ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಉಳಿಸುವ ಬಗ್ಗೆ ಹರಿಯ ಆರು ಸೂತ್ರಗಳು

By * 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Harihareshwara, Nagalakshmi
ನನ್ನ ಮೊದಲ ಪ್ರವಾಸಾನುಭವದ ಪುಸ್ತಕಕ್ಕೆ (ಜೀವಿ ಕಂಡ ಅಮೇರಿಕಾ) ಹರಿಹರೇಶ್ವರರು ವಿದ್ವತ್ಪೂರ್ಣ ಮುನ್ನುಡಿ ಬರೆದಿದ್ದಾರೆ. 1962ರಲ್ಲಿ ಪ್ರಕಟವಾದ ಬಿ.ಜಿ.ಎಲ್.ಸ್ವಾಮಿಯವರ ಅಮೇರಿಕೆಯಲ್ಲಿ ನಾನು ಗ್ರಂಥದಿಂದ ಹಿಡಿದು 1995ರಲ್ಲಿ ಪ್ರಕಟವಾದ ಅಜ್ಜಂಪುರ ಕೃಷ್ಣಸ್ವಾಮಿಯವರ ಆಗಮಿಕರ ನಾಡುವರೆಗೆ ಬಂದ ಸುಮಾರು 21 ಪುಸ್ತಕಗಳ ಪಟ್ಟಿಯನ್ನು ಕೊಟ್ಟು ನಾನು ಬರೆದ ಪುಸ್ತಕ ಹೇಗೆ ವಿಭಿನ್ನವಾಗಿದೆ, ವಿಶಿಷ್ಟವಾಗಿದೆ ಎಂದು ಬರೆದಿದ್ದಾರೆ. ಹೆಚ್ಚಿನ ಪುಸ್ತಕಗಳು ತಮ್ಮ ಮನೆಯ ಪುಸ್ತಕ ಸಂಗ್ರದಲ್ಲಿವೆ ಎನ್ನುತ್ತಾರೆ. ಅವರ ಪುಸ್ತಕಪ್ರೇಮವನ್ನು ಮೆಚ್ಚಬೇಕು.

ಎರಡನೆಯ ವಿಶ್ವ ಕನ್ನಡ ಸಮ್ಮೇಲನ ಡೆಟ್ರಾಯಿಟ್‌ನಲ್ಲಿ ನಡೆಯಿತು. ನಾನು ಮೊದಲ ಪ್ರವಾಸದ ಬಗ್ಗೆ ಬರೆದ ಪುಸ್ತಕದ ಬಿಡುಗಡೆ ಅಲ್ಲಿ ಆಯಿತು. ಯೋಗಾಯೋಗವೆಂದರೆ ಅದನ್ನು ಬಿಡುಗಡೆ ಮಾಡಿದವರು ಅದಕ್ಕೆ ಮುನ್ನುಡಿ ಬರೆದ ಹರಿಹರೇಶ್ವರರಾಗಿದ್ದರು. ಆಗ ಪ್ರಕಟವಾದ ಸ್ಮರಣ ಸಂಚಿಕೆಯಲ್ಲಿ ಅಮೇರಿಕೆಯಲ್ಲಿ ಕನ್ನಡ ಉಳಿಸುವ ಬಗ್ಗೆ ಒಂದು ಲೇಖನ ಹರಿರೇಶ್ವರರು ಬರೆದಿದ್ದಾರೆ. ಅದರಲ್ಲಿ ಆರು ಸೂತ್ರಗಳಿವೆ:

