ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ಬಗ್ಗೆ ಅಪೂರ್ವ ಗ್ರಂಥ - ಸಂವಾದ ಕಂಡ ಅಂದತ್ತ

By Prasad
|
Google Oneindia Kannada News

Da Ra Bendre
ವರಕವಿ ಬೇಂದ್ರೆಯವರು ಕನ್ನಡ ನಾಡು ಕಂಡ ವಿಶ್ವಕವಿ, ವಿರಾಟಕವಿ, ಆರ್ಷಕವಿ. ಜನಮಾನಸದಕವಿ, ಹೃದಯಪೀಠದಕವಿ. ಕನ್ನಡವಿದೆ ಕನ್ನಡಿಯಿದೆ | ಕಣ್ಣಿದ್ದರೆ ನೋಡಿ | ಎಂದು ಹೇಳಿ ಕನ್ನಡ ರಸಿಕರಲ್ಲಿ ಹೃದಯ-ವಿವೇಕಗಳ ದೀಕ್ಷೆ ನೀಡಿದ ಕವಿ. ಕನ್ನಡವೂ ಭಾರತವೂ ಜಗವೆಲ್ಲವು ಒಂದೇ | ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೇ| ಎಂ ಕಣಸು ಕಂಡ ದಾರ್ಶನಿಕ ಕವಿ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಶಬ್ದಕೋಶದ ಬಲದಿಂದ ಬೇಂದ್ರೆ ಕಾವ್ಯಕ್ಕೆ ಅರ್ಥ ಹಚ್ಚಲಿಕ್ಕಾಗುವುದಿಲ್ಲ. ಕನಕನ ಮುಂಡಿಗೆಯಂತೆ ಬೇಂದ್ರೆ ಕಾವ್ಯ ಕೆಲಸಲ ಕಗ್ಗಂಟಾಗುವುದುಂಟು. ಅವರ ಕವಿತೆಗಳನ್ನು ಆಸ್ವಾದಿಸಲು ಹೃದಯವಿದ್ದರೆ ಸಾಲದು, ಸಹೃದಯತೆ ಬೇಕು, ಬೇಂದ್ರೆಯವರ ಅಧ್ಯಯನದ ವ್ಯಾಪ್ತಿ ದೊಡ್ದದು. ವೈದಿಕ ವಾಙ್ಮಯ, ಜೈನ-ಬೌದ್ಧ-ವೀರಶೈವ ಧರ್ಮಗಳ ಅಭ್ಯಾಸ, ಕನ್ನಡ ಮರಾಠಿ ಸಂಸ್ಕೃತ ಸಾಹಿತ್ಯಗಳ ಆಳವಾದ ವ್ಯಾಸಂಗ, ಇವನ್ನೆಲ್ಲ ಜಾನಪದ ಗತ್ತಿನೊಡನೆ ಮಣ್ಣಿನ ವಾಸನೆಯೊಡನೆ ಮೇಳೈಸಿ ಪಾಕ ಸಿದ್ಧಪಡಿಸಿ ಉಣಬಡಿಸುವ ಬೇಂದ್ರೆ ಸಾಹಿತ್ಯ ಓದುಗನಲ್ಲಿ ವ್ಯಾಪಕ ಹಿನ್ನೆಲೆಯನ್ನು ಅಪೇಕ್ಷಿಸುತ್ತಿದೆ ಎಂದು ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದಾರೆ.

