ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ಸಂಪುಟ ಕಾವ್ಯಾಭ್ಯಾಸಿಗಳಿಗೆ ದಾರಿ ದೀಪ

By Prasad
|
Google Oneindia Kannada News

DaRa Bendre
ಬೇಂದ್ರೆಯವರ ಗರಡಿಯಲ್ಲಿ ಬೆಳೆದ ಪುತ್ರ ವಾಮನ ಅವರು ಬೇಂದ್ರೆ ಅವರ ಕಾವ್ಯಕ್ಕೆ 'ಸಂವಾದ ಕಂಡ ಅಂದತ್ತ' ಎಂಬ ಎರಡು ಸಂಪುಟಗಳಲ್ಲಿ ಟಿಪ್ಪಣಿ ಬರೆದಿದ್ದಾರೆ. ಬೇಂದ್ರೆ ಸಂಶೋಧನ ಕೇಂದ್ರ ಪ್ರಕಟಿಸಿರುವ ಎರಡು ಸಂಪುಟಗಳ ಬೆಲೆ ರು.1000. ಸಂಪುಟ ಕುರಿತ ಲೇಖನದ ಆರನೇ ಮತ್ತು ಕೊನೆಯ ಭಾಗ ಇಲ್ಲಿದೆ.

* 'ಜೀವಿ' ಕುಲಕರ್ಣಿ, ಮುಂಬಯಿ

ಸಂವಾದ ಕಂಡ ಅಂದತ್ತ ಕೃತಿಯ ಎರಡನೆಯ ಸಂಪುಟದ ಐದನೆಯ ವಿಭಾಗ ಔದುಂಬರಗಾಥೆ. ಈ ವಿಭಾಗದಲ್ಲಿ ಬೇಂದ್ರೆಯವರ ಸಮಗ್ರ ಸಾಹಿತ್ಯದ ಹನ್ನೆರಡು ಸಂಪುಟಗಳ ಚಿಂತನ-ಮಂಥನವನ್ನು ವಾಮನ ಬೇಂದ್ರೆ ಮಾಡಿದ್ದಾರೆ. ಮೊದಲಿನ ಆರು ಸಂಪುಟಗಳಲ್ಲಿ ಬೇಂದ್ರೆ ಸಮಗ್ರ ಕಾವ್ಯದ ಆವಿಷ್ಕರಣವಿದೆ. ಬೇಂದ್ರೆಯವರ ಪ್ರಕಟಿತ ಹಾಗೂ ಅಪ್ರಕಟಿತ 1427 ಕವಿತೆಗಳನ್ನು ಆರು ಸಂಪುಟಗಳಲ್ಲಿ ವಿಭಜಿಸಿ, ಬೇಂದ್ರೆಯವರ ಜೀವನ ಮಹಾಕಾವ್ಯವನ್ನು ಸಂಪಾದಿಸಿ, ಅದಕ್ಕೆ ವಿದ್ವತ್ಪೂರ್ಣ ಭೂಮಿಕೆಗಳನ್ನು ವಾಮನರು ಬರೆದಿದ್ದಾರೆ. ಇದನ್ನು ಬೇಂದ್ರೆಯವರ ಮಾರ್ಗದರ್ಶನ ಪಡೆದೇ ಮಾಡಿದ್ದಾರೆ ಎಂಬುದು ಮಹತ್ವದ ಸಂಗತಿ.

