• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು

By Staff
|

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆಯ ಪೀಠಾಧೀಶರಾದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಬಗ್ಗೆ ಕೇಳಿದ್ದೆ. ಅವರು ಸಾಮಾಜಿಕ ಕಾರ್ಯಗಳಲ್ಲಿಯೂ ಧಾರ್ಮಿಕ ಕಾರ್ಯಗಳಷ್ಟೇ ಆಸಕ್ತಿ ವಹಿಸುವರೆಂದು ಕೇಳಿದ್ದೆ. ಅಸಂಖ್ಯ ಶಾಲೆ-ಕಾಲೇಜುಗಳನ್ನೂ ನಡೆಸುತ್ತಾರೆಂದೂ ಕೇಳಿದ್ದೆ. ಅವರನ್ನು ಕಾಣುವ ಅವಕಾಶ ಒದಗಿ ಬಂದಿರಲಿಲ್ಲ. ಅವರು ವಿಜಯ ಕರ್ನಾಟಕ ದಿನ ಪತ್ರಿಕೆಗೆ ಬರೆದ ಅಂಕಣ ಲೇಖನಗಳ ಪುಸ್ತಕ ಬಿಸಿಲು ಬೆಳದಿಂಗಳು' ನನ್ನ ಕೈಸೇರಿತು. (ನಿವೃತ್ತ ಪ್ರಾಂಶುಪಾಲ ಆರ್ ವೆಂಕಟೇಶ ಶೆಟ್ಟಿಯವರು ನನಗೆ ಕಳಿಸಿದ್ದರು).

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

15 ಲೇಖನಗಳುಳ್ಳ ಈ ಪುಸ್ತಕ ಓದಿದಾಗ ನನಗೆ ಆನಂದವೂ ಆಶ್ಚರ್ಯವೂ ಆಯಿತು. ಸೆಪ್ಟೆಂಬರ್ 2008 ರಲ್ಲಿ ಇದರ ಪ್ರಥಮ ಮುದ್ರಣ ಪ್ರಕಟವಾಗಿತ್ತು. ಎರಡನೆಯ ಮುದ್ರಣ ಡಿಸೆಂಬರ್‌ದಲ್ಲೇ ಹೊರಬಂದಿದೆ. ಪ್ರತಿ ಮುದ್ರಣ 5000 ಪ್ರತಿಗಳು ಅಚ್ಚಾಗಿವೆ. ( ಇದೂ ಒಂದು ದಾಖಲೆಯಾಗಿರಬೇಕು). ಈ ಪುಸ್ತಕವನ್ನು ಓದಿದಾಗ ಸ್ವಾಮಿಗಳನ್ನು ಕಂಡಷ್ಟೆ ಸಂತೋಷವಾಯಿತು. ಒಂದು ಉತ್ತಮ ಪುಸ್ತಕವನ್ನು ಸ್ಪರ್ಶ ಮಾಡಿದರೆ ಅದರ ಲೇಖನನ್ನು ಸ್ಪರ್ಶಿಸಿದಂತೆ' ಎಂದು ಒಂದು ಆಂಗ್ಲ ಗಾದೆ ಇದೆ.

ಮಠಾಧಿಪತಿಗಳು ವಿರಕ್ತರಾಗಿದ್ದರೆ ಸಾಲದು ಅವರು ವಿದಗ್ಧರೂ, ಚಿಂತನಶೀಲರೂ, ತಪಸ್ವಿಗಳೂ ಆಗಿರಬೇಕು. ಅಂಥವರ ನಡೆನುಡಿಗಳಿಂದ ಸಮಾಜಕ್ಕೆ ಒಂದು ಹೊಸ ದಿಶೆ ದೊರೆಯುತ್ತದೆ. ಈ ಸಂದರ್ಭದಲ್ಲಿ ನನಗೆ ಗದುಗಿನ ಶ್ರೀ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೆನಪಾಗುತ್ತದೆ. ಅವರು ಕೂಡ ಸಾಹಿತ್ಯದಲ್ಲಿ ಆಸಕ್ತಿ ವಹಿಸುತ್ತಾರೆ, ಶಾಲೆ-ಕಾಲೇಜುಗಳನ್ನು ನಡೆಸುತ್ತಾರೆ. ಪ್ರತಿ ಸೋಮವಾರ ಶಿವಾನುಭುಮಂಟಪ ಕಾರ್ಯಕ್ರಮದಲ್ಲಿ ವಿವಿಧ ವಿದ್ವಾಂಸರನ್ನು ಕರೆಸಿ ಭಾಷಣ ಮಾಡಿಸುತ್ತಾರೆ. ಒಮ್ಮೆ ನಾನು ಅವರಲ್ಲಿ ಯೋಗ iತ್ತು ನಿಸರ್ಗ ಚಿಕಿತ್ಸೆಯ ಮಹತ'ದ ಬಗ್ಗೆ ಭಾಷಣ ಮಾಡಲು ಶ್ರೀಗಳ ಆಮಂತ್ರಣದ ಮೇರೆಗೆ ಹೋಗಿದ್ದೆ. ಶ್ರೀಗಳು ನನ್ನ ಬಯೋಡೇಟಾ ನೋಡಿ ಚಕಿತರಾಗಿದ್ದರು. ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು, "ಇಂದಿನ ಅತಿಥಿ ಭಾಷಣಕಾರರು ಕನ್ನಡ ಸಾಹಿತಿಗಳೆಂದು ತಿಳಿದಾಗ, ಹುಚ್ಚ-ಹುಚಿ' ಎಂಬ ಪ್ರಣಯಗೀತ ಸಂಗ್ರಹದ ಲೇಖಕರು ಎಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ನಾನು ವಿದ್ಯಾರ್ಥಿಯಾಗಿದ್ದಾಗ ಇವರ ಪ್ರಣಯ ಸಂಕಲನವನ್ನು ಬಹುವಾಗಿ ಮೆಚ್ಚಿದ್ದೆ. ಹೆಚ್ಚಿನ ಕವನಗಳು ಮುಖೋದ್ಗತವಾಗಿದ್ದವು. ನನ್ನ ನಚ್ಚಿನ ಕವಿಗಳು ಬಂದಿದ್ದಾರೆಂದು ತಿಳಿದು ಇಂದು ನನಗೆ ಹೆಚ್ಚಿನ ಸಂತೋಷವಾಗಿದೆ.''. ಶ್ರೀಗಳು ನನ್ನ ಗುರುಗಳಾದ ವರಕವಿ ಬೇಂದ್ರೆಯವರನ್ನು ನಿರರ್ಗಳವಾಗಿ ತಮ್ಮ ಭಾಷಣಗಳಲ್ಲಿ ಉದ್ಧರಿಸಿದ್ದನ್ನು ಕಂಡಾಗ ನನಗೆ ಅಧಿಕ ಸಂತೋಷವಾಗಿತ್ತು. ಶ್ರೀಗಳು ಸಾಹಿತಿಗಳಿಗೆ ಸಹಾಯ ಮಾಡುತ್ತಿದ್ದರು, ಅಪ್ರಕಟಿತವಾಗಿ ಉಳಿದ ಕೆಲವು ಕನ್ನಡ ಪಿಎಚ್‌ಡಿ ಪ್ರಬಂಧಗಳ ಪ್ರಕಟನೆಗೆ ಸಹಾಯಮಾಡಿದ್ದರು.(ಅದರಲ್ಲಿ ಕುಮಾರವ್ಯಾಸನ ಬಗ್ಗೆ ಒಂದು ಸಂಶೋಧನ ಗ್ರಂಥವಿದೆ)

