• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಢಾಣೂಕರ್ ಕಾಮರ್ಸ್ ಕಾಲೇಜಿನ ನೆನಪುಗಳು

By Prasad
|

1961ರಿಂದ 1964ರ ವರೆಗೆ ಮೂರು ವರ್ಷಗಳ ಕಾಲ ವಿಲೇಪಾರ್ಲೆಯಲ್ಲಿರುವ ಪಾರ್ಲಾ ಕಾಲೇಜಿನ ಸೋದರ ಸಂಸ್ಥೆಯಾದ ಎಂ.ಎಲ್.ಢಾಣೂಕರ್ ಕಾಮರ್ಸ್ ಕಾಲೇಜಿನಲ್ಲಿ ಪಾರ್ಟ್‌ಟೈಮ್ ಪ್ರಾಧ್ಯಾಪಕನಾಗಿ ಕೆಲಸ ಮಾಡಿದೆ. ಅಲ್ಲಿಯ ಅನುಭವ ಕೂಡ ಅವಿಸ್ಮರಣೀಯವಾಗಿದೆ. ಅಲ್ಲಿಯ ಕೆಲಸಕ್ಕೆ ಸೇರುವ ಹಿನ್ನೆಲೆ ಕೂಡ ರೋಚಕವಾಗಿದೆ.

* ಡಾ. 'ಜೀವಿ' ಕುಲಕರ್ಣಿ, ಮುಂಬೈ

ಖಾಲ್ಸಾ ಕಾಲೇಜಿಗೆ ಸೇರಿದ ಪ್ರಾರಂಭದ ಕೆಲವು ತಿಂಗಳು ಪರೇಲ್‌ನಲ್ಲಿಯ ರಾತ್ರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಗಳ ದರ್ಶನವಾಯ್ತು. ಅವರ ಹೆಸರಿನಲ್ಲಿ ಒಂದು ಕನ್ನಡ ಮಾಸ ಪತ್ರಿಕೆಯ ಸಂಪಾದಕನಾಗುವ ಅವಕಾಶ ದೊರೆತಿತ್ತು. ಶಾಲೆಯ ಕೆಲಸ ಬಿಟ್ಟೆ. ಸ್ವಾಮಿ ನಿತ್ಯಾನಂದರು ಸ್ವರ್ಗಸ್ಥರಾದಾಗ ಆ ಪತ್ರಿಕೆಯು ನಿಂತು ಹೋಯಿತು. ಮತ್ತೆ ರಾತ್ರಿಶಾಲೆಗೆ ಕಲಿಸಲು ಹೋಗಲಿಕ್ಕೆ ಮನಸ್ಸಿರಲಿಲ್ಲ. ಇದಕ್ಕೆ ಕಾರಣವೆಂದರೆ ರಾತ್ರಿಶಾಲೆಯಲ್ಲಿ ಕಲಿಸಲು ನನಗೆ ಇಷ್ಟವಿರಲಿಲ್ಲ ಎಂದೇನಲ್ಲ. ಆದರೆ ಸಂಜೆಯ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತಿರಲಿಲ್ಲ. ಇನ್ನೊಂದು ಕಾಲೇಜಿನಲ್ಲಿ ಪಾರ್ಟ್‌ಟೈಮ್ ಕೆಲಸ ದೊರೆತರೆ ಒಳ್ಳೆಯದು ಎನ್ನಿಸಿತ್ತು. ಸ್ವಾಮಿಗಳ ಸಮಾಧಿಯ ಬಳಿಯಲ್ಲಿ ಕುಳಿತು ಇನ್ನೊಂದು ಕೆಲಸ ಕೊಡಿಸಲು ಬೇಡಿಕೊಂಡಿದ್ದೆ.

ಪಾರ್ಲಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನನ್ನ ಮಿತ್ರ ಎಸ್.ಎಸ್.ಬ್ಯಾತನಾಳರು ಪೂರ್ಣಾವಧಿಯ ಕನ್ನಡ ಪ್ರಾಧ್ಯಪಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಮಧುಮೇಹದ ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆ ಸೇರಿದ್ದರು. ಎರಡು-ಮೂರು ತಿಂಗಳು ಅವರು ಕೆಲಸಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ. ನನ್ನ ಹಿತೈಷಿಗಳಾದ ಪ್ರೊ.ಸಿ.ಎಂ.ಕುಲಕರ್ಣಿಯವರು ನನಗೆ ಒಂದು ಸಲಹೆ ನೀಡಿ ಡಾ| ನರಗುಂದ ಅವರ ಮುಖಾಂತರ ಪಾರ್ಲಾ ಕಾಲೇಜಿನ ಪ್ರಾಂಶುಪಾಲರನ್ನು ಭೆಟ್ಟಿಯಾಗಲು ಹೇಳಿದರು. ಪಾರ್ಲಾ ಕಾಲೇಜಿನಲ್ಲಿ ಕೆಮೆಸ್ಟ್ರಿ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದ ಡಾ| ನರಗುಂದ್ ಅವರ ಪರಿಚಯವಿಲ್ಲದ ಕನ್ನಡಿಗರು ವಿರಳ. ಹಾಗೆ ನೋಡಿದರೆ ನಾನು ಅವರನ್ನು ಮೊದಲು ನನ್ನ ವಿದ್ಯಾರ್ಥಿ ದೆಸೆಯಲ್ಲಿ ಧಾರವಾಡದಲ್ಲಿ ಕಂಡಿದ್ದೆ. ಅವರು ಪ್ರತಿ ದಿನ ವಾಯುವಿಹಾರಕ್ಕೆ ನುಗ್ಗೀಕೇರಿ ಹನುಮಂತ ದೇವರ ಗುಡಿಯ ವರೆಗೆ ನಾಲ್ಕು ಮೈಲು ನಡೆದುಹೋಗುತ್ತಿದ್ದರು. ನಾವು ಕೂಡ ಜನತಾ ಕಾಲೇಜಿಗೆ ನಡೆದುಕೊಂಡು ಹೋಗುವಾಗ ಅರ್ಧ ದಾರಿ ಡಾ| ನರಗುಂದ ಅವರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದೆವು. ಭಗವದ್ಗೀತೆಯ ಹದಿನೆಂಟು ಅಧ್ಯಾಯ ಅವರಿಗೆ ಕಂಠಗತವಾಗಿತ್ತು. ದಾರಿಯುದ್ದಕ್ಕೂ ಪಾರಾಯಣ ಮಾಡುತ್ತಿದ್ದರು.

