ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಅನುಭವ ಕೊಡುವ ಮಣಿಕಾಂತ್ ಪುಸ್ತಕ

|
Google Oneindia Kannada News

AR Manikanths book review
ಎಆರ್ ಮಣಿಕಾಂತ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಸಾಕಷ್ಟು ಚರ್ಚಿತವಾಗಿದೆ, ಮಾರಾಟದಲ್ಲಿ ದಾಖಲೆಯನ್ನೂ ಸೃಷ್ಟಿಸಿದೆ. ಪ್ರತಿಬಾರಿ ಓದಿದಾಗಲೂ ಹೊಸತೊಂದು ಅನುಭವದ ಪರಿಚಯ ಮಾಡಿಕೊಡುತ್ತದೆ. ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ನಮ್ಮ ಮನ ಮುಟ್ಟುತ್ತವೆ, ಬೆನ್ನು ತಟ್ಟುತ್ತವೆ, ಹೃದಯ ಮಿಡಿಯುತ್ತವೆ.

* ಡಾ| 'ಜೀವಿ' ಕುಲಕರ್ಣಿ

ಅಮ್ಮ ಹೇಳಿದ ಎಂಟು ಸುಳ್ಳುಗಳು ಎಂಬ ಎ.ಆರ್. ಮಣಿಕಾಂತ ಅವರ ಪುಸ್ತಕವನ್ನು ನಾನು ಪ್ರವಾಸದಲ್ಲಿದ್ದಾಗ (ಹುಬ್ಬಳ್ಳಿಯಲ್ಲಿ) ನೋಡಿದೆ. (ನೀಲಿಮಾ ಪ್ರಕಾಶನ, ನಂ.೬೮೯, ೫ನೆಯ ಮುಖ್ಯ, 8ನೆಯ ಅಡ್ಡ ರಸ್ತೆ, ಕೆಂಗೇರಿ, ಬೆಂಗಳೂರು-60). ಒಂದು ಒಳ್ಳೆಯ ವಸ್ತುವನ್ನು ಬೇಡಿತಂದು, ಕೊಂಡುತಂದು, ಕಡತಂದು, ಕದ್ದು (beg, buy, borrow or steal) ಪಡೆಯಬೇಕು ಎನ್ನಲಾಗುತ್ತದೆ. ಒಳ್ಳೆಯ ಪುಸ್ತಕದ ವಿಷಯಕ್ಕೂ ಈ ಮಾತು ಅನ್ವಯಿಸುತ್ತದೆ.

ನಾನು ಮಣಿಕಾಂತ ಅವರನ್ನು ನೋಡಿಲ್ಲ. ಅವರ ಲೇಖನಗಳನ್ನು ಇಂಟರ್‌ನೆಟ್‌ನಲ್ಲಿ (ದ್ಯಟ್ಸ್‌ಕನ್ನಡ.ಒನ್‌ಇಂಡಿಯಾ.ಇನ್)ದಲ್ಲಿ ಆಗಾಗ ಓದಿದ್ದೇನೆ. ಒಂದೇಸಲ 35 ಲೇಖನಗಳನ್ನು ಓದುವ ಅವಕಾಶ ದೊರೆಯಿತು ಎಂಬ ಸಂತಸ ನನಗೆ. ಅವರು ಕನ್ನಡ ದಿನಪತ್ರಿಕೆಯಲ್ಲಿ ಹಲವಾರು ಅಂಕಣ ಬರೆಯುತ್ತಾರೆ ಎಂದು ಕೇಳಿದ್ದೇನೆ. ಮುಂಬೈವಾಸಿಯಾದ ಕಾರಣ ನನಗೆ ಅವನ್ನೆಲ್ಲ ಓದುವ ಅವಕಾಶವಿಲ್ಲ.

