ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಹಂ ಕರ್ತಾ ಹರಿಃ ಕರ್ತಾ : ಪವಾಡ ಸದೃಶ ಕಥೆ

By Prasad
|
Google Oneindia Kannada News

Book by PVRK Prasad
ಪಿ.ವಿ.ಆರ್.ಕೆ.ಪ್ರಸಾದ್ ಬರೆದ ನಾಹಂ ಕರ್ತಾ ಹರಿಃ ಕರ್ತಾ ಗ್ರಂಥದ ಬಗ್ಗೆ ಬಹಳ ಕೇಳಿದ್ದೆ. ಪುಸ್ತಕ ದೊರೆತಿರಲಿಲ್ಲ. ಈ ಸಲದ ಧಾರವಾಡದ ಪ್ರವಾಸದಲ್ಲಿ ನವಕರ್ನಾಟಕ ಪಬ್ಲಿಕೇಶನ್ಸ್ ಅವರ ಮಳಿಗೆಯಲ್ಲಿ ಅಕಸ್ಮಾತ್ತಾಗಿ ದೊರೆಯಿತು. ನವರಾತ್ರಿ ಹಬ್ಬ ಪ್ರಾರಂಭವಾಗುವ ಕಾಲಕ್ಕೆ ಶ್ರೀವೆಂಕಟೇಶನ ಮಹಿಮೆ ಕೊಂಡಾಡುವ ಪುಸ್ತಕ ದೊರೆತದ್ದು ನನಗೆ ಅತೀವ ಹರ್ಷವನ್ನುಂಟುಮಾಡಿತ್ತು. ನನ್ನ ಸಂತಸವನ್ನು ವಾಚಕರೊಡನೆ ಹಂಚಿಕೊಳ್ಳಲು ಕೆಲವು ರೋಚಕ ಸಂಗತಿಗಳನ್ನು ಇಲ್ಲಿ ಬರೆಯುತ್ತಿರುವೆ.

* ಡಾ| 'ಜೀವಿ' ಕುಲಕರ್ಣಿ

ಸ್ವಾನುಭವದಿಂದ ಕೂಡಿದ ಪವಾಡಸದೃಶ ಕಥನಗಳನ್ನು ಬರೆದವರು ಆಂಧ್ರಪ್ರದೇಶದ ಶ್ರೀ ಪತ್ರಿ ವೆಂಕಟರಾಮ ಕೃಷ್ಣ ಪ್ರಸಾದ್ ಎಂಬ ಐ.ಎ.ಎಸ್.ಅಧಿಕಾರಿ. ನಾಗಪುರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಗಳಿಸಿ ಸ್ವರ್ಣಪದಕ ಪಡೆದವರು. ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಗಳಿಸಿದರು. ಕೆಲಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, ನಂತರ ಐ.ಎ.ಎಸ್.ಪರೀಕ್ಷೆಯಲ್ಲಿ ಪಾಸಾಗಿ ಆಂಧ್ರದಲ್ಲಿ ಹತ್ತು ವರ್ಷ ಹಲವಾರು ಕಡೆ ಕಲೆಕ್ಟರ್ ಎಂದು ಕೆಲಸಮಾಡಿ ಹೈದ್ರಾಬಾದಿಗೆ ವರ್ಗಾವಣೆ ಪಡೆದಿದ್ದರು. ನೆಮ್ಮದಿಯಿಂದ ಒಂದೆಡೆ ಸ್ಥಾಯಿಯಾಗಿ ಇರಲು ಬಯಸಿದ್ದರು. ಆಗ ಅವರಿಗೆ ತಿರುಮಲ ತಿರುಪತಿ ದೇವಸ್ಥಾನದ ನಿರ್ವಹಣಾಧಿಕಾರಿ ಆಗುವ ಅವಕಾಶ ಬಂತು. ಮೊದಲು ಇವರಿಗೆ ಹೈದ್ರಾಬಾದ್ ಬಿಡುವ ಮನಸ್ಸಿರಲಿಲ್ಲ. ಅದು ದೈವ ನಿಯೋಜಿತವಾಗಿತ್ತು. ಕೆಲಸಕ್ಕೆ ಸೇರಬೇಕಾಯಿತು. ಆ ಕೆಸವನ್ನು ಅವರು ಎಷ್ಟೊಂದು ಶ್ರದ್ಧೆಯಿದ ಮಾಡಿದರು ಎಂದರೆ ಅದೇ ದಂತಕತೆಯಂತಾಗಿದೆ, ಅದು ಅವರ ಸಾಧನೆಯ ಶಿಖರವಾಗಿದೆ. ಈ ಕಾರ್ಯಕ್ಕಾಗಿ ಅವರಿಗೆ ಎಲ್ಲೆಡೆಯಿದ ಸನ್ಮಾನ ಹಾಗೂ ಗೌರವ ಲಭಿಸಿದವು. ಹೈದ್ರಾಬಾದಿನ ಮೆನೇಜ್‌ಮೆಂಟ್ ಅಸೋಸಿಯೇಶನ್ ಇವರಿಗೆ ಮೆನೆಜರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿದರೆ, ಫಲಿಮಾರು ಮಠದ ಶ್ರೀಗಳು ಇವರಿಗೆ ರಾಜರ್ಷಿ ಪುರಸ್ಕಾರ ನೀಡಿದರು. ಇವರು ತಮ್ಮ ಗ್ರಂಥವನ್ನು ತಿರುಪತಿಯ ವೆಂಕಟೇಶನಿಗೆ ಸಮರ್ಪಿಸಿದ್ದಾರೆ. ಅವರು ಸಮರ್ಪಣೆಯ ವಚನವನ್ನು ಈ ರೀತಿ ಬರೆಯುತ್ತಾರೆ.

