ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆಯವರ ಬಗ್ಗೆ ಅಪೂರ್ವ ಗ್ರಂಥ - ಭಾಗ 4

By Prasad
|
Google Oneindia Kannada News

DaRa Bendre
ಬೇಂದ್ರೆಯವರ ಗರಡಿಯಲ್ಲಿ ಬೆಳೆದ ಪುತ್ರ ವಾಮನ ಅವರು ಬೇಂದ್ರೆ ಅವರ ಕಾವ್ಯಕ್ಕೆ 'ಸಂವಾದ ಕಂಡ ಅಂದತ್ತ' ಎಂಬ ಎರಡು ಸಂಪುಟಗಳಲ್ಲಿ ಟಿಪ್ಪಣಿ ಬರೆದಿದ್ದಾರೆ. ಬೇಂದ್ರೆ ಸಂಶೋಧನ ಕೇಂದ್ರ ಪ್ರಕಟಿಸಿರುವ ಎರಡು ಸಂಪುಟಗಳ ಬೆಲೆ ರು.1000. ಸಂಪುಟ ಕುರಿತ ಲೇಖನದ ನಾಲ್ಕನೇ ಭಾಗ ಇಲ್ಲಿದೆ.

* 'ಜೀವಿ' ಕುಲಕರ್ಣಿ, ಮುಂಬಯಿ

ಹೃದಯ ಗೀತ ಬೇಂದ್ರೆಯವರು ಮೂಲತಃ ಮರಾಠಿಯಲ್ಲಿ ಬರೆದ ಕವನಗಳ ಭಾವಾನುವಾದದ ಸಂಗ್ರಹ. ವಾಮನ ಬೇಂದ್ರೆಯವರು ಚೆನ್ನಾಗಿ ಅನುವಾದಿಸಿದ್ದಾರೆ, ಮರಾಠಿ ಕವಿತೆಗಳ ವೈಶಿಷ್ಟ್ಯದ ಬಗ್ಗೆ ಬರೆದಿದ್ದಾರೆ.

ಲಕ್ಷ್ಮೀಬಾಯಿ ಬೇಂದ್ರೆ: ಶತಮಾನದ ನೆನಪು ವರಕವಿಗಳ ಬಾಳ ಸಖಿಯ ನೆನಪಿನ ಪುಸ್ತಕ, ಬೇಂದ್ರೆ ವಿಜ್ಞಾನ ಸಿದ್ಧಾಂತ-ಪ್ರಯೋಗ: ಜೀವರಸಾಯನಶಾಸ್ತ್ರ ದೃಷ್ಟಿಕೋನ ವರಕವಿಗಳ ವಿಜ್ಞಾನದ ಅಭ್ಯಾಸವನ್ನು ಕುರಿತು ವಾಮನರು ಮಾಡಿದ ಭಾಷಣ ಇವೆಲ್ಲ ಮೊದಲನೆಯ ಸಂಪುಟದಲ್ಲಿವೆ.

ಬೇಂದ್ರೆಯವರು ಮಹಾಕವಿಗಳಿದ್ದಂತೆ ಮಹಾವಿಜ್ಞಾನಿಗಳೂ ಆಗಿದ್ದರು. ಬೇಂದ್ರೆ ಹಾಗೂ ವಿಜ್ಞಾನ ಎಂಬ ಪ್ರಬಂಧ ಬೇಂದ್ರೆಯವರು ಕೈಕೊಂಡ ಸಂಶೋಧನೆಗಳ ಬಗ್ಗೆ ಇದೆ. ಬೇಂದ್ರೆ ವಿಜ್ಞಾನ ಸಿದ್ಧಾಂತ: ಜೀವರಸಾಯನಶಾಸ್ತ್ರ ದೃಷ್ಟಿಕೋನ ಎಂಬ ವಾಮನ ಬೇಂದ್ರೆಯವರ ಲೇಖನ ಬೇಂದ್ರೆಯವರ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ.

