ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಜೀವನವೇ ಒಂದು ಯುದ್ಧ : ಭಗವದ್ ಗೀತೆ

By Staff
|
Google Oneindia Kannada News

Srikrishna preeching Bhagavad Gita to Arjuna
ಭಗದ್ಗೀತೆಯು ನಮ್ಮ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನಮ್ಮ ಜೀವನವೇ ಒಂದು ಯುದ್ಧದಂತೆ ಇದೆ. ಹೆಜ್ಜೆಹೆಜ್ಜೆಗೂ ನಾವು ಸಮಸ್ಯೆಗಳನ್ನು ಎದುರಿಸುತ್ತೇವೆ. ಜೀವನದ ಯುದ್ಧದಲ್ಲಿ ನಾವು ವಿಜಯವನ್ನು ಸಂಪಾದಿಸಬೇಕಾದರೆ ನಾವು ಸಮಸ್ಯೆಗಳನ್ನು ಎದುರಿಸಬೇಕು.700 ಶ್ಲೋಕಗಳಿರುವ ಈ ವಾಮನ ಗಾತ್ರದ ಧರ್ಮಸಂಹಿತೆಯ ಬಗ್ಗೆ ಟೀಕೆ-ಟಿಪ್ಪಣಿ-ವ್ಯಾಖ್ಯಾನ-ಪ್ರವಚನಗಳ ಗಾತ್ರ ಲಕ್ಷಾವಧಿಯಾಗಿದೆ, ತ್ರಿವಿಕ್ರಮಾಕಾರದಲ್ಲಿ ಬೆಳೆದುನಿಂತಿದೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಜಗತ್ತಿನ ಯಾವ ಧರ್ಮಗ್ರಂಥಕ್ಕೂ ದೊರೆಯದಷ್ಟು ಪ್ರಸಿದ್ಧಿ ವೇದವ್ಯಾಸ ಮುನಿ ವಿರಚಿತ ಶ್ರೀಮದ್ ಭಗವದ್ಗೀತೆಗೆ ದೊರೆತಿದೆ ಎನ್ನಬಹುದು. ಜಗತ್ತಿನ ಎಲ್ಲ ಪ್ರಮುಖ ಭಾಷೆಗಳಲ್ಲಿ ಇದರ ಅನುವಾದ ಲಭ್ಯವಾಗಿದೆ. ಜಗತ್ತಿನ ಎಲ್ಲ ಹಿರಿಯ ವಿದ್ವಾಂಸರು ಇದರ ಮಹತಿಯ ಬಗ್ಗೆ ಬರೆದಿದ್ದಾರೆ. ಸರ್ವಧರ್ಮ ಸಮ್ಮೇಲನದಲ್ಲಿ ಎಲ್ಲ ಧರ್ಮಗ್ರಂಥಗಳನ್ನು ಇಟ್ಟಿದ್ದರಂತೆ. ಬಹಳ ಚಿಕ್ಕದೆಂದು ಗೀತೆಯನ್ನು ಗ್ರಂಥರಾಶಿಯ ಮೇಲೆ ಇಟ್ಟಿದ್ದರು. ಸ್ವಾಮಿ ವಿವೇಕಾನಂದರು ಉದ್ಗಾರ ತೆಗೆದರಂತೆ, ಎಲ್ಲ ಧರ್ಮಗ್ರಂಥಗಳಲ್ಲಿ ಗೀತೆ ಶಿಖರಪ್ರಾಯವಾಗಿದೆ ಎಂದು. ಇದನ್ನು ಕೇಳಿದ ಒಬ್ಬ ಆಗಂತುಕ ಅದನ್ನು ಕೆಳಗೆ ಇಟ್ಟನಂತೆ. ಆಗ ವಿವೇಕಾನಂದರು ಅಂದರಂತೆ, ನೋಡಿ, ಗೀತೆಯು ಎಲ್ಲ ಧರ್ಮಗ್ರಂಥಗಳ ಬೇರಿನಂತಿದೆ! ಎಂದು. ಈ ಉಪಾಖ್ಯನವು ಕಪೋಲ ಕಲ್ಪಿತ, ಆಧಾರ ರಹಿತ ಎನ್ನುವವರಿದ್ದಾರೆ. ಆದರೆ ವಿವೇಕಾನಂದರು ಹಾಗೆ ಉದ್ಗಾರ ತೆಗೆದಿರುವ ಸಾಧ್ಯತೆ ಇದೆ, ಮತ್ತೆ ಶ್ರೀಮದ್ ಭಗವದ್ಗೀತೆಗೆ ಅಂತಹ ಮೆಚ್ಚಿಗೆ ಪಡೆಯುವ ಅರ್ಹತೆ ಇದೆ.

ಭಗವದ್ಗೀತಾ ಕಿಂಚಿತಧೀತಾ, ಗಂಗಾಜಲರವ ಕಣಿಕಾಪೀತಾ ಎಂದು ಶಂಕಾರಾಚಾರ್ಯರು ಹಾಡಿದ್ದಾರೆ. ಗೀತೆಯ ಅಭ್ಯಾಸದಲ್ಲಿ ತೊಡಗುವುದೆಂದರೆ ಸಮುದ್ರದ ಆಚೆಯ ದಂಡೆಯನ್ನು ಕಾಣಲು ಈಸುಬಿದ್ದಂತೆ. ಇದರಲ್ಲಿಯ ಒಂದೊಂದು ಶ್ಲೋಕ ಮಾಣಿಕ್ಯದ ಶಲಾಕೆಯಂತೆ, ಮುತ್ತಿನಹಾರದಂತೆ, ಜ್ಞಾನಜ್ಯೋತಿಯಂತೆ ಪ್ರಜ್ವಲಿಸುತ್ತಿದೆ. ಸುಮ್ಮನೆ ವಿಚಾರಿಸುತ್ತ ಕುಳಿತಾಗ ಇದರ ಕೆಲವು ಶ್ಲೋಕಗಳು ನೆನಪಿಗೆ ಬರುತ್ತವೆ. ಇದರಲ್ಲಿಯ ಒಂದೊಂದೇ ಶ್ಲೋಕ ಮನದಲ್ಲಿ ಇಡೀ ದಿನ ನಿನಾದಿಸ ತೊಡಗುತ್ತದೆ. ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ, ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ (ಎಲ್ಲ ಉಪನಿಷತ್ತುಗಳು ಗೋವುಗಳ ಹಾಗೆ, ಪಾರ್ಥನೆಂಬ ಕರುವಿಗೆ ಗೋಪಾಲನಾದ ಕೃಷ್ಣನು ಗೀತೆಯೆಂಬ ಅಮೃತವನ್ನು ಕರೆದು ಉಣಬಡಿಸಿದ.) ಎಂಥ ಅದ್ಭುತ ಕಲ್ಪನೆ. ನಮ್ಮ ಹೃದಯಕಮಲದಲ್ಲಿ ವಾಸಿಸುವ ಭಗವಂತ ನಮಗೇ ಗೀತಾಮೃತವನ್ನು ಉಣಬಡಿಸುತ್ತಿದ್ದಾನೆ ಎಂಬ ಭಾವ ಮನದಲ್ಲಿ ಆವರಿಸುತ್ತದೆ. ಒಂದೊಂದೇ ಶ್ಲೋಕದ ಮನನವೂ ತಲ್ಲಣಗೊಂಡ ಮನಕ್ಕೆ ನೆಮ್ಮದಿಯನ್ನು ನೀಡುತ್ತದೆ.

