ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವೀಯ ಸಂಬಂಧಗಳು ಎಷ್ಟು ಸಂಕೀರ್ಣ!

By * ಡಾ. 'ಜೀವಿ' ಕುಲಕರ್ಣಿ, ಮುಂಬೈ
|
Google Oneindia Kannada News

Dr. GV Kulkarni
ನಿತ್ಯಾನಂದ ದರ್ಶನ ಪತ್ರಿಕೆ ಸಂಪಾದಕನಾದಾಗ ಪ್ರತಿ ತಿಂಗಳು ಹಿರಿಯರೊಬ್ಬರ ಪರಿಚಯ ಮಾಡುತ್ತಿದ್ದೆ. 1961 ಪ್ರಜಾರಾಜ್ಯದ ದಿನ ಕೆ.ಕೆ.ಹೆಬ್ಬಾರರಿಗೆ ಪದ್ಮಶ್ರೀ ಗೌರವ ಬಂದಿತ್ತು. ಆಗ ಅವರಿಗೆ 49 ವಯಸ್ಸು. ಮಾರ್ಚ್ ತಿಂಗಳ ಸಂಚಿಕೆಯಲ್ಲಿ ಅವರ ಸಂದರ್ಶನ ಬರೆದೆ. ಕನ್ನಡ ಪಠ್ಯಪುಸ್ತಕಗಳಲ್ಲಿ ಅಗಲೇ ಹೆಬ್ಬಾರರ ವ್ಯಕ್ತಿಚಿತ್ರ ಪ್ರಕಟಗೊಂಡಿದ್ದವು. ಅವರು ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಚಿತ್ರಕಾರರಾಗಿದ್ದರು. ಮುಂಬೈಯ ಜೆ.ಜೆ.ಸ್ಕೂಲ್ ಆಫ್ ಆರ್ಟ್‌ನಲ್ಲಿ ಡಿಪ್ಲೊಮಾ ಪಡೆದು ಅಲ್ಲೇ ಪ್ರಾಧ್ಯಪಕರಾಗಿದ್ದರು. ಹೆಬ್ಬಾರರು 27ನೆಯ ವಯಸ್ಸಿನಲ್ಲೇ ಕಲಕತ್ತಾ ಲಲಿತ ಕಲಾ ಅಕೆಡೆಮಿಯ ಸುವರ್ಣ ಪದಕ ಗಳಿಸಿದ್ದರು. ತಮ್ಮ 37ರ ಪ್ರಾಯದಲ್ಲಿ ಚಿತ್ರಕಲೆಯಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಪ್ಯಾರಿಸ್, ಲಂಡನ್, ಸ್ವಿಝರ್‌ಲಂಡ್ ಪ್ರಯಾಣ ಮಾಡಿ ಅಲ್ಲಿ ತಮ್ಮ ಚಿತ್ರಗಳ ಪ್ರದರ್ಶನ ಮಾಡಿ ಕೀರ್ತಿ ಗಳಿಸಿದ್ದರು. ಇವರ ಕಲೆಯನ್ನು ಮೆಚ್ಚಿ ಇಂಗ್ಲಂಡಿಅನ ಒಬ್ಬ ಪತ್ರಕರ್ತ ಇವರ ಬಗ್ಗೆ ಬರೆದಿದ್ದ: Perhaps he is the bridge-builder between East and West that Indian Art has been awaiting so long ಎಂದು.

ಅವರ ಸಂದರ್ಶನದಲ್ಲಿ ಭಾವನಾವಶರಾಗಿ ಚಿತ್ರಕಲೆಗೂ ಸಂಗೀತಕ್ಕೂ ಇರುವ ಸಂಬಂಧದ ಬಗ್ಗೆ ನನಗೆ ಹೇಳಿದ್ದರು: ನಾನು ಚಿತ್ರ ತೆಗೆಯುತ್ತೇನೆ. ಆಗ ನನ್ನ ಮೈಯೆಲ್ಲ ಒಂದು ರೀತಿಯ ಸಂಗೀತವನ್ನೇ ಬರೆಯುತ್ತಿರುತ್ತದೆ. ಒಂದು ಸನ್ನಿವೇಶವನ್ನು ಚಿತ್ರಿಸುವಾಗ ಮಧುರವಾದ, ಕಟುವಾದ, ಕರುಣಾಜನಕವಾದ, ಶೃಂಗಾರದಿಂದ ಕೂಡಿದ, ಇನ್ನೂ ನಾನಾ ರಸಗಳಿಂದ ಕೂಡಿದ ಸಂಗೀತವನ್ನೇ ನಾನು ಕಾಗದದ ಮೇಲೆ ಮೂಡಿಸುತ್ತೇನೆಂಬ ಭಾವವಾಗುತ್ತದೆ. ಈಗ ನೋಡಿ, ಸಂಗೀತದಲ್ಲಿ ಸಪ್ತ ಸ್ವರಗಳಿವೆ. ನಮ್ಮಲ್ಲಿ ಸಪ್ತವರ್ಣ ಇವೆ. ಅಲ್ಲಿ ಗಂಟಲು ಮಾಧ್ಯಮ. ನಮ್ಮ ಕೈಯಲ್ಲಿಯ ಕುಂಚ ಮಾಧ್ಯಮ. ಅಲ್ಲಿ ಧ್ವನಿಯ ಕಂಪನವಿದ್ದರೆ, ಇಲ್ಲಿ ಕುಂಚದೆಳೆತವಿದೆ. ಅಲ್ಲಿ ತಾಳಗಳ ಜೋಡಣೆ ಇದ್ದರೆ, ಇಲ್ಲಿ ವರ್ಣಗಳ ಜೋಡಣೆ ಇದೆ. ಅಲ್ಲಿ ಕೋಮಲ ತೀವ್ರ ಇದೆ. ನಮ್ಮಲ್ಲಿಯೂ ಕೋಮಲ ತೀವ್ರ ವರ್ಣಗಳಿವೆ. ಆದರೆ ಒಂದು ಭೇದವಿದೆ. ಈಗ ಶಂಕರಾಭರಣ ಎಂದೊಡನೆ ಸಂಗೀತದಲ್ಲಿ ಇಷ್ಟೇ ಕೋಮಲ, ಇಷ್ಟೇ ತೀವ್ರ ಎಂಬ ಲೆಕ್ಕವಿದೆ. ಆದರೆ ಚಿತ್ರಕಲೆಯಲ್ಲಿ ಆ ಲೆಕ್ಕವಿಲ್ಲ.

ಢಾಣೂಕರ್ ಕಾಲೇಜಿನ ಕನ್ನಡ ಸಂಘದ ಉದ್ಘಾಟನೆಗೆ ನಾನು ಕೆ.ಕೆ.ಹೆಬ್ಬಾರರನ್ನು ಕರೆಯಬೇಕೆಂದಿರುವೆ ಎಂದು ಪ್ರಾಂಶುಪಾಲ ಲಿಮೆ ಅವರಿಗೆ ಹೇಳಿದಾಗ ಅವರಿಗೆ ಆದ ಆನಂದಕ್ಕೆ ಪಾರವೇ ಇರಲಿಲ್ಲ. ಅವರ ಹೆಸರನ್ನು ಕೇಳಿ ನಮ್ಮ ಸ್ಟಾಫ್‌ರೂಮಿನ ಪ್ರಧ್ಯಾಪಕರೆಲ್ಲ ರೋಮಾಂಚಿತಗೊಂಡರು. ಇಂಥ ಪ್ರಸಿದ್ಧ ವ್ಯಕ್ತಿ ಕಾಲೇಜಿನ ಕಾರ್ಯಕ್ರಮಕ್ಕೆ ಬರಬಹುದೇ ಎಂಬ ಶಂಕೆಯನ್ನು ವ್ಯಕ್ತಪಡಿಸಿದರು. ಆದರೆ ಹೆಬ್ಬಾರರು ನನ್ನ ಆಮಂತ್ರಣ ಸ್ವೀಕರಿಸಿ ಬಂದರು. ಬಹುಭಾಷಿಕ ಪ್ರೇಕ್ಷವೃಂದ ಅವರನ್ನು ನೋಡಲು ಹಾಗೂ ಅವರ ಮಾತನ್ನು ಕೇಳಲು ಉತ್ಸುಕರಾಗಿದ್ದರು. ಹೆಬ್ಬಾರರು ಪ್ರಾರಂಭದಲ್ಲಿ ಕನ್ನಡದಲ್ಲಿ ಮಾತಾಡಿ ಕನ್ನಡ ಸಂಘದ ಉದ್ಘಾಟನೆ ಮಾಡಿದರು. ನಂತರ ಕಲೆಯ ಬಗ್ಗೆ ಇಂಗ್ಲಿಷಿನಲ್ಲಿ ಮಾತಾಡಿದರು. ಕನ್ನಡ ಸಂಘದ ಕಾರ್ಯಕ್ರಮಗಳೆಲ್ಲ ಕನ್ನಡ ವಿದ್ಯಾರ್ಥಿಗಳು ತಲೆ ಎತ್ತಿಕೊಂಡು ಹೆಮ್ಮೆಯಿಂದ ಇತರರೊಂದಿಗೆ ವ್ಯವಹರಿಸುವ ಅವಕಾಶವನ್ನು ತಂದುಕೊಡುತ್ತಿದ್ದವು.

ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ.ಗಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮೊದಲ ಎರಡು ವರ್ಷ ಒಂದು ಭಾರತೀಯ ಭಾಷೆ ಐಚ್ಛಿಕ ವಿಷಯವಾಗಿತ್ತು. ಕೆಲವು ಕಾಲೇಜುಗಳಲ್ಲಿ ಕನ್ನಡ ವಿಷಯ ಆಯ್ಕೆ ಮಾಡುವ ಸೌಲಭ್ಯವಿತ್ತು. ಢಾಣೂಕರ್ ಕಾಮರ್ಸ್ ಕಾಲೇಜಿನಲ್ಲಿ ಎಫ್.ವಾಯ್. ಬಿ.ಕಾಂ., ಎಸ್.ವಾಯ್. ಬಿಕಾಂ., ಕ್ಲಾಸ್‌ಗಳು ಸೇರಿ ಸುಮಾರು ನೂರು ಕನ್ನಡ ವಿದ್ಯಾರ್ಥಿಗಳಿದ್ದರು. ಅಂತಿಮ ಎರಡು ವರ್ಷ ಅವರಿಗೆ ಯಾವುದೇ ಭಾಷೆಯ ಅಭ್ಯಾಸವಿರಲಿಲ್ಲ. ವಾರದಲ್ಲಿ ನನಗೆ ನಾಲ್ಕು ಕ್ಲಾಸು ಕನ್ನಡ ಕಲಿಸಲಿಕ್ಕೆ ಇದ್ದವು. ಕನ್ನಡ ವಿದ್ಯಾರ್ಥಿಗಳೆಲ್ಲ ಸಾಮಾನ್ಯವಾಗಿ ಕೆಲಸಮಾಡುತ್ತ ಓದುವ (ಅರ್ನರ್-ಲರ್ನರ್) ವಿದ್ಯಾರ್ಥಿಗಳು. ಹೆಚ್ಚಿನವರು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಹೊಟೇಲುಗಳಲ್ಲಿ, ಖಾಸಗೀ ಕಂಪನಿಗಳಲ್ಲಿಯೂ ಕೆಲಸ ಮಾಡುವವರು ಇದ್ದರು. ವಿದ್ಯಾರ್ಥಿಗಳ ವಯಸ್ಸು 18ರಿಂದ 25 ಇತ್ತು. ನನಗೆ ಆಗ 25 ವರ್ಷ.

