• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತಮ ವಿದ್ಯಾರ್ಥಿ ಆದರ್ಶ ಶಿಕ್ಷಕ ಡಾ. ಕೆಎಸ್ ಶರ್ಮಾ

|

ಕೆಎಸ್. ಶರ್ಮಾ ಅವರ ಶಿಕ್ಷಣ ಮುಂದುವರೆಯಿತು. ನಾನು ಪ್ರತಿ ತಿಂಗಳು ರೂ.75 ಮ.ಆ. ಮೂಲಕ ಕಳಿಸತೊಡಗಿದೆ. ಅವರಿಗೆ ಸಾಲಕೊಟ್ಟ ನಾರಾಯಣರಾಯರು ಅವರನ್ನು ಒಮ್ಮೆ ಪೇಟೆಯಲ್ಲಿ ಸಂಧಿಸಿದಾಗ ಮನೆಯ ಕಡೆಗೆ ಬರಲು ಕರೆದರು. ಒಂದು ರವಿವಾರ ಮುಂಜಾನೆ ಅವರ ಮನೆಗೆ ಹೋದರು. ಅಭ್ಯಾಸ ಚೆನ್ನಾಗಿ ಸಾಗಿದೆ ಅಂದರು. ಆರ್ಥಿಕ ಸಹಾಯಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಅವರ ಮಕ್ಕಳು ಅಭ್ಯಾಸ ಮಾಡುತ್ತಿದ್ದರು. ಅವರಿಗೆ ಗಣಿತ ಹಾಗೂ ವಿಜ್ಞಾನದ ವಿಷಯದಲ್ಲಿ ಕೆಲವು ಸಮಸ್ಯೆಗಳಿದ್ದವು. ಶರ್ಮಾ ಬಿಡಿಸಿದರು. ನೀವು ಕಾಯದೆಯ ವಿದ್ಯಾರ್ಥಿ, ಗಣಿತ ಹಾಗೂ ವಿಜ್ಞಾನ ಹೇಗೆ ಗೊತ್ತು? ಎಂದು ಕೇಳಿದರು. ಆಗ ಶರ್ಮಾ ಉತ್ತರಿಸಿದರು, ನಾನು ಬಿಎಸ್‌ಸಿ (ಪ್ರಥಮ ವರ್ಗದಲ್ಲಿ) ಪಾಸಾಗಿದ್ದೇನೆ. ನನ್ನ ವಿಷಯ ಭೌತಶಾಸ್ತ್ರ ಮತ್ತು ಗಣಿತ. ಮೆಡಿಕಲ್, ಇಂಜಿನಿಯರಿಂಗ್ ಇಲ್ಲವೆ ಎಮ್.ಎಸ್‌ಸಿ ಕಲಿಯಲು ಆರ್ಥಿಕ ಅನುಕೂಲತೆ ಇರಲಿಲ್ಲ. ನೌಕರಿಗೆ ಸೇರಿದೆ. ಮುಂಜಾನೆಯ ಲಾ ಕಾಲೇಜು ಸೇರಿ ಕಾಯದೆ ಪದವಿ ಪಡೆದೆ. ಈಗ ಮಾಸ್ಟರ್ಸ್ ಡಿಗ್ರಿಗಾಗಿ ಓದುತ್ತಿರುವೆ. ಬೇರೆ ಕಡೆ ವರ್ಗವಾಯಿತು ಎಂದು ಕೆಲಸ ಬಿಡಬೇಕಾಗಿ ಬಂತು. ಮಿತ್ರನ ಕೋಣೆಯಲ್ಲಿ ವಾಸ, ಹೊಟೆಲ್‌ನಲ್ಲಿ ಊಟ, ಇಡೀದಿನ ಲೈಬ್ರರಿಯಲ್ಲಿ ಅಭ್ಯಾಸ. ರವಿವಾರ ಬಿಡುವು ಎಂದು ನಿಮ್ಮನ್ನು ಕಾಣಲು ಬಂದೆ. ಎಂದರು. ಈ ಘಟನೆ ನಡೆದ ಮೇಲೆ ಪ್ರತಿ ಅವರ ವಿನಂತಿಯ ಮೇರೆಗೆ ರವಿವಾರ ಮುಂಜಾನೆ ಮಕ್ಕಳಿಗೆ ಅಭ್ಯಾಸ ಹೇಳಿಕೊಡಲು ಪ್ರಾರಂಭಿಸಿದರು. ಅಲ್ಲೇ ಊಟದ ಉಪಚಾರ ಕೂಡ ನಡೆಯುತ್ತಿತ್ತು. ಈ ವಿಷಯ ತಿಳಿದು ನನಗೆ ಬಹಳ ಸಂತೋಷವಾಯಿತು.