1) ನಿಮ್ಮಲ್ಲಿ ಇಬ್ಬರಿಗೆ ಕನ್ನಡ ಗೊತ್ತಿದ್ದರೆ, ಕನ್ನಡದಲ್ಲೇ ಮಾತಾಡಿರಿ.
2) ಕನ್ನಡ ಪುಸ್ತಕ ಓದಿರಿ.
3) ಕನ್ನಡ ಬರಹದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಬರೆಯಿರಿ. (ಓದುಗರ ಓಲೆ, ಪ್ರತಿಕ್ರಿಯೆ ಕಾಲಂನಲ್ಲಿ).
4) ಪುಸ್ತಕ ಕೊಂಡು ಓದುವ ಹವ್ಯಾಸ ರೂಢಿಸಿರಿ. ಉಡುಗೊರೆ ಕೊಡುವಾಗ ಕನ್ನಡ ಪುಸ್ತಕ ಕೊಡಿರಿ.
5) ಸಾಧ್ಯವಾದಗಲೆಲ್ಲ ಕನ್ನಡದಲ್ಲೇ ಬರೆಯಿರಿ.
6) ಕನ್ನಡದ ಖ್ಯಾತ ಲೇಖಕರನ್ನು ಬರಮಾಡಿಕೊಳ್ಳಿರಿ, ಉಪನ್ಯಾಸ ಇಡಿಸಿರಿ, ಗೌರವಿಸಿರಿ. ನಿಮ್ಮನ್ನೇ ಗೌರವಿಸಿಕೊಳ್ಳಿ.

ಅಳವಡಿಸಲು ಈ ಸೂತ್ರಗಳನ್ನು ಅಮೇರಿಕೆಗಿಂತ ಕನ್ನಡ ರಾಜಧಾನಿಗೆ ಹೆಚ್ಚು ಸೂಕ್ತವಾಗಿಲ್ಲವೇ?

ನನ್ನ ಎರಡನೆಯ ಪ್ರವಾಸ ಪುಸ್ತಕವನ್ನು (ಮತ್ತೊಮ್ಮೆ ಅಮೇರಿಕಾ ಪ್ರವಾಸ) ಶಿಕಾರಿಪುರ ಹರಿಹರೇಶ್ವರ ಹಾಗೂ ಅವರ ಧರ್ಮಪತ್ನಿ ನಾಗಲಕ್ಷ್ಮಿಯವರಿಗೆ ಅರ್ಪಣೆ ಮಾಡಿದ್ದೇನೆ. ಹಲವಾರು ಸಲ ಅವರ ಮೈಸೂರು ಮನೆಯಲ್ಲಿ ಆತಿಥ್ಯ ಪಡೆದಿದ್ದೇನೆ. ಅದೊಂದು ಸಾಹಿತಿಗಳಿಗೆ, ಕಲಾವಿದರಿಗೆ ಮಹಾಮನೆ ಇದ್ದಂತೆ. ಮೊದಲ ಸಲ ನಾನು ಅವರ ಮನೆಗೆ ಹೋದಾಗ, ಆಗತಾನೆ ಅಮೇರಿಕೆಯಿಂದ ತಮ್ಮ ಸಾಮಾನುಗಳೊಂದಿಗೆ ಬಂದಿದ್ದರು. ಸರಸ್ವತೀಪುರದಲ್ಲಿ ಭವ್ಯ ಮನೆಯನ್ನು ಮೊದಲೇ ಕಟ್ಟಿಸಿದ್ದರು. ಅಮೇರಿಕೆಯಲ್ಲಿದ್ದಾಗಲೂ ಅವರು ಬಹಳ ಪುಸ್ತಕ ಸಂಗ್ರಹಿಸಿದ್ದರು. ಭಾರತಕ್ಕೆ ಅವರ ಗ್ರಂಥರಾಶಿ 30 ಪೆಟ್ಟಿಗೆಗಳಲ್ಲಿ ಹಡಗಿನಿಂದ ಬಂದಿದ್ದವು. ಅವನ್ನು ಇನ್ನೂ ಹೊಂದಿಸಿರಲಿಲ್ಲ. ನನ್ನನ್ನು ತಮ್ಮ ಮೈಸೂರ ಮಿತ್ರರಿಗೆ ಪರಿಚಯಿಸಲು ತಮ್ಮ ಮನೆಯಲ್ಲಿ ಒಂದು ಭೋಜನಕೂಟ ಏರ್ಪಡಿಸಿದ್ದರು. ಹಲವಾರು ಸಾಹಿತಿಮಿತ್ರರನ್ನು , ಪತ್ರಕರ್ತರನ್ನು, ಆಪ್ತಮಿತ್ರರನ್ನು ಸಹಭೋಜನಕ್ಕೆ ಕರೆದಿದ್ದರು. ಅಂದು ಏಕಾದಶಿಯಾಗಿತ್ತು. ನಾನು ಮಾತ್ರ ಕೇವಲ ಫಲಾಹಾರ ಮಾಡುತ್ತೇನೆ ಅಂದಾಗ, ಊಟ ಕ್ಯಾನ್ಸಲ್ ಮಾಡಿ ಅಭ್ಯಾಗತರಿಗೆಲ್ಲ ಅವಲಕ್ಕಿ-ಫಲಾಹಾರ-ಬದಾಂ-ಹಾಲಿನ ಮೇಜವಾನಿ ಮಾಡಿಸಿದರು. ನಾಗಲಕ್ಷ್ಮಿಯವರು ನಳಪಾಕ ಕೌಶಲ್ಯವನ್ನೆಲ್ಲ ಪ್ರದರ್ಶಿಸಿದ್ದರು. ಅತಿಥಿಗಳನ್ನು ಸತ್ಕರಿಸುವ ಪ್ರಸಂಗ ಬಂದಾಗ, ಕನ್ನಡದ ಪ್ರೀತಿಯ ವಿಷಯ ಬಂದಾಗ, ನಾನು ಯಾವಾಗಲೂ ಹರಿಹರೇಶ್ವರ ದಂಪತಿಗಳನ್ನು ನೆನೆಯುತ್ತೇನೆ.