ವಾಮನ ಬೇಂದ್ರೆಯವರು ಬರೆದ ಸಂವಾದ ಕಂಡ ಅಂದತ್ತದ ಎರಡನೆಯ ಸಂಪುಟದಲ್ಲಿ ಋ) ವಿಭಾಗದಲ್ಲಿ ಬೇಂದ್ರೆ ಸಂಗೀತಕ್ಕೆ ಸಂಬಂಧಪಟ್ಟ ಹದಿನಾಲ್ಕು ಕೃತಿಗಳ ಬಗ್ಗೆ ಬರೆದ ಸಂಪಾದಕರ ಭೂಮಿಕೆಗಳು ವೈಶಿಷ್ಟ್ಯಪೂರ್ಣವಾಗಿವೆ. ರವೀಂದ್ರ ಸಂಗೀತದಂತೆ ಕನ್ನಡದಲ್ಲಿ ಬೇಂದ್ರೆಯವರ ಹಾಡುಗಳ ವೈಶಿಷ್ಯವನ್ನು ತೋರುವ ಸಂಗೀತವಿದೆ. ಅದೇ ಬೇಂದ್ರೆ ಸಂಗೀತ. ಬೇಂದ್ರೆ ಸಂಗೀತ: ಸಿದ್ಧಾಂತ-ಪ್ರಯೋಗ ಎಂಬ ಪುಸ್ತಕವನ್ನೂ ವಾಮನ ಬೇಂದ್ರೆ ಬರೆದಿದ್ದಾರೆ. ಬೇಂದ್ರೆಯವರ ಆಯ್ದ ಕವಿತೆಗಳಿಗೆ ಪಂಡಿತ ಕೃಷ್ಣಾಜಿ ಕುರ್ತಕೋಟಿಯವರು ಸ್ವರಸಂಯೋಜನೆ ಮಾಡಿದ್ದಾರೆ. ಆಯ್ದ ಕವಿತೆಗಳು ಸ್ವರಪ್ರಸ್ತಾರದೊಡನೆ ಮುದ್ರಿತವಾಗಿವೆ.

ಬೇಂದ್ರೆಯವರು ಹಿಂದಿನ ಜನ್ಮದಲ್ಲಿ ಒಬ್ಬ ಗಂಧರ್ವನಾಗಿರಬೇಕು. ಆ ಜಾಡನ್ನು ಹಿಡಿದು ಅವರು ಅವರು ಸಂಗೀತದ ನೆಲೆ, ಬೆಲೆ, ಬೇರು ಗುರುತಿಸಲು ಸಂಗೀತಶಾಸ್ತ್ರವನ್ನು ತಲಸ್ಪರ್ಶಿಯಾಗಿ ಅಭ್ಯಸಿಸಿದ್ದರು. ಕಾವ್ಯದ ಛಂದೋ ವೈವಿಧ್ಯ, ಹಿದುಸ್ತಾನಿ ಸಂಗೀತದ ಆಲಾಪದ ಮಾಧುರ್ಯ ಮತ್ತು ಗೇಯತೆಯ ಶಿಖರವನ್ನು ಗುರುತಿಸುವಲ್ಲಿ ಬೇಂದ್ರೆ ಸಮರ್ಥರಾಗಿದ್ದರು. ರಾಗದಿಂದ ಅನುರಾಗದ ಆವಿಷ್ಕರಣ ಅವರ ಕಾರ್ಯವಿಧಾನವಾಗಿತ್ತು. ರವಿಂದ್ರ ಸಂಗೀತದಂತೆ ಬೇಂದ್ರೆ ಸಂಗೀತ ವಿಶ್ವ ಸಂಗೀತಕ್ಕೆ ಕನ್ನಡದ ಕಾಣಿಕೆಯಾಗಬೇಕೆಂಬುದು 2000ದಂದು ಪ್ರಾರಂಭಗೊಂಡ ಬೇಂದ್ರೆ ಸಂಗೀತ ಅಕ್ಯಾಡೆಮಿಯ ಪ್ರಯತ್ನವಾಗಿದೆ. ಬೇಂದ್ರೆಯವರ ಹುಟ್ಟುಹಬ್ಬದ ಮುನ್ನಾ ದಿನ, ಅಂದರೆ ಭಾರತ ಹುಣ್ಣಿವೆಯ ರಾತ್ರಿ ಬೆಳಗು ಹರಿಯುವ ವರೆಗೆ ಬೆಂದ್ರೆ ಸಂಗೀತ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿಯ ಬೇಂದ್ರೆ ಸಪ್ತಸ್ಮಾರಕಗಳಲ್ಲಿ ಒಂದಾದ ಬೇಂದ್ರೆ ಕುಟೀರದಲ್ಲಿ ಏರ್ಪಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಅಂಬಿಕಾತನಯನ ಹಾಡ ಬೆಳುದಿಂಗಳ ನೋಡ ಎಂದು ಹೆಸರಿಸಲಾಗಿದೆ.