ಬೇಂದ್ರೆಯವರ ಗರಡಿಯಲ್ಲಿ ಬಾಲ್ಯದಿಂದಲೂ ಬೆಳೆದ ಪುತ್ರ ವಾಮನ ಅವರಿಗೆ ತಮ್ಮ ಕಾವ್ಯಕ್ಕೆ ಟಿಪ್ಪಣಿ ಬರೆಯಲು, ತಮ್ಮ ಕೃತಿಗಳನ್ನು ಸಂಪಾದಿಸಲು ಪ್ರೇರಣೆ ನೀಡಿದ ವರಕವಿಗಳ ಆಶೀರ್ವಾದದ ಫಲಸ್ವರೂಪಿಯಾಗಿ ಹೊರಬಂದ ತ್ರಿವಿಕ್ರಮಾಕೃತಿಯ ಎರಡು ಸಂಗ್ರಾಹ್ಯ ಸಂಪುಟಗಳಲ್ಲಿರುವ ಉದ್ಗ್ರಂಥ ಸಂವಾದ ಕಂಡ ಅಂದತ್ತ.(ಪುಟಗಳು 784+784=1568, ಬೆಲೆ ರೂ.1000/-, ಪ್ರಕಾಶಕರು: ಡಾ| ಕೆ.ಎಸ್.ಶರ್ಮಾ, ಬೇಂದ್ರೆ ಸಂಶೋಧನ ಸಂಸ್ಥೆ, ಶ್ರೀ ಮಾತಾ ಪ್ರಕಾಶನ, ವಿಶ್ವಶಮ ಚೇತನ, ಗೋಗುಲ ರೋಡ್, ಹುಬ್ಬಳ್ಳಿ-580 030 ಫೋ: 99868 01909).

ಸಂಪುಟಗಳಲ್ಲೇನಿದೆ? : ಮೊದಲನೆಯ ಸಂಪುಟದಲ್ಲಿ ವಾಮನ ಬೇಂದ್ರೆಯವರು ತಮ್ಮ ಸಾಹಿತ್ಯಕ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ವರಕವಿಗಳ ಬಗ್ಗೆ ಅಗಾಗ ಬರೆದ ಹತ್ತು ಕವಿತೆಗಳನ್ನು ಪ್ರಕಟಿಸಿದ್ದಾರೆ. ಕೆ.ಎಸ್.ಶರ್ಮಾ ಅವರ ಪ್ರಕಾಶಕರ ಸಮೀಕ್ಷೆ ಗ್ರಂಥದ ಸಿಂಹಾವಲೋಕನ ಮಾಡುತ್ತದೆ. ಇಲ್ಲಿ ಆರು ವಿಭಾಗಗಳಿವೆ. ಅ) ಬೇಂದ್ರೆಯವರ ಜೀವಿತಾವಧಿಯಲ್ಲಿ ಪ್ರಕಟವಾದ ನಕ್ಷತ್ರಗಳಂತೆ ಬೆಳಗುವ 27 ಕವನ ಸಂಗ್ರಹಗಳಿಗೆ (ಕೃಷ್ಣಾಕುಮಾರಿಯಿಂದ ಚತುರೋಕ್ತಿಯವರೆಗೆ) ವಾಮನರು ಬರೆದ ಅಭ್ಯಾಸಪೂರ್ಣ ಸಂಪಾದಕರ ಭೂಮಿಕೆಗಳು, ಆ) ಬೇಂದ್ರೆಯವರ ಮರಣೋತ್ತರ ಪ್ರಕಾಶನಗಳಾದ ಏಳು ಸಂಗ್ರಹಗಳಿಗೆ (ಪರಾಕಿಯಿಂದ ಭೂದೈವತಗಳು ವರೆಗೆ) ಬರೆದ ಭೂಮಿಕೆಗಳು, ಇ) ಬೇಂದ್ರೆಯವರ 8 ಆಯ್ದ ಕವನ ಸಂಗ್ರಹಗಳಿಗೆ (ಬಾಹತ್ತರದಿಂದ ನಾಳಿನಾ ಕನಸುವರೆಗೆ) ಬರೆದ ಭೂಮಿಕೆಗಳು, ಈ) ಬೇಂದ್ರೆಯವರ ಮರಾಠಿ ಕವನಗಳ ಭಾವನುವಾದ (ಹೃದಯಗೀತಕ್ಕೆ) ಬರೆದ ಭೂಮಿಕೆ, ಉ) ಬೇಂದ್ರೆಯವರ ಬಾಳಸಖಿ ಲಕ್ಷ್ಮೀಬಾಯಿ ಅವರ ಶತಮಾನೋತ್ಸವ ಗ್ರಂಥಕ್ಕೆ ಬರೆದ ಭೂಮಿಕೆ, ಊ) ಬೇಂದ್ರೆ ಮತ್ತು ವಿಜ್ಞಾನ, ಬೇಂದ್ರೆ ವಿಜ್ಞಾನ ಸಿದ್ಧಾಂತ-ಯೋಗ ಗ್ರಂಥಗಳಿಗೆ ಬರೆದ ಭೂಮಿಕೆಗಳು ಇಲ್ಲಿವೆ.

