ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಮನ : ಬೇಂದ್ರೆ ಗರಡಿಯಲ್ಲಿ ಪಳಗಿದ ಶಾಗಿರ್ದ್

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Vaman Dattatreya Bendre
ಡಾ| ವಾಮನ ದತ್ತಾತ್ರೇಯ ಬೇಂದ್ರೆಯವರಿಗೆ ಜುಲೈ 28ರಂದು ಎಪ್ಪತ್ತೈದು ತುಂಬಿ ಎಪ್ಪತ್ತಾರರ ಸಂಭ್ರಮ. ಹುಬ್ಬಳ್ಳಿಯ ವಿಶ್ವಶ್ರಮ ಚೇತನದ ಆವರಣದಲ್ಲಿ, ಎಂಬಾರ್ ಭಾಷ್ಯಾಚಾರ್ಯ ಸಭಾಭವನದಲ್ಲಿ, ಅವರನ್ನು ಸನ್ಮಾನಿಸಲಾಗುತ್ತಿದೆ. ಅವರು ಬರೆದ ಅನುಪಮ ರಸವಿಮರ್ಶೆ ವರಕವಿ ಅಂಬಿಕಾತನಯದತ್ತರ ಸಮಗ್ರ ಸಾಹಿತ್ಯ ಸಮೀಕ್ಷೆಯ ಉದ್ಗ್ರಂಥ- ಎರಡು ಸಂಪುಟಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಇದು ಗಾತ್ರದಲ್ಲಿಯೂ (1500 ಪುಟಗಳು) ಮಹತ್ವದಲ್ಲಿಯೂ ಅನನ್ಯ ಗ್ರಂಥವಾಗಿದೆ. ಡಾ| ಕೆ.ರಾಘವೇಂದ್ರರಾವ್, ಎನ್.ಕೆ.ಜೋಗಳೇಕರ್, ಡಾ| ಬಿ.ಬಿ.ರಾಜಪುರೋಹಿತ, ಡಾ| ಜಿ.ವಿ.ಕುಲಕರ್ಣಿ, ಡಾ| ಕೆ.ಎಸ್.ಶರ್ಮಾ ಭಾಗವಹಿಸಲಿದ್ದಾರೆ. ವಾಮನ ಬೇಂದ್ರೆಯವರ ಕಿರುಪರಿಚಯವನ್ನಿಲ್ಲಿ ಕೊಡಲಾಗಿದೆ.

ನಮಗೆ ಪ್ರಿಯರಾದ ಬಾಳಣ್ಣ, ವರಕವಿ ಬೇಂದ್ರೆಯವರ ಜ್ಞಾನಪುತ್ರರೆಂದೇ ಖ್ಯಾತರಾದ ಡಾ| ವಾಮನ ದತ್ತಾತ್ರೇಯ ಬೇಂದ್ರೆ(28-07-1935) ರಾಣೇಬೆನ್ನೂರಲ್ಲಿ ಜನಿಸಿದರು. ಅವರು ಬಾಲ್ಯ ಕಳೆದದ್ದು ಹಾಗೂ ಹೈಸ್ಕೂಲ್ ಶಿಕ್ಷಣ ಮುಗಿಸಿದ್ದು ಸೊಲ್ಲಾಪುರದಲ್ಲಿ. ಕಾಲೇಜು ಶಿಕ್ಷಣ ಪಡೆದದ್ದು ಧಾರವಾಡದಲ್ಲಿ. ಅವರು ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಅವರು ಆಯ್ಕೆಮಾಡಿದ ಪ್ರಧಾನ ವಿಷಯ ಕನ್ನಡವಾಗಿತ್ತು. ಪುಣೆ ವಿಶ್ವವಿದ್ಯಾಲದಿಂದ ಪಿಎಚ್.ಡಿ. ಪದವಿಯನ್ನು ಡಾ| ರಂ.ಶ್ರೀ.ಮುಗಳಿಯವರ ಮಾರ್ಗದರ್ಶನದಲ್ಲಿ ಪಡೆದರು. ಸಂಪ್ರಬಂಧದ ವಿಷಯ: ಲಕ್ಷ್ಮೀಶನ ಜೈಮಿನಿ ಭಾರತ. ಈ ಸಂಶೋಧನಾ ಸಂಪ್ರಬಂಧಕ್ಕೆ ದೇವನೂರು ಸ್ವರ್ಣ ಪದಕ ದೊರೆತಿದೆ. ಮೈಸೂರಿನಿಂದ ಬಿ.ಎಡ್.ಪದವಿಯನ್ನೂ ಪಡೆದಿದ್ದಾರೆ. ಧಾರವಾಡ ಬಾಸೆಲ್ ಮಿಶನ್ ನಡೆಸುವ ಕಿಟೆಲ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತರಾಗಿದ್ದಾರೆ.

