ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರೀರ ಲಕ್ಷಣ ಜ್ಯೋತಿಷಿ ಎನ್.ಕೆ ಜೋಗಳೇಕರ

By Staff
|
Google Oneindia Kannada News

NK Jogalekar, Astrologer
ಕರ್ನಾಟಕದ ಪ್ರತಿಭಾವಂತ ಜ್ಯೋತಿಷಿ ನಾಗನಾಥ ಕಲ್ಲೋಪಂತ ಜೋಗಳೇಕರರು ನನ್ನ ಬಾಲ್ಯಮಿತ್ರರು. ಎಪ್ಪತ್ತೆಂಟರ ಪಕ್ವ ವಯಸ್ಸಿನಲ್ಲಿಯೂ ತಮ್ಮ ಕಾಯಕದಲ್ಲಿ ಶ್ರದ್ಧೆಯಿಂದ ದುಡಿಯುತ್ತಿದ್ದಾರೆ. ಅವರ ಮುಂದಿನ ಕೃತಿ ಕುಂಡಲೀ ದರ್ಶನ. ಅದು ಸುಮಾರು 600 ಜಗತ್ಪ್ರಸಿದ್ಧ ವ್ಯಕ್ತಿಗಳ ಜಾತಕಗಳ ಸಂಗ್ರಹವಾಗಿದೆ. ಅದನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇವೆ.

* ಡಾ. ಜೀವಿ ಕುಲಕರ್ಣಿ, ಮುಂಬಯಿ

ನಾವು ಎಷ್ಟೇ ವೈಜ್ಞಾನಿಕ ವಿಚಾರ ಹೊಂದಿರಲಿ, ಪ್ರಗತಿಪರರಾಗಿರಲಿ, ಜ್ಯೋತಿಷ್ಯದ ಸಲಹೆ ಪಡೆಯದ ವ್ಯಕ್ತಿಯನ್ನು ಕಾಣುವುದು ವಿರಳವೆಂದೇ ಹೇಳಬಹುದು. ಭವಿಷ್ಯಕಾಲ ಅಸ್ಥಿರವಾಗಿರುವವರು, ರಾಜಕಾರಣಿಗಳು, ಸಿನೆಮಾ ಪ್ರಪಂಚದವರು ಜ್ಯೋತಿಷ್ಯ ಸಲಹೆಗಾರರ ಒಂದು ಪಡೆಯನ್ನೇ ಹೊಂದಿರುತ್ತಾರೆ. (ಏಕತಾ ಕಪೂರರ ಧಾರಾವಾಹಿಗಳು ಕದಿಂದ ಪ್ರಾರಂಭವಾಗುವುದು, ತಾರಾಗಣದ ಅಯ್ಕೆಗೆ ಆಡಿಶನ್ ಟೆಸ್ಟಗಿಂತ ಮಹತ್ವದ್ದು ಅವರುಗಳ ಜಾತಕದ ಟೆಸ್ಟ್ ಎಂಬುದು ಜನಜನಿತವಾದ ವಿಷಯ.) ಪ್ರಸಿದ್ಧ ಡಾಕ್ಟರರು ಹಾಗೂ ಜ್ಯೋತಿಷಿಗಳು ಎಂದರೆ ಕೆಲಸಲ ಭಯ ಉಂಟಾಗುತ್ತದೆ. ಡಾಕ್ಟರರು ವಿಪರೀತ ಖರ್ಚಿನ ಟೆಸ್ಟುಗಳನ್ನು ಮಾಡಿಸುತ್ತಾರೆ, ಶಸ್ತ್ರಚಿಕಿಸ್ತೆ ಮಾಡಲು ಸಲಹೆ ನೀಡುತ್ತಾರೆ. ಜ್ಯೋತಿಷಿಗಳು ಜಾತಕದಲ್ಲಿ ದೋಷ, ಮನೆಯಲ್ಲಿ ವಾಸ್ತು ದೋಷ ಕಾಣುತ್ತಾರೆ, ಹೋಮ-ಹವನ-ಶಾಂತಿ ಮಾಡಲು ಸಲಹೆ ನೀಡುತ್ತಾರೆ. ರೋಗಕ್ಕಿಂತ ಎಷ್ಟೋಸಲ ಪರಿಹಾರವೇ ಅಧಿಕ ವ್ಯಯಕಾರಿಯಾಗುತ್ತದೆ.