ಪ್ರತಿ ತಿಂಗಳು ನಾನು ಕಳಿಸುತ್ತಿದ್ದ ಹಣದಲ್ಲಿ ರೂ.50 ನಾನು ನಾರಾಯಣರಾಯರ ಪರವಾಗಿ ಕಳಿಸುತ್ತಿದ್ದೆ. ಪ್ರತಿ ತಿಂಗಳು ತಮಗೆ ಹಣ ತಲುಪಿದೆ ಎಂದು ಶರ್ಮಾ ಬರೆದುಕೊಡಬೇಕು ಎಂಬ ಇಚ್ಛೆ ಅವರದಾಗಿತ್ತು. ಅವರು ನನಗೊಂದು ಪತ್ರ ಬರೆದರು. ನಾನು ಆ ಪತ್ರದ ಪ್ರತಿಯನ್ನು ಶರ್ಮಾ ಅವರಿಗೆ ಕಳಿಸಿ ಪ್ರತಿ ತಿಂಗಳು ಸಾಲದ ಹಣ ಮುಟ್ಟಿದೆ ಎಂದು ಬರೆದುಕೊಡಲು ಏನು ಅಭ್ಯಂತರ ಎಂದು ಕೇಳಿದೆ. ನಾನು ಆ ಪತ್ರದ ಪ್ರತಿ ಕಳಿಸಬಾರದಾಗಿತ್ತು. ಅದರಲ್ಲಿಯ ಒಂದು ಸಾಲು ಶರ್ಮಾ ಅವರಿಗೆ ನೋವನ್ನುಂಟು ಮಾಡಿತ್ತು. ಪ್ರತಿತಿಂಗಳು ತಮ್ಮಿಂದ ಹಣ ಮುಟ್ಟಿದೆ ಎಂದು ಬರೆದು ಕೊಡದ ವ್ಯಕ್ತಿ ವರ್ಷದ ನಂತರ ಹಣ ಮರಳಿ ಹೇಗೆ ಕೊಡುತ್ತಾನೆ ಎಂಬ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ವಿಪರೀತವಾಯಿತು. ಶರ್ಮಾ ಅವರು ಒಂದು ಪತ್ರ ನನಗೆ ಬರೆದರು. ತಾವು ಶಿಕ್ಷಣ ಮುಂದುವರಿಸುವುದನ್ನು ಬಿಟ್ಟು ಬೆಂಗಳೂರಿಗೆ ತೆರಳುವ ನಿರ್ಧಾರ ತೆಗೆದುಕೊಂಡ ಬಗ್ಗೆ ತಿಳಿಸಿದರು. ತಾವು ಏನೂ ಅಪೇಕ್ಷೆ ಇಲ್ಲದೆ ಅವರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಟ್ಟರೂ ಈ ವ್ಯಕ್ತಿ ತಮ್ಮ ಬಗ್ಗೆ ಈ ರೀತಿಯ ಭಾವನೆ ಇಟ್ಟಿರುವುದರಿಂದ ಇಂಥವರ ಸಹಾಯ ತಮಗೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಅವರಿಂದ ಮೂರು ತಿಂಗಳಲ್ಲಿ ನನ್ನ ಮುಖಾತರ ಬಂದ ನೂರೈವತ್ತು ರೂಪಾಯಿಗಳನ್ನು