• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇಂದ್ರೆ ಅಂದ್ರ ಕನ್ನಡ, ಬೇಂದ್ರೆ ಅಂದ್ರ ಕನ್ನಡಿ

By Prasad
|

ಬೇಂದ್ರೆ ಎಂದೊಡನೆ ಸಹಸ್ರತಂತ್ರಿಯ ವೀಣೆಯನ್ನು ನುಡಿಸಿದಂತಾಗುತ್ತದೆ. (ಜುಂ ಎನ್ನತಾವ ತಂತಿ!) ಮೈಯಲ್ಲಿ ಮಿಂಚಿನ ಹೊಳೆ ಸಂಚರಿಸುತ್ತದೆ. ಹೃದಯಸಮುದ್ರ ಉಕ್ಕೇರುತ್ತದೆ. ಸಾವಿರದ ನೆನಪುಗಳು ಬರತೊಡಗುತ್ತವೆ. ಬೇಂದ್ರೆ ಕಾವ್ಯ ಪ್ರತಿಮೆಗಳ ಒಂದು ಮೆರವಣಿಗೆಯೇ ಮನಃಪಟಲದ ಮೇಲೆ ಮೂಡುತ್ತದೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಜನೆವರಿ 31, ವರಕವಿ ಬೇಂದ್ರೆಯವರ ಜನ್ಮದಿನ. ಅಂಬಿಕಾತನಯದತ್ತ ಜಯಂತಿ. ಈ ವರ್ಷ ಅವರ 115ನೆಯ ಹುಟ್ಟು ಹಬ್ಬ ನಾಡಿನಾದ್ಯಂತ ಆಚರಿಸಲಾಗುತ್ತದೆ. ಭಾರತ ಹುಣ್ಣಿಮೆಯ ಮರುದಿನ ಗುರುಪ್ರತಿಪದೆಯ ದಿನ ಅಂಬಿಕಾತನಯದತ್ತರ ಜನ್ಮ ಧಾರವಾಡದಲ್ಲಾಯಿತು. (31-01-1896). ಕುಮಾರವ್ಯಾಸನ ತರುವಾಯ ಕಾವ್ಯಕೆ ಗುರುವೆನಿಸುವಂತೆ ಕವನ ರಚಿಸಿದ ಕವಿ ಬೇಂದ್ರೆ ಅಂದರೆ ಅತಿಶಯೋಕ್ತಿಯಲ್ಲ. ಹಿಂದೂ ಪಂಚಾಂಗದ ಪ್ರಕಾರ ಹಾಗೂ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಬೇಂದ್ರೆಯವರ ಜನ್ಮದಿನ ಒಂದೇ ದಿನ ಬರುವುದು ಅಪರೂಪ. ಈ ವರ್ಷ ಗುರುಪ್ರತಿಪದೆ ಜನೆವರಿ 31ರಂದು ಬಂದದ್ದು ಒಂದು ಯೋಗಾಯೋಗವೆಂದೇ ಹೇಳಬೇಕು.

ಬೇಂದ್ರೆ ಎಂದೊಡನೆ ಸಹಸ್ರತಂತ್ರಿಯ ವೀಣೆಯನ್ನು ನುಡಿಸಿದಂತಾಗುತ್ತದೆ. (ಜುಂ ಎನ್ನತಾವ ತಂತಿ!) ಮೈಯಲ್ಲಿ ಮಿಂಚಿನ ಹೊಳೆ ಸಂಚರಿಸುತ್ತದೆ. ಹೃದಯಸಮುದ್ರ ಉಕ್ಕೇರುತ್ತದೆ. ಸಾವಿರದ ನೆನಪುಗಳು ಬರತೊಡಗುತ್ತವೆ. ಬೇಂದ್ರೆ ಕಾವ್ಯ ಪ್ರತಿಮೆಗಳ ಒಂದು ಮೆರವಣಿಗೆಯೇ ಮನಃಪಟಲದ ಮೇಲೆ ಮೂಡುತ್ತದೆ. ಶ್ರಾವಣ ಕವಿ ಬೇಂದ್ರೆ, ರೂಪಕ ಚಕ್ರವರ್ತಿ ಬೇಂದ್ರೆ, ಶಬ್ದ ಗಾರುಡಿಗ ಬೇಂದ್ರೆ, ನಾದಲೋಲ ಬೇಂದ್ರೆ, ಭುವನದ ಭಾಗ್ಯವೆಂಬಂತೆ ಕನ್ನಡ ನಾಡಿನಲ್ಲಿ ಉದಿಸಿ ಬಂದ ಮಹಾಕವಿ ಬೇಂದ್ರೆ.