ಪ್ರತಿ ವರ್ಷ ಆಯ್ದ ಕವನಗಳಿಗೆ ಸಂಗೀತ ಪ್ರಸ್ತಾರ ಹಾಕಿ ವಾಮನ ಬೇಂದ್ರೆಯವರ ಸಂಪಾದಕೀಯ ಭೂಮಿಕೆಯೊಂದಿಗೆ ಪ್ರಕಟಿಸಲಾಗುತ್ತಿದೆ. ಇಲ್ಲಿಯವರೆಗೆ ಹದಿಮೂರು ಪುಸ್ತಕಗಳು ಮುದ್ರಿತವಾಗಿವೆ. ಇವುಗಳಲ್ಲಿ ವೈಶಿಷ್ಟ್ಯವೂ ಇದೆ. ಇವುಗಳಲ್ಲಿ ಬೇಂದ್ರೆಯವರ ದಶಾವತಾರದ ಹಾಡುಗಳು, ಬೇಂದ್ರೆಯವರು ವಿನಾಯಕನ ಬಗ್ಗೆ ಬರೆದ ಹಾಡುಗಳು (ಬೇಂದ್ರೆ ಕಂಡ ಬೆನಕ), ಬೇಂದ್ರೆಯವರ ಶ್ರಾವಣ ಗೀತಗಳು, ಋತುದರ್ಶನದ ಹಾಡುಗಳು, ಮಾತಾರವಿಂದರ ಬಗ್ಗೆ ಹಾಡುಗಳು, ನಾಳಿನಾ ಕನಸಿನ ಹಾಡುಗಳು, ಬೇಂದ್ರೆ ರಂಗ ಗೀತೆಗಳು, ಭಾರತ ದರ್ಶನದ ಹಾಡುಗಳು, ಕನ್ನಡ ನಾಡಿನ ಬಗ್ಗೆ ಹಾಡುಗಳು ಇವೆ. ಬೇಂದ್ರೆ ಸಂಗೀತ- ಸಿದ್ಧಾಂತ-ಪ್ರಯೋಗ ಎಂಬ ವಾಮನ ಬೇಂದ್ರೆ ಸಂಪಾದಿತ ಪುಸ್ತಕದಲ್ಲಿ ಬೇಂದ್ರೆ ಸಂಗೀತದ ಅಷ್ಟಾಂಗಗಳ ವಿವೇಚನೆ ಇದೆ. ಗಾಯನ ಪಂಡಿತರಾದ ಭೀಮಸೇನ ಜೋಶಿ, ಕುಮಾರ ಗಂಧರ್ವ, ಬಸವರಾಜ ರಾಜಗುರು, ಸಂಗಮೇಶ ಗುರವ್ ಅವರಿಗೆ ಕನ್ನಡದಲ್ಲಿ ಚೀಜುಗಳನ್ನು ಬರೆದುಕೊಡಲು ಬೇಂದ್ರೆ ಮುಂದೆ ಬಂದರು. ಮಾಧವ ಗುಡಿ, ವೆಂಕಟೇಶ ಮಣ್ಣೂರ್, ಚಂದ್ರಶೇಖರಸ್ವಾಮಿ ಮೊದಲಾದ ತರುಣ ಪೀಳಿಗೆಯ ಗಾಯಕರು ಬೇಂದ್ರೆಯವರ ಚೀಜುಗಳನ್ನು ಹಾಡಿದ್ದಾರೆ.

