• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಪ್ರೀತಿಯ ರೋಲ್‌ಮಾಡೆಲ್ ಹರಿಹರೇಶ್ವರ!

By * 'ಜೀವಿ' ಕುಲಕರ್ಣಿ, ಮುಂಬಯಿ
|

ಶಿಕಾರಿಪುರ್ ಹರಿಹರೇಶ್ವರ(1936-2010) ಇಂದು ನಮ್ಮ ಮಧ್ಯದಲ್ಲಿ ಇಲ್ಲ. ಜುಲೈ 22ರಂದು ಮೈಸೂರಿನ ಸ್ವಗೃಹದಲ್ಲಿ ಕೊನೆಯ ಉಸಿರನ್ನೆಳೆದರು. ಅವರದು ವಿನಾ ದೈನ್ಯೇನ ಜೀವನಂ, ಅನಾಯಸೇನ ಮರಣಂ ಇದಕ್ಕೆ ಉತ್ತಮ ನಿದರ್ಶನ. ಅವರು ಇಲ್ಲಿ ಸುಮ್ಮನೆ ಇದ್ದರು, ನಿಜವಾದ ತಮ್ಮ ಮನೆಗೆ, ಸಗ್ಗಕ್ಕೆ ತೆರಳಿದರು. ಹರಿಹರೇಶ್ವರರಂತಹ ಪುಣ್ಯಜೀವಿಗಳು ಕ್ವಚಿತ್ತಾಗಿ ಹುಟ್ಟುತ್ತಾರೆ, ಶಾಶ್ವತವಾಗಿ ನಮ್ಮ ಮನದಲ್ಲಿ ಉಳಿದುಬಿಡುತ್ತಾರೆ. ಆ ದೃಷ್ಟಿಯಿಂದ ಅವರು ಅಮರರು.

ನಾನು ಅವರನ್ನು ಮೊದಲು ಕಂಡದ್ದು 2000ರಲ್ಲಿ (ಸೆಪ್ಟೆಂಬರ್ 1,2,3) ಹ್ಯೂಸ್ಟನ್‌ನಲ್ಲಿ ನಡೆದ ಅಕ್ಕ ಸಂಸ್ಥೆ ನಡೆಸಿದ ಪ್ರಥಮ ವಿಶ್ವ ಕನ್ನಡ ಸಮ್ಮೇಲನದಲ್ಲಿ. ನಾವು ಮೊದಲನೆಯ ದಿನ ಬ್ಯಾಚ್, ಕೂಪನ್ ಪಡೆದಾಗ, ಜೊತೆಗೆ ಎರಡು ಕಿಲೋ ಭಾರದ ಒಂದು ಸ್ಮರಣ ಸಂಚಿಕೆಯನ್ನೂ ಪಡೆದೆವು. ಅದರ ಪ್ರಧಾನ ಸಂಪಾದಕರಾದ ಹರಿಹರೇಶ್ವರರನ್ನು ಕಂಡು ನನ್ನ ಮೆಚ್ಚಿಗೆ ವ್ಯಕ್ತಪಡಿಸಿದೆ. ನಾನು ಬರೆದ ನಾ ಕಂಡ ಬೇಂದ್ರೆ, ನಾ ಕಂಡ ಗೋಕಾಕ ಪುಸ್ತಕಗಳನ್ನು ಅವರಿಗೆ ವಿಶ್ವಾಸಪೂರ್ವಕವಾಗಿ ಕಾಣಿಕೆಯಾಗಿ ಕೊಟ್ಟೆ. ಸಮ್ಮೇಲನದಲ್ಲಿ ಎಲ್ಲೆಡೆ, ಎಲ್ಲರ ಬಾಯಲ್ಲಿ ಹರಿ, ಹರಿ ಶಬ್ದ. ಕಾರಣ ಎಲ್ಲ ಕಾರ್ಯಕ್ರಮಗಳಲ್ಲಿ ಹರಿಹರೇಶ್ವರ ಮುಂದಾಗಿದ್ದರು.

