ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಹಂ ಕರ್ತಾ ಹರಿಃ ಕರ್ತಾ : ಪವಾಡ ಸದೃಶ ಕಥೆ 2

By Prasad
|
Google Oneindia Kannada News

Book by PVRK Prasad
ನಾಹಂ ಕರ್ತಾ, ಹರಿಃ ಕರ್ತಾ ಪುಸ್ತಕದಲ್ಲಿ 30 ಸತ್ಯ ಘಟನೆಗಳು, ಪ್ರಸಂಗಗಳು, ಕತೆಗಳು ಇವೆ. ಒಂದ್ದಕ್ಕಿಂತ ಒಂದು ರೋಚಕ, ಆಶ್ಚರ್ಯಜನಕವಾಗಿವೆ. ಕೊನೆಯ ಭಾಗಕ್ಕೆ ಬಂದಾಗ ಒಬ್ಬ ಐಎಎಸ್ ಅಧಿಕಾರಿಯಲ್ಲಾದ ಬದಲಾವಣೆ ರೋಮಾಂಚಕಾರಿ ಅನುಭವ ನೀಡುತ್ತದೆ. ಹರಿವಾಯುಗುರುಗಳ ಅನುಗ್ರಹದಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಕಥನ ಸಾಕ್ಷಿನೀಡುತ್ತದೆ.

* ಡಾ| 'ಜೀವಿ' ಕುಲಕರ್ಣಿ

ಪ್ರಸಾದ್ ಅವರು 1966ರ ಐಎಎಸ್ ಬ್ಯಾಚಿನವರು. ಅದಕ್ಕಿಂತ ಮೊದಲಿನ ಜೀವನದ ಬಗ್ಗೆ ಅವರು ಬರೆಯುತ್ತಾರೆ. ದುರಭ್ಯಾಸಗಳಿಗೆ ಕಾರಣ, ಯುಕ್ತ ವಯಸ್ಸಿಗೆ ಸರಿಯಾಗಿ ಮನೆಯ ವಾತಾವರಣದಿಂದ ದೂರಾಗುವುದು. ಕಾಲೇಜಿನಲ್ಲಿ ಓದುವ ನೆಪದಿಂದ ಕೆಲವು ವರ್ಷಗಳು, ಎಂ.ಎ. ಅಭ್ಯಾಸಕ್ಕಾಗಿ ನಾಗಪುರದಲ್ಲಿ; ಎರಡು ವರ್ಷ ಲೆಕ್ಚರರ್ ಆಗಿ ರಾಯಪುರದಲ್ಲಿ(ಮಧ್ಯಪ್ರದೇಶ) ಹೀಗೆ ಹಲವು ವರ್ಷಗಳ ಕಾಲ ಹಿರಿಯರಿಂದ ದೂರವಾಗಿ, ಹೇಳುವವರು ಕೇಳುವವರು ಯಾರೂ ಇಲ್ಲದೇ ಏಕಾಕಿಯಾಗಿ ಜೀವನ ಸಾಗಿಸಿದೆ. ಇದೇ ಅವಕಾಶವೆಂದು ವ್ಯಸನಗಳು ನನ್ನನ್ನಾಶ್ರಯಿಸಿದವು. ಅಕಾಡೆಮಿ ಸೇರುವ ಹೊತ್ತಿಗೆ ನನ್ನ ಪರಿಸ್ಥಿತಿ ಗಂಭೀರವಾಗಿ ಹೋಗಿತ್ತು.