ಅವರಿಗೆ ಮರಳಿಕೊಟ್ಟು ತಾವು ಊರಿಗೆ ತೆರಳುವುದಾಗಿ ತಿಳಿಸಿದರು. ನಾನು ಕೂಡಲೆ ತಂತಿಯೊಂದನ್ನು ಕಳಿಸಿ ಇಂಥ ನಿರ್ಧಾರ ತೆಗೆದುಕೊಳ್ಳಬಾರದೆಂದು, ನನ್ನ ಪತ್ರದ ದಾರಿ ಕಾಯಬೇಕೆಂದು ತಿಳಿಸಿದೆ. ಒಂದು ಸುದೀರ್ಘ ಪತ್ರವನ್ನು ಬರೆದು ಎಷ್ಟೇ ಕಷ್ಟ ಬಂದರೂ ವಿದ್ಯಾಭ್ಯಾಸ ಮುಂದುವರಿಸಲು ತಿಳಿಸಿದೆ. ಸಹಾಯದ ಹಣ ನಾನೇ ಕಳಿಸುವುದಾಗಿಯೂ, ಅವರು ನನಗೆ ಕೊಟ್ಟ ಸಾಲವನ್ನು ನಾನೇ ಪ್ರತೇಕವಾಗಿ ಅವರಿಗೆ ಮರಳಿಕೊಡುವುದಾಗಿಯೂ ತಿಳಿಸಿದೆ. ಸಮಸ್ಯೆ ಬಗೆಹರಿದಿತ್ತು. ಶರ್ಮಾ ಅವರು ಅಭ್ಯಾಸ ಮುಂದು ವರಿಸಿದರು.

ನಮಗೆಲ್ಲ ಇನ್ನೊಂದು ಆಘಾತ ಕಾದಿತ್ತು. ಆ ವರ್ಷ ಶರ್ಮಾ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಇವರು ಅಪ್ರತಿಮ ಮೇಧವಿ ವಿದ್ಯಾರ್ಥಿ ಎಂಬುವುದರಲ್ಲಿ ಯಾವ ಸಂಶಯವಿರಲಿಲ್ಲ. ಇವರ ಪ್ರಾಧ್ಯಾಪಕರೊಬ್ಬರು ತಪ್ಪು ಪಾಠಮಾಡುವಾಗ ಶರ್ಮಾ ಸರಿಪಡಿಸಿದ್ದನ್ನು ಅವರು ತಮ್ಮ ಅವಮಾನವೆಂದು ಬಗೆದು ತಾವೂ ಒಬ್ಬ ಪರೀಕ್ಷಕರಾಗಿದ್ದರಿಂದ ಇವರನ್ನು ತಮ್ಮ ವಿಷಯದಲ್ಲಿ ಅನುತ್ತೀರ್ಣಗೊಳಿಸಿದ್ದರು. ತಾವು ಪರೀಕ್ಷಕರಾಗಿ ಇರುವವರೆಗೆ ಇವರನ್ನು ಶಿಕ್ಷಿಸಲು ಪಣತೊಟ್ಟಿದ್ದರು. ಶರ್ಮಾ ಅವರು ಧಾರವಾಡವನ್ನು ತಮ್ಮ ಕರ್ಮಭೂಮಿ ಎಂದು ಸ್ವೀಕರಿಸಿದ್ದರು. ಅವರಿಗೆ ಕೆಲಸದ ಅವಶ್ಯಕತೆ ಇತ್ತು. ನಾನು ಸಂಯುಕ್ತ ಕರ್ನಾಟಕ ಪತ್ರಿಕೆಯ ಧಾರವಾಡ ಪ್ರತಿನಿಧಿಯಾಗಿದ್ದೆ. ನಾನು ಮುಂಬೈಗೆ ತೆರಳಿದ್ದರೂ ಆ ಜಾಗೆ ಇನ್ನು ಖಾಲಿಯಾಗಿತ್ತು. ಆ ಕೆಲಸವನ್ನು ನಾನು ಶರ್ಮಾ ಅವರಿಗೆ ಕೊಡಿಸಿದೆ. ಅವರಿಗೆ ಕನ್ನಡ ಮಾತಾಡಲು ಬರುತ್ತಿತ್ತು. ಓದುತ್ತಿದ್ದರು, ಆದರೆ ಅವರಿಗೆ ಕನ್ನಡಲಿಪಿಯಲ್ಲಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಒಂದು ವರ್ಷ ಇವರು ಕಳಿಸಿದ ಪ್ರೆಸ್ ರಿಪೋರ್ಟ್ ಇವರ ಮಿತ್ರ ದೀಕ್ಷಿತರ ಕೈಬರಹದಲ್ಲಿತ್ತು. ನಂತರ ಇವರೇ ಬರೆಯಲು ಕಲಿತರು. ಧಾರವಾಡ ಕಂಡ ಅತ್ಯಂತ ಪ್ರಭಾವಿ ಹಾಗೂ ಯಶಸ್ವೀ ಪತ್ರಕರ್ತರಾಗಿ ರೂಪಗೊಂಡರು. ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರೊಬ್ಬರು ಇವರಿಗೆ ಎಂ.ಎ. ಡಿಗ್ರಿ ಪಡೆಯಲು ಸ್ಫೂರ್ತಿ ನೀಡಿದರು. ಇವರಿಗೆ ದ್ವಿತೀಯ ಶ್ರೇಣಿ ದೊರೆಯಿತು. ಇವರಿಗೆ ಒಂದು ಕಾಲೇಜಿನಲ್ಲಿ ಪ್ರಾಧ್ಯಾಪಕ ಕೆಲಸವೂ ದೊರೆಯಿತು.

ಆ ಕಾಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರ ಕೊರತೆ ಇತ್ತು. ವಿಶೇಷ ಮನ್ನಣೆ ಪಡೆದು ಇವರಿಗೆ ಇಂಗ್ಲಿಷ್ ಡಿಪಾರ್ಟ್‌ಮೆಂಟಿಗೆ ವರ್ಗಾಯಿಸಲಾಯಿತು. ಅಲ್ಲಿಯೂ ಇವರು ಬಹಳ ಯಶಸ್ವಿಯಾಗಿ ಕೆಲಸ ಮಾಡಿದರು. ಪತ್ರಿಕೆಯ ಪ್ರತಿನಿಧಿ ಕೆಲಸವೂ ಮುಂದುವರಿದಿತ್ತು. ಕಾಲೇಜಿನ ಪ್ರಿನ್ಸಿಪಾಲರು ತಮ್ಮ ಎಲ್ಲ ಭಾಷಣಗಳ ರಿಪೋರ್ಟ್ ಇವರ ಪತ್ರಿಕೆಯಲ್ಲಿ ಅಚ್ಚಾಗುವದನ್ನು ಅಪೇಕ್ಷಿಸುತ್ತಿದ್ದರು. ಇವರು ಸಭೆಗೆ ಹೋಗಿರದಿದ್ದರೆ ತಾವೇ ಭಾಷಣದ ಸಾರಾಂಶ ಬರೆದು ಕಳಿಸುತ್ತಿದ್ದರು. ಇದು ಅತಿ ಆಯಿತೆಂದು ಇವರು ರಿಪೋರ್ಟ್ ಮಾಡುವುದನ್ನು ನಿರ್ಲಕ್ಷಿಸಿದರು. ಇವರಿಗೆ ಬುದ್ಧಿಕಲಿಸಲು ಸಿಂಡಿಕೇಟ್ ಸದಸ್ಯರಾದ ಆ ಪ್ರಿನ್ಸಿಪಾಲರು ಒಂದು ನಿಯಮವನ್ನು ಪಾಸುಮಾಡಿಸಿದರು. ಬೇರೆ ವಿಷಯದಲ್ಲಿ ಎಂ.ಎ. ಡಿಗ್ರಿ ಪಡೆದವರು ಇಂಗ್ಲಿಷ್ ಕಲಿಸುತ್ತಿದ್ದರೆ, ಅವರು ಎರಡು ವರ್ಷದಲ್ಲಿ ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಎಂ.ಎ.ಡಿಗ್ರಿ ಪಡೆಯಬೇಕು ಎಂದು. ಶರ್ಮಾ ಅವರು ಮರಳಿ ರಾಜ್ಯಶಾಸ್ತ್ರ ವಿಭಾಗಕ್ಕೆ ಹೋಗುವಂತಿರಲಿಲ್ಲ, ಅಲ್ಲಿ ಬೇರೆಯವರು ನಿಯುಕ್ತಿಗೊಂಡಿದ್ದರು. ಶರ್ಮಾ ಕೆಲಸ ಕಳೆದುಕೊಳ್ಳುವುದು ನಿಶ್ಚಿತ ಎಂದು ಸಹಪ್ರಾಧ್ಯಾಪಕರೆಲ್ಲ ಮಾತಾಡತೊಡಗಿದರು. ಉತ್ಕಲ ವಿಶ್ವವಿದ್ಯಾಲಯದ ಒಂದು ಜಾಹೀರಾತನ್ನು ಶರ್ಮಾ ಓದಿದರು. ಎರಡೂ ವರ್ಷದ ಫೀ ತುಂಬಿ ಒಂದೇ ವರ್ಷದಲ್ಲಿ ಇಂಗ್ಲಿಷ್ ವಿಷಯದಲ್ಲಿ ಎಂ.ಎ. ಎಕ್ಸಟರ್ನಲ್ ಆಗಿ ಪರೀಕ್ಷೆ ಕಟ್ಟಲು ಅಲ್ಲಿ ಅವಕಾಶವಿತ್ತು. ಯಾರಿಗೂ ಹೇಳದೇ ಶರ್ಮಾ ಆ ಕಾರ್ಯ ಮಾಡಿದರು. ಪುಸ್ತಕಗಳನ್ನೆಲ್ಲ ಒಂದು ಪೆಟ್ಟಿಗೆಯಲ್ಲಿ ತುಂಬಿಕೊಂಡು ಭುವನೇಶ್ವರಕ್ಕೆ ತೆರಳಿದರು. ಸುದೈವದಿಂದ ಪರೀಕ್ಷೆ ಒಂದು ತಿಂಗಳವರೆಗೆ ನಡೆಯಿತು. ಪ್ರತಿ ಪೇಪರಿನ ನಂತರ ಕೆಲ ದಿನಗಳ ಅಂತರವಿತ್ತು. ಅಭ್ಯಾಸ ಮಾಡಲು ಸಮಯ ದೊರೆಯಿತು. ಅಲ್ಲಿ ಇಳಿದುಕೊಳ್ಳಲು ಬಡಜನರ ವಸತಿಗೃಹದಲ್ಲಿ ಅನುಕೂಲತೆಯಾಯಿತು. ಇವೆಲ್ಲ ಘಟನೆಗಳು ನಾಟಕೀಯವಾಗಿ ನಡೆದು ಹೋದವು.