ಧಾರವಾಡ ಬಿಟ್ಟ ಮೇಲೆ ಅವರು ಗುಜರಾತಿನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ವಿಕ್ರಮ್ ಸಾರಾಭಾಯಿ ಅವರ ವಿದ್ಯಾರ್ಥಿಯಾಗಿದ್ದರು. ನಿವೃತ್ತಿಯ ನಂತರ ಅವರು ಮುಂಬೈಯಲ್ಲಿ ಸ್ಥಾಯಿ ಆಗಿದ್ದರು. ಅವರಿಗೆ ಪಾರ್ಲಾ ಕಾಲೇಜಿನವರು ಗೌರವ ಪ್ರಾಧ್ಯಾಪಕ ಕೆಲಸ ನೀಡಿ ರಿಸರ್ಚ್ ವಿಭಾಗದ ಮುಖ್ಯಸ್ಥರನ್ನು ಮಾಡಿದ್ದರು. ನೂರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದಿದ್ದರು. ಅಂತಾರಾಷ್ಟ್ರೀಯ ಮನ್ನಣೆ ಪಡೆದ ಕನ್ನಡಿಗರಲ್ಲಿ ಅವರೊಬ್ಬರಾಗಿದ್ದರು. ನಾನು ಅವರನ್ನು ಭೆಟ್ಟಿಯಾದೆ, ನಾನು ಬಂದ ಕಾರಣ ವಿವರಿಸಿದೆ. ಅವರು ನನ್ನನ್ನು ಪ್ರಾಂಶುಪಾಲರ ಬಳಿಗೆ ಕರೆದೊಯ್ದರು. ಪ್ರೊ. ಬ್ಯಾತನಾಳರು ವಾಸಿಗೊಂಡು ಕೆಲಸಕ್ಕೆ ಬರುವವರೆಗೆ ಕನ್ನಡ ವಿದ್ಯಾರ್ಥಿಗಳ ಹಿತದ ದೃಷ್ಟಿಯಿಂದ ಅವರ ತರಗತಿಗಳನ್ನು ನಾನು ತೆಗೆದುಕೊಳ್ಳುವೆ ಎಂದು ಹೇಳಿದೆ. ಇದಕ್ಕೆ ಪ್ರತಿಯಾಗಿ ಯಾವ ಫಲಾಪೇಕ್ಷೆಯನ್ನೂ ಬಯಸುವುದಿಲ್ಲ ಎಂದೆ. ನನ್ನ ಸಲಹೆಗೆ ಪ್ರಾಂಶುಪಾಲ ಜೋಶಿಯವರು ಸಕ್ರಿಯವಾಗಿ ಪ್ರತಿಕ್ರಿಯೆ ತೋರಿದರು. ಅಷ್ಟೇ ಅಲ್ಲ, ಮಾಟುಂಗಾದಿಂದ ಬಂದು ಹೋಗುವ ಖರ್ಚು ತಾವು ಕೊಡುವುದಾಗಿ ಹೇಳಿದರು. ಪ್ರೊ.ಬ್ಯಾತನಾಳರು ಎರಡು ತಿಂಗಳಲ್ಲಿ ಗುಣಮುಖರಾಗಿ ಹಿಂದಿರುಗಿದರು. ಈ ಘಟನೆ ನಡೆದದ್ದು ಆರು ತಿಂಗಳ ಹಿಂದೆ.