ಮಹಾತ್ಮಾ ಗಾಂಧೀಜಿಯವರ ಬಗ್ಗೆ ಬರೆಯುತ್ತ ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೀನ್ ಹೇಳಿದ್ದ ಒಂದು ನುಡಿ ನೆನಪಾಗುತ್ತದೆ. ಇಂಥ ಮನುಷ್ಯ ಭೂಮಿಯಲ್ಲಿದ್ದಾಗ ನಾವು ಬದುಕಿದ್ದೆವಲ್ಲ ಅದೆ ನಮ್ಮ ಭಾಗ್ಯ ಎಂದು. ಬೇಂದ್ರೆಯವರ ಬಗ್ಗೆ ಕೂಡ ಇಂಥದೇ ಮಾತು ಹೇಳಬಹುದು. ಅವರು ಜೀವಿಸಿದಾಗ ನಾವು ಬದುಕಿದ್ದು ನಮ್ಮ ಬದುಕಿಗೆ ಸಾರ್ಥಕತೆಯನ್ನು ತಂದು ಕೊಟ್ಟಿದೆ ಎಂದು. ನನ್ನ ಪುಣ್ಯವಶಾತ್ ನಾನು ಧಾರವಾಡದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬೇಂದ್ರೆಯವರು ಡಿ.ಎ.ವಿ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹುದ್ದೆಯಿಂದ 1956ರಲ್ಲಿ ನಿವೃತ್ತರಾಗಿ ಸೊಲ್ಲಾಪುರದಿಂದ ಧಾರವಾಡಕ್ಕೆ ಮರಳಿ ಬಂದಿದ್ದರು. (ಬಾರೋ ಸಾಧನಕೇರಿಗೆ | ಮರಳಿ ನಿನ್ನೀ ಊರಿಗೆ ಎಂದು ಹಾಡುತ್ತ).

1956ರಲ್ಲಿ ನಾನು ಧಾರವಾಡದಲ್ಲಿದ್ದೆ, ಬಿ.ಎ. ವಿದ್ಯಾರ್ಥಿಯಾಗಿದ್ದೆ. ಬೇಂದ್ರೆಯವರನ್ನು ಪರಿಚಯಿಸಿದವರು ಬೇರೆಯಾರಲ್ಲ ಕನ್ನಡ ಸಾಹಿತ್ಯದ ಒಬ್ಬ ದಿಗ್ಗಜರಾದ, ನನ್ನ ಗುರುಗಳಾಗಿದ್ದ, ವಿನಾಯಕ ಕೃಷ್ಣ ಗೋಕಾಕರು. ಮೊದಲ ಭೆಟ್ಟಿಯಲ್ಲೇ ನನಗೆ ಗುರೂಣಾಂ ಗುರು ಆಗಿದ್ದ ಬೇಂದ್ರೆಯವರು ನನಗೆ ಪರಮಗುರುಗಳಾದರು. 1958ರಲ್ಲಿ ಎಂ.ಎ. ಪದವಿ ಗಳಿಸಿದ ಮೇಲೆ ಜೆ.ಎಸ್.ಎಸ್.ಲಾ ಕಾಲೇಜಿನಲ್ಲಿ ಎರಡು ವರ್ಷ ಅಭ್ಯಾಸ ಮುಂದುವರಿಸಿದ್ದೆ. ನನ್ನ ಎಲ್ಲ ಮಿತ್ರರಿಗೂ ಎಂ.ಎ. ಪದವಿಯ ನಂತರ ಕೆಲಸ ದೊರೆತಿತ್ತು. ನನಗೆ ಮಾತ್ರ ನಿರುದ್ಯೋಗ. ಪ್ರಾಂಶುಪಾಲ ಎನ್.ಅರ್.ಕುಲಕರ್ಣಿಯವರ ಕೃಪೆಯಿಂದ ನಾನು ಲಾ ಕಾಲೇಜು ಸೇರಿದ್ದೆ. (ಅವರು ನನಗೆ ಫ್ರೀಶಿಪ್ ನೀಡಿದ್ದರು.) ಜೀವನದ ಪ್ರತಿಯೊಂದು ಘಟನೆಯ ಹಿಂದೆ ನಿಯತಿಯ ಒಂದು ನಿಯಮವಿದ್ದಂತೆ ತೋರುತ್ತದೆ. ನಾನು ನಿರುದ್ಯೋಗಿಯಾಗಿದ್ದರಿಂದ ಎರಡು ಲಾಭಗಳಾದವು. ಕಾರ್ಮಿಕರ ಮಹಾ ನೇತಾರ ಕೆ.ಎಸ್.ಶರ್ಮಾ ಅವರ ಸ್ನೇಹ ದೊರೆಯಿತು. ಅವರು ಲಾ ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿದ್ದರು. ಇನ್ನೊಂದು ದೊಡ್ಡ ಲಾಭವೆಂದರೆ ನನಗೆ ಬೇಂದ್ರೆಯವರ ಒಡನಾಟ ಎರಡು ವರ್ಷ ಅಧಿಕವಾಗಿ ದೊರೆಯಿತು. ನಾನು ಬೇಂದ್ರೆಯವರ ಮನೆಗೆ ನಾನು ದಿನಾಲೂ ಹೋಗುತ್ತಿದ್ದೆ. ಅವರ ಮಾರ್ಗದರ್ಶನ ಪಡೆಯುತ್ತಿದ್ದೆ.

ನಾನು ಕೆಲಸವಿಲ್ಲದೆ ಕುಳಿತದ್ದರಿಂದ ಹಲವರಿಗೆ ಬೇಜಾರಾಗಿತ್ತು. ನನ್ನ ಮನೆಯವರಿಗೆ, ಮಿತ್ರರಿಗೆ ಬೇಜಾರಾಗಿದ್ದು ಸ್ವಾಭಾವಿಕ. ನನ್ನ ಗುರುಗಳೂ ಹಿತೈಷಿಗಳು ಆಗಿದ್ದ ವಿ.ಕೃ.ಗೋಕಾಕರು ಹಲವಾರು ಕಡೆಗೆ ನನಗೆ ಕೆಲಸ ಕೊಡಿಸಲು ಪ್ರಯತ್ನಿಸಿದರು. ಪಾರ್ಲೆ ಕಾಲೇಜಿನ ಪ್ರಿನ್ಸಿಪಾಲ್ ಜೋಶಿ ಅವರ ಆಕ್ಸ್‌ಫರ್ಡ್ ದಿನಗಳ ಮಿತ್ರರಾಗಿದ್ದರು. ಅವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಗಾಗಿ ಜಾಹೀರಾತು ಬಂದಿತ್ತು. ಗೋಕಾಕರು ನನ್ನ ಬಗ್ಗೆ ಶಿಫಾರಸುಮಾಡಿ ಪತ್ರ ಬರೆದಿದ್ದರು. ಜೋಶಿಯವರಿಂದ ಉತ್ತರ ಬಂತು, ಒಂದು ವಾರ ಮೊದಲು ಪತ್ರ ಬಂದಿದ್ದರೆ ಸಂದರ್ಶನವಿಲ್ಲದೆ ನೇಮಕಾತಿ ಪತ್ರ ಕಳಿಸಬಹುದಾಗಿತ್ತು ಎಂದು. ಅಷ್ಟರಲ್ಲಿ ಅವರು ಬೇರೆಯವರನ್ನು ನಿಯಮಿಸಿದ್ದರಂತೆ. ಗುಜರಾತದ ಆನಂದ ವಿಶ್ವವಿದ್ಯಾಲಯದವರು ಗೋಕಾಕರ ಶಿಫಾರಸು ಪತ್ರ ಗೌರವಿಸಿ ಸಂದರ್ಶನವಿಲ್ಲದೆ, ಬರಿಯ ಅರ್ಜಿಯ ಮೇಲೆ ಇಬ್ಬರಿಗೆ ಅಪಾಯಿಂಟ್‌ಮೆಂಟ್ ಲೆಟರ್ ಕಳಿಸಿದ್ದರು. (ಅವರು ಯಾರೆಂದರೆ ಕವಿ ಮಂಗೇಶ ನಾಡಕರ್ಣಿ ಮತ್ತು ವಿಮರ್ಶಕ ಕೀರ್ತಿನಾಥ ಕುರ್ತಕೋಟಿ). ಗೋಕಾಕಾರು ಅನ್ನುತ್ತಿದ್ದರು, ಜೀವಿ, ನೀನು ಇಂಗ್ಲೀಷಿನಲ್ಲಿ ಎಂ.ಎ. ಮಾಡಿದ್ದರೆ ನಿನಗೆ ಭಾರತ ಯಾವ ಮೂಲೆಯಲ್ಲೂ ಕೆಲಸ ಕೊಡಿಸುತ್ತಿದ್ದೆ ಎಂದು.