ಬಹುಮುಖ ಸಾಹಿತ್ಯ ಸೇವೆ : ಕಾವ್ಯ (ಮೊದಲ-ತೊದಲು, ಅನಂತಧಾರೆ, ಸ್ಪಂದನ ಮುಂ.), ನಾಟಕ (ಸೊಂಡಿ ಗಣಪ್ಪಾ ಬಂದ, ಸ್ಪರ್ಶ ಮತ್ತು ಇತರ ನಾಟಕಗಳು, ರೇಡಿಯೋ ನಾಟಕಗಳು), ವಿಮರ್ಶೆ (ಕಥಾ ಕುಶಲ ಕವಿ ಲಕ್ಷ್ಮೀಶ, ಬೇಂದ್ರೆ ಕಾವ್ಯಲೋಕ, ಬೇಂದ್ರೆ ಬೆಳಕು ಮುಂ.), ಚರಿತ್ರೆ (ಬೇಂದ್ರೆ- ಜೀವನ ಪರಿಚಯ), ಅನುವಾದ (ಭಾಲಚಂದ್ರ ನೆಮಾಡೆ ಅವರ ಮರಾಠಿ ಕಾದಂಬರಿ ಖೋಸಲಾ ದ ಕನ್ನಡ ಅನುವಾದ. ಇದಕ್ಕೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿಯ ಬಹುಮಾನ ದೊರೆತಿದೆ. ಮಹಾರಾಷ್ಟ್ರ ಜನಪದ ಸಾಹಿತ್ಯ; ಕುಸುಮಾಗ್ರಜರ ನಾಟಕ್ ನಟಸಾರ್ವಭೌಮ, ದ.ರಾ.ಬೇಂದ್ರೆಯವರ ಮರಾಠಿ ಕವನ ಸಂಗ್ರಹ ಓಮಾಳಾದ ಕನ್ನಡ ಅನುವಾದ ಮುಂ.) ಇತರ ಅಸಂಖ್ಯ ವಿಮರ್ಶಾ ಲೇಖನಗಳು (ಸಾಂಖ್ಯ ವಿಜ್ಞಾನ ಸಿದ್ಧಾಂತ ಮುಂ.) ಕನ್ನಡ-ಮರಾಠಿ ಭಾಷಾಬಾಂಧವ್ಯಕ್ಕಾಗಿ ಗಣನೀಯ ಸೇವೆ ಮಾಡಿದವರಿಗೆ ಮುಂಬಯಿಯ ಕರ್ನಾಟಕ ಸಂಘದವರು ಕೊಡುವ ವರದರಾಜ ಆದ್ಯ ಪ್ರಶಸ್ತಿ ವಾಮನ ಬೇಂದ್ರೆಯವರಿಗೆ ದೊರೆತಿದೆ. ರಾಜ್ಯ ಅಕ್ಯಾಡೆಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ದೇವನೂರು ಸಮಿತಿಯ ಸುವರ್ಣ ಪ್ರಶಸ್ತಿ, ಪರಶುರಾಮ ಪ್ರಶಸ್ತಿ ಮುಂತಾದ ಇತರ ಪ್ರಶಸ್ತಿಗಳೂ ದೊರೆತಿವೆ.

ಡಾ| ವಾಮನ ಬೇಂದ್ರೆಯವರು ವರಕವಿ ಅಂಬಿಕಾತನಯದತ್ತರ ಕಾವ್ಯದ ಅಭ್ಯಾಸವನ್ನು ತಮ್ಮ ಬಾಲ್ಯದಿಂದಲೇ ಮಾಡುತ್ತ ಬಂದಿದ್ದಾರೆ. ಅವರ ಮಿಮರ್ಶೆಯನ್ನು ನಿಕಷಕ್ಕೆ ಹಚ್ಚಿದ ಕೃತಿ ಎಂದರೆ ಬೇಂದ್ರೆಯವರ ಬಾಲಬೋಧೆ ಎಂಬ ಕವನ ಸಂಗ್ರಹಕ್ಕೆ ಬರೆದ ಟಿಪ್ಪಣಿಗಳು. ಇಲ್ಲಿಯ ಕವಿತೆಗಳ ಅರ್ಥವಾಗಬೇಕಾದರೆ ಸಂಖ್ಯಾಶಾಸ್ತ್ರದಲ್ಲಿ ಪರಿಣತಿ ಅವಶ್ಯಕ. ತಂದೆಯವರ ಗರಡಿಯಲ್ಲಿ ತಯಾರಾದ ವಾಮನರು ಮಾತ್ರ ಈ ಕೆಲಸ ಕೈಕೊಳ್ಳಬಹುದಾಗಿತ್ತು. ನಂತರ ಬಂದ ಶ್ರಾವಣ ಪ್ರತಿಭೆ ಎಂಬ ಬೇಂದ್ರೆಯವರ ಆಯ್ದ ನೂರು ಕವಿತೆಗಳ ಸಂಗ್ರಹ. ಇದನ್ನು ಮನೋಹರ ಗ್ರಂಥ ಮಾಲೆಯವರು ಪ್ರಕಟಿಸಿದ್ದಾರೆ (ಪುಟಬಂಗಾರ 5ನೆಯ ಸಂಪುಟ). ಐವತ್ತು ಕವಿತೆಗಳಿಗೆ ಕೀರ್ತಿನಾಥ ಕುರ್ತಕೋಟಿ ವಿಮರ್ಶೆ ಬರೆದರೆ ಅತ್ಯಂತ ಕಠಣವಾದ ಉಳಿದ ಐವತ್ತು ಕವಿತೆಗಳಿಗೆ ವಾಮನ ಬೇಂದ್ರೆ ವಿಮರ್ಶೆ ಬರೆದಿದ್ದಾರೆ. ಮಣಿಪಾಲದವರು ಪ್ರಕಾಶನಗೊಳಿಸಿ ಬೇಂದ್ರೆಯವರ ಆಯ್ದ ಪ್ರಣಯಗೀತಗಳ ಸಂಕಲನ ಒಲವೆ ನಮ್ಮ ಬದುಕು ಎಂಬುದಕ್ಕೆ ವಾಮನ ಬೇಂದ್ರೆ ಟಿಪ್ಪಣಿ ಬರೆದಿದ್ದಾರೆ.

