• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು (ಭಾಗ 2)

By Staff
|

ತರಳಬಾಳು ಜಗದ್ಗುರುಗಳಾದ ಡಾ| ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ 'ಬಿಸಿಲು ಬೆಳದಿಂಗಳು' ಅಂಕಣ ಸಾಹಿತ್ಯ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಡಾ| 'ಜೀವಿ' ಕುಲಕರ್ಣಿಯವರು ಶ್ರೀಗಳು ಬರೆದ ಪುಸ್ತಕ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಿದ್ದಾರೆ.

ಎದೆತುಂಬಿ ಹಾಡಿದೆನು' ಎಂಬ ಪ್ರಬಂಧದಲ್ಲಿ ಇನ್ನೊಂದು ಮೊಜಿನ ಸಂಗತಿಯನ್ನು ಶ್ರೀಗಳು ದಾಖಲಿಸುತ್ತಾರೆ. ಜಗದ್ಗುರುಗಳನ್ನು ಟೀಕಿಸುತ್ತಿದ್ದ ಬುದ್ಧಿಜೀವಿಯೊಬ್ಬರಿಗೆ ಇವರ ಲಿಂಗೈಕ್ಯ ಗುರುಗಳು ತಮ್ಮ ಕಾಲದಲ್ಲಿ ಮಠದ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದ್ದರಂತೆ. ಆ ಬುದ್ಧಿಜೀವಿ ಧಾರ್ಷ್ಟ್ಯದಿಂದ ಒಂದು ಪತ್ರ ಬರೆದಿದ್ದರಂತೆ. "ನಾನು ಮಠಗಳನ್ನು, ಸ್ವಾಮಿಗಳನ್ನು ಬೈಯ್ಯುತ್ತೇನೆ. ಅದನ್ನು ಸಹಿಸಿಕೊಳ್ಳಲು ನಿಮ್ಮ ಸ್ವಾಮಿಗಳು ಸಿದ್ಧರಿದ್ದರೆ ಬರುತ್ತೇನೆ" ಎಂದು. ಅದನ್ನೋದಿದ ಲಿಂಗೈಕ್ಯ ಗುರುಗಳು ಒಂದು ಉತ್ತರ ಬರೆಸಿದ್ದರಂತೆ, ನಮ್ಮ ಮಠದ ಕಾರ್ಯಕ್ರಮದಲ್ಲಿ ನಿಮಗೆ ಮಾತನಾಡಲು ಮುಕ್ತ ಅವಕಾಶ ಕಲ್ಪಿಸಿಕೊಡುತ್ತೇವೆ. ಆದರೆ ನಿಮ್ಮ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ಶಿಷ್ಯರು ನಾವು ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಿರದೆ ನಿಮ್ಮನ್ನು ಒದೆಯುತ್ತಾರೆ. ಅದನ್ನು ಸಹಿಸಿಕೊಳ್ಳಲು ಸಿದ್ಧರಿದ್ದರೆ ಖಂಡಿತಾ ಬನ್ನಿ" ಎಂದು.