ಐಎಎಸ್ ಪಾಸಾಗಿ ಅಕಾಡೆಮಿ ಸೇರುವ ಮೊದಲು, ಪಾರ್ಟಿಯಿಂದ ಮನೆಗೆ ಬರುವಾಗ ಮನೆಯವರಿಗೆ ವಿಸ್ಕಿಯ ವಾಸನೆ ಬರಬಾರದೆಂದು ನಾಲ್ಕೈದು ಪಾನ್-ಬೀಡಾ ಹಾಕಿಕೊಂಡು ಮೈಗೆ ಸೇಂಟ್ ಹಚ್ಚಿಕೊಂಡಿದ್ದರು. ತಂದೆಯವರಿಗೆ ವಿಷಯ ತಿಳಿದು ಬುದ್ಧಿ ಮಾತು ಹೇಳಿದ್ದರು. ನೀನು ಬಡತನ ಅನುಭವಿಸಿದವ. ಬಡಬಗ್ಗರ ಉದ್ಧಾರ ನಿನ್ನಿಂದ ಆಗುವುದೆಂಬ ಕನಸು ಕಂಡಿದ್ದೆ. ದುರಭ್ಯಾಸದಿಂದ ಕೂಡಿದ ವ್ಯಕ್ತಿ ಜನರ ವಿಶ್ವಾಸ ಗಳಿಸಲಾರ. ಈಗ ರಾಷ್ಟ್ರದಲ್ಲಿ ಮದ್ಯಪಾನದ ನಿಷೇಧವಿದೆ. ನೀತಿ ಇಲ್ಲದ ವ್ಯಕ್ತಿ ಪರರಿಗೆ ಹೇಗೆ ಬೋಧಿಸಲು ಸಾಧ್ಯ? ಎಂದು. ಎಂ.ಎ. ಓದುತ್ತಿರುವಾಗ ದಿನಕ್ಕೆ 70-80 ಸಿಗರೇಟ್ ಸೇದುತ್ತಿದ್ದರು. ಹುಟ್ಟಿದ್ದು ಬೆಳೆದದ್ದು ಸನಾತನ ಮಾಧ್ವಬ್ರಾಹ್ಮಣ ಕುಟುಂಬದಲ್ಲಿ. ತಾಯಿ ದೇವಭಕ್ತಳು. ಸಹೋದರ ವಿಕ್ರಮ್ ಸೇನೆಯಲ್ಲಿ ಕರ್ನಲ್ ಆಗಿದ್ದರೂ ಬೀಡಿ-ಮದ್ಯ-ಮಾಂಸದಿಂದ ದೂರ. ಸಹವಾಸ ದೋಷದಿಂದ ಎಲ್ಲ ದುಶ್ಚಟಗಳು ಇವರಲ್ಲಿ ಮನೆಮಾಡಿಕೊಂಡಿದ್ದವು.