ಬೇಂದ್ರೆಯವರ ಸಮಗ್ರ ಸಾಹಿತ್ಯವನ್ನು ಪ್ರಕಟಗೊಳಿಸುವ ಬೃಹತ್ ಯೋಜನೆಯನ್ನು ಮಿತ್ರ ಡಾ|ಕೆ.ಎಸ್.ಶರ್ಮಾ ಅವರೊಂದಿಗೆ ವಾಮನರು ಕೈಕೊಂಡಾಗ ಅದು ಅನ್ವರ್ಥಕವಾಗಿ ತ್ರಿವಿಕ್ರಮ ಹೆಜ್ಜೆಯಾಯಿತು. ಬೇಂದ್ರೆಯವರ ಜೀವನ ಮಹಾಕಾವ್ಯ ಔದುಂಬರ ಗಾಥೆಯ ಆರು ಸಂಪುಟಗಳನ್ನು ವಿನೂತನ ರೀತಿಯಲ್ಲಿ ಸಂಪಾದಿಸುವುದು ಸಾಹಸದ ಕೆಲಸವೇ ಆಗಿತ್ತು. ಬೇಂದ್ರೆಯವರ ಕವಿತೆಗಳನ್ನು ವಿಷಯಕ್ಕೆ ತಕ್ಕಂತೆ ವಿಭಾಗಿಸಿ (ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ, ಸಿದ್ಧಾಂತ) ಆರು ಸಂಪುಟಗಳಲ್ಲಿ, ಸಂಪಾದಕೀಯ ಪೀಠಿಕೆ, ಪ್ರತಿ ಪದ್ಯಕ್ಕೆ ಸೂಕ್ತ ಟಿಪ್ಪಣಿಯೊಂದಿಗೆ ಪ್ರಕಟಿಸುವುದು ನಿಜವಾಗಿಯೂ ಸಾಹಸದ ಕೆಲಸ. ಆರನೆಯ ಸಂಪುಟದ ಕೊನೆಗೆ ಬೇಂದ್ರೆಯವರ ಎಲ್ಲ ಸಂಕಲನಗಳ ಪಟ್ಟಿ, ಅಲ್ಲಿ ಪ್ರಕಟವಾದ ಕವಿತೆಗಳ ಯಾದಿ, ಅಲ್ಲಿಯ ಪದ್ಯಗಳು ಯಾವ ಸಂಪುಟದಲ್ಲಿ ಎಷ್ಟನೆಯ ಪುಟದಲ್ಲಿ ಪ್ರಕಟವಾಗಿವೆ ಎಂಬ ರೆಡಿ ರೆಕನರ್ ಸಿದ್ಧಪಡಿಸಿ ಕೊಟ್ಟು ವಾಚಕರಿಗೆ ಮಹದುಪಕಾರ ಮಾಡಿದ್ದಾರೆ. ಬೆಳಕಿನ ಕವಿ ಬೇಂದ್ರೆಯವರ ಜೀವನ ಮಹಾಕಾವ್ಯವಾದ ಔದುಂಬರಗಾಥೆ ಕನ್ನಡ ಸಾಹಿತ್ಯದ ಇತಿಹಾಸದಲ್ಲೇ ಒಂದು ವಿನೂತನ ಕೃತಿ. 3396 ಪುಟಗಳುಳ್ಳ, 1427 ಕವನಗಳನ್ನೊಳಗೊಂಡ ಈ ಕೃತಿಯ ಆರು ಸಂಪುಟಗಳ ಬೃಹತ್ತಿನಲ್ಲಿ ಮಹತ್ತೂ ಅಡಗಿದೆ.

ನಮನ ಸಂಪುಟದಲ್ಲಿ- ಶ್ರುತಿನಮನ, ದೇವನಮನ, ಗುರುನಮನ, ಕವಿನಮನ ಎಂ ನಾಲ್ಕರ ಪರಿಯಲ್ಲಿ ಚೌದಂತಿ ವೀಣೆಯ ಮಿಡಿತವಿದೆ. ವೇದಕಾಲದ ಕವಿಗಳಿಂದ ಹಿಡಿದು ಆಧುನಿಕ ಪ್ರಮುಖ ಕವಿಗಳ ವರೆಗೆ ಬೇಂದ್ರೆ ನಮನ ಸಲ್ಲಿಸಿದ ಕವಿತೆಗಳು ಇಲ್ಲಿವೆ.

ದರ್ಶನ ಸಂಪುಟದಲ್ಲಿ ಕಾವ್ಯದರ್ಶನ, ವಿಶ್ವದರ್ಶನ, ಭಾರತದರ್ಶನ, ಕರ್ನಾಟಕದರ್ಶನ ಎಂಬ ನಾಲ್ಕು ಪದರುಗಳು ಇವೆ. ನಾಡಿನ, ದೇಶದ ಹಾಗೂ ವಿಶ್ವ ದರ್ಶನವನ್ನು ಮೂಡಿಸುವ ಕವಿತೆಗಳು ಇಲ್ಲಿವೆ.