ಪ್ರಸ್ತುತ ಪುಸ್ತಕದಲ್ಲಿರುವ 35 ಲೇಖನಗಳಲ್ಲಿ ಎಲ್ಲವೂ ಕತೆಗಳಲ್ಲ. ಕೆಲವು ನಂಬಹುದಾದಂತಹ ಕಲ್ಪನೆಗಳು, ಕೆಲವು ನಂಬಲಾರದಂತಹ ಸತ್ಯ ಕಥೆಗಳು, ಕೆಲವು ಹರಟೆಗಳು, ಒಂದು 'ಎಪ್ರಿಲ್ ಫೂಲ್' ನಿಮಿತ್ತ ಬರೆದ ಕಥೆ. ಈ ಪುಸ್ತಕದ ಅರ್ಪಣೆ ವೈಶಿಷ್ಟ್ಯಪೂರ್ಣವಾಗಿದೆ. (ಅಪ್ಪನಂಥ ಧೈರ್ಯದ ಅಮ್ಮನಿಗೆ | ಅಮ್ಮನಂತೆಯೇ ಬೆಳೆಸಿದ ಅಪ್ಪನಿಗೆ). ಈ ಲೇಖಕರೇ ಒಂದು ವಿಸ್ಮಯಕಾರಿ ಕಥೆಗೆ ವಿಷಯ ಆಗಬಲ್ಲರು. ಇವರು ಕಲಿತದ್ದು ಇಂಜಿನಿಯರಿಂಗ್(ಆಟೊಮೊಬೈಲ್). ಪ್ರವೃತ್ತಿ ಲೇಖನ ಬರೆವ ಹವ್ಯಾಸ. ವೃತ್ತಿಯಿಂದ ಪತ್ರಕಾರರು. ಅವರ ಜೀವನದಲ್ಲಾದ ಬದಲಾವಣೆ ಒಂದು ಕತೆಗೆ ವಸ್ತುವಾಗಬಲ್ಲದು.

ಅವರ ಲೇಖನದ ವೈಶಿಷ್ಟ್ಯವೆಂದರೆ ಅವು ಸಕಾರಾತ್ಮಕವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತವೆ, ಹೊಸ ಬೆಳಕು ಚೆಲ್ಲುತ್ತವೆ, ನಮ್ಮ ತಪ್ಪು ನಿರ್ಧಾರಗಳನ್ನು ಬದಲಿಸಲು ಸಹಕರಿಸುತ್ತವೆ. ನಮ್ಮ ಸಂಸ್ಕೃತಿಯಲ್ಲಿ ತಾಯಿ ಮೊದಲ ದೇವರು, ನಂತರ ತಂದೆ ಹಾಗೂ ಗುರುಗಳ ಸ್ಥಾನವಿದೆ. ನವ ನಾಗರಿಕತೆಯ ಪ್ರಭಾವಕ್ಕೆ ಸಿಲುಕಿ ತಂದೆತಾಯಂದಿರನ್ನು ವೃದ್ಧಾಶ್ರಮದಲ್ಲಿಡುತ್ತೇವೆ. ಇವರ ಕತೆ ಓದಿದಮೇಲೆ ನಾವು ನಮ್ಮ ಅಭಿಪ್ರಾಯ ಬದಲಿಸಬೇಕಾಗುವುದು. ಈ ಪುಸ್ತಕಕ್ಕೆ ಮುನ್ನುಡಿ ಬರೆದ ಅನಂತ ಚಿನಿವಾರರು ಈ ಕಥೆಗಳನ್ನು ಇಂಗ್ಲಿಷ್‌ನಲ್ಲಿ ಜನಪ್ರಿಯವಾಗುತ್ತಿರುವ ಚಿಕನ್ ಸೂಪ್ ಫಾರ್ ದಿ ಸೋಲ್' ಕಥೆಗಳಿಗೆ ಹೋಲಿಸಿದ್ದಾರೆ. ಅವರು ಸ್ಫೂರ್ತಿಯನ್ನು ಎಲ್ಲಿಂದಲೇ ಪಡೆದಿರಲಿ, ಇವು ನಮ್ಮ ಮನ ಮುಟ್ಟುತ್ತವೆ, ಬೆನ್ನು ತಟ್ಟುತ್ತವೆ, ಹೃದಯ ಮಿಡಿಯುತ್ತವೆ. ಇಲ್ಲಿಯ ಹೆಚ್ಚಿನ ಪಾತ್ರಗಳು ನಮ್ಮ ಹಿಂದೆಮುಂದೆ ಓಡಾಡುತ್ತವೆ ಎಂದು ಭಾಸವಾಗುತ್ತದೆ.

