• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಸರ್ವಶ್ರೇಷ್ಠ

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|

"ಮಕ್ಕಳ ಆಹಾರ"ದ ಬಗ್ಗೆ ಡಾ|| ಎಸ್. ಪಾರ್ವತಿ ನಾಗೇಂದ್ರ ಅವರು ವಿವರವಾಗಿ ಬರೆದಿದ್ದಾರೆ. ಅವರು ಹೇಳುವ ಮಹತ್ವದ ಮಾತುಗಳು ಹೀಗಿವೆ:

"ಹುಟ್ಟಿದ ಮಗುವಿಗೆ ತಾಯಿಯ ಹಾಲು ಎಲ್ಲ ರೀತಿಯಿಂದಲೂ ಸರ್ವೋತ್ತಮ ಆಹಾರ. ತಾಯಿಯ ಹಾಲು ಅಮೃತವಿದ್ದಂತೆ, ಅದು ಮಧುರಸವುಳ್ಳದ್ದು. ಪೌಷ್ಟಿಕವಾಗಿಯೂ, ಶಕ್ತಿದಾಯಕವಾಗಿಯೂ ಮತ್ತು ಜೀರ್ಣಕ್ಕೆ ಸುಲಭವೂ ಆಗಿದೆ. ತಾಯಿ ತನ್ನ ಮಗುವಿಗೆ ಹಾಲು ಕೊಡುವುದರಿಂದ ತನ್ನ ಆರೋಗ್ಯಕ್ಕೆ ಹಾನಿ ಅಥವಾ ತನ್ನ ಸೌಂದರ್ಯಕ್ಕೆ ಕುಂದು ಬರುತ್ತದೆ ಎಂಬುದು ತಪ್ಪುಕಲ್ಪನೆ. ತಾಯಿಗೆ ಪ್ರಸವದ ನಂತರ ಹಾಲು ಬರುವ ಮೊದಲು ಹಳದಿ ದ್ರವ ಬರುತ್ತದೆ. ಇದಕ್ಕೆ "ಕೊಲೊಸ್ಟ್ರಮ್" ಎನ್ನುತ್ತಾರೆ. ಈ ಹಾಲನ್ನು ಅವಶ್ಯ ಮಕ್ಕಳಿಗೆ ಕುಡಿಸಬೇಕು. ಇದರಲ್ಲಿ ರೋಗನಿರೋಧಕ ಶಕ್ತಿಯಿರುತ್ತದೆ.

ತಿಂಗಳವರೆಗೆ ಎರಡು ಗಂಟೆಗೊಮ್ಮೆ ಹಾಲು ಕೊಡಬೇಕಾಗುತ್ತದೆ. ಮಗು ಅತ್ತರೆ ಹಾಲು ಕೊಡಬಹುದು. ಹೆಚ್ಚು ಹಾಲು ಅಜೀರ್ಣವಾದೀತು ಎಂಬ ಭಯವಿಲ್ಲ. ನಿತ್ಯ ಮಧ್ಯಾಹ್ನ ಎರಡು ಚಮಚೆ ಬಿಸಿ ಹಾಲಿಗೆ ಒಂದು ಚಮಚೆ ಒಳ್ಳೆಯ ತುಪ್ಪ ಬೆರೆಸಿ ಕುಡಿಸಬೇಕು. ಇದರಿಂದ ಮಗುವಿನ ಶರೀರಕ್ಕೆ ಜಿಡ್ಡು ದೊರೆಯುತ್ತದೆ, ಮಲಬದ್ಧತೆ ಉಂಟಾಗುವುದಿಲ್ಲ. ಆಯುರ್ವೇದದಲ್ಲಿ ತುಪ್ಪದ ಗುಣಗಳನ್ನು ವಿವರಿಸುವಾಗ ಇದು ಧೀ, ಧೃತಿ, ಸ್ಮೃತಿ ಹೆಚ್ಚಿಸುವುದೆಂದು ಹೇಳಿದೆ.


