• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಂಖ್ಯಯೋಗತಜ್ಞನ ಖಾತೆಯಲ್ಲಿದ್ದದು ಸೊನ್ನೆ ಮಾತ್ರ!

By Prasad
|

ಬೇಂದ್ರೆಯವರ ಗರಡಿಯಲ್ಲಿ ಬೆಳೆದ ಪುತ್ರ ವಾಮನ ಅವರು ಬೇಂದ್ರೆ ಅವರ ಕಾವ್ಯಕ್ಕೆ 'ಸಂವಾದ ಕಂಡ ಅಂದತ್ತ' ಎಂಬ ಎರಡು ಸಂಪುಟಗಳಲ್ಲಿ ಟಿಪ್ಪಣಿ ಬರೆದಿದ್ದಾರೆ. ಬೇಂದ್ರೆ ಸಂಶೋಧನ ಕೇಂದ್ರ ಪ್ರಕಟಿಸಿರುವ ಎರಡು ಸಂಪುಟಗಳ ಬೆಲೆ ರು.1000. ಸಂಪುಟ ಕುರಿತ ಲೇಖನದ ಐದನೇ ಭಾಗ ಇಲ್ಲಿದೆ.

* 'ಜೀವಿ' ಕುಲಕರ್ಣಿ, ಮುಂಬಯಿ

ಬೇಂದ್ರೆಯವರು ತಮ್ಮ ಜನನದಿಂದ 1960ರ ವರೆಗೆ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದರು. ಇದು ಅಪೂರ್ಣವಾಗಿ ಉಳಿದಿತ್ತು. ಅವರ ಜೀವನ ಚರಿತ್ರೆಯ ಉತ್ತರಾರ್ಧ (1961ರಿಂದ 1981), ಎರಡು ದಶಕಗಳ ವಿವರ ವಾಮನರು ಬರೆದಿದ್ದಾರೆ ಇದು ಬಹಳ ಮಹತ್ವದ್ದಾಗಿದೆ.

ವರಕವಿ ಬೇಂದ್ರೆಯವರ ಚರಿತ್ರೆಯ ಉತ್ತರಾರ್ಧದ ಎರಡು ದಶಕಗಳಲ್ಲಿ ಸ್ಮರಣೀಯವಾದ ಕೆಲವು ಅಪೂರ್ವ ಸಂಗತಿಗಳು ದಾಖಲಾಗಿವೆ. ಕೆಲವು ಇಂತಿವೆ:

* 1961ರಲ್ಲಿ ವಾಮನ ಬೇಂದ್ರೆಯವರು ಸಾಂಗ್ಲಿಗೆ ಹೋಗುವ ಪ್ರಸಂಗ ಬಂತು. ಅಲ್ಲಿ ಅವರಿಗೆ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಕೆಲಸ ದೊರೆತಿತ್ತು. ಮೊದಲ ಸಲ ಅವರು ತಂದೆ ತಾಯಿಗಳನ್ನು ಬಿಟ್ಟು ಪರವೂರಿಗೆ ತೆರಳುತ್ತಿದ್ದರು. ಅಲ್ಲಿ ಡಾ| ರಂ.ಶ್ರೀ.ಮುಗಳಿಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಮಾಡುವ ಅವಕಾಶ ದೊರೆತಿತ್ತು. ವಿಷಯ ಲಕ್ಷ್ಮೀಶನ ಜೈಮಿನಿ ಭಾರತ : ಒಂದು ಅಧ್ಯಯನ. ಲಕ್ಷ್ಮೀಶ ಬೇಂದ್ರೆಯವರ ನಚ್ಚಿನ ಕವಿ. ಈ ವಿಷಯ ಆರಿಸಲು ಬೇಂದ್ರೆಯವರದೇ ಪ್ರೇರಣೆ ಇತ್ತು.