ಒಂದು ಒಳ್ಳೆಯ ಪುಸ್ತಕ ಓದಿದಾಗ ಅದರಿಂದ ಎಂತಹ ಲಾಭವಾಗುತ್ತದೆ ಎನ್ನಲು ನಾನೊಂದು ಉದಾಹರಣೆ ಕೊಡುತ್ತೇನೆ. ಪ್ರಸಿದ್ಧ ಪತ್ರಕರ್ತ ಎಂ.ವಿ.ಕಾಮತರು ತಮ್ಮ ಆತ್ಮಚರಿತ್ರೆ ಬರೆದಿದ್ದಾರೆ. (A Reporter at Large). ಅದನ್ನು ಭಾರತೀಯ ವಿದ್ಯಾಭವನದವರು ಪ್ರಕಟಿಸಿದ್ದಾರೆ. ಅದನ್ನು ಮಿತ್ರರಾದ ವೈಕುಂಠರಾವ ಸೋಂದೆಯವರು ನನಗೆ ಓದಲು ಕೊಟ್ಟರು. (ಅವರು ಸಿರಸಿಯ ಅರ್ಬನ್ ಕೊ-ಆ-ಬ್ಯಾಂಕಿನ ಚೇರ್‌ಮನ್ನರು, ಹಲವಾರು ವಿದ್ಯಾಸಂಸ್ಥೆಗಳ ಅಧ್ಯಕ್ಷರು). ಕಾಮತರು ತಮ್ಮ ಬಾಲ್ಯದ ಬಗ್ಗೆ ಬರೆಯುತ್ತ ಮಾರ್ಗರೆಟ್ ಆಳ್ವಾ ಅವರ ಅತ್ತೆ ಮಾವಂದಿರ ಬಗ್ಗೆ, ಅವರ ದೇಶಪ್ರೇಮದ ಬಗ್ಗೆ, ಬರೆಯುತ್ತಾರೆ. ಅದನ್ನು ಉದ್ಧರಿಸಿ ಸೋಂದೆಯವರು ಆಗ ಎಂ.ಪಿ.ಆಗಿದ್ದ ಮಾರ್ಗರೆಟ್ ಆಳ್ವಾ ಅವರಿಗೆ ಪತ್ರ ಬರೆದರು. ಆ ಭಾಗದಲ್ಲಿ ಕಾಲೇಜಿಗೆ ದೂರದಿಂದ ಕಲಿಯಲು ವಿದ್ಯಾರ್ಥಿನಿಯರು ಬರುತ್ತಾರೆ. ಅವರಿಗಾಗಿ ಒಂದು ಮಹಿಳಾಹಾಸ್ಟೆಲ್ ಇಲ್ಲವೆಂದು ಎಂ.ಪಿ. ಫಂಡಿನಿಂದ 20 ಲಕ್ಷ ಧನ ಸಹಾಯ ಕೇಳಿದ್ದರು. ಅವರಿಗೆ ಉತ್ತರ ಬಂತು, ಅದರೊಂದಿಗೆ 10 ಲಕ್ಷದ ಚೆಕ್ ಇತ್ತು. ಈ ಸುದ್ದಿ ನಾನು ಮಿತ್ರ ಕಾಮತರಿಗೆ ಹೇಳಿದಾಗ ಅವರಿಗೂ ಅಚ್ಚರಿಯಾಗಿತ್ತು. ಇದನ್ನು ನಂಬುವದು ಕಷ್ಟ, ಆದರೆ ಇದು ಸತ್ಯ.