ಸ್ಮರಣ ಸಂಚಿಕೆಯ ಸಂಪಾದನೆಯು ಅವರ ಸಾಧನೆಯ ಶಿಖರವಾಗಿತ್ತು. ಅಲ್ಲಿ ತಮ್ಮ ಸಂಕಷ್ಟಗಳನ್ನು ಅವರು ತೋಡಿಕೊಂಡಿದ್ದರು. ಈ ಸ್ಮರಣ ಸಂಚಿಕೆಯಲ್ಲಿರುವ ಶೇಕಡಾ ತೊಂಬತ್ತೈದು ಪಾಲು ಲೇಖನಗಳು, ಪ್ರತಿಯೊಬ್ಬರನ್ನು ನಾನು ಹಲವು ವಿಧದಲ್ಲಿ ವೈಯಕ್ತಿಕವಾಗಿ ಸಂಪರ್ಕಿಸಿದ ನಂತರವೇ ಬಂದ ಹೂವುಗಳು, ಜಗತ್ತಿನ ಎಲ್ಲೆಡೆಯಿಂದ ಬಂದ ಲೇಖನಗಳು ಇಲ್ಲಿವೆ. ಪ್ರಕಾರಗಳನ್ನೇ ನೋಡಿ: ಕವನಗಳು(48), ಕತೆಗಳು(23), ಅನುಭವಗಳು(8), ಹಾಸ್ಯ/ವಿಡಂಬನೆ/ಹರಟೆಗಳು(13), ನಾಟಕ(1), ಪ್ರಬಂಧಗಳು(31)... ಹೀಗೆ ಎಲ್ಲರ ಅಭಿರುಚಿಗೆ ಆಹಾರವಾಗುವ ಸವಿಗನ್ನಡ ಸಾಮಗ್ರಿ ಇಲ್ಲಿದೆ ಎಂದು ಸಂಪಾದಕೀಯದಲ್ಲಿ ಬರೆದಿದ್ದರು. ಇಲ್ಲಿಯವರೆಗೆ ಆರು ವಿಶ್ವ ಸಮ್ಮೇಲನಗಳು ನಡೆದಿವೆ. ಇವರು ಸಂಪಾದಿಸಿದ ಸ್ಮರಣ ಸಂಚಿಕೆಗೆ ಸರಿ ಸಮಾನವಾದ ಹೊತ್ತಿಗೆ ಇನ್ನೊಂದು ಬಂದಂತಿಲ್ಲ. ನಾನೂ ಪ್ರಥಮ ಸಮ್ಮೇಲನದಲ್ಲಿ ಭಾಗವಿಸಿದ್ದೆ. ಸಮ್ಮೇಲನದ ಬಗ್ಗೆ ಹಲವಾರು ಲೇಖನಗಳನ್ನು ನನ್ನ ಅಂಕಣದಲ್ಲಿ ಬರೆದೆ. ಅದರಲ್ಲಿ ಮೂರು ಲೇಖನಗಳನ್ನು ಸ್ಮರಣ ಸಂಚಿಕೆಯ ಬಗ್ಗೆ ಬರೆದಿದ್ದೆ. ಮೂರು ದಿನಗಳಲ್ಲೆ ಹರಿಹರೇಶ್ವರರು ನನಗೆ ಆತ್ಮೀಯರಾದರು.