ತರಳಬಾಳು ಶ್ರೀಗಳು ಬರೆದ ಲೇಖನಗಳು ಆಪ್ತಶೈಲಿಯಲ್ಲಿ ಬರೆದವುಗಳು. ಅವು ಶ್ರೀ ಸಾಮಾನ್ಯರನ್ನು ತಟ್ಟುತ್ತವೆ ಮುಟ್ಟುತ್ತವೆ, ಬುದ್ಧಿವಂತರನ್ನು ಅಲ್ಲಾಡಿಸುತ್ತವೆ, ಅವರ ಲೇಖನದಲ್ಲಿ ಅನುಭವಾಮೃತವಿದೆ. ಯಾರನ್ನೋ ಮೆಚ್ಚಿಸಲು ಬರೆದ ಬರವಣಿಗೆ ಇದಲ್ಲ. ಅಂಕಣ ಲೇಖನಗಳಲ್ಲೇ ಹೊಸತೊಂದು ಮಾದರಿಯನ್ನು ಈ ಲೇಖನಗಳು ಸೃಷ್ಟಿಸಿವೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಪ್ರತಿಯೊಬ್ಬ ಲೇಖಕನಲ್ಲಿ ತನ್ನ ವಿಚಾರಗಳನ್ನು ಸಂವಹನ ಮಾಡುವ ಒಂದು ಕುಶಲಕಲೆ ಗುಪ್ತವಾಗಿರುತ್ತದೆ. ಸಮುದ್ರದ ನೀರನ್ನು ಒಂದು ಹನಿಯ ರುಚಿನೋಡಿ ತಿಳಿಂiಬಹುದು. ಶೈಲಿಯೇ ವ್ಯಕ್ತಿತ್ವವನ್ನು ಪ್ರದರ್ಶಿಸುವ ಬೆಳಕಾಗುತ್ತದೆ. ಕೆಲವು ಅವಿಸ್ಮರಣೀಯ ವಾಕ್ಯಗಳನ್ನು ಲೇಖಕರು ಬರೆದುಬಿಡುತ್ತಾರೆ. ಶಿವ ಖಿರಾ ಎಂಬವರು ನೀವೂ ಗೆಲ್ಲಬಹುದು' ಎಂಬ ಪುಸ್ತಕದಲ್ಲಿ ಒಂದು ಮಾತು ಹೇಳುತ್ತಾರೆ. ಯಶಸ್ವಿ ಪುರುಷರು ಬೇರೆ ಏನನ್ನೂ ಮಾಡುವುದಿಲ್ಲ, ಆದರೆ ಅವರು ಮಾಡುವ ರೀತಿ ಮಾತ್ರ ಬೇರೆಯಾಗಿರುತ್ತದೆ.'' ಇದು ಶಬ್ದಗಳ ಆಟದಂತೆ ಕಂಡರೂ ವಿಚಾರದಿಂದ ಪರಿಪ್ಲುತವಾಗಿದೆ. ತರಳಬಾಳು ಜಗದ್ಗುರುಗಳು ಒಂದೆಡೆ ಹೇಳುತ್ತಾರೆ, ಮಗು ತಾಯಿಯ ಜಠರದಲ್ಲಿ ಇರುವಾಗ ಅದು ಒದೆಯುತ್ತದೆ, ಆಗ ತಾಯಿಗೆ ಸ್ವರ್ಗಸುಖ ಲಭಿಸುತ್ತದೆ, ಅದೇ ಮಗು ದೊಡ್ಡವನಾದ ಮೇಲೆ ಒದ್ದಾಗ ಅದು ನರಕ ಯಾತನೆ ತರುತ್ತದೆ.''. ಇದು ಜನರೇಶನ್ ಗ್ಯಾಪ್ ಬಗ್ಗೆ, ತಂದೆತಾಯಿಗಳನ್ನು ಧಿಕ್ಕರಿಸಿ, ಅವರನ್ನು ಸೇವಿಸದೇ ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಜನರ ವಸ್ತುಸ್ಥಿತಿಯ ಮೇಲೆ ಶ್ರೀಗಳ ಈ ವಾಕ್ಯ ಒಂದು ಟಿಪ್ಪಣಿಯಂತಿದೆ.