ಎರಡನೆಯ ಸಂಪುಟದಲ್ಲಿ ಋ) ಬೇಂದ್ರೆ ಸಂಗೀತಕ್ಕೆ ಸಂಬಂಧಪಟ್ಟ 15 ಕೃತಿಗಳ ಬಗ್ಗೆ ಭೂಮಿಕೆಗಳು, ೠ) ಬೇಂದ್ರೆಯವರ 12 ರಂಗ ನಾಟಕಗಳ ಸಮೀಕ್ಷೆ, 11 ಬಾನುಲಿ ರೂಪಕಗಳ ಸಮೀಕ್ಷೆ, ಎರಡು ವೃತ್ತಿರಂಗ ನಾಟಕಗಳ (ತಲೆದಂಡ, ಪ್ರತಿಮಾಗೃಹ) ಸಮೀಕ್ಷೆ, ಉ) ಬೇಂದ್ರೆ ಪರಿಕಲ್ಪಿಸಿದ ನಾಟಕಗಳ ಸಮೀಕ್ಷೆ, ಊ) ಬೇಂದ್ರೆ ನಾಟ್ಯಯೋಗ ಸಿದ್ಧಾಂತದ ಒಳನೋಟದ ಸಮೀಕ್ಷೆ (ಬೇಂದ್ರೆಯವರ ಮರಾಠಿ ಲೇಖನದ ಅನುವಾದವೂ ಇದೆ), ಎ)ಮೌನಯೋಗದ ಸಮೀಕ್ಷೆ, ಏ) ಬೇಂದ್ರೆ ಜೀವನ ಉತ್ತರಾರ್ಧದ ಸಮೀಕ್ಷೆ, ಐ) ಬೇಂದ್ರೆಯವರ ಜೀವನ ಮಹಾಕಾವ್ಯ ಔದುಂಬರ ಗಾಥೆಯ ಆರು ಸಂಪುಟಗಳು, ಮಾತಾರವಿಂದ ಪ್ರಜ್ಞಾಪ್ರಕಾಶ ಸಂಪುಟ, ಸಮಗ್ರ ಸಖೀಗೀತ ಸಂಪುಟ, ಬೇಂದ್ರೆ ಸಮಗ್ರ ನಾಟಕಗಳ ಮೂರು ಸಂಪುಟಗಳು, ಕಾವ್ಯೋದ್ಯೋಗ ಸಿದ್ಧಾಂತ ಸಂಪುಟ- ಇವೆಲ್ಲವುಗಳಿಗೆ ಬರೆದ ಭೂಮಿಕೆಗಳು ಒಂದೆ ಕಡೆಯಲ್ಲಿ ಲಭ್ಯವಾಗಿವೆ. ಬೇಂದ್ರೆಯವರ ಕಾವ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಉಪಯುಕ್ತವಾದ ಸಾಂದರ್ಭಿಕ ಮಾಹಿತಿಯಲ್ಲಿ ಈ ಸಮೀಕ್ಷೆಗಳು ಒದಗಿಸುತ್ತವೆ.