ಸುಖ-ದುಃಖ ಯಾರಿಗಿಲ್ಲ? ಬರಿ ಸುಖಿಯಾದವ ಅಥವಾ ಕೇವಲ ದುಃಖಿಯಾದವ ಜಗತ್ತಿನಲ್ಲಿ ಇಲ್ಲ. ಎಲ್ಲರಿಗೂ ಸುಖದುಃಖದ ಪಾಲು ದೊರೆಯುತ್ತದೆ. ಕೆಲವರಿಗೆ ಹೆಚ್ಚಿನ ಪ್ರಮಾಣದ ಸುಖ ದೊರೆತರೆ ಇನ್ನು ಕೆಲವರಿಗೆ ಹೆಚ್ಚಿನ ಪ್ರಮಾಣದ ದುಃಖ ದೊರೆತಿರುತ್ತದೆ. ಹಗಲು ಬೆಳಕುಗಳಂತೆ ಸುಖದುಃಖಗಳ ಪರಿಭ್ರಮಣ ನಡೆದೇ ಇರುತ್ತದೆ. ಜೀವನದಲ್ಲಿ ಸುಖ-ದುಃಖಗಳ ಜುಗಲಬಂದಿ ನಡೆದಾಗ ನನಗೆ ಸದಾ ನೆನಪಾಗುವ ಭಗವದ್ಗೀತೆಯ ಶ್ಲೋಕ ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ | ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ || (ಅಧ್ಯಾಯ 2, ಶ್ಲೋಕ 38) ಎಂಬುದು. (ಸುಖ-ದುಃಖಗಳನ್ನು ಲಾಭ-ಹಾನಿಗಳನ್ನು ಜಯ-ಅಪಜಯಗಳನ್ನು ಸಮಾನ ಎಂದು ಭಾವಿಸಿ, ಯುದ್ಧಕ್ಕೆ ಸನ್ನದ್ಧನಾಗು, ಇದರಿಂದ ಯಾವ ಪಾಪವನ್ನೂ ನೀನು ಹೊಂದುವುದಿಲ್ಲ.)

ಮಹಾಭಾರತ ಯುದ್ಧದ ಪ್ರಾರಂಭದಲ್ಲಿ ತನ್ನ ಕುಲಬಾಂಧವರನ್ನು ವೈರಿಸೇನೆಯಲ್ಲಿ ಕಂಡು ಅರ್ಜುನನು ಶಸ್ತ್ರಸಂನ್ಯಾಸ ಕೈಕೊಂಡ ಸಂದರ್ಭ ನೆನಪಿಗೆ ಬರುತ್ತದೆ. ಅವನು ಹೇಡಿಯಂತೆ, ಷಂಢನಂತೆ ವರ್ತಿಸಿದಾಗ ಯುದ್ಧಕ್ಕೆ ಕಂಕಣಬದ್ಧನಾಗಲು ಸಾರಥಿಯಾದ, ಸಖನಾದ, ಆಪದ್ಬಾಂಧವನಾದ ಶ್ರೀಕೃಷ್ಣ ಬೋಧಿಸುತ್ತಾನೆ. ಸಾಂಖ್ಯಯೋಗವೆಂಬ ಎರಡನೆಯ ಅಧ್ಯಾಯದಲ್ಲಿ ಬರುವ ಶ್ಲೋಕವಿದು. ಹಾಗೆ ನೋಡಿದರೆ ನಮ್ಮ ಜೀವನವೇ ಒಂದು ಯುದ್ಧದಂತೆ ಇದೆ. ಹೆಜ್ಜೆಹೆಜ್ಜೆಗೂ ನಾವು ಸಮಸ್ಯೆಗಳನ್ನು ಎದುರಿಸುತ್ತೇವೆ. ಜೀವನದ ಯುದ್ಧದಲ್ಲಿ ನಾವು ವಿಜಯವನ್ನು ಸಂಪಾದಿಸಬೇಕಾದರೆ ನಾವು ಸಮಸ್ಯೆಗಳನ್ನು ಎದುರಿಸಬೇಕು. ಸುಖವಿರಲಿ ದುಃಖವಿರಲಿ, ಲಾಭವಿರಲಿ ಹಾನಿಯಿರಲಿ, ಜಯವಿರಲಿ ಅಪಜಯವಿರಲಿ, ನಾವು ಸಮಭಾವವನ್ನು ಉಳಿಸಿಕೊಳ್ಳಬೇಕು, ಸಮಭಾವವನ್ನು ಗಳಿಸಿಕೊಳ್ಳಬೇಕು. ಈ ಶ್ಲೋಕಕ್ಕಿಂತ ಮೊದಲಿದ್ದ ಶ್ಲೋಕದಲ್ಲಿ ಶ್ರೀಕೃಷ್ಣ ಪಾರ್ಥನಿಗೆ ಹೇಳುತ್ತಾನೆ, ಸತ್ತರೆ ಸ್ವರ್ಗವನ್ನು ಪಡೆಯುತ್ತೀ, ಗೆದ್ದರೆ ಭೂಮಿಯನ್ನು ಆಳುತ್ತೀ, ಆದ್ದರಿಂದ ಕುಂತಿಯ ಮಗನೇ, ಯುದ್ಧಮಾಡಲು ನಿಶ್ಚಯಿಸು ಎಂದು.