ಐಎಎಸ್‌ನಲ್ಲಿ ಸೆಲೆಕ್ಟ್ ಆದಾಗ ತಿರುಪತಿಗೆ ಹೋಗಿ ಶ್ರೀನಿವಾಸನಿಗೆ ಕೂದಲನ್ನು ಸಮರ್ಪಿಸಿ ಬೋಳುತಲೆ ಮಾಡಿಕೊಂಡು ಮಸ್ಸೂರಿಯ ಟ್ರೇನಿಂಗ್‌ಗೆ ಸೇರಿದ್ದರು. ಇವರ ದೇವಭಕ್ತಿ ಇವರನ್ನು ದುಶ್ಚಟಗಳಿಂದ ದೂರ ಮಾಡುವಲ್ಲಿ ವಿಫಲವಾಗಿತ್ತು. ಅಸಿಸ್ಟೆಂಟ್ ಕಲೆಕ್ಟರ್ ಆಗಿ ಗೋದಾವರಿ ಜಿಲ್ಲೆಯಲ್ಲಿರುವಾಗ ಇವರಿಗೆ ಜ್ಯುಡೀಶಿಯಲ್ ಟ್ರೇನಿಂಗ್ ಸಮಯದಲ್ಲಿ ಜಿಲ್ಲಾ ನ್ಯಾಯಧೀಶರ ಸಹವಾಸ ಲಭಿಸಿತು. ಕ್ಲಬ್ ಸೇರಿದರು ಅಲ್ಲಿ ರಮ್ಮಿ (ಇಸ್ಪೇಟ್) ವ್ಯಸನವೊಂದು ಸೇರಿಕೊಂಡಿತ್ತು. ಭುವನಗಿರಿಗೆ ಕಲೆಕ್ಟರ್ ಎಂದು ವರ್ಗವಾದಾಗ ಮದುವೆಯಾಯ್ತು. ಸದಾಚಾರ ಸಂಪನ್ನ ಮಾಧ್ವಕುಟುಂಬದಿಂದ ಬಂದ ಅರ್ಧಾಂಗಿ ಗೋಪಿಕಾಗೆ ಇವರ ದುಶ್ಚಟಗಳು ಅಸಹನೀಯವಾದವು. ಭುವನಗಿರಿಯಲ್ಲಿ ಸಬ್‌ಕಲೆಕ್ಟರರಾಗಿ ಕೆಲಸಮಾಡುವಾಗ ನೆಲ್ಗೊಂಡಾದಲ್ಲಿ ನೆಕ್ಸ್‌ಲೈಟ್‌ರಿಂದ ಒಬ್ಬ ಸಬ್‌ಕಲೆಕ್ಟರನ ಕೊಲೆಯಾದ ಸುದ್ದಿ ಬಂದಾಗ ಇವರು ಪೊಲೀಸ ಅಧಿಕಾರಿಯೊಂದಿಗೆ ಅರಣ್ಯಪ್ರದೇಶದಲ್ಲಿ ಎರಡು ದಿನ ಅಲೆದಾಡಿದ್ದರು. ಮನೆಗೆ ತಿರುಗಿ ಬಂದಾಗ ಹೆಂಡತಿಗೆ ಸಿಗರೇಟ್ ಎಲ್ಲಿದೆ ಎಂದು ಕೇಳಿದ್ದರು. ಎರಡು ದಿನ ಸಿಗರೇಟ್ ಇಲ್ಲದೆ ಜೀವಿಸಿದ್ದರು. ಎರಡು ದಿನ ಸಿಗರೇಟ್ ಬಿಟ್ಟವರು ಪೂರ್ತಿ ಬಿಡಬಹುದಲ್ಲ. ಸೇದುವುದು ಒಂದು ಮನೋದೌರ್ಬಲ್ಯ ಎಂದು ಹೆಂಡತಿ ವಾದಿಸಿದಾಗ, ಅವಳ ವಾಗ್ಬಾಣ ಕೆಲಸ ಮಾಡಿತ್ತು. ಅಂದಿನಿಂದ ಸಿಗರೆಟ್ ಬಿಟ್ಟರು.

1978ರಲ್ಲಿ ಟಿಟಿಡಿಯಲ್ಲಿ ಕೆಲಸಕ್ಕೆ ಸೇರಿದಾಗ ಸಿಗರೇಟ್ ತೊಲಗಿತ್ತು ಆದರೆ ಉಳಿದ ದುಶ್ಚಟಗಳು ಬಿಟ್ಟಿರಲಿಲ್ಲ. ಮತ್ತೆ ಮಡದಿಯ ಹಿತವಚನ ಕೆಲಸ ಮಾಡಿದವು. ದುರಭ್ಯಾಸದಿಂದ ಕೂಡಿದ ಅಪವಿತ್ರ ಮನಸ್ಸು ಪರಮ ಪವಿತ್ರ ಸ್ವಾಮಿಯ ಸನ್ನಿಧಿಯಲ್ಲಿ ನಿಲ್ಲಲು ಸಾಧ್ಯವೇ? ದುರ್ವ್ಯಸನಗಳನ್ನು ಪೂರ್ತಿ ಬಿಡದೇ ಸ್ವಾಮಿಯ ಸೇವೆ ಹೇಗೆ ಸಲ್ಲಿಸುವಿರಿ? ಎಂಬ ಹೆಂಡತಿಯ ಮಾತು ಇವರ ಹೃದಯದಲ್ಲಿ ನಾಟಿತು. ಇವರು ದೇವರ ಮುಂದೆ ನಿಂತು, ಶ್ರೀನಿವಾಸ, ವೆಂಕಟೇಶ ಇನ್ನು ಮುಂದೆ ಜೀವನದಲ್ಲಿ ಮದ್ಯಮಾಂಸಗಳನ್ನು ಮುಟ್ಟುವುದಿಲ್ಲ, ಯಾವ ದುರ್ವ್ಯಸನಗಳಿಗೂ ದಾಸನಾಗುವುದಿಲ್ಲ ಎಂದು ಸಂಕಲ್ಪ ಮಾಡಿದರು. ಮನಸ್ಸು ಹಗುರಾಗಿತ್ತು. ದೇಹ ಮನಸ್ಸು ಎರಡೂ ಪವಿತ್ರವಾದ ಭಾವನೆ ಮೂಡಿತ್ತು.