ವಿದ್ಯಾರ್ಥಿಗಳ ಅಭಿಮಾನ : ಪ್ರಾಪ್ತೇಷು ಷೋಡಷೇ ವರ್ಷೇ ಪುತ್ರನನ್ನೂ ಮಿತ್ರನಂತೆ ಕಾಣಬೇಕೆಂದು ಸಂಸ್ಕೃತ ಸುಭಾಷಿತವಿದೆ. ಗುರು ತಂದೆಯ ಸ್ಥಾನದಲ್ಲಿದ್ದರೆ ಶಿಷ್ಯ ಮಕ್ಕಳ ಸ್ಥಾನದಲ್ಲಿರುತ್ತಾನೆ. ನಾನು ನನ್ನ ಎಲ್ಲ ವಿದ್ಯಾರ್ಥಿಗಳನ್ನೂ ಮಿತ್ರರಂತೆ ಗೌರವಿಸುತ್ತಿದ್ದೆ. ಗಣಿತ, ವಿಜ್ಞಾನದ ವಿಷಯದಂತೆ ಕನ್ನಡ ಕಠಿಣ ವಿಷಯವಾಗಿರಲಿಲ್ಲ. ಕನ್ನಡ ಕ್ಲಾಸು ತಪ್ಪಿಸಿದರೂ ವಿದ್ಯಾರ್ಥಿಗಳು ಪಾಸಾಗಬಹುದಾಗಿತ್ತು. ಹಿಂದಿ, ಮರಾಠಿ, ಗುಜರಾತಿ ಕ್ಲಾಸುಗಳಲ್ಲಿ ಅರ್ಧದಟ್ಟು ವಿದ್ಯಾರ್ಥಿಗಳು ಕ್ಲಾಸಿಗೆ ಬರುತ್ತಲೇ ಇರಲಿಲ್ಲ. ಆ ದಿನಗಳಲ್ಲಿ ಕಾಲೇಜಿನ ಕ್ಲಾಸಿಗೆ ಚಕ್ಕರ್ ಕೊಟ್ಟು ಕ್ಯಾಂಟೀನಿನಲ್ಲಿ ಕುಳಿತು ಹರಟೆ ಹೊಡೆಯುವ ವಿದ್ಯಾರ್ಥಿಗಳೂ ಇದ್ದರು. ಕನ್ನಡ ವಿದ್ಯಾರ್ಥಿಗಳು ತಮ್ಮ ನಾಡಿನಿಂದ ದೂರ ಬಂದುದರಿಂದ ತಮ್ಮ ಭಾಷೆಯ ಬಗ್ಗೆ ಇತರ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಅಭಿಮಾನ ಉಳ್ಳವರಾಗಿದ್ದರು. ನಮ್ಮ ಕ್ಲಾಸು ಯಾವಾಗಲೂ ತುಂಬಿರುತ್ತಿತ್ತು ಆದರಿಂದ ನಮಗೆ ಕಲಿಸಲು ಹೆಚ್ಚಿನ ಉತ್ಸಾಹ ಬರುತ್ತಿತ್ತು.

ಒಬ್ಬ ಬುದ್ಧಿವಂತ ಹುಡುಗ, ಮುಂದಿನ ಬೆಂಚಿನಲ್ಲಿ ಕುಳಿತುಕೊಳ್ಳುವ ಹುಡುಗ, ಏನೇನೋ ಅಡ್ಡ ಪ್ರಶ್ನೆ ಕೇಳಿದ, ವಾದಿಸಿದ. ನನಗೆ ಕೋಪ ಬಂದು ಅವನನ್ನು ಕ್ಲಾಸಿನಿಂದ ಹೊರಗೆ ಹಾಕಿದೆ. ನೀನು ಬಹಳ ಬುದ್ಧಿವಂತ ಎಂದು ಭಾವಿಸಿದ್ದರೆ ನೀನು ಕ್ಲಾಸಿಗೆ ಬರುವ ಅವಶ್ಯಕತೆ ಇಲ್ಲ ಎಂದೆ. ಅವನು ಹೊರಟು ಹೋದ. ಇತರ ವಿದ್ಯಾರ್ಥಿಗಳು ಅವನನ್ನು ಕರೆತರಲು, ಬುದ್ಧಿಹೇಳಲು ಹೊರಗೆ ಹೊರಡಲು ಅನುವಾದರು. ನಾನು ಬೇಡ ಎಂದೆ. ನಾನು ಕ್ಲಾಸಿನಿಂದ ಹೊರಗೆ ಬಂದಾಗ ಹೊರಗಿನ ಗ್ಯಾಲರಿಯಲ್ಲಿ ನಿಂತೆ. ಆಕಾಶದೆಡೆ ಶೂನ್ಯ ದೃಷ್ಟಿಯಿಂದ ನೋಡಿದೆ. ನನಗೆ ಅವಮಾನವಾಗಿತ್ತು. ಒಂದೆರಡು ಹನಿ ಕಣ್ಣೀರು ಬಂದವು. ಸುಧಾರಿಸಿಕೊಂಡು ಸ್ಟಾಫ್‌ರೂಮಿಗೆ ಹೋದೆ. ಆ ಹುಡುಗ ಒಂದೆರಡು ವಾರ ನನ್ನ ಕ್ಲಾಸಿಗೆ ಬರಲಿಲ್ಲ.