ಮಣಿಕಾಂತ ಅವರ ಪುಸ್ತಕ ಓದಿದಾಗ ನಿಮಗೂ ಹೊಸ ಅನುಭವ ಬರುವ ಸಾಧ್ಯತೆ ಇದೆ. ಇಲ್ಲಿ ನಂಬಲು ಅಸಾಧ್ಯವಾದ ಸತ್ಯ ಕಥೆಗಳಿವೆ. ತಂದೆಯ ಮಿತ್ರನ ಟ್ರಕ್‌ನಲ್ಲಿ ಕುಳಿತು ಪ್ರವಾಸ ಮಾಡುತ್ತಿದ್ದ ಒಬ್ಬ ಬಡ ಹುಡುಗ (ನಾಗನರೇಶ) ಅಪಘಾತದಲ್ಲಿ ಎರಡು ಕಾಲು ಕಳೆದುಕೊಳ್ಳುತ್ತಾನೆ. ಮುಂದೆ ಹಟತೊಟ್ಟು ಓದಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಾನೆ. ಪಂಗುಂ ಲಂಘಯತೇ ಗಿರಿಂ' ಎಂಬಂತೆ ಇವನ ಸಾಧನೆ ಇತ್ತು. ಅವನು ಏರಿದ ಸಾಧನೆಯ ಶಿಖರ ಕಾಲಿದ್ದ ಮಕ್ಕಳಿಗೂ ಸಾಧ್ಯವಾಗಿರಲಿಕ್ಕಿಲ್ಲ. ಸೈಕಲ್ ರಿಕ್ಷಾ ನಡೆಸುವ ಒಬ್ಬ ಬಡವನ ಮಗ (ನಾರಾಯಣ ಜೈಸ್ವಾಲ್) ಐ.ಎ.ಎಸ್.ಪರೀಕ್ಷೆ ಪಾಸಾದ. ಕೊಳೆಗೇರಿಯಲ್ಲಿ ಬೆಳೆದ ಒಬ್ಬ ಬಡಹುಡುಗ (ಶರದ ಬಾಬು) ಭಾರತದ ಶ್ರೇಷ್ಠ ಮೆನೇಜ್‌ಮೆಂಟ್ ಸಂಸ್ಥೆ(ಐಐಎಂ ಅಹಮದಾಬಾದ್) ಸೇರಿದ, ದ್ವಿತೀಯ ಸ್ಥಾನ ಪಡೆದ, ತಿಂಳಿಗೆ ಒಂದೆರಡು ಲಕ್ಷ ವರಮಾನ ಕೊಡುವ ಮಲ್ಟೀನ್ಯಾಶನಲ್ ಕಂಪನಿಗಳ ಕೆಲಸ ತಿರಸ್ಕರಿಸಿ, ರಸ್ತೆಯಲ್ಲಿ ಇಡ್ಲಿ ಮಾರಿ ತನ್ನ ಶಿಕ್ಷಣಕ್ಕೆ ಧನಸಹಾಯ ಮಾಡಿದ ತಾಯಿಯ ನೆನಪಿಗೆ ಹೊಟೆಲ್ ಉದ್ಯಮದಲ್ಲಿ ಕೈಹಾಕಿದ, ದೇಶದ ಬಹುದೊಡ್ಡ ಹೊಟೇಲ್‌ಗಳ ಶ್ರೇಣಿಯನ್ನೇ ಪ್ರಾರಂಭಿಸಿದ. ಅಮೇರಿಕೆಯ (ಅರಿಝೋನಾದ) ಕೈಗಳಿಲ್ಲದ ಹುಡುಗಿ (ಜೆಸಿಕಾ ಕಾಕ್ಸ್) ತನ್ನ ಕಾಲುಗಳನ್ನು ಬಳಸಿ ವಿಮಾನವನ್ನು ನಡೆಸಿದಳು, ಪೈಲೆಟ್ ಆದಳು. ಇಂಥ ಕತೆಗಳನ್ನು ಬರೆದು ಮಣಿಕಾತ ಅವರು, ನಮಗೆ ಅವಕಾಶವಿಲ್ಲ ಎಂದು ಗೊಣಗುವ ಸೋಮಾರಿಗಳ ಕಣ್ಣು ತೆರೆಯುವ ಕೆಲಸ ಮಾಡಿದ್ದಾರೆ.

