ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮೊದಲ ಗುರು ಜಾಲೀಹಾಳ ಮಾಸ್ತರರು

By Prasad
|
Google Oneindia Kannada News

Jalihal Master, Bijapur
ಪ್ರಾಥಮಿಕ ಶಿಕ್ಷಣ ಹಂತದಿಂದ ಒಂದಿಲ್ಲೊಂದು ಕಾಲಘಟ್ಟದಲ್ಲಿ ನಮ್ಮ ಶಿಕ್ಷಣದಲ್ಲಿ, ವೃತ್ತಿಯಲ್ಲಿ, ವೈಯಕ್ತಿಕವಾಗಿ ಪ್ರಭಾವಬೀರಿದ ಶಿಕ್ಷಕರು ಇದ್ದೇ ಇರುತ್ತಾರೆ? ಓದುಗರೆ, ನಿಮ್ಮ ಜೀವನದಲ್ಲಿ ಜಾಲಿಹಾಳ ಮಾಸ್ತರಂತೆ ಪ್ರಭಾವ ಬೀರಿದ ಶಿಕ್ಷಕರು ಯಾರು? ಯಾವ ಬಗೆಯಲ್ಲಿ ಪ್ರಭಾವ ಬೀರಿದ್ದಾರೆ? ಅಂಥ ಮಾಸ್ತರರು ಈಗಲೂ ಇದ್ದಾರಾ? ನಮಗೆ ಬರೆದು ತಿಳಿಸಿ.

* ಡಾ| ಜೀವಿ ಕುಲಕರ್ಣಿ, ಮುಂಬಯಿ

ನನ್ನ ಪ್ರಥಮ ಗುರು ಎಂದರೆ ವಿಜಾಪುರದ ಜಾಲೀಹಾಳ ಮಾಸ್ತರರು. ಅವರಿಗೆ ಅರವತ್ತು ವರ್ಷ ತುಂಬಿದಾಗ ನನ್ನ ಪ್ರಥಮ ಕಥಾ ಸಂಗ್ರಹ ಧೃತರಾಷ್ಟ್ರ ಸಂತಾನ (1962) ಅವರಿಗೆ ಅರ್ಪಿಸಿದ್ದೆ. ಅವರ ಬಗ್ಗೆ ಒಂದು ಪದ್ಯ ಬರೆದಿದ್ದೆ.

ಎಲೆ ಮರೆಯ ಹೂವು
1
ಎಲೆಮರೆಯ ಹೂವುಗಳು ಎಷ್ಟೆಷ್ಟೊ ಅರಳುತಿವೆ
ತಮ್ಮ ಜೀವನವನ್ನು ಋತಕರ್ಪಿಸಿ,
ಕಂಟಿಯಲಿ ಬೆಳೆದರೂ, ಬಿಸಿಲಿನಲಿ ಕುದಿದರೂ
ಧನ್ಯವಾಯಿತು ಬಾಳು ಗಂಧಹರಿಸಿ.
2
ನಿಮ್ಮ ಅಡಿಗಳಲಂದು ಕಲಿವ ಭಾಗ್ಯವ ಪಡೆದ
ಶಿಷ್ಯ-ವತ್ಸನದಿದೊ ಅನಂತ ನಮನ,
ಬಾಳ-ಭ್ರಮರಕೆ ಮಧುವ ಸಂಚಯಿಪ ಪಾಠವನು
ಮೊದಲು ಕಲಿಸಿದರಿಂದ ಬಂತು ಕವನ.
3
ಅರವತ್ತು ವರುಷಗಳ ತುಂಬುಜೀವಿಗೆ ನಾನು
ಕೊಡುವುದೇನಿದೆ? ಬರಿ, ಸದಿಚ್ಛೆ ಮಾತ್ರ,
ಶತಂ ಶರದಃ ಬಾಳಿರೆಂಬುವುದೆ ಆಶಯವು
ಸದಾಕಾಲಕು ಇರಲಿ ಕೃಪಾಛತ್ರ.

