ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಖಾಲ್ಸಾ ಕಾಲೇಜಿನ ನೆನಪುಗಳು-1

By * ಡಾ| 'ಜೀವಿ' ಕುಲಕರ್ಣಿ
|
Google Oneindia Kannada News

Dr. GV Kulkarni, Mumbai
ಮುಂಬೈಯಲ್ಲಿ ಖಾಲ್ಸಾ ಕಾಲೇಜಿನಲ್ಲಿ ಕನ್ನಡ ಅರೆ-ಪ್ರಾಧ್ಯಾಪಕ ಸ್ಥಾನಕ್ಕೆ ನಾನು ಅರ್ಜಿ ಸಲ್ಲಿಸಿದ್ದೆ. ಅಲ್ಲಿ ಕೆಲಸವಿದೆ ಎಂಬ ಸಂಗತಿ ನನಗೆ ಪ್ರೊ.ಬ್ಯಾತನಾಳರಿಂದ ತಿಳಿದಿತ್ತು. ಅವರು ಅಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಪಾರ್ಲೆ ಕಾಲೇಜಿನಲ್ಲಿ ಪೂರ್ಣಾವಧಿಯ ಕನ್ನಡ ಪ್ರಾಧ್ಯಾಪಕ ಕೆಲಸ ದೊರೆತದ್ದರಿಂದ ಅವರು ಖಾಲ್ಸಾ ಕಾಲೇಜಿನ ಕೆಲಸ ಬಿಟ್ಟಿದ್ದರು. ಖಾಲ್ಸಾ ಕಾಲೇಜಿನಲ್ಲಿ ಹಿರಿಯ ಕನ್ನಡ ಅಭಿಮಾನಿಯೊಬ್ಬರು ಇದ್ದರು. ಅವರ ಹೆಸರು ಸಿ.ಎಂ.ಕುಲಕರ್ಣಿ. ಅವರು ಇತಿಹಾಸದ ಪ್ರಾಧ್ಯಾಪಕರಾಗಿದ್ದರು. ಅವರು ನನಗೆ ಧಾರವಾಡದಲ್ಲಿ, ಜೆ.ಎಸ್.ಎಸ್.ಕಾಲೇಜಿನಲ್ಲಿ (1952ರಲ್ಲಿ) ನಾನು ವಿದ್ಯಾರ್ಥಿಯಾಗಿದ್ದಾಗ ಕೆಲವು ತಿಂಗಳು ಇತಿಹಾಸ ಪಾಠ ಹೇಳಿದ್ದರು. ಅವರು ಬಹಳೇ ಜನಪ್ರಿಯ ಅಧ್ಯಾಪಕರಾಗಿದ್ದರು. ಅವರು ಧಾರವಾಡದ ಕೆಲಸ ಬಿಟ್ಟ ಮೇಲೆ ಮುಂಬೈಗೆ ತೆರಳಿದ್ದಾರೆಂದು ಕೇಳಿದ್ದೆ. ಅವರೇ ಖಾಲ್ಸಾ ಕಾಲೇಜಿನಲ್ಲಿದ್ದಾರೆಂದು ಬ್ಯಾತನಾಳರಿಂದ ತಿಳಿದಾಗ ಆನಂದವಾಯಿತು.

ಪ್ರೊ. ಬ್ಯಾತನಾಳರು ಜೆ.ಎಸ್.ಎಸ್.ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ನಾವು ಮೊದಲ ವರ್ಷದಲ್ಲಿದ್ದಾಗ ಅವರು ಕಾಲೇಜಿಗೆ ಬಿ.ಎ. ಪರೀಕ್ಷೆಯಲ್ಲಿ ಪ್ರಥಮಸ್ಥಾನ ಗಳಿಸಿ ಫೆಲೋ ಆಗಿದ್ದರು. ಆಗ ಅವರ ಪರಿಚಯವಾಗಿತ್ತು. ರಜಾದಿನಗಳಲ್ಲಿ ಧಾರವಾಡಕ್ಕೆ ಬರುತ್ತಿದ್ದರು. ಅವರೇ ನನಗೆ ಖಾಲ್ಸಾ ಕಾಲೇಜಿಗೆ ಅರ್ಜಿ ಕಳಿಸಲು ಹೇಳಿದ್ದರು. ಅವರೊಡನೆ ನಾನು ಮುಂಬೈಗೆ ಬಂದೆ. ಅವರು ನನ್ನನ್ನು ಸಿ.ಎಂ. ಅವರ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದರು. ಸಂದರ್ಶನ ನಡೆದಾಗ ಸಿ.ಎಂ. ಅವರು ಪ್ರಿನ್ಸಿಪಾಲರೊಡನೆ ಕುಳಿತಿದ್ದರು. ಪ್ರೊ. ವಾರಿಯಂಸಿಂಗ್ ಎಂಬ ಗಣಿತ ಪ್ರಾಧ್ಯಾಪಕರು ತಾತ್ಪೂರ್ತಿಕ ಪ್ರಾಂಶುಪಾಲರಾಗಿದ್ದರು. ಅವರು ಹೆಚ್ಚೇನು ಪ್ರಶ್ನೆ ಕೇಳಲಿಲ್ಲ. ಮುಂಬೈಯಲ್ಲಿ ವಸತಿಗೆ ಜಾಗ ಸಿಗುವುದು ಕಷ್ಟಕರ ಎಂದೂ, ಚಿಕ್ಕ ಸಂಬಳದಲ್ಲಿ ಎಲ್ಲಿ ಇರುವಿ ಎಂದೂ ಕೇಳಿದ್ದರು. ನಮ್ಮ ಅಜ್ಜನ ಮನೆ ದಾದರ್‌ನಲ್ಲಿದೆ, ಅಲ್ಲಿರುವೆ ಎಂದು ಉತ್ತರಿಸಿದ್ದ್ದೆ. ನನ್ನ ತಾಯಿಯ ಸೋದರ ಮಾವ ಕೇಶವರಾವ ತೊರವಿ ದಾದರ್‌ದಲ್ಲಿದ್ದರು. ಅವರಿಗೆ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಕೆಲಸವಿತ್ತು. ಮುಂಬೈಗೆ ಬಂದಾಗ ಮೊದಲು ಅವರ ಮನೆಗೆ ಬಂದೆ. ಅವರು ನನಗೆ ತಾತ್ಪೂರ್ತಿಕವಾಗಿ ಆಶ್ರಯ ನೀಡಿದ್ದರು. ನನ್ನ ಪಾರ್ಟ್‌ಟೈಮ್ ಕೆಲಸ ಪ್ರಾರಂಭವಾಗಿತ್ತು.

ಅಜ್ಜ ಕೇಶವರಾಯರು ಮೊದಲ ರವಿವಾರ ನನ್ನನ್ನು ವಾಣೀವಿಹಾರ ವಿದ್ಯಾಲಯಕ್ಕೆ ಕರೆದುಕೊಂಡು ಹೋದರು. ಪ್ರತಿ ರವಿವಾರ ಪಂಡಿತ ಮಾಹುಲಿ ಗೋಪಾಲಾಚಾರ್ಯರ ಪ್ರವಚನ ಇರುತ್ತಿತ್ತು. ನಾನು ಸ್ವಲ್ಪೇ ದಿನಗಳಲ್ಲಿ ಗೋಪಾಲಾಚಾರ್ಯರ ಒಲುಮೆಯನ್ನು ಸಂಪಾದಿಸಿದೆ. ಕಾಲೇಜಿನಲ್ಲಿ ಕನ್ನಡ ವಿಷಯ ಕಲೆ ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಮೊದಲಿನ ಎರಡು ವರ್ಷ ಇತ್ತು. ವಾರಕ್ಕೆ ಎಂಟು ಕ್ಲಾಸು ಇರುತ್ತಿದ್ದವು. ದಾದರ್ ಟಿಟಿಯಿಂದ ಒಂದು ಆಣೆ ಕೊಟ್ಟರೆ ಟ್ರಾಂನಲ್ಲಿ ಮಾಟುಂಗಾ ಕಿಂಗ್ಸ್ ಸರ್ಕಲ್ ತಲುಪಬಹುದಾಗಿತ್ತು. ಕೆಲವು ಸಲ ನಡೆದುಕೊಂಡೂ ಕಾಲೇಜಿಗೆ ಬರುತ್ತಿದ್ದೆ. ನಮ್ಮ ಅಜ್ಜನ ಬಿಲ್ಡಿಂಗ್ ಎಲ್.ಜೆ.ರೋಡ್‌ನಲ್ಲಿ ಗೋವಿಂದಾಶ್ರಮದಲ್ಲಿ ಇತ್ತು. ಅಲ್ಲಿಯೇ ಕರ್ಣಾಟಕ ಸಂಘದ ಕಾರ್ಯದರ್ಶಿ ಹ.ವೆಂ.ಇಮಾರತಿ ಇರುತ್ತಿದ್ದರು. ಅವರ ಕನ್ನಡಾಭಿಮಾನ ಅನುಪಮವಾಗಿತ್ತು. ಪ್ರತಿದಿನ ಅವರ ಮನೆಗೆ ಹೋಗುತ್ತಿದ್ದೆ. ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿಯ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದೆ. ನಾನು ಕನ್ನಡದಲ್ಲಿ ಕವಿತೆ ಬರೆಯುತ್ತೇನೆಂದು ತಿಳಿದಾಗ ಇಮಾರತಿಯವರಿಗೆ ಸಂತೋಷವಾಗಿತ್ತು. ಬಹಳ ಸಲ ಅವರೇ ನನ್ನ ಕಾವ್ಯದ ಪ್ರಥಮ ಶ್ರೋತೃಗಳಾಗಿರುತ್ತಿದ್ದರು. ಒಮ್ಮೆ ಅವರ ಮನೆಯಲ್ಲಿ ನನಗೆ ವಿಟ್ಠಲ ಶೆಟ್ಟಿ ಎಂಬ ವ್ಯಕ್ತಿಯ ಪರಿಚಯವಾಯ್ತು. ಅವರ ಮುಂದೆ ನನ್ನ ಕಾವ್ಯವಾಚನವಾಯ್ತು. ನಾನು ಪೇಯಿಂಗ್ ಗೆಸ್ಟ್ ವಸತಿಗಾಗಿ ಸ್ಥಳ ಹುಡುಕುತ್ತಿರುವ ವಿಷಯ ಇಮಾರತಿಯವರು ಅವರಿಗೆ ತಿಳಿಸಿದಾಗ ಅವರು ತಮ್ಮ ಮನೆಗೆ ಬರಲು ಆಹ್ವಾನಿಸಿದರು. ಅವರದು ಮಾಟುಂಗಾ ಸ್ಟೇಶನ್‌ದ ಬಳಿ ಮನೆ ಇತ್ತು. ಮೂರು ರೂಮಿನ ಬ್ಲಾಕು. ಅವರ ಫ್ಯಾಮಿಲಿ ಮಂಗಳೂರಲ್ಲಿತ್ತು. ಅವರಿಗೆ ಖಾದಿ ಗ್ರಾಮೋದ್ಯೋಗದಲ್ಲಿ ಕೆಲಸವಿತ್ತು. ಅವರೊಟ್ಟಿಗೆ ಕೃಷ್ಣಮೂರ್ತಿ ಎಂಬ ವಿಜ್ಞಾನ ವಿದ್ಯಾರ್ಥಿ(ರಿಸರ್ಚ್ ಸ್ಕಾಲರ್) ಪೇಯಿಂಗ್ ಗೆಸ್ಟ್ ಆಗಿ ಇರುತ್ತಿದ್ದ ಎಂಬ ವಿಷಯ ತಿಳಿಯಿತು. ನಾನು ಶೆಟ್ಟಿಯವರ ಮನೆಗೆ ತೆರಳಿದೆ. ನನಗೆ ಅವರ ಮನೆಯ ವಾಸ ಹೆಚ್ಚಿನ ಸಂತೋಷವನ್ನು ತಂದಿತ್ತು. ಕಾರಣ ಕೆಲ ಸಲ ನಾವು ಮನೆಯಲ್ಲೇ ಅಡುಗೆ ಮಾಡಿಕೊಳ್ಳಬಹುದಾಗಿತ್ತು.