ಮೂರು ವರ್ಷಗಳ ಹಿಂದೆ ನನಗೆ ಮೈಸೂರಿನ ದಸರಾ ಕವಿ ಸಮ್ಮೇಲನದಲ್ಲಿ ಭಾಗವಹಿಸಲು ಆಮಂತ್ರಣ ಬಂದಿತ್ತು. ನನಗೆ ಅಚ್ಚರಿಯಾಗಿತ್ತು. ನನ್ನ ಹೆಸರು ಸೂಚಿಸಿದವರಾರು ಎಂಬ ಕುತೂಹಲವಿತ್ತು. ಸಂಘಟಕರನ್ನು ನಂತರ ವಿಚಾರಿಸಿದಾಗ ನಿಜಸಂಗತಿ ತಿಳಿದಿತ್ತು. ಹರಿಹರೇಶ್ವರರೇ ನನ್ನ ಹೆಸರು ಸೂಚಿಸಿದ್ದರಂತೆ. ಅವರ ಮನೆಗೆ ಹೋದಾಗ ಹೇಳಿದ್ದರು, ಜೀವಿ, ಬರಿ ಉತ್ತಮ ಸಾಹಿತ್ಯ ರಚಿಸಿದರೆ ಸಾಲದು. ನಿಮ್ಮಂತಹರಿಗೆ ಒಬ್ಬ ಸಾಹಿತ್ಯ ಕಾರ್ಯದರ್ಶಿಯೂ ಅವಶ್ಯ. ಎಂದಿದ್ದರು. ಹಲವಾರು ಸಲ ನಾನು ಮೈಸೂರಿಗೆ ಭಾಷಣಕ್ಕೆ ಹೋಗಿದ್ದೆ. ಬೇಂದ್ರೆ, ಗೋಕಾಕ, ಮಧುರಚೆನ್ನರ ಬಗ್ಗೆ ಮಾತಾಡಿದ್ದೆ. ತಪ್ಪದೆ ಹರಿ, ಮುಂದಿನ ಸಾಲು ಅಲಂಕರಿಸಿ ನನಗೆ ಸ್ಫೂರ್ತಿಯನ್ನೂ ಪ್ರೋತ್ಸಾಹನೆಯನ್ನೂ ನೀಡುತ್ತಿದ್ದರು. ಪ್ರತಿ ಪತ್ರದಲ್ಲಿ ಸ್ನೇಹದಲ್ಲಿ ನಿಮ್ಮವ ಎಂದು ಬರೆದು ಅಂಕಿತ ಹಾಕುತ್ತಿರುವ ಹರಿಯನ್ನು ಮರೆಯುವುದು ಸಾಧ್ಯವಿಲ್ಲ.