ಅಮೆರಿಕೆಯ ನನ್ನ ನಾಲ್ಕು ತಿಂಗಳ ವಾಸ್ತವ್ಯದಲ್ಲಿ ಹಲವಾರು ಕಡೆ ಆಮಂತ್ರಿತನಾಗಿ ವರಕವಿ ಬೇಂದ್ರೆಯವರ ಬಗ್ಗೆ ಭಾಷಣ ಮಾಡಿದೆ. ಕ್ಯಾಲಿಫೋರ್ನಿಯಾದ ಸಾಹಿತಿ ಮಿತ್ರರು ನನ್ನ ಭಾಷಣ ಏರ್ಪಡಿಸಿದ್ದರು. ನನ್ನ ಭಾಷಣ ಕೇಳಲು ಹರಿಹರೇಶ್ವರರು 200 ಮೈಲು ದೂರದಿಂದ (ಸ್ಟಾಕ್‌ಟನ್‌ನಿಂದ) ಕಾರ್ ನಡೆಸಿಕೊಂಡು ಬಂದಿದ್ದರು. ಸಭೆಯ ಅಧ್ಯಕ್ಷತೆಯನ್ನು ವಹಿಸಲು ನಾನು ಹರಿಹರೇಶ್ವರರ ಹೆಸರು ಸೂಚಿಸಿದೆ. ಅದೊಂದು ಅವಿಸ್ಮಣೀಯ ಅನುಭವ. (ವಿವರ ನನ್ನ ಪುಸ್ತಕ ಜೀವಿ ಕಂಡ ಅಮೇರಿಕಾ ಪುಸ್ತಕದಲ್ಲಿವೆ. ಪು.245-48). ಹರಿಹರೇಶ್ವರರ ಕನ್ನಡ ಪ್ರೀತಿ ಯಾವಾಗಲೂ ಉಕ್ಕಿ ಹರಿಯುತ್ತಿತ್ತು. ಇಂಥ ಸಭೆಗಳಲ್ಲಿ ಅವರು ಕೊನೆಗೆ ಕೆಲವು ರಸ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳು. ಸರಿ ಉತ್ತರ ಕೊಟ್ಟವರಿಗೆ ಕನ್ನಡ ಹಾಡಿನ ಧ್ವನಿಸುರುಳಿ ಇಲ್ಲವೆ ಕನ್ನಡ ಪುಸ್ತಕ ಕಾಣಿಕೆಯಾಗಿ ಕೊಡುತ್ತಿದ್ದರು. (ಎಲ್ಲಿಯೇ ಉತ್ತಮ ಪುಸ್ತಕ, ಸಿಡಿ ಕಂಡರೆ ಹತ್ತು ಪ್ರತಿ ಕೊಂಡು ಅತಿಥಿಗಳಿಗೆ, ಮಿತ್ರರಿಗೆ ಹಂಚುತ್ತಿದ್ದರು. ಇಂಥ ನೂರು ಹರಿಹರೇಶ್ವರು ಕನ್ನಡ ನಾಡಿನಲ್ಲಿ ಹುಟ್ಟಿದರೆ ಉತ್ತಮ ಕನ್ನಡ ಸಾಹಿತಿಗಳಿಗೆ ಸಂಕಷ್ಟವಿಲ್ಲ. ಸಾವಿರ ಪ್ರತಿಗಳು ಅನಾಯಸವಾಗಿ ಖರ್ಚಾಗಿ ಬಿಡುತ್ತವೆ.)

ಸಂಜೆ ಏಳು ಗಂಟೆಗೆ ನನ್ನ ಭಾಷಣ ಪ್ರಾರಂಭವಾಯ್ತು. ಬೇಂದ್ರೆ ಎಂದೊಡನೆ ನನ್ನ ಮೈಯಲ್ಲಿ ಆವೇಶ ಬಂದುಬಿಡುತ್ತದೆ. ನಾನು ಮಾತಾಡುವದಿಲ್ಲ ನನ್ನ ಗುರುಗಳು ಮಾತಾಡಿಸುತ್ತಾರೆ. ನಾನು ಎರಡು ತಾಸು ಮಾತಾಡಿದೆ. ಅಂದು ಶುಕ್ರವಾರವಿತ್ತು. ಮರುದಿನ ಬಿಡುವು ಎಂದು ನನ್ನ ಭಾಷಣ ಮುಂದುವರಿಸಲು ಕಾವ್ಯರಸಿಕರು ಕೇಳಿಕೊಂಡರು. ಮತ್ತೆ ಎರಡು ಗಂಟೆ ಮಾತಾಡಿದೆ. ನನ್ನ ಬಳಿ ನಾ ಕಂಡ ಬೇಂದ್ರೆ ಪುಸ್ತಕದ ಒಂದೇ ಪ್ರತಿ ಉಳಿದಿತ್ತು. ಬಹಳ ಜನ ಪ್ರತಿಗಾಗಿ ಬೇಡಿದರು. ಆಗ ಅಧ್ಯಕ್ಷತೆ ವಹಿಸಿದ್ದ ಹರಿಹರೇಶ್ವರರು ಅದರ ಮೇಲೆ ನನ್ನ ಹಸ್ತಾಕ್ಷರ ಪಡೆದು ಅದನ್ನು ಹರಾಜು ಮಾಡಲು ಮುಂದಾದರು. ನನಗೆ ಮುಜುಗರವಾಯಿತು. ಪುಸ್ತಕದ ಬೆಲೆ ರೂ.100. 25 ಡಾಲರ್‌ನಿಂದ ಬಿಡ್ಡಿಂಗ್ ಶುರುವಾಯಿತು. 80 ಡಾಲರ್‌ಗೆ ಚೇತನ್ ಪಾಟೀಲ್ ಎಂಬ ಕನ್ನಡಾಭಿಮಾನಿ ನನ್ನ ಪುಸ್ತಕ ಕೊಂಡರು. (ಅಂದಿನ ಡಾಲರ್ ಬೆಲೆಯ ಪ್ರಕಾರ ಮೊತ್ತ ರೂ. 3,700 ಆಗಿತ್ತು.). ಇದು ಕೂಡ ಹರಿಹರೇಶ್ವರರ ಕನ್ನಡ ಪ್ರೀತಿಯ ಒಂದು ಮಾದರಿಯಾಗಿತ್ತು.