ಶರ್ಮಾ ಧಾರವಾಡಕ್ಕೆ ಮರಳಿ ಬಂದಾಗ ಇನ್ನೊಂದು ನಾಟಕೀಯ ಘಟನೆ ನಡೆಯಿತು. ಎಲ್‌ಎಲ್.ಎಮ್ ಪರೀಕ್ಷೆ ಶುರುವಾಗಲು ಒಂದು ವಾರವಿತ್ತು. ಅವರ ಮಿತ್ರನೊಬ್ಬ ಪರೀಕ್ಷೆಗೆ ಕೂಡಲು ವಿನಂತಿಸಿದ. ಶರ್ಮಾ ಅವರನ್ನು ಫೇಲ್ ಮಾಡಲು ಶಪಥತೊಟ್ಟ ಪ್ರಾಧ್ಯಾಪಕ ಊರಲ್ಲಿರಲಿಲ್ಲ. ಪರೀಕ್ಷೆ ಕಟ್ಟಲು ಇದೊಂದು ಸುವರ್ಣಾವಕಾಶವಾಗಿತ್ತು. ಶರ್ಮಾ ಅವರು ತಾವು ಪರೀಕ್ಷೆಯ ಫಾರ್ಮ್ ತುಂಬಿರಲಿಲ್ಲ ಎಂದು ಪರಿತಪಿಸಿದರು. ಮಿತ್ರ ಅವರ ಫೀ ತುಂಬಿದ್ದ, ಮೊದಲೇ ಅವರಿಂದ ಒಂದು ಬ್ಲ್ಯಾಂಕ್ ಅರ್ಜಿಯ ಮೇಲೆ ಸಹಿ ಪಡೆದು ಇಟ್ಟಿದ್ದ ಎಂಬ ಸಂಗತಿ ತಿಳಿದಾಗ ಶರ್ಮಾ ಅವರಿಗೆ ಬಹಳ ಆನಂದವಾಯ್ತು. ಹಳೆಯ ನೋಟ್ಸ್ ಓದಿ ಪರೀಕ್ಷೆಗೆ ಕುಳಿತರು. ಪ್ರೊಫೆಸರರು ಯಾವುದೋ ಪ್ರವಾಸದಿಂದ ಮರಳಿದರು. ಅವರು ಪರೀಕ್ಷಕರಾಗಿದ್ದರು. ಶರ್ಮಾ ಪರೀಕ್ಷೆಗೆ ಕುಳಿತಿದ್ದು ಅವರಿಗೆ ಗೊತ್ತಿರಲಿಲ್ಲ. ತಮಗೆ ಅರಿಯದಂತೆಯೇ ಶರ್ಮಾ ಅವರಿಗೆ ತಮ್ಮ ಪೇಪರ್‌ನಲ್ಲಿ ಅತ್ಯಧಿಕ ಗುಣ ನೀಡಿದ್ದರು. ಈ ಸತ್ಯ ಕಥೆ ಕಟ್ಟು ಕಥೆಯಂತೆ ತೋರುತ್ತದೆ. ಈ ಸಂಗತಿ ಶರ್ಮಾ ಅವರ ಕೆಲವು ಆಪ್ತಮಿತ್ರರಿಗೆ ಮಾತ್ರ ಗೊತ್ತಿದೆ. ಈ ಸಂದರ್ಭದಲ್ಲಿ ನೆನಪಾಗುತ್ತದೆ. ಶರ್ಮಾ ತಮ್ಮ ಆತ್ಮಚರಿತ್ರೆ ಬರೆಯಬೇಕು, ಅದೊಂದು ಅದ್ಭುತ ಕಾದಂಬರಿಯಾದೀತು.