***
ವಿಜಾಪುರದಲ್ಲಿ ಪ್ರಸಿದ್ಧವಾದ (ಮುಲ್ಕ್-ಎ-ಮೈದಾನ್ ತೋಪಿನ ಎದುರಿಗೆ ಇರುವ) ಕೌಳಿಗೇಟ್ ಶಾಲೆಯಲ್ಲಿ ಜಾಲೀಹಾಳ ಮಾಸ್ತರರೆಂದರೆ ಒಂದು ಕಾಲಕ್ಕೆ (1940ರ ದಶಕ) ಮನೆಮಾತಾದ ಹೆಸರಾಗಿತ್ತು. ಆ ಕಾಲದಲ್ಲಿ ನಾಲ್ಕನೆಯ ಕ್ಲಾಸಿನ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪರೀಕ್ಷೆ ಇರುತ್ತಿತ್ತು. ಹತ್ತಾರು ವಿದ್ಯಾರ್ಥಿಗಳಿಗೆ(ನನ್ನ ನೆನಪು ಸರಿ ಇದ್ದರೆ 12 ವಿದ್ಯಾರ್ಥಿಗಳಿಗೆ) ಆ ಬಹುಮಾನದ ಹಣ ಪಡೆಯುವುದು ಒಂದು ಗೌರವದ ಸಂಕೇತವಾಗಿತ್ತು. ಅದೊಂದು ನಿಧಿಯಂತೆ ತೋರುತ್ತಿತ್ತು. ಜಿಲ್ಲೆಯಲ್ಲಿ ವಿದ್ಯಾರ್ಥಿವೇತನ ಪಡೆದ ಅತ್ಯಧಿಕ ವಿದ್ಯಾರ್ಥಿಗಳು ಕೌಳೀಗೇಟ್ ಶಾಲೆಯ ವಿದ್ಯಾರ್ಥಿಗಳೇ ಆಗಿರುತ್ತಿದ್ದರು. ನಾಲ್ಕನೆಯ ಕ್ಲಾಸಿನಲ್ಲಿ ಜಾಲೀಹಾಳ ಮಾಸ್ತರರ ವಿದ್ಯಾರ್ಥಿಯಾಗಲು ಜಿಲ್ಲೆಯ ಬೇರೆ ಭಾಗಗಳಿಂದ ಹುಡುಗರು ವಿಜಾಪುರಕ್ಕೆ ಬರುತ್ತಿದ್ದರು, ಇವರಿದ್ದ ಶಾಲೆ ಸೇರುತ್ತಿದ್ದರು. ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳು ಮಾಸ್ತರರ ಮನೆಗೆ ಬಂದು ಮಲಗುತ್ತಿದ್ದರು. ಮಾಸ್ತರರು ಆ ಮಕ್ಕಳನ್ನೆಲ್ಲ ಬೆಳಿಗ್ಗೆ ನಾಲ್ಕುಗಂಟೆಗೆ ಎಬ್ಬಿಸಿ ಪಾಠ ಹೇಳುತ್ತಿದ್ದರು. ಈ ಶಿಕ್ಷಕರ ಒಂದು ವೈಶಿಷ್ಟ್ಯವೆಂದರೆ, ಅವರು ಯಾವ ವಿದ್ಯಾರ್ಥಿಯಿಂದಲೂ ಫೀ ಪಡೆಯುತ್ತಿರಲಿಲ್ಲ. ಅವರ ಮನೆ ನಿತ್ಯದ ಶಾಲೆಬಿಟ್ಟಮೇಲೆ ಒಂದು ಗುರುಕುಲದಂತಾಗುತ್ತಿತ್ತು. ನಾನು ನಾಲ್ಕನೆಯ ಕ್ಲಾಸು ಓದುವಾಗ ಧಾರವಾಡದಲ್ಲಿದ್ದೆ. ಜಾಲೀಹಾಳ ಮಾಸ್ತರರ ವಿದ್ಯಾರ್ಥಿಯಾಗಲು ನಾನು ವಿಜಾಪುರಕ್ಕೆ ಬಂದೆ. ಅವರ ಮನೆಯಲ್ಲಿ ವಾಸಿಸತೊಡಗಿದೆ. ಕಾರಣವಿಷ್ಟೇ, ಅವರು ನನ್ನ ದೊಡ್ಡಪ್ಪ ಕೂಡ ಆಗಿದ್ದರು.