ನಾನು ಬರೆದಿರುವ ಕಾದಿರುವಳು ಶಬರಿ ಸಂಗೀತ-ನಾಟಕದ ಬಗ್ಗೆ ಹೇಳಿದಾಗ, ಅದರ ವಸ್ತುವನ್ನು ಚರ್ಚಿಸಿದಾಗ, ಹರಿಹರೇಶ್ವರರು ಬಹಳ ಆಸಕ್ತಿ ತೋರಿಸಿದರು. ಶಬರಿಯ ಬಗ್ಗೆ ಅವರು ವಿಶೇಷ ಅಧ್ಯಯನ ಮಾಡಿದ್ದರು. ನನ್ನ ಪುಸ್ತಕಕ್ಕೆ ನೀವೇ ಮುನ್ನುಡಿ ಬರೆಯಬೇಕು ಎಂದಿದ್ದೆ. ಅವರು ಒಪ್ಪಿದ್ದರು. ಅವರು ಅರ್ಧಕ್ಕೆ ಬಿಟ್ಟ ಕಲಸಗಳಲ್ಲಿ ಮುನ್ನುಡಿಯ ಕೆಲಸವೂ ಒಂದು. ಕನ್ನಡದ ಕೆಲಸ ಎಲ್ಲಿಯೇ ನಡೆದಿರಲಿ ಹರಿಹರೇಶ್ವರರ ಸಹಾಯದ ಹಸ್ತ ಮುಂದಾಗುತ್ತಿತ್ತು.

ಕನ್ನಡದ ಕೆಲಸ ಎಂದೊಡನೆ ಅನಿವಾಸಿ ಕನ್ನಡಿಗರ ಕೆಲಸ ನೆನಪಾಗುತ್ತದೆ. ನಿತ್ಯಾನಂದಶುಕಯೋಗಿ ವಿರಚಿತ ಕರ್ಣಾಟಕ ಭಾಗವತವನ್ನು ಹ್ಯೂಸ್ಟನ್‌ನ ಕನ್ನಡ ಫೌಂಡೇಶನ್ನವರು ಪ್ರಕಟಗೊಳಿಸಿದ್ದಾರೆ. ಈ ಗ್ರಂಥದ ಪ್ರಕಾಶನದ ಹಿಂದೆ ಒಂದು ರೋಚಕ ಕಥೆ ಇದೆ. ಡಾ| ಹೊಳಲ್ಕೆರೆ ರಂಗರಾವ್ ಚಂದ್ರಶೇಖರ್ ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಭೌತ ವಿಜ್ಞಾನಿ ಅಮೇರಿಕೆಯಲ್ಲಿದ್ದಾರೆ. ಅವರ ವಂಶಜರಲ್ಲಿ ಏಳು ತಲೆಮಾರುಗಳಿಗೆ ಹಿರಿಯರಾದ ಶ್ರೀರಾಮಣ್ಣಯ್ಯನವರು, ಚಾಟುವಿಠಲನಿಗಿಂತ ಹಿಂದೆ, ಅಂದರೆ 500 ವರ್ಷಗಳ ಹಿಂದೆ ಜೀವಿಸಿದ ನಿತ್ಯಾನಂದಶುಕಯೋಗಿ ರಚಿಸಿದ, 12000 ಭಾಮಿನಿ ಷಟ್ಪದಿಗಳಲ್ಲಿ ರಚಿತವಾದ ಸಂಪೂರ್ಣ ಭಾಗವತವನ್ನು ತಾಳೆಗರಿಯಲ್ಲಿ(1755ರಲ್ಲಿ) ಬರೆದಿಟ್ಟಿದ್ದರಂತೆ. ಅದು ಅವರ ಹೊಳಲ್ಕೆರೆಯ ಹಳೆಯ ಮನೆಯ ಪೂಜಾಗೃಹದಲ್ಲಿ ಧೂಳುತಿನ್ನುತ್ತ ಬಿದ್ದಿತ್ತು. ಅದನ್ನು (1991ರಲ್ಲಿ) ಹುಡುಕಿ, ತಾಳೆಗರಿಗಳು ಜೀರ್ಣವಾಗಿದ್ದರಿಂದ ಅವುಗಳ ಮೈಕ್ರೋಫಿಲ್ಮ್ ಪ್ರತಿ ತಯಾರಿಸಿದರು. ಅದನ್ನು ಸಂಪಾದಿಸಲು ಡಾ| ಟಿವಿ ವೆಂಕಟಾಚಲಶಾಸ್ತ್ರಿಗಳ ನೇತೃತ್ವದಲ್ಲಿ ಒಂದು ಪರಿಶೋಧಕ ಮಂಡಲಿಯನ್ನು 2005ರಲ್ಲಿ ನಿಯಮಿಸಿದರು. ಹರಿಹರೇಶ್ವರರು ಆ ಸಮಿತಿಯಲ್ಲಿದ್ದು ಸಕ್ರಿಯವಾಗಿ ದುಡಿದಿದ್ದಾರೆ. 1500 ಪುಟಗಳ ಬೃಹದ್ರಂಥ ಬೆಳಕಿಗೆ ಬಂತು. ಇದರ ವೆಚ್ಚವನ್ನೆಲ್ಲ ಕುಮಾರ ಮುಳವಳ್ಳಿ ಮೊದಲಾದ ಅನಿವಾಸಿ ಕನ್ನಡ ಪ್ರೇಮಿಗಳು ವಹಿಸಿದರು. ಈ ಗ್ರಂಥದ ಬಿಡುಗಡೆ ಡೆಟ್ರಾಯಿಟ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಲನದಲ್ಲಿ 2008ರಲ್ಲಿ ಆಯಿತು. ನಾನು ಆ ಸಮ್ಮೇಲನದಲ್ಲಿ ಭಾಗಹಿಸಿದ್ದೆ. ನನ್ನ ಅನುಭವಗಳನ್ನು ಬರೆದಿದ್ದೆ. ಭಾಗವತ ಗ್ರಂಥ ಬಗ್ಗೆ ಬರೆದಿರಲಿಲ್ಲ. ಹರಿಹರೇಶ್ವರರು ನಾನೇಕೆ ಬರೆದಿಲ್ಲ ಎಂದು ಕೇಳಿದಾಗ ನನಗೆ ಅದರ ಪ್ರತಿ ನೋಡಿಲ್ಲ ಎಂದಿದ್ದೆ. ನನಗೆ ಆ ಬೃಹದ್ರಂಥದ ಎರಡು ಸಂಪುಟಗಳನ್ನು ಕಳಿಸಿ ಅದರ ಬಗ್ಗೆ ಬರೆಯಲು ಹೇಳಿದರು. ಇಲ್ಲಿ ಕೂಡ ಅವರ ಕನ್ನಡದ ಬಗ್ಗೆ ಇರುವ ಕಳಕಳಿ ವ್ಯಕ್ತವಾಗುತ್ತದೆ.