ಯಾವುದೇ ಒಳ್ಳೆಯ ಕಾರ್ಯಕ್ರಮವನ್ನು ಮಾಡಬೇಕೆಂದರೂ ಹರಿ-ವಾಯು-ಗುರುಗಳ ಅನುಗ್ರಹವಿಲ್ಲದೆ ಸಾಧ್ಯವಾಗದು. ನನ್ನಿಂದ ಈ ಸ್ವಯಂ ಅನುಭವಗಳ ಸಾಹಿತ್ಯಯಜ್ಞಕಾರ್ಯ ನಡೆಯಲು ಗುರುಗಳಾದ ಶ್ರೀ ಸತ್ಯಪ್ರಮೋದತೀರ್ಥ ಸ್ವಾಮಿ, ಶ್ರೀ ಸತ್ಯಾತ್ಮತೀರ್ಥ ಸ್ವಾಮಿ ಅವರುಗಳ ಆಶಿರ್ವಾದದ ಮೂಲಕ ಸ್ಫೂರ್ತಿಯನ್ನು ಮತ್ತು ಶಕ್ತಿಯನ್ನು ಪ್ರಸಾದಿಸಿದ ಕಲಿಯುಗದ ದೈವ ಶ್ರೀ ಶ್ರೀನಿವಾಸನಾಗಿ ಕಂಗೊಳಿಸುತ್ತಿರುವ ಆ ಶ್ರೀ ಹರಿಯ ಚರಣಾರವಿಂದಗಳಿಗೆ ಶತಸಹಸ್ರಕೋಟಿ ಪ್ರಣಾಮಂ ಎಂದಿದ್ದಾರೆ.

ನಾಹಂ ಕರ್ತಾ ಹರಿಃ ಕರ್ತಾ ಗ್ರಂಥಕ್ಕೆ ಆಶಿರ್ವಚನ ಬರೆದ ಉತ್ತರಾದಿ ಮಠಾಧೀಶರಾದ ಶ್ರೀಶ್ರೀ ಸತ್ಯಾತ್ಮತೀರ್ಥರು ಈ ರೀತಿ ಬರೆಯುತ್ತಾರೆ: ... ತಿರುಮಲ ದೇವಸ್ಥಾನಕ್ಕೆ ಸಿ.ಇ.ಓ.ಆಗಿದ್ದು ಅಪಾರ ಸೇವೆಯನ್ನು ಸಲ್ಲಿಸಿದವರು ನಮ್ಮ ಆತ್ಮೀಯ ಶಿಷ್ಯರಾದ ಪಿ.ವಿ.ಆರ್.ಕೆ.ಪ್ರಸಾದ್ ರಾವ್ ಅವರು. ತಿರುಮಲಕ್ಕೆ ಹರಿದುಬರುವ ಭಕ್ತಸಮೂಹದ ಯಾವುದೇ ಭಕ್ತನಿಗೆ ಸ್ವಲ್ಪವೂ ಕೊರತೆಯಾಗದಂತೆ ನೋಡಿಕೊಂಡು ತಿರುಮಲವನ್ನು ನಿಜವಾಗಿಯೂ ಭೂ-ವೈಕುಂಠವನ್ನಾಗಿ ಮಾಡಿದವರು ಇವರು. ಭಕ್ತರ ಅಗತ್ಯಗಳನ್ನು ಪೂರೈಸಲು ಹಲವಾರು ಕಾರ್ಯಕ್ರಮಗಳನ್ನು ಕೈಕೊಂಡರು. ಚಿತ್ತಶುದ್ಧಿ ಪ್ರಾಮಾಣಿಕತೆಗಳು ಇವರು ಮಾಡುವ ಪ್ರತಿ ಕೆಲಸದಲ್ಲೂ ಗೋಚರಿಸುತ್ತಿವೆ. ನಾಹಂ ಕರ್ತಾ ಎಂಬ ಭಾವನೆಯನ್ನು ಮನಸ್ಸಿನಲ್ಲಿ ಜೋಪಾನವಾಗಿ ಭದ್ರವಾಗಿ ಇಟ್ಟುಕೊಂಡವರಿವರು.

