• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾ. ಕುವಲಯಶ್ಯಾಮ ಶರ್ಮಾ-ಕೆಲವು ನೆನಪುಗಳು

|

ಸ್ವಾತಂತ್ರ್ಯ ಸೇನಾನಿ, ವೇದವಿದ್ವಾಂಸ, ಗ್ರಂಥಕರ್ತ, ಮುದ್ರಕ, ಪ್ರಕಾಶಕ ಮೊದಲಾದ ಮುಖಗಳನ್ನು ಪಡೆದ ಎಂಬಾರ್ ಭಾಷ್ಯಾಚಾರ್ಯ ಹಾಗೂ ಅವರ ಧರ್ಮಪತ್ನಿ ಸಂಪತ್ತಮ್ಮ ಅವರ ಪುತ್ರನಾಗಿ 30 ಸೆಪ್ಟೆಂಬರ್, 1934ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಕುವಲಯಶ್ಯಾಮ (ಡಾ|ಕೆ.ಎಸ್.ಶರ್ಮಾ) ಅವರಿಗೆ 75 ವರ್ಷ ತುಂಬಿದ ಸಂಭ್ರಮ. ಸಮೀಪದವರಿಗೆಲ್ಲ, ಅಷ್ಟೇ ಏಕೆ ಇವರ ಸಂಪರ್ಕದಲ್ಲಿ ಬಂದವರೆಗೆಲ್ಲ, ಇವರೊಬ್ಬ ಮಿತ್ರ, ತತ್ವಜ್ಞಾನಿ, ಮಾರ್ಗದರ್ಶಿಯಾಗಿದ್ದಾರೆ. ಹಾಗೆ ನೋಡಿದರೆ ಇವರದು ಅಷ್ಟ-ಪೈಲು ವ್ಯಕ್ತಿತ್ವ. ಪತ್ರಕರ್ತ, ಪ್ರಾಧ್ಯಾಪಕ, ವಿದ್ವಾಂಸ, ಲೇಖಕ, ಆಡಳಿತಗಾರ, ಸಂಘಟಕ-ಹೋರಾಟಗಾರ, ಕಾಯದೆತಜ್ಞ, ಮುದ್ರಕ-ಪ್ರಕಾಶಕರಾಗಿ ರಾರಾಜಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ದಿನಗೂಲಿ ಕರ್ಮಚಾರಿಗಳ ಮುಖಂಡರಾಗಿ, ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆಗರವಾದ ಹುಬ್ಬಳ್ಳಿಯ ವಿಶ್ವಶ್ರಮ ಚೇತನದ ರೂವಾರಿಯಾಗಿ ಆದರ್ಶ ಜೀವನ ನಡೆಸುತ್ತಿದ್ದಾರೆ.

ಶರ್ಮಾ ಅವರ ಜೀವನ ಅನನ್ಯವಾಗಿರಲು ಅವರ ವರ್ಣಮಯ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವೇ ಕಾರಣ. ಅವರ ಮಾತೃಭಾಷೆ ತೆಲುಗು, ಆದರೆ ಇವರ ಹೆಚ್ಚಿನ ಬರವಣಿಗೆ ಕನ್ನಡದಲ್ಲಿದೆ. ಇವರದು ವೇದವಿದ್ವಾಂಸರ ಮನೆತನ ಆದರೆ ಇವರು ಸರ್ವಧರ್ಮಸಮನ್ವಯವನ್ನು ಆಚರಣೆಯಲ್ಲಿ ತಂದರು, ಜಾತಿಪಾತಿಗಳ ಬೇಲಿಯನ್ನು ಮೀರಿ ಮಾನವಕುಲ ಒಂದು ಎಂದು ನಂಬಿದರು. ಅವರು ಶಾಲೆ ಕಾಲೇಜು ಶಿಕ್ಷಣ ಪಡೆದು ಬೆಳೆದ ನಗರ ಬೆಂಗಳೂರು, ಆದರೆ ಧಾರವಾಡ-ಹುಬ್ಬಳ್ಳಿಯಲ್ಲಿ ಮನೆಮಾಡಿಕೊಂಡು ಸ್ಥಾಯಿಯಾದರು. ಗಂಡಭೇರುಂಡ ಪಕ್ಷಿಯಂತೆ ಇವರಿಗೆ ಒಂದು ದೇಹ ಆದರೆ ಎರಡು ಮುಖ. ಒಂದು ಮಾರ್ಕ್ಸ್‌ಪರ, ಇನ್ನೊಂದು ಬೇಂದ್ರೆಪರ. ಅವರು ಕಟ್ಟಾ ಮಾರ್ಕ್ಸ್‌ವಾದಿಯಾಗಿದ್ದರೂ ಯಾವುದೇ ರಾಜಕೀಯ ಪಕ್ಷಪಂಗಡದ ಸದಸ್ಯರಾಗಿಲ್ಲ. ಕನ್ನಡದ ವರಕವಿ ಬೇಂದ್ರೆಯವರ ಶಿಷ್ಯ ಮಾತ್ರ ಅಲ್ಲ ದತ್ತಪುತ್ರ ಎಂದು ಕರೆಸಿಕೊಂಡ ಹೆಗ್ಗಳಿಕೆ ಇವರದು. ಎರಡು ಧ್ರುವಗಳನ್ನು ತೆಕ್ಕೆಯಲ್ಲಿ ಬೆಳೆದರೂ ತಮ್ಮ ಸುತ್ತಲೂ ಚುಂಬಕ ಗಾಳಿ ಬೀಸಿದ್ದಾರೆ, ತಮ್ಮದೇ ಆದ ವ್ಯಕ್ತಿತ್ವದ ಮುದ್ರೆಯನ್ನು ಮೂಡಿಸಿದ್ದಾರೆ, ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದ ಅಪರೂಪದ ವ್ಯಕ್ತಿಯಾಗಿದ್ದಾರೆ.

ನನ್ನ ಜೀವನವನ್ನು ರೂಪಿಸಿದ ಹತ್ತು ಮಿತ್ರರನ್ನು ನಾನು ನೆನೆದಾಗ ನನಗೆ ಮೊದಲು ತೋರುವುದು ಶರ್ಮಾ ಅವರ ಮುಖ. ಅವರ ಪರಿಚಯ ನನಗಾದದ್ದು 1959ರಲ್ಲಿ. ಮೊದಲು ಶರ್ಮಾ ನನ್ನ ಮಿತ್ರರಾದರು, ನಂತರ ತಿಳಿಯಿತು ಅವರು ನನ್ನ ಸಹಪಾಠಿ ಎಂದು. ಜೆ.ಎಸ್.ಎಸ್.ಲಾ ಕಲೇಜಿನಲ್ಲಿ ಅವರೂ ನನ್ನಂತೆ ಕಾನೂನು ವಿದ್ಯಾರ್ಥಿಯಾಗಿದ್ದರು. ನಾನು 1958ರಲ್ಲಿ ಕನ್ನಡ ಹಾಗೂ ಸಂಸ್ಕೃತ ವಿಷಯ ಅಭ್ಯಸಿಸಿ ಎಂ.ಎ.ಪದವೀಧರನಾಗಿದ್ದೆ. ಕೆಲಸ ದೊರೆಯಲಿಲ್ಲ ಎಂದು ಲಾ ಕಾಲೇಜು ಸೇರಿದೆ. ಜೊತೆಗೆ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಧಾರವಾಡ-ಪ್ರತಿನಿಧಿಯಾಗಿ ಕೆಲಸಮಾಡತೊಡಗಿದೆ.