ವಿಕಾಸ ಸಂಪುಟದಲ್ಲಿ- ನಾಯಕ-ನಾಯಿಕೆವಿಕಾಸ, ಸಂತಾನವಿಕಾಸ, ಜೀವನದೃಷ್ಟಿವಿಕಾಸ ಎಂಬ ನಾಲ್ಕು ಘಟಕಗಳಿವೆ. ಇಲ್ಲಿ ಬೇಂದ್ರೆ ಕಾವ್ಯಜೀವನದ ಸರಸ-ವಿರಸ, ಬೇವು-ಬೆಲ್ಲ ಇದೆ. ಪ್ರೀತಿ, ಪ್ರೇಮ, ಕಾಮ, ಒಲವು ಬಾಳಾಗುವ ವಿಕಾಸವನ್ನು ವರಕವಿಗಳು ನಿರೂಪಿಸಿದ ಕವನಗಳು ಇಲ್ಲಿವೆ.

ವಿನ್ಯಾಸ ಸಂಪುಟದಲ್ಲಿ ಪಂಚಮಹಾಭೂತವಿನ್ಯಾಸ, ಚತುರ್ವಿಧಪುರುಷಾರ್ಥವಿನ್ಯಾಸ, ಷಡೃತುವಿನ್ಯಾಸ, ಸಪ್ತಕಲಾವಿನ್ಯಾಸವೆಂಬ ಚೌದಂತಿವೀಣೆ ನುಡಿಯುತ್ತದೆ. ನಾಲ್ಕು ದಾಸ್ಯಗಳಿಂದ (ಅನ್ನದಾಸ್ಯ, ಅರ್ಥದಾಸ್ಯ, ಕಾಮದಾಸ್ಯ, ಮೋಕ್ಷದಾಸ್ಯ) ಮಾನವ ಮುಕ್ತನಾಗಬೇಕು ಎಂಬುದೇ ಕವಿಯ ಆಶಯ.

ತತ್ತ್ವ ಸಂಪುಟದಲ್ಲಿ ಓಂತತ್‌ಸತ್‌ತತ್ತ್ವ, ಸಾಮಾಜಿಕಪ್ರಜ್ಞಾತತ್ತ್ವ, ವಿಡಂಬನೆ-ವಿನೋದತತ್ತ್ವ, ಬದುಕು-ಬಾಳುತತ್ತ್ವ ಎಂಬ ನಾಲ್ಕು ಸಂಬಂಧ ಸೂತ್ರಗಳಿವೆ. ಮನುಷ್ಯ ತನ್ನ ಪಶುತ್ವವನ್ನು ಗೆದ್ದು ಮಾನವೀಯತೆಯನ್ನು ಬೆಳೆಸಿಕೊಂಡು ತನ್ನ ಜೀವನ ಪಾವನಗೊಳಿಸಬೇಕೆಂಬುದು ಈ ಸಂಪುಟದ ಕವನಗಳ ಸಂದೇಶ.

ಸಿದ್ಧಾಂತ ಸಂಪುಟದಲಿ -ಚತುರ್ಮುಖಸೌಂದರ್ಯಸಿದ್ಧಾಂತ, ಪಂಚಮುಖಮೂರ್ತಿ ಸಿದ್ಧಾಂತ, ಬಾಲಬೋಧೆಸಂಖ್ಯಾಸಿದ್ಧಾಂತ, ಹೃದಯವಿವೇಕಸಿದ್ಧಾಂತ ಮತ್ತು ನವಮಾನವ-ಆವಿರ್ಭಾವಸಿದ್ಧಾಂತ ಎಂಬ ಪಂಚಮುಖಗಳಿವೆ. ಈ ಪಂಚಮುಖಗಳ ದರ್ಶನವಾದಾಗ ನವಮಾನವತೆಯ ಆವಿರ್ಭಾವವಾಗುವದು ಎಂಬುದು ಈ ಸಂಪುಟದ ಕವಿತೆಗಳ ಸಂದೇಶವಾಗಿದೆ.