ಮೂರನೆಯ ವಾರ ನನ್ನ ಕ್ಲಾಸು ಪ್ರಾರಂಭವಾಗುವುದಕ್ಕೆ ಮುಂಚೆ ಅವನು ನಮ್ಮ ಸ್ಟಾಫ್‌ರೂಮಿಗೆ ಬಂದ. ಸರ್, ಸ್ವಲ್ಪ ಹೊರಗೆ ಬನ್ನಿರಿ, ನಿಮ್ಮೊಡನೆ ಮಾತಾಡಬೇಕಿದೆ ಎಂದ. ನಾನು ಹೊರಗೆ ಬಂದೆ. ಅವನು ಗಟ್ಟಿಯಾಗಿ ನನ್ನ ಪಾದ ಸ್ಪರ್ಶ ಮಾಡಿ, ನನ್ನನ್ನು ಕ್ಷಮಿಸಿ ಸರ್, ಎಂದವನೆ ಕಣ್ಣೀರಿಟ್ಟ. ನಾನು ಅವನನ್ನು ಎಬ್ಬಿಸಿ, ಅಪ್ಪಿಕೊಂಡೆ. ನಾನು ನಿಮ್ಮ ಕ್ಲಾಸಿಗೆ ಬರಲು ಅಪ್ಪಣೆ ಕೊಡಿ ಎಂದ. ಏನೋ ಕೋಪದ ಭರದಲ್ಲಿ ಬರಬೇಡ ಎಂದಿದ್ದೆ. ನಿನಗೆ ಯಾವಾಗಲೂ ಕ್ಲಾಸಿಗೆ ಬರಲು ಸ್ವಾಗತ ಇದ್ದೇ ಇದೆ ಎಂದು ಭಾವಪರವಶನಾದೆ. ಕಾಲೇಜಿನಲ್ಲಿ ನಡೆದ ಸುದ್ದಿಯನ್ನು ಅವನು ತನ್ನ ಅಣ್ಣನಿಗೆ ಹೇಳಿದ್ದನಂತೆ. ಅಣ್ಣ ಅವನಿಗೆ ಬೈದು ಬುದ್ಧಿಹೇಳಿದ್ದನಂತೆ. ಮುಂದೆ ಅವನು ನನ್ನ ಅತ್ಯಂತ ನಚ್ಚಿನ ವಿದ್ಯಾರ್ಥಿಯಾದ. ನಾನು ಪ್ರಥಮ ಕನ್ನಡ-ಮರಾಠಿ ಏಕಾಂಕ ಬರೆಯಲು ತೊಡಗಿದಾಗ ಅವನನ್ನೇ ನಾಯಕನನ್ನಾಗಿ ನಾಟಕ ಬರೆದೆ. ಅವನೇ ಗೋಪಾಲ ದೇವಾಡಿಗ.