ಪ್ರಾರಂಭದಲ್ಲಿ ವಾಮನ ಬೇಂದ್ರೆ ವರಕವಿ ಬೇಂದ್ರೆಯವರ ಜೀವನ ಮಹಾಕಾವ್ಯದ ಔನತ್ಯ ಹಾಗೂ ಔಚಿತ್ಯದ ಬಗ್ಗೆ ಬರೆಯುತ್ತಾರೆ. ಬೇಂದ್ರೆಯವರ ಕಾವ್ಯ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಇತ್ಯಾದಿ ಅಲೆಗಳನ್ನು ದಾಟಿ ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಒತ್ತಿದೆ. ಋಗ್ವೇದದ ಮಂತ್ರಗಳ ಸಾರವಾದ ಐಕಮತ್ಯ, ಸಮಾನತೆ, ಸಮಾನ ಆಕೂತಿ- ಇವುಗಳನ್ನು ಆಧರಿಸಿ ಬೇಂದ್ರೆ ಕಾವ್ಯ ಪ್ರವಹಿಸಿತು ಎನ್ನುತ್ತಾರೆ. ಬೇಂದ್ರೆ ಕಾವ್ಯದ ಸಮಗ್ರತೆಯಲ್ಲಿ ಅದರ ಮಾಂತ್ರಿಕತೆ ಇದೆ ಎಂದವರು ಶ್ರೇಷ್ಠ ವಿಮರ್ಶಕ ವಿ.ಕೃ.ಗೋಕಾಕರು.

ಬೇಂದ್ರೆಯವರ ಕಾವ್ಯವನ್ನು ಸಪ್ತಪ್ರವಾಹಗಳ, ಸಪ್ತವರ್ಣಗಳ, ಸಂಗಮ-ಕಾವ್ಯ ಎಂದು ವಾಮನರು ಕರೆಯುತ್ತಾರೆ. 1) ವೇದ-ಉಪನಿಷತ್ತು, 2) ಆಧುನಿಕ ವಿಜ್ಞಾನ, 3) ಸಖೀಭಾವ-ಗೆಳೆತನ-ಒಲವು-ಸಾಮರಸ್ಯ ಸಿದ್ಧಾಂತ, 4) ಸಂಖ್ಯಾ ಭಾಷೆಯ ಪ್ರಯೋಗ, 5) ಶೋಷಿತರ ಪರ ಪ್ರತಿಭಟನೆ, 6) ಧಾರವಾಡ-ಕರ್ನಾಟಕ-ಭಾರತ-ವಿಶ್ವ ಐಕ್ಯತೆಯ ಪ್ರಕಾಶ, 7) ಹೃದಯ-ವಿವೇಕ ಈ ಏಳು ಪ್ರವಾಹ ಸಂಗಮಿಸುವ ಕಾವ್ಯವೇ ಬೇಂದ್ರೆ ಮಹಾಕಾವ್ಯ. ಬೇಂದ್ರೆಯವರು ತಮ್ಮ ಕಾವ್ಯವನ್ನು ಅತ್ತಿಹಣ್ಣಿಗೆ ಹೋಲಿಸಿದರು. ಅದೇ ಔದುಂಬರ. ಅದು ಹೂವಾಗಿ ಹಣ್ಣಾಗುವುದಿಲ್ಲ. ಹೂವಿನಲ್ಲೇ ಹಣ್ಣಿರುತ್ತದೆ. ಅಂಬಿಕಾತನಯದತ್ತ ತಾನು ಔದುಂಬರದತ್ತ ಎಂದು ಹೇಳಿಕೊಂಡರು. ಕನ್ನಡ ಮಹಾಕಾವ್ಯಗಳನ್ನು 1) ವಿಜಯ ಕಾವ್ಯ, 2) ವೈಭವ ಕಾವ್ಯ, 3) ಕಲ್ಯಾಣ ಕಾವ್ಯ ಎಂದು ವಿಭಜಿಸಬಹುದು. ಬೇಂದ್ರೆಯವರದು ನಾಲ್ಕನೆಯ ಬಗೆ, ಸಾಮರಸ್ಯ ಕಾವ್ಯ. ಶ್ರೀಅರವಿಂದರು ಫ್ಯುಚರ್ ಪೋಯಟ್ರಿ (ಉದ್ಭವ ಕಾವ್ಯ) ಎಂಬ ಗ್ರಂಥ ರಚಿಸಿದರು. ಬೇಂದ್ರೆಯವರ ಕಾವ್ಯ ಒಂದು ರೀತಿಯಲ್ಲಿ ಉದ್ಭವಕಾವ್ಯ. ಬೇಂದ್ರೆಯವರು ತಮ್ಮ ಕೊನೆಯ ದಿನಗಳನ್ನು ಮಂಬೈ ಆಸ್ಪತ್ರೆಯಲ್ಲಿ ಕಳೆದಾಗ ಅವರೇ ಹೇಳಿದ್ದರು. ನಾನು ಮಹಾಕಾವ್ಯವನ್ನು ಈಗಾಗಲೇ ರಚಿಸಿ ಮುಗಿಸಿದ್ದೇನೆ. ನನ್ನ ಮಹಾಕಾವ್ಯದ ಸಂದೇಶ 881 ಮತ್ತು 441, ಹೃದಯ ಮತ್ತು ವಿವೇಕ ಎಂದಿದ್ದರು. ಅದುವೆ ಅವರ ಇಚ್ಛೆಯಂತೆ ಔದುಂಬರಗಾಥೆಯ ರೂಪದಲ್ಲಿ ಪ್ರಕಟಗೊಂಡಿದೆ.