ತಾಯಿಯ ಹಾಲು ಸಾಕಾಗದಿದ್ದರೆ, ಮೇಲಿನ ಹಾಲು ಕೊಡಬೇಕು. ಆಗ ಬಾಟಲಿ ಹಾಗೂ ನಿಪ್ಪಲ್ ಬಿಸಿನೀರಿನಲ್ಲಿ ತೊಳೆದು ಬಳಸಬೇಕು. ಹಸುವಿನ ಹಾಲು ತುಂಬಾ ಶ್ರೇಷ್ಠ. ಹಾಲು ಕುಡಿಸುವಾಗ ಮೂರು ಹಂತಗಳಿವೆ. (1) ಕ್ಷೀರಾದ - ಮೂರು ತಿಂಗಳವರೆಗೆ ಬರೀ ಹಾಲನ್ನು ಕುಡಿಸಬೇಕು. (2) ಕ್ಷೀರಾನ್ನಾದ - ನಾಲ್ಕು ತಿಂಗಳಿನಿಂದ ಎರಡು ವರ್ಷಗಳವರೆಗೆ ಹಾಲಿನಿಂದ ಅನ್ನ ಬೆರೆಸಿ ಕೊಡಬೇಕು. (3) ಅನ್ನಾದ - ಎರಡು ವರ್ಷಗಳ ಗಟ್ಟಿ ಆಹಾರ ಕೊಡಬೇಕು.

ಮಗುವಿಗೆ ನೀಡುತ್ತಿರುವ ಆಹಾರಕ್ಕೆ ಸ್ವಲ್ಪ ತರಕಾರಿ, ಹಣ್ಣುಗಳನ್ನು ಸೇರಿಸಿ ಕೊಡಬಹುದು. ತರಕಾರಿ ಚೆನ್ನಾಗಿ ತೊಳೆದು ಬೇಯಿಸಿರಬೇಕು. ಒಂದು ವರುಷದ ನಂತರ ಮಕ್ಕಳು ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರೂ ತೆಗೆದುಕೊಳ್ಳುವ ಆಹಾರವನ್ನೇ ಸೇವಿಸುತ್ತವೆ. ಸಂಜೆ ಹೊತ್ತು ಬಿಸ್ಕಿತ್ ಅಥವಾ ಕೇಕ್ ಕೊಡಬಹುದು. ರಾತ್ರಿ ಬೇಗ ಊಟಮಾಡಿಸುವ ಅಭ್ಯಾಸ ಇಟ್ಟುಕೊಳ್ಳಬೇಕು. ಮಲಗುವಾಗ ಹಾಲನ್ನು ಕೊಡಬಹುದು. ಮೂರು ವರುಷಗಳವರೆಗಿನ ಮಕ್ಕಳಿಗೆ ಕರಿದ ಪದಾರ್ಥ ಕೊಡಬಾರದು. ಎಷ್ಟೋ ಮಕ್ಕಳಿಗೆ ರಾತ್ರಿ ವೇಳೆ ಟಿ.ವಿ. ಕಾರ್ಯಕ್ರಮ ನೋಡುತ್ತ ಊಟಮಾಡುವ ಅಭ್ಯಾಸವಿರುತ್ತದೆ. ಅದು ಒಳ್ಳೆಯದಲ್ಲ. ಒಳ್ಳೆಯ ಮನಸ್ಥಿತಿ ಇರುವುದು ಅವಶ್ಯ. ಆಹಾರದ ಮೇಲೆ ಮನಸ್ಸಿನ ಪರಿಣಾಮವಾಗುತ್ತದೆ. ತಂದೆತಾಯಿಗಳಿಗೆ ಸೇರದ ಆಹಾರ ಮಕ್ಕಳಿಗೆ ಕೊಡಬಾರದು. ಮಕ್ಕಳಿಗೆ ಎಲ್ಲ ಜೀವಸತ್ವಗಳನ್ನು ಒಳಗೊಂಡ ಆಹಾರ ಕೊಡಬೇಕು. ಆಹಾರದ ಪೋಷಕಾಂಶಗಳಾದ ಸಾರಜನ, ಪಿಷ್ಠ, ಕೊಬ್ಬು ತುಂಬಾ ಅಗತ್ಯ. ಇದು ರಕ್ತವಾಗಬೇಕಾದರೆ, ಎ,ಬಿ,ಸಿ,ಡಿ,ಇ, ಕೆ ಸತ್ವಗಳು (ವಿಟಮಿನ್) ಲವಣಾದಿಗಳು (ಕ್ಯಾಲ್ಸಿಯಂ), ಕಬ್ಬಿಣ (ಅಯರ್ನ್) ಬೇಕು. ಸಾರಜನಕ ತುಂಬಾ ಅವಶ್ಯಕವಾದ ಪೋಷಕಾಂಶ. (ಹಾಲು, ಮೀನು, ಮೊಟ್ಟೆ, ಮಾಂಸ, ಬೇಳೆ, ಕಾಳು, ಬೀಜಗಳಲ್ಲಿ ಅಧಿಕವಾಗಿರುತ್ತದೆ.) ಇದರ ಕೊರತೆಯಿಂದ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. "ಎ" ಸತ್ವ ಕಡಿಮೆಯಾದರೆ ಕಣ್ಣಿಗೆ ತೊಂದರೆಯುಂಟಾಗುತ್ತದೆ. "ಬಿ" ಸತ್ವದ ಕೊರತೆಯಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. "ಸಿ" ಸತ್ವದ ಕೊರತೆಯಿಂದ ಹಲ್ಲು ಹಾಗೂ ಒಸಡಿನ ತೊಂದರೆವುಂಟಾಗುತ್ತದೆ. "ಡಿ" ಸತ್ವದ ಕೊರತೆಯಿಂದ ಮೂಳೆಗಳು ಮೃದುವಾಗುತ್ತವೆ. ಬೇಳೆಗಳು ಬಹಳ ಮುಖ್ಯವಾದ ಆಹಾರ. ಇದರಲ್ಲಿ ಸಾರಜನಕ ಅಧಿಕವಾಗಿರುತ್ತದೆ. ಸಕ್ಕರೆ, ಬೆಲ್ಲ, ಜೇನುತುಪ್ಪ ಶಕ್ತಿದಾಯಕವಾಗಿವೆ. ಮಕ್ಕಳ ತೂಕದ ಬಗ್ಗೆ ಗಮನವಿರಬೇಕು. ರಾಗಿ ಹುರಿಟ್ಟು, ಮೊಳಕೆ ಕಟ್ಟಿದ ಕಾಳುಗಳು, ಉಸುಲಿ, ಕೋಸಂಬರಿ ಆರೋಗ್ಯ್ಸಕ್ಕೆ ಒಳ್ಳೆಯ ಆಹಾರ.

