• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯನ್ನೂ ಸೆಳೆದ ಸ್ತ್ರೀಪಾತ್ರ ರಹಿತ ನಾಟಕ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

Gundana Maduve Kannada Drama
ಗುಂಡನ ಮದುವೆ ನಾಟಕದ ಸುತ್ತಲೂ ಬಹಳ ನೆನಪುಗಳು ಇವೆ. ಈ ನಾಟಕವನ್ನು ಬರೆಯಲು ನನಗೆ ಸ್ಫೂರ್ತಿ ನೀಡಿದ್ದು ಪರೇಲಿನ ವೆಟರಿನರಿ ಕಾಲೇಜು ಆಗಿದ್ದರೂ ಅದನ್ನು ಪ್ರಯೋಗಿಸಲು ಅವಕಾಶ ನೀಡಿದ್ದು ಮಾತುಂಗಾದ ಖಾಲ್ಸಾ ಕಾಲೇಜು. ಅದರ ಪ್ರಯೋಗ ನೋಡಲು ಅಸಂಖ್ಯ ವಿದ್ಯಾರ್ಥಿಗಳು ನೆರೆದಿದ್ದರು. ಹಲವಾರು ಮಿತ್ರರನ್ನು ಆಮಂತ್ರಿಸಿದ್ದೆ. ಜೈಹಿಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ, ಧಾರವಾಡದವರಾಗಿದ್ದ, ವಸಂತ ಕವಲಿಯವರೂ ಆಗಮಿಸಿದ್ದರು. ಅವರೊಂದಿಗೆ ನಾವೆಲ್ಲ ಒಂದು ಫೋಟೋ ತೆಗೆಸಿಕೊಂಡಿದ್ದೆವು.

ಈ ನಾಟಕವನ್ನು ಅವರು ಬಹಳ ಮೆಚ್ಚಿ ಪತ್ರ ಬರೆದಿದ್ದರು. ಅವರು ಸ್ವತಃ ಉತ್ತಮ ನಾಟಕಕಾರರಾಗಿದ್ದರು. ಆದ್ದರಿಂದ ನನಗೆ ಹೆಚ್ಚಿನ ಸಂತೋಷ ಉಂಟಾಗಿತ್ತು. ಕರ್ನಾಟಕ ಸಂಘದ ಕಾರ್ಯದರ್ಶಿ ಇಮಾರತಿಯವರ ಮಗ ವೆಂಕಟೇಶ ಎಂಬವ ಈ ನಾಟಕ ನೋಡಲು ತಂದೆಯವರೊಡನೆ ಬಂದಿದ್ದ. ಅವನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ. ನಾಟಕ ಪ್ರಯೋಗವಾದ ಕೆಲವೇ ದಿನಗಳ ತರುವಾಯ ನಾನು ಇಮಾರತಿಯವರ ಮನೆಗೆ ಹೋದಾಗ ಅವರ ಮಗ ನಾಟಕದ ಕೆಲವು ಸಂಭಾಷಣೆಗಳನ್ನು ಉದ್ಧರಿಸಿದ. ಇಡೀ ನಾಟಕವೇ ಅವನಿಗೆ ಕಂಠಸ್ಥವಾದಂತಿತ್ತು. ನಾಟಕ ಯಾವರೀತಿ ಪ್ರಭಾವ ಬೀರಬಲ್ಲದು ಎಂಬುದನ್ನು ಪ್ರತ್ಯಕ್ಷ ಕಂಡಾಗ ನನಗೆ ನಾಟಕ ಕಲೆಯ ಬಗ್ಗೆ ಅಭಿಮಾನವೆನಿಸಿತು. ನಾಟಕ ಮಾಡುವಾಗ ಪಡಬಾರದ ಕಷ್ಟ ಪಡುತ್ತೇವೆ. ಆದರೆ ನಂತರ ಅದು ನೀಡುವ ಸವಿನೆನಪಿನ ಸುಖವೇ ಬೇರೆ ರೀತಿಯದು. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುದು ಒಂದು ಪ್ರಸಿದ್ಧ ಕನ್ನಡ ಗಾದೆ. ಇದಕ್ಕೆ ನಾಟಕ ಮಾಡಿ ನೋಡು ಎಂಬುದನ್ನೂ ಸೇರಿಸಬಹುದಾಗಿದೆ.