ಪ್ರಸಾದ್ ಅವರು ತಿರುಮಲೆಯಲ್ಲಿ ಮೂರು ದಶಕಗಳ ಹಿಂದೆ, 1978ರಲ್ಲಿ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಸೇರಿದ್ದರು. ನಾಲ್ಕು ವರ್ಷಗಳಲ್ಲಿ ಅಸಾಧಾರಣ ಕೆಲಸ ಮಾಡಿದರು. ತಮ್ಮ ಅನುಭವಗಳನ್ನು ಮೊದಲು ತೆಲುಗಿನಲ್ಲಿ, ಸ್ವಾತಿ ಎಂಬ ವಾರ ಪತ್ರಿಕೆಯಲ್ಲಿ ಬರೆದರು. ನಂತರ ಅದು ಪುಸ್ತಕರೂಪದಲ್ಲಿ ಪ್ರಕಟವಾಯಿತು. ಅದನ್ನು ಕನ್ನಡಕ್ಕೆ ಅನುವಾದಿಸಿದವರು ದಾಸ ಸಹಿತ್ಯ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿ ಕೆಲಸ ಮಾಡಿದ ಅಪ್ಪಣ್ಣಾಚಾರ್ಯರು. ದಾಸ ಸಾಹಿತ್ಯದ ಪ್ರಾಜೆಕ್ಟ್‌ನ್ನು ಪ್ರಾರಂಭಿಸಿದ ಶ್ರೇಯ ಪ್ರಸಾದ್ ಅವರದು. ಅವರ ಬಗ್ಗೆ ಅಪ್ಪಣ್ಣಚಾರ್ಯರು ಹೀಗೆ ಬರೆಯುತ್ತಾರೆ: ಪ್ರಸಾದ್ ಅವರು ಟಿ.ಟಿ.ಡಿ.ಯಲ್ಲಿದ್ದ ಕಾಲ, ಅದೊಂದು ಸುವರ್ಣ ಕಾಲ! ಯಾತ್ರಿಕರನ್ನು ದೇವರನ್ನಾಗಿ ಕಂಡ ಕಾಲ. ಯಾತ್ರಿಕರಿಗೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ, ಹೊಸ ಹೊಸ ಯೋಜನೆಗಳಿಗೆ ಶ್ರೀಕಾರ ಬರೆದ ಕಾಲ. ಹಿಂದೂ ಧರ್ಮ ರಕ್ಷಣಾ ಸಂಸ್ಥೆ, ಅನ್ನಮಾಚಾರ್ಯ ಯೋಜನೆ, ದಾಸಸಾಹಿತ್ಯ ಪ್ರಾಜೆಕ್ಟ್, ಆಳ್ವಾರ್ ದಿವ್ಯ ಪ್ರಬಂಧಂ ಪ್ರಾಜೆಕ್ಟ್, ಭಾಗವತ ಪ್ರಾಜೆಕ್ಟ್, ವೇದಾ ರೆಕಾರ್ಡಿಂಗ್ ಪ್ರಾಜೆಕ್ಟ್ -ಹೀಗೆ ಹತ್ತಾರು ಹೊಸ ಹೊಸ ಸಂಸ್ಥೆಗಳು ರೂಪಗೊಂಡವು. ಅನ್ನಮಾಚಾರ್ಯ, ಪುರಂದರದಾಸ ಮೊದಲಾದವರ ಕೀರ್ತನೆಗಳನ್ನು ಧ್ವನಿಸುರುಳಿಯ ರೂಪದಲ್ಲಿ ಮನೆಮನೆಗಳಿಗೆ ಮುಟ್ಟಿಸಿದ ಮಹೋನ್ನತಕಾಲ ಅದಾಗಿತ್ತೆಂದರೆ ತಪ್ಪಗಲಾರದು.