ೠ) ವಿಭಾಗದಲ್ಲಿ ಬೇಂದ್ರೆ ನಾಟ್ಯ ಯೋಗದ ಸಮಗ್ರ ಸಮೀಕ್ಷೆಯನ್ನು ವಾಮನ ಬೇಂದ್ರೆಯವರು ಮಾಡುತ್ತಾರೆ. ಏಳು ಉಪವಿಭಾಗಗಳಲ್ಲಿ ಬೇಂದ್ರೆ ನಾಟ್ಯಯೋಗದ ಸಪ್ತರಂಗಗಳ ಚಿತ್ರಣವನ್ನು ಮಾಡುತ್ತಾರೆ. ಬೇಂದ್ರೆಯವರಿಗೆ ಕಾವ್ಯ ಉತ್‌ಯೋಗವಾದಂತೆ ನಾಟ್ಯವೂ ಯೋಗವಾಗಿತ್ತು. ಬೇಂದ್ರೆಯವರ ರಂಗ ನಾಟಕಗಳ ಸಮೀಕ್ಷೆಯನ್ನು ಮಾಡುತ್ತಾರೆ (ಗೋಲ್, ತಿರುಕರ ಪಿಡುಗು, ಸಾಯೋಆಟ, ಜಾತ್ರೆ, ಹಳೆಯ ಗೆಣೆಯರು, ದೆವ್ವದ ಮನೆ, ನಗೆಯ ಹೊಗೆ, ಉದ್ಧಾರ, ಹೊಸ ಸಂಸಾರ ಮುಂ.). ಬೇಂದ್ರೆಯವರು ಬಾನುಲಿಗಾಗಿ ಹನ್ನೊಂದು ನಾಟಕಗಳನ್ನು ರಚಿಸಿದರು.(ಭೀಷ್ಮ ಉತ್ತರಾಯಣ, ಯಕ್ಷ-ಯಕ್ಷಿ, ಶ್ರೀರಾಮ ನವಮಿ ಮುಂ.) ಅವುಗಳ ಸಮೀಕ್ಷೆಯನ್ನು ವಾಮನರು ಮಾಡುತ್ತಾರೆ. ಬೇಂದ್ರೆಯವರು ಬರೆದ ವೃತ್ತಿ ನಾಟಕಗಳ ಬಗ್ಗೆ ಬರೆಯುತ್ತಾರೆ. ತಲೆದಂಡ ಎಂಬ ನಾಟಕದ ಹಸ್ತಪ್ರತಿ ಕಳೆದಿತ್ತು. 2008ರಲ್ಲಿ ದೊರೆಯಿತು. 53 ದೃಶ್ಯಗಳುಳ್ಳ ನಾಲ್ಕು ಅಂಕಿನ ನಾಟಕ. ಬಸವಣ್ಣನವರ ಜೀವನವನ್ನು ಆಧರಿಸಿ ಬರೆದ ನಾಟಕವಿದು. 40ನೆಯ ದೃಶ್ಯದಲ್ಲಿ ಬಸವಣ್ಣ ಬಿಜ್ಜಳನಿಗೆ ಹೇಳುತ್ತಾನೆ, ಮಂತ್ರಿತ್ವ, ಶಿವನ ಕಾರ್ಯವೆಂದು ಮಾಡುತ್ತಿರುವೆನಲ್ಲದೆ; ರಾಯನ ಮನೆಯ ಕೂಲಿಯೆಂದಲ್ಲ. ತಾವು ಭುಜಬಲದಿಂದ ಗಳಿಸಿದ ರಾಜ್ಯ ಇತರ ಮಂತ್ರಿಗಳ ಬಲದಿಂದ ಉಳಿಸಿಕೊಳ್ಳುವಿರೆಂದು ಕಟ್ಟಿದ ಮಂತ್ರಿಪಟ್ಟ ಕೆಳಗಿಳಿಸಿ, ಶಿವನ ಊಳಿಗಕ್ಕೆ ನಾನು ಹೊರಟೆ ಎಂದು ಕೂಡಲ ಸಂಗಮದತ್ತ ಹೊರಟೇ ಬಿಡುತ್ತಾನೆ.

ಬೇಂದ್ರೆಯವರ ಬಸವಣ್ಣನಿಗೆ ರಾಜಕೀಯ ಹಾಗೂ ಸಾಮಾಜಿಕ ಕ್ರಾಂತಿಗಿಂತ ಆತ್ಮವಿಕಾಸ, ಅವತಾರ ಕಾರ್ಯ ಶ್ರೇಷ್ಠ ಎನ್ನುತ್ತಾರೆ ವಾಮನರು. ಭಾಸ ಕವಿಯ ಪ್ರತಿಮಾ ನಾಟಕವನ್ನು ಕನ್ನಡದಲ್ಲಿ ಪುನರ್‌ಸೃಷ್ಟಿ ಮಾಡಿ ಪ್ರತಿಮಾಗೃಹ ನಾಟಕವನ್ನು ಬೇಂದ್ರೆ ಬರೆದರು. ವಿಸ್ತಾರವಾದ ಭೂಮಿಕೆಯನ್ನು ವಾಮನರು ಬರೆಯುತ್ತಾರೆ. ಬೇಂದ್ರೆಯವರು ತಾವು ಬರೆಯಲಿರುವ ನಾಟಕಗಳ ಬಗ್ಗೆ ಶಿಷ್ಯರಿಗೆ ಹೇಳಿದರು. ಈ ಶಿಷ್ಯರು ನಾಟಕಗಳನ್ನು ಬರೆದರು ಅವೇ ಬೇಂದ್ರೆ ಮಾನಸ ನಾಟಕಗಳು. ಬೇಂದ್ರೆ ಕಲ್ಪನೆಯ ಮಿಸ್ ಫಾರ್ಚೂನ್ ನಾಟಕವನ್ನು ಕೆ.ಎಸ್.ಶರ್ಮಾ ಬರೆದರು. ಕರೇ ಹೆಂಡತಿ ಆದರೆ ಖರೇ ಹೆಂಡತಿ ಎನ್ಕೆ ಬರೆದರು. ಕೆಲಸ ಸಾಗಿದೆ ದಾರಿ ಇಲ್ಲದಾಗಿದೆ, ಕತ್ತೆ! ಸುಖ ಸಂಸಾರ ಅಂದ್ರೆ ಗೊತ್ತೆ?, ಪೊಳ್ಳು ಪ್ರದರ್ಶನ ಈ ಮೂರು ಕಲ್ಪನೆಗಳಿಗೆ ವಾಮನ ಬೇಂದ್ರೆ ನಾಟಕರೂಪ ಕೊಟ್ಟರು.