* ವಾಮನ ಬೇಂದ್ರೆ ಬರೆಯುತ್ತಾರೆ, ಸಾಂಗ್ಲಿಯಲ್ಲಿ ನನಗೆ ಕನಸಿನಲ್ಲಿ ಅಭ್ಯಾಸಪಾಠಗಳನ್ನು ಹೇಳಲು ಪ್ರಾರಂಭಿಸಿದರು. ಆದುದರಿಂದ ಬೇಂದ್ರೆ ನನ್ನ ತಂದೆ ಅಷ್ಟೇ ಅಲ್ಲ, ಅವರು ನನ್ನ ಗುರುಗಳು ಎಂದು ನಾನು ಒಪ್ಪಲೇಬೇಕಾಯಿತು. ಸತತ ಮೂರು ವರ್ಷಗಳ ಸ್ವಪ್ನಮಾರ್ಗದರ್ಶನದ ಅನುಭಾವವನ್ನು ಬೇಂದ್ರೆ ದಯಪಾಲಿಸಿದ್ದರಿಂದ ನನ್ನಲ್ಲಿ ಶಕ್ತಿ ಸಂಚಾರಕಾರ್ಯ ಪ್ರಾರಂಭವಾಯ್ತು.

* ವಾಮನರ ಅನುಪಸ್ಥಿತಿಯಲ್ಲಿ ಹಲವಾರು ಕವನ ಸಂಗ್ರಹಗಳು ಪ್ರಕಟಗೊಂಡವು. 1964ರಲ್ಲಿ ಪ್ರಕಟಗೊಂಡ ನಾಕುತಂತಿಗೆ ರಾಷ್ಟ್ರದ ಅತ್ಯುಚ್ಚ ಗೌರವ ಜ್ಞಾನಪೀಠ ಪ್ರಶಸ್ತಿ ದೊರೆಯಿತು.

* 1966ರಲ್ಲಿ ಬೇಂದ್ರೆಯವರ 70ನೆಯ ಜನ್ಮದಿನವನ್ನು ಶಿರಹಟ್ಟಿಯಲ್ಲಿ ಆಚರಿಸಲಾಯಿತು. (ಬೇಂದ್ರೆಯವರ ಅಜ್ಜ ಅಲ್ಲಿ ವಾಸಿಸಿದ್ದರು). ಮಕರಂದ ಎಂಬ ಮಾಸ ಪತ್ರಿಕೆಯ ಬೇಂದ್ರೆ ವಿಶೇಷ ಸಂಚಿಕೆಯನ್ನು ಕೆ.ಎಸ್.ಶರ್ಮಾ ಹಾಗೂ ವಾಮನ ಬೇಂದ್ರೆ ಸಂಪಾದಿಸಿದರು. ಇದೇ ವರ್ಷ ಬೇಂದ್ರೆಯವರ ಪತ್ನಿ, ವಾಮನರ ತಾಯಿ ಲಕ್ಷ್ಮೀಬಾಯಿಯವರ ನೆರವಿನಿಂದ ಕವಿನಿವಾಸದಲ್ಲಿ ಬೇಂದ್ರೆ ಗ್ರಂಥಾಲಯದ ಕಟ್ಟಡ ನಿರ್ಮಾಣವಾಯ್ತು. ಅದೇ ವರ್ಷ ಬೇಂದ್ರೆಯವರಿಗೆ ಪತ್ನಿವಿಯೋಗವಾಯ್ತು (17-08-1966). ಬೇಂದ್ರೆಯವರಿಗೆ ತುಂಬಬಾರದ ದುಃಖವುಂಟಾಯಿತು. ಈ ಗ್ರಂಥಾಲಯವಿದ್ದ ಕಟ್ಟಡದ ಸ್ಥಳವನ್ನು ಬೇಂದ್ರೆಯವರ ನಿಧನದ ನಂತರ ಅವರ ಕುಟುಂಬದವರು ಕರ್ಣಾಟಕ ಸರಕಾರಕ್ಕೆ ದಾನವಾಗಿ ಕೊಟ್ಟರು. ಅಲ್ಲಿಯೇ ಇಂದು ಭವ್ಯವಾದ ಬೇಂದ್ರೆ ಭವನ ನಿರ್ಮಾಣಗೊಂಡಿದೆ. ಇದು ವರಕವಿ ಹಾಗೂ ಅವರ ಬಾಳಸಖಿಯ ಸ್ಮರಣೆಯ ಪ್ರತೀಕವಾಗಿದೆ.