ಖಾಲ್ಸಾದಲ್ಲಿ ನನಗೆ ಪ್ರಾರಂಭದ ಸಂಬಳ ರೂ.147 ಆಣೆ 8 ಇತ್ತು. ಢಾಣೂಕರ್ ಕಾಲೇಜಿನಲ್ಲಿ ರೂ.162 ಪ್ರಾರಂಭಕ್ಕೆ ಕೊಟ್ಟರು.
1961 ಅಗಸ್ಟ್ ತಿಂಗಳು ಇರಬೇಕು. ಇನ್ನೆಲ್ಲಿಯೂ ಕೆಲಸ ದೊರೆಯಲಿಕ್ಕಿಲ್ಲ ಎಂದು ವಾಪಸ್ ಶಾಲೆಯೊಂದನ್ನು ಸೇರಲು ಮಾನಸಿಕ ಸಿದ್ಧತೆ ಮಾಡಿದಾಗ ಡಾ| ನರಗುಂದ ಅವರಿಂದ ನನಗೊಂದು ಫೋನ್‌ಕಾಲ್ ಬಂತು. ನಾನು ಹಾಸ್ಟೆಲ್ ರೂಮಿನಲ್ಲಿದ್ದೆ. ಅವರಿಗೆ ನನ್ನ ಹಾಸ್ಟೆಲ್ ಫೋನ್ ನಂಬರ್ ಹೇಗೆ ದೊರಕಿತು ಎಂದು ಆಶ್ಚರ್ಯದಿಂದ ಕೇಳಿದಾಗ ನಮ್ಮ ಕಾಲೇಜಿನ ಪ್ರಿನ್ಸಿಪಾಲರು ಈ ನಂಬರ್ ಕೊಟ್ಟರೆಂದು ತಿಳಿಯಿತು. ಮರುದಿನ ಮುಂಜಾನೆ ಹತ್ತು ಗಂಟೆಗೆ ನನ್ನ ಎಲ್ಲ ಸರ್ಟಿಫಿಕೆಟ್‌ಗಳೊಂದಿಗೆ ತಮ್ಮನ್ನು ಕಾಣಲು ಕರೆದಿದ್ದರು. ನಾನು ಪಾರ್ಲಾ ಕಾಲೇಜಿಗೆ ಹೋದೆ. ಅವರು ನನ್ನನ್ನು ಬದಿಯ ಕಟ್ಟಡಕ್ಕೆ, ಅವರ ಸಂಸ್ಥೆಯವರೇ ನಡೆಸುತ್ತಿದ್ದ ಡಾಣೂಕರ್ ಕಾಮರ್ಸ್ ಕಾಲೇಜಿಗೆ, ಕರೆದುಕೊಂಡು ಹೋದರು. ಒಳಗೆ ಮೆನೆಜಿಂಗ್ ಕಮೀಟಿಯ ಸಭೆ ನಡೆದಿತ್ತು. ಪ್ರಾಂಶುಪಾಲ ಲಿಮೆ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಒಂದು ಮೀಟಿಂಗ್‌ನಲ್ಲಿ ಪ್ರಾಂಶುಪಾಲ ಲಿಮೆಯವರು ತಮ್ಮ ಕಾಲೇಜಿನಲ್ಲಿ 50 ಕನ್ನಡ ವಿದ್ಯಾರ್ಥಿಗಳು ತಮಗೆ ಕನ್ನಡ ಕಲಿಯುವ ಅವಕಾಶ ಕಲ್ಪಿಸಿ ಕೊಡಲು ಅರ್ಜಿಯ ಮೂಲಕ ಕೇಳಿದ್ದನ್ನು ಪ್ರಸ್ತಾಪಿಸಿದ್ದರು. ಅದಕ್ಕೆ ಜಾಹೀರಾತು ಕೊಡಬೇಕಾಗಿತ್ತು. ಅರ್ಧಕಾಲದ ಕೆಲಸಕ್ಕಾಗಿ ಮುಂಬೈಗೆ ಯಾರು ಬರುತ್ತಾರೆ? ಅವರ ವಸತಿಯ ಸೌಕರ್ಯ ಹೇಗಾಗುವುದು? ಮುಂತಾದ ಪ್ರಶ್ನೆ ಕೇಳಿ ಇದು ಸಾಧ್ಯವಿಲ್ಲದ್ದು ಎಂದಿದ್ದರಂತೆ. ಆಗ, 24 ಗಂಟೆಯೊಳಗೆ ಅವರಿಗೆ ಒಬ್ಬ ವಿದ್ಯಾರ್ಹತೆಯುಳ್ಳ ಪ್ರಾಧ್ಯಾಪಕನನ್ನು ಒದಗಿಸುವುದಾಗಿ ಅದೇ ಸಭೆಯಲ್ಲಿದ್ದ ಡಾ| ನರಗುಂದ್ ಅವರು ವಚನಕೊಟ್ಟಿದ್ದರಂತೆ. ನನ್ನ ಸಂದರ್ಶನ ನಾಟಕೀಯ ಸನ್ನಿವೇಶದಲ್ಲಿ ನಡೆದಿತ್ತು. ಅಂದೇ ನನಗೆ ಅಪಾಯಿಂಟ್‌ಮೆಂಟ್ ಪತ್ರ ಕೂಡ ದೊರೆತಿತ್ತು. ನನ್ನ ಖಾಲ್ಸಾ ಕಾಲೇಜಿನ ಟೈಂಟೇಬಲ್ಲಿಗೆ ಅನುಕೂಲವಾಗುವಂತೆ ಅಲ್ಲಿಯ ಪೀರಿಯಡ್‌ಗಳನ್ನು ಹೊಂದಿಸಿದರು. ವಾರದಲ್ಲಿ ಎರಡೇ ದಿನ ಅಲ್ಲಿಗೆ ಹೋಗಬೇಕಾಗುತ್ತಿತ್ತು. ಖಾಲ್ಸಾದಲ್ಲಿ ನನಗೆ ಪ್ರಾರಂಭದ ಸಂಬಳ ರೂ.147 ಆಣೆ 8 ಇತ್ತು. ಇಲ್ಲಿ ರೂ.162 ಪ್ರಾರಂಭಕ್ಕೆ ಕೊಟ್ಟರು. ಈ ಕೆಲಸ ದೊರೆಯಲಿಕ್ಕೆ ಕಾರಣ ನನ್ನ ಎರಡು ತಿಂಗಳ ಗೌರವಾನ್ವಿತ ಕೆಲಸದಷ್ಟೇ ಗುರು ನಿತ್ಯಾನಂದರ ಕೃಪೆಯೂ ಕೆಲಸ ಮಾಡಿತ್ತು ಎಂದು ನನಗೆನ್ನಿಸುತ್ತವೆ.