ಆದರೆ ಜೋಗಳೇಕರರು ಈ ದೃಷ್ಟಿಯಿಂದ ನೋಡಿದರೆ ಅಪರೂಪದ ವ್ಯಕ್ತಿ. ಯಾರೇ ಪತ್ರ ಬರೆದು, ಜಾತಕ ಕಳಿಸಿ, ಪ್ರಶ್ನೆ ಕೇಳಿದರೆ, ಅವರು ನಿಶ್ಚಿತವಾಗಿ ಉತ್ತರ ಬರೆಯುತ್ತಾರೆ. (ಆದರೆ ಪ್ರಶ್ನೆ ಕೇಳುವವರು ಸ್ವವಿಳಾಸವುಳ್ಳ ಅಂಚೆಚೀಟಿ ಹಚ್ಚಿದ ಲಕೋಟೆ ಇಟ್ಟಿರಬೇಕು.) ನನ್ನ ಒಬ್ಬ ಮುಂಬೈ ಮಿತ್ರರು ಒಬ್ಬ ಸ್ಥಳೀಯ ಜ್ಯೋತಿಷಿಯ ಸಲಹೆಗೆ ಬೆದರಿದ್ದರು, ಪರಿಹಾರಕ್ಕೆ ಮಾಡಬೇಕಾದ ಬಹಳ ವೆಚ್ಚದ ಹೋಮ-ಹವನದ ಬಗ್ಗೆ ಆತಂಕಕ್ಕೊಳಗಾಗಿದ್ದರು. ಆಗ ನಾನು ಅವರಿಗೆ ಸೆಕೆಂಡ ಒಪೀನಿಯನ್ ಪಡೆಯಲು ಜೋಗಳೇಕರರನ್ನು ಸಂಪರ್ಕಿಸಲು ಹೇಳಿದ್ದೆ. ಅವರಿಗೆ ಉತ್ತರ ಬಂದಿತ್ತು. ಹೋಮಹವನಾದಿಗಳಿಗೆ ವ್ಯರ್ಥ ವೆಚ್ಚ ಬೇಡ, ಪ್ರತಿದಿನ ಶಿವನ ಗುಡಿಗೆ ಹೋಗಿ ನಮಸ್ಕರಿಸಿದರೆ ಸಾಕು ಎಂದಿದ್ದರು. ಬಹಳ ಸುಲಭದ ಉಪಾಯ ದೊರೆತಿತ್ತು.

ಅಖಿಲ ಕರ್ನಾಟಕದ ಜ್ಯೋತಿರ್ವಿದರ ಪ್ರಥಮ ಸಮ್ಮಲನದ ಅಧ್ಯಕ್ಷರಾಗುವ ಗೌರವ ಜೋಗಳೇಕರರಿಗೆ ದೊರೆತಿತ್ತು. ಜ್ಯೋತಿಷ್ಯ ಒಂದು ವಿಜ್ಞಾನ, ಆದರೆ ಸರಿಯಾದ ಜ್ಞಾನವಿಲ್ಲದವರು, ಸ್ವಾರ್ಥಿಗಳು ಅದಕ್ಕೆ ಕೆಟ್ಟ ಹೆಸರು ತಂದಿದ್ದಾರೆಂದು ಹೇಳುತ್ತ ಜ್ಯೋತಿಷ್ಯವನ್ನು ವೃತ್ತಿಯಾಗಿರುವವರಿಗೆ ಒಂದು ನೀತಿ ಸಂಹಿತೆಯನ್ನು ಬರೆದು ಬೋಧಿಸಿದ್ದರು. (ಇಂಥ ನೀತಿಸಂಹಿತೆಯನ್ನು ಬರೆದ ಪ್ರಥಮ ಲೇಖಕರು ಜೋಗಳೇಕರರು.) ಅವರಿಗೆ ಮಂತ್ರದಲ್ಲಿ, ಉಪಾಸನೆಯಲ್ಲಿ, ಅನುಷ್ಠಾನದಲ್ಲಿ ಅಚಲ ವಿಶ್ವಾಸವಿದೆ. ಪ್ರತಿ ಅಮಾವಾಸ್ಯೆಯ ದಿನ ಅವರು ಮಂತ್ರಿಸಿದ ದಾರ(ಸೂತ್ರ)ವಿತರಿಸುತ್ತಾರೆ. ಸಹಸ್ರಾರು ಜನರ ಜಾತ್ರೆಯೇ ಅವರ ಧಾರವಾಡದ ಮನೆಯ ಮುಂದೆ ನೆರೆದಿರುತ್ತದೆ. ಸಾಮಾನ್ಯವಾಗಿ ಹೆಸರು ಗಳಿಸಿದವರು ತಮ್ಮ ಸಂಭಾವನೆಯ ಹಣ ಹೆಚ್ಚಿಸಿಬಿಡುತ್ತಾರೆ. ಜೋಗಳೆಕರರು ಹಾಗಲ್ಲ. ಬರಿಗೈಯಿಂದ ಹೋದವರೂ ಅವರಿಂದ ಯೋಗ್ಯ ಮಾರ್ಗದರ್ಶನ ಪಡೆದೇ ಹಿಂದಿರುಗುತ್ತಾರೆ, ಇದು ವಿಚಿತ್ರ ಆದರೂ ಸತ್ಯ. ಬಡವರು ಧನಿಕರು ಎಂಬ ಭೇದಭಾವ ಅವರೆಂದೂ ಮಾಡುವುದಿಲ್ಲ. ಪೃಚ್ಛಕರೆಲ್ಲ ಅವರಿಗೆ ಸರಿಸಮಾನರು. ಇನ್ನೊಬ್ಬರ ಮನೆಗೆ ಹೋಗಿ ಫಲಜೋತಿಷ್ಯ ಹೇಳುವುದಿಲ್ಲ. ಅವರಷ್ಟು ಶಿಸ್ತು ಪಾಲಿಸುವವರು ವಿರಳ. ಅವರೆಷ್ಟು ಪ್ರಸಿದ್ಧರೆಂದರೆ, ಜೋಗಳೇಕರ್ ಧಾರವಾಡ ಎಂದರೆ ಸಾಕು ಅವರಿಗೆ ಯಾವುದೇ ಪತ್ರ ತಲಪುತ್ತದೆ. ಧಾರವಾಡ ಎಂದೊಡನೆ ಬೇಂದ್ರೆ ನೆನಪಾಗುತ್ತಾರೆ. ಧಾರವಾಡದ ಲೈನ್ ಬಜಾರ್ ಪೇಡೆ ನೆನಪಾಗುತ್ತದೆ. ಈಗ ತೇಜಸ್ವೀನಗರದ ಜೋಗಳೇಕರ್ ನೆನಪಾಗುತ್ತಾರೆ. (ಬೇಂದ್ರೆಯವರ ಪತ್ನಿ ಜೋಗಳೇಕರ್ ಮನೆತನದವರು.)

ಜೋಗಳೇಕರರ ಮೊದಲ ಪುಸ್ತಕ ವಧೂವರರ ಜ್ಯೋತಿಷ್ಯ. ಅದು ಪ್ರಕಟವಾದಾಗ ನಾನು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದೆ. ಅವರಿಗೆ ಪುಸ್ತಕ ಬರೆಯಲು ನಾನೇ ಪ್ರೇರೇಪಿಸಿದ್ದೆ. ಪ್ರೆಸ್ಸಿಗಾಗಿ ಅವರ ಪುಸ್ತಕದ ಶುದ್ಧ ಪ್ರತಿಯನ್ನು ನಾನೇ ತಾಯಾರಿಸಿದ್ದೆ. ಅವರು ತಮ್ಮ ಪುಸ್ತಕ ಮಾಲಿಕೆಗೆ ನಕ್ಷತ್ರ ಎಂದು ಕರೆದರು. ಕನಿಷ್ಟ 27 ಪುಸ್ತಕ ಬರೆಯಲು ಸಂಕಲ್ಪಿಸಿದ್ದರು. (27 ನಕ್ಷತ್ರ, 27 ಪುಸ್ತಕ). ಈಗ 29ನೆಯ ನಕ್ಷತ್ರ ಶರೀರ ಲಕ್ಷಣ ಜ್ಯೋತಿಷ್ಯ (ಪುಟ 40, ಬೆಲೆ: ರೂ.30) ಹೊರಬಂದಿಗೆ, ಅದರ ಬಿಡುಗಡೆ ಹುಬ್ಬಳ್ಳಿಯಲ್ಲಿ ನಡೆದಾಗ, ಮೈತ್ರಿಯ ಸಲುಗೆಯಿಂದ ನನಗೇ ಬಿಡುಗಡೆ ಮಾಡಲು ಹೇಳಿದರು. ಆ ಸಂದರ್ಭದಲ್ಲಿ ಅನೇಕ ಹಳೆಯ ನೆನಪುಗಳು ಮರುಕಳಿಸಿ ಬಂದವು. ಫಲಜ್ಯೋತಿಷ್ಯ ಅವರಿಗೆ ರಕ್ತಗತವಾಗಿ ಬಂದದ್ದು. ಅವರ ತಂದೆ ಈ ವಿದ್ಯೆಯಲ್ಲಿ ಪಾರಂಗತರಾಗಿದ್ದರು. ಅವರ ಅಣ್ಣ ಮನೋಹರ ಅಂಚೆ ಇಲಾಖೆಯಲ್ಲಿ ನನ್ನ ತಂದೆಯವರ ಸಹೋದ್ಯೋಗಿಯಾಗಿದ್ದರು. ಅವರು ಬಹುಶ್ರುತರಾಗಿದ್ದರು. ಅವರು ಬಹಳೇ ಚೆನ್ನಾಗಿ ಜಾತಕ ನೋಡುತ್ತಿದ್ದರು. ಅದರೆ ಅದನ್ನು ಹಾಬಿಯಾಗಿ ಮಾತ್ರ ಇಟ್ಟುಕೊಂಡಿದ್ದರು. ನನ್ನ ಸೋದರ ಮಾವ ತನ್ನ 18ನೆಯ ವಯಸ್ಸಿನಲ್ಲೇ ಫೇಪರಿ ಎಂಬ ಬೇನೆಯಿಂದ ನರಳುತ್ತಿದ್ದ. ಒಬ್ಬನೇ ಮಗ ಬದುಕಲಿ ಎಂದು ಮಂತ್ರ್ರಾಲಯಕ್ಕೆ ಒಯ್ದರು. ಅಲ್ಲಿ ಕಾಯಿಲೆ ಗುಣಮುಖವಾಯಿತು. ಹದಿನೆಂಟು ವರ್ಷ ಅಲ್ಲೇ ಶ್ರೀ ಗುರುರಾಘವೇಂದ್ರರ ಸೇವೆ ಮಾಡಿಕೊಂಡಿದ್ದರು. ಮನೆಗೆ ಮರಳಲು ಅಪ್ಪಣೆ ದೊರೆತಿರಲಿಲ್ಲ. (ಅಪ್ಪಣೆಯಿಲ್ಲದೆ ಮರಳಿದಾಗ ಕಾಯಿಲೆ ಮರಳುತ್ತಿತ್ತು.) ಅವರ ಜಾತಕವನ್ನು ಅಕಸ್ಮಾತ್ ಮಂತ್ರಾಲಯಕ್ಕೆ ಬಂದಿದ್ದ ಮನೋಹರ್ ಜೋಗಳೇಕರರಿಗೆ ನಾನು ತೋರಿಸಿದೆ. (ನಾನೂ ಆಗ ಮಂತ್ರ್ರಾಲಯ ಯಾತ್ರೆಗೆ ಹೋಗಿದ್ದೆ). 19 ವರ್ಷದ ಮೇಲೆ ನಿಮ್ಮ ಸೋದರ ಮಾವನಿಗೆ ಮರಳಿ ಹೋಗಲು ಸ್ವಾಮಿಗಳಿಂದ ಅಪ್ಪಣೆ ದೊರೆಯುತ್ತದೆ ಎಂದಿದ್ದರು. ಅಷ್ಟರಲ್ಲಿ ಅವರ ತಂದೆಯಾಯಿ(ನನ್ನ ಅಜ್ಜಅಜ್ಜಿ) ಸ್ವರ್ಗಸ್ಥರಾಗಿದ್ದರು. ಹೊಲ ರೈತರಪಾಲಗಿದ್ದವು. ಮೆಟ್ರಿಕ್ ಪಾಸಾಗಿರಲಿಲ್ಲ. ನೌಕರಿ ದೊರೆಯುವುದು ಅಸಂಭವಾಗಿತ್ತು. ಆಯುಷ್ಯದುದ್ದಕ್ಕೂ ಮಂತ್ರಾಲಯದಲ್ಲೇ ಇರಲು ನಿಶ್ಚಯಿಸಿದ್ದರು. ಆ ಸಂದರ್ಭದಲ್ಲಿ ಮನೋಹರರು ಹೇಳಿದ್ದರು, ನಿಮ್ಮ ಹೊಲ ನಿಮಗೆ ವಾಪಸ್ ದೊರೆಯುತ್ತದೆ, ನೌಕರಿ ದೊರೆಯುತ್ತದೆ, ಮದುವೆ ಆಗುತ್ತದೆ, ನಾಲ್ಕು ಗಂಡು ಮಕ್ಕಳಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದೆಲ್ಲ ನಿಜವಾಯಿತು. ಇದೆಲ್ಲ ವಿಚಿತ್ರ ಆದರೂ ಸತ್ಯ. ಜೋಗಳೇಕರರ ಕಿರಿಯ ತಮ್ಮ ಲೋಕೋಪಯೋಗಿ ಖಾತೆಯಲ್ಲಿ ಕೆಲಸ ಮಾಡುತ್ತಿದ್ದರು (ಈಗ ನಿವೃತ್ತರಾಗಿದ್ದಾರೆ). ಅವರಿಗೆ ಮುಖನೋಡಿ, ಹಸ್ತರೇಖೆ ಪರೀಕ್ಷಿಸಿ ಭವಿಷ್ಯ ಹೇಳುವ ಸಿದ್ಧಿ ಇದೆ. ಅವರಿಂದ ಸ್ಫೂರ್ತಿಗೊಂಡೇ ಎನ್.ಕೆ. ಅವರು ಶರೀರ ಲಕ್ಷಣ ಜ್ಯೋತಿಷ್ಯ' ಗ್ರಂಥ ಬರೆದಿದ್ದಾರೆಂದು ಪೀಠಿಕೆಯಲ್ಲಿ ಬರೆಯುತ್ತಾರೆ. ಸ್ಫೂರ್ತಿ ನೀಡಿದ ಇನ್ನೊಬ್ಬ ವ್ಯಕ್ತಿ ಎಂದರೆ ರಮೇಶ ಅಬ್ಬಿಗೇರಿ ಮಾಸ್ತರರು. ಇವರು ಇಪ್ಪತ್ತರು ಬೆರಳುಗಳ ಜ್ಯೋತಿಷಿ ಎಂದೇ ಪ್ರಸಿದ್ಧರಾಗಿದ್ದಾರಂತೆ.

ಪ್ರಸ್ತುತ ಪುಸ್ತಕ ಸಾಮನ್ಯ ವಾಚಕರನ್ನೂ ರಂಜಿಸುತ್ತದೆ. ಜೋಗಳೇಕರರು ಇದರಲ್ಲೂ ತಮ್ಮ ಅನುಭವದ ಮಾತು ಸೇರಿದ್ದಾರೆ. ಹಣೆಯ ಬಗ್ಗೆ (ಅಲ್ಲಿರುವ ರೇಖೆಗಳು, ದೊಡ್ದ ತಲೆ, ಸಣ್ಣತಲೆಯವರ ಸ್ವಭಾವದ ಬಗ್ಗೆ ಬರೆಯುತ್ತಾರೆ. ಮೂಗಿನ ಆಕಾರ, ನಗೆಯ ಬಗ್ಗೆ, ತಲೆ ಅಲ್ಲಾಡಿಸುವ ವಿಧಾನ, ಕಣ್ಣುಗಳು (ಕಾಕೇಶಿಯಸ್, ಯುರೋಪಿಯನ್(ಬೆಕ್ಕಿನ ಕಣ್ಣು), ಮಂಗೋಲಿಯನ್(ಚೀನೀ ಜನರಂತಹ ಕಣ್ಣು), ಹಸ್ತಗಳಲ್ಲಿಯ ರೇಖೆ ಮುಂತಾದ ವಿಷಯದ ಬಗ್ಗೆ ಬರೆಯುತ್ತಾರೆ. ಹಲ್ಲುಗಳಿಗೆ ದ್ವಿಜ ಎಂದೂ ಕರೆಯುತ್ತಾರಂತೆ. (ಅವು ಎರಡು ಸಲ ಹುಟ್ಟುತ್ತವೆ.) ಕೃತಕ ಹಲ್ಲುಗಳಿಗೆ ತ್ರಿಜ ಎನ್ನಬೇಕೇ ಎಂದು ನಾನು ಕೇಳಿದೆ. ಜೋಗಳೇಕರರು ನಕ್ಕರು.