ಬೇಂದ್ರೆ ಕಾವ್ಯದ ಮೇಲೆ ಹೊಸ ಬೆಳಕು :
ಡಾ| ವಾಮನ ಬೇಂದ್ರೆಯವರ ಬರವಣಿಗೆ ಅಭ್ಯಾಸಪೂರ್ಣವಾಗಿದೆ, ಬೇಂದ್ರೆಯವರ ಮಾರ್ಗದರ್ಶನದಲ್ಲಿ ಬರೆಯಲ್ಪಟ್ಟಿರುವುದರಿಂದ ಅದಕ್ಕೆ ಹೆಚ್ಚಿನ ಮಹತ್ವವಿದೆ. ಬೇಂದ್ರೆಯವರ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ವಿಶೇಷವಾದ ಬೆಳಕನ್ನು ವಾಮನರ ಬರವಣಿಗೆ ಒದಗಿಸುತ್ತದೆ. ಬೇಂದ್ರೆಯವರ ಬಿಡಿ ಕಾವ್ಯ ಸಂಗ್ರಹಗಳು ಹಲವಾರು ಸಂಸ್ಕರಣಗಳನ್ನು ಪಡೆದಿವೆ. ಎಲ್ಲವನ್ನು ವಾಚಕರಿಗೆ ಓದುವುದು ಸಾಧ್ಯವಾಗುವುದಿಲ್ಲ. ಬೇಂದ್ರೆಯವರ ಪ್ರಸಿದ್ಧ ಕವನ ಸಂಗ್ರಹಗಳ (ಗರಿ, ನಾದಲೀಲೆ, ಸಖೀಗೀತ, ಗಂಗಾವತರಣ, ಮೇಘದೂತ ಮುಂ.) ಹಳೆಯ ಸಂಸ್ಕರಣ ಹೊಂದಿದ ವಾಚಕರಿಗೆ ಅವುಗಳ ಬಗ್ಗೆ ವಿವರವಾದ ಟಿಪ್ಪಣಿ ಹಾಗೂ ಭೂಮಿಕೆ ಒಂದೆ ಕಡೆ ದೊರೆಯುವ ಅವಶ್ಯಕತೆ ಇತ್ತು. ಅದನ್ನು ವಾಮನ ಬೇಂದ್ರೆಯವರ ಬರವಣಿಗೆ ನೀಡುತ್ತದೆ. ಅವರ ಕಾವ್ಯದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಇದಕ್ಕಾಗಿ ನಾವು ವಾಮನ ಬೇಂದ್ರೆಯವರಿಗೆ, ಇದನ್ನು ಸರ್ವಾಂಗ ಸುಂದರವಾಗಿ ಪ್ರಕಾಶನ ಗೊಳಿಸಿದ ಬೇಂದ್ರೆಯವರ ದತ್ತಪುತ್ರರೆಂದೇ ಖ್ಯಾತರಾಗಿರುವ ಡಾ| ಕೆ.ಎಸ್.ಶರ್ಮಾ ಅವರಿಗೆ ಕನ್ನಡಕುಲರಸಿಕರು ಉಪಕೃತರಾಗಿದ್ದಾರೆ.

ಮೊದಲನೆಯ ಸಂಪುಟದಲ್ಲಿ ಸಂವಾದ ಕಂಡ ಅಂದತ್ತ ಎಂಬ ಲೇಖನದಲ್ಲಿ ವಾಮನ ಬೇಂದ್ರೆಯವರು ತಮ್ಮ ಆತ್ಮಚರಿತ್ರೆಯ ಅಂಶಗಳುಳ್ಳ ವಿವರಗಳನ್ನು ಒದಗಿಸಿದ್ದಾರೆ. ರಾಣೆಬೆನ್ನೂರಲ್ಲಿ ವಾಮನರ ಜನನವಾಯ್ತು. ಅವರು ವರಕವಿ ಬೇಂದ್ರೆಯವರ ಪುತ್ರರಾಗಿ ಹೇಗೆ ಬೆಳೆದರು, ಅವರ ಸಾಹಿತ್ಯವನ್ನು ಅಭ್ಯಾಸ ಮಾಡುವ ಒಲವನ್ನು ಹೇಗೆ ಬೆಳೆಸಿಕೊಂಡರು, ಬೇಂದ್ರೆಯವರ ವಿರಾಟ ಸ್ವರೂಪವನ್ನು ಅವರು ಹತ್ತಿರದಿಂದ ಹೇಗೆ ನೋಡಿದರು ಎಂಬ ವರ್ಣನೆ ರೋಚಕವಾಗಿ ಮೂಡಿ ಬಂದಿದೆ.

