲಿ ನೋಡುತ್ತಾನೆ. ಅಕಳ ಶವ ಅಲ್ಲಿ ಬಿದ್ದಿದ್ದರೆ ಮೈಲಿಗೆಯಾಗುತ್ತಿರಲಿಲ್ಲವೇ ಎಂದು ಕೇಳುತ್ತಾನೆ. ನಾಯಿ ಹೇಗೆ ಕೀಳುಪ್ರಾಣಿ ಎಂದು ಅವರೊಡನೆ ವಾದಿಸುತ್ತಾನೆ. ಧರ್ಮರಾಜನಿಗೆ ಸ್ವರ್ಗದ ದಾರಿ ತೋರಿಸಿದ್ದು ನಾಯಿಯೇ ಅಲ್ಲವೇ? ದತ್ತಾತ್ರೇಯನ ಫೋಟೋದಲ್ಲಿರುವ ನಾಯಿಗಳು ಪವಿತ್ರವಲ್ಲವೇ? ಎಂದು ವಾದಿಸುತ್ತಾನೆ. ಅವರು ತೆರಳುತ್ತಾರೆ.

ನಂತರ ಮಹಿಳಾ ಮಂಡಲದ ಸಭೆಗೆ ತೆರಳುತ್ತಿದ್ದ ಉಷಾ ಮತ್ತು ರಜನಿ ಮುನ್ಸಿಪಾಲಿಟಿಯ ಬೇಜವಾಬ್ದಾರಿಯ ಬಗ್ಗೆ ಒಂದು ರೆಸಲ್ಯೂಶನ್ ಪಾಸು ಮಾಡಿ ಪೇಪರಿಗೆ ಕಳಿಸಬೇಕೆನ್ನುತ್ತಾರೆ. ಗಾಂಧಿ ಜಯಂತಿಯ ದಿನ ಕೊಳೆಗೇರಿಯಲ್ಲಿ ಕಸಗೂಡಿ ಫೋಟೋ ತೆಗೆಸಿಕೊಂಡ ಮಹಿಳೆಯರು ಮಾತಾಡುವ ರೀತಿ ಅವರ ಡಾಂಭಿಕತೆಯನ್ನು ಎತ್ತಿ ತೋರಿಸುತ್ತದೆ. ನಂತರ ಇಬ್ಬರು ಕಾಲೇಜು ಪ್ರಾಧ್ಯಾಪಕರು ರಸ್ತೆಯ ಶೋಚನೀಯ ಸ್ಥಿತಿಯ ಬಗ್ಗೆ ಚರ್ಚಿಸುತ್ತಾರೆ. ಮಾಂಸಹಾರ ಏಕೆ ತ್ಯಾಜ್ಯ ಎಂದು ಚರ್ಚಿಸುತ್ತಾರೆ. ವಿಶ್ವಾಮಿತ್ರ ಕೂಡ ಒಮ್ಮೆ ನಾಯಿಯ ಮಾಂಸ ತಿಂದಿದ್ದ, ಭವಭೂತಿಯ ಸಂಸ್ಕೃತ ನಾಟಕದಲ್ಲಿ ಗೋಮಾಂಸವನ್ನು ವಶಿಷ್ಠರ ಆಶ್ರಮವಾಸಿಗಳು ತಿಂದಪ್ರಸಂಗದ ವರ್ಣನೆ ಬಂದುದನ್ನು ಚರ್ಚಿಸುತ್ತಾರೆ, ತೆರಳುತ್ತಾರೆ.