ಏಳನೆಯ ಸಂಪುಟ- ಕವಿ ಅಂಬಿಕಾತನಯದತ್ತರ ಶ್ರೀಮಾತಾರವಿಂದರ ಪ್ರಜ್ಞಾಪ್ರಕಾಶ. ಬೇಂದ್ರೆಯವರ ಜೀವನವಿಕಾಸಕ್ಕೆ ಹಾಗೂ ಕಾವ್ಯೋದ್ಯೋಗಕ್ಕೆ ಶ್ರೀಮಾತಾರವಿಂದರ ಪ್ರಜ್ಞೆ ದಾರಿದೀಪವಾಗಿದೆ ಎಂಬುದರ ಆವಿಷ್ಕರಣವಿದೆ. ಎಂಟನೆಯ ಸಂಪುಟ- ಅಂಬಿಕಾತನಯದತ್ತರ ~ಸಮಗ್ರಸಖೀಗೀತ. ಇಲ್ಲಿ ಪೂರ್ವ ಸಖೀಗೀತ, ಸಂತತಿ ಸಖೀಗೀತ, ಉತ್ತರ ಸಖೀಗೀತ, ಮರಣೋತ್ತರ ಸಖೀಗೀತ, ಇತರ ಕವನಗಳು- ಬೇಂದ್ರೆಯವರ ದಾಂಪತ್ಯಜೀವನದ ಪರಿಪೂರ್ಣ ದರ್ಶನ ಒದಗಿಸುತ್ತವೆ.

ಒಂಭತ್ತು-ಹತ್ತು-ಹನ್ನೂಂದು ಈ ಮೂರು ಸಂಪುಟಗಳು ಬೆಂದ್ರೆಯವರ ಸಮಗ್ರ ನಾಟಕಗಳನ್ನು (ನಾಟ್ಯಯೋಗವನ್ನು) ಅಭಿವ್ಯಕ್ತಗೊಳಿಸುತ್ತವೆ. ಒಂಭತ್ತನೆಯ ಸಂಪುಟದಲ್ಲಿ ಬೇಂದ್ರೆಯವರ 14 ರಂಗನಾಟಕಗಳಿವೆ. ರಂಗದೃಶ್ಯಗಳು ಇವೆ ಹತ್ತನೆಯ ಸಂಪುಟದಲ್ಲಿ ನಾಲ್ಕುಭಾಗಗಳು- ಬಾನುಲಿನಾಟಕಗಳು, ತಲೆದಂಡ ನಾಟಕ(ಇದು ಕಳೆದುಹೋಗಿತ್ತು, ಅದನ್ನು ಮನೆಯಲ್ಲಿದ್ದ ಕಡತಗಳರಾಶಿಯಿಂದ ವಾಮನರು ಹುಡುಕಿತೆಗೆದು ದೊಡ್ದ ಸಾಹಸವನ್ನೇ ಮಾಡಿದ್ದಾರೆ. ಬಸವಣ್ಣನವರ ಜೀವನದ ಬಗ್ಗೆ ಇದ್ದ ಮಹತ್ವದ ನಾಟಕವಿದು. ಪ್ರತಿಮಾಗೃಹ ನಾಟಕ (ಭಾಸನ ಪ್ರತಿಮಾ ನಾಟಕದ ಪುನಃಸೃಷ್ಟಿ). ನಾಲ್ಕನೆಯ ಭಾಗದಲ್ಲಿ ಬೇಂದ್ರೆಯವರು ಎನ್ಕೆ, ಶರ್ಮಾ, ವಾಮನರಿಗೆ ಹೇಳಿದ ನಾಟಕಪ್ರಸಂಗಗಳನ್ನು ಆಧರಿಸಿ ಬರೆದ ನಾಟಕಗಳು ಇವೆ. (ಪ್ರಥಮಸಲ ಬೆಳಕುಕಾಣುವ 13 ನಾಟಕಗಳು ಇಲ್ಲಿವೆ.) ಹನ್ನೊಂದನೆಯ ಸಂಪುಟ, ಬೇಂದ್ರೆ ನಾಟ್ಯಯೋಗ. ಇಲ್ಲಿ ನಾಟ್ಯಸಿದ್ಧಾಂತ ಸಮೀಕ್ಷೆ ಇದೆ. ಹನ್ನೆರಡನೆಯ ಸಂಪುಟ ಬೇಂದ್ರೆಯವರ ಕಾವ್ಯೋದ್ಯೋಗ ಸಿದ್ಧಾಂತ ಸಂಪುಟವಾಗಿದೆ.