ಔದುಂಬರಗಾಥೆಯ ಆರು ಸಂಪುಟಗಳಾದ- ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ವ, ಸಿದ್ಧಾಂತ ಇವುಗಳಲ್ಲಿ 25 ಉಪವಿಭಾಗಗಳಿವೆ. ಸಂಖ್ಯೆ 25 ರಾಮಶ್ರದ್ಧೆಯ ಸಂಕೇತ. ಅಂತೆಯೇ ಇದು(ಬೇಂದ್ರೆ ಕಾವ್ಯ) ರಾಮರೂಪಕ. ಕೊನೆಗೆ ಶಾಂತಿಮಂತ್ರ, ಭರತವಾಕ್ಯದ ಜೊತೆಗೆ ನವಮಾನವ ಆವಿರ್ಭಾವದ ಸಂದೇಶವಿದೆ. ದ.ರಾ.ಬೇಂದ್ರೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ತಮ್ಮ ನೋಟ್‌ಬುಕ್‌ನಲ್ಲಿ ಶರ್ಮಾ ಅವರ ಹಸ್ತಾಕ್ಷರದಲ್ಲಿ ಹೀಗೆ ಬರೆಸಿದ್ದರು: ನನ್ನ ಮಹಾಕಾವ್ಯದ ಹೆಸರು ಔದುಂಬರಗಾಥೆ. ಇದೇ ಮಹಾಕಾವ್ಯ-ಬೇಂದ್ರೆಯವರ ಜೀವನಗಾಥೆ. ಇದನ್ನು ಪ್ರಕಟಿಸಬೇಕು. ಈ ಮಹಾಕಾವ್ಯವನ್ನು ಸಂಪಾದಿಸಿದವರು ಡಾ| ವಾಮನ ಬೇಂದ್ರೆ. ಆರ್ಷಕವಿಯ ಮಾತನ್ನು ಕೃತಿಗಿಳಿಸಿ ಪ್ರಕಾಶನಗೊಳಿಸಿದವರು ಡಾ| ಕೆ.ಎಸ್.ಶರ್ಮಾ ಅವರು.

1946ರಲ್ಲಿ ವಾಮನರು 11 ವರ್ಷದ ಬಾಲಕನಾಗಿದ್ದಾಗ ತಂದೆಗೆ ಹೇಳಿದ್ದರಂತೆ, ನಿಮ್ಮ ಕಾವ್ಯಕ್ಕೆ ಅರ್ಥಬರೆಯುವ ಸಾಮರ್ಥ್ಯ ನನಗೆ ಬರಬೇಕೆಂಬ ಆಶೆಯೆ ನನಗೆ ನಿದ್ದೆ ಮಾಡಲು ಕೊಡುತ್ತಿಲ್ಲ. ಆಗ ತಂದೆ ಬೇಂದ್ರೆ ಮಗನನ್ನು ಅಪ್ಪಿ, ಮುದ್ದಿಟ್ಟು, ನಿನ್ನ ಇಚ್ಛೆ ಸಫಲಗೊಳ್ಳಲಿ ಎಂದು ಆಶೀರ್ವದಿಸಿದ್ದರು. 1968ರಲ್ಲಿ ವಾಮನ ಅವರಿಗೆ ಬಿದ್ದ ಸ್ವಪ್ನದಲ್ಲಿ ಬೇಂದ್ರೆ ಮಗನಿಗೆ ಹೇಳಿದ್ದರು, ನನ್ನ ಸಮಗ್ರ ಸಾಹಿತ್ಯ ಸಂಪಾದಕನಾಗಿ ಸೇವೆ ಮಾಡಿ, ನನಗೆ ಗುರುದಕ್ಷಿಣೆ ಸಲ್ಲಿಸುವ ವಚನಕೊಡು ಎಂದು.