ಹೊಗಳಿದವರು ನಮ್ಮನ್ನು ಹೊನ್ನಶೂಲಕ್ಕೆ ಏರಿಸುವರು' ಎಂದರು ಬಸವಣ್ಣನವರು. ಕೀರ್ತಿಶನಿ ತೊಲಗಾಚೆ' ಎಂದರು ಕುವೆಂಪು. ಹೊಗಳಿಕೆಯ ತೆಗಳಿಕೆಯ ಲಾಭ ನಷ್ಟಗಳ ಬಗ್ಗೆ ಶ್ರೀಗಳು ಬರೆಯುತ್ತಾರೆ. ಮಹಾಭಾರತದಲ್ಲಿ ಬರುವ ಕ್ರೋಧಭಕ್ಷ್ಯ ಎಂಬ ಕುರೂಪಿ ರಾಕ್ಷಸನ ಕತೆಯನ್ನು ಹೇಳುತ್ತಾರೆ. ಅವನು ಇಂದ್ರನ ಸಿಂಹಾಸನವನ್ನೇ ಏರಿ ಕುಳಿತನಂತೆ. ಎಷ್ಟು ಬೈದರೂ ಕೆಳಗಿಳಿಯಲಿಲ್ಲ. ಬೈದಷ್ಟು ಅವನ ರೂಪ ಸುಂದರವಾಗುತ್ತಿತ್ತಂತೆ. ಇಂದ್ರ ಇದನ್ನು ಕಂಡು ಅವನನ್ನು ಹೊಗಳತೊಡಗಿದ. ಅವನು ಕುರೂಪಿಯಾಗಿತ್ತ ಕುಬ್ಜನಾಗುತ್ತ ನಡೆದ. ಕೊನೆಗೆ ಓಡಿಹೋದನಂತೆ. ನಿಂದಕರು ಇರಬೇಕಯ್ಯಾ ಊರೊಳಗೆ' ಎಂಬ ಪುರಂದರ ದಾಸರ ಮಾತನ್ನು ನೆನೆಯುತ್ತಾರೆ. ಹಂದಿ ಇದ್ದರೆ ಕೇರಿ ಶುದ್ಧವಾಗುವಂತೆ, ನಿಂದಕರಿಂದ ಊರು ಶುದ್ಧವಾಗುತ್ತದೆ ಎನ್ನುತ್ತಾರೆ. ಶಿವರಾತ್ರಿ ಸಿನಿಮಾ ರಾತ್ರಿಯಾಗದಿರಲಿ' ಎಂಬ ಪ್ರಬಂಧದಲ್ಲಿ ಮಹಾಭಾಭರತದ ಶಾಂತಿಪರ್ವದಲ್ಲಿ ಬರುವ ಕಥೆಯನ್ನು ಉದ್ಧರಿಸುತ್ತಾರೆ. ಅಲ್ಲಿ ಬರುವ ವ್ಯಾಧನ ಕಥೆಗೆ ಹೊಸ ಅರ್ಥವನ್ನು ಬರೆಯುತ್ತಾರೆ. ಶ್ರೀ ಕೃಷ್ಣನ ಪುಣ್ಯಕ್ಷೇತ್ರಗಳು ಇರುವಲ್ಲೆಲ್ಲ ಈಶ್ವರನ ದೇವಾಲಯಗಳು ಇರುವುದರ ಸ್ವಾರಸ್ಯವನ್ನು ತೀಳಿಸುತ್ತಾರೆ, ಬೃಂದಾವನದಲ್ಲಿರುವ ಗೋಪೀಶ್ವರ ಮಹಾದೇವನ ಸ್ವಾರಸ್ಯಕರ ಕತೆಯನ್ನು ನಿರೂಪಿಸುತ್ತಾರೆ. ಕೃಷ್ಣನ ರಾಸಲೀಲೆ ನೋಡಲು ಶಿವನು ಪಾರ್ವತಿಯೊಂದಿಗೆ ಬಂದ ಪ್ರಸಂಗ. ಪಾರ್ವತಿಗೆ ಪ್ರವೇಶ ದೊರೆಯಿತು. ಶಿವನಿಗೆ ದೊರೆಯಲಿಲ್ಲ. ಆಗ ಅವನೂ ಗೋಪಿಯ ವೇಷದಲ್ಲಿ ಪ್ರವೇಶ ಪಡೆದ. ಶಿವನನ್ನು ಗುರುತಿಸಿದ ಕೃಷ್ಣನು ಅವನನ್ನು ಗೋಪೀಶ್ವರಾ' ಎಂದು ಕರೆದನಂತೆ. ರಾಸಲೀಲೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಗೋಪೀಶ್ವರ ಮಹಾದೇವನಿಗೆ ವಹಿಸಿದನಂತೆ.

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು- ಎಂಬ ಗಾದೆಯ ವಿಚಾರ ಚರ್ಚಿಸುತ್ತ ಅದರ ಹಿಂದಿರುವ ರೋಚಕ ಕಥಾನಕವನ್ನು ವಿವರಿಸುತ್ತಾರೆ. ಕಾಳಿದಾಸನ ಉಪಮೆ, ಭಾರವಿಯ ಅರ್ಥಗೌತವ, ದಂಡಿಯ ಪದಲಾಲಿತ್ಯ ಇವೆಲ್ಲ ಕನ್ನಡ ಗಾದೆಗಳಲ್ಲಿರುವುದನ್ನು ಉದಾಹರಣೆಗಳಿಂದ ತಿಳಿಸುತ್ತಾರೆ.