ವಾಮನ ಬೇಂದ್ರೆಯ ಬಾಲ್ಯ, ಅಧ್ಯಯನ : ಸಂವಾದ ಇದು ವಾಮನ ಬೇಂದ್ರೆಯವರ ಕಾವ್ಯನಾಮ. ಅಂದತ್ತ ಇದು ಅಂಬಿಕಾತನಯದತ್ತರ ಸಂಕ್ಷೇಪಗೊಳಿಸಿದ ಕಾವ್ಯನಾಮ. ವಾಮನರ ಮೊದಲ ಕವನ ಸಂಗ್ರಹ 1973ರಲ್ಲಿ ಪ್ರಕಟವಾದಾಗ ಬೇಂದ್ರೆಯವರೆ ಅದಕ್ಕೆ ಮೊದಲ ತೊದಲು ಎಂಬ ಹೆಸರು ಸೂಚಿಸಿದ್ದರು. ಇವರ ಕಾವ್ಯನಾಮವನ್ನೂ ಅವರೇ ಕೊಟ್ಟರು. ಅದೇ ಸಂವಾದ. ಬೇಂದ್ರೆಯವರು ನೌಕರಿಗಾಗಿ ಪಟ್ಟ ಪಾಡು ಅವರ ಚರಿತ್ರೆ ಬಲ್ಲವರಿಗೆ ಗೊತ್ತು. ನರಬಲಿ ಎಂಬ ಕ್ರಾಂತಿಕಾರಿ ಪದ್ಯ ಬರೆದು ಬ್ರಿಟಿಷರ ಕೋಪಕ್ಕೆ ತುತ್ತಾಗೆ ಜೈಲುವಾಸ ಅನುಭವಿಸಿ ಹತ್ತು ವರ್ಷ ಕೆಲಸವಿಲ್ಲದಲೆ ಅಲೆದರು. 1944ರಲ್ಲಿ ಬೇಂದ್ರೆಯವರಿಗೆ ಸೊಲ್ಲಾಪುರ ಡಿ.ಎ.ವಿ. ಕಾಲೇಜಿನಲ್ಲಿ ಕೆಲಸ ದೊರೆತಾಗ ಅವರು ನೆಮ್ಮದಿಯ ಉಸಿರನ್ನು ಬಿಟ್ಟಿದ್ದರು. ಆಗ ವಾಮನರಿಗೆ ಎಂಟು ವರ್ಷ. ಅಲ್ಲಿ ಕನ್ನಡ ಶಾಲೆ ಸೇರಿದ್ದರು. ಅಲ್ಲಿ ಕನ್ನಡವನ್ನು ಬಿಟ್ಟು ಉಳಿದೆಲ್ಲ ವಿಷಯ ಮರಾಠಿಯಲ್ಲಿ ಕಲಿಸುತ್ತಿದ್ದರಂತೆ. ಮರಾಠಿ ಪಾಠ, ಕನ್ನಡದಲ್ಲಿ ನೋಟ್ಸ್ ಬರೆದು ಇತರ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರಂತೆ. ತಾಯಿ ಅಂಬಿಕೆ ಬೇಂದ್ರೆ ಚಿಕ್ಕವರಿದ್ದಾಗ ಬಾಳ ಎಂದು ಸಂಬೋಧಿಸುತ್ತಿದ್ದರು. ಅವರೂ ತಮ್ಮ ಮಗ ವಾಮನನಿಗೆ ಬಾಳ ಎಂದು ಕರೆಯಲು ಪ್ರಾರಂಭಿಸಿದ್ದರು. ನಮ್ಮಂತಹ ಮಿತ್ರರಿಗೆಲ್ಲ ವಾಮನ ಇಂದಿಗೂ ಬಾಳಣ್ಣ ಆಗಿದ್ದಾರೆ.