ಉತ್ಕಲ ವಿಶ್ವ ವಿದ್ಯಾಲಯದ ರಿಸಲ್ಟ್ ಬಂತು. ಶರ್ಮಾ ಅವರಿಗೆ ದ್ವಿತೀಯಶ್ರೇಣಿ ದೊರೆತಿತ್ತು. ಇವರನ್ನು ಕೆಲಸದಿಂದ ತೆಗೆದು ಹಾಕಲು ಉತ್ಸುಕನಾಗಿದ್ದ ಪ್ರಿನ್ಸಿಪಾಲರ ಮುಖ ವಿವರ್ಣಗೊಂಡಿತ್ತು. ಅಷ್ಟರಲ್ಲಿ ಇನ್ನೊಂದು ಸಂತಸದ ಸುದ್ದಿ ಬಂತು. ಎಲ್‌ಎಲ್.ಎಮ್ ಪರೀಕ್ಷೆಯಲ್ಲಿ ಉಚ್ಚಶ್ರೇಣಿಯಲ್ಲಿ ಉತ್ತೀರ್ಣರಾದ ಸುದ್ದಿಯೂ ಪ್ರಕಟವಾಯಿತು. ಇವರ ಜೀವನದ ಕಥೆಗೆ ಇನ್ನೊಂದು ತಿರುವು ಬಂತು. ಇವರು ಕಲಿತ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೆಲಸ ಖಾಲಿ ಇತ್ತು. ಅಲ್ಲಿ ಇವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಕಾಯದೆ ಅವರಿಗೆ ಹೆಚ್ಚು ಪ್ರೀತಿಯ ವಿಷಯವಾಗಿತ್ತು. ಲಾ ಕಾಲೇಜು ಸೇರಿದರು, ಮುಂದೆ ಅಲ್ಲಿಯ ಅತ್ಯಂತ ಯಶಸ್ವೀ ಪ್ರಾಂಶುಪಾಲರಾಗಿ ನಿವೃತ್ತರಾದರು. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಕಾಲೇಜಿನಲ್ಲಿ ಪ್ರಾಂಶುಪಾಲರಾದವರಿಗೆ ಪಾಠಮಾಡುವಾಗ ರಿಯಾಯಿತಿ ಇರುತ್ತದೆ, ಅವರು ಕಡಿಮೆ ಪಾಠ ಮಾಡುತ್ತಾರೆ. ಆದರೆ ಶರ್ಮಾ ಎಲ್ಲರಷ್ಟೆ ಪಾಠ ಮಾಡುತ್ತಿದ್ದರು. ಅಷ್ಟೆ ಅಲ್ಲ, ಶಿಕ್ಷಕರು ಸರಿಯಾಗಿ ಪಾಠಮಾಡುತ್ತಿಲ್ಲ, ಬರಿ ಟೆಕ್ಸ್ಟ್ ಓದುತ್ತಾರೆ, ಪ್ರಶ್ನೆಗಳಿಗೆ ಸರಿ ಉತ್ತರ ಕೊಡುವುದಿಲ್ಲ ಎಂದು ಯಾವುದೇ ಕ್ಲಾಸಿನ ವಿದ್ಯಾರ್ಥಿಗಳು ದೂರು ಮಾಡಿದರೆ, ಶರ್ಮಾ ರವಿವಾರ ಹೆಚ್ಚಿನ ಕ್ಲಾಸು ತೆಗೆದುಕೊಳ್ಳುತ್ತಿದ್ದರು, ಉಳಿದವರೆಲ್ಲ ಬಿಟ್ಟ ಪಾಠಗಳನ್ನು ಪೂರ್ತಿಗೊಳಿಸುತ್ತಿದ್ದರು. ಇಂಥ ಆದರ್ಶ ಶಿಕ್ಷರು ದೊರೆಯುವುದು ವಿದ್ಯಾರ್ಥಿಗಳ ಭಾಗ್ಯ. ರಾಜ್ಯಶಾಸ್ತ್ರ ವಿಷಯದಲ್ಲಿ ಶರ್ಮಾ ಡಾಕ್ಟರೇಟ್ ಕೂಡ ಪಡೆದರು. (ಅವರ ಥೀಸಿಸ್‌ನ ವಿಷಯ: ಮಾರ್ಕ್ಸಿಜಂ ಇನ್ ಇಂಡಿಯಾ). ಒಬ್ಬ ಒಳ್ಳೆಯ ಶಿಕ್ಷಕ ಒಳ್ಳೆಯ ವಿದ್ಯಾರ್ಥಿಯೂ ಆಗಿರುತ್ತಾನೆ ಎಂಬುದಕ್ಕೆ ಶರ್ಮಾ ಒಂದು ಉತ್ತಮ ಉದಾಹರಣೆ.