ತುಂಗಾ ಪಾನ, ಗಂಗಾ ಸ್ನಾನ' ಎಂಬ ಪ್ರಬಂಧದಲ್ಲಿ ಭಗೀರಥನ ಪ್ರಯತ್ನದಿಂದ ದೇವಗಂಗೆ ಭೂಮಿಗೆ ಇಳಿದುಬಂದು ಸಗರ ಕುಲದ ಉದ್ಧಾರ ಮಾಡಿದ ಕತೆಯನ್ನು ಶ್ರೀಗಳು ಪ್ರಸ್ತಾಪಿಸುತ್ತಾರೆ. ಯುಗಾದಿ ಎಂದೊಡನೆ ಶ್ರೀಗಳಿಗೆ ವರಕವಿ ಬೇಂದ್ರೆಯವರ ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ | ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ ಎಂಬ ಹಾಡು ನೆನಪಾಗುತ್ತದೆ. ಯುಗಾದಿ ಹಬ್ಬದೊಂದಿಗೆ ಬೆರೆತ ಪಂಚಾಂಗ ಶ್ರವಣದ ಬಗ್ಗೆ ಬರೆಯುತ್ತಾರೆ. ಹಿಂದಿನ ಕಾಲವನ್ನು ಇಂದಿನ ಭ್ರಷ್ಟ ದಿನಗಳೊಂದಿಗೆ ಹೋಲಿಸುತ್ತಾರೆ. ಅಂದಿನ ಪುರುಷಾರ್ಥಗಳು 'ಧರ್ಮ-ಅರ್ಥ-ಕಾಮ-ಮೋಕ್ಷ'ಗಳಾಗಿದ್ದರೆ ಇಂದು ನೌಕರಿ-ಕಾರು-ಬಂಗಲೆ-ಸೈಟು' ಅವುಗಳ ಸ್ಥಾನ ಆಕ್ರಮಿಸಿವೆ ಎನ್ನುತ್ತಾರೆ. ಇಂದು ಜನ ಆರೋಗ್ಯ ಕೆಡಿಸಿಕೊಂಡು ನಿದ್ರೆಯ ಗುಳಿಗೆಯ ಆಶ್ರಯ ಪಡೆಯುತ್ತಿದ್ದಾರೆ. ಹಿಂದೆ ಕನಕದಾಸರು ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎಂದು ವಿಡಂಬಿಸಿದ್ದರೆ ಇಂದು ಗ್ರಾಮ ಪಂಚಾಯತಿಯಿಂದ ಹಿಡಿದು ಅಸೆಂಬ್ಲಿ-ಪಾರ್ಲಿಮೆಂಟ್ ಚುನಾವಣೆಯವರೆಗೆ ಎಲ್ಲರೂ ಮಾಡುವುದು ಓಟಿಗಾಗಿ ಮತ್ತೆ ನೋಟಿಗಾಗಿ ಎಂಬ ವಿಪರ್ಯಾಸದ ಚಿತ್ರ ನೀಡುತ್ತಾರೆ. ಚಿಂತನಶೀಲ ಓದುಗರಿಗೆ ಹಿತವಚನ ನುಡಿಯುತ್ತಾರೆ. ಲೌಕಿಕ ಜೀವನದ ಸುಖ-ಸಂತೋಷಗಳು ಧರ್ಮದ ನೆಲೆಗಟ್ಟಿನ ಮೇಲೆ ನಿಂತಿರಬೇಕು, ಮೋಕ್ಷದ ಗುರಿಯನ್ನು ಹೊಂದಿರಬೇಕು ಶಾಶ್ವತ ಸುಖವನ್ನು ಪಡೆಯುವ ಹಂಬಲವಿರಬೇಕು ಎನ್ನುತ್ತಾರೆ.