* ಅದೇ ವರ್ಷ ಬೇಂದ್ರೆಯವರು ಆಕಾಶವಾಣಿಯ ಸಲಹೆಗಾರ ಹುದ್ದೆಯ ಅವಧಿ ಮುಗಿದಿತ್ತು. ಕರ್ಣಾಟಕ ಸರಕಾರ ಅವರಿಗೆ ವಿಶ್ರಾಂತಿ ವೇತನ ಕೊಡಲು ಮುಂದೆ ಬಂತು. ಅದಕ್ಕೆ ಒಪ್ಪಿಗೆ ನೀಡುವ ಪೂರ್ವದಲ್ಲಿ ಬೇಂದ್ರೆಯವರು ಗೋಕಾಕರಿಗೆ ಒಂದು ಪ್ರಶ್ನೆ ಕೇಳಿದ್ದರಂತೆ, ನನ್ನ ಬಾಯಿ ಮುಚ್ಚಿಸಲು ಸರಕಾರ ಈ ಹಣ ಕೊಡುತ್ತಿಲ್ಲವಷ್ಟೇ? ಯಾವ ಕರಾರೂ ಇಲ್ಲ, ಎಂದು ಗೋಕಾಕರು ಹೇಳಿದ ಮೇಲೆ ಬೇಂದ್ರೆಯವರು ತಮ್ಮ ಒಪ್ಪಿಗೆ ನೀಡಿದ್ದರು.

* 1966ರಲ್ಲಿ ಬೇಂದ್ರೆಯವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹೈದ್ರಾಬಾದ್ ಹಿಂದೀಪ್ರಚಾರ ಸಭಾದಿಂದ ಸಾಹಿತ್ಯಾಚಾರ್ಯ ಪ್ರಶಸ್ತಿ ದೊರೆತವು. 1968ರಲ್ಲಿ ಪದ್ಮಶ್ರೀ, 1969ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್, 1972ರಲ್ಲಿ ಉಡುಪಿ ಮಠದಿಂದ ಕರ್ನಾಟಕ ಕವಿಕುಲತಿಲಕ ಬಿರುದು, ಕರ್ನಾಟಕ ಸರಕಾರದಿಂದ ಬೇಂದ್ರೆ ಸಾಕ್ಷಿಚಿತ್ರದ ಗೌರವ ಲಭಿಸಿದವು. 1979ರಲ್ಲಿ ವಾರಣಾಸಿಯ ಕಾಶೀ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್ ಗೌರವ.

* 1979ರಿಂದ 1981- ಬೇಂದ್ರೆ ಜೀವಿತಕಾಲದ ಕೊನೆಯ ಹಂತ. ಈ ಅವಧಿಯಲ್ಲಿ ವರಕವಿ ಬೇಂದ್ರೆಯವರ ದತ್ತುಪುತ್ರರೆಂಬ ಖ್ಯಾತಿ ಪಡೆದ ಡಾ| ಕೆ.ಎಸ್.ಶರ್ಮಾ ಅವರು ಬೇಂದ್ರೆಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ರಾರಂಭಿಸಿದರು.

* 1981ರಲ್ಲಿ ಮೂರು ಪ್ರಸಂಗಗಳನ್ನು ದಾಖಲಿಸುತ್ತಾರೆ. ಒಂದು, ವಿಶ್ವವಿಖ್ಯಾತ ಭೌತವಿಜ್ಞಾನಿ ಡಾ| ಸುದರ್ಶನ್ ಅವರು ತಮ್ಮ ಧಾರವಾಡ ವಾಸ್ತವ್ಯದಲ್ಲಿ ಮೂರು ದಿನ ವರಕವಿ ಬೇಂದ್ರೆಯವರೊಡನೆ ಕಳೆದರು. ಅವರು ಚರ್ಚಿಸಿದ ವಿಷಯ ವಿಜ್ಞಾನ-ಸಾಂಖ್ಯ ಸಾಹಿತ್ಯ. ಅವರು ಭೇಟಿಯಾದ ಸ್ಥಳ ಧಾರವಾಡದ ತಾವರಗೆರೆ ಆಸ್ಪತ್ರೆ, ಬೇಂದ್ರೆಯವರು ಚಿಕಿತ್ಸೆ ಪಡೆಯುತ್ತಿದ್ದ ಸ್ಥಳ. ಎರಡನೆಯ ಪ್ರಸಂಗ ಖ್ಯಾತ ವಿಜ್ಞಾನಿ ಹಾಗೂ ಶಿಕ್ಷಣತಜ್ಞ ಡಾ| ಎಚ್.ನರಸಿಂಹಯ್ಯ ಅವರು ಬೇಂದ್ರೆಯವರನ್ನು ಅವರ ಮನೆ ಶ್ರೀಮಾತಾ, ಸಾಧನಕೆರೆಯಲ್ಲಿ ಕಂಡದ್ದು. ಮೂರನೆಯ ಘಟನೆ ಪ್ರಸಿದ್ಧ ಹಿಂದಿ ಕವಿ ಅಜ್ಞೇಯ (ಜ್ಞಾನಪೀಠ ಪ್ರಶಸ್ತಿ ಪಡೆದವರು) ಬೇಂದ್ರೆಯವರನ್ನು ಕಂಡು, ನಾನು ನಿಮ್ಮ ವಿಚಾರ ಕೇಳಲೆಂದೇ ಬಂದೆ ಅಂದ ಪ್ರಸಂಗ.