ಈ ನಾಟಕದ ರಿಹರ್ಸಲ್ ನಡೆದಾಗ ಕೆಲವು ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಜಯಲಕ್ಷ್ಮಿ ಎಂಬ ವಿದ್ಯಾರ್ಥಿನಿ ಅಂದಳು, ಸರ್, ನಿಮ್ಮ ನಾಟಕದಲ್ಲಿ ನಮಗೆ(ಸ್ತ್ರೀಯರಿಗೆ) ಯಾಕೆ ಅಭಿನಯಿಸಲು ಚಾನ್ಸ್ ಕೊಡಬಾರದು?' ಎಂದು. ನಾನು ಬರೆದದ್ದು ಸ್ತ್ರೀಪಾತ್ರ-ರಹಿತ ನಾಟಕ. ಅದು ಪಶುವಿದ್ಯಾಲಯದ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪೂರೈಸಲು. ನಂತರ ಜಯಲಕ್ಷ್ಮಿಯ ವಿನಂತಿಯನ್ನು ಮನ್ನಿಸಿ ಕೊನೆಗೆ ನಾಟಕದಲ್ಲಿ ಪ್ರವೇಶಿಸಲು ಅವಳಿಗೆ ಅವಕಾಶ ಕಲ್ಪಿಸಿಕೊಟ್ಟೆ. ಮುಂದೆ ಈ ನಾಟಕ ನನ್ನ ಅತ್ಯಂತ ಪ್ರಖ್ಯಾತ ಏಕಾಂಕವಾಯಿತು.

ಧಾರವಾಡದ ಕರ್ನಾಟಕ ಕಾಲೇಜಿನ ಸುವರ್ಣ ಮಹೋತ್ಸವದಲ್ಲಿ ಈ ನಾಟಕವನ್ನು ಪ್ರಯೋಗಿಸಲು ಅನುಮತಿ ಕೇಳಿ ಪ್ರೊ.ಚಂದ್ರಶೇಖರ ಪಾಟೀಲರು ನನಗೊಂದು ತಂತಿ ಕಳಿಸಿದ್ದರು. ಹುಬ್ಬಳ್ಳಿಯ ಜೆ.ಜೆ. ಕಾಮರ್ಸ್ ಕಾಲೇಜಿನವರು ಇದನ್ನು ಪ್ರಯೋಗಿಸಿ ಅಂತರ್ ಕಾಲೇಜ್ ನಾಟಕ ಸ್ಪರ್ಧೆಯಲ್ಲಿ ಅತ್ಯಧಿಕ ಬಹುಮಾನಗಳನ್ನು ಗಳಿಸಿದರು. ಬೆಳಗಾವಿಯ ಒಂದು ಕಾನ್ವೆಂಟ್ ಶಾಲೆಯ 125ನೇ ವರ್ಷದ ಉತ್ಸವದಲ್ಲಿ ನಾಲ್ಕು ಭಾಷೆಯ ಏಕಾಂಕಗಳನ್ನು ಪ್ರಯೋಗಿಸಿದ್ದರು. ಗುಂಡನ ಮದುವೆ ನಾಟಕಕ್ಕೆ ಅತ್ಯಧಿಕ ಮೆಚ್ಚುಗೆ ಗಳಿಸಿತ್ತೆಂದು ಅಲ್ಲಿಯ ಶಿಕ್ಷರೊಬ್ಬರು (ಶ್ರೀ ಕತಕಡೆ)ನನಗೆ ಪತ್ರ ಬರೆದಿದ್ದರು. ನನ್ನ ವಿದ್ಯಾರ್ಥಿಯೊಬ್ಬರು ಇದನ್ನು ತುಳುಭಾಷೆಗೆ ಅನುವಾದಿಸಿ ಪುಣೆಯಲ್ಲಿ ಪ್ರಯೋಗಿಸಿದ್ದ. ಈ ನಾಟಕದ ಅನೇಕ ಸಂಸ್ಕರಣಗಳನ್ನು ಸಮಾಜ ಪುಸ್ತಕಾಲಯದವರು ಪ್ರಕಟಿಸಿದ್ದರು. ಇತ್ತೀಚೆ ಹವ್ಯಕ ಸಮಾಜದ ಮಹಿಳೆಯರು ಈ ನಾಟಕವನ್ನು ಬಹಳ ಯಶಸ್ವಿಯಾಗಿ ಪ್ರಯೋಗಿಸಿದರು. (ಇದು ಸ್ತ್ರೀಪಾತ್ರ ವಿರಹಿತ ನಾಟಕ. ಇದನ್ನು ಪ್ರಯೋಗಿಸಿದವರೆಲ್ಲ ಮಹಿಳೆಯರು. ಇದೊಂದು ನಾಟಕೀಯ ವಿರೋಧಾಭಾಸ!)