ಪ್ರೊ.ಸಿ.ಎಂ.ಕುಲಕರ್ಣಿಯವರು ಖಾಲ್ಸಾ ಕಾಲೇಜಿನಲ್ಲಿ ಬಹಳ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅವರು ತಮ್ಮ ಪ್ರಭಾವ ಉಪಯೋಗಿಸಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪ್ರಾಧ್ಯಾಪಕರಿಗಾಗಿ ಇರುವ ಒಂದು ರೂಮು ನನಗೆ ಕೊಡಿಸಿದರು. ಅದರ ಬಾಡಿಗೆ ಕೇವಲ 20 ರೂಪಾಯಿ. (+2 ರೂ. ವಿದ್ಯುತ್ತಿನ ಬಿಲ್). ನಾನು ಕಾಲೇಜಿನ ಹಾಸ್ಟೆಲ್‌ಗೆ ಹೋಗುವ ವಿಚಾರ ಕೇಳಿದಾಗ ವಿಟ್ಠಲ ಶೆಟ್ಟಿಯವರಿಗೆ ಬೇಸರವಾಯಿತು. ಅವರು ನನ್ನನ್ನು ಬಿಡಲು ಸಿದ್ಧರಿರಲಿಲ್ಲ. ಕೃಷ್ಣಮೂರ್ತಿ ಕೂಡ ಮನೆಯಲ್ಲಿರುವ ಸುಖ ಹಾಸ್ಟೆಲ್‌ನಲ್ಲಿಲ್ಲ ಎಂದು ವಾದಿಸಿದರು. ಪ್ರೊ.ಸಿ.ಎಂ ಅವರಿಗೆ ನನ್ನ ಮನದ ಹೊಯ್ದಾಟ ತಿಳಿಸಿದೆ. ಅವರೆಂದರು, ಸರಿ, ನಾಳೆ ನಿಮ್ಮ ಮಿತ್ರ ಶೆಟ್ಟಿಯವರ ಮನೆಯೊಡತಿ ಮಂಗಳೂರಿಂದ ವಾಪಸ್ ಬಂದರೆ, ನೀನು ರೂಮು ಖಾಲಿ ಮಾಡಬೇಕಾಗುತ್ತದೆ. ಆಗ ಬೇಕು ಎಂದರೂ ಹಾಸ್ಟೆಲ್ ಸಿಗುವುದಿಲ್ಲ. ಈ ಸುವರ್ಣಾವಕಾಶ ಕಳೆದುಕೊಳ್ಳುವುದು ದಡ್ಡತನವಾದೀತು. ಅವರ ಮಾತು ನನಗೆ ಸರಿ ಎನಿಸಿತು. ನಾನು ವಾಸಿಸಲಿಕ್ಕೆ ಕಾಲೇಜಿನ ಹಾಸ್ಟೆಲಿಗೆ ಬಂದೆ. ಮುಂದೆ ಕಲವೇ ತಿಂಗಳಲ್ಲಿ ಶೆಟ್ಟಿಯವರ ಹೆಂಡತಿ ಮುಂಬೈಗೆ ಮರಳಿ ಬಂದರು. ಸಿ.ಎಂ. ಅವರ ನುಡಿ ದಿಟವಾಗಿತ್ತು.