ಈ ಸಂಗ್ರಹದಲ್ಲಿ ಶಿಖರಪ್ರಾಯವಾದ ಕಥೆ ಅಮ್ಮ ಹೇಳಿದ ಎಂಟು ಸುಳ್ಳುಗಳು. ನಮ್ಮ ತಂದೆ ತಾಯಿ ನಮ್ಮನ್ನು ಸಾಕುವಾದ ಬಹಳ ತ್ಯಾಗ ಮಾಡಿರುತ್ತಾರೆ, ಎಷ್ಟೋ ಸುಳ್ಳು ಹೇಳಿರುತ್ತಾರೆ. ಬಡವರಾದ ತಂದೆತಾಯಿಗಳು ಮಕ್ಕಳಿಗೆ ಉಣಬಡಿಸಿ, ತಮಗೆ ಹಸಿವೆ ಇಲ್ಲ ಎಂದು ಹೇಳಿ, ಇಲ್ಲವೆ ತಮ್ಮ ಹೊಟ್ಟೆ ತುಂಬಿದೆ ಎಂದು ಹೇಳಿ ನೀರು ಕುಡಿದು ಮಲಗಿರುತ್ತಾರೆ. ಇದು ಹಲವರ ಅನುಭವಕ್ಕೆ ಬಂದ ಸಂಗತಿ. ಇಲ್ಲಿ ತಾಯಿ ಹೇಳಿದ ಎಂಟು ಸುಳ್ಳುಗಳಲ್ಲಿ ಕೆಲವು ಲೇಖಕರ ಕಲ್ಪನೆಯೂ ಸೇರಿರಬಹುದು. ಇದು ವಾಸ್ತವವೇ ಕಲ್ಪನೆಯೇ ಎಂದು ಚರ್ಚಿಸುವುದರಲ್ಲಿ ಅರ್ಥವಿಲ್ಲ. ಈ ಕಥೆಯನ್ನು ಓದಿದ ಮೇಲೆ, ತಮ್ಮ ತಾಯಂದಿರನ್ನು ನೆನೆದವರಿದ್ದಾರೆ, ಕಣ್ಣೀರು ಹರಿಸಿದವರಿದ್ದಾರೆ, ಮುಂದೆ ತಾಯಿಯನ್ನು ಎಂದು ನೋಯಿಸುವುದಿಲ್ಲ ಎಂದು ಶಪಥ ಮಾಡಿದವರಿದ್ದಾರೆ. ತಮ್ಮನ್ನು ಹೂವಿನಂತೆ ಸಾಕಿದ ತಾಯಿ ಈಗ ಹಣ್ಣುಹಣ್ಣು ಮುದುಕಿಯಾಗಿರುವಾಗ ಅವಳನ್ನು ಮರೆತದ್ದು ಒಂದು ಮಹಾಪರಾಧ ಎಂದವರಿದ್ದಾರೆ. ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವ ಯುವಕರ ಕಣ್ಣು ತೆರೆಸುತ್ತಿದೆ ಈ ಕತೆ.