ಪ್ರಾ. ಲಿಮೆಯವರು ಮೂಲತಃ ಧಾರವಾಡದ ಸಮೀಪದಲ್ಲಿರುವ ಅಬ್ಬಿಗೇರಿಯವರು. ಅಬ್ಬೀಗೇರಿ ಎಂದೊಡನೆ ಡಾ| ಗಿರಡ್ಡಿ ಗೋವಿಂದರಾಜರ ನೆನಪಾಗುತ್ತದೆ. ಅವರೂ ಅಬ್ಬೀಗೇರಿಯವರೇ. ಲಿಮೆಯವರಿಗೆ ಅಲ್ಪಸ್ವಲ್ಪ ಕನ್ನಡ ಮಾತಾಡಲು ಬರುತ್ತಿತ್ತು. ಅವರ ಸಂಬಂಧಿಕರು ಕನ್ನಡದಲ್ಲಿ ಪತ್ರ ಬರೆಯುತ್ತಿದ್ದರು. ಪ್ರೊ.ಬ್ಯಾತನಾಳರನ್ನು ಕರೆಸಿ ಓದಿಸುತ್ತಿದ್ದರಂತೆ. ನಾನು ಅವರ ಕಾಲೇಜು ಸೇರಿದ ಮೇಲೆ ಆ ತೊಂದರೆ ತಪ್ಪಿತ್ತು. ಹೆಚ್ಚಿನ ಕನ್ನಡ ವಿದ್ಯಾರ್ಥಿಗಳು ನೌಕರಿ ಮಾಡುವವರೇ ಆಗಿದ್ದರು. ಮುಂಜಾನೆಯಲ್ಲಿ ಕ್ಲಾಸು ಇರುತ್ತಿದ್ದವು. ಕನ್ನಡ ವಿದ್ಯಾರ್ಥಿಗಳಲ್ಲಿ ಕಲಿಯುವುದರಲ್ಲಿ ಬಹಳ ಆಸಕ್ತಿ ಇತ್ತು. ಅವರಿಗೆ ಪಾಠ ಮಾಡುವುದೆಂದರೆ ಅದೊಂದು ಹಬ್ಬವಾಗಿತ್ತು. ಮೂರು ದಿನಗಳ ಕಾಲೇಜಿನ ವಾರ್ಷಿಕೋತ್ಸವ ಬಂತು. ದೊಡ್ಡ ಶಾಮಿಯಾನಾ ಹಾಕಿ ಸ್ಟೇಜ್ ನಿರ್ಮಿಸಲಾಗಿತ್ತು. ಲಿಮೆಯವರು ನನ್ನನ್ನು ಕರೆದು ಕೇಳಿದರು. ಒಂದು ದಿನ ಬಹುಭಾಷೆಗಳಲ್ಲಿ ಏಕಾಂಕ ನಾಟಕಗಳ ಪ್ರದರ್ಶನ ಇಟ್ಟುಕೊಂಡಿದ್ದೇವೆ. ಒಂದು ಕನ್ನಡ ಏಕಾಂಕವನ್ನು ನೀವು ಯಾಕೆ ಪ್ರದರ್ಶಿಸಬಾರದು. ಎಷ್ಟೇ ವೆಚ್ಚವಾದರೂ ಕಾಲೇಜಿನವರು ಭರಿಸುತ್ತೇವೆ. ನಿಮ್ಮ ಒಪ್ಪಿಗೆಯನ್ನು ಒಂದು ವಾರದೊಳಗೆ ನನಗೆ ತಿಳಿಸಿರಿ ಎಂದರು. ಅವರ ಮಾತು ನನಗೆ ಒಂದು ಅಹ್ವಾನ ಹಾಗೂ ಅವಕಾಶವನ್ನು ಏಕಕಾಲಕ್ಕೆ ಒದಗಿಸಿದ್ದವು.