* ಕೊನೆಯ ದಿನಗಳಲ್ಲಿ ಮಗ ವಾಮನನಿಗೆ ಈ ಸಾಲು ಹೇಳಿ ಬರೆಸಿದ್ದರಂತೆ: ಇಡು ಬೆಂಕಿ ಹಣವಿರಲು | ಇಲ್ಲ, ಕೊಡು ಹಿಡಿ ಮಣ್ಣು ಎಂದು. ಕರುಳು ಹಿಂಡುವ ಸಾಲುಗಳಿವು.

* ಒಬ್ಬರು ಬೇಂದ್ರೆಯವರ ಭಾವಚಿತ್ರ ತೆಗೆಯಲು ಬಂದಿದ್ದರಂತೆ. ಅವರಿಗೆ ಬೇಂದ್ರೆ ಹೇಳಿದ್ದರು: ಬೇಂದ್ರೆ ಭಾವಚಿತ್ರ ನೀವು ತೆಗೆಯಬಹುದು. ಆದರೆ ಕವಿ ಅಂಬಿಕಾತನಯ ದತ್ತ ನಿಮ್ಮ ಕೈಗೆ ಸುಲಭವಾಗಿ ಸಿಗೋ ವಸ್ತು ಅಲ್ಲ ಎಂದು.

* ಇನ್ನೊಂದು ಮಾತು ಬೇಂದ್ರೆ ಹೇಳುತ್ತಿದ್ದರಂತೆ ಯುಗದ ಕವಿ ಎಂದರೆ ಅಸ್ಥಿರರು; / ಜಗದ ಕವಿ, ಅಮರ ಕವಿ./ ಯುಗಯುಗಗಳು ಬದಲಾಗುತ್ತವೆ / ಜಗ ಬದಲಾಗುವುದಿಲ್ಲ.

* ಇನ್ನೂ ಹತ್ತು ವರುಷ ಮಾಡುವ ಕೆಲಸ ನನಗಿದೆ ಎಂದು ಬೇಂದ್ರೆ ಹೇಳುತ್ತಿದ್ದರಂತೆ. ಅವರಿಗೆ ಸಾಂಖ್ಯ ಸಂಶೋಧನೆಯ ಕೆಲಸ ಪೂರ್ಣಗೊಳಿಸುವುದಿತ್ತು. 1981ರ ನರಕ ಚತುರ್ದಶಿಯ ದಿನ, ಬೆಳಕಿನ ಹಬ್ಬ ದೀಪಾವಳಿಯಂದು, ಈ ಬೆಳಕಿನ ಮಹಾಪಥಿಕ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಆ ಚಿರಂತನ ಬೆಳಕಿನಲ್ಲಿ ಲೀನವಾಗಿದ್ದರು ಎಂದು ಬರೆಯುತ್ತಾರೆ.

* ಬೇಂದ್ರೆಯವರ ಔಷಧೋಪಚಾರದ ಖರ್ಚು, ಉತ್ತರ ಕ್ರಿಯೆಯ ಖರ್ಚು, ಮುಗಿದಾಗ ಅವರ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿಯೂ ಉಳಿದಿರಲಿಲ್ಲವಂತೆ. ಈ ಸಾಂಖ್ಯಯೋಗತಜ್ಞ, ಈ ಲೋಕದ ಲೆಕ್ಕವನ್ನು ಚುಕ್ತಾ ಮಾಡಿಯೇ ಇಹಲೋಕದ ಯಾತ್ರೆ ಮುಗಿಸಿದ್ದರು, ಬೆಳಕಿನಲ್ಲಿ ಲೀನವಾಗಿದ್ದರು, ಎಂದು ಬರೆಯುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more