ಟಿಟಿಡಿಯ ಸಂಪರ್ಕದಿಂದಾಗಿ ಹಲವಾರು ಸ್ವಾಮಿಗಳ, ಪೀಠಾಧಿಪತಿಗಳ, ಅಧ್ಯಾತ್ಮಿಕ ಗುರುಗಳ ಸಂಪರ್ಕ ಬಂತು. ಪೇಜಾವರ ಮತ್ತು ಇತರ ಉಡುಪಿಯ ಮಠಾಧೀಶರೊಡನೆ, ರಾಘವೇಂದ್ರಮಠದ ಸ್ವಾಮಿಗಳೊಡನೆ ಧರ್ಮ ವಿಷಯದಲ್ಲಿ ಚರ್ಚಿಸುವ ಸುಯೋಗ ಬಂತು. ಶ್ರೀಸತ್ಯಸಾಯಿಬಾಬಾ, ಸ್ವಾಮಿ ಚಿನ್ಮಯಾನಂದ, ಸ್ವಾಮಿ ರಂಗನಾಥಾನಂದ ಮೊದಲಾದವರ ಸಂಪರ್ಕ ಬಂತು. ಕಂಚಿ-ಶೃಂಗೇರಿ, ಅಹೋಬಲ, ಪರಕಾಲ ಮಠಾಧಿಪತಿಗಳು, ಆಂಧ್ರಪ್ರದೇಶದಲ್ಲಿರುವ ಸೀನಿಯರ್ ಜ್ಯೂನಿಯರ್ ನಾರಯಣಜೀಯರುಗಳು, ತಿರುಮಲೆಯ ಜೀಯಂಗಾರರು ಇವರನ್ನು ಆಶೀರ್ವದಿಸಿದ್ದರು.

ಒಮ್ಮೆ ಬೆಂಗಳೂರಿಗೆ ಹೋಗುವ ಸಂದರ್ಭ ಒದಗಿತ್ತು. ಅವರ ಮಾವ ಶ್ರೀನಿವಾಸರಾಯರು ಪೋನ್ ಮಾಡಿದರು. ಉತ್ತರಾಧಿ ಮಠಾಧೀಶ ಶ್ರೀ ಸತ್ಯಪ್ರಮೋದತೀರ್ಥರ ದರ್ಶನವನ್ನು ತಪ್ಪದೇ ಪಡೆಯಲು ಹೇಳಿದರು. ಮಾವನವರ ಮಾತಿಗೆ ಬೆಲೆಕೊಟ್ಟು ಮಠಕ್ಕೆ ಹೋಗಿ ಶ್ರೀಗಳನ್ನು ಕಂಡರು. ಅವರ ಮುಖದಲ್ಲಿರುವ ಬ್ರಹ್ಮತೇಜಸ್ಸು ಹಾಗೂ ಆಡಂಬರರಹಿತ ವಾಗ್ಝರಿಯಿಂದಾಗಿ ಅವರಲ್ಲಿ ಗೌರವ-ಭಕ್ತಿ-ವಿಶ್ವಾಸ ಮೂಡಿತು. ಸ್ವಾಮಿಗಳು ಇವರನ್ನು ಕೃಪಾದೃಷ್ಟಿಯಿಂದ ನೋಡಿದರು. ಬಳಿಗೆ ಕರೆದು ಮಂತ್ರಾಕ್ಷತೆ ಕೊಟ್ಟರು. ಒಂದು ದೇವರ ಪೆಟ್ಟಿಗೆ ಕೊಡಲು ಸಿದ್ಧರಾದರು. ಇವರಿಗೆ ಮುಜುಗರವಾಯಿತು. ಶ್ರೀಗಳು ದೇವರ ಪೆಟ್ಟಿಗೆ ಕೊಟ್ಟರೆ ಪ್ರತಿನಿತ್ಯ ಪೂಜೆ ಮಾಡಬೇಕಾಗುವುದು. ದಿನಕ್ಕೆ ಒಂದು ಬಾರಿಯೂ ಗಾಯತ್ರಿ ಮಂತ್ರ ಜಪಿಸದ ವ್ಯಕ್ತಿ ನಿತ್ಯ ದೇವತಾರ್ಚನೆ ಮಾಡುವುದು ಸಾಧ್ಯವೇ? ತನಗೆ ಪೂಜಾವಿಧಾನದ ಕಿಂಚಿತ್ತೂ ಪರಿಜ್ಞಾನವಿಲ್ಲ ಎಂಬುದನ್ನು ನೆನೆದು ಭಯಗೊಂಡರು.