ಗುಂಡನ ಮದುವೆ ಇದು ಹಾಸ್ಯರಸಪ್ರಧಾನ ನಾಟಕ. ಇದರಲ್ಲಿ ಯಾರ ವಿಡಂಬನೆಯೂ ಇಲ್ಲ. ಇಲ್ಲಿ ಬರುವ ಪಾತ್ರಗಳು ಜೀವಂತವಾಗಿವೆ. ಪೆದ್ದ ಮಗ, ತನ್ನ ಏಕಮಾತ್ರ ಪುತ್ರನ ಮದುವೆ ಮಾಡಿಸಬೇಕೆಂದು ಒದ್ದಾಡುವ ಶ್ರೀಮಂತ ತಂದೆ, ತನ್ನ ಮಿತ್ರನಿಗೆ ಕೈಲಾದ ಸಹಾಯ ಮಾಡಲು ಮುಂದೆ ಬಂದ ಮಿತ್ರ, ವರನಿಗೆ ಸಹಾಯ ಮಾಡಲು ಬಂದ ಗೆಳೆಯ, ನೂರು ಸುಳ್ಳು ಹೇಳಿ ಕಲ್ಯಾಣ ಮಾಡಲು ಬಂದ ಜೋತಿಷಿ, ಮಗಳಿಗೊಂದು ವರ ಹುಡುಕಿ ಬಂದ ಬಡ ಕನ್ಯಾಪಿತೃ- ಇವರೆಲ್ಲರ ಮಧ್ಯೆ ನಾಟಕದ ಕ್ರಿಯೆಗೆ ಚಾಲನೆ ದೊರೆಯುತ್ತದೆ. ಉದ್ದಕ್ಕೂ ಹಾಸ್ಯದ ಸನ್ನಿವೇಶಗಳು. ಸುಳ್ಳಿನ ಗೋಪುರ ಕಟ್ಟಿ, ಆಗೋಪುರದ ಮೇಲೆ ತನ್ನ ಮಗ ಗುಂಡನನ್ನು ಕೂಡಿಸಿ, ಅವನ ಮದುವೆ ಮಾಡಲು ಭಗೀರಥ ಪ್ರಯತ್ನ ಮಾಡುವ ತಂದೆ ಶಿವರಾಯನ ಪ್ರಯತ್ನಗಳೆಲ್ಲಾ ಕೊನೆಗೆ ವಿಫಲಗೊಂಡಾಗ ಇವರೆಲ್ಲರ ಬಗ್ಗೆ ಒಂದು ಮರುಕ, ಸಹಾನುಭೂತಿ ಉಂಟಾಗುತ್ತದೆ. ಇಂಥ ಜನರನ್ನು ಕಂಡು ನಾವು ನಕ್ಕುಬಿಡುತ್ತೇವೆ, ಯಾಕೆಂದರೆ ಇಂಥ ಸಮಸ್ಯೆ ನಮ್ಮ ಮುಂದೆ ಇಲ್ಲ ಎಂಬುದೇ ಒಂದು ಸಮಾಧಾನ.

ಮುಂದಿನ ವಾರ : ಈ ನಾಟಕ ಬರೆದ ಕ್ರೆಡಿಟ್ ಯಾರಿಗೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more