ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಮ್ಮಕ್ಕಳು ಹೇಳಿದ ಅಜ್ಜಿ ಕಥೆ : ಭಾಗ 2

By Staff
|
Google Oneindia Kannada News

ಪ್ರಚಲಿತ ವಿಚಾರಗಳ ಬಗ್ಗೆ ಬಹಳ ಆಸಕ್ತಿ. ಸಿಟಿ ಪೇಪರ್‌ನಲ್ಲಿ ಏನು ಸಮಾಚಾರ ಎಂದು ದಿನವೂ ಕೇಳಿ ತಿಳಿಯುತ್ತಿದ್ದರು. ಅವರಿಗೆ ಸ್ತ್ರೀಶಿಕ್ಷಣದ ಬಗ್ಗೆ ಪ್ರಗತಿಗಾಮಿ ವಿಚಾರವಿತ್ತಂತೆ. ತಮ್ಮ ಕಾಲದ ವಿಧವೆಯರ ದುಃಸ್ಥಿತಿಯನ್ನು ನೆನೆದು, ಈ ಕಾಲವೇ ವಾಸಿ, ಗಂಡ ಹೋದವರನ್ನು ಹಿಂದಿನಂತೆ ಹಿಂಸಿಸುವುದಿಲ್ಲಮ್ಮ ಎಂದು ಹೇಳುತ್ತಿದ್ದರಂತೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

(ಹಿಂದಿನ ಸಂಚಿಕೆಯಿಂದ)

ಅಜ್ಜಿಯ ಎಂಟು ಮೊಮ್ಮಕ್ಕಳಲ್ಲಿ ನನಗೆ ಚೆನ್ನಾಗಿ ಪರಿಚಯವಿದ್ದ ಇಬ್ಬರಲ್ಲಿ ನಾರಾಯಣ ದತ್ತರು ಒಬ್ಬರು. ಇವರು ಬಹುಕಾಲ ಮುಂಬೈಯಲ್ಲಿ ವಾಸಿಸುದ್ದರು. 'ನವನೀತ' ಎಂಬ ಹಿಂದಿ ಡೈಜೆಸ್ಟ್‌ನ ಸಂಪಾದಕರಾಗಿದ್ದರು. ಪಿ.ಟಿ.ಐ.ಯಲ್ಲಿ ಹಿಂದಿ ಸುದ್ದಿವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಹನ್ನೊಂದು ವರ್ಷದ ಬಾಲಕರಾಗಿದ್ದಾಗ ಉತ್ತರ ಹಿಂದುಸ್ಥಾನದ ಒಂದು ಗುರುಕುಲದಲ್ಲಿ ಬೆಳೆದರು. ಸಂಸ್ಕೃತ ಪಂಡಿತರಾಗಿದ್ದರು. ಹಿಂದಿ ಅವರಿಗೆ ಮಾತೃಭಾಷೆಯಷ್ಟೇ ಸಮೀಪದ್ದಾಗಿತ್ತು. ಕನ್ನಡ ಸಾಹಿತ್ಯದ ಬಗ್ಗೆ ಅವರಿಗೆ ಅಪಾರ ಅಭಿಮಾನವಿತ್ತು. ತೆಲಗು ಲೇಖಕ, ಪ್ರಚಾರಮಾಧ್ಯಮತಜ್ಞ ವನಮಾಲಿ ಎಂಬವರ ಕಚೇರಿಯಲ್ಲಿ ಹಲವಾರು ಸಲ ನಾನು ಅವರನ್ನು ಕಂಡು ಮಾತಾಡಿಸಿದ್ದೆ. ನಾನು ಕಂಡಾಗೊಮ್ಮೆ ವರಕವಿ ಬೇಂದ್ರೆಯವರ ಬಗ್ಗೆ ಅವರು ಕೇಳುತ್ತಿದ್ದರು. ಅವರು ತಮ್ಮ ಲೇಖನದಲ್ಲಿ ಅಜ್ಜಿಯ ಕೆಲವು ಮುಖಗಳ ಪರಿಚಯ ಮಾಡಿಸುತ್ತಾರೆ. ರಜಾದಿನಗಳಲ್ಲಿ ಮೈಸೂರಿಗೆ ಬಂದಾಗ ಅಜ್ಜಿಯೊಡನೆ ಕಳೆದ ದಿನಗಳ ಬಗ್ಗೆ ಬರೆಯುತ್ತಾರೆ. ಸಂಸ್ಕೃತ ಪಂಡಿತನಾಗಿಯೂ ಪಂಚಾಂಗ ಓದಲು ಬಾರದೆ ಇದ್ದುದರ ಬಗ್ಗೆ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಹೇಳಲು ಬಾರದೇ ಇದ್ದುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರಂತೆ. ಸೋದರ ರಾಜುಗೆ ಟೈಫೈಡ್ ಆದಾಗ, ಅಜ್ಜಿಯನ್ನು ಕರೆಸಿದಾಗ, ಅವರು ನೀಡಿದ ಧೈರ್ಯದ ಬಗ್ಗೆ ಬರೆಯುತ್ತಾರೆ. ಅಜ್ಜಿಯ ಮಾಮೂಲು ಜಗಳಗಳ ಬಗ್ಗೆಯೂ ಬರೆಯುತ್ತಾರೆ. ಇವರ ತಾಯಿಯ ಸೋದರತ್ತೆಯಾಗಿದ್ದ ಗುಂಡಮ್ಮ ಎರಡು ದಿನಕ್ಕೊಮ್ಮೆ ತಾಯಿಯನ್ನು ನೋಡಲು ಬರುತ್ತಿದ್ದರಂತೆ. ಅದಕ್ಕೆ ಅಜ್ಜಿಯ ಟೀಕೆ ಮಾರ್ಮಿಕವಾಗಿದೆ: "ಗುಂಡಮ್ಮ ಚಳಿಜ್ವರದ ಹಾಗೆ ದಿನ ಬಿಟ್ಟು ದಿನ ಬರ್ತಾಳೆ" ಅಂತ.

ಮೋಹನರಾಮ ಎಂಬ ಮೊಮ್ಮಗ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದ ಪ್ರಾಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಅಭಿರುಚಿಯುಳ್ಳವರು. ಕನ್ನಡದಲ್ಲಿ ಪ್ರಕಟವಾದ ಒಳ್ಳೆಯ ಪುಸ್ತಕ ಓದಿ, ಅವುಗಳನ್ನು ಅಮೇರಿಕೆಯಲ್ಲಿರುವ ಸೋದರ ರಾಜಗೋಪಾಲರಿಗೆ ಕಳಿಸುವರು. (ನಾನು ಅಮೇರಿಕೆಯಲ್ಲಿದ್ದಾಗ ಅವರು ಭೈರಪ್ಪನವರ ಮಂದ್ರ ಕಾದಂಬರಿಯನ್ನು ಕಳಿಸಿದ್ದರು.) ಮೋಹನರಾಮ ಅಜ್ಜಿಯ ನೆನಪನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಬಣ್ಣಿಸುತ್ತಾರೆ. ಬೇಸಿಗೆಯ ರಜೆಯಲ್ಲಿ ನಡೆದ ಒಂದು ಶಿಬಿರದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದರಂತೆ. ಇವರ ತಾಯಿ ಹಾಗೂ ತಂದೆ ಆಗ ತೀರ್ಥಹಳ್ಳಿಯಲ್ಲಿರುತ್ತಿದ್ದರಂತೆ. ಅಜ್ಜಿ ಮೈಸೂರ ಮನೆಯಲ್ಲಿ ಒಬ್ಬರೆ ಇದ್ದರು. ಒಂದು ಭಾನುವಾರ ತಾವೇ ವಿಶೇಷ ಪಾಕ ತಯಾರಿಸಿ ಗೋವಿಂದರಾಜು ಎಂಬ ಮಿತ್ರನನ್ನು ಊಟಕ್ಕೆ ಕರೆದಿದ್ದರಂತೆ. ತಾವು ಮಾಡಿದ ಅಡುಗೆಯ ರಿಪೋರ್ಟ ಅಜ್ಜಿಗೆ ಕೊಟ್ಟರಂತೆ. ಮಿತ್ರನಿಗೆ ಅಜ್ಜಿಯ ಹದ್ದಿನ ಕಣ್ಣಿನ ಬಗ್ಗೆ ಎಚ್ಚರಿಸಿ ಊಟದ ತಟ್ಟೆ ಊಟವಾದ ಮೇಲೆ ಚೆನ್ನಾಗಿ ತೊಳೆಯಲು ಹೇಳಿದರು. ಸೀಗೆಕಾಯಿ ಹಾಕಿ ತಟ್ಟೆ ಥಳಥಳಿಸುವಂತೆ ತೊಳೆದು ಮಿತ್ರ ಅಜ್ಜಿಗೆ ತೋರಿಸಿ, ನೋಡಿ ಅಜ್ಜಿ ಹೇಗೆ ತೊಳೆದಿದ್ದೇನೆ?' ಎಂದನಂತೆ. ಆಗ ಅಜ್ಜಿ ದೂರದಿಂದಲೇ ಚೆನ್ನಾಗಿ ತೊಳೆದದ್ದನ್ನು ನೋಡಿ ಮೆಚ್ಚಿದ್ದನ್ನು ಹೇಳಿದರೇನೊ ನಿಜ, ಆದರೆ ಅವನ ಎಡಗಾಲಿನ ಕಿರುಬೆರಳ ಮೇಲೆ ಒಂದು ಅನ್ನದ ಒಂದು ಕಾಳು ಉಳಿದಿದೆ (ಮುಸುರೆ), ಅದನ್ನು ತೊಳೆದುಕೊಂಡುಬಾ ಎಂದೂ ಹೇಳಿದ್ದರಂತೆ. ಮಡಿ ಹೆಂಗಸರಿಗೆ ಇಂಥ ಸೂಕ್ಷ್ಮ ದೃಷ್ಟಿ ಸಹಜ ಎನ್ನಿಸುತ್ತದೆ. ಮೋಹನ ರಾಮ ಅವರದು ಪ್ರೇಮವಿವಾಹ. ತಮ್ಮ ಜೊತೆಗೆ ರಿಸರ್ಚ್ ಮಾಡುತ್ತಿದ್ದ ಮಾನಸಿ ಘೋಷ ಎಂಬವಳನ್ನು ಮದುವೆಯಾಗಲು ಹೊರಟಾಗ ಮನೆಯಲ್ಲಿ ವಿರೋಧವಿತ್ತಂತೆ. ನಂತರ ಒಪ್ಪಿಗೆ ದೊರೆತು ಎಲ್ಲ ಸರಿ ಹೋಗಿತ್ತು. ಪತ್ನಿಯೊಂದಿಗೆ ಮೊದಲ ಸಲ ಮೈಸೂರಿಗೆ ಬಂದಾಗ ಇವರ ಬಂಗಾಲಿ ಪತ್ನಿ ಅಜ್ಜಿಗೆ ಬಾಗಿ ಪಾದಸ್ಪರ್ಶ ಮಾಡಿ ನಮಸ್ಕರಿಸಿದಳಂತೆ. ಆಗ ಅಜ್ಜಿ ಹೇಳಿದರು: "ಎಲ್ಲಿ ಬೆಳೆದಿದ್ದರೇನು, ಯಾವ ಜಾತಿಯವಳಾದರೇನು, ಅವಳ ಅಣ್ಣಂದಿರು ಅತ್ತಿಗೆಯವರು ಅವಳಿಗೆ ವಿದ್ಯಾಬುದ್ಧಿ ಕೊಡಿಸಿದ್ದಾರೆ. ಅಹಂಕಾರ ಹೇಳಿಕೊಟ್ಟಲ್ಲ. ದೀರ್ಘ ಸುಮಂಗಲೀ ಭವ." ಈ ಉದ್ಗಾರ ಅಜ್ಜಿಯ ಉದಾರ ಬುದ್ಧಿಯನ್ನು ತೋರಿತ್ತು.