ಶರ್ಮಾ ಅವರು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ವಿದ್ಯಾರ್ಥಿ. ಡಾ| ನರಸಿಂಹಯ್ಯನವರ ಶಿಷ್ಯ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ. ಪದವಿ ಪಡೆದರು. ಭಾರತದ ಜೀವ ವಿಮಾ ನಿಗಮದಲ್ಲಿ ಕೆಲಸ ದೊರೆತಾಗ ಧಾರವಾಡಕ್ಕೆ ಬಂದರು. ಆಫೀಸಿನ ಕರ್ಮಚಾರಿಗಳ ಯೂನಿಯನ್ನಿನ ಸಂಘಟಕರಾಗಿದ್ದರು. ತಮ್ಮ ಆಫೀಸಿನ ಒಂದು ಮಹತ್ವದ ಕಾರ್ಯಕ್ರಮದ ವರದಿಯನ್ನು ಸಂಯುಕ್ತ ಕರ್ನಾಟಕಕ್ಕೆ ಬರೆಯಲು ನನ್ನನ್ನು ಆಮಂತ್ರಿಸಿದರು. ಪರಿಚಯ ಸ್ನೇಹವಾಯಿತು, ಸಖ್ಯವಾಯಿತು, ನಂತರ ಅವರು ನನ್ನ ಸಹಪಾಠಿ ಎಂಬುದು ತಿಳಿಯಿತು. ವರಕವಿ ಬೇಂದ್ರೆಯವರ ಪರಿಚಯ ಮಾಡಿಕೊಟ್ಟೆ. ನಾವಿಬ್ಬರೂ ಅವರ ಅಂತೇವಾಸಿಗಳಾಗಿ ಬೆಳೆದೆವು. ಶರ್ಮಾ ಇಂಗ್ಲೀಷಿನಲ್ಲಿ ಕತೆ, ಕವನ ಬರೆಯುತ್ತಿದ್ದರು. ಅವನ್ನು ನನ್ನ ಆತ್ಮೀಯ ಗುರುಗಳಾದ ಗೋಕಾಕರಿಗೆ ತೋರಿಸಿದೆ. ಅವರು ಮೆಚ್ಚಿದರು, ಕನ್ನಡದಲ್ಲೂ ಬರೆಯಲು ಶರ್ಮಾ ಅವರಿಗೆ ಸಲಹೆ ನೀಡಿದರು.

ಶರ್ಮಾ ಅವರ್‍ಲು ಕೆಲವು ಹವ್ಯಾಸಿ ನಾಟಕ ಪ್ರೇಮಿ ಮಿತ್ರರು ಕಲೆಹಾಕಿ ಕಲಾ ವಿಲಾಸ ವೃಂದ ಎಂಬ ಸಂಸ್ಥೆ ಸ್ಥಾಪಿಸಿದರು. ಕೈಲಾಸಂ ಅವರ ನಾಟಕ ಬಂಡ್ವಾಳ್ವಿಲ್ಲದ್ ಬಡಾಯಿ ವೃಂದದ ಪ್ರಥಮ ನಾಟಕವಾಗಿತ್ತು. ಅದರಲ್ಲಿ ಶರ್ಮಾ ಬಾಣಸಿಗ ಪರಶುರಾಮ ಪಟ್ಟರ್ ಪಾತ್ರ ವಹಿಸಿದರೆ ನಾನು ಪೆದ್ದ ಮಗ ಮುದ್ಮಣಿಯ ಪಾತ್ರವಹಿಸಿದ್ದೆ. ಟಿ.ವಿ.