ಪೂರ್ತಿ ಕನ್ನಡದಲ್ಲಿ ನಾಟಕ ಬರೆದರೆ ಪ್ರೇಕ್ಷಕರಿಗೆ ಹಿಂಸೆಯಾಗಬಹುದು. ಪ್ರೇಕ್ಷಕರಲ್ಲಿ ಹೆಚ್ಚಿನವರು ಮಾರಾಠಿ ಹಾಗೂ ಗುಜರಾತಿ ಮಾತಾಡುವವರು. ಮರಾಠಿ, ಹಿಂದಿ, ಗುಜರಾತಿ ಮತ್ತು ಇಂಗ್ಲಿಷ್ ಏಕಾಂಕಗಳೊಂದಿಗೆ ಕನ್ನಡ ಏಕಾಂಕವನ್ನು ಸೇರಿಸುವ ಬಯಕೆ ಪ್ರಾ. ಲಿಮೆಯವರದಾಗಿತ್ತು. ನಾನು ಈ ಮೊದಲೆ ಖಾಲ್ಸಾ ಕಾಲೇಜಿನಲ್ಲಿ ನನ್ನ ಪ್ರಥಮ ಕನ್ನಡ ಏಕಾಂಕ ಗುಂಡನ ಮದುವೆ ಪ್ರಯೋಗಿಸಿದ್ದೆ. ಅದು ಬಹಳ ಯಶಸ್ವಿಯಾಗಿತ್ತು. ಕಾರಣ ಅಲ್ಲಿದ್ದ ಪ್ರೇಕ್ಷಕರೆಲ್ಲ ಕನ್ನಡ ಮಾತಾಡುವವರೇ ಆಗಿದ್ದರು. ಇಲ್ಲಿಯ ಸಮಸ್ಯೆ ಹೇಗೆ ಬಗೆಹರಿಸುವುದು ಎಂಬ ಚಿಂತೆಯಲ್ಲಿದ್ದಾಗ ನನಗೆ ಉತ್ತರ ಒದಗಿಸಿದವಳು ಮರಾಠಿ ನಾಟಕದ ನಾಯಕಿ ಕುಮಾರಿ ಕುಂದಾ ಮೊಕಾಶಿ ಎಂಬ ವಿದ್ಯಾರ್ಥಿನಿ. ನಾನು ಅವರ ಮರಾಠಿ ನಾಟಕದ ರಿಹರ್ಸಲ್ ನೋಡಿದ್ದೆ. ಅವಳ ಅಭಿನಯ ಅಪ್ರತಿಮವಾಗಿತ್ತು. ನಾನು ಮರಾಠಿಯಲ್ಲಿಯೇ ಅವಳಿಗೆ ಕೇಳಿದೆ, ನನ್ನ ಕನ್ನಡ ನಾಟಕದಲ್ಲಿ ನೀನು ಪಾತ್ರ ವಹಿಸುವೆಯಾ? ಎಂದು. ಅವಳು ಉತ್ತರಿಸಿದಳು, ಸರ್, ನನಗೆ ಕನ್ನಡ ಬರುವುದಿಲ್ಲ. ನಿಮ್ಮ ನಾಟಕದಲ್ಲಿ ನಾನು ಹೇಗೆ ಅಭಿನಯಿಸಬೇಕು? ಆಗ ನಾನು ಹೇಳಿದೆ, ನಾಟಕ ಕನ್ನಡದ್ದಾದರೂ ನೀನು ಮರಾಠಿಯಲ್ಲಿಯೇ ಮಾತಾಡಬೇಕು. ಇದು ನಾಟಕದ ಹೊಸ ಪ್ರಯೋಗ. ನಾಟಕದ ಸಂಭಾಷಣೆಗಳು ಎರಡೂ ಭಾಷೆಯಲ್ಲಿರುತ್ತವೆ. ಆಗ, ಎಲ್ಲಿದೆ ನಾಟಕ? ಎಂದು ಕೇಳಿದಳು. ನಾಟಕವನ್ನು ಇನ್ನೂ ಬರೆದಿಲ್ಲ. ನೀನು ಅಭಿನಯಿಸಲು ಒಪ್ಪಿದರೆ ನಾನು ಬರೆಯುವೆ ಎಂದೆ.

(2)

ನನ್ನ ಎರಡನೆಯ ಏಕಾಂಕ ನಾಟಕ (ಗೃಹಿಣೀ ಗೃಹಮುಚ್ಯತೇ) ಬರೆಯಲು ಪ್ರಾರಂಭಿಸಿದೆ. ಪ್ರಥಮ ವರ್ಷ ಕಾಮರ್ಸ್ ವಿದ್ಯಾಥಿಗಳಲ್ಲಿ ನನ್ನ ನಚ್ಚಿನ ಇಬ್ಬರು ವಿದ್ಯಾರ್ಥಿಗಳಿದ್ದರು. ಇಬ್ಬರೂ ಕೆನರಾ ಬ್ಯಾಂಕಿನಲ್ಲಿ ಕೆಲಸಮಾಡುತ್ತಿದ್ದರು ಒಬ್ಬನ ಹೆಸರು ಗೋಪಾಲ ದೇವಡಿಗ. ಇನ್ನೊಬ್ಬ ರತ್ನಾಕರ ಕಿಣಿ. ಕ್ಲಾಸಿನಲ್ಲೇ ನಾನು ಬರೆಯಲಿರುವ ನಾಟಕದ ಕತೆ ಹೇಳಿದೆ. ಎಲ್ಲ ವಿದ್ಯಾರ್ಥಿಗಳಿಗೆ ಕತೆ ಹಿಡಿಸಿತು.

1961ರಲ್ಲಿ ಶಿವಾಜಿ ಪಾರ್ಕಿನ ಮನೆಯೊಂದರಲ್ಲಿ ನಡೆವ ಕತೆ. ರಾಮರಾವ ಮನೆಯ ಮಾಲೀಕ. ಅವನು ತನ್ನ ಬಾಲ್ಯವನ್ನು ಬೆಳಗಾವಿಯಲ್ಲಿ ಕಳೆದಿದ್ದ. ಹೀಗಾಗಿ ಮಾತಾಡಲು ಕನ್ನಡ ಬರುತ್ತಿದೆ. ಅದು ಮರಾಠಿ ಮಿಶ್ರಿತ ಕನ್ನಡ. ಗೋಕಾಕರ ಕಾದಂಬರಿಯ ಒಂದು ಪಾತ್ರದಂತೆ ಮರಾಠಿ ಧಾಟಿಯಲ್ಲಿ ಕನ್ನಡ ನುಡಿಯುತ್ತಿದ್ದ. ಇವನಿಗೆ ಮೊದಲನೆಯ ಹೆಂಡತಿಯಲ್ಲಿ ಎರಡು ಕಾಲೇಜಿಗೆ ಹೋಗುವ ಕುಮಾರಿಯರಿದ್ದಾರೆ. ಅವರಿಗೆ ವರ ಶೋಧಿಸುತ್ತಿದ್ದಾನೆ. ಎರಡನೆಯ ಹೆಂಡತಿ ಸೋನುಬಾಯಿ ಯುವಕಳಾಗಿದ್ದಾಳೆ. ಅವಳಿಗೆ ಎರಡು ಚಿಕ್ಕ ಮಕ್ಕಳು ಇವೆ. ಅವಳು ಗಂಡನ ಮೇಲೆ ಪ್ರಭಾವ ಬೀರುತ್ತಾಳೆ. ಇವರ ಸ್ವಾಧೀನದಲ್ಲಿರುವ ಬದಿಯ ಮನೆಯನ್ನು ಬಾಡಿಗೆಗೆ ಕೊಡಬೇಕಾಗಿದೆ. ಮದುವೆಯಾದವರಿಗೆ ಕೊಡಬೇಕೆಂಬುದು ಹೆಂಡತಿಯ ಕರಾರು. ಮದುವೆಯಾಗದ ತರುಣ ಹುಡುಗರಿಗೆ ಬಾಡಿಗೆಗೆ ಕೊಟ್ಟರೆ ಅವರೇನಾದರೂ ತಮ್ಮ ಹುಡಿಗೆಯರೊಂದಿಗೆ ಸಂಬಂಧ ಬೆಳೆಸಿದರೆ ಮಲತಾಯಿಯಾದ ತನಗೆ ಅಪವಾದ ಬಂದೀತೆಂಬ ಭಯ ಅವಳಿಗೆ. ಟಾಟಾ ಕಂಪನಿಯಲ್ಲಿ ಅಧಿಕಾರಿ ಕೆಲಸದಲ್ಲಿದ್ದ ರಾಘವೇಂದ್ರ (ಗೋಪಾಲ ದೇವಡಿಗ) ಎಂಬ ಕನ್ನಡ ತರುಣ ಮನೆ ನೋಡಲು ಬರುತ್ತಾನೆ. ಮದುವೆಯಾಗಿದೆ ಎಂದು ಸುಳ್ಳು ಹೇಳಿ ಮನೆ ಪ್ರವೇಶಿಸುತ್ತಾನೆ. ತಮ್ಮ ಬಾಲ್ಯ ಸ್ನೇಹಿತ ಕಿಟ್ಟಿಗೆ (ರತ್ನಾಕರ ಕಿಣಿ) ಹೆಣ್ ವೇಷ ತೊಡಿಸಿ ಹೆಂಡತಿ ಎಂದು ಪರಿಚಯಿಸುತ್ತಾನೆ. ರಾಮರಾಯ ಮತ್ತು ಸೋನುಬಾಯಿ ಇವರನ್ನು ಕಾಣಲು ಬರುತ್ತಾರೆ. ರಾಮರಾವ ಕನ್ನಡ ಹಾಗೂ ಮರಾಠಿಯಲ್ಲಿ ಮಾತಾಡುತ್ತಾನೆ. ಹೆಂಡತಿಯೊಂದಿಗೆ ಮಾರಾಠಿಯಲ್ಲಿ ಮಾತಾಡಿದರೆ ಬಾಡಿಗೆದಾರರೊಂದಿಗೆ ಕನ್ನಡದಲ್ಲಿ ಮಾತಾಡುತ್ತಾನೆ. ತಾವು ಹೇಳಿದ್ದು ಹೆಂಡತಿಗೆ ತಿಳಿಯಲೆಂದು ತಮ್ಮ ಸಂಭಾಷಣೆ ಮರಾಠಿಗೆ ಅನುವಾದಿಸುತ್ತಾನೆ. ಸೋನುಬಾಯಿ ವಧು ಪರೀಕ್ಷೆ ಮಾಡುತ್ತಾಳೆ. ಅವಳಿಗೆ ಸಂಶಯ ಬಂದಿರುತ್ತದೆ. ಆದರೆ ರಾಘವೇಂದ್ರ ನಾಟಕೀಯವಾಗಿ ಸಮಾಧಾನ ಹೇಳುತ್ತಾನೆ. ಅವಳು ತನ್ನ ವ್ಯಾನಿಟಿ ಬ್ಯಾಗ್ ಮರೆತು ಹೋಗಿರುತ್ತಾಳೆ. ಮರಳಿ ಬಂದಾಗ ಕಿಟ್ಟಿಯನ್ನು ಪ್ಯಾಂಟ್ ಮತ್ತು ಬನಿಯನ್ ವೇಷದಲ್ಲಿ ಕಾಣುತ್ತಾಳೆ.