ಎಲ್ಲ ಸಂಪುಟಗಳಿಗೆ ವಿದ್ವತ್ಪೂರ್ಣ ಸಂಪಾದಕರ ಭೂಮಿಕೆ ಬರೆದಿದ್ದಾರೆ. ಈ ಸಂಪುಟಗಳ ಸಂಪಾದನೆಯಲ್ಲಿ ಡಾ| ವಾಮನ ಬೇಂದ್ರೆಯವರ ಪರಿಶ್ರಮವಿದೆ, ಜೊತೆಗೆ ಡಾ| ಕೆ.ಎಸ್.ಶರ್ಮಾ ಅವರ ಸಹಯೋಗವಿದೆ (ಅದುವೆ ಪ್ರಕಾಶನಯೋಗ!). ಇಷ್ಟೇ ಅಲ್ಲ ಕೃಷ್ಣಾಕುಮಾರಿಯಿಂದ ಹಿಡಿದು ಮರಣೋತ್ತರ ಕವನ ಸಂಕಲನಗಳ ವರೆಗೆ ಬಿಡಿ ಕವನ ಸಂಕಲನಗಳ ಸಂಪಾದನೆ ಹಾಗೂ ಸಂಸ್ಕರಿತ ಮುದ್ರಣ ಇದೆಗೀಲ್ಲ ಕೃತಿಗಳಿಗೂ ಸಂಪಾದಕರ ಭೂಮಿಕೆ ಬರೆದಿದ್ದಾರೆ. ಬೇಂದ್ರೆಯವರ ಮರಾಠಿ ಕವನಗಳ ಕನ್ನಡ ಅನುವಾದ(ವಾಮನ ಬೇಂದ್ರೆ). ಬೇಂದ್ರೆ ರಂಗಗೀತಗಳು. ಬೇಂದ್ರೆಯವರ ಆಂಗ್ಲ ಅನುವಾದಿತ ಸಂಗ್ರಹಗಳು(ರಾಘವೇಂದ್ರರಾವ್-ವಾಮನ ಬೇಂದ್ರೆ ಹಾಗೂ ಶರ್ಮಾ ಅನುವಾದಿಸಿದ್ದು). ಈ ಬೃಹತ್ ಸಾಧನೆಯ ಹಿಂದೆ ಡಾ| ವಾಮನ ಬೇಂದ್ರೆಯವರ ಪರಿಶ್ರಮ, ಶ್ರದ್ಧೆ, ಹಾಗೂ ಗುರುಭಕ್ತಿ ಇದೆ.

ಡಾ| ವಾಮನ ಬೇಂದ್ರೆಯವರು ಶತಂಶರದಃ ಬಾಳಲಿ. ಅವರಿಂದ ಇನ್ನಷ್ಟು ಅಮೂಲ್ಯ ಗ್ರಂಥಗಳು ಹೊರಬರಲಿ. ಬೇಂದ್ರೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಇವರ ಬರವಣಿಗೆ ಬಹಳೇ ಉಪಯುಕ್ತವಾಗಿದೆ. ಕಾರಣ ಇವರು ಉಸ್ತಾದ ಬೇಂದ್ರೆಯವರ ಗರಡಿಯಲ್ಲಿ ಬಾಲ್ಯದಿಂದಲೂ ತರಬೇತಿ ಪಡೆದ ಶಾಗಿರ್ದ ಆಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X