ಈ ಸಂದರ್ಭದಲ್ಲಿ ಬೇಂದ್ರೆಯವರು ಒಮ್ಮೆ ಉದ್ಗಾರ ತೆಗೆದರು. ಜೀವಿ, ನಿನ್ನ ಜಾತಕದಲ್ಲಿ ಏನೋ ದೋಷವಿದೆ. ನಿನ್ನ ಮಿತ್ರ ಜೋಗಳೇಕರನಿಗೆ ಚೆನ್ನಾಗಿ ಜಾತಕ ಪರಿಶೀಲಿಸಲು ಹೇಳು ಎಂದು. ಪ್ರಸಿದ್ಧ ಜೋತಿಷಿ ನಾಗನಾಥ ಜೋಗಳೇಕರ್ ನನ್ನ ಬಾಲ್ಯಸ್ನೇಹಿತ. ಧಾರವಾಡ ಭಾಷೆಯಲ್ಲಿ ಹೇಳುವುದಾದರೆ ಲಂಗೋಟಿಮಿತ್ರ. ಅವನಿಗೆ ನನ್ನ ಜಾತಕ ಕೂಲಂಕಷವಾಗಿ ಅಭ್ಯಸಿಸಿ ಸಲಹೆ ನೀಡಲು ಹೇಳಿದೆ. ಅವನೆಂದ, ನಿನ್ನ ಜಾತಕದಲ್ಲಿ ಪಿತೃಸ್ಥಾನದಲ್ಲಿ ಒಂದು ದೋಷ ಕಾಣುತ್ತದೆ. ನಿನ್ನ ತಂದೆಯಿಂದಾಗಿ ನಿನಗೆ ಕೆಲಸ ದೊರೆಯುತ್ತಿಲ್ಲ ಎನಿಸುತ್ತದೆ. ಅವರೇನಾದರೂ ಹರಕೆ ಹೊತ್ತಿದ್ದರೇ ಕೇಳಿನೋಡು ಎಂದನು. ತಂದೆಯವರಿಗೆ ಕೇಳಿದಾಗ ನಿಜ ಹೊರಬಿತ್ತು. ಅವರು ತಮ್ಮ ಮೊದಲ ಸಂಬಳ ತಿರುಪತಿ ಹುಂಡಿಯಲ್ಲಿ ಹಾಕುವುದಾಗಿ ಹರಕೆ ಹೊತ್ತಿದ್ದರು. ಅವರಿಗೆ ಅಂಚೆಖಾತೆಯಲ್ಲಿ ಕೆಲಸ ದೊರೆತಿತ್ತು. ಇಪ್ಪತ್ತಾರು ವರ್ಷ ಕಳೆದಿದ್ದರೂ ತಿರುಪತಿಗೆ ಹೋಗಿರಲೇ ಇಲ್ಲ. ಹುಂಡಿಯಲ್ಲಿ ಹಣವನ್ನೂ ಹಾಕಿರಲಿಲ್ಲ. ಬೇಂದ್ರೆಯವರಿಗೆ ಈ ಸುದ್ದಿ ತಿಳಿಸಿದೆ. ಬೇಂದ್ರೆಯವರು ಹೇಳಿದರು, ದೇವರು ದಯಾಳು. ನಿಮ್ಮ ತಂದೆಯ ಅಂದಿನ ಸಂಬಳದ ಮೊತ್ತ ಬೆಳ್ಳಿ ನಾಣ್ಯಗಳಲ್ಲಿ ಕೂಡಿಸಿ, ಒಂದು ಹೊಸ ಖಣದಲ್ಲಿ ಕಟ್ಟಿಟ್ಟು, ದೇವರ ಮುಂದೆ ಇಟ್ಟು, ನನಗೆ ಕೆಲಸ ಸಿಕ್ಕ ಮೇಲೆ ಈ ಹಣ ನಾನು ತಂದು ಹುಂಡಿಯಲ್ಲಿ ಹಾಕುವೆ ಎಂದು ಬೇಡಿಕೋ ನಿನಗೆ ಕೆಲಸ ದೊರೆಯುವುದು ಎಂದು. ನಾನು ಹಾಗೇ ಮಾಡಿದೆ. ಒಂದು ವಾರದಲ್ಲಿ ನನಗೆ ಮುಂಬೈಯ ಖಾಲ್ಸಾ ಕಾಲೇಜಿನಿಂದ ಸಂದರ್ಶನಕ್ಕೆ ಬರಲು ತಂತಿ ಬಂತು. ಕೆಲಸವೂ ದೊರೆಯಿತು. ದೀಪಾವಳಿಯ ರಜೆಯಲ್ಲಿ ತಿರುಪತಿ ಯಾತ್ರೆ ಕೈಕೊಂಡು, ನನ್ನ ತಂದೆಯವರ ಸಂಬಳ, ಅದಕ್ಕೆ ಬಡ್ಡಿಯಾಗಿ ನನ್ನ ಪ್ರಥಮ ತಿಂಗಳ ಸಂಬಳ ಸೇರಿಸಿ, ಹುಂಡಿಯಲ್ಲಿ ಹಾಕಿಬಂದೆ.