ಎ) ವಿಭಾಗದಲ್ಲಿ ಬೇಂದ್ರೆಯವರ ಮೌನ ಯೋಗ ಕುರಿತು ಸಮೀಕ್ಷೆ ಇದೆ. ಗೆಳೆಯರ ಗುಂಪಿನ ಸದಸ್ಯರು ಎರಡು ಮೌನ ವಾರಗಳನ್ನು ಆಚರಿಸಿದರು. ಇದರಲ್ಲಿ ಬೇಂದ್ರೆ, ಗೋಕಾಕ, ಮುಗಳಿ, ವಿನೀತ, ಮಳಗಿ, ದೀಕ್ಷಿತ, ಗದ್ರೆ ಭಾಗವಹಿಸಿದ್ದರು. ಬೇಂದ್ರೆಯವರು ಮಾತು ಮೌನದ ಪ್ರತಿಮೆ | ಮೌನ ಮಾತಿನ ದೈವ ಎಂದು ಹೇಳಿದ್ದು ಮನನೀಯವಾಗಿದೆ. ಇದರ ಬಗ್ಗೆ ವಾಮನರು ಬರೆದ ಭೂಮಿಕೆ ಬಹಳ ಮಹತ್ವದ್ದಾಗಿದೆ.

ಏ) ವಾಮನ ಕಂಡ ಬೇಂದ್ರೆ. ಬೇಂದ್ರೆಯವರು ತಮ್ಮ ಜನನದಿಂದ 1960ರ ವರೆಗೆ ತಮ್ಮ ಆತ್ಮಚರಿತ್ರೆಯನ್ನು ಬರೆದಿದ್ದರು. ಇದು ಅಪೂರ್ಣವಾಗಿ ಉಳಿದಿತ್ತು. ಅವರ ಜೀವನ ಚರಿತ್ರೆಯ ಉತ್ತರಾರ್ಧ (1961ರಿಂದ 1981), ಎರಡು ದಶಕಗಳ ವಿವರ ವಾಮನರು ಬರೆದಿದ್ದಾರೆ ಇದು ಬಹಳ ಮಹತ್ವದ್ದಾಗಿದೆ.

ಕೊನೆಯದಾಗಿ ಐ) ವಿಭಾಗ. ಇಲ್ಲಿ ಬೇಂದ್ರೆಯವರ ಜೀವನ ಮಹಾಕಾವ್ಯ ಔದುಂಬರಗಾಥೆ ಆರು ಸಂಪುಟಗಳು, ಸಮಗ್ರ ಸಾಹಿತ್ಯದ 6 ಸಂಪುಟಗಳ ಚಿಂತನ ಮಂಥನವನ್ನು ವಾಮನ ಬೇಂದ್ರೆ ಮಾಡಿದ್ದಾರೆ.

ಪುಸ್ತಕ ಬೇಕಿದ್ದರೆ ಸಂಪರ್ಕಿಸಿ :
ಪ್ರಕಾಶಕರು: ಡಾ| ಕೆ.ಎಸ್.ಶರ್ಮಾ, ಬೇಂದ್ರೆ ಸಂಶೋಧನ ಸಂಸ್ಥೆ, ಶ್ರೀ ಮಾತಾ ಪ್ರಕಾಶನ, ವಿಶ್ವಶಮ ಚೇತನ, ಗೋಗುಲ ರೋಡ್, ಹುಬ್ಬಳ್ಳಿ-580 030 ಫೋ: 99868 01909.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X