ಹರಿಹರೇಶ್ವರ ಆಪ್ತಮಿತ್ರರಾದ ಮಲ್ಲಿಕಾರ್ಜುನ ಅವರು ನನಗೆ ಕೆಲವು ಸಂಗತಿಗಳನ್ನು ತಿಳಿಸಿದರು. ಯಾರಿಗಾದರು ಕನ್ನಡ ಅಥವಾ ಸಂಸ್ಕೃತ ಪದಗಳ ಬಳಕೆಯ ಬಗ್ಗೆ, ಅವುಗಳ ಅರ್ಥದ ಬಗ್ಗೆ ಸಂಶಯ ಬಂದರೆ ಹರಿಹರೇಶ್ವರರನ್ನು ಸಂಪರ್ಕಿಸುತ್ತಿದ್ದರಂತೆ. ಕೂಡಲೇ ಈ-ಮೇಲ್ ಮೂಲಕ ಮಿತ್ರರ ಸಂಶಯ ನಿವಾರಿಸುತ್ತಿದ್ದರಂತೆ. ಅವರ ನೆನಪಿನ ಶಕ್ತಿಯೂ ಅಸಾಧಾರಣವಾಗಿತ್ತು. ಅಲ್ಲದೆ ಅವರ ಮನೆಯಲ್ಲಿ ಸಾಕಷ್ಟು ರೆಫರೆನ್ಸ್ ಪುಸ್ತಕಗಳು ಇದ್ದವು. ಉಗಾದಿ-ಯುಗಾದಿ ಶಬ್ದಗಳ ಬಳಕೆ ಕನ್ನಡದಲ್ಲಿದೆ. ಅದರ ವಿವರ ಹರಿಹರೇಶ್ವರರು ತಿಳಿಸಿದ್ದರು. ಉದಾಹರಣೆದೆ ಸಿಂಚನ ಎಂಬ ಶಬ್ದದ ಅರ್ಥವೇನು ಎಂದು ಕೇಳಿದ ಮಿತ್ರರಿಗೆ ಹರಿ ಉತ್ತರಿಸಿದ್ದರಂತೆ: . . .ಸಿಂಚನ ಶಬ್ದವನ್ನು ಪ್ರೋಕ್ಷಣ, ಚಿಮುಕಿಸುವುದು, ಮೆಲ್ಲನೆ ಚೆಲ್ಲುವುದು ಎಂಬ ಅರ್ಥದಲ್ಲಿ ಸಂಸ್ಕೃತ ಕವಿಗಳು ಬಹಳ ಹಿಂದೆಯೇ ಬಳಸಿದ್ದಾರೆ. ಮಾಘಕವಿಯ ಕಿರಾತಾರ್ಜುನೀಯ(8:34, 8:40), ಕಾಳಿದಾಸನ ಮೇಘದೂತ (1:26). ಹೀಗೆ ಒಬ್ಬ ಇಂಜಿನಿಯರ್ ಬರೆಯುತ್ತಾರೆ ಅಂದರೆ ಅವರ ವಿದ್ವತ್ತಿನ ಬಗ್ಗೆ ಯರಿಗಾದರೂ ಅಚ್ಚರಿ ಉಂಟಾಗುವುದು ಸಹಜ.