ವಾಮನ ಬೇಂದ್ರೆಯವರು ಬರೆದ ಭೂಮಿಕೆ ಹಾಗೂ ಟಿಪ್ಪಣಿಗಳನ್ನು ನೋಡಿದರೆ ವರಕವಿ ಬೇಂದ್ರೆಯವರು ಮಗನಿಗೆ ಅಧ್ಯಾತ್ಮಿಕ ಅರ್ಥದಲ್ಲಿ ಶಕ್ತಿಯನ್ನು ಕೊಟ್ಟಿದ್ದರು ಎಂಬುದು ಖಾತ್ರಿಯಾಗುತ್ತದೆ. ವಾಮನರು ಬೇಂದ್ರೆಯವರ ಕಾವ್ಯವನ್ನು ಅರ್ಥಮಾಡಿಕೊಳ್ಳಲು ಕೆಲವು ಮಾರ್ಗದರ್ಶಕ ಸೂತ್ರಗಳನ್ನು ಕೊಡುತ್ತಾರೆ. ಬೇಂದ್ರೆಯವರು ಬರೆದ ತಂತ್ರ ಚತುರ್ಮುಖ ಅರ್ಥವಾಗದಿದ್ದರೆ ಬೇಂದ್ರೆ ಕಾವ್ಯ ಗುಹಾಧ್ವನಿ, ಬರಿ ಶಬ್ದಗಳ ಡೊಂಬರಾಟ ಅನಿಸೀತು ಎಂದು. ದ.ರಾ. ಬೇಂದ್ರೆ ಹೇಳುತ್ತಾರೆ, ಸಂಖ್ಯೆಗಳು ನನ್ನೊಡನೆ ಮಾತಾಡುತ್ತಿರುವುದರಿಂದ, ನಾನೂ ಸಂಖ್ಯೆಗಳಲ್ಲಿಯೇ ತೊದಲು ನುಡಿಯುತ್ತಿರುವೆ. ನಾನು ಕಂಡ ಸಂಖ್ಯೆಗಳು ಜೀವನದಲ್ಲಿ ಧ್ವನಿತವಾಗಿರುವ ಸಾಮಂಜಸ್ಯಕ್ಕೂ, ಸಾಮರಸ್ಯಕ್ಕೂ ಅಭಿವ್ಯಕ್ತಿ ಕೊಟ್ಟಿವೆ. ಬೇಂದ್ರೆಯವರ ಕಾವ್ಯಕ್ಕೆ ಅರ್ಥಹಚ್ಚಲು ವಾಮನರು ಬರೆದ ವ್ಯಾಖ್ಯಾನಗಳು ಬಹಳ ಪ್ರಯೋಜನಕಾರಿಯಾಗಿವೆ ಎಂದರೆ ಅತಿಶ್ಯೋಕ್ತಿಯಾಗಲಿಕ್ಕಿಲ್ಲ.