ಕಲಾವಿದೆ ಯಾಮುನಾ ಮೂರ್ತಿಯವರ ಪತಿ ರಾಮಚಂದ್ರಮೂರ್ತಿ ಪ್ರಧಾನ ಪಾತ್ರವಹಿಸಿದ್ದರು, ನಾಟಕದ ನಿರ್ದೇಶನವನ್ನೂ ಮಾಡಿದ್ದರು. ಕೈಲಾಸಂ ಗರಡಿಯಲ್ಲಿ ಬೆಳೆದ ವಾಮನ್ ಎಂಬ ರೇಡಿಯೋ ಸ್ಟಾಫ್‌ಆರ್ಟಿಸ್ಟ್ ನಮ್ಮ ನಾಟಕ ನೋಡಿ, ನಮ್ಮಿಬ್ಬರ ಪಾತ್ರ ವಿಶೇಷವಾಗಿ ಮೆಚ್ಚಿ, "ನಿಮಗಾಗಿಯೇ ಈ ಎರಡು ಪಾತ್ರ ಕೈಲಾಸಂ ರಚಿಸಿದಂತಿದೆ!" ಎಂಬ ಉದ್ಗಾರ ತೆಗೆದಿದ್ದರು. ಒಂದು ತಿಂಗಳಲ್ಲಿ ಈ ನಾಟಕದ ಐದು ಪ್ರಯೋಗಗಳಾದವು. ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಯಲ್ಲಿ ನಮ್ಮ ನಾಟಕಕ್ಕೆ ಪ್ರಥಮ ಬಹುಮಾನ ಹಾಗೂ ಶೀಲ್ಡ್ ಲಭಿಸಿತ್ತು. ನಂತರ ಪರ್ವತವಾಣಿಯವರ 'ತಿರುಮಂತ್ರ' ಎಂಬ ನಾಟಕವನ್ನು ನಾವು ಬೆಂಗಳೂರಲ್ಲಿ ನಡೆದ ಎಐಸಿಸಿ ಸಮ್ಮೇಲನದಲ್ಲಿ ಪ್ರಯೋಗಿಸಿದ್ದೆವು. ಶರ್ಮಾ ಅವರ ಸ್ನೇಹದಿಂದಾಗಿ ನಾನು ಪ್ರಥಮ ಸಲ ನಾಟಕದಲ್ಲಿ ಪಾತ್ರವಹಿಸಿದ್ದೆ. ಮುಂದೆ ನಾಟಕ ಬರೆಯಲೂ ಅವರಿಂದ ನನಗೆ ಪ್ರೇರಣೆ ದೊರೆಯಿತು. ಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ನನ್ನ ಪ್ರಥಮ ಕವನ ಸಂಗ್ರಹ ಮಧುಸಂಚಯ' ಪ್ರಕಟವಾಯಿತು. ಅದರ ಪ್ರಕಾಶನಕ್ಕಾಗಿ ಶರ್ಮಾ ಬಹಳ ಶ್ರಮ ವಹಿಸಿದ್ದರು. ಪುಸ್ತಕದ ಬಿಡುಗಡೆ ಶರ್ಮಾ ಅವರ ಧಾರವಾಡದ ರೂಮಿನಲ್ಲಿ(ದತ್ತನಿಲಯದಲ್ಲಿ) ನಡೆಯಿತು, ಬೇಂದ್ರೆಯವರೇ ಮುಖ್ಯ ಅತಿಥಿಯಾಗಿ ಬಂದಿದ್ದರು. ಶರ್ಮಾ ಅವರ ಸ್ನೇಹ ಗಾಢವಾಗುತ್ತ ನಡೆಯಿತು.

ಶರ್ಮಾ ಅವರ ತಂದೆ ಬೆಂಗಳೂರಿನಲ್ಲಿ ಶ್ರೀನಿಧಿ ಎಂಬ ಒಂದು ಚಿಕ್ಕ ಪ್ರಿಂಟಿಂಗ್ ಪ್ರೆಸ್ ನಡೆಸಿಕೊಂಡಿದ್ದರು. ಅನೇಕ ಸಲ ನಾನು ಬೆಂಗಳೂರಿಗೆ ಹೋದಾಗ ಅವರ ಮನೆಗೆ ಹೋಗುತ್ತಿದ್ದೆ. ನಮ್ಮ ಅನ್ಯೋನ್ಯ ಮೈತ್ರಿಯನ್ನು ಗಮನಿಸಿದ ಸಂಪತ್ತಮ್ಮ (ಶರ್ಮಾ ಅವರ ತಾಯಿ) ನಮ್ಮ ಜೋಡಿಯನ್ನು ರಾಮ ಲಕ್ಷ್ಮಣರ ಜೋಡಿ ಎಂದು ಕರೆಯುತ್ತಿದ್ದರು.