1947ರಲ್ಲಿ ವಾಮನರಿಗೆ ಪಾಂಡಿಚೇರಿಗೆ ಕರೆದುಕೊಂಡು ಹೋಗಿ ಶ್ರೀಮಾತಾರವಿಂದರ ದರ್ಶನ ಮಾಡಿಸಿದರು. 1948ರಲ್ಲಿ ದತ್ತೋಪಾಸಕರಾದ ಪ್ರಭಾಕರ ಟೇಂಬೇ ಮಹಾರಾಜರಲ್ಲಿ ವಾಮನರಿಗೆ ಮಂತ್ರೋಪದೇಶವಾಯಿತು. ನಾಮ ಜಪವನ್ನು ಕೊಡಲಾಯಿತು. ಧ್ಯಾನಾಸಕ್ತರಾಗಿದ್ದಾಗ ವಾಮನರು ಮಳೆಯನ್ನು ಕಂಡರಂತೆ. ಗುರುಗಳಿಗೆ ಸಂತೋಷವಾಗಿತ್ತು. ಮುಂದೆ ಸೊಲ್ಲಾಪುರದಲ್ಲಿ ಮಳೆಯಾಯಿತು. ಇದರಿಂದ ವಾಮನರಿಗೆ ಆಧ್ಯಾತ್ಮದಲ್ಲಿ ಹೆಚ್ಚಿನ ಒಲವು ಉಂಟಾಗಿತ್ತು ಎಂದು ದಾಖಲಿಸುತ್ತಾರೆ.

ವಾಮನರಿಗೆ ಹದಿನೆಂಟು ವಯಸ್ಸಾದಾಗ ವಿಚಿತ್ರಪ್ರಪಂಚ ಎಂಬ ಮರಾಠಿ ಚಿತ್ರಪಟದ ಅನುವಾದ ಕಾರ್ಯ ತಂದೆ ವಹಿಸಿದ್ದರು. ದತ್ತಸುತ ಎಂಬ ನಾಮದಲ್ಲಿ ಸಂಭಾಷಣೆ ಅನುವಾದಿಸಿದ್ದರು. ಹಾಡುಗಳನ್ನು ಬೇಂದ್ರೆಯವರೇ ಬರೆದಿದ್ದರು. ನಿವೃತ್ತಿಯ ನಂತರ ಬೇಂದ್ರೆಯವರು ಧಾರವಾಡಕ್ಕೆ ವಾಸಿಸಲು ಬಂದರು. ಗೋಕಾಕರು ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ವಾಮನ ಹಾಗೆ ನೋಡಿದರೆ ವಿಜ್ಞಾನದ ವಿದ್ಯಾರ್ಥಿ. ಗೋಕಾಕರ ಸಲಹೆಯ ಮೇರೆಗೆ ಕನ್ನಡ ವಿಷಯ ಆರಿಸಿ ಬಿ.ಎ. ಹಾಗೂ ಎಂ.ಎ. ಪದವಿ ಗಳಿಸಿದರು. ಸಾಂಗಲಿಗೆ ಹೋಗಿ ಡಾ|ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಮಾಡಿದರು. ವಿಷಯ ಜೈಮಿನಿ ಭಾರತ ಒಂದು ಅಧ್ಯಯನ. ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ. ಪುಣೆಯ ಪಂಚನದೀಕರ್ ಕುಟುಂಬದ ಕನ್ಯೆ ವಿಶಾಖಾಅವರೊಂದಿಗೆ ವಿವಾಹ.(1964). 1965-68ರ ಕಾಲದಲ್ಲಿ ಬೇಂದ್ರೆಯವರು ತಮ್ಮ ಕವನ ಸಂಗ್ರಹಗಳಿಗೆ ಟಿಪ್ಪಣಿ ಬರೆಯುವ ಕೆಲಸ ವಾಮನ ಅವರಿಗೆ ಒಪ್ಪಿಸಿದರು. (ಗರಿ, ನಾದಲೀಲೆ, ಸಖೀಗೀತ, ಗಂಗಾವತರಣ ಮುಂ.). ಬೇಂದ್ರೆಯವರ ಗದ್ಯ ಕೃತಿ ಸಾಹಿತ್ಯದ ವಿರಾಟ ಸ್ವರೂಪವನ್ನು ಸಂಪಾದಿಸುವ ಕೆಲಸವನ್ನೂ ವಾಮನರಿಗೆ ವಹಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X