ಪ್ರಸಾದ್ ಅವರು ತಿರುಮಲೆಯಲ್ಲಿ ಕೆಲಸಕ್ಕೆ ಸೇರಿದ ಘಟನೆ ಕೂಡ ಪವಾಡ ಸದೃಶ ಕಥೆಯಾಗಿದೆ. ಹತ್ತು ವರ್ಷ ಜಿಲ್ಲಾ ಕಲೆಕ್ಟರರಾಗಿ ಹಲವಾರು ಪ್ರದೇಶ ಸುತ್ತಾಡಿ 1977ರಲ್ಲಿ ಪ್ರಸಾದರು ಆಂಧ್ರಪ್ರದೇಶದ ನೀರಾವರಿ ಇಲಾಖೆಯ ಮೆನೇಜಿಂಗ್ ಡೈರೆಕ್ಟರರಾಗಿ ಹೈದ್ರಾಬಾದಿಗೆ ಬಂದರು. ಮಕ್ಕಳನ್ನು ಸ್ಕೂಲಿಗೆ ಸೇರಿಸಿ, ಅಲ್ಲಿ ಒಂದು ಮನೆಯನ್ನು ಕಟ್ಟಿಕೊಂಡು ಸ್ಥಾಯಿ ಅಗಿ ಇರುವ ನೆಮ್ಮದಿಯ ಉಸಿರು ಬಿಡುವಾಗ ಪ್ರಸಾದ್ ಅವರಿಗೆ ಚೀಫ್ ಸೆಕ್ರೆಟರಿ ನಾಯಡು ಅವರಿಂದ ಫೋನ ಬಂತು. ನಿಮಗೆ ಟ್ರಾನ್ಸ್‌ಫರ್ ಆಗಿದೆ. ತಿರುಮಲ ತಿರುಪತಿ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ (ಎಕ್ಸಿಕ್ಯೂಟಿವ್ ಆಫೀಸರ್) ಎಂದು. ಮುಖ್ಯಮಂತ್ರಿ ಚೆನ್ನಾರೆಡ್ಡಿಯವರೇ ನಿಮ್ಮ ಹೆಸರನ್ನು ಸೂಚಿಸಿದ್ದಾರೆ ಎಂದು. ಆಗ ತಾನೇ ಸಂಚಾರೀ ಜೀವನದಿಂದ ಬೇಸತ್ತ ಪ್ರಸಾದ್ ಅವರು ಹೈದ್ರಾಬಾದಿನ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದರು. ಈ ಕೆಲಸದಲ್ಲಿ ತಮಗೆ ಆಸಕ್ತಿ ಇಲ್ಲ ಎಂದು ಹೇಳಲು ಧೈರ್ಯ ಬರಲಿಲ್ಲ. ಒಂಬತ್ತು ವರ್ಷದ ಮಗಳು ಮಾಧವಿ ನಾಲ್ಕು ಸಲ ಸ್ಕೂಲ್ ಬದಲು ಮಾಡಿದ್ದಳು. ಮತ್ತೆ ಊರು ಬದಲಾಯಿಸುವಲ್ಲಿ ಇವರಿಗೆ ಆಸಕ್ತಿ ಇರಲಿಲ್ಲ. ಆದ್ದರಿಂದ ಇವರು ಚೀಫ್ ಸೆಕ್ರೆಟರಿಗೆ ತಮ್ಮ ಒಪ್ಪಿಗೆ ಸೂಚಿಸಲಿಲ್ಲ. ಸರಕಾರದ ಆದೇಶಕ್ಕೆ ಅನುಗುಣವಾಗಿ ನಡೆಯುತ್ತೇನೆ ಎಂದು ಮಾತ್ರ ತಿಳಿಸಿದರು. ಆಗ ನಾಯಡು ಹೇಳಿದರು, ನೋಡು ಪ್ರಸಾದ್ ಬಲವಂತವೇನಿಲ್ಲ. ನಿನಗೆ ಇಷ್ಟವಿದ್ದರೆ ಮಾತ್ರ ಅಲ್ಲಿ ಕಳಿಸುತ್ತೇವೆ. ಇಲ್ಲದಿದ್ದರೆ ನಿಮ್ಮ ಅಭಿಪ್ರಾಯ ಮುಖ್ಯ ಮಂತ್ರಿಗಳಿಗೆ ತಿಳಿಸುತ್ತೇವೆ ಎಂದು.