ಮುಂಬೈಯಲ್ಲಿದ್ದ ಕರ್ನಾಟಕ ಥೇಟರ್ಸ್‌ದ ನಟರೂ ವಿಜ್ಞಾನಿಗಳೂ ಆಗಿದ್ದ ಶ್ರೀ ತಿಕೋಟಕರ್, ಚೌಪಾಟಿಯಲ್ಲಿರುವ ವಿಲ್ಸ್‌ನ್ ಕಾಲೇಜು ನಂತರ ಘಾಟ್ಕೂಪರ್‌ದ ಸೊಮಯ್ಯ ಕಾಲೇಜಿನ ಪ್ರಸಿದ್ಧ ತತ್ತ್ವಜ್ಞಾನದ ಪ್ರಾಧ್ಯಾಪಕ ಎನ್.ಜಿ.ಕುಲಕರ್ಣಿ ಜಾಲೀಹಾಳ ಮಾಸ್ತರರ ವಿದ್ಯಾರ್ಥಿಯಾಗಿದ್ದರು. ಜಿಲ್ಲೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದವರಾಗಿದ್ದರು. ಅವರಂಥ ಗುರುಗಳನ್ನು ತಾವು ಇನ್ನೆಲ್ಲೂ (ಸ್ಕೂಲುಕಾಲೇಜಿನಲ್ಲಿ) ಕಾಣಲಿಲ್ಲ ಎಂಬ ಉದ್ಗಾರ ತೆಗೆಯುತ್ತಿದ್ದರು. ಇಪ್ಪತ್ತೈದು ವರ್ಷಗಳ ಮೇಲೆ ಜಾಲೀಹಾಳ ಮಾಸ್ತರರನ್ನು ಒಂದು ಲೋವರ್ ಮಿಡಲ್ ಮಾಹಿಳಾ ಶಾಲೆಗೆ ವರ್ಗಾಯಿಸಲಾಯಿತು. ಅಲ್ಲಿ ಏಳನೆಯ ಕ್ಲಾಸಿನ ಪರೀಕ್ಷೆಯಲ್ಲಿ ಅವರ ವಿದ್ಯಾರ್ಥಿನಿಯರೇ ಜಿಲ್ಲೆಗೆ ಅಗ್ರಪಂಕ್ತಿಯಲ್ಲಿರುತ್ತಿದ್ದರು.

ಆ ಕಾಲದ ಶಿಕ್ಷಣದ ರೀತಿಯನ್ನು ಹೋಲಿಸಿದರೆ ಇಂದು ಅಂತಹ ಶಿಕ್ಷಕರು ದುರ್ಲಭ ಎಂದೇ ಹೇಳಬೇಕು. ನಾನು ಬಿ.ಎ.ಕ್ಲಾಸಿನಲ್ಲಿ ಓದುತ್ತಿದ್ದೆ. ನಮ್ಮ ಕಾಲೇಜಿಗೆ ಕನ್ನಡ ವ್ಯಾಕರಣ ತಜ್ಞ ಮ.ಪ್ರ.ಪೂಜಾರರು ಬಂದಿದ್ದರು. ಶಬ್ದಮಣಿದರ್ಪಣದ ಮೇಲೆ ಮೂರು ಉಪನ್ಯಾಸ ಕೊಟ್ಟರು. ಅದರ ಬಗ್ಗೆ ನಾನು ಜಾಲೀಹಾಳ ಮಾಸ್ತರಗೆ ಹೇಳಿದೆ. ಮಾತಾಡುವಾದ ತಪ್ಪಿ ನನ್ನ ಬಾಯಿಯಿಂದ ಪೂಜಾರರ ಬಗ್ಗೆ ಏಕವಚನ ಬಂತು. ಆಗ ಮಾಸ್ತರರು ಅಂದರು, ಪೂಜಾರ ಮಾಸ್ತರರು ಶ್ರೇಷ್ಠ ಗುರುಗಳು. ನಮಗೆ ಶಾಲಾ ಮಾಸ್ತರ್ ಟ್ರೇನಿಂಗ ಕಾಲೇಜಿನಲ್ಲಿ ಎರಡು ವರ್ಷ ಕನ್ನಡ ಕಲಿಸಿದ್ದಾರೆ. ಅವರ ಬಗ್ಗೆ ತಪ್ಪಿ ಕೂಡ ಏಕ ವಚನದಲ್ಲಿ ಸಂಬೋಧಿಸಬಾರದು. ಅದರಿಂದ ಪಾಪ ಬರುತ್ತದೆ. ಎಂದು ಎಚ್ಚರಿಸಿದ್ದರು. ನನಗೆ ನೆನಪಿದೆ ಶಾಲೆಯಲ್ಲಿ ಭೂಗೋಲದ ಪಾಠ ಮಾಡುವಾಗ ಭಾರತ ನಕ್ಷೆಯನ್ನು ಬೃಹದಾಕಾರದಲ್ಲಿ ನೆಲ ಮೇಲೆ ಬಿಡಿಸಿ, ಗುಡ್ಡ ನದಿಗಳನ್ನೆಲ್ಲ ನಿರ್ಮಿಸಿ, ರಾಜ್ಯಗಳಲ್ಲಿ ಬೆಳೆವ ಧಾನ್ಯದ, ದೊರೆವ ಖನಿಜದ ಚಿತ್ರವತ್ತದ ಮಾಡೆಲ್ ತಯಾರಿಸುತ್ತಿದ್ದರು. ಎಲ್ಲ ನದಿಗಳಲ್ಲಿ ನೀರು ಹರಿಯುವ ವ್ಯವಸ್ಥೆ ಮಾಡುತ್ತಿದ್ದರು. ಅವರು ಕಲಿಸಿದ ಪಾಠ ಇನ್ನೂ ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