ನಂತರ ಅದೇ ದಾರಿಯಿಂದ ಹೋಗುವ ವಕೀಲರು, ಡಾಕ್ಟರರು ಮಾತಾಡುತ್ತಾರೆ. ವಕೀಲರು ಭಾರತದ ಸಂವಿಧಾನ, ವ್ಯಕ್ತಿಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಸೋಲಿನ ಬಗ್ಗೆ ಚರ್ಚಿಸಿದರೆ, ಡಾಕ್ಟರರು ಮಲಿನತೆಯಿಂದಾಗುವ ರೋಗಗಳ ಬಗ್ಗೆ ಮಾತಾಡುತ್ತಾರೆ. ಹೊಲಸು ದೇಶದಲ್ಲಿ ವಾಸಿಸುವುದಕ್ಕಿಂತ ವಿದೇಶದಲ್ಲಿ ನೆಲಸುವುದೇ ಒಳ್ಳೆಯದು ಎನ್ನುತ್ತಾರೆ. ಅವರನ್ನು ಕಂಡ ಖಾದೀವಸ್ತ್ರಧಾರೀ ಸಮಾಜ ಸೇವಕ ತಾನು ಪತ್ರಿಕೆಗೆ ಗುಪ್ತನಾಮದಿಂದ (ಹುಡುಗಿಯ ಹೆಸರಿನಲ್ಲಿ) ಪತ್ರ ಬರೆಯಲು ಹೊರಟಿರುವುದಾಗಿ ಹೇಳುತ್ತಾನೆ. ತನ್ನ ನಿಜವಾದ ನಾಮದಲ್ಲಿ ಪತ್ರ ಬರೆಯದಿರಲು ಕಾರಣ ತಾನು ಕೆಲಸ ಮಾಡುವ ಆಫೀಸು ಮುನಸಿಪಲ್ ಕಾರ್ಪೋರೇಶನ್ನಿಗೆ ಅಧೀನವಾಗಿದೆ ಎನ್ನುತ್ತಾನೆ. ತನ್ನ ನಿಜ ಹೆಸರು ಗೊತ್ತಾದ್ರೆ ಕೆಲಸಕ್ಕೆ ತೊಂದರೆ. ಪ್ರತಿಯೊಂದು ದೃಶ್ಯದ ಮೊದಲು ನಿರೀಕ್ಷಕ ಬರುತ್ತಾನೆ, ಮುಂದೆ ಬರುವ ಬರುವ ಪಾತ್ರ ಹಾಗೂ ಸನ್ನಿವೇಶಗಳ ಬಗ್ಗೆ ವ್ಯಾಖ್ಯಾನ (ಕಮೆಂಟರಿ) ನೀಡುತ್ತಾನೆ.

ಕೊನೆಗೆ, ಆರನೆಯ ದೃಶ್ಯದಲ್ಲಿ, ಒಬ್ಬ ಸಾಮಾನ್ಯ ಕೂಲಿಯಾಳು ಆ ಹಾದಿಯಲ್ಲಿ ಹೋಗುತ್ತಿದ್ದಾನೆ. ಕಾಯಿಲೆಯಿಂದ ಬಳಲುವ ತನ್ನ ಮಗನಿಗೆ ಔಷಧಿ ಒಯ್ಯುತ್ತಿದ್ದಾನೆ. ನಾಯಿಯ ಶವವನ್ನು ಕಂಡು, ಪರಿಸರ ದೂಷಿತವಾದುದನ್ನು ನೋಡಿ ಅಲ್ಲಿ ನಿಲ್ಲುತ್ತಾನೆ. ಮಾತಾಡುವುದಿಲ್ಲ. ರಸ್ತೆಯ ಬದಿಯಲ್ಲಿ ಒಂದು ತಗ್ಗು ತೋಡಿ ಆ ನಾಯಿಯ ಶವವನ್ನು ನೆಲದಲ್ಲಿ ಹೂಳುತ್ತಾನೆ. ಯಾವುದೇ ಪ್ರತಿಫಲ, ಪ್ರಶಂಸೆ ಬಯಸದೇ ಮುಂದೆ ತನ್ನ ದಾರಿ ಹಿಡಿಯುತ್ತಾನೆ. ಅವನು ಈ ಕಾಯಕ ಮಾಡುತ್ತಿರುವಾಗ ನಿವೇದಕನ ಹಿನ್ನೆಲೆಯಲ್ಲಿಯ ಮಾತು ಅರ್ಥಪೂರ್ಣವಾಗಿರುತ್ತದೆ. ಅವನು ಹೇಳುತ್ತಾನೆ:

ಮುಂಜಾನೆಯಿಂದ ಸಂಜೆಯವರೆಗೆ ನೂರಾರು ಜನ ಈ ಬೀದಿಯಲ್ಲಿ ನಡೆದಾಡಿದ್ದಾರೆ. ಆದರೆ ಎಲ್ಲರೂ ತಮ್ಮ ಪ್ರತೀಕಾರವೆಂಬಂತೆ ಭಾಷಣವನ್ನೇ ಬಿಗಿದಿದ್ದಾರೆ. ಈಗ ಸಂಜೆಯಾಗಿದೆ. ಯಾವನೋ ಒಬ್ಬ ಕೂಲಿಕಾರ ಬರುತ್ತಿದ್ದಾನೆ. ದಿನದ ಶ್ರಮದ ತರುವಾಯ ಕಾಯಿಲೆಯಿಂದ ನರಳುತ್ತಿರುವ ತನ್ನ ಮಗುವಿಗೆ ಔಷಧಿ ಒಯ್ಯುತ್ತಿದ್ದಾನೆ. ಇವನೂ ನಾಯಿಯನ್ನು ನೋಡುತ್ತಾನೆ. ಒಂದು ದೊಡ್ಡ ಸಮಸ್ಯೆ ಇವನ ಮುಂದೆ ಇದೆ. ಒಂದೆಡೆ ರೋಗಿ ಮಗುವಿನ ಕರೆ. ಇನ್ನೊಂದೆಡೆ ತಾನು ಸಹಿಸಲಾರದಂತಹ ಅಸ್ವಚ್ಛತೆ- ನಾಯಿಯ ಶವ! ಔಷಧದ ಶೀಶೆಯನ್ನೂ, ಕಂಬಳಿಯನ್ನೂ ಒಂದು ಬದಿಯಲ್ಲಿ ಇಡುತ್ತಾನೆ. ಗುದ್ದಲಿಯನ್ನು ಕೈಯ್ಯಲ್ಲಿ ಹಿಡಿಯುತ್ತಾನೆ, ರಸ್ತೆಯ ಒಂದು ಬದಿಯಲ್ಲಿ ನೆಲವನ್ನು ಅಗೆಯಲು ಪ್ರಾರಂಭಿಸುತ್ತಾನೆ.

ಪಾಪ! ಇವನಿಗೆ ಈ ಕೆಲಸದಿಂದ ಯಾವ ವರಮಾನವೂ ದೊರೆಯುವುದಿಲ್ಲ. ಇವನ ಫೋಟೋ ಆಗಲಿ, ಹೆಸರಾಗಲಿ ಯಾವ ಪತ್ರಿಕೆಯಲ್ಲಿಯೂ ಬರುವುದಿಲ್ಲ. ಇತರರನ್ನು ಟೀಕಿಸುವುದು ಇವನ ಅಭ್ಯಾಸವಾಗಿಲ್ಲ. ಈ ನಾಯಿಯು ಟ್ರಕ್ಕಿನ ತಳಕ್ಕೆ ಸಿಕ್ಕು ಸತ್ತಿತೋ ಅಥವಾ ಕಾರಿನ ತಳಕ್ಕೆ ಸಿಕ್ಕು ಸತ್ತಿತೋ, ಇದನ್ನು ತಿಳಿಯಲು ಪ್ರಯತ್ನಿಸಿಲ್ಲ. ಮಡೀ-ಮೈಲಿಗೆಯೆಂದು ಕುಣಿಯುತ್ತ ಗೊಳ್ಳು ವೇದಾಂತವನ್ನು ನುಡಿಯುವುದು ಇವನ ಉದ್ಯೋಗವಾಗಿಲ್ಲ. ಗಾಂಧೀ ಜಯಂತಿಯ ದಿನ ಕಸ ಬಳಿಯಲು ಇವನು ಹೊಲಗೇರಿಗೆ ಹೋಗಿರಲಿಲ್ಲ. ಕಸಬರಿಗೆ ಹಿಡಿದ ಪೋಜ್ ಕೊಟ್ಟು ಫೋಟೋ ತೆಗೆಸಿಕೊಂಡಿರಲಿಲ್ಲ. ವಿಶ್ವಾಮಿತ್ರ ಒಮ್ಮೆ ನಾಯಿಯ ಮಾಂಸ ತಿಂದನೋ ಇಲ್ಲವೋ ಇವನು ತಿಳಿದಿಲ್ಲ. ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಡಾಕ್ಟರರಂತೆ ಇವನಿಗೆ ಭಾಷಣ ಬಿಗಿಯಲು ಬರುವುದಿಲ್ಲ. ವಕೀಲರಂತೆ ರಾಷ್ಟ್ರದ ಸಂವಿಧಾನವನ್ನು ಉದ್ಧರಿಸಲು ಇವನು ಶಕ್ತನಲ್ಲ. ಅವರ ವಾದದಂತೆ ಇವನು ಸುಶಿಕ್ಷಿತ ನಾಗರಿಕನೂ ಅಲ್ಲ. ಸಂಪಾದಕರಿಗೆ ಬೇರೆ ಹೆಸರಿಟ್ಟುಕೊಂಡು ಪತ್ರ ಬರೆಯುವ ಅಭ್ಯಾಸ ಇವನಿಗಿಲ್ಲ. ಇವನಿಗೆ ಒಂದು ವಿಷಯ ತಿಳಿದಿದೆ. ನಡುರಸ್ತೆಯಲ್ಲಿ ನಾಯಿಯ ಶವ ಈ ರೀತಿ ಬಿದ್ದಿರುವದರಿಂದ ನಾಲ್ಕು ಜನರಿಗೆ ಹಿತಕರವಲ್ಲ. ಇದನ್ನು ತಾನು ತೆಗೆಯಬೇಕು ಎಂಬುದು.