ಮಾನವೀಯ ಸಂಬಂಧಗಳು : ಈ ನೆನಪುಗಳನ್ನು ನಾನು ಇಲ್ಲಿ ದಾಖಲಿಸುವ ಉದ್ದೇಶವೆಂದರೆ ಮಾನವೀಯ ಸಂಬಂಧಗಳು ಎಷ್ಟು ಸಂಕೀರ್ಣವಾಗಿರುತ್ತವೆ ಎಂಬುದನ್ನು ತೋರಿಸಲು. ನಾನು ಮೂರು ವರ್ಷ ಮಾತ್ರ ಢಾಣೂಕರ್ ಕಾಲೇಜಿನಲ್ಲಿ ಇದ್ದೆ. ಪ್ರತಿ ವರ್ಷ ಕಾಲೇಜಿನ ಸ್ನೇಹ ಸಮ್ಮೇಲನಕ್ಕೆ ಹೊಸಹೊಸ ನಾಟಕಗಳನ್ನು ಬರೆದೆ. ಗೋಪಾಲ ಎಲ್ಲ ನಾಟಕಗಳಲ್ಲೂ ಪಾತ್ರ ವಹಿಸಿದ. ನನಗೆ 1964ರಲ್ಲಿ ಪೂರ್ಣಾವಧಿಯ ಕೆಲಸ ಅಂಧೇರಿಯ ಎಂ.ವಿ.ಎಲ್.ಯು ಹಾಗೂ ಚೀನಾಯ್ ಕಾಲೇಜುಗಳಲ್ಲಿ ದೊರೆಯಿತೆಂದು ಇಲ್ಲಿಯ ಕೆಲಸ ಬಿಟ್ಟೆ. ನನಗೆ ಬೀಳ್ಕೊಡುವಾಗ ಕೆಲ ವಿದ್ಯಾರ್ಥಿಗಳಂತೂ ಅತ್ತುಬಿಟ್ಟರು. ಅವರಲ್ಲಿ ಗೋಪಾಲನೂ ಒಬ್ಬನಾಗಿದ್ದ. ನಾನು ಢಾಣೂಕರ್ ಕಾಲೇಜು ಸೇರಿದಾಗ ಗೋಪಾಲ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರಿದ್ದ. ಅವನದು ನಾಲ್ಕು ವರ್ಷದ ಅಭ್ಯಾಸ ಕ್ರಮವಾಗಿತ್ತು. ಕೊನೆಯ ಎರಡು ವರ್ಷ ಕನ್ನಡ ವಿಷಯ ಅವನಿಗೆ ಪಠ್ಯವಾಗಿರಲಿಲ್ಲ. ಆದರೂ ನಾಟಕ ಮತ್ತು ಇತರ ಚಟುವಟಿಕೆಗಳಿಂದಾಗಿ ನಮ್ಮ ಸಂಪರ್ಕ ಬರುತ್ತಿತ್ತು. ನಾನು ಕಾಲೇಜು ಬಿಟ್ಟದ್ದರಿಂದ ಅವನು ಕೂಡ ಕಾಲೇಜು ಬಿಟ್ಟು ನಾನು ಸೇರಿದ ಕಾಲೇಜನ್ನು ಸೇರಿದ. ಹಿಂದೆ ನನಗೆ ಅವಮಾನ ಮಾಡಿದ ಹುಡುಗನೊಬ್ಬ, ಮುಂದೆ ನಿಕಟವರ್ತಿಯಾಗಿ, ನನಗಾಗಿ ಕಾಲೇಜನ್ನೇ ಬಿಟ್ಟು ಬಂದದ್ದು ಸತ್ಯ ಕಥೆ, ಇದು ಕಟ್ಟುಕಥೆಗಿಂತ ವಿಚಿತ್ರವಾಗಿ ತೋರುತ್ತದೆ.