ಹುಟ್ಟು, ಕಲಿಕೆ, ವೃತ್ತಿ : ಹರಿಹರೇಶ್ವರರ ಪೂರ್ವಜರು ಶಿಕಾರಿಪುರದಿಂದ ಶಿವಮೊಗ್ಗೆಗೆ ಬಂದರು. ಅಲ್ಲಿಯೇ ಇವರ ಬಾಲ್ಯ ಹಾಗೂ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವಾಯ್ತು. ದಾವಣಗೆರೆಯ ಇಂಜಿನಿಯರಿಂಗ್ ಕಾಲೇಜು ಸೇರಿ ಪದವಿ ಗಳಿಸಿದರು. ಅರ್ಕಿಟೆಕ್ಚರ್ ಅವರ ಪ್ರೀತಿಯ ವಿಷಯವಾಗಿತ್ತು. ಮುಂದೆ ಸುರತ್ಕಲ್ಲಿಗೆ ಹೋಗಿ ಎಂ.ಟೆಕ್. ಪದವಿ ಗಳಿಸಿದರು. ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಕಾಲ ಪ್ರಾಧ್ಯಾಪಕರಾಗಿದ್ದರು. ಮುಂದೆ ನೈವೇಲಿಯಲ್ಲಿ, ನಾಸಾದಲ್ಲಿ ಕೆಲಸ ಮಾಡಿ ಅಮೇರಿಕೆಗೆ ತೆರಳಿದರು. ಅಮೇರಿಕೆಯಲ್ಲಿ ಸರಕಾರಿ ಕೆಲಸದಲ್ಲಿದ್ದರು. ಹಲವಾರು ಮಹತ್ವದ ಫ್ಲೈಓವರ್ ನಿರ್ಮಾಣದಲ್ಲಿ ಸಕ್ರಿಯರಾಗಿ ದುಡಿದರು.

35 ವರ್ಷ ಅಮೆರಿಕೆಯಲ್ಲಿದ್ದು ನಿವೃತ್ತಿಯ ನಂತರ ಕನ್ನಡ ನಾಡಿಗೆ ಮರಳಿದರು. ಸಂಸ್ಕೃತ ಕಾಗೂ ಕನ್ನಡದಲ್ಲಿ ಅವರಿಗೆ ವಿಶೇಷ ವ್ಯಾಸಂಗಾಸಕ್ತಿ ಇತ್ತು. ಹಾಗೆ ನೋಡಿದರೆ ಇವರು ಬಹುಭಾಷಾ ನಿಪುಣರು. ಇವರಿಗೆ ತಮಿಳು, ತೆಲುಗು, ಹಿಂದಿ ಹಾಗೂ ಪರ್ಶಿಯನ್ನ ಭಾಷೆಗಳ ಜ್ಞಾನವಿತ್ತು. ಅಮೆರಿಕೆಯಲ್ಲಿರುವಾಗ ಅವರು ಕನ್ನಡದ ಹಾಗೂ ಭಾರತೀಯ ಸಂಸ್ಕೃತಿಯ ರಾಯಭಾರಿಯಂತಿದ್ದರು. ಸಂಸ್ಕೃತ ಮಂತ್ರ ಪಠನದಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದರು. ಎಲ್ಲಿಯಾದರೂ ಲಕ್ಷೀಪೂಜೆ, ಸತ್ಯನಾರಾಯಣ ಪೂಜೆ ಇದ್ದರೆ, ಪುರೋಹಿತರು ಸಿಗದಿದ್ದರೆ, ತಾವೇ ಮುಂದಾಗಿ ಪೂಜೆ ಮಾಡಿಸುತ್ತಿದ್ದರು. ಮದುವೆ ಕೂಡಾ ಮಾಡಿಸುತ್ತಿದ್ದರು. ತಮಾಷೆಗಾಗಿ ತಮ್ಮನ್ನು ವೀಕ್-ಎಂಡ್ ಪುರೋಹಿತ ಎಂದು ಕರೆದುಕೊಳ್ಳುತ್ತಿದ್ದರು. ಕೆಲ ವೇದ ಮಂತ್ರಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅವರು ಎಷ್ಟು ಸನಾತನಿಗಳೋ ಅಷ್ಟೇ ಆಧುನಿಕರೂ ಆಗಿದ್ದರು. ಕೆಲ ಸಲ ತಮ್ಮ ಪೂಜೆಯಲ್ಲಿ ಕರುಣಾಳು ಬಾ ಬೆಳಕೆ ಪದ್ಯ ಕೂಡ ಹಾಡುತ್ತಿದ್ದರು. (ಇದು ಕಾರ್ಡಿನಲ್ ನ್ಯೂಮನ ಬರೆದ Lead Kindly Light ಪದ್ಯದ ಬಿಎಂಶ್ರೀಯವರ ಅನುವಾದ.)