ಕಸ್ತೂರಿ ಸುಬ್ರಮಣ್ಯಂ ಅವರು ಬರೆಯುತ್ತಾರೆ, ನಮ್ಮ ಅಜ್ಜಿ ಒಂದು ಶತಮಾನದಷ್ಟು ಹಳೆಯ ಕಾಲದವರಾದರೂ ಹೊಸ ವಿಚಾರದಲ್ಲಿ ಅಪಾರ ಕುತೂಹಲ. ಪ್ರಚಲಿತ ವಿಚಾರಗಳ ಬಗ್ಗೆ ಬಹಳ ಆಸಕ್ತಿ. ಸಿಟಿ
ಪೇಪರ್‌ನಲ್ಲಿ ಏನು ಸಮಾಚಾರ ಎಂದು ದಿನವೂ ಕೇಳಿ ತಿಳಿಯುತ್ತಿದ್ದರು. ಅವರಿಗೆ ಸ್ತ್ರೀಶಿಕ್ಷಣದ ಬಗ್ಗೆ ಪ್ರಗತಿಗಾಮಿ ವಿಚಾರವಿತ್ತಂತೆ. ತಮ್ಮ ಕಾಲದ ವಿಧವೆಯರ ದುಃಸ್ಥಿತಿಯನ್ನು ನೆನೆದು, ಈ ಕಾಲವೇ ವಾಸಿ, ಗಂಡ ಹೋದವರನ್ನು ಹಿಂದಿನಂತೆ ಹಿಂಸಿಸುವುದಿಲ್ಲಮ್ಮ ಎಂದು ಹೇಳುತ್ತಿದ್ದರಂತೆ. ಕಲಾಭಿಮಾನ, ಹಾಡುಗಾರಿಕೆ, ನೃತ್ಯ ಇವುಗಳು ಸಂಪ್ರದಾಯಸ್ಥ ಕುಟುಂಬಗಳಲ್ಲಿ ಸಲ್ಲವು ಎಂಬ ನಂಬುಗೆ ಬಲವಾಗಿದ್ದ ಕಾಲದಲ್ಲಿ ಅಜ್ಜಿಗೆ ಸಂಗೀತವೆಂದರೆ ಪ್ರಾಣವಾಗಿತ್ತು. ಆರತಿ ಹಾಡು, ಹಸೆಗೆ ಕರೆಯುವ ಹಾಡು, ಉರುಟಣೆ ಹಾಡು, ಬೀಗರನ್ನು ಹಂಗಿಸುವ ಹಾಡು ಇತ್ಯಾದಿ ನೂರಾರು ಹಾಡುಗಳು ಅಜ್ಜಿಯ ಭಂಡಾರದಲ್ಲಿದ್ದವಂತೆ. 'ನನ್ಗೆ ಬರುವ ಹಾಡುಗಳನ್ನು ಕಲಿಯಿರಿ, ನನ್ನೊಂದಿಗೆ ಅವು ಕಣ್ಮರೆಯಾದಾವು' ಎನ್ನುತ್ತಿದ್ದರಂತೆ. ಅಜ್ಜಿಯ ಮಾತಿನ ವರಸೆ ಸ್ವಾರಸ್ಯಕರವಾಗಿತ್ತಂತೆ. ಅವರ ಮಾತಿನಲ್ಲಿ ನೂರಾರು ಗಾದೆಗಳು ನಾಣ್ನುಡಿಗಳು ನುಸುಳುತ್ತಿದ್ದವಂತೆ. ಎರಡನೆಯ ದೊಡ್ದಮ್ಮನಿಗೆ, ನೀನು ಲಾಯರ್ ಹೆಂಡತಿಯಾದರೆ ನಾನು ಲಾಯರ್ ತಾಯಿ ಕಣೇ ಎಂದು ದಬಾಯಿಸುತ್ತಿದ್ದರಂತೆ.