ಅವರ ಹೆಸರು ಹನುಮಂತರಾವ ರಾಮಚಂದ್ರರಾವ ಕುಲಕರ್ಣಿ. ಆದರೆ ಅವರನ್ನು ಜನರು ಜಾಲೀಹಾಳ ಮಾಸ್ತರರೆಂದೇ ಕರೆಯುತ್ತಿದ್ದರು. ಅವರು ಶ್ರೀ ಭಾವೂಸಾಹೇಬ ಮಹಾರಾಜರ ಶಿಷ್ಯರಾಗಿದ್ದರು. ಚಿನ್ನದ ಖಡೆ ಪಡೆದ ಹನ್ನೆರಡು ಶಿಷ್ಯರಲ್ಲಿ ಇವರು ಒಬ್ಬರಾಗಿದ್ದರು. ಇವರಿನ್ನೂ ಬಾಲಕರಾಗಿದ್ದಾಗ ಒಮ್ಮೆ ಅವರ ಹಳ್ಳಿ ಜಾಲೀಹಾಳಿಗೆ ಗುರುಗಳು ಬಂದಿದ್ದರು. ತಮ್ಮೊಡನೆ ಪ್ರವಾಸಕ್ಕೆ ಬಾಲಕ ಹನುಮಂತನನ್ನು ಕಳಿಸಲು ಗುರುಗಳು ನಮ್ಮ ಅಜ್ಜ ರಾಮಚಂದ್ರರಾಯರನ್ನು ಕೇಳಿದರು. ಅಜ್ಜಿ ಲಕ್ಷ್ಮೀಬಾಯಿಗೆ ತಮ್ಮ ಮಗನನ್ನು ಮಹಾರಾಜರ ಜೊತೆಗೆ ಕಳಿಸಲು ಮನಸ್ಸಿರಲಿಲ್ಲ. ಭಗವದ್‌ಭಕ್ತರಾದ ತಂದೆ ಮಗನನ್ನು ಕಳಿಸಿದರು. ಪ್ರವಾಸದ ದಾರಿಯಲ್ಲಿ ಹನುಮಂತನಿಗೆ ಪ್ಲೇಗಿನ ಜ್ವರ ಬಂತು. ಬಾಲಕ ಹಾಸಿಗೆಹಿಡಿದು ಮಲಗಿದ. ಗುರುಗಳಿಗೆ ವಿಪರೀತ ಚಿಂತೆ. ಶೀರ್ಷಾಸನದಲ್ಲಿ ಧ್ಯಾನ ಮಾಡಿ ದೇವರಲ್ಲಿ ಈ ಬಾಲಕನನ್ನು ರಕ್ಷಿಸಿ ತಮ್ಮ ಮಾನ ಕಾಪಾಡಲು ಕೇಳಿಕೊಂಡರಂತೆ. ಸಂಜೆ ಭಜನಿಯ ಸಮಯಕ್ಕೆ ಬಾಲಕ ಎದ್ದುಬಂದು ಗೋಡೆಯ ಗೂಟವನ್ನು ಆಧಾರವಾಗಿ ಹಿಡಿದು ಭಜನೆಯಲ್ಲಿ ಪಾಲುಗೊಂಡು ಕುಣಿಯತೊಡಗಿದ. ಆಗ ಜ್ವರ ಪೂರ್ತಿ ಇಳಿದಿತ್ತು. ಇದೊಂದು ಚಮತ್ಕಾರವೇ ಆಗಿತ್ತು. ಈ ಕತೆಯನ್ನು ನಿಂಬಾಳದ ಸಂತ ಗುರುದೇವ ರಾನಡೆಯವರು ನಮ್ಮಿಂದ ಹಲವು ಬಾರಿ ಈ ಕತೆ ಕೇಳಿಸಿಕೊಂಡು ಸಂತಸಪಟ್ಟಿದ್ದರು. ರಾನಡೆಯವರೂ ಶ್ರೀ ಭಾವೂಸಾಹೇಬರ ಶಿಷ್ಯರಾಗಿದ್ದರು. ನಿವೃತ್ತಿಯ ನಂತರ ಜಾಲೀಹಾಳ ಮಾಸ್ತರರು ಎಂಜಿನಿಯರನಾಗಿದ್ದ ಮಗನ ಮನೆಯಲ್ಲಿ ಇರುವುದಕ್ಕಿಂತ ತಮ್ಮ ಹಳ್ಳಿಯಲ್ಲೇ, ಹೊಲದಲ್ಲೇ, ಇರುವುದನ್ನು ಇಷ್ಟಪಟ್ಟರು. ಅವರ ವಾನಪ್ರಸ್ಥಾಶ್ರಮ ಹೊಲದಲ್ಲೇ ನಡೆದಿತ್ತು.

ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಶಿಷ್ಯವಾತ್ಸಲ್ಯಕ್ಕೆ ಜಾಲೀಹಾಳ ಮಾಸ್ತರರು ಒಂದು ರೋಲ್ ಮಾಡೆಲ್ ಆಗಿದ್ದರು. ನಮಗೆ ಬಾಲ್ಯದಲ್ಲಿ ವಿಜಾಪುರದ ಇತಿಹಾಸ ಪ್ರಸಿದ್ಧವಾದ ಚಾಂದಬಾವಡಿಯಲ್ಲಿ ಈಸಲು ಕರೆದುಕೊಂಡು ಹೋಗುತ್ತಿದ್ದರು, ಸೂರ್ಯನಮಸ್ಕಾರ ಹಾಗೂ ಶಿರ್ಷಾಸನ ಹಾಕಲು ಅವರೇ ಕಲಿಸಿದರು. ನನಗೆ ಅವರ ಬಗ್ಗೆ ದೊಡ್ಡಪ್ಪ ಎಂಬ ಅಭಿಮಾನ ಇದ್ದೇ ಇದೆ, ಅದಕ್ಕಿಂತ ಹೆಚ್ಚು ಮಹಾನ್ ಶಿಕ್ಷಕ ಎಂಬ ಅಭಿಮಾನವಿದೆ. ಅವರ ಶತಮಾನೋತ್ಸವ ಸದ್ದಿಲ್ಲದೆ ಬಂದು ಹೋಯಿತು. ಅವರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರೆ ಅವರಿಗೆ ಹೆಚ್ಚಿನ ಪ್ರಚಾರ ಗೌರವ ದೊರೆಯಬಹುದಾಗಿತ್ತು. ಆದರೆ ಅವರು ಸಹಸ್ರಾರು ಎಳೆಯ ಮನಸ್ಸುಗಳಿಗೆ ದಿವ್ಯ ಸಂಸ್ಕಾರ ನೀಡಿದ್ದಾರೆ. ಇಂಥ ಎಲೆಮರೆಯ ಕಾಯಿಗಳು ನಮ್ಮ ದೇಶದಲ್ಲಿ ಸಾಕಷ್ಟು ಇವೆ. ಅವರೆಲ್ಲರಿಗೆ ಶಿಷ್ಯಕೋಟಿಯ ಪರವಾಗಿ ನಮನಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X