ಏಡ್ಸ್ ವಿರುದ್ಧ ಹೋರಾಡಿದ ವೀಣಕ್ಕನ ಕತೆ, ನೂರಕ್ಕೆ 95ರಷ್ಟು ದೇಹದ ಭಾಗ ಸುಟ್ಟುಕೊಂಡ ಸ್ಪೇನದ ಹುಡುಗಿ(ಜಾಕ್ವೆಲಿನ್ ಸುಬುರಿಡೊ) ಮೋಟು ಕೈಯಿಂದ ಬರೆದಳು, ಕಾರು ನಡೆಸಿದಳು. ಈ ಕತೆ ಓದುವಾಗ ನಮ್ಮಲ್ಲಿ ಹೋರಾಟದ ಬೀಜ ಯಾರೋ ಬಿತ್ತಿದಂತಾಗುತ್ತದೆ. ಕೆಟ್ಟ ಅಮ್ಮಂದಿರಿಲ್ಲ ಜಗದೊಳಗೆ ಎಂಬ ಕತೆ ಶ್ರೀಆದಿಶಂಕರಾಚಾರ್ಯರ ಕುಪುತ್ರೋ ಜಾಯತೇ ಕಚಿದಪಿ ಕುಮಾತಾ ನ ಭವತಿ ಎಂಬ ಸಾಲನ್ನು ನೆನಪಿಗೆ ತರುತ್ತದೆ. ಕೆಟ್ಟ ಮಕ್ಕಳು ಹುಟ್ಟುವ ಸಾಧ್ಯತೆ ಇದೆ, ಆದರೆ ಕೆಟ್ಟ ತಾಯಿ ಹುಟ್ಟುವ ಸಂಭವವೇ ಇಲ್ಲ. ಇತ್ತೀಚೆಗೆ ಮುಂಬೈಯಲ್ಲಿ ನಡೆದ ಘಟನೆ, ಪಾಕಿಸ್ತಾನೀ ಆತಂಕವಾದಿಗಳ ಕೈಯಲ್ಲಿ ಒತ್ತೆಯಾಳಾಗಿದ್ದ, ತಾಜಮಹಲ್ ಹೊಟೇಲಿನಲ್ಲಿ ಸಿಕ್ಕು ಬಿದ್ದಿದ್ದ ದುರ್ದೈವಿಗಳನ್ನು ಉಳಿಸುವ ಸಾಹಸಕ್ಕಿಳಿದ ಹೀರೋ ದೀಪಕ ಕಾಂತಾವಾಲಾನ ಕತೆ ಓದಿದಾಗ ರೋಮಾಂಚನವಾಗುತ್ತದೆ.

