• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರೂಜಿಯಂತೆ ಮತ್ತೊಬ್ಬ ವ್ಯಕ್ತಿ ಹುಟ್ಟಿಬರಲಿ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

ರಾಘವೇಂದ್ರ ಸ್ವಾಮೀಜಿಗಳ ಅನುಗ್ರಹಕ್ಕೆ ಪಾತ್ರರಾಗಿದ್ದ ಗುರೂಜಿ (ಗಣಾಚಾರಿ) ಅವರ ಕುರಿತ ಲೇಖನ ಓದಿ ಪತ್ರಗಳ ರಾಶಿಯೇ ಬಂದಿದೆ. ನನ್ನ ಮೂಲಕ ಗುರೂಜಿಯವರ ಪರಿಚಯ ಪಡೆದವರು ಅವರ ನಿರ್ಗಮನಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಅವರನ್ನು ನೋಡದವರು ನನ್ನ ಪುಸ್ತಕ 'ಸತ್ಯಕತೆ ಕಲ್ಪನೆಗಿಂತಲೂ ವಿಚಿತ್ರ'ದ ಪ್ರತಿ ಎಲ್ಲಿ ದೊರೆಯುತ್ತದೆ ಎಂದು ಕೇಳಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಉತ್ಸುಕರಾಗಿದ್ದಾರೆ.

ಸಕಲ ಗೃಹಬಲ ನೀನೆ ಸರಸಿಜಾಕ್ಷಾ ಎಂದು ದಾಸರು ಹಾಡಿದ್ದಾರೆ. ದೇವರಲ್ಲಿ ಅಚಲ ವಿಶ್ವಾಸವಿದ್ದವರಿಗೆ ಯಾವ ಗ್ರಹಬಾಧೆಯಾಗುವುದಿಲ್ಲ, ಬಾಧೆಯುಂಟಾದರೆ ಅದನ್ನು ಎದುರಿಸುವ ಶಕ್ತಿ ಅವರಲ್ಲಿ ಬಂದುಬಿಡುತ್ತದೆ. ಸ್ವಾಮಿ ರಾಮದೇವ ಅವರು ಜ್ಯೋತಿಷಿಗಳ ಕಡೆಗೆ ಹೋಗಲೇಬಾರದು, ನಮ್ಮ ದೈವ ರೂಪಿಸಿಕೊಳ್ಳುವ ಶಕ್ತಿ ನಮ್ಮಲ್ಲೇ ಇದೆ ಎನ್ನುತ್ತಾರೆ.

ನನ್ನ ಪರಮ ಸ್ನೇಹಿತ, ಬಾಲ್ಯದ ಗೆಳೆಯ ನಾಗನಾಥ ಕಲ್ಲೋಪಂತ್ ಜೋಗಳೇಕರ್ ಕರ್ನಾಟಕದ ಅಗ್ರಮಾನ ಜೋತಿಷಿಗಳು. 35 ಪುಸ್ತಕ ಬರೆದಿದ್ದಾರೆ. ಜೋಗಳೇಕರ್, ಜೋತಿಷಿ, ಧಾರವಾಡ, ಎಂದರೆ ಸಾಕು ಅವರಿಗೆ ಪತ್ರ ತಲುಪುತ್ತದೆ. ಜಾತಕ ಕಳಿಸಿ ಏನೇ ಪ್ರಶ್ನೆ ಕೇಳಿ ಸ್ವವಿಳಾಸದ ಲಕೋಟೆ ಕಳಿಸಿದರೂ ಉತ್ತರಿಸುತ್ತಾರೆ. (ಯಥಾಶಕ್ತಿ ಕಾಣಿಕೆ ಜೊತೆಗಿಡಬಹುದು.) ಅವರಂತಹ ಶಿಸ್ತಿನ ವ್ಯಕ್ತಿಯನ್ನು ನಾನು ನೋಡಿಲ್ಲ.