ಒಂದು ಪ್ರಸಂಗ ನೆನೆದೆ. ಧಾರವಾಡದ ನನ್ನ ಮಿತ್ರರಿಗೆಲ್ಲ ಅಚ್ಚರಿಯಾಯಿತು. ಜ್ಯೋತಿಷ್ಯ ನಂಬಬಾರದು, ಅದರ ಬೆನ್ನುಹತ್ತಿ ನಿಷ್ಕ್ರಿಯರಾಗಬಾರದು. ದೈವವಾದಿಗಳಾಗಬಾರದು. ಇದೆಲ್ಲ ನಿಜ. ಆದರೆ ಜೀವನದಲ್ಲಿಯ ಕೆಲವು ಘಟನೆಗಳು ವಿಚಿತ್ರವಾಗಿರುತ್ತವೆ. ಆದರೂ ಅವು ಸತ್ಯವಾಗಿರುತ್ತವೆ. ಜೀವನದ ಘಟನೆಗಳ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡುತ್ತಿರುತ್ತದೆ. ನಾನು ಕನ್ನಡ ಎಂ.ಎ. ಪಾಸದ ಮೇಲೆ ಎರಡು ವರ್ಷ ನಿರುದ್ಯೋಗಿಯಾಗಿದ್ದೆ. ನನ್ನ ಜೊತೆಗೆ ಪಾಸಾದ ಎಲ್ಲರಿಗೂ ಕೆಲಸ ದೊರೆತಿತ್ತು, ಆದರೆ ನನಗೇ ದೊರೆತಿತಲಿಲ್ಲ. ನನಗೆ ಇಂಟರ್‌ವ್ಯೂಗಾಗಿ ಒಂದೂ ಕರೆ ಬಂದಿರಲಿಲ್ಲ. ನಾನು ಪ್ರಥಮ ಸ್ಥಾನ ಪಡೆದು ಫೆಲೋ ಆಗಿದ್ದ ಕಾಲೇಜು, ಜನತಾ ಕಾಲೇಜು. ಅಲ್ಲಿಯ ಪ್ರಾಂಶುಪಾಲರು ನನ್ನ ಗುರುಗಳಾಗಿದ್ದ ಧಾರವಾಡಕರರು. ಅಲ್ಲಿ ಕೆಲಸ ಖಾಲಿ ಇತ್ತು. ನನಗೇ ಆ ಕೆಲಸ ದೊರೆಯುತ್ತದೆ ಎಂದು ಮಿತ್ರರು ಭಾವಿಸಿದ್ದರು. ನನಗೆ ಸಂದರ್ಶನಕ್ಕೆ ಕರೆಯೋಲೆ ಕೂಡ ಬರಲಿಲ್ಲ. (ಏನೋ ವೈಯಕ್ತಿಕ ಭಿನ್ನಾಭಿಪ್ರಾಯ.) ನನಗೆ ಕೆಲಸ ಕೊಡಿಸಲು ಬಹಳ ಜನ ಹಿತೈಷಿಗಳು ಪ್ರಯತ್ನಿಸುತ್ತಿದ್ದರು. ಗೋಕಾಕರು ಅನೇಕ ಕಾಲೇಜುಗಳಿಗೆ ಪತ್ರ ಬರೆದರು. ಮುಂಬೈ ಪಾರ್ಲೆ ಕಾಲೇಜಿನ ಪ್ರಿನ್ಸಿಪಾಲ್ ಜೋಶಿಯವರು ಗೋಕಾಕರ ಆಕ್ಸ್‌ಫರ್ಡ್ ದಿನಗಳ ಮಿತ್ರರಾಗಿದ್ದರು. ಅವರ ಕಾಲೇಜಿನಲ್ಲಿ ಕನ್ನಡ ವಿಷಯ ಪ್ರಾರಂಭಿಸುತ್ತರೆಂದು ಕೇಳಿದ್ದೆ. ಅರ್ಜಿ ಕಳಿಸಿದ್ದೆ, ಜೊತೆಗೆ ಗೋಕಾಕರಿಂದ ಪತ್ರ ಬರೆಸಿದ್ದೆ. ಜೋಶಿಯವರಿಂದ ಗೋಕಾಕರಿಗೆ ಉತ್ತರ ಬಂತು, ನಿಮ್ಮ ಪತ್ರ ಒಂದು ವಾರ ಮೊದಲು ಬಂದಿದ್ದರೆ ನಿಮ್ಮ ಅಭ್ಯರ್ಥಿಗೇ ಕೆಲಸ ಕೊಡುತ್ತಿದ್ದೆವು. ಎರಡು ದಿನದ ಹಿಂದೆಯೇ ಒಬ್ಬರಿಗೆ ಕೆಲಸ ಕೊಟ್ಟಾಯಿತು. ಎಂದು. ಗೋಕಾಕರೆಂದರು, ಜೀವಿ, ನೀನು ಇಂಗ್ಲಿಶ್ ಎಂ.ಎ. ಮಾಡಿದ್ದರೆ ನಾನು ನಿನಗೆ ಖಾತ್ರಿ ಕೆಲಸ ಕೊಡಿಸುತ್ತಿದ್ದೆ. ನೀನು ಸಂದರ್ಶನಕ್ಕೆ ಹೋಗದೆಯೇ ಅಪಾಯಿಂಟ್ಮೆಂಟ್ ಪತ್ರ ಪಡೆಯಬಹುದಾಗಿತ್ತು. ಎಂದು. ಗೋಕಾಕರ ಪ್ರಭಾವ ಅಷ್ಟಿತ್ತು. ಹಾಗೆ ಇಬ್ಬರು ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸಿದ್ದರು. (ಕೀರ್ತಿನಾಥ ಕುರ್ತಕೋಟಿ ಹಾಗೂ ಮಂಗೇಶ್ ನಾಡಕರ್ಣಿಯವರಿಗೆ ಗುಜರಾತದಲ್ಲಿ ಕೆಲಸ ಕೊಡಿಸಿದ್ದರು.)