ಕೆಲವು ಲೇಖನಗಳನ್ನು ಇಲ್ಲಿ ಸೇರಿಸದಿದ್ದರೆ (ಜನ ಪ್ರತಿನಿಧಿಗಳಿಗೆ ಒಂದು ಬಹಿರಂಗ ಪತ್ರ) ಈ ಪುಸ್ತಕದ ಮಹತ್ವ ಕಡಿಮೆಯಾಗುತ್ತಿರಲಿಲ್ಲ. ನರಸಿಂಹಸ್ವಾಮಿಯವರ ಪ್ರಸಿದ್ಧ ಕವನ ರಾಯರು ಬಂದರು ಮಾವನ ಮನೆಗೆ'ಯನ್ನು ಆಧರಿಸಿ ಬರೆದ ಕತೆ ನಮ್ಮ ಮೇಲೆ ಪ್ರಭಾವ ಬೀರಲು ಸೋಲುತ್ತದೆ. ಓ ಹೆನ್ರಿಯ ಜಗತ್ಪ್ರಸಿದ್ಧ ಕತೆ ಗಿಫ್ಟ್ ಆಫ್ ದ ಮಾಗಿ' ಕಥೆಯನ್ನು ಆಧರಿಸಿ ಒಂದು ಕಥೆ ಬರೆದಿದ್ದಾರೆ. ಕನ್ನಡದಲ್ಲಿ ಅದು ಸಪ್ಪಗಾಗಿದೆ. ಇಂಗ್ಲಿಷ್ ಮೂಲ ಕಥೆ ಮಾಡುವ ಇಂಪ್ಯಾಕ್ಟ್ ಈ ಕಥೆ ಮಾಡುವುದಿಲ್ಲ. ಕ್ರಿಶ್ಚನ್‌ರಲ್ಲಿ ಕ್ರಿಸ್‌ಮಸ್ ಹಬ್ಬದಲ್ಲಿ ಉಡುಗೊರೆ ಕೊಡುವ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವವಿದೆ. ಏಸು ಹುಟ್ಟಿದಾಗ ನಕ್ಷತ್ರ ಮಾರ್ಗದಲ್ಲಿ ಪ್ರವಾದಿ ಮಗುವಿನ ಜನನ ನೋಡಲು ಮೂವರು ಏಶಿಯಾದಿಂದ ಬರುತ್ತಾರೆ, ಕಾಣಿಕೆ ತರುತ್ತಾರೆ. ಅದುವೆ ಗಿಫ್ಟ್ ಆಫ್ ದಿ ಮಾಗಿ. ಇದು ಬೈಬಲ್ಲಿನ ಕಥೆ. ಅದೇ ಶೀರ್ಷಿಕೆಯುಳ್ಳ ಓ ಹೆನ್ರಿಯವರ ಮೂಲ ಕಥೆಯಲ್ಲಿ ಅನ್ಯೋನ್ಯವಾಗಿ ಪ್ರೀತಿಸುವ ಬಡ ಗಂಡ ಹೆಂಡತಿ ಪಟ್ಟ ಬವಣೆ ಇದೆ. ಗಂಡ ತನ್ನ ಅಜ್ಜನಕಾಲದ ಬಂಗಾರದ ಗಡಿಯಾರ ಮಾರಿ ಹೆಂಡತಿಗಾಗಿ, ಅವಳ ಸುಂದರ ಕೇಶರಾಶಿಗಾಗಿ, ಬಂಗಾರದ ಹೂವನ್ನು ತರುತ್ತಾನೆ. ಗಂಡನ ವಾಚ್‌ಗೆ ಬಂಗಾರದ ಬೆಲ್ಟ್ ಕೊಡಿಸುವ ಸಾಹಸದಲ್ಲಿ ತನ್ನ ಕೂದಲನ್ನೇ ಹೆಂಡತಿ ಮಾರಿಕೊಂಡಿರುತ್ತಾಳೆ. ಅವಳಿಗೆ ಕೂದಲಿಲ್ಲ, ಇವನಿಗೆ ವಾಚ್ ಇಲ್ಲ. ಇಬ್ಬರೂ ಪ್ರೀತಿಯಿಂದ ತಂದ ಉಡುಗೊರೆ ನಿಷ್ಪ್ರಯೋಜಕ ಆಗುತ್ತವೆ. ಕೊನೆಗೆ ಹೆಂಡತಿ ಹೇಳುತ್ತಾಳೆ, ನಲ್ಲ, ಇಂದಿಲ್ಲ ನಾಳೆ ನನ್ನ ಕೂದಲು ಬೆಳೆಯುತ್ತವೆ, ನಾನು ನಿನ್ನ ಉಡುಗೊರೆ ಬಳಸಿಕೊಳ್ಳಬಹುದು, ಆದರೆ ನಾವು ಬಡವರು. ಮತ್ತೊಂದು ವಾಚ್ ಕೊಳ್ಳಬಹುದೇ? ಓ ಹೆನ್ರಿಯ ಕತೆಯ ಕೊನೆಯಲ್ಲಿ ನಾವು ಕಲ್ಪಿಸದಂತಹ ಒಂದು ಚಮತ್ಕಾರವಿರುತ್ತದೆ. ಕನ್ನಡದ ಕತೆಯಲ್ಲಿ ಆ ರೀತಿಯ ಚಮತ್ಕಾರವಿಲ್ಲ.

ಮಣಿಕಾಂತ ಅವರು ಓ ಹೆನ್ರಿಯ ಕತೆಯನ್ನೇ ಕನ್ನಡದಲ್ಲಿ ತರಬಹುದಾಗಿತ್ತು. (ಇಂಥ ಯಶಸ್ವಿ ಪ್ರಯತ್ನಗಳು ಕನ್ನಡದಲ್ಲಿ ನಡೆದಿವೆ. ಪಿ. ಲಂಕೇಶರು ದಿ ಬ್ಯೂಟಿ ಅಂಡ್ ದಿ ಬೀಸ್ಟ್ ಕತೆಯನ್ನು, ಗಿರಡ್ಡಿ ಗೋವಿಂದರಾಜರು ನೆಕ್‌ಲೇಸ್ ಎಂಬ ಕತೆಯನ್ನು ಕನ್ನಡಕ್ಕೆ ಯಶಸ್ವಿಯಾಗಿ ತಂದಿದ್ದಾರೆ.) ಒಟ್ಟಿನಲ್ಲಿ ಮಣಿಕಾಂತ ಅವರ ಪ್ರಯತ್ನ ಶ್ಲಾಘನೀಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X