ಆಗ ಶ್ರೀ ಸತ್ಯಪ್ರಮೋದತೀರ್ಥ ಸ್ವಾಮಿಗಳು ನಸುನಕ್ಕು ಹೇಳಿದರು: ಪ್ರಸಾದ್, ನಮಗೇಕೋ ಈ ದೇವರ ಪೆಟ್ಟಿಗೆಯನ್ನೇ ನಿನಗೇ ಕೊಡಬೇಕೆಂದು ಅಪೇಕ್ಷೆಯಾಗಿದೆ. ಎಲ್ಲಾ ಶ್ರೀಶನ ಪ್ರೇರಣೆ. ನೀನು ಇದಕ್ಕೆ ಅನರ್ಹನಾಗಿದ್ದಲ್ಲಿ ಶ್ರೀನಿವಾಸ ಈ ಪ್ರೇರಣೆಯನ್ನು ನಮಗೆ ಮಾಡುತ್ತಿರಲಿಲ್ಲ. ಪ್ರೇರಕನೂ ಪ್ರೇರ್ಯನೂ, ಸೇವಕನೂ ಸೇವ್ಯನೂ, ಮಾಡಿಸುವವನೂ ಕೊಡುವವನೂ ಕೊಡಿಸುವವನೂ ಎಲ್ಲವೂ ಆ ಪರಮಾತ್ಮ ಪರಬ್ರಹ್ಮ ಶ್ರೀನಿವಾಸನೇ ಆಗಿದ್ದಾನೆ. ನಾವೆಲ್ಲರೂ ನಿಮಿತ್ತ ಮಾತ್ರರು. ಅಧೈರ್ಯ ಬೇಡ. ತೆಗೆದುಕೊಳ್ಳಿ. ಒಂದು ವೇಳೆ ನೀವು ದೇವರ ಪೂಜೆ ಮಾಡದೇ ಲೋಪ ಎಸಗಿದಲ್ಲಿ ಆ ಲೋಪದೋಷಕ್ಕೆ ನಾವು ಬಾಧ್ಯರಾಗುತ್ತೇವೆ. ಅದರಿಂದುಂಟಾಗುವ ದೋಷವನ್ನು ಸಹ ನಾವೇ ಸ್ವೀಕರಿಸುತ್ತೇವೆ. ನಿಶ್ಚಿಂತರಾಗಿ ತೆಗೆದುಕೊಳ್ಳಿ... ದಾಸರು ಹೇಳಿದ್ದಾರೆ. ಅರ್ಚಿಸಲರಿಯೆನು ಮೆಚ್ಚಿಸಲರಿಯೆನು | ತುಚ್ಛನು ನಾನೆಂದೆನಬೇಡ | ಅಚ್ಯುತಾನಂತ ಗೋವಿಂದ ಮುಕುಂದನ | ಇಚ್ಛೆಯಿಂದ ನೀ ನೆನೆ ಮನವೇ|| ಎಷ್ಟು ಸುಂದರವಾದ ಸಂದೇಶ! . . . ಶ್ರೀನಿವಾಸನನ್ನು ಸ್ಮರಿಸುತ್ತಾ ಸಾಲಿಗ್ರಾಮಕ್ಕೆ ನೀರೆರೆದು ಒಂದು ದಳ ತುಳಸಿಯನ್ನು ಅರ್ಪಿಸಿದರೆ ಸಾಕು, ಶ್ರೀನಿವಾಸ ಆ ಸೇವೆಯನ್ನು ಸ್ವೀಕರಿಸಿ ಅನುಗ್ರಹಿಸುತ್ತಾನೆ ಹಿಡಿಯಿರಿ ಎಂದರು. ಕೃಷ್ಣನ ವಿಗ್ರಹ, ಸಾಲಿಗ್ರಾಮ, ಸುದರ್ಶನ, ಚಕ್ರಾಂಕಿತ, ವಿಷ್ಣುಪಾದ, ಶಂಖ, ಹನುಮಂತ-ಗರುಡ-ಶೇಷರ ವಿಗ್ರಹ ಕೊಡಲು ಮುಂದಾದರು. ಇದು ಜನ್ಮಜನ್ಮಾಂತರದ ಸುಕೃತ. ಹಿಂದಿನಿಂದ ಕೆಲವರು, ಪ್ರಸಾದ್ ರಾಯರೇ ತೆಗೆದುಕೊಳ್ಳಿ- ಗುರುಗಳ ಪೂರ್ಣ ಅನುಗ್ರಹವಾಗಿದೆ ಎಂದರು. ಅದನ್ನು ಸ್ವೀಕರಿಸಿದ ಪ್ರಸಾದ್ ಅವರಿಗೆ ಶ್ರೀಗಳೇ ತಮ್ಮ ಆತ್ಮೋದ್ಧಾರಕರು ಎಂಬುದು ಸ್ಪಷ್ಟವಾಗಿ ಅನುಭವಕ್ಕೆ ಬಂತು.