ಎರಡು ವರ್ಷಗಳ ನಿರುದ್ಯೋಗದ ತರುವಾಯ ನನಗೆ 1960ರಲ್ಲಿ ಮುಂಬೈಯಲ್ಲಿ ಕೆಲಸ ದೊರೆಯಿತು. ಧಾರವಾಡದಲ್ಲಿಯೇ ನೆಲೆಸಲು ನಾನು ಕನ್ನಡ ವಿಷಯ ಆರಿಸಿದ್ದೆ. ನಾನು ಕಲಿತ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನ ಜಾಗೆ ತೆರವಾಗಿದ್ದರೂ ನನಗೆ ಅವಕಾಶ ದೊರೆಯಲಿಲ್ಲ. ನನ್ನ ದೈವ ನನ್ನನ್ನು ಮುಂಬೈಗೆ ಕರೆದೊಯ್ಯಿತು. ಆದರೆ ನಾನು ಧಾರವಾಡವನ್ನು ಮರೆಯಲಿಲ್ಲ. ದೀಪಾವಳಿ, ಕ್ರಿಸ್‌ಮಸ್ ಹಾಗೂ ಬೇಸಿಗೆಯ ರಜೆಯಲ್ಲಿ ಧಾರವಾಡಕ್ಕೆ ಬರುತ್ತಿದ್ದೆ. ಶರ್ಮಾ ಅವರ ರೂಮಿನಲ್ಲೇ ವಾಸಿಸುತ್ತಿದ್ದೆ. ಬೇಂದ್ರೆಯವರ ಒಡನಾಟವಂತೂ ನಮಗೆ ಮುಖ್ಯ ಆಕರ್ಷಣೆಯಾಗಿತ್ತು. 1964ರಲ್ಲಿ ನನ್ನ ಮದುವೆಯಾಯಿತು. ಮುಂಬೈಯಲ್ಲಿ ಮನೆಮಾಡಿದೆ. ನನ್ನ ತಂದೆ ನನ್ನ ಮದುವೆ ಪೂರ್ವದಲ್ಲಿ ನನ್ನಿಂದ ಒಂದು ವಚನ ತೆಗೆದುಕೊಂಡಿದ್ದರು. (ನನ್ನ ತಮ್ಮನಿಗೆ ಸುರತ್ಕಲ್‌ನ ರೀಜನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು.) ನನ್ನ ತಮ್ಮನ ಶಿಕ್ಷಣದ ಪೂರ್ತಿ ಜವಾಬ್ದಾರಿ ನಾನು ವಹಿಸಿಕೊಳ್ಳಬೇಕು ಎಂದು ನನಗೆ ಹೇಳಿದ್ದರು. ಆ ಕಾಲದಲ್ಲಿ ಇಂಜಿನಿಯರಿಂಗ ಕಾಲೇಜಿನ ಫೀಜು ಜಾಸ್ತಿಯಾಗಿರಲಿಲ್ಲ. ಅವನಿಗೆ ಕಾಲೇಜು ಸೇರಲು ರೂ.600 ಬೇಕಾಗಿತ್ತು. ಧಾರವಾಡದಲ್ಲಿ ನನ್ನ ಹಿತೈಷಿ ಮಿತ್ರರಿದ್ದರು (ನಾರಾಯಣರಾವ ಢವಳೆ). ಅವರಿಂದ ಸಾಲ ಪಡೆದೆ. ಪ್ರತಿ ತಿಂಗಳು ರೂ.50 ಮ.ಆ. ಮಾಡಿ ಮರಳಿ ಕೊಡಲು ಒಪ್ಪಿದ್ದೆ. ಪ್ರತಿ ತಿಂಗಳು ತಮ್ಮನಿಗೆ ಖರ್ಚಿಗಾಗಿ ರೂ.80 ಕಳಿಸುತ್ತಿದ್ದೆ. ನನ್ನ ಕೈಗೆ ಬರುತ್ತಿದ್ದ ಸಂಬಳ ರೂ.360 ಮಾತ್ರ. ಮುಂಬೈಗೆ ಹೋದಮೇಲೂ ಸಂಯುಕ್ತ ಕರ್ನಾಟಕ ಸಂಬಂಧ ಮುಂದುವರಿದಿತ್ತು. ಮುಂಬೈ ವಾರ್ತಾ-ಪತ್ರ ಬರೆಯುತ್ತಿದ್ದೆ. ಅದರಿಂದ ತಿಂಗಳಿಗೆ ರೂ.50 ದೊರೆಯುತ್ತಿತ್ತು. ಮನೆಯ ಬಾಡಿಗೆ ರೂ.50 ಇತ್ತು. ಆ ವರ್ಷ ನನಗೆ ಸತ್ವ್ವಪರೀಕ್ಷೆಯ ಕಾಲವಾಗಿತ್ತು.