ಋತುಮಾನಕ್ಕೆ ತಕ್ಕ ಆಹಾರ : ಎಂಬ ಪ್ರಬಂಧವನ್ನು ಡಾ||ಸಂಧ್ಯಾ ಬರೆದಿದ್ದಾರೆ. ಆಯುರ್ವೇದದ ಮೂಲಪುರುಷ ಧನ್ವಂತರಿ, ವೈದ್ಯರ ಗುಣಮಟ್ಟ ತಿಳಿಯಲು ಪಕ್ಷಿರೂಪದಲ್ಲಿ ಬಂದು ಪ್ರತಿಯೊಬ್ಬ ವೈದ್ಯರ ಬಳಿ ಹೋಗಿ ಕೋರುಕ್, ಕೋರುಕ್, ಕೋರುಕ್ ಎಂದು ಮೂರು ಬಾರಿ ಉಚ್ಚರಿಸಿದಾಗ ಯಾರಿಗೂ ಉತ್ತರಿಸಲಾಗಲಿಲ್ಲವಂತೆ. ಕೊನೆಯಲ್ಲಿ ವೈದ್ಯರಾದ ವಾಗ್‌ಭಟಾಚಾರ್ಯರು ಹಿತಭುಕ್, ಮಿತಭುಕ್, ಋತಭುಕ್ ಎಂದು ಉತ್ತರಿಸಿದರಂತೆ. ಹಿತವಾದ, ಮಿತವಾದ, ಋತುವಿಗೆ ತಕ್ಕ ಆಹಾರ ಸೇವಿಸುವವರೇ ಆರೋಗ್ಯವಂತರಾಗಿರುತ್ತಾರೆಂದು ಇದರ ಅರ್ಥ.