ಪ್ರಜಾಪ್ರಭುತ್ವ, ಜನತೆಯದೇ ರಾಜ್ಯ ಇರುವುದು ಒಬ್ಬರನ್ನೊಬ್ಬರು ದೂರುವುದಕ್ಕಲ್ಲ. ತಮ್ಮ ಹೊಣೆಯನ್ನು ಇನ್ನೊಬ್ಬರ ಮೇಲೆ ಹಾಕಲಿಕ್ಕಲ್ಲ. ಬೇಜವಾಬ್ದಾರಿಯಿಂದ ಟೀಕಿಸಲಿಕ್ಕಲ್ಲ. ಪ್ರತಿಯೊಬ್ಬ ನಾಗರಿಕನು ತನ್ನ ಹೊಣೆ ಇದೆ ಎಂಬುದನ್ನು ತಿಳಿಯಲಿಕ್ಕೆ ಇದೆಯಲ್ಲವೇ? ನಿಸ್ವಾರ್ಥ ಸೇವಾಬುದ್ಧಿ, ಕರ್ತವ್ಯ ಬುದ್ಧಿ ಕಲಿಸಿದರೆ ಬರುವದೇ? ಮಿಥ್ಯಾನುಕರಣೆಯಾದೀತು. ಭಾಷಣದಿಂದ ಬರುವದೇ? ಡಾಂಭಿಕತೆಯಾದೀತು. ಇದು ನಿಜವಾದ ಇರುವಿಕೆಯಿಂದ ಬಂದೀತು. ಜೀವನದ ಅನುಷ್ಠಾನದಿಂದ ಬಂದೀತು. ಪ್ರಜಾಪ್ರಭುತ್ವವು ಇರುವದು ಸ್ವೈರಾಚರಣೆಗಲ್ಲ. ಸಮಾಜಕ್ಕೆ ಹಿತವಾಗುವಂತಹ ಶಿಶ್ತಿನ ಜೀವನ ನಡೆಸಲಿಕ್ಕೆ ಇದೆ. ಈ ಸಾಮಾನ್ಯ ಕೂಲಿಕಾರನೇ ಪ್ರಜಾಪ್ರಭುತ್ವದ ತಿರುಳನ್ನರಿತ ನಾಗರಿಕನಲ್ಲವೇ? ನಿವೇದಕನ ಅರ್ಥಭರಿತ ಮಾತುಗಳೊಡನೆ ನಾಟಕದ ತೆರೆ ಬೀಳುತ್ತದೆ.

English summary
Memories of ML Dahalunkar College by Kannada columnist GV Kulkarni, Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X