ಎದೆತುಂಬಿ ಹಾಡಿದೆನು ಅಂದು ನಾನು' ರಾಷ್ಟ್ರಕವಿ ಶಿವರುದ್ರಪ್ಪನವರ ಪ್ರಸಿದ್ಧ ಹಾಡು. ಈ ಹಾಡಿನ ಬಗ್ಗೆ ಬರೆಯುತ್ತ ತಮಗೆ ಇರುವ ಕನ್ನಡ ಕಾವ್ಯಾಸಕ್ತಿಯನ್ನು ಶ್ರೀಗಳು ಚೆನ್ನಾಗಿ ಮೂಡಿಸಿದ್ದಾರೆ. ಮಠಃ ಛಾತ್ರಾನಿಲಯಃ' ಎಂಬ ಅಮರಕೋಶದ ಉಕ್ತಿಯನ್ನು ಉದ್ಧರಿಸಿ ಹಿಂದಿನ ಕಾಲದಲ್ಲಿ ಮಠಗಳು ಶಿಕ್ಷಣ ಕೇಂದ್ರಗಳಾಗಿದ್ದವು ಎಂಬುದನ್ನು ಬರೆಯುತ್ತಾರೆ. ಕರ್ನಾಟಕದ ಮಠಗಳು ಅದ್ವಿತೀಯ ಪ್ರತಿಭೆಗಳಿಗೆ ಆಶ್ರಯ ನೀಡಿದ ವಿಚಾರ ತಿಳಿಸುತ್ತಾರೆ. ಮೊದಲು ಕನ್ನಡ ಪ್ರಧ್ಯಪಕನಾಗಿ, ನಂತರ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜಶಾಸ್ತ್ರಜ್ಞನಾಗಿ ಬೆಳೆದ ಡಾ|ಹಿರೇಮಲ್ಲೂರ್ ಈಶ್ವರನ್ ಅವರಿಗೆ ಸಿರಿಗೆರೆ ಮಠ, ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞ ಡಾ| ನಂಜುಡಪ್ಪನವರಿಗೆ ಸುತ್ತೂರ ಮಠ, ರಾಷ್ಟ್ರಕವಿ ಜಿ.ಎಸ್.ಎಸ್. ಅವರಿಗೆ ಸಿದ್ಧಗಂಗಾ ಮಠ ಆಶ್ರಯ ನೀಡದ್ದರ ಬಗ್ಗೆ ಬರೆಯುತ್ತಾರೆ. ಇಲ್ಲಿ ತಮ್ಮ ಜೀವನದ ಬಗ್ಗೆ ಕೂಡಾ ಬರೆಯುತ್ತಾರೆ.