ಬೇಂದ್ರೆಯವರ ಬಗ್ಗೆ ನಾನು ಹಿಂದೆ ಬರೆದ ಒಂದು ಪದ್ಯದ ಕೆಲವು ಸಾಲುಗಳು ಹೀಗಿವೆ:

ಗುರುತರದ ಸಂಬಂಧ ಜನ್ಮಜನ್ಮದ ಮೈತ್ರಿ,

ಕನಸಿನಲಿ, ಮನಸಿನಲಿ ಕೇಳ್ದೆ ತವ ಗಾಯತ್ರಿ

ರುಧಿರ ಸಂಬಂಧವನು ಮೀರಿರುವ ಬಂಧ,

ನೀನು ಗುರು ಅನುಭಾವಿ, ನಾನು ಕರು ಜೀವಿ

ಬೇಂದ್ರೆಯವರು ನನ್ನಿಂದ ಕವನ ಬರೆಸಿದ್ದಾರೆ. ಕನಸಿನಲ್ಲಿ ಹಲವಾರು ಸಲ ಬಂದು ಮಾರ್ಗದರ್ಶನ ಮಾಡಿದ್ದಾರೆ. ಗುರುಗಳು ತಾಯಿಯಸ್ಥಾನದಲ್ಲಿರುತ್ತಾರೆ. ಅವರು ಶಿಷ್ಯನಿಗೆ ಎರಡನೆಯ ಜನ್ಮವನ್ನು ಕೊಡುತ್ತಾರೆ. ಅದಕ್ಕೆ ಗುರುಮಾವುಲಿ ಎಂದು ಸಂತರನ್ನು ಮಾರಾಠಿಯಲ್ಲಿ ಸಂಬೋಧಿಸುತ್ತಾರೆ. ಬೇಂದ್ರೆಯವರ ಬಗ್ಗೆ ಬರೆದ ಒಂದು ದಶಪದಿಯಿಂದ ಈ ಲೇಖನ ಮುಗಿಸುವೆ.

ಬೇಂದ್ರೆ ಅಂದ್ರ ಕನ್ನಡ, ಬೇಂದ್ರೆ ಅಂದ್ರ ಕನ್ನಡಿ

*

ಕನ್ನಾಡ್ಯಾಗ ಕಾಣೋದು ನಿಮ್ಮದೇ ಮುಖ

ಬಾಯಾಗ ಕಲ್ಲುಸಕ್ಕರಿ ಎಂಥ ಸುಖ

*

ಬೇಂದ್ರೆ ನಿಂತ ತಾಣ, ಗಂಗಾವತರಣ

ಬೇಂದ್ರೆ ಕಂಡ ಕೆರಿ, ಸಾಧನಕೇರಿ

ಬೇಂದ್ರೆ ಕಾವ್ಯಕೆ ಸರಿಕಾಣೆ, ಅದು ರುದ್ರವೀಣೆ

*

ಬೇಂದ್ರೆ ತಂತಿಯ ಮೀಂಟಲು ಎಂಟೆದೆಯೇ ಬೇಕು

ಅಳೆಯಲು ಬೇಂದ್ರೆ ಗತ್ತು, ಬೇಕು ತಾಕತ್ತು

ಶಬ್ದಕ್ಕೆ ಮಂತ್ರ ಹಾಕಿದ, ಇವನೊಬ್ಬ ಗಾರುಡಿಗ

ನಮ್ಮ ನಡುವೆ ಇದ್ದ, ಇದೆ ನಮ್ಮ ಬಾಳಿನ ಸೋಜಿಗ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
January 31, 2010 is celebrated as kannada poet dara bendre's 115th birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more