ಧಾರವಾಡದಲ್ಲಿ ಶರ್ಮಾ ಅವರು ಎಲ್‌ಎಲ್‌ಎಮ್ ಅಭ್ಯಾಸ ಮಾಡುತ್ತಿದ್ದರು. ಅವರ ಯೂನಿಯನ್ ಕಾರ್ಯಾಚರಣೆಯನ್ನು ಸಹಿಸದ ಮೇಲಧಿಕಾರಿಗಳು ಅವರನ್ನು ಧಾರವಾಡದಿಂದ ಬೇರೆ ಊರಿಗೆ ವರ್ಗಾಯಿಸಿದರು. ಶರ್ಮಾ ಕೆಲಸಕ್ಕೆ ರಾಜೀನಾಮೆ ನೀಡಿದರು. ಒಂದು ವರ್ಷದಲ್ಲಿ ಕಾಯದೆ ವಿಷಯದಲ್ಲಿ ಸ್ನಾತಕೋತ್ತರ ಅಭ್ಯಾಸ ಮುಗಿಯುತ್ತಿತ್ತು. ಅವರಿಗೆ ಧಾರವಾಡ ಬಿಡುವ ಮನಸ್ಸಿರಲಿಲ್ಲ. ಮಿತ್ರ ದೀಕ್ಷಿತರ ರೂಮಿನಲ್ಲಿ ವಾಸಿಸಿದ್ದರು. ಅವರಿಗೆ ತಮ್ಮ ಖರ್ಚಿಗೆ ತಿಂಗಳಿಗೆ ರೂ.75 ಅವಶ್ಯಕವಾಗಿತ್ತು. ನಾನು ಪ್ರತಿ ತಿಂಗಳು ರೂ.25 ಕಳಿಸಲು ಸಿದ್ಧನಾದೆ. ಇನ್ನು ಪ್ರತಿ ತಿಂಗಳು ಅವಶ್ಯಕವಾಗಿದ್ದ ರೂ.50 ಪಡೆಯಲು ನನ್ನ ಮಿತ್ರ ನಾರಾಯಣರಾವ್ ಅವರನ್ನು ಸಂಪರ್ಕಿಸಿದೆ. ಅವರು ನನಗೆ ಹೇಳಿದರು, ನಿಮ್ಮ ತಮ್ಮನಿಗೆ ಪಡೆದ ಹಣ ನೀವು ನನಗೆ ಮರಳಿ ಕೊಡಬೇಡಿ. ಅದನ್ನು ನೇರವಾಗಿ ಶರ್ಮಾ ಅವರಿಗೆ ಕಳಿಸಿರಿ. ಶರ್ಮಾ ಅವರು ನಮ್ಮ ಮನೆಗೆ ಬಂದು ಪ್ರತಿ ತಿಂಗಳು ನನ್ನಿಂದ ಹಣ ಮುಟ್ಟಿದೆ ಎಂದು ಬರೆದು ಕೊಡಲಿ, ನಿಮ್ಮ ಖಾತೆಯಿಂದ ಹಣ ಸಂದಾಯವಾಗಿದೆ ಎಂದು ನಾನು ಬರೆದುಕೊಳ್ಳುವೆ. ಒಂದು ವರ್ಷದ ನಂತರ ಶರ್ಮಾ ಅವರು ಪ್ರತಿ ತಿಂಗಳು ರೂ.50 ರಂತೆ ಪಡೆದ ಹಣ ನನಗೆ ಮರಳಿ ಕೊಡಲಿ ಎಂದು. ಇದೊಂದು ಬಹಳ ಒಳ್ಳೆಯ ಸಂಧಿ ಎಂದು ನಾವು ಭಾವಿಸಿದೆವು. ನನ್ನ ಹಾಗೂ ಶರ್ಮಾ ಅವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಪಡೆದಿದ್ದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more