ನಾವೆಲ್ಲ ಕಾಲೇಜು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಸಹಪಾಠಿಗಳಾಗಿದ್ದ ರಾಘವೇಂದ್ರ ಎಂಬವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಅವರು ವೇದೋಪನಿಷತ್ತುಗಳ ಬಗ್ಗೆ ಆಳವಾದ ತಿಳಿವಳಿಕೆ ಪಡೆದಿದ್ದರು. ಹೆಜ್ಜೆ ಹೆಜ್ಜೆಗೂ ನಮಗೆ ಭವದ್ಗೀತೆಯ ಶ್ಲೋಕಗಳನ್ನು ಉದ್ಧರಿಸಿ ಮಾರ್ಗದರ್ಶನ ಮಾಡುತ್ತಿದ್ದರು. ಸುಖ-ದುಃಖಗಳನ್ನು ಸಮಾನವಾಗಿ ನೋಡುವುದೆಂದರೇನು? ಇದೇ ದೊಡ್ದ ಸಮಸ್ಯೆಯಾಗಿ ನಮ್ಮನ್ನು ಕಾಡುತ್ತಿತ್ತು. ಮೇಲಿನ ಶ್ಲೋಕದ ವಿವರಣೆಯನ್ನು ನೀಡಲು ನಾವು ಕೇಳಿದ್ದೆವು. ಅವರು ನಮಗೆ ಹೇಳಿದ್ದರು, ಸುಖವಾದಾಗ ಹಿಗ್ಗುವದು ಮನುಷ್ಯನ ಸಹಜ ಗುಣ, ಆದ್ದರಿಂದ ದುಃಖವಾದಾಗ ಕುಗ್ಗುವದೂ ಅಷ್ಟೇ ಸಹಜವಾದದ್ದು. ಇದನ್ನು ಸಮಾನವಾಗಿ ಕಾಣಲು ಪ್ರಯತ್ನಿಸಬೇಕು. ಇದಕ್ಕೆ ಕೆಲವು ಸೋಪಾನಗಳಿವೆ. ಮೊದಲು ನೀವು ಸುಖದ ಸಮಯದಲ್ಲಿ, ಉದ್ರೇಕ, ಜಿಗಿದಾಟ, ಅತಿ ಉತ್ಸಾಹ ತೋರುವುದನ್ನು ನಿಲ್ಲಿಸಬೇಕು. ಅಲ್ಲಿ ಸಂಯಮ ಸಾಧಿಸಬೇಕು. ಅದು ಸಾಧ್ಯವಾದಾಗ, ದುಃಖದ ಸಮಯದಲ್ಲಿ ದುಃಖವನ್ನೂ ಹತೋಟಿಗೆ ತರಲು ಸಾಧ್ಯವಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲವನ್ನೂ ಸಮರ್ಪಣ ಭಾವದಿಂದ ಸ್ವೀಕರಿಸಲು ಕಲಿಯಬೇಕು. ಸುಖವಾದಾಗ ಅದನ್ನು ದಯಪಾಲಿಸಿದವ ದೇವರು ಎಂದು ಭಾವಿಸಿ ಅವನಿಗೆ ಕೃತಜ್ಞತೆ ತೋರಿಸಬೇಕು, ದುಃಖದ ಪ್ರಸಂಗದಲ್ಲಿ ಅದನ್ನೂ ದೇವರಿಗೇ ಅರ್ಪಿಸಿಬಿಡಬೇಕು. ಅಂದರೆ ದೇವರು ತನ್ನ ಸತ್ವಪರೀಕ್ಷೆ ಮಾಡುತ್ತಿದ್ದಾನೆ ಎಂದು ಭಾವಿಸಬೇಕು. ಈ ರೀತಿ ಎಲ್ಲವನ್ನೂ ಈಶ್ವರಾರ್ಪಣ ಮಾಡಿದಾಗ ಸುಖ-ದುಃಖದಲ್ಲಿ ಸಮಭಾವ ಸಾಧಿಸಲು ಸಾಧ್ಯ.- ಎಂದು.