ಆಗ ಬೇಂದ್ರೆಯವರು ನನಗೆ ಹೇಳಿದರು, ನಿನ್ನ ಜಾತಕದಲ್ಲಿ ಏನೋ ದೋಷವಿರಬೇಕು. ನಿನ್ನ ಮಿತ್ರ ಜೋಗಳೇಕರನಿಗೆ ಚೆನ್ನಾಗಿ ಅಭ್ಯಾಸ ಮಾಡಿ ದೋಷಕ್ಕೆ ಪರಿಹಾರ ಸೂಚಿಸಲು ಹೇಳು ಎಂದು. ಜೋಗಳೇಕರ್ ನನ್ನ ಜಾತಕ ಮತ್ತೊಮ್ಮೆ ಪರೀಕ್ಷಿಸಿ ಅಂದರು, ನಿನ್ನ ತಂದೆಯವರ ಯಾವುದೋ ತಪ್ಪಿನಿಂದಾಗಿ ನಿನಗೆ ಕೆಲಸ ದೊರೆಯುತ್ತಿಲ್ಲ ಎಂದು. ನಾನು ತಂದೆಯವರನ್ನು ಕೇಳಿದೆ. ಅವರು ತಮ್ಮ ಕತೆ ಹೇಳಿದರು. ನಿಮ್ಮ ದೊಡ್ಡಪ್ಪ ಒಬ್ಬರೆ ಶಾಲಾ ಮಾಸ್ತರರಾಗಿದ್ದರು. 15 ರೂಪಾಯಿ ಸಂಬಳ. ಮನೆಯಲ್ಲಿ ಊಟಕ್ಕೆ ಒಂಭತ್ತು ಜನ ಇದ್ದರು. ಹೊಲದ ಉತ್ಪನ್ನ ಇರಲಿಲ್ಲ. ನಾನು ಮೆಟ್ರಿಕ್ ವರೆಗೆ ಓದಿರಲಿಲ್ಲ. ಪೋಸ್ಟಿನಲ್ಲಿ ಒಂದು ಚಿಕ್ಕ ಕೆಲಸವಿತ್ತು. ಅಲ್ಲಿಯ ಉಚ್ಚ ಅಧಿಕಾರಿಯ ಪರಿಚಯ ಗುರುಬಂಧುಗಳ ಮೂಲಕ ಆಗಿತ್ತು. ಅವರು ಒಂದು ಟೆಸ್ಟಿಗೆ ಕೂಡಲು ಹೇಳಿದರು. ಕುಳಿತೆ. ನನ್ನ ಉತ್ತರ ಎರಡೇ ಪುಟ ಇತ್ತು. ಕೆಲವರಂತೂ ನಾಲ್ಕೆಂಟು ಪುಟ ಬರೆದಿದ್ದರು. ಕೆಲವರು ಮೆಟ್ರಿಕ್ ಪಾಸಾದವರೂ ಇದ್ದರು. ನಾನಾಗ ನಮ್ಮ ಕುಲಸ್ವಾಮಿಯಲ್ಲಿ ಹರಕೆಹೊತ್ತೆ, ತಿರುಪತಿಯ ಹುಂಡಿಯಲ್ಲಿ ನನ್ನ ಮೊದಲ ಸಂಬಳ ಹಾಕುವೆ ಎಂದು ಹೇಳಿದ್ದೆ. ನನಗೆ ಕೆಲಸ ದೊರೆಯಿತು. ಆದರೆ ಇನ್ನೂವರೆಗೆ ನಾನು ತಿರುಪತಿಗೆ ಹೋಗಿಲ್ಲ, ಹರಕೆ ಸಲ್ಲಿಸಿಲ್ಲ. ಬೇಂದ್ರೆಯವರು ಹೇಳಿದರು, ನೋಡು ಅಪ್ಪನ ತಪ್ಪಿಗೆ ಮಗನಿಗೆ ಶಿಕ್ಷೆ ಆಗ್ತಾಯಿದೆ. ದೇವರು ಕರುಣಾಮಯಿ. ನಿಮ್ಮ ತಂದೆಯವರು