ಈ ಸಮಸ್ಯೆ ಸುಲಭವಾಗಿ ಮುಕ್ತಾಯಗೊಂಡಿತು ಎಂದುಕೊಂಡರು ಪ್ರಸಾದ್. ಆದರೆ ನಿಜವಾದ ಸಮಸ್ಯೆ ಅಂದೇ ಪ್ರಾರಂಭವಾಯಿತು. ಸಂಜೆ ಮನೆಯವರೊಡನೆ ಸಿನೆಮಾ ನೋಡಲು ಹೋಗಿದ್ದರು. ಮಧ್ಯದಲ್ಲಿ ಮಗಳು ಮಾಧವಿ ಮೊಣಕಾಲು ನೋವು ಎನ್ನತೊಡಗಿದಳು. ಸಿನೆಮಾ ಮುಗಿಯುವುದರೊಳಗಾಗಿ ಮೊಣಕಾಲು ಊದಿಕೊಂಡಿತು. ಡಾಕ್ಟರರಿಗೆ ತೋರಿಸಿದರು. ಯಾವುದೋ ಹುಳು ಕಡಿದಿರಬಹುದೆಂದು ಅನುಮಾನಿಸಿ ಡಾಕ್ಟರರು ಔಷಧಿ ಕೊಟ್ಟರು. ಮೂರು ದಿನ ಕಳೆಯಿತು. ಎಕ್ಸ್-ರೇ ಆಯಿತು. ನೋವು ಕಡಿಮೆಯಾಗಲಿಲ್ಲ. ಸ್ಕೂಲಿಗೆ ಹೋಗಲಾರದಷ್ಟು ನೋವಿತ್ತು. ಶಾಲೆಗೆ ಹೋಗದೇ ಮೂವತ್ತು ದಿನ ಕಳೆದವು.

ತಾವು ಹೊಸ ಕೆಲಸ ಒಪ್ಪದೇ ಇದ್ದ ದಿನ ನೋವು ಉಂಟಾಗಿತ್ತು. ಅನುಮಾನ ಉಂಟಾಗತೊಡಗಿತು. ಮಾರನೆಯ ದಿನ ಚೀಫ್ ಸೆಕ್ರೆಟರಿಯವರನ್ನು ಕಂಡು ತಾವು ಟಿ.ಟಿ.ಡಿ. ಕೆಲಸಕ್ಕೆ ಸೇರಲು ಸಿದ್ಧ ಎಂದು ತಿಳಿಸಿದರು. ಆಗ ನಾಯಡು ಅವರು ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಯಾವ ನಿರ್ಧಾರ ತೆಗೆದುಕೊಂಡಿದ್ದಾರೊ ಗೊತ್ತಿಲ್ಲ ಎಂದರು. ಮುಖ್ಯ ಮಂತ್ರಿಗಳೊಂದಿಗೆ ಮಾತನಾಡಿ ನೋಡುತ್ತೇನೆ ಎಂದರು. ಈಗ ಪ್ರಸಾದರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಪಶ್ಚಾತ್ತಾಪವೂ ಆಗಿತ್ತು. ಕೆಲಸಕ್ಕೆ ಸೇರುವ ಒಪ್ಪಿಗೆ ನೀಡಿದ್ದೂ ಆಗಿತ್ತು. ಇನ್ನು ಮುಂದಿನದು ಹರಿಯ ಚಿತ್ತ ಎಂದುಕೊಂಡರು.

ಅಂದು ಸಂಜೆ ಅವರಿಗೆ ಅಚ್ಚರಿಯೇ ಕಾದಿತ್ತು. ನಾಯಡು ಅವರ ಫೋನ್ ಬಂತು. ಅಂದೇ ದೇವಸ್ಥಾನದ ಎಕ್ಸಿಕ್ಯೂಟಿವ್ ಆಫಿಸರ್ ಎಂಬ ಆರ್ಡರ್ ಕೂಡ ಅವರ ಕೈಸೇರಿತ್ತು. ಮನೆಗೆ ಬಂದರು. ಮಗಳು ಮಾಧವಿ ಓಡುತ್ತ ಬಂದು ತಂದೆಯನ್ನು ಅಪ್ಪಿಕೊಂಡು, ಡ್ಯಾಡಿ, ನೋಡು, ನಾನು ಚೆನ್ನಾಗಿ ನಡೆಯಬಲ್ಲೆ, ನನ್ನ ಕಾಲಿನ ಬಾವು ಮಾಯವಾಗಿದೆ. ಎಂದಳು. ತಿರುಪತಿಯ ಒಡೆಯನ ವರಪ್ರಸಾದವು ಪ್ರಸಾದ್ ಅವರ ಅನುಭವಕ್ಕೆ ಬಂದಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X