ಅವರು ಬಾಡಿಗೆಯ ಮನೆ ಪಡೆಯಲು ಮದುವೆಯಾದ ಸುಳ್ಳು ನಾಟಕ ಆಡಿದ ಗುಟ್ಟು ರಟ್ಟಾಗಿರುತ್ತದೆ. ಗಂಡನಿಗೆ ಬರಲು ಕೂಗುತ್ತಾಳೆ. ರಾಮರಾವ ಕೋಪಗೊಂಡು ರಾಘವೇಂದ್ರನೊಡನೆ ಜಗಳಾಡುತ್ತಾನೆ. ಮನೆಯನ್ನು ಖಾಲಿ ಮಾಡಲು ಹೇಳುತ್ತಾನೆ. ಪೋಲೀಸರನ್ನು ಕರೆದು ದೂರು ಕೊಡುವುದಾಗಿ ಬೆದರಿಸುತ್ತಾನೆ. ಅವನಿಗೆ ಶಿಕ್ಷೆ ಕೊಡಲು ತನ್ನ ಕೈಯಲ್ಲಿಯ ಬಡಿಗೆ ಎತ್ತುತ್ತಾನೆ. ಅಷ್ಟರಲ್ಲಿ ಅವನ ಬೆಳಗಾವಿಯ ಬಾಲ್ಯ ಸ್ನೇಹಿತ ಗೋವಿಂದರಾಯ ಅಲ್ಲಿಗೆ ಬರುತ್ತಾನೆ. ರಾಘವೇಂದ್ರ ಗೋವಿಂದರಾಯನಿಗೆ ನಮಸ್ಕರಿಸುತ್ತಾನೆ. ಈ ಹುಡುಗನಿಗೆ ತಾನು ಶಿಕ್ಷೆ ಕೊಡುವುದಾಗಿ ಗೋವಿಂದರಾಯ ಹೇಳುತ್ತಾನೆ. ಇವನ ಮದುವೆ ಮಾಡಿಬಿಡೋಣ ಎನ್ನುತ್ತಾನೆ. ಗೋವಿಂದರಾಯನ ಮಗ ರಾಘವೇಂದ್ರ ಎಂಬ ಸತ್ಯ ಬಯಲಾಗುತ್ತದೆ. ಅವನ ಜಾತಕ ಮತ್ತು ರಾಮರಾಯನ ಮಗಳ ಜಾತಕ ಹೊದಿರುತ್ತವೆ. ಮದುವೆಯ ನಿಶ್ಚಿತಾರ್ಥಕ್ಕೆ ತಂದೆ ಮುಂಬೈಗೆ ಬದಿರುತ್ತಾನೆ. ತಂದೆಗೆ ತಿಳಿಸದೆ ಮಗ ಬಾಡಿಗೆ ಮನೆ ಪಡೆದು ತಂದೆಗೆ ಅಚ್ಚರಿ ಪಡಿಸುವನಿರುತ್ತಾನೆ. ತಂದೆ ಮಗನಿಗೆ ಹೇಳದೇ ಮುಂಬೈಗೆ ಬಂದು ಮದುವೆಯ ಪ್ರಸ್ತಾಪ ಮಾಡುವ ಅಚ್ಚರಿಪಡಿಸುವ ನಾಟಕ ಆಡಿರುತ್ತಾನೆ. ನಾಟಕದಲ್ಲಿ ನಾಟಕದ ಸನ್ನಿವೇಶ. ರಾಘವೇಂದ್ರನ ತಲೆ ಒಡೆಯಲು ಹೊರಟ ಮುದುಕ ರಾಮರಾಯ ಅವನ ಗುಣಗಾನ ಮಾಡಲು ಪ್ರಾರಂಭಿಸುತ್ತಾನೆ. ರಾಮರಾಯನ ಕೊನೆಯ ಸಂಭಾಷಣೆ ಮೋಜಿನದಾಗಿದೆ. ಅವನು ಮಿತ್ರನಿಗೆ ಹೇಳುತ್ತಾನೆ: ಗೋವಿಂದರಾವ್, ನನಗ ಹೀಗೆ ಅನ್ನಿಸತದ, ಜೀವನ್ ಮ್ಹಂಟ್ಲತರ್ ವಿಚಿತ್ರ ನಾಟಕ್ ಅದ. ಒಂದು ನಿಮಿಷಕ್ಕ ಭಾಂಡಣ್ ಇದ್ರ, ಇನ್ನೊಂದು ನಿಮಿಷಕ್ಕೆ ಕೂಡಿ ಇರೋಣ್ ಅದ ಎಂದು.