ಏಳನೆಯ ಸಂಪುಟ ಶ್ರೀ ಮಾತಾರವಿಂದ ಪ್ರಜ್ಞಾಪ್ರಕಾಶ. ಇದು ಗದ್ಯ ಪದ್ಯಗಳ ಮಿಶ್ರ ಸಂಪುಟ. ಬೇಂದ್ರೆಯವರು 1914ರಿಂದಲೇ, ಅಂದರೆ ಶ್ರೀ ಅರವಿಂದರ ಆರ್ಯ ಪತ್ರಿಕೆಯನ್ನು ಓದಲು ಪ್ರಾರಂಭಿಸಿದ್ದಾಗಿನಿಂದಲೇ, ಶ್ರೀಅರವಿಂದರನ್ನು ತಮ್ಮ ಗುರುಗಳೆಂದು ಸ್ವೀಕರಿಸಿದ್ದರು. ಶ್ರೀಮಾತೆ ಹಾಗೂ ಶ್ರೀಅರವಿಂದರ ಬಗ್ಗೆ ಬರೆದ ಪದ್ಯ ಹಾಗೂ ಗದ್ಯ ಬರವಣಿಗೆ ಇಲ್ಲಿದೆ. ಅದಕ್ಕ ಬಹಳ ಉಪಯುಕ್ತವಾದ ಭೂಮಿಕೆಯನ್ನು ವಾಮನರು ರಚಿಸಿದ್ದಾರೆ.

ಎಂಟನೆಯ ಸಂಪುಟ ಸಮಗ್ರ ಸಖೀಗೀತ. ಬೇಂದ್ರೆಯವರ ಬಾಳಸಖಿ ಲಕ್ಷ್ಮೀಬಾಯಿಯವರ ಜನ್ಮಶತಾಬ್ದಿಯ ನೆನಪಿಗಾಗಿ ಪ್ರಕಟಿಸಿದ ಈ ಕೃತಿ ಮಹತ್ವದಾಗಿದೆ. ಸಖೀಗೀತದ ಜನಪ್ರಿಯತೆಯನ್ನು ಹದಿನಾಲ್ಕು ಆವೃತ್ತಿಗಳ ಹಿನ್ನೆಲೆಯಲ್ಲಿ ವಿವೇಚಿಸಿದ್ದಾರೆ ವಾಮನರು. ಈ ಕೃತಿಯ ಹರಹು ಕೌಟುಂಬಿಕ ಸ್ನೇಹದಿಂದ ವಿಶ್ವ ಸ್ನೇಹದೆಡೆ ಬೇಳೆದದ್ದು ಗಮನಾರ್ಹವಾಗಿದೆ.