ತಿರುಪತಿಗೆ ಮರಳಿ ಬಂದ ಮೇಲೆ ಪ್ರತಿನಿತ್ಯ ದೇವರ ಪೆಟ್ಟಿಗೆಗೆ ಆರತಿ ಮಾತ್ರ ಮಾಡುತ್ತಿದ್ದರಂತೆ. ತಿರುಪತಿಯಿಂದ ವರ್ಗವಾಯಿತು. ಒಂದು ವರ್ಷ ಇಂಗ್ಲೆಂಡಿನಲ್ಲಿ ಇರಬೇಕಾಯಿತು. ಆಗ ಆ ಪೆಟ್ಟಿಗೆಯನ್ನು ಮಾವನವರ ಮನೆಗೆ ಕಳಿಸಿದರಂತೆ. ಅವರು ಒಬ್ಬ ಅರ್ಚಕರನ್ನು ನಿಯಮಿಸಿ ಪ್ರತಿ ದಿನ ಪೂಜೆ ಮಾಡಿಸುತ್ತಿದ್ದರಂತೆ. ಈಗ ಅವರಿಗೆ ಸಂಧ್ಯಾವಂದನೆ, ಮಂತ್ರಜಪ, ದೇವತಾರ್ಚನೆ, ಬ್ರಹ್ಮಯಜ್ಞ, ವೈಶ್ವದೇವ, ಬಲಿಹರಣ, ಹಸ್ತೋದಕ ಇವೆಲ್ಲ ಅವರ ನಿತ್ಯಕರ್ಮದ ಅವಿಭಾಜ್ಯ ಅಂಗಗಳಗಿವೆಯಂತೆ. ಈ ಸತ್ ಸಾಧನೆಗಳಿಗೆ ಗುರುಗಳ ಆಶೀರ್ವಾದ, ಸಹಧರ್ಮಿಣಿಯ ಸಹಕಾರಗಳನ್ನು ನೆನೆಯುತ್ತಾರೆ. ಕಿಂ ಅಲಭ್ಯಂ ಪ್ರಸನ್ನೇ ಶ್ರೀನಿಕೇತನೇ ಎನ್ನುತ್ತಾರೆ. ಶ್ರೀ ಸತ್ಯಪ್ರಮೋದತೀರ್ಥರ ಆಶೀರ್ವಾದವನ್ನು ನೆನೆಯುತ್ತಾರೆ. ನಂತರ ಇವರ ಅಧ್ಯಾತ್ಮ ಮಾರ್ಗ ಸುಗಮವಾಯಿತು. ಪೇಜಾವರ ಮಠಾಧೀಶರು ಇವರಿಗೆ ವೇದವ್ಯಾಸ ಸಾಲಿಗ್ರಮ ಕೊಟ್ಟರು. ಹೈದರಾಬಾದಿನಲ್ಲಿ ಪಂಡಿತ ನಾಗೇಂದ್ರಪ್ರಸಾದರಲ್ಲಿ ವೇದಶಾಸ್ತ್ರಪಾಠ ಪ್ರಾರಂಭವಾಯಿತು. ಬ್ರಹ್ಮಸೂತ್ರ, ಭಾರತ, ಭಾಗವತ, ತಾತ್ಪರ್ಯನಿರ್ಣಯ ಪಾಠ ಹೇಳಿಸಿಕೊಂಡರು. ಉತ್ತರಾದಿ ಮಠದ ಪ್ರಸ್ತುತ ಶ್ರೀಗಳಾದ ಶ್ರೀ ಸತ್ಯಾತ್ಮತೀರ್ಥರು ಅಷ್ಟಮಂತ್ರಗಳನ್ನು ಉಪದೇಶಿಸಿ ಶ್ರೀಕೃಷ್ಣ ಶ್ರೀನಿವಾಸ ವಿಗ್ರಹ ನೀಡಿದರು. ಡಾ| ವ್ಯಾಸನಕೆರೆ ಪ್ರಭಂಜನಾಚಾರ್ಯರಿಂದ ವಿಷ್ಣುತತ್ತ್ವನಿರ್ಣಯದ ಪಾಠ ಹೇಳಿಸಿಕೊಂಡರು.