ಸಂಬಳದ ಹಣವನ್ನು ಬೆಳ್ಳಿಯ ನಾಣ್ಯಗಳಲ್ಲಿ ದೇವರಕೋಣೆಯಲ್ಲಿ ಇಟ್ಟು ಬೇಡಿಕೊಳ್ಳಲಿ. ಮಗನಿಗೆ ಶಿಕ್ಷಿಸದೆ, ಅವನಿಗೆ ಕೆಲಸ ಕೊಡಿಸಿ ಎಂದು. ಅವನು ತಿರುಪತಿಗೆ ಬಂದು ಬಂದು ಹಣವನ್ನು ಹುಂಡಿಯಲ್ಲಿ ಹಾಕುತ್ತಾನೆ. ಬೇಂದ್ರೆಯವರ ಸಲಹೆಯಂತೆ ನಾವು ಮಾಡಿದೆವು. ಒಂದು ವಾರದಲ್ಲಿ ಮುಂಬೈ ಖಾಲ್ಸಾ ಕಾಲೇಜಿನಿಂದ ಇಂಟರ್‌ವ್ಯೂ ಕರೆ ಬಂತು. ಸ್ಪರ್ಧೆ ಇತ್ತು. ಎರಡು ವರ್ಷಗಳ ಮೇಲೆ ಒಂದು ಕಡೆ ಕರೆ ಬಂದಿತ್ತು. ಕೆಲಸ ದೊರೆಯಿತು. ನಾನು ತಂದೆಯವರ ಹಣದ ಜೊತೆಗೆ ನನ್ನ ಮೊದಲತಿಂದಳ ಸಂಬಳವನ್ನೂ ಹುಂಡಿಯಲ್ಲಿ ಹಾಕಿದೆ. ಈ ಮಧ್ಯೆ ಎರಡು ವರ್ಷ ನಾನು ಲಾ ಕಾಲೇಜು ಸೇರಿದ್ದೆ. ಪತ್ರಿಕೆಗಳಿಗೆ ಬರೆಯಲು ಪ್ರಾರಂಭಿಸಿದೆ. ನಿರುದ್ಯೋಗದ ಸಮಯದಲ್ಲಿ ನನಗಾದ ಲಾಭವೆಂದರೆ ಕೆ.ಎಸ್.ಶರ್ಮಾ ಅವರಂತಹ ಕ್ರಾಂತಿಕಾರಿ ನನ್ನ ಮಿತ್ರರಾದರು, ಲಾ ಕಾಲೇಜಿನಲ್ಲಿ ಸಹಪಾಠಿ ಆದರು. (ನಾಟಕ ಬರೆಯಲು ಸ್ಫೂರ್ತಿ ನೀಡಿದರು). ಬೇಂದ್ರೆಯವರೊಡನೆ ಇನ್ನಷ್ಟು ಸಮೀಪದ ಸಂಬಂಧ ಬಂತು. ಅವರು ಕನಸಿನಲ್ಲಿ, ಮನಸಿನಲ್ಲಿ ಪ್ರವೇಶಿಸಿದರು. ನನ್ನಿಂದ ಕವಿತೆ ಬರೆಸಿದರು. ಆದದ್ದೆಲ್ಲಾ ಒಳಿತೇ ಆಯಿತು. ... ಸಾಧನ ಸಂಪತ್ತಾಯಿತು.

ಸಂಪರ್ಕಿಸಬೇಕಾದ ವಿಳಾಸ : ಎನ್.ಕೆ. ಜೋಗಳೇಕರ್, ಸಿ-72, ತೇಜಸ್ವಿನಗರ, ಧಾರವಾಡ - 580007.
ದೂರವಾಣಿ ಸಂಖ್ಯೆ : (0836)2468788

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X