ಒಂದು ವರ್ಷಕ್ಕೆ ಎರಡು ಅಯನ (ಉತ್ತರಾಯಣ, ದಕ್ಷಿಣಾಯಣ). ಒಂದು ಅಯನದಲ್ಲಿ ಮೂರು ಋತು. ಒಟ್ಟು ಆರು ಋತುಗಳು. ಹೇಮಂತ ಋತು (ಮಾರ್ಗಶಿರ - ಪುಷ್ಯ ಅಂದರೆ ಡಿಸೆಂಬರ್ - ಜನವರಿ), ಶಿಶಿರ ಋತು (ಮಾಘ - ಪಾಲ್ಗುಣ ಅಂದರೆ ಫೆಬ್ರವರಿ - ಮಾರ್ಚ್), ವಸಂತ ಋತು (ಚೈತ್ರ - ವೈಶಾಖ ಅಂದರೆ ಏಪ್ರಿಲ್ - ಮೇ), ಗ್ರೀಷ್ಮ ಋತು (ಜೇಷ್ಠ - ಆಷಾಡ ಅಂದರೆ ಜೂನ್ - ಜುಲೈ), ವರ್ಷಾ ಋತು (ಶ್ರಾವಣ - ಭಾದ್ರಪದ ಅಂದರೆ ಆಗಸ್ಟ್ - ಸೆಪ್ಟೆಂಬರ್), ಶರದ್ ಋತು (ಅಶ್ವೀಜ್ - ಕಾರ್ತೀಕ ಅಂದರೆ ಅಕ್ಟೋಬರ್ - ನವೆಂಬರ್) - ಈ ಋತುಗಳಲ್ಲಿ ಸೇವಿಸಬೇಕಾದ ಆಹರ ಮತ್ತು ಪಾನೀಯಗಳ ವಿವರಗಳು ಈ ಲೇಖನದಲ್ಲಿವೆ.

"ಗರ್ಭಿಣಿಯರ ಆಹಾರಕ್ರಮ" ಎಂಬ ಪ್ರಬಂಧವನ್ನು ಡಾ|| ಲಕ್ಷ್ಮಿಗಣೇಶ ಅವರು ಬರೆದಿದ್ದಾರೆ. ಗರ್ಭಧರಿಸಿದ ಮೊದಲ ತಿಂಗಳಿಂದ ಹಿಡಿದು ಒಂಭತ್ತನೆಯ ಮಾಸದವರೆಗೂ ಸೇವಿಸಬೇಕಾದ ಆಹಾರಗಳ ವಿವರಗಳು ಇಲ್ಲಿವೆ. ಮಾಸಾನುಮಾಸಿಕ ಪಥ್ಯದಿಂದಾಗುವ ಲಾಭಗಳ ಬಗ್ಗೆ, ಗರ್ಭಿಣಿಯರಿಗೆ ಅಗತ್ಯವಾದ ಪೋಷಕಾಂಶಗಳ ಬಗ್ಗೆ, ಖನಿಜಾಂಶಗಳ ಬಗ್ಗೆ ವಿವರವಾಗಿ ವಿಸ್ತರಿಸುತ್ತಾರೆ. ಬಾಣಂತಿಯರ ಆಹಾರ ಕ್ರಮದ ಬಗ್ಗೆ, ಅವರು ವರ್ಜಿಸಬೇಕಾದ ಆಹಾರದ ಬಗ್ಗೆ, ಆಯಾ ದೇಶಕ್ಕೆ ಅನುಗುಣವಾದ ಪಥ್ಯಾಹಾರದ ಬಗ್ಗೆ ಬರೆಯುತ್ತಾರೆ.

ಮಧುಮೇಹಿಗಳಿಗೆ ಆಹಾರಕ್ರಮ ಹೇಗಿರಬೇಕು? ತಿಳಿಯಲು ಮುಂದಿನವಾರದವರೆಗು ಕಾಯಿರಿ.

English summary
GV Kulkarni introduces book written by ayurvedic consultant dr vasundhara bhupathi on food and health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X