ಇಂಥ ಗುರುಪ್ರೇಮದ ಉದಾಹರಣೆಗಳು ಕ್ವಚಿತ್ತಾಗಿ ದೊರೆಯುತ್ತವೆ. ಚೀನಾಯ್ ಕಾಲೇಜಿನ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಬಹಳೇ ಕ್ರಿಯಾಶೀಲನಾಗಿ ದುಡಿದ. ಕಾಲೇಜಿನ ಇತರ ಪಠ್ಯೇತರ ಚಟವಟಿಕೆಗಳಲ್ಲೂ ಕ್ರಿಯಾಶೀಲನಾಗಿದ್ದ. ಅಲ್ಲಿಯ ವೈಸ್-ಪ್ರಿನ್ಸಿಪಾಲ್ ಬಿ.ಜಿ.ಅಯ್ಯರ್ ಅವನನ್ನು ಬಹುವಾಗಿ ಮೆಚ್ಚಿದ್ದರು. ಕಾಲೇಜಿನಲ್ಲಿ ಬೆಸ್ಟ್-ಸ್ಟುಡೆಂಟ್ ಆಫ್ ದಿ ಇಯರ್ ಬಹುಮಾನಕ್ಕಾಗಿ ನಾನು ಗೋಪಾಲನ ಹೆಸರನ್ನು ಸೂಚಿಸಿದ್ದೆ. ಗೋಪಾಲ ಶ್ರೇಷ್ಠ ವಿದ್ಯಾರ್ಥಿ ಎಂದು ಆಯ್ಕೆಯಾದಾಗ, ಅವನ ಹೆಸರು ನೋಟೀಸ್ ಬೋರ್ಡಿನಲ್ಲಿ ಪ್ರಕಟವಾದಾಗ, ಮೊದಲು ಸ್ಟಾಫ್ ರೂಮಿಗೆ ಬಂದು ನನ್ನ ಪಾದಕ್ಕೆರಗಿ, ಗುರುಗಳೆ ಇದು ನಿಮ್ಮ ಆಶೀರ್ವಾದದ ಫಲ ಎಂದು ವಿನಮ್ರನಾಗಿ ನುಡಿದಿದ್ದ. ಆಗ ನನ್ನ ಕಂಗಳಲ್ಲಿ ಆನಂದಾಶ್ರು ಬಂದವು.

ಈ ಘಟನೆಯನ್ನು ನಾನು ಗುರುಗಳಾದ ವಿ.ಕೃ.ಗೋಕಾಕರಿಗೆ ಒಮ್ಮೆ ಹೇಳಿದಾಗ ಅವರು ನಕ್ಕು ತಮ್ಮ ಅನುಭವ ನೆನಪಿಸಿಕೊಂಡರು. ಅವರು ಗುಜರಾತದ ವೀಸ್‌ನಗರ್ ಕಾಲೇಜು ಬಿಟ್ಟು ಕೊಲ್ಲಾಪುರಕ್ಕೆ ಬಂದಾಗ ಒಬ್ಬ ವಿದ್ಯಾರ್ಥಿ(ರಮೇಶ ಶಾಹ) ಇವರನ್ನು ಬೀಳ್ಕೊಡಲು ಸ್ಟೇಶನ್ನಿಗೆ ಬಂದವ, ದುಃಖ ತಾಳದೆ ಒಂದೆಸವನೆ ಕಣ್ಣೀರಿಟ್ಟಿದ್ದ, ಇವರೊಡನೆ ಟ್ರೇನಿನಲ್ಲಿ ಕೊಲ್ಲಾಪುರದವರೆಗೆ ಬಂದು ಬಿಟ್ಟಿದ್ದ. ನಂತರ ತನ್ನ ಊರಿನ ವೀಸನಗರ ಕಾಲೇಜು ಬಿಟ್ಟು ಕೊಲ್ಲಾಪುರದ ರಾಜರಾಮ ಕಾಲೇಜು ಸೇರಿದ್ದ. ಮನೆಯ ಹುಡುಗನಂತೆಯೇ ಬೆಳೆದಿದ್ದ.

English summary
Memories of ML Dahalunkar College by Kannada columnist GV Kulkarni, Mumbai. Down the memory lane Dr. Gurunath V Kulkarni remembers having interviewed KK Hebbar, famous artist from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X