ಸ್ವಾತಂತ್ರ್ಯ ಹೋರಾಟಗಾರರು ವರ್ಸಿಸ್ ಟಿಕೆಟ್ ಹೋರಾಟಗಾರರು' ಎಂಬ ಪ್ರಬಂಧ ಇಂದಿನ ರಾಜಕೀಯ ಜೀವನದ ಸ್ಥಿತಿಗತಿಗಳ ಬಗ್ಗೆ ಬರೆದ ಟಿಪ್ಪಣಿಯಂತಿದೆ. ನಮ್ಮ ಜನರು ಮತ್ತು ಜನನಾಯಕರು' ಎಂಬ ಬರಹದಲ್ಲಿ -ಅಮೇರಿಕೆಯಲ್ಲಿ ನಾಯಕರ ತಪ್ಪನ್ನು ಜನರೆಲ್ಲ ಖಂಡಿಸುತ್ತಾರೆ, ಈ ರೀತಿಯ ನಿಂದನೆ ನಮ್ಮ ದೇಶದಲ್ಲಿ ನಡೆಯುತ್ತಿಲ್ಲ' ಎನ್ನುತ್ತಾರೆ. ರಾಜಕೀಯ ದೊಂಬರಾಟ'ದ ಬಗ್ಗೆ ಬರೆಯುತ್ತಾರೆ. ರಾಜಕೀಯವು ಫಟಿಂಗರ ಕೊನೆಯತಾಣ ಎನ್ನಲಾಗುತ್ತದೆ, ಹಾಗಾಗಲು ಬಿಡದಿರಲು ಓದುಗರನ್ನು ಎಚ್ಚರಿಸುತ್ತಾರೆ. ಈ ದೇಶ ಉಳಿಯಬೇಕಾದರೆ ಮತದಾನ ಪವಿತ್ರದಾನವಾಗಬೇಕು, ಮತದ ಬಿಕರಿ ಆಗಬಾರದು ಎನ್ನುತ್ತಾರೆ. ಸ್ವತಃ ದೇವರೇ ಚುನಾವಣೆಗೆ ನಿಂತರೂ ಗೆಲ್ಲುವುದಿಲ್ಲ' ಎಂಬ ಲೇಖನ ಒಂದು ಸುಂದರ ವಿಡಂಬನೆಯಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮತದಾರರಿಗೆ ಉಳಿದಿರುವ ಒಂದೇ ಆಯ್ಕೆ ಎಂದರೆ, ಕಡಿಮೆ ಭ್ರಷ್ಟರನ್ನು ಗುರುತಿಸಿ ಮತ ಚಲಾಯಿಸುವುದು' ಎನ್ನುತ್ತಾರೆ. ವಿಧಾನಸೌಧದ ಪ್ರವೇಶ ಪರೀಕ್ಷೆ' ಎಂಬ ಪ್ರಬಂಧದಲ್ಲಿ ಚುನಾವಣೆಗೆ ಆಯಾ ಪಕ್ಷಗಳು ನಿಲ್ಲಿಸುವ ತಮ್ಮ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಕೆಲವು ಸಲಹೆಗಳನ್ನು ನೀಡುತ್ತಾರೆ. ಇದೊಂದು ನೀತಿಸಂಹಿತೆಯಂತಿದೆ. ಇದಕ್ಕೆ ದ್ವಾದಶ ಸೂತ್ರಗಳು ಎಂದು ಕರೆಯುತ್ತಾರೆ. ಇದರಲ್ಲಿ ಒಂದು ಮಹತ್ವದ ಸೂಚನೆ ಎಂದರೆ, ಯಾವುದೇ ಪಕ್ಷದ ಅಭ್ಯರ್ಥಿ ಆ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕನಿಷ್ಠ ಐದು ವರ್ಷ ಕಳೆದಿರಬೇಕು ಎಂಬುದು. ಇದರಿಂದ ಕೆಲಮಟ್ಟಿಗೆ ಪ್ರಮಾದಗಳು ಕಡಿಮೆಗೊಳ್ಲಬಹುದು. ಪ್ರಮಾಣ ವಚನವೆಂಬ ಪ್ರಹಸನ' ಎಂಬಲ್ಲಿ ಶ್ರೀಗಳು ರಾಜಕಾರಣವನ್ನು, ರಾಜಕಾರಣಿಗಳನ್ನು ಸಮೀಪದಿಂದ ಅಭ್ಯಾಸ ಮಾಡಿದ್ದು ತಿಳಿಯುತ್ತದೆ. ಕೆಂಗಲ್ ಹನುಮಂತಯ್ಯನವರು ವಿಧನಸೌಧದ ಮೇಲೆ ಕೆತ್ತಿಸಿದ ಸಾಲುಗಳು: ಸರ್ಕಾರದ ಕೆಲಸ, ದೇವರ ಕೆಲಸ. ಅದನ್ನು ಪಾಲಿಸುವವರು ಯಾರು? (ಸತ್ಯಮೇವ ಜಯತೇ ಎಂದಂತೆ. ಗೆಲ್ಲುವುದು ಅಸತ್ಯ ಅಲ್ಲವೇ). ಪಾರ್ಲಿಮೆಂಟಿನ ದ್ವಾರದ ಮೇಲೆ ಬರೆದ ಸಾಲು: ಉದಾರಚರಿತಾನಾಂ ತು ವಸುಧೈವಕುಟುಂಬಕಂ. ಇಂದು ಉದಾರ ಚರಿತರು ಎಲ್ಲಿದ್ದಾರೆ, ಇಡೀ ವಿಶ್ವವೇ ಒಂದು ಅವಿಭಕ್ತ ಕುಟುಂಬ ಎಂಬ ಮಾತು ಒಂದು ದೂರದ ಕನಸು.

ಕನ್ನಡ ನಾಡಿನ ಹಳ್ಳಿಗರ ಉಸಿರು', 'ಬಸವಣ್ಣ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ', ಧರ್ಮ ಸಮನ್ವಯ' ಎಂಬ ಮೂರು ಪ್ರಬಂಧಗಳು ಈ ಸಂಕಲನದಲ್ಲಿ ಎದ್ದು ನಿಲ್ಲುತ್ತವೆ. ಶ್ರೀಗಳ ಚಿಂತನೆಯ ಮೇಲೆ ಬೆಳಕು ಚೆಲ್ಲುತ್ತವೆ. ಬಸವಣ್ಣನವರು ಭಕ್ತಿಭಂಡಾರಿಯಾಗಿದ್ದಂತೆ ರಾಜಕಾರಣಿಯೂ ಆಗಿದ್ದರು. ಆದರೆ ಅವರ ಎತ್ತರ ಬಿತ್ತರ ಬೇರೆಯಾಗಿತ್ತು. ಅವರು ದೇಹವೇ ದೇವಾಲಯವೆಂದು ತಿಳಿದಿದ್ದರು. ಆದ್ದರಿಂದ ಉಳ್ಳವರು ದೇವಾಲಯವ ಮಾಡುವರು | ನಾನೇನ ಮಾಡಲಿ ಬಡವ ನಾನಯ್ಯ ಎಂದ ಮಹಾನುಭಾವರು ಅವರು. ಕಾಲೇ ಕಂಭ, ದೇಹವೇ ದೇಗುಲ, ಶಿರ ಹೊನ್ನ ಕಳಸ ಎಂದವರು ಬಸವಣ್ಣ.

ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತ

ಎನ್ನ ಒಡಲಿಂದೆ, ಎನ್ನ ಒಡವೆಗೆಂದು,

ಎನ್ನ ಮಡದಿ ಮಕ್ಕಳಿಗೆಂದು,

ಕುದಿದೆನಾದೊಡೆ ಎನ್ನ ಮನಕ್ಕೆ ಮನವೇ ಸಾಕ್ಷಿ..

ನಿಮ್ಮ ನಿಲವಿಂಗೆ ಕುದಿವೆನಲ್ಲದೆ,

ಎನ್ನೊಡಲವಸರಕ್ಕೆ ಕುದಿದೆನಾದೊಡೆ

ತಲೆದಂಡ! ಕೂಡಲ ಸಂಗಮ ದೇವಾ.

ಈ ಆದರ್ಶ ನಮ್ಮ ರಾಜಕಾರಣಿಗಳಲ್ಲಿರಬೇಕು. ಧರ್ಮ ಸಮನ್ವಯ ಇದು ಮಾತಿನಲ್ಲಿ ಉಳಿಯದೆ ನಮ್ಮೆಲ್ಲರ ನಮ್ಮ ಜೀವನದ ಒಂದು ಭಾಗವಾಗಬೇಕು, ನಮ್ಮ ದೈನಂದಿನ ಅನುಷ್ಠಾನಕ್ಕೆ ಬರಬೇಕೆಂಬುದು ಶ್ರೀಗಳ ಆಶಯ. ಜಗತ್ತಿನ ಎಲ್ಲ ಧರ್ಮೀಯರು ತಮ್ಮ ತಮ್ಮ ಧರ್ಮ ಪ್ರವರ್ತಕರ, ಪ್ರವಾದಿಗಳ, ಶರಣರ, ಸಾಧು-ಸಂತರ ವಿಶಿಷ್ಟ ಧರ್ಮಬೋಧನೆಗಳನ್ನು, ನಿರ್ದಿಷ್ಟ ತತ್ತ್ವಸಿದ್ಧಾಂತಗಳನ್ನು ಪಾಲಿಸುವುದರ ಜೊತೆಗೆ, ಜಗತ್ತಿನ ಎಲ್ಲ ಧರ್ಮ ಪ್ರವರ್ತಕರ, ಪ್ರವಾದಿಗಳ, ಶರಣರ, ಸಾಧು-ಸಂತರ ಸಮಷ್ಟಿ ಚೇತನದಿಂದ ಹೊರಹೊಮ್ಮಿದ ವಿಶಾಲ ತತ್ತ್ವಗಳ ಸೊಬಗನ್ನು ಸವಿದು ಆನಂದಿಸಬೇಕು. ಎನ್ನುತ್ತಾರೆ. ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ. ನಮಗೆ ಕಲ್ಯಾಣಕರವಾದ ವಿಚಾರಗಳು ಎಲ್ಲೆಡೆಯಿಂದ ಬರಲಿ.. ಯಾವುದೇ ಮತಧರ್ಮದ ಮೂಲದಿಂದ ಬಂದರೂ ಒಳ್ಳೆಯ ವಿಚಾರಗಳನ್ನು ಸ್ವೀಕರಿಸುವ ವಿಶಾಲ ಹೃದಯ ನಮ್ಮದಾಗಲಿ. ಎನ್ನುತ್ತಾರೆ.

(ಬಿಸಿಲು ಬೆಳದಿಂಗಳು-ಡಾ| ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳು, ಪ್ರಕಾಶಕರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ, ಚಿತ್ರದುರ್ಗ ಜಿಲ್ಲೆ-577 641, ಬೆಲೆ 30, ಪುಟಗಳು-121)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more