ಧಾರವಾಡದಲ್ಲಿ ಇನ್ನೊಬ್ಬ ತರುಣಮಿತ್ರ ರಂಗನಾಥ ಜೋಶಿ ಜೋತಿಷಿಯಾಗಿದ್ದಾರೆ. ಅವರು ಮೆಕ್ಯಾನಿಕಲ್ ಎಂಜಿನಿಯರ್. ಅವರಿಗೆ ಜ್ಯೋತಿಷ್ಯದಲ್ಲಿ ಆಸಕ್ತಿ ಇತ್ತು. ಜಗದ್ಗುರು ಶಂಕರಾಚಾರ್ಯ ಪಾಠಶಾಲೆಯಲ್ಲಿ ಪಂ. ವಾಸುದೇವಭಟ್ಟರ ಬಳಿಯಲ್ಲಿ ವ್ಯಾಸಂಗ ಮಾಡಿದ್ದರು. (ವಾಸುದೇವಭಟ್ಟರು ನನಗೂ ಎಂ.ಎ. ಓದುವಾಗ ಸಂಸ್ಕೃತ ಕಲಿಸಿದ ಗುರುಗಳು). ರಂಗನಾಥರ ಮನೆಯಲ್ಲಿ ಪುರೋಹಿತ ವಿದ್ಯೆ ವಂಶಪಾರಂಪರ್ಯವಾಗಿ ಬಂದಿತ್ತು. ಯೋಗ್ಯ ಕೆಲಸ ದೊರೆಯಲಿಲ್ಲ ಎಂದು ಜಾತಕ ನೋಡಲು ಪ್ರಾರಂಭಿಸಿದರು. ಫಲಜ್ಯೋತಿಷ್ಯ ಸಲಹೆ, ಗ್ರಹದೋಷ ಪರಿಹಾರಕ್ಕೆ ಜಪ ಮಾಡಿಸುವುದು, ಹೋಮಹವನಾದಿಗಳನ್ನು ಮಾಡಿಸುವುದು, ಕಂಪ್ಯೂಟರ್ ಬಳಸಿ ಪೃಚ್ಛಕರ ಸಮಸ್ಯೆಗೆ ಪರಿಹಾರ ನೀಡುವ ಕಲೆಯಲ್ಲಿ ಪಳಗಿದ್ದಾರೆ. ಅವರನ್ನು ಕಾಣಲು ಗಂಟೆಗಟ್ಟಲೆ ಕಾಯುವ ಪ್ರಸಂಗವಿದೆ. ಇವರಿಬ್ಬರು ಮಿತ್ರರು ಬಹಳ ಓದಿಕೊಂಡವರು. ಜೋಗಳೇಕರರಿಗೆ ಅನುಭವ ಬಹಳವಾಗಿದ್ದರೆ, ಜೋಶಿಯವರು ಸಂಸ್ಕೃತ ಶ್ಲೋಕಗಳನ್ನು ನಿರರ್ಗಳವಾಗಿ ಉದ್ಧರಿಸುತ್ತಾರೆ. ಅವರ ಬಳಿ ಹೋದವರಿಗೆ ಸಾಕಷ್ಟು ಸಮಾಧಾನ ದೊರೆಯುತ್ತದೆ.