ಖಾಲ್ಸಾ ಕಾಲೇಜಿನ ಹಾಸ್ಟೆಲ್‌ನಲ್ಲಿ ಇಬ್ಬರು ಕನ್ನಡ ವಿದ್ಯಾರ್ಥಿಗಳಿದ್ದರು. ಸಿ.ಬಿ.ಬಳ್ಳಾರಿ, ವಸಂತ ಕಲಕೋಟಿ. ಅವರು ನನ್ನ ನಚ್ಚಿನ ವಿದ್ಯಾರ್ಥಿಗಳಾಗಿದ್ದರು. ಕಾಲೇಜಿನಲ್ಲಿ ಕನ್ನಡ ಸಂಘಕ್ಕೆ ಕನ್ನಡ ಪ್ರೇಮಿ ಬಳಗ ಎಂಬ ನಾಮವಿತ್ತು. ನಮ್ಮ ಕಾಲೇಜಿನಲ್ಲಿ ಕರ್ಣಾಟಕಿ ಎಂಬ ಹೆಸರಿನ ತರ್ಕಶಾಸ್ತ್ರದ ಪ್ರಾಧ್ಯಾಪಕರಿದ್ದರು. ಕನ್ನಡ ಪ್ರೇಮೀ ಮಂಡಲಿ ಎಂಬ ಹೆಸರನ್ನು ಅವರೇ ಸೂಚಿಸಿದ್ದರಂತೆ. ಅವರಿಗೆ ಕನ್ನಡ ಭಾಷೆಯ ಮೇಲೆ ಅಗಾಧ ಪ್ರೀತಿ ಇತ್ತು. ಅವರು ಕನ್ನಡ ಪತ್ರಿಕೆ ಮಾತ್ರ ಓದುತ್ತಿದ್ದರು. ಮಹಲಿಂಗರಂಗನ ಕಾವ್ಯ ಉದ್ಧರಿಸಿ, ಸಂಸ್ಕೃತದಲ್ಲಿನ್ನೇನುದ ಬದಲಿಗೆ ಇಂಗ್ಲೀಷಿನಲ್ಲಿನ್ನೇನು? ಎನ್ನುತ್ತಿದ್ದರು. ಕನ್ನಡ ವಿದ್ಯಾರ್ಥಿಗಳೊಡನೆ ಅಚ್ಚ ಮೈಸೂರು ಕನ್ನಡದಲ್ಲಿ ಮಾತಾಡುತ್ತಿದ್ದರು. ಅವರಿಗೆ ಕಾಲೇಜಿನ ಕ್ವಾರ್ಟರ್ಸ್‌ನಲ್ಲಿ ಒಂದು ಮನೆಯಿತ್ತು. ಕನ್ನಡ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ದಕ್ಷಣ ಕನ್ನಡದವರು. ಆರ್ಟ್ಸ್ ಕಾಲೇಜಿನ ಮುಂಜಾನೆಯ ತರಗತಿಯಲ್ಲಿ ಅತ್ಯಧಿಕ ಕನ್ನಡ ವಿದ್ಯಾರ್ಥಿಗಳು ಇದ್ದರು. ಹೆಚ್ಚಿನ ವಿದ್ಯಾರ್ಥಿಗಳು ನೌಕರಿ ಮಾಡುತ್ತಿದ್ದರು. ಕನ್ನಡ ವಿದ್ಯಾರ್ಥಿಗಳು ಆಟಪಾಟಗಳಲ್ಲಿ ಸರ್ದಾರ್ಜಿಗಳ ಕಾಲೇಜಿನಲ್ಲೂ ಅಗ್ರಪಂಕ್ತಿಯಲ್ಲಿದ್ದದ್ದು ಒಂದು ವಿಶೇಷವಾಗಿತ್ತು.

