ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೋಪಕಾರಾರ್ಥಮಿದಂ ಶರೀರಂ

By * ಡಾ| 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Help in need is help indeed
ಇನ್ನೊಬ್ಬರಿಗೆ ಸಹಾಯ ಮಾಡಬೇಕು, ಕಷ್ಟದಲ್ಲಿರುವವರಿಗೆ ನಮ್ಮ ಕೈಲಾದಮಟ್ಟಿಗೆ ಸಹಕಾರ ನೀಡಬೇಕು. ಪರೋಪಕಾರಾರ್ಥಮಿದಂ ಶರೀರಂ ಎಂದು ನನ್ನ ಗುರುಗಳು ನನಗೆ ಬಾಲ್ಯದಲ್ಲೇ ನೀತಿಪಾಠ ಕಲಿಸಿದ್ದರು. ಪರೋಪಕಾರದಿಂದ ಪುಣ್ಯ ಬರುತ್ತದೆ, ಪರಪೀಡನದಿಂದ ಪಾಪ ಬರುತ್ತದೆ ಎಂದೂ ಹೇಳುತ್ತಿದ್ದರು. ನಾನು ಬಾಲ್ಯದಿಂದ ಕಷ್ಟಗಳ ಮಧ್ಯದಲ್ಲೇ ಬೆಳೆದೆ. ಸ್ವಾರ್ಥವಿಲ್ಲದ ವೃಕ್ಷಗಳಂತೆ ನನ್ನೆಡೆಗೆ ಹಲವಾರು ವ್ಯಕ್ತಿಗಳು ಸಹಾಯದ ಹಸ್ತ ಚಾಚಿದ್ದರು. ಅವರ ಪ್ರೀತಿ-ಸ್ನೇಹಗಳ ಸ್ನಿಗ್ಧಛಾಯೆಯಲ್ಲಿ ನಾನು ಬೆಳೆದೆ. ನನಗೆ ಸಹಾಯ ಮಾಡಿದವರನ್ನು ನಾನೆಂದೂ ಮರೆತಿಲ್ಲ.

ಕೃತಜ್ಞತೆ ಬಹಳ ಮಹತ್ವದ್ದು. ಕೃತಘ್ನರಿಗೆ ಲೋಕದಲ್ಲಿ ಸ್ಥಾನಮಾನವಿಲ್ಲ. ಕೃತಘ್ನರ ಬಗ್ಗೆ ಮಹಾಭಾರತದಲ್ಲಿ ಒಂದು ಕುತೂಹಲಕಾರಿ ಪ್ರಸಂಗವಿದೆ. ಒಬ್ಬ ಕೀಳು ಜಾತಿಯವ ಶ್ಮಶಾನದ ಬದಿಯ ಪಥದಲ್ಲಿ ಮಾಂಸವನ್ನು ಬೇಯಿಸುತ್ತಿದ್ದ. ಅವನು ಬೇಯಿಸುವ ಪಾತ್ರೆ ನರಕಪಾಲ (ತಲೆಬುರುಡೆ) ಆಗಿತ್ತು. ಅವನು ಬಳಸಿದ್ದು ನೀರಲ್ಲ, ಮದಿರೆಯಾಗಿತ್ತು. ವ್ಯಕ್ತಿ ಕೀಳಾಗಿದ್ದ, ಸ್ಥಾನ ಕೀಳಾಗಿತ್ತು, ಪಾತ್ರೆ ಕೀಳಾಗಿತ್ತು, ಅಡುಗೆಮಾಡುವ ಪದಾರ್ಥ ಕೀಳಾಗಿತ್ತು. ಅದೇ ಪಥದಲ್ಲಿ ಒಬ್ಬ ಉಚ್ಚಕುಲದವ ಹಾಯ್ದು ಹೋಗುತ್ತಿದ್ದ. ಅವನ ಕಲುಷಿತ ನೆರಳು ತಮ್ಮ ಅಡಿಗೆಯ ಪಾತ್ರೆಯಮೇಲೆ ಬೀಳಬಾರದೆಂದು ಆ ವ್ಯಕ್ತಿ ಬೇಯಿಸುವ ಪಾತ್ರೆಯಯನ್ನು ಒಂದು ಸಾಧನದಿಂದ ಮುಚ್ಚಿದ. ಆ ಸಾಧನ ಕೂಡ ಕೀಳಾಗಿತ್ತು. ಅದು ಅವನದೇ ಚರ್ಮದ ಪಾದರಕ್ಷೆಯಾಗಿತ್ತು. ಅಲ್ಲಿ ಹಾಯ್ದು ಹೋಗುತ್ತಿದ್ದ ವ್ಯಕ್ತಿ ಉಚ್ಚಕುಲದವನಾಗಿದ್ದ. ಆದರೆ ಆ ವ್ಯಕ್ತಿ ಕೃತಘ್ನನಾಗಿದ್ದ! ಅವನ ನೆರಳು ಅಂಥ ಆಹಾರವನ್ನೂ ಕಲುಷಿತಗೊಳಿಸುತ್ತಿತ್ತು ಎಂಬ ಉತ್ಪ್ರೇಕ್ಷೆ ಈ ಕಥಾನಕದಲ್ಲಿದೆ.

ಸರ್ವಜ್ಞನ ವಚನವೊಂದನ್ನು ಸದಾ ನನ್ನ ತಂದೆ ಉದ್ಧರಿಸುತ್ತಿದ್ದರು. ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟಿದ್ದು ಕೆಟ್ಟಿತೆನಬೇಡ | ಅದುಮುಂದೆ | ಕಟ್ಟಿಹುದು ಬುತ್ತಿ ಸರ್ವಜ್ಞ. ಇನ್ನೊಬ್ಬರಿಗೆ ಸಹಾಯ ಮಾಡಬೇಕಾದರೆ ನಾವು ಬಹಳ ದೊಡ್ಡ ತ್ಯಾಗ ಮಾಡಬೇಕಾಗಿಲ್ಲ. ನಿಮಗೆ ಸಹಾಯ ಮಾಡುವ ಶಕ್ತಿ ಇಲ್ಲದಿದ್ದರೆ ಇನ್ನೊಬ್ಬರಿಂದ ಸಹಾಯ ಮಾಡಿಸಬಹುದಲ್ಲ. ವಚನೇ ಕಿಂ ದರಿದ್ರತಾ? ಹಲವು ವರ್ಷಗಳ ಹಿಂದೆ ನಮ್ಮ ಆಪ್ತರ ಮಗಳ ಮದುವೆಯಲ್ಲಿ ಸಂಬಂಧಿಕರೆಲ್ಲ ಹುಬ್ಬಳ್ಳಿಯಲ್ಲಿ ಸೇರಿದ್ದೆವು. ನನ್ನ ತಂಗಿ ನನಗೆ ಕೇಳಿದಳು, ನಿನಗೆ ಮುಂಬೈಯಲ್ಲಿ ದೊಡ್ಡ ಜನರ ಪರಿಚಯವಿದೆ. ಒಬ್ಬ ಬಡ ವಿದ್ಯಾರ್ಥಿಗೆ ಧನಸಹಾಯ ಮಾಡಿಸಬಹುದೇ? ಎಂದು. ಅವಳ ಮನೆಯ ಕಸಮುಸುರೆ ಮಾಡುವವಳ ಮಗನಿಗೆ ಧಾರವಾಡದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಕಲಿಯಲು ಸೀಟು ದೊರೆತಿತ್ತು. ಆ ಹುಡುಗ ಕಾಲೇಜಿಗೆ ನಡೆಯುತ್ತ ಹೋಗುತ್ತಿದ್ದ. ಬಸ್‌ನಲ್ಲಿ ಹೋಗಲು ಹಣವಿರಲಿಲ್ಲ. ಇಡೀ ದಿನ ಕಾಲೇಜಿನಲ್ಲಿ ಇರುತ್ತಿದ್ದ. ಮಧ್ಯಾಹ್ನ ಕ್ಯಾಂಟೀನಿನಲ್ಲಿ ಅಲ್ಪೋಪಹಾರ ಮಾಡಲು ಕೂಡ ಅವನ ಬಳಿ ಹಣವಿರಲಿಲ್ಲ. ಅವನಿಗೆ ತಿಂಗಳಿಗೆ 100 ರೂಪಾಯಿ ಪಾಕೆಟ್-ಮನಿಯ ಅವಶ್ಯಕತೆಯಿತ್ತು. ಅವನ ಅಂತಿಮ ವರ್ಷದ ಪರೀಕ್ಷೆ ಹತ್ತು ತಿಂಗಳು ಬಾಕಿ ಇತ್ತು. ಹತ್ತು ತಿಂಗಳಿಗೆ ಒಟ್ಟು ಒಂದು ಸಾವಿರ ರೂಪಾಯಿ ಸಹಾಯಧನ ಬೇಕಾಗಿತ್ತು. ಯಾರಿಂದಾದರೂ ಕೊಡಿಸಲು ಸಾಧ್ಯವೇ? ಎಂದು ನನ್ನ ತಂಗಿ ಕೇಳಿದಳು.

ಸಾವಿರ ರೂಪಾಯಿ ದೊಡ್ಡ ಹಣವೇನಲ್ಲ. ನಾನು ಮುಂಬೈಗೆ ಹೋಗಿ ಕಳಿಸುವ ಅವಶ್ಯಕತೆ ಇಲ್ಲ. ಇವತ್ತೇ ನಿನಗೆ ಆ ಹಣ ಕೊಡಿಸುವೆ ಎಂದೆ. ಒಂದು ಫುಲ್‌ಸ್ಕೇಪ್ ಕಾಗದವನ್ನು ತೆಗೆದುಕೊಂಡೆ. ಬಡವಿದ್ಯಾರ್ಥಿಗೆ ಆರ್ಥಿಕ ಸಹಾಯ ಎಂದು ಮೇಲೆ ಬರೆದೆ. ಕೆಳಗೆ ಹತ್ತು ಅಂಕಿ ಕ್ರಮವಾಗಿ ಬರೆದೆ, ಮೊದಲು ನನ್ನ ಹೆಸರು ಹಾಕಿ ಮುಂದೆ ರೂ.100, ಎಂದು ಬರೆದೆ. ಎರಡನೆಯ ಹೆಸರು ನನ್ನ ಮುಂಬೈ ಷಡ್ಡುಕ ರಾಮರಾಯರ ಹೆಸರು ಹಾಕಿದೆ. ಅವರ ಮಗನ ಮದುವೆ ನಡೆದಿತ್ತು. ಅವರು ಮರು ಮಾತಾಡದೇ ನೂರು ರೂಪಾಯಿ ಕೊಟ್ಟರು. ಅವರ ಕರ್ನಾಟಕದ ಅಳಿಯ ಶ್ರೀನಿವಾಸ ಬಂದು ಏನಿದು ಎಂದು ಕೇಳಿದ, ಆ ಕಾಗದ ಮುಂದೆ ಹಿಡಿದೆ. ಅವನೂ ನೂರು ರೂಪಾಯಿ ಕೊಟ್ಟ. ಅವರ ಆಂಧ್ರದ ಅಳಿಯ ರಾಮೂ, ತಮಿಳುನಾಡಿನ ಅಳಿಯ ಗುರುಮೂರ್ತಿ ಇದೇನು ಎಂದು ಕೇಳಿದರು. ಧನಾತ್ಮಕವಾಗಿ ಸ್ಪಂದಿಸಿದರು. ಕೇವಲ ಐದು ನಿಮಿಷಗಳಲ್ಲಿ 1000 ರೂಪಾಯಿ ಸಂಗ್ರಹವಾಯಿತು. ನನ್ನ ತಂಗಿಗೆ ಆ ಹಣ ಕೊಟ್ಟೆ. ಅವಳಿಗೋ ಮಹದಾಶ್ಚರ್ಯ. ಹಣವನ್ನು ಅವಳ ಕೈಯಲ್ಲಿರಿಸಿ ನಾನು ಅವಳಿಗೆ ಹೇಳಿದೆ. ಒಮ್ಮೆಲೇ ಎಲ್ಲ ಹಣ ನಿನ್ನ ಕೆಲಸದವಳ ಮಗನಿಗೆ ಕೊಡಬೇಡ. ಪ್ರತಿ ತಿಂಗಳು ಒಂದು ನೂರು ರೂಪಾಯಿ ಕೊಡುತ್ತಿರು. ಹತ್ತು ತಿಂಗಳು ಮುಗಿದಮೇಲೆ, ಆ ಹುಡುಗನನ್ನು ಕರೆದು, ಹತ್ತು ಜನ ಸಹಾಯ ಮಾಡಿದವರಿಗೆ ಪರೀಕ್ಷೆಯ ಫಲಿತಾಂಶ ಬಂದಮೇಲೆ ಒಂದು ಪೋಸ್ಟ್‌ಕಾರ್ಡ್ ಬರೆಯಲು ಹೇಳು ಎಂದೆ. ಧನ ಸಹಾಯ ಮಾಡಿದವರ ಹೆಸರು, ವಿಳಾಸದ ವಿವರ ಕೂಡ ಕೊಟ್ಟೆ. ಮುಂದೆ ಆ ಹುಡುಗ ಪ್ರಥಮ ದರ್ಜೆಯಲ್ಲಿ ಪಾಸಾದ. ನನಗೆ ಅವನ ಕಾರ್ಡು ಬಂತು. ನನ್ನ ಸಂಬಂಧಿಕರಿಗೆಲ್ಲ ಅವನ ಕೃತಜ್ಞತಾಪೂರ್ವಕ ಕಾರ್ಡ್ ಬಂದಿತ್ತು. ನಮಗೆಲ್ಲರಿಗೂ ಆಶ್ಚರ್ಯವಾಗಿತ್ತು, ಆನಂದವೂ ಆಗಿತ್ತು.

ಇತ್ತೀಚೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ಸುಮಾರು ಒಂದು ಲಕ್ಷದಷ್ಟು ಫೀ ತುಂಬಬೇಕಾಗಿತ್ತು. ಕೆಲವು ಮಿತ್ರರಿಂದ ಐವತ್ತು ಸಾವಿರ ಕೊಡಿಸಿದ್ದೆ. ನಾನು ಸಂಕಲ್ಪಿಸಿದ್ದು ಅರ್ಧಕ್ಕೇ ನಿಂತಿತ್ತು. ಆ ಸಂದರ್ಭದಲ್ಲಿ ಕುಮಾರ ಎಂಬ ವಿದ್ಯಾರ್ಥಿಯ ನೆನಪಾಯ್ತು. ಅವನು ದೊಡ್ದ ಕೆಲಸದಲ್ಲಿದ್ದ. ನಾನು ವಿದ್ಯಾರ್ಥಿನಿಯ ಬಗ್ಗೆ ಹೇಳಿದೆ. ತನ್ನ ಪರಿಚಯದ ಒಂದು ಟ್ರಸ್ಟಿನಿಂದ 25 ಸಾವಿರ ಕೊಡಿಸುವುದಾಗಿ ಹೇಳಿದ. ಅವಳಿಂದ ಒಂದು ಅರ್ಜಿ ಬರೆಸಿ ಕಳಿಸಿದೆ. ಜೊತೆಗೆ ನಾನೂ ಒಂದು ಶಿಫಾರಸು ಪತ್ರ ಬರೆದೆ. ಅದರಲ್ಲಿ 50 ಸಾವಿರದ ಕೊರತೆ ಇದೆ. ಅರ್ಧದಷ್ಟು ಕೊಟ್ಟರೂ ಸಾಕೆಂದು ಬರೆದಿದ್ದೆ. ಟ್ರಸ್ಟಿನ ಮೀಟಿಂಗಿನಲ್ಲಿ ಅವನೂ ಇದ್ದ. ಶಿಫಾರಸು ಮಾಡಿದವರಾರು? ಎಂದು ಕೇಳಿದರು. ಅವರು ನನ್ನ ಗುರುಗಳು ಎಂದ. ತನ್ನ ಗುರುಭಕ್ತಿಯನ್ನು ಪ್ರದರ್ಶಿಸಿದ. ಪರಿಣಾಮ, ಐವತ್ತು ಸಾವಿರದ ಸಹಾಯ ಧನದ ಚೆಕ್ ಬಂತು.