ನಮ್ಮ ದೈವ ರೂಪಿಸಿಕೊಳ್ಳುವ ಶಕ್ತಿ ನಮ್ಮಲ್ಲೇ ಇದೆಯೆ? ಓದುಗರ ಅಭಿಪ್ರಾಯವೇನು?
ಆದರೆ ಗುರೂಜಿ (ಲಕ್ಷ್ಮಣರಾವ ಗಣಾಚಾರಿ) ಅವರು ಹೆಚ್ಚು ಓದಿರಲಿಲ್ಲ. ಸಂಸ್ಕೃತ ಬರುತ್ತಿರಲಿಲ್ಲ. ಆದರೆ ವಿಲಕ್ಷಣವಾಗಿ ಭವಿಷ್ಯ ಹೇಳುತ್ತಿದ್ದರು, ಪರಿಹಾರ ಕೂಡ ಸೂಚಿಸುತ್ತಿದ್ದರು. ಗೋವಾದಿಂದ ಆಶಾ ಕಾಮತ್ ಎಂಬ ಹೆಣ್ಣುಮಗಳು ಅವರ ನಿಧನದ ಬಗ್ಗೆ ಲೇಖನ ಓದಿ ನನಗೆ ಫೋನು ಮಾಡಿ, ಅಕ್ಷರಶಃ ಅತ್ತುಬಿಟ್ಟಳು. ಅವಳ ಜೀವನದಲ್ಲಿ ಗುರೂಜಿ ಮಾಡಿದ ಪವಾಡ ಸದೃಶ ಕೆಲಸದ ಬಗ್ಗೆ ಹೇಳಿದಳು. ಅವರಿಗೆ ಪೂರ್ವಜನ್ಮದ ಸುಕೃತದ ಫಲವಾಗಿ ಫಲಜೋತಿಷ್ಯ ಒಲಿದು ಬಂದಿತ್ತು. ಇತರ ಜೋತಿಷಿಗಳು ಗುಡ್ಡ ಅಗಿದು ಒಂದು ಇಲಿಯನ್ನು ಹೊರತೆಗೆದರೆ, ಇವರು ಚಿಕ್ಕ ದಿನ್ನೆಯನ್ನು ಕೆದರಿ ಒಂದು ಒಂಟೆ ಅಥವಾ ಆನೆಯನ್ನೇ ಹೊರತೆಗೆಯುತ್ತಿದ್ದರು. ಅವರು ಆ ಶಕ್ತಿಯನ್ನು ಮಂತ್ರಾಲಯದ ಶ್ರೀಗುರುರಾಘವೇಂದ್ರರ ಸೇವೆಯಿಂದ ಪಡೆದಿದ್ದರು.

ನೂರು ಪ್ರಸಂಗಗಳು, ಅಸಂಖ್ಯ ಉದಾಹರಣೆಗಳು ನನ್ನ ಕಣ್ಣೆದುರಿಗೆ ನಡೆದವು. ಒಂದು ಮರಾಠಿ ದಂಪತಿ ಮಗನನ್ನು ಕರೆದುಕೊಂಡು ಬಂದಿದ್ದರು. ಸಂಬಂಧಿಕರಾರೋ ಮಾಟ ಮಾಡಿಸಿದ್ದಾರೆ, ಮಗನ ಜೀವಕ್ಕೆ ಅಪಾಯವಿದೆ ಎಂದು ಗೋಳಿಡುತ್ತಿದ್ದರು. ಅವಳು ನನ್ನ ಮಗನಿಗೆ ಹೀಗಾಗುತ್ತಿದೆ ಎಂದರೆ ಅವನು, ನನ್ನ ಮಗನಿಗೆ ಇಂಥವರು ಮಾಡಿಸಿರಬಹುದೆಂಬ ಸಂಶಯವಿದೆ ಎನ್ನುತ್ತಿದ್ದ. ಗುರೂಜಿ ಅವರು ಬಂದ ಸಮಯದ ಕುಂಡಲಿ ಬರೆದು, ಇವ ನಿನ್ನ ಮಗನೇ ಅಲ್ಲ, ಎಷ್ಟು ಹಣ ಕೊಟ್ಟು ಸತ್ತ ಮಗುವಿನ ಬದಲು ಈ ಮಗುವನ್ನು ಪಡೆದಿರಿ? ಎಂದು ಇಬ್ಬರನ್ನು ಉದ್ದೇಶಿಸಿ ಕೇಳಿದರು. ಎಲ್ಲರೂ ಸ್ಥಂಭೀಭೂತರಾದರು. ಆದದ್ದು ಹೀಗೆ. ಅವರ ಮೂರು ಮಕ್ಕಳೂ ಆಸ್ಪತ್ರೆಯಲ್ಲಿ ಸತ್ತೇ ಹುಟ್ಟಿದ್ದವು. ನಾಲ್ಕನೆಯದೂ ಸತ್ತರೆ ಹೆಂಡತಿ ಶಾಕ್‌ನಿಂದ ಬದುಕಿ ಉಳಿಯಲಿಕ್ಕಿಲ್ಲವೆಂದು ಭಾವಿಸಿ ಗಂಡ, ನಾಲ್ಕನೆಯ ಮಗುವೂ ಜನನ ಕಾಲಕ್ಕೇ ಸತ್ತರೆ, ಸತ್ತ ಮಗುವಿನ ಜಾಗೆಯಲ್ಲಿ ಒಂದು ಜೀವಂತ ಕೂಸನ್ನು ಬದಲುಮಾಡಿ ಇಡಲು ಒಬ್ಬ ನರ್ಸ್‌ಗೆ ಹೇಳಿ ಐದು ಸಾವಿರ ಲಂಚ ಕೊಟ್ಟಿದ್ದ. ಇಂಥ ವಿಷಯದ ಜ್ಞಾನಕ್ಕೆ ವಿಶೇಷ ಅನುಗ್ರಹಬೇಕಾಗುತ್ತದೆ. ಮುಂದೆ ಆ ಮಗುವಿಗೆ ಕಾಯಿಲೆಯನ್ನು ಗುರೂಜಿ ವಾಸಿಮಾಡಿದರು, ಆ ಮಾತು ಬೇರೆ.