ಒಂಭತ್ತು, ಹತ್ತು, ಹನ್ನೊಂದು, ಈ ಮೂರು ಸಂಪುಟಗಳಲ್ಲಿ ಬೇಂದ್ರೆಯವರ ನಾಟ್ಯಯೋಗಕ್ಕೆ ಸಂಬಂಧಿಸಿದ ಕೃತಿಗಳ ಪ್ರಕಟನೆಗೆ ಮೀಸಲಾಗಿದೆ. ಮೊದಲ ಸಂಪುಟದಲ್ಲಿ ಬೇಂದ್ರೆಯವರ 14 ರಂಗ ನಾಟಕಗಳಿವೆ. ಬೇಂದ್ರೆಯವರ ನಾಟ್ಯಯೋಗದ ಬಗ್ಗೆ ವಾಮನರ ಮೀಮಾಂಸೆ ಇದೆ. ಎರಡನೆಯ ಸಂಪುಟದಲ್ಲಿ ಬೇಂದ್ರೆಯವರ ಬಾನುಲಿ ರೂಪಕಗಳು, ವೃತ್ತಿರಂಗ ನಾಟಕಗಳು, ಮಾನಸ ನಾಟಕಗಳು ಹಾಗೂ ನಾಟಕ ಪ್ರಸಂಗಗಳು ಇವೆ. ಎಲ್ಲ ನಾಟಕಗಳ ಸೈದ್ಧಾಂತಿಕ ಹಾಗೂ ತಾತ್ವಕ ಸಮೀಕ್ಷೆಯನ್ನು ವಾಮನರು ಒದಗಿಸಿದ್ದಾರೆ. ಬಸವಣ್ಣನವರ ಜೀವನದ ಬಗ್ಗೆ ಬರೆದ ತಲೆದಂಡ ಎಂಬ ಅಪೂರ್ವ ನಾಟಕವನ್ನು ಅಪ್ರಕಟಿತ ಹಸ್ತಪ್ರತಿಗಳ ರಾಶಿಯಿಂದ ಹುಡುಕಿ ತೆಗೆದು ಪ್ರಕಟಿಸಿದ್ದಾರೆ. ಇದಕ್ಕಾಗಿ ವಾಮನ ಬೇಂದ್ರೆಯವರು ವಿಶೇಷ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಹನ್ನೊಂದನೆಯ ಸಂಪುಟ, ಬೇಂದ್ರೆ ನಾಟ್ಯಯೋಗ ಸಿದ್ಧಾಂತ-ಸಮೀಕ್ಷೆ. ಇದಕ್ಕೆ ಬರೆದ ಭೂಮಿಕೆಯಲ್ಲಿ ವಾಮನ ಬೇಂದ್ರೆಯವರು ಬೇಂದ್ರೆ ನಾಟ್ಯಯೋಗ ಸಿದ್ಧಾಂತದ ಸಾರವನ್ನು ನೀಡುವುದರೊಡನೆ, ಬೇಂದ್ರೆಯವರು ಬರೆದ ವಿವಿಧ ನಾಟಕಕಾರರ ನಾಟಕಗಳ ಸಮೀಕ್ಷೆಯ ಮಹತ್ವವನ್ನು ಬಿಂಬಿಸಿದ್ದಾರೆ. ಬೇಂದ್ರೆಯವರಿಗೆ ಕಾವ್ಯ ಸೃಷ್ಟಿಯಲ್ಲಿ ಪಾತ್ರಗಳ ನಾಟ್ಯ ಕಾಣುತ್ತದೆ. ಅದನ್ನು ಅವರು ತಮ್ಮ ನಾಟಕಗಳಲ್ಲಿ ಶಿಲ್ಪಿಸುತ್ತಾ ಹೋಗಿದ್ದಾರೆ. ಬೇಂದ್ರೆಯವರ ನಾಟಕಗಳಲ್ಲಿ ನಾಟ್ಯ ಸರಸ್ವತಿಯ ಸಾಕ್ಷಾತ್ಕಾರದರ್ಶನವಾಗುತ್ತದೆ. ಅವರ ಕಾವ್ಯದಲ್ಲಿ ವೀಣಾಪಾಣಿ ಶಾರದೆಯ ಪ್ರಕಟೀಕರಣವಿದೆ.

ಬೇಂದ್ರೆಯವರ ನಾಟ್ಯ ಸಿದ್ಧಾಂತ ಹಾಗೂ ಕಾವ್ಯ ಸಿದ್ಧಾಂತದಲ್ಲಿ ಅನ್ಯೋನ್ಯ ಘನಿಷ್ಟ ಸಂಬಂಧವಿದೆ. ಆದುದರಿಂದ ಬೇಂದ್ರೆಯವರ ನಾಟಕಗಳು ಅವರ ಕಾವ್ಯ ತಿಳಿದುಕೊಳ್ಳುವುದಕ್ಕೆ ಹಾಗೂ ಕಾವ್ಯ, ಅವರ ನಾಟಕ ತಿಳಿದುಕೊಳ್ಳುವುದಕ್ಕೆ ಪರಸ್ಪರ ಸಹಾಯ ಮಾಡುತ್ತವೆ. ವಾಮನ ಬೇಂದ್ರೆಯವರ ಈ ಮಾತುಗಳು ಬೇಂದ್ರೆ ಸಮಗ್ರ ಸಾಹಿತ್ಯದ ಅರ್ಥಗ್ರಹಿಕೆಯ ಮೇಲೆ ಬೆಳಕು ಚೆಲ್ಲುತ್ತವೆ.