ಪುಸ್ತಕ, ಪ್ರಶಸ್ತಿ : ಹರಿಹರೇಶ್ವರರು ಹಲವಾರು ಪುಸ್ತಕ ಕನ್ನಡದಲ್ಲಿ ಬರೆದಿದ್ದಾರೆ. (ವಿದೇಶಕ್ಕೆ ಬಂದವರು,ಮಾತಿನ ಮಂಟಪ, ಮಾತಿನ ಚಪ್ಪರ, ಕನ್ನಡದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಗೀತ ಗುಚ್ಛ, ಮಾತೇ ಮುತ್ತು, ಮಾತಿನ ಮಲ್ಲಿಗೆ, ಮಾತಿನ ಚಾವಡಿ, ಮೊದಲ ಹೆಜ್ಜೆಗಳು, ಗುಬ್ಬಿ ಗುಬ್ಬಚ್ಚಿ, ಕನ್ನಡ ಉಳಿಸಿ ಬೆಳೆಸುವ ಬಗೆ, ಮುಕ್ತಕ ಕನ್ನಡ ಮುಂ.) ಅವರ ಆರು ಪುಸ್ತಕಗಳು ಅಚ್ಚಿನಲ್ಲಿದ್ದವು. ಜಲಶಾಸ್ತ್ರ, ವಾಸ್ತುಶಾಸ್ತ್ರ ಎಂಬ ಪುಸ್ತಕವನ್ನು ಅವರು ಮೈಸೂರು ವಿಶ್ವವಿದ್ಯಾಲಯಕ್ಕಾಗಿ ಸಂಪಾದಿಸುತ್ತಿದ್ದರು. ಇದು ಸಂಸ್ಕೃತ ತಾಳೆಗರಿಗಳಲ್ಲಿ ದೊರೆತ ಪುರಾತನ ಗ್ರಂಥ. ಆ ಕೆಲಸ ಮುಕ್ತಾಯದ ಹಂತಕ್ಕೆ ಬದಿತ್ತು. ಅವರ ಮಾತಿನ ಮಂಟಪ ಪುಸ್ತಕವನ್ನು ಮೆಚ್ಚಿ ನಾನು ಒಂದು ಲೇಖನ ಬರೆದಿದ್ದೆ. ಅವರು ಅಮೇರಿಕೆಯಲ್ಲಿ ಅರಳಿದರೂ ಭಾರತಕ್ಕೆ ಮರಳಿದರು. ಮೈಸೂರಲ್ಲಿ ಮನೆಮಾಡಿದರು. ತಮ್ಮ ಕನ್ನಡದ ಕೈಂಕರ್ಯವನ್ನು ಮುಂದುವರಿಸಿದರು. ಹರಿಹರೇಶ್ವರರು ಪತ್ರಕರ್ತರು ಕೂಡ. ಅಮೇರಿಕೆಯಲ್ಲಿರುವಾಗ ಅಮೆರಿ-ಕನ್ನಡ ಎಂಬ ಅಪರೂಪದ ದ್ವೈಮಾಸಿಕ ಪತ್ರಿಕೆಯನ್ನು ಆರು ವರ್ಷ ನಡೆಸಿದರು. (1984-1990). ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೌರವ 1999ರಲ್ಲಿ ದೊರೆತಿತ್ತು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X