ಎಚ್.ವೈ.ರಾಜಗೋಪಾಲ ಅವರು ಬಹಳ ವಿವರವಾಗಿ ಅಜ್ಜಿಯ ಬಗ್ಗೆ ಬರೆಯುತ್ತಾರೆ. ಇವರು ಹತ್ತೊಂಬತ್ತು ವರ್ಷ ಅಜ್ಜಿಯ ಜೊತೆಗಿದ್ದರು. ಕೆಲ ಕಾಲ ಅಜ್ಜಿ ಬೇರೆ ರೂಮ್ ಮಾಡಿಕೊಂಡಿದ್ದರ ಬಗ್ಗೆಯೂ ಬರೆಯುತ್ತಾರೆ. 1942ರಲ್ಲಿ ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳವಳಿ ಮೈಸೂರನ್ನೂ ತಲುಪಿದಾಗ ಹಿರಿಯ ಅಣ್ಣ ಶೌರಿ ಕಾಲೇಜು ವಿದ್ಯಾರ್ಥಿಯಾಗಿದ್ದ. ಅವನೂ ಭಾಗವಹಿಸಿದ್ದ. ಅವನನ್ನು ಪೋಲೀಸರು ಹಿಡಿದುಕೊಂಡು ಹೋದರು ಎಂಬ ಸುದ್ದಿ ಕೇಳಿ ಅಜ್ಜಿಗೆ ಕಳವಳವಾಗಿತ್ತಂತೆ. ಮೊಮ್ಮಗನನ್ನು ಬೇಡಿಹಾಕಿ ಕರೆದುಕೊಂಡು ಹೋದರೇನು ಎಂದು ಅಜ್ಜಿ ಕೇಳಿದ್ದರು. ಇತರ ಕೈದಿಗಳಂತೆ ಬೇಡಿಹಾಕಿ ಎಳೆದುಕೊಂಡು ಹೋಗದೇ ಮರ್ಯಾದೆಯಾಗಿ ವ್ಯಾನಿನಲ್ಲಿ ಕರಕೊಂಡು ಹೋದರು ಎಂಬ ಸುದ್ದಿ ತಿಳಿದಾಗ ಅಜ್ಜಿಯ ಕಳವಳ ದೂರವಾಗಿತ್ತಂತೆ. ಅಜ್ಜಿಯ ಮಾತಿನ ವೈಖರಿಯ ಬಗ್ಗೆ ಬರೆಯುತ್ತಾರೆ. ಅವರು ನಿಧಾನವಾಗಿ ಏಳುತ್ತಿದ್ದರು, ಊಟಕೂಡ ನಿಧಾನ. ಇದನ್ನು ಟೀಕಿಸುತ್ತ ಗುಂಡವ್ವ ಅಂದಿದ್ದರಂತೆ, "ಅಜ್ಜಿ, ನಿಮ್ಮ ಊಟ ಇಷ್ಟು ನಿಧಾನವಾಗುತ್ತದಲ್ಲ, ದೇಹ ಹೇಗೆ ತಡೆಯುತ್ತದೆ?" ಆಗ ಅಜ್ಜಿ ಕೊಟ್ಟ ಮಾರ್ಮಿಕ ಉತ್ತರ ಹೀಗಿತ್ತಂತೆ, "ನಮ್ಮ ದೇಹ ಒಂದು ವೀಣೆ ಇದ್ದ ಹಾಗೆ, ಅದು ನುಡಿಸಿದಂತೆ ನುಡಿಯುತ್ತೆ." ಅಜ್ಜಿಯ ಅಪಾರ ಜ್ಞಾಪಕಶಕ್ತಿಯ ಬಗ್ಗೆ, ಅವರ ಸಂಗೀತ ಪ್ರೇಮದ ಬಗ್ಗೆ ಬರೆಯುತ್ತಾರೆ. ಒಬ್ಬ ಹಾಡುಗಾರರಿಗೆ ತಮ್ಮ ಫರ್‌ಮಾಯಿಶ್ ಎಂದು ಆ ದಿನಗಳಲ್ಲಿ ತಾವು ರೇಡಿಯೊದಲ್ಲಿ ಕೇಳಿದ್ದ ಮೂಕೇಶನ ಟೂಟೇನಾ ದಿಲ್ ಟೂಟೇನಾ ಸಿನೇಗೀತ ಹಾಡಲು ಕೇಳಿದ್ದರಂತೆ. ಅಜ್ಜಿಗೆ ಮೂರು ಜನ ಗಂಡುಮಕ್ಕಳು. ಅವಳಿಂದಾಗಿ ಎಲ್ಲರಿಗೂ ಸಂಗೀತದಲ್ಲಿ