ನನ್ನ ಪುಸ್ತಕ ಓದಿದ ಒಬ್ಬ ವ್ಯಕ್ತಿ ನನ್ನನ್ನು ಸಂಪರ್ಕಿಸಿದರು. ದೊಡ್ದ ಕಂಪನಿಯಲ್ಲಿ ಮೆನೆಜರ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್. ಮಗ ಅಮೆರಿಕೆಯಲ್ಲಿ, ಮಗಳು ಬೆಂಗಳೂರಲ್ಲಿ. ಮಗಳ ಗಂಡ ಮೆಕ್ಯಾನಿಕಲ್ ಎಂಜಿನಿಯರ್. ಅವನು ದೂರದ ಸಂಬಧಿಕನೇ. ಅವಳ ಸಂಬಳ ಎಂಭತ್ತು ಸಾವಿರ ಆದರೆ ಅವನ ಸಂಬಳ ನಲವತ್ತು ಸಾವಿರ. ಅತ್ತೆಮನೆಯಲ್ಲಿ ವಿಪರೀತ ಕಾಟ. ಡೈವೋರ್ಸ್ ವರೆಗೆ ಮನಸ್ತಾಪ ಬೆಳೆದಿತ್ತು. ನನ್ನನ್ನು ಸಂಪರ್ಕಿಸಿದರು. ನಾವು ಮಂತ್ರಾಲಯಕ್ಕೆ ಸೇವೆಗೆ ಒಂದು ವಾರ ಹೋಗುವ ಸಂಗತಿ ತಿಳಿದು ಅವಳು ಅಲ್ಲಿಗೆ ಬಂದಳು. ಅವಳಿಗೊಬ್ಬ ಮಗಳಿದ್ದಳು. ಅವಳಿಗೆ ಹತ್ತು ವರ್ಷವಾಗಿತ್ತು. ಮಗಳಿಗೆ ಹನ್ನೆರಡು ವರ್ಷವಾಗುದರೊಳಗೆ ನೀವು ಗಂಡ ಹೆಂಡತಿ ಒಂದಾಗುತ್ತೀರಿ. ಎಂದು ಗುರೂಜಿ ಹೇಳಿದರು.