ಇದು ಕಟ್ಟು ಕತೆಯಲ್ಲ. ವಾಸ್ತವ ಸತ್ಯ. ಕಷ್ಟದಲ್ಲಿ ಇರುವ ಪರಿಚಯಸ್ಥರಿಗೆ, ಸಂಬಂಧಿಕರಿಗೆ ಸಹಾಯ ಮಾಡಲು ಮುಂದೆ ಬರಬೇಕು. ಹತ್ತು ಕಡೆ ಪತ್ರ ಬರೆಯಬೇಕು, ಕೆಲವರಾದರೂ ಸಕ್ರಿಯವಾಗಿ ಉತ್ತರಿಸುತ್ತಾರೆ. ಹೀಗೆ ಸಹಾಯ ಮಾಡುವಾಗ, ಗೀತೆಯ ಮಾತು ನೆನಪಿನಲ್ಲಿಟ್ಟುಕೊಳ್ಳುವುದು ಯೋಗ್ಯ. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ. ಕೆಲವು ಸಂಸ್ಥೆಗಳು ಲೋನ್ ಸ್ಕಾಲರಶಿಪ್ ಕೊಡುತ್ತವೆ. ಎಷ್ಟೋ ಸಲ ಸಾಲ ಪಡೆದವರು ಮರಳಿ ಕೊಡುವದಿಲ್ಲ. ಮಧ್ಯಸ್ಥರಿಗೆ ಅದರಿಂದ ತಲೆಶೂಲೆ ಉಂಟಾಗುತ್ತದೆ. ಆದ್ದರಿಂದ ಸಹಾಯ ಮಾಡುವಾಗ ಮರಳಿ ಪಡೆಯುವ ಕಂಡಿಶನ್ ಇಲ್ಲದಿದ್ದರೆ ಒಳ್ಳೆಯದು. ಒಂದು ಮಾತು ಇದೆ, ಸಹಾಯ ಪಡೆದವರಿಗೆ ಒಂದು ಆಪ್ತಸಲಹೆ ನೀಡಬೇಕು, ಮುಂದೆ ನೀವು ಜೀವನದಲ್ಲಿ ಯಶಸ್ವಿಯಾದಾಗ, ಯಾರೇ ನಿಮ್ಮ ಕಡೆಗೆ ಸಹಾಯ ಕೇಳಲು ಬಂದಾಗ, ಅವರನ್ನು ಬರಿಗೈಯಿಂದ ಕಳಿಸಬೇಡಿ ಎಂದು. ಸೇವೆ ಮಾಡುವುದು ನಾವು ಈ ಭೂಮಿಯಲ್ಲಿ ವಾಸಿಸುವುದಕ್ಕೆ ನಾವು ಸಲ್ಲಿಸಬೇಕಾದ ಬಾಡಿಗೆ ಎಂದು ಒಬ್ಬ ಅಮೇರಿಕನ್ ಲೇಖಕಿ ಹೇಳಿದ್ದಾಳೆ.(“Service is the rent we pay for the privilege of living on this earth"- Shirley Chisholm).