ಶರ್ಮಾ ಅವರ ದೊಡ್ದಗುಣವೆಂದರೆ ತಮಗೆ ಅತ್ಯಲ್ಪ ಸಹಾಯ ಮಾಡಿದವರನ್ನೂ ಮರೆಲಿಲ್ಲ. ಪೀಡಿಸಿದವರನ್ನು ಕ್ಷಮಿಸಿದರು, ಅವರ ಬಗ್ಗೆ ಎಂದೂ ಕಹಿ ಭಾವನೆ ಇಟ್ಟುಕೊಂಡಿರಲಿಲ್ಲ. ಸಾವಿರ ಉದಾಹರಣೆಗಳನ್ನು ಕೊಡಬಹುದು. ಒಂದು ಉದಾಹರಣೆ ಇಲ್ಲಿದೆ. ಶರ್ಮಾ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾಗ ಅವರನ್ನು ಕೆಲಸದಿಂದ ತೆಗೆಯಲು ಚಕ್ರವ್ಯೂಹ ನಡೆಸಿದ ಪ್ರಿನ್ಸಿಪಾಲ್ ಇವರಿಂದ ಉಪಕಾರ ಪಡೆಯಬೇಕಾದ ಪ್ರಸಂಗ ಬಂತು. ಅವರ ಮಗ ಡಾಕ್ಟರನಾಗಿದ್ದ. ಅವನಿಗೆ ಸರಕಾರಿ ಆಸ್ಪತ್ರೆಯಲ್ಲಿ ಕೆಲಸವಿತ್ತು. ಅವನಿಗೆ ಒದು ಕುಗ್ರಾಮಕ್ಕೆ ವರ್ಗಾವಣೆಯಾಗಿತ್ತು. ಅವನನ್ನು ಒಂದು ಒಳ್ಳೆಯ ಶಹರಕ್ಕೆ ತರಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಆ ಕೆಲಸ ಮಾಡಬಲ್ಲ ವ್ಯಕ್ತಿ ಒಬ್ಬ ಐಎಸ್ ಅಧಿಕಾರಿಯಾಗಿದ್ದ. ಅವನು ಶರ್ಮಾ ವರ ಪರಮ ಶಿಷ್ಯ ಎಂಬುದು ತಿಳಿಯಿತು. (ಅಸಂಖ್ಯ ವಿದ್ಯಾರ್ಥಿಗಳಿಗೆ ನಿಃಶುಲ್ಕ ವಿಶೇಷ ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸರಕಾರಿ ಹಾಗೂ ಇತರ ಸಂಸ್ಥೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಗಳಿಸಲು ಸಹಾಯ ಮಾಡಿದ ಕೀರ್ತಿ ಶರ್ಮಾ ಅವರಿಗಿದೆ.). ಪ್ರಿನ್ಸಿಪಾಲರು ಶರ್ಮಾ ಅವರ ಮನೆಗೆ ಬಂದು ತಾವು ಕ್ಷಮಿಸಲಾರದಂತಹ ಅಪರಾಧ ಮಾಡಿರುವುದಾಗಿ ಪೀಠಿಕೆ ಹಾಕಿ, ತಾವು ಅವರಿಂದ ಯಾವುದೇ ಶಿಫಾರಸು ಪಡೆಯಲು ಅನರ್ಹರೆನ್ನುತ್ತ ಮಗನ ಸಂಕಟ ತಡೆಯದೆ ಬಂದಿರುವುದಾಗಿ ಹೇಳಿದರು. ಶರ್ಮಾ ಅವರು ವಿನಯದಿಂದ ಬಂದ ಕಾರ್ಯವನ್ನು ಕೇಳಿದರು, ನಿಮ್ಮಿಂದಾಗಿ ನನಗೆ ಎರಡು ಡಿಗ್ರಿ ಏಕಕಾಲಕ್ಕೆ ದೊರೆತವು. ಒಂದು ರೀತಿಯಿಂದ ನೀವು ನನಗೆ ಉಪಕಾರವನ್ನೇ ಮಾಡಿದ್ದೀರಿ ಎಂದರು. ಅವರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಒಂದು ದೂರವಾಣಿಯ ಕರೆಯಿಂದ ಅವರ ಮಗನ ಕೆಲಸವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more