ಈಗ ಪ್ರಸಾದ್ ಅವರು ಗೃಹಸ್ಥಾಶ್ರಮ ಪಾಲಿಸುತ್ತ ಏಕಾದಶೀ ಚಾತುರ್ಮಸ್ಯಾದಿ ವ್ರತ ಆಚರಿಸುತ್ತಾರೆ. ಈ ಬದಲಾವಣೆಗೆ ಪ್ರೇರಣೆ ಎಲ್ಲಿಯದು? ಎಂದು ಕೇಳಿದರೆ ಪ್ರಸಾದ್ ಮಂತ್ರಸದೃಶ ವಾಕ್ಯ ಉದ್ಧರಿಸುತ್ತಾರೆ: ನಾಹಂ ಕರ್ತಾ ಹರಿಃ ಕರ್ತಾ ಎಂದು.

(ನಾಹಂ ಕರ್ತಾ ಹರಿಃ ಕರ್ತಾ: ಲೇಖಕರು-ಪಿ.ವಿ.ಆರ್.ಕೆ.ಪ್ರಸಾದ್; ಪ್ರಕಾಶಕರು: ವಾಸನ್ ಪಬ್ಲಿಕೇಷನ್ಸ್, ಬೆಂಗಳೂರು-560 080-2670 5679, ಪುಟ.260, ಬೆಲೆ.ರೂ.75)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X