ನನಗೆ ಪರೇಲ್‌ನಲ್ಲಿರುವ ವೆಟರ್ನರಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳ ಪರಿಚಯವಿತ್ತು. ಅವರ ಕಾಲೇಜಿನ ಕರ್ನಾಟಕ ಸಂಘ ಬಹಳ ಪ್ರಖ್ಯಾತವಾಗಿತ್ತು. ಕಾಲೇಜಿನ ಅರ್ಥದಷ್ಟು ವಿದ್ಯಾರ್ಥಿಗಳು ಕನ್ನಡಿಗರಾಗಿದ್ದರು. ಕನ್ನಡ ಸಂಘದ ವಾರ್ಷಿಕೋತ್ಸವ ಮೂರು ದಿನ ನಡೆಯುತ್ತಿತ್ತು. ಅವರು ಸ್ರೀಪಾತ್ರ ವಿರಹಿತ ನಾಟಕ ಬರೆದುಕೊಡಲು ನನಗೆ ಕೇಳಿಕೊಂಡರು. ನಾನು ಧಾರವಾಡದಲ್ಲಿ ಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಕೆ.ಎಸ್.ಶರ್ಮಾ ಅವರ ಸಹವಾಸದಲ್ಲಿ ಕಲಾವಿಕಾಸ ವೃಂದ ಸೇರಿ ನಾಟಕದಲ್ಲಿ ಪಾತ್ರವಹಿಸಿದ್ದೆ. ನಾವು ಪ್ರಯೋಗಿಸಿದ್ದ ಕೈಲಾಸಂ ಅವರ ಬಂಡ್ವಾಳಿಲ್ಲದ ಬಡಾಯಿ ನಾಟಕ ಒಂದು ತಿಂಗಳಲ್ಲಿ ಐದು ಪ್ರಯೋಗ ಕಂಡಿತ್ತು. (ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ಆ ನಾಟಕದಲ್ಲಿ ನಾನು ಮುದ್ಮಣಿ(ದಡ್ಡಮಗ) ಆಗಿದ್ದರೆ ಶರ್ಮಾ ಪರಶುರಾಮ ಪಟ್ಟರ್(ಅಡಿಗೆಯವ) ಆಗಿದ್ದರು. ನನ್ನ ತಲೆಯಲ್ಲಿ ಮುದ್ಮಣಿಯ ಗುಂಗು ಇತ್ತು. ನಾನು ಬರೆದ ಪ್ರಥಮ ಏಕಾಂಕ ನಾಟಕ ಗುಂಡನ ಮದುವೆ ಬೆಳೆದು ನಿಂತ ದಡ್ಡ (ಪೆದ್ದ) ಮಗನ ಚಿತ್ರಣವಾಗಿತ್ತು. ಗುಂಡನ ಪಾತ್ರವಹಿಸಲು ಯೋಗ್ಯ ಕಲಾವಿದ ಸಿಗಲಿಲ್ಲ ಎಂದು ವೆಟರ್ನರಿ ಕಾಲೇಜಿನ ವಿದ್ಯಾರ್ಥಿಗಳು ನಾನು ಬರೆದ ನಾಟಕವನ್ನು ಪ್ರಯೋಗಿಸಲಿಲ್ಲ. ನನಗೆ ಬಹಳ ಬೇಸರವಾಯಿತು. ಕನ್ನಡ ಪ್ರೇಮಿ ಮಂಡಲಿಯ ವಾರ್ಷಿಕೋತ್ಸವದಲ್ಲಿ ಒಂದು ನಾಟಕದ ಪ್ರಯೋಗ ಮಾಡಲು ನಿಶ್ಚಯಿಸಲಾಯಿತು. ನಾನು ವಿದ್ಯಾರ್ಥಿಗಳ ಮುಂದೆ ನನ್ನ ನಾಟಕ ಓದಿ ತೋರಿಸಿದೆ. ಎಲ್ಲರಿಗೂ ಅದು ಮೆಚ್ಚಿಗೆಯದಾಯಿತು. ನಾನೇ ದಿಗ್ದರ್ಶಕನಾದೆ. ಗುಂಡನ ಪಾತ್ರ ಹೇಗೆ ಇದೆ ಎಂದು ಅಭಿನಯಿಸಿ ತೋರಿಸಿದೆ. ನಮ್ಮ ಕಾಲೇಜಿನಲ್ಲಿಯೂ ಆ ಪಾತ್ರವಹಿಸಲು ಯಾವ ವಿದ್ಯಾರ್ಥಿಯೂ ಮುಂದೆ ಬರಲಿಲ್ಲ, ಕೊನೆಗೆ ನಾನೇ ಆ ಪಾತ್ರ ಮಾಡಬೇಕಾಯ್ತು.

ಜೀವಿ ಕುಲಕರ್ಣಿ ಈಮೇಲ್ ವಿಳಾಸ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X