ಹೇಳುವದು ಬಹಳ ಸುಲಭ, ಆಡಿದ್ದನ್ನು ಆಚರಣೆಯಲ್ಲಿ ತರುವದು ಬಹಳ ಕಷ್ಟದ ಕೆಲಸ. ಇದು ಸರ್ವಸಾಮಾನ್ಯರಿಗೂ ತಿಳಿದ ವಿಷಯ. ಸುಖ-ದುಃಖಗಳನ್ನು, ಲಾಭ-ಹಾನಿಗಳನ್ನು, ಸೋಲು-ಗೆಲವುಗಳನ್ನು ಸಮಾನವಾಗಿ ನೋಡುವುದು ಸ್ಥಿತಪ್ರಜ್ಞರಿಗೆ ಮಾತ್ರ ಸಾಧ್ಯ. ಸ್ಥಿತಪ್ರಜ್ಞರು, ಪದ್ಮಪತ್ರಮಿವಾಂಭಸಿ ಯಂತೆ ಅಂದರೆ ನೀರಿನಲ್ಲಿಯ ಕಮಲಪತ್ರದಂತೆ ಇರುತ್ತಾರೆ. ನೀರಿನಲ್ಲಿದ್ದರೂ ಕಮಲದ ಎಲೆಗೆ ನೀರಿನ ಲೇಪವಾಗುವುದಿಲ್ಲ. ಇಂಥ ಸ್ಥಿತಿ ಪಡೆಯಲು ಇಂದ್ರಿಯನಿಗ್ರಹ ಬಹಳ ಮಹತ್ವದ್ದು. ಪತಂಜಲಿ ಮಹರ್ಷಿಗಳು ತಮ್ಮ ಯೋಗಶಾಸ್ತ್ರದಲ್ಲಿ ಮನಸ್ಸನ್ನು ಹೇಗೆ ನಿಗ್ರಹಿಸಬೇಕೆನ್ನುವುದರ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಅವರ ಪ್ರಕಾರ ಯೋಗ ಎಂದರೆ ಚಿತ್ತವೃತ್ತಿ ನಿರೋಧಃ. ಯೋಗವೆಂದರೆ ಕೇವಲ ದೈಹಿಕ ಆಸನಮಾತ್ರವಲ್ಲ. ಎಲ್ಲ ಇಂದ್ರಿಯಗಳನ್ನು ನಿಗ್ರಹಿಸುವ ಒಂದು ಸುಲಭೋಪಾಯ. ಇದಕ್ಕೆ ಮೂಲಭೂತ ತಳಪಾಯ ಅಂದರೆ ಯಮ-ನಿಯಮಗಳ ಅನುಷ್ಠಾನ. (ಯಮ-ಅಹಿಂಸಾ, ಸತ್ಯ, ಅಸ್ತ್ಯೇಯ, ಬ್ರಹ್ಮಚರ್ಯ, ಅಪರಿಗ್ರಹ; ನಿಯಮ- ಶೌಚ, ಸಂತೋಷ, ತಪಸ್, ಸ್ವಾಧ್ಯಾಯ, ಈಶ್ವರಪ್ರಣಿಧಾನ). ಯಮ-ನಿಯಮಗಳನ್ನು ಪಾಲಿಸದೇ ಬರಿ ಯೋಗಾಭ್ಯಾಸದಲ್ಲಿ ತೊಡಗಿರುವ ಯೋಗಸಾಧಕರ ಸಾಧನೆ ಭದ್ರಬುನಾದಿ ಇಲ್ಲದ ಸೌಧದಂತೆ ಅಭದ್ರ.