ಹರಿಹರೇಶ್ವರ ದಂಪತಿಗಳಿಗೆ ಇಬ್ಬರು ಮಕ್ಕಳು. ನಂದಿನಿ ಮತ್ತು ಸುಮನ. ಇಬ್ಬರೂ ಅಮೇರಿಕೆಯಲ್ಲಿ ಉಚ್ಚ ಶಿಕ್ಷಣ ಪಡೆದಿದ್ದಾರೆ, ಒಳ್ಳೆಯ ಕೆಲಸದಲ್ಲಿದ್ದಾರೆ. ಅವರ ಅರ್ಧಾಂಗಿ ನಾಗಲಕ್ಷ್ಮಿ ಕಥೆಗಳನ್ನು ಚೆನ್ನಾಗಿ ಬರೆಯುತ್ತಾರೆ. ಅವರು ಮೊದಲು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಮುಂದೆ ಎಂ.ಎ.ಪದವಿ ಪಡೆದು ವರ್ಲ್ಡ್‌ಬ್ಯಾಂಕಿನಲ್ಲಿ ಅಧಿಕಾರಿಯಾಗುವ ಕನಸು ಕಾಣುತ್ತಿದ್ದರು. ಆದರೆ ಹರಿಹರೇಶ್ವರ ಅವರಿಗೆ ಕನ್ನಡ ವಿಷಯದಲ್ಲಿ ಎಂ.ಎ.ಮಾಡಲು ಪ್ರೇರೇಪಿಸಿದರು.

ತಾವು ಜಿ.ಎಸ್.ಶಿವರುದ್ರಪ್ಪನವರ ವಿದ್ಯಾರ್ಥಿನಿಯಾಗಿದ್ದನ್ನು ಹೆಮ್ಮೆಯಿಂದ ನೆನೆಯುತ್ತಾರೆ. ಹರಿಹರೇಶ್ವರರು ಕನ್ನಡದ ಪ್ರಚಾರವನ್ನು ಮನೆಯಲ್ಲಿ, ನೆರೆಹೊರೆಯಲ್ಲಿ, ರಾಜ್ಯದಲ್ಲಿ ಅಷ್ಟೆ ಏಕೆ ಅಂತಾರಾಷ್ಟ್ರೀಯ ಸ್ತರದಲ್ಲಿ ಮಾಡಿದ ಕನ್ನಡದ ಏಕೈಕ ಕುವರ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X