ಹನ್ನೆರಡನೆಯ ಸಂಪುಟ ಅಂಬಿಕಾತನಯದತ್ತರ ಕಾವ್ಯೋದ್ಯೋಗ ಸಿದ್ಧಾಂತ. ವಾಮನರಿಗೆ 14-4-1994ರಲ್ಲಿ ವರಕವಿ ಬೇಂದ್ರೆಯವರ ಸ್ವಪ್ನಾದೇಶವಾಯಿತು. ಅವರೆಂದರು, ನನ್ನ ಕಾವ್ಯೋದ್ಯೋಗ ರಹಸ್ಯ ತಿಳಿಯಬೇಕಾದರೆ, ಗಣೇಶಗೀತಾದ ಅಭ್ಯಾಸ ಮಾಡು ಎಂದು. ಈ ಕೃತಿಯ ಶೋಧದಲ್ಲಿ ವಾಮನರು ತೊಡಗಿದರು. ಈ ಪುಸ್ತಕ ಅವರಿಗೆ ಪುಣೆಯಲ್ಲಿ ದೊರೆಯಿತು. 1918ರ ಪೂರ್ವದಲ್ಲಿಯೇ ಬೇಂದ್ರೆಯವರು ಗಣೇಶಗೀತಾದ ಅಭ್ಯಾಸ ಮಾಡಿದ್ದರು. ಇದರಲ್ಲಿ ಹನ್ನೊಂದು ಅಧ್ಯಾಯ ಹಾಗೂ 400 ಶ್ಲೋಕಗಳು ಇವೆ. ಇದರಲ್ಲಿಯ ಜೀವನಧರ್ಮವನ್ನು, ಕಾವ್ಯಧರ್ಮವನ್ನು ಬೇಂದ್ರೆಯವರು ತಮ್ಮ ಕಾವ್ಯೋತ್ಪತ್ತಿಯಲ್ಲಿ ಅಳವಡಿಸಿಕೊಂಡಿದ್ದರು. ಅದರಿಂದ ತಮ್ಮ ಕಾವ್ಯ ಸಿದ್ಧಾಂತವನ್ನು ಉತ್+ಯೋಗವಾಗಿ(=ಉದ್ಯೋಗವಾಗಿ) ರೂಪಿಸಿದ್ದರು. ಬೇಂದ್ರೆಯವರು ಮಹರ್ಷಿ ಪತಂಜಲಿಯ ಯೋಗಶಾಸ್ತ್ರ ಗ್ರಂಥವನ್ನು ಓದುವಾಗ ಟಿಪ್ಪಣಿ ಮಾಡಿದ್ದರು. ಅವರಿಗೆ ಜೀವನವಷ್ಟೇ ಅಲ್ಲ, ಕಾವ್ಯವೂ ಯೋಗವಾಗಿತ್ತು.

ವರಕವಿ ಬೇಂದ್ರೆಯವರ ಸಮಗ್ರ ಸಾಹಿತ್ಯಕ್ಕೆ ಸುದೀರ್ಘವಾದ ವ್ಯಾಖ್ಯಾನ ಬರೆದ ಡಾ| ವಾಮನ ಬೇಂದ್ರೆಯವರ ಸಂವಾದ ಕಂಡ ಅಂದತ್ತ ಎರಡು ಸಂಪುಟಗಳು ಕನ್ನಡ ಕಾವ್ಯಾಭ್ಯಾಸಿಗಳಿಗೆ ದಾರಿ ದೀಪಗಳಾಗಿವೆ. ಅವರಿಗೆ ಸಾಹಿತ್ಯಾಭಿಮಾನಿಗಳ ಪರವಾಗಿ ಅಭಿನಂದನೆ ಸಲ್ಲಿಸುವೆ.

ಪುಸ್ತಕ ಬೇಕಿದ್ದರೆ ಸಂಪರ್ಕಿಸಿ : ಪ್ರಕಾಶಕರು: ಡಾ| ಕೆ.ಎಸ್.ಶರ್ಮಾ, ಬೇಂದ್ರೆ ಸಂಶೋಧನ ಸಂಸ್ಥೆ, ಶ್ರೀ ಮಾತಾ ಪ್ರಕಾಶನ, ವಿಶ್ವಶಮ ಚೇತನ, ಗೋಗುಲ ರೋಡ್, ಹುಬ್ಬಳ್ಳಿ-580 030 ಫೋ: 99868 01909.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X