ಇನ್ನೊಬ್ಬರಿಗೆ ಸಹಾಯ ಮಾಡಬೇಕು ನಿಜ, ಕೆಲಸಲ ಅವರು ಮೋಸ ಮಾಡಬಹುದಲ್ಲಿ ಎಂಬ ಚಿಂತೆ ಹಲವರನ್ನು ಕಾಡುತ್ತದೆ. ಈ ವಿಷಯದಲ್ಲಿ ನಾನು ನನ್ನ ಆತ್ಮೀಯರೂ ಹಿತೈಷಿಗಳೂ ಆಗಿದ್ದ ಜಸ್ಟಿಸ್ ಜಮಖಂಡಿಯವರ ತತ್ವವನ್ನು ಅನುಸರಿಸುತ್ತೇನೆ. ನಾನು ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗ ಜಮಖಂಡಿ ಕಂಪೌಂಡ್‌ನಲ್ಲಿ, ಅವರ ಔಟ್‌ಹೌಸ್‌ನಲ್ಲಿ ಬಾಡಿಗೆ ಮನೆ ಪಡೆದಿದ್ದೆ. ಜಸ್ಟಿಸ್ ಗುರುರಾವ ಜಮಖಂಡಿಯವರು ಮನೆಯ ಮಾಲೀಕರು. ಅವರು ಗುರುದೇವ ರಾನಡೆಯವರ ಶಿಷ್ಯರಾಗಿದ್ದರು. ಬಹಳ ಆತ್ಮೀಯರಾಗಿದ್ದರು. ಯಾರಾದರೂ ಅವರಿಗೆ ಸಾಲ ಕೇಳಲು ಬಂದರೆ ಅವರು ತಮ್ಮ ಕೈಲಾದ ಹಣ ಕೊಟ್ಟು, ಇದು ಸಾಲವಲ್ಲ, ಸಹಾಯಧನ. ಇದನ್ನು ನೀವು ಮರಳಿ ಕೊಡಬೇಕಾಗಿಲ್ಲ ಎನ್ನುತ್ತಿದ್ದರು. ನಾನೂ ಅವರ ತತ್ವ ಅನುಸರಿಸಿ ಕೆಲವರಿಗೆ ಧನಸಹಾಯ ಮಾಡಿದ್ದೇನೆ. ಒಂದೆರಡು ಉದಾಹರಣೆ ಕೊಡಬಹುದು. ಚೀನಾಯ್ ಕಾಲೇಜಿನಲ್ಲಿ ನನ್ನ ಸಹ ಪ್ರಾಧ್ಯಪಕರಾಗಿದ್ದ ಒಬ್ಬರು ಫಿಲ್ಮ್ ಇನ್‌ಸ್ಟಿಟ್ಯೂಟ್ ಸೇರಿ ಸಿಮೆಟೋಗ್ರಾಫರ್ ಆದರು. ಅಗಾಗ ನಮ್ಮ ಮನೆಗೆ ಬರುತ್ತಿದ್ದರು. ಸಾಹಿತ್ಯದಲ್ಲಿ ಅವರಿಗೆ ಅಪಾರ ಪ್ರೀತಿ. ಅವರು ರೇಕಿ ಮಾಡಿದ್ದರು. ಇನ್ನೊಬ್ಬರಿಗೆ ಹೀಲ್ ಮಾಡಲು ಹೋಗಿ ಎನೋ ಲೆಕ್ಕ ತಪ್ಪಿ ತಾವೇ ಆಸ್ಪತ್ರೆ ಸೇರಿದ್ದರು. ಒಂದು ದಿನ ಮುಂಜಾನೆ ಮನೆಗೆ ಬಂದು ಹತ್ತು ಸಾವಿರ ಸಾಲ ಕೊಡಲು ಹೇಳಿದರು. ಎಂಟು ದಿನಗಳಲ್ಲಿ ಮರಳಿಕೊಡುವುದಾಗಿ ವಚನವಿತ್ತರು. ಆದರೆ ನನಗೆ ಜಸ್ಟಿಸ್ ಜಮಖಂಡಿಯವರ ನೆನಪಾಯಿತು. ಒಂದು ಸಾವಿರ ರೂಪಾಯಿ ಕೊಟ್ಟೆ. ಇದನ್ನು ಮರಳಿ ಕೊಡಬೇಕಾಗಿಲ್ಲವೆಂದೆ. ನನಗೆ ಚಾರಿಟಿ ಬೇಡ, ನಿಮಗೆ ಇದನ್ನು ಖಾತ್ರಿ ಮರಳಿ ಕೊಡುವೆ ಎಂದ ಆ ಪುಣ್ಯಾತ್ಮ. ಆ ಮಾತಿಗೆ ಹಲವು ವರ್ಷಗಳೇ ಕಳೆದವು. ಅವನ ಪತ್ತೆ ಇಲ್ಲ. ಇನ್ನೊಬ್ಬ ಕೇರಳದ ಪ್ರಾಧ್ಯಾಪಕ ಮಿತ್ರ ಹತ್ತುಸಾವಿರ ಸಾಲ ಕೇಳಲು ಬಂದ. ಮೂರು ಸಾವಿರ ಮಾತ್ರ ಕೊಟ್ಟೆ. ಅದು ಇನ್ನೂ ವಾಪಸ್ ಬರಲಿಲ್ಲ. ನನ್ನ ಉದಾರ ಬುದ್ಧಿಗೆ ದಡ್ಡತನ ಎಂದು ಅರ್ಧಾಂಗಿಯಿಂದ ಬೈಸಿಕೊಂಡಿದ್ದೇನೆ. ಆದರೆ ನನಗೆ ಬೇಸರವಿಲ್ಲ.

ಸಾಲವನು ಕೊಂಬಾಗ ಹಾಲೋಗರುಂಡಂತೆ | ಸಾಲಿಗರು ಬಂದು ಕೇಳಲು ಆಗ ಅದು ಕಿಬ್ಬದಿಯ ಕೀಲ ಮುರಿದಂತೆ ಎಂದು ಸರ್ವಜ್ಞ ಹೇಳಿದ ನೆನಪು. ಶೇಕ್ಶ್‌ಪಿಯರ್ ತನ್ನ ಹ್ಯಾಮ್ಲೆಟ್ ನಾಟಕದಲ್ಲಿ ಸಾಲ ಕೊಡಲೂ ಬೇಡ, ಸಾಲ ಪಡೆಯಲೂ ಬೇಡ ಎಂದು ಒಂದು ಪಾತ್ರದ (ಪೊಲೊನಿಯಸ್) ಮೂಲಕ ಹೇಳಿಸಿದ್ದಾನೆ. ಸಾಲ ಕೊಡುವಾಗ ಎಚ್ಚರ ಬಹಳ ಮುಖ್ಯ. ಎಷ್ಟೋ ಜನ ಸಾಲಾಗಾರರಿಗೆ ಶುವರ್ಟಿ (ಜಾಮೀನುದಾರ) ಆಗಿ ಪರಿಪರಿಯ ಕಷ್ಟ ಅನುಭೋಗಿಸಿದ್ದಾರೆ. ಆದ್ದರಿಂದ ಇನ್ನೊಬ್ಬರಿಗೆ ಸಹಾಯ ಮಾಡುವವರು ಕೆಲವು ಮುನ್ನೆಚ್ಚರಿಕೆಗಳನ್ನೂ ಪಾಲಿಸಬೇಕಾದೀತು. ಆದರೆ ಕಷ್ಟದಲ್ಲಿದ್ದವರಿಗೆ ಸಕಾಲದಲ್ಲಿ ಮಾಡಿದ ಸಹಾಯ ಎಂದರೆ ಅವರ ಯಶಸ್ಸಿನ/ಭಾಗ್ಯದ ಬಾಗಿಲು ತೆರೆದಂತೆ. ಅದರ ಕ್ರೆಡಿಟ್ ನೀವೇ ಯಾಕೆ ಪಡೆಯಬಾರದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X