ಒಂದು ವರ್ಷ ಕಳೆಯಿತು. ಗುರೂಜಿಯವರನ್ನು ಇನ್ನೊಮ್ಮೆ ಕಾಣಲು ತಂದೆ ಮಗಳು ವಿಮಾನದಿಂದ ಮುಂಬೈಗೆ ಬರಲು ತಯಾರಿ ಮಾಡಿದ್ದರು. ತಂದೆಗೆ ಲಘು ಹೃದಯವಿಕಾರವಾಯಿತು. ಆಸ್ಪತ್ರೆ ಸೇರಿದರು. ಆದರೆ ಎದೆಗುಂದದೆ ಮಗಳೊಬ್ಬಳೆ ಬಂದಳು. ನಾನೇ ವಿಮಾನ ನಿಲ್ದಾಣಕ್ಕೆ ಹೋಗಿ ಅವಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದೆ. ನಂತರ ಗುರೂಜಿಯವರನ್ನು ಭೇಟಿಮಾಡಿಸಿದೆ. ಅವಳಿಗೆ ಪೂಜೆಮಾಡಲು ಕಾಯಿ ಮಂತ್ರಿಸಿ ಕೊಟ್ಟರು. ಆಗ ಅವಳು ತಂದೆಯ ಮನೆಯಲ್ಲಿ ಇರುತ್ತಿದ್ದಳು. ಅವಳಿಗೆ ಬೇರೆ ಮನೆಮಾಡಿಕೊಂಡಿರಲು ಗುರೂಜಿ ಹೇಳಿದರು. ಅವಳಿಗೆ ಬೇರೆ ಮನೆಮಾಡಲು ಮನಸ್ಸಿರಲಿಲ್ಲ. ಅವಳ ಅಣ್ಣ ಅಮೆರಿಕೆಯಿಂದ ವಾಪಸ್ ಬಂದ. ಹೀಗಾಗಿ ಸಮೀಪದಲ್ಲಿಯೇ ಒಂದು ಪ್ರತ್ಯೇಕ ಮನೆಮಾಡುವ ಪ್ರಸಂಗ ಬಂತು. ಗುರೂಜಿ ಕೊಟ್ಟ ಮಂತ್ರಿಸಿದ ಕಾಯಿಯನ್ನು ಪೂಜೆ ಮಾಡುತ್ತಿದ್ದಳು. ಅವಳ ಗಂಡ ಮಗಳನ್ನು ಭೇಟಿಯಾಗುವ ನೆಪದಲ್ಲಿ ವಾರಕ್ಕೊಂದು ಸಲ ಬಂದುಹೋಗತೊಡಗಿದ. ನಾಟಕೀಯ ಬದಲಾವಣೆ ನಡೆಯಿತು. ಕೂಡಿ ಇರಲು ಪ್ರಾರಂಭಿಸಿದ. ಮನೆಯ ಜಗಳದಿಂದ ದೂರ ಇರಲು ಅವನು ವಿದೇಶದಲ್ಲಿ ಕೆಲಸ ಪಡೆದು ಹೆಂಡತಿಯೊಂದಿಗೆ ತೆರಳಿದ. ಅವರ ಬಾಳುವೆಯಲ್ಲಿ ಆದ ಪರಿವರ್ತನೆಯಿಂದ ಗುರೂಜಿಗಿಂತ ಹೆಚ್ಚಿನ ಸಂತೋಷ ನನಗಾಗಿತ್ತು.

ಇಂಥ ನೂರು ಘಟನೆಗಳು ನೆನಪಾಗುತ್ತವೆ. ಒಂದಕ್ಕಿಂತ ಒಂದು ವಿಚಿತ್ರ, ಅದ್ಭುತ. ಕಟ್ಟುಕತೆಗಿಂತ ಸತ್ಯವಾದ ಕಥೆಗಳು. ಇಂದು ಗುರೂಜಿ ನೆನಪು ಮಾತ್ರ ಆಗಿ ಉಳಿದಿದ್ದಾರೆ. ಅವರಿಗೆ ಮಾರ್ಗದರ್ಶನ ಮಾಡುವ ಶಕ್ತಿ ನೀಡಿದ ಶ್ರೀರಾಘವೇಂದ್ರಸ್ವಾಮಿಗಳು ಇನ್ನೊಬ್ಬರಿಗೆ ಇಂಥ ಶಕ್ತಿ ನೀಡಲಿ ಎಂದು ಹಾರೈಸುವೆ.

'ಸತ್ಯಕತೆ ಕಲ್ಪನೆಗಿಂತಲೂ ವಿಚಿತ್ರ' ಪುಸ್ತಕ ಬೇಕಿದ್ದರೆ ಸಂಪರ್ಕಿಸಿ : ಹರ್ಷವರ್ಧನ ಪ್ರಕಾಶನ, 8-8/15, ಜವಾಹರ ಸೊಸೈಟಿ, ಬೊರಿವಲಿ, ಪಶ್ಚಿಮ, ಮುಂಬೈ-92. ಈಮೇಲ್ ವಿಳಾಸ : jeevi65@gmail.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X