ತುಂಗ-ಭದ್ರೆಯ ಸಂಗಮದ ಸ್ಥಳದಿಂದ ಕೂಗಳತೆಯ ಒಂದು ಹಳ್ಳಿ ಶ್ರೀಗಳ ಜನ್ಮಸ್ಥಳ. ಹತ್ತಿರದ ಹಳ್ಳಿಗೆ ಲಿಂಗೈಕ್ಯರಾದ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿದ್ದರು. ಅಲ್ಲಿಯ ಸಭೆಯಲ್ಲಿ ಒಬ್ಬ ಬಾಲಕ ಒಂದೆರಡು ಭಕ್ತಿಗೀತ ಹಾಡಿದ. ಅವನಿಗೆ ಸಂಗೀತದ ಗೀಳು ಇತ್ತು. ಹತ್ತಿರದ ಪೇಟೆಯ ಬೀದಿಯಲ್ಲಿ ಭಿಕ್ಷುಕನೊಬ್ಬ ತೆಂಗಿನ ಚಿಪ್ಪಿನ ತಂತಿವಾದ್ಯ ನುಡಿಸುತ್ತಿದ್ದ. ಅದರಿಂದ ಆಕರ್ಷಿತನಾದ ಬಾಲಕ ತಾನೂ ಒಂದು ವಾದ್ಯ ತಾಯಾರಿಸಲು ಪ್ರಯತ್ನಿಸಿದ. ಈ ವಿಷಯ ತೀಳಿದ ಶ್ರೀಗಳು ಆ ಹುಡುಗನನ್ನು ಬಳಿಗೆ ಕರೆದು ಮೈದಡವಿದರು. ಮಠದಿಂದ ಮಾರನೆಯ ದಿನವೇ ಒಂದು ಸುಂದರ ಪಿಟೀಲನ್ನು ಅವನಿಗೆ ಕಳಿಸಿಕೊಟ್ಟರು. ಆ ಹುಡುಗ ಮುಂದೆ ವಿದೇಶದಲ್ಲೂ ತನ್ನ ಪಿಟೀಲುವಾದನ ಕಲೆಯನ್ನು ಮೊಳಗಿಸಿದ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ. ಅವನನ್ನು ಕರೆದು ಕನ್ನಡ ಮತ್ತು ಸಂಸ್ಕೃತ ಕಲಿಯಲು ಪ್ರೋತ್ಸಾಹಿಸಿ ಮಹರಾಜಾ ಕಾಲೇಜು ಸೇರಿಸಿದರು. ಅವನಿಗೆ ಕಾಲೇಜಿನಲ್ಲಿ ಸಹಪಾಠಿಗಳಾಗಿ ದೊರೆತವರು ಆಲನಹಳ್ಳಿ ಶ್ರೀಕೃಷ್ಣ, ಕೆ ರಾಮದಾಸ, ತೀ.ನಂ. ಶಂಕರನಾರಾಯಣ, ಕಾಳೇಗೌಡ ನಾಗವಾರ, ಪಿ.ಕೆ.ರಾಜಶೇಖರ, ಪುತಿನ ಮಗಳು((ಅಲಮೇಲು). ವಿದ್ಯಾಗುಗಳಲ್ಲಿ ಜಿ.ಎಸ್.ಶಿವರುದ್ರಪ್ಪ ಪ್ರಮುಖರು. ಅದೇ ಬಾಲಕ ಮುಂದೆ ಬನಾರಸ ಹಿಂದೂ ವಿಶ್ವವಿದ್ಯಾನಿಲಯದಿಂದ ಸೂತಸಂಹಿತೆಯ ಬಗ್ಗೆ ಸಂಶೋಧನ ಪ್ರಬಂಧ ಬರೆದು ((A critical Study of the Suta-Samhita) ) ಡಾಕ್ಟರೇಟ್ ಗಳಿಸಿದ.(1976).

ಆ ಹಳ್ಳಿಯ ಮುಗ್ದ ಹುಡುಗನೇ ಸಿರಿಗೆರೆ ಮಠದ ಈಗಿನ ಪೀಠಾಧಿಪತಿ ಡಾ| ಶಿವಮೂರ್ತಿ ಶಿವಾಚಾರ್ಯರು ಎಂದು ತಿಳಿದಾಗ ನಮಗೆಲ್ಲ ಅಚ್ಚರಿಯಾಗುತ್ತದೆ. ಎಲ್ಲಿ ವಿಜ್ಞಾನ, ಎಲ್ಲಿ ಪಿಟೀಲು, ಎಲ್ಲಿ ಕನ್ನಡ ಸಂಸ್ಕೃತ ಪಾಡಿತ್ಯ, ಎಲ್ಲಿ ಗುರುಗಳ ಅನುಗ್ರಹ. (ಎತ್ತಣಿಂದೆತ್ತ ಸಂಬಂಧವಯ್ಯ?)

"ಎದೆತುಂಬಿ ಹಾಡಿದೆನು ಅಂದು ನಾನು

ಮನವಿಟ್ತು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.''

ಈ ಹಾಡು ಕೇಳಿದಾಗ ಶ್ರೀ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ತಮ್ಮ ಜೀವನದ, ಬಾಲ್ಯದ ನೆನಪಾಗುತ್ತದೆಯಂತೆ. ಅವರ ಬಾಳೂ ಒಂದು ಹಾಡಿನಂತೆ ಸುಮಧುರವಾಗಿದೆ, ಅವರ ಲೇಖನಗಳಲ್ಲಿ ಪದ್ಯದ ಲಾಲಿತ್ಯವಿದೆ, ಗದ್ಯದ ಔಚಿತ್ಯವಿದೆ, ಪೀಠದ ಪ್ರೌಢಿಮೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more