ನಾಟಕವನ್ನು ಖಾಲ್ಸಾ ಕಾಲೇಜಿನ ಹಾಸ್ಟೆಲ್-ರೂಮಿನಲ್ಲಿ ಬರೆದೆ. ಮರಾಠಿ ಸಂಭಾಷಣೆ ಬರೆಯಲು ಒಬ್ಬ ಮರಾಠಿ ಪ್ರಾಧ್ಯಾಪಕರು ಸಹಾಯಮಾಡಿದರು. ಮರಾಠಿ ವಿದ್ಯಾರ್ಥಿನಿ ಕುಂದಾ ಮೊಕಾಶಿಗೆ ನಮ್ಮ ನಾಟಕ ಬಹಳ ಹಿಡಿಸಿತು. ನಮ್ಮ ರಿಹರ್ಸಲ್ ನೋಡಲು ಒಮ್ಮೆ ಪ್ರಾಂಶುಪಾಲ ಲಿಮೆ ಬಂದಿದ್ದರು, ಬಹಳ ನಕ್ಕು ಆನಂದಿಸಿದರು. ನಾಟಕದ ಒಳ್ಳೆಯ ನಿರ್ಮಿತಿಗೆ ನಮಗೆ ಬೇಡಿದಷ್ಟು ಹಣ ಕೊಡಲು ಅವರು ಸಿದ್ಧರಿದ್ದರು. ಮಿತ್ರ ಆರ್.ಡಿ.ಕಾಮತರ ಸಹಾಯ ಪಡೆದೆ. ಅವರು ರಾಜಕಮಲ್ ಸ್ಟುಡಿಯೋದ ಮೇಕಪ್ ಆರ್ಟಿಸ್ಟರನ್ನು ಕರೆತಂದರು. ನಮ್ಮ ನಾಟಕ ಪ್ರಯೋಗವಾಯಿತು. ಐದು ಭಾಷೆಯ ನಾಟಕಗಳಲ್ಲಿ ಇದು ಶ್ರೇಷ್ಠವಾಗಿದೆ ಎಂದು ಪ್ರಾಂಶುಪಾಲರು ಘೋಷಿಸಿದರು. ಎರಡು ಭಾಷೆ ಮಾತಾಡುವ ಮುದುಕನ ಪಾತ್ರ ನಾನೇ ವಹಿಸಿದ್ದರ ಬಗ್ಗೆ ಕೂಡ ಪ್ರಸ್ತಾಪ ಮಾಡಿದರು.

ನಾಟಕ ಮುಗಿದ ಮೇಲೆ ನಮ್ಮ ಸ್ಟಾಫಿನ ಹೆಚ್ಚಿನ ಸದಸ್ಯರು ನನ್ನನ್ನು ಅಭಿಂದಿಸಿದರು. ನಮ್ಮ ಕಾಲೇಜಿನ ಮಾರಾಠಿ ಹಾಗೂ ಕನ್ನಡ ವಿದ್ಯಾರ್ಥಿಗಳಲ್ಲಿ ಒಂದು ಕುತೂಹಲದ ಪ್ರಶ್ನೆ ಕಾಡಿತ್ತು: ಜಿ.ವಿ.ಕುಲಕರ್ಣಿ ಸರ್, ಅವರ ಮಾತೃಭಾಷೆ ಯಾವುದು? ಕನ್ನಡವೋ ಮಾರಾಠಿಯೋ? ಕನ್ನಡ ವಿದ್ಯಾರ್ಥಿಗಳು ಕನ್ನಡ ಎಂದರೆ, ಮರಾಠಿ ವಿದ್ಯಾರ್ಥಿಗಳು ಮರಾಠಿ ಎಂದು ವಾದಿಸಿದ್ದರು. ಅವರ ವಾದ ನಮ್ಮ ನಾಟಕದ ಯಶಸ್ಸಿನ ಪ್ರಮಾಣಪತ್ರದಂತಿತ್ತು. ನಾನು ಬರೆದ ಎರಡನೆಯ ನಾಟಕ, ಪ್ರಥಮ ಕನ್ನಡ-ಮಾರಾಠಿ ದ್ವಿಭಾಷಾ ನಾಟಕ, ಗೃಹಿಣೀ ಗೃಹಮುಚ್ಯತೇ ಯಶಸ್ವಿಯಾಗಿತ್ತು. (ಮುಂದೆ ಗೋಪಾಲ ದೇವಡಿಗ ಕೆನರಾ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಯಾಗಿ, ರತ್ನಾಕರ ಕಿಣಿ ಜನರಲ್ ಮೆನೆಜರ್ ಆಗಿ ನಿವೃತ್ತರಾದರು. ಅವರೂ ಈ ನಾಟಕ ಮೆರೆತಿಲ್ಲ, ನಾನೂ ಮರೆತಿಲ್ಲ.)

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X