ಶ್ರೀ ಕೃಷ್ಣ ಈ ಸಂದರ್ಭದಲ್ಲಿ ಹೇಳುವ ಇನ್ನೊಂದು ಮಹತ್ವದ ಬೋಧನೆ, ಕರ್ಮಣ್ಯೇವಾಧಿಕಾಸ್ತೇ ಮಾ ಫಲೇಷು ಕದಾಚನ | ಮಾಕರ್ಮ ಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ || (ಅಧ್ಯಾಯ 2, ಶ್ಲೋಕ 47). (ನಿನಗೆ ಕರ್ಮವನ್ನು ಮಾಡುವುದರಲ್ಲಿ ಅಧಿಕಾರವಿದೆಯೇ ಹೊರತು ಫಲಾಪೇಕ್ಷೆ ಮಾಡುವ ಅಧಿಕಾರವಿಲ್ಲ. ನೀನು ಕರ್ಮಮಾಡುವಾಗ ಫಲಾಪೇಕ್ಷೆಯುಳ್ಳವನಾಗಬೇಡ, ಕರ್ಮ ಮಾಡದೇ ಇರುವಲ್ಲಿ ನಿನ್ನ ಸ್ನೇಹ ಬೇಡ). ನಾವು ಫಲಾಪೇಕ್ಷೆ ಇಲ್ಲದೇ ಯಾವ ಕೆಲಸವನ್ನೂ ಮಾಡುವುದಿಲ್ಲ. ಆದ್ದರಿಂದ ನಮಗೆ ಅಪೇಕ್ಷಿಸಿದ ಫಲ ದೊರೆಯದೆ ಇದ್ದಾಗ ಹೆಚ್ಚಿನ ದುಃಖ ಉಂಟಾಗುತ್ತದೆ. ಒಬ್ಬ ವ್ಯಾಖ್ಯಾನಕಾರರು ಇದನ್ನು ಸ್ಪಷ್ಟಪಡಿಸುತ್ತಾರೆ. ಫಲವನ್ನು ಕೊಡುವವ ಪರಮಾತ್ಮ, ಆದ್ದರಿಂದ ಅದನ್ನು ಅವನಿಗೆ ಬಿಟ್ಟುಬಿಡು ಎಂದು ಹೇಳಿದ್ದಾರೆ. ಇನ್ನು ಕರ್ಮವನ್ನು ಮಾಡದೇ ಇರುವುದೂ ತಪ್ಪು ಎಂಬ ಅಭಿಪ್ರಾಯವೂ ಇಲ್ಲಿದೆ.

ಇಂಥ ಶ್ಲೋಕಗಳಲ್ಲಿ ನಮ್ಮ ಮನಸ್ಸಿಗೆ ನೆಮ್ಮದಿ ತರುವ ವಿಚಾರ ಅಡಗಿರುತ್ತದೆ. ಜೀವನದಲ್ಲಿ, ನಾವು ಎದುರಿಸುವ ಸಮಸ್ಯೆಗಳಿಗೆ, ಪರಿಹಾರವನ್ನು ಒದಗಿಸುವ ಸುವಿಚಾರ ಇಂಥ ಶ್ಲೋಕಗಳಲ್ಲಿ ಅಡಗಿದೆ. ಇಂಥ ಶ್ಲೋಕಗಳನ್ನು ಬರೆದು ಗೋಡೆಗೆ ಅಂಟಿಸಬೇಕು. ಸಂದರ್ಭಕ್ಕೆ ತಕ್ಕಂತೆ ಇಂಥ ಸುವಿಚಾರಗಳು ನಮ್ಮ ಕಣ್ಣೆದುರಿಗೆ ಬಂದಾಗ ನಮ್ಮ ಮನಸ್ಸಿಗೆ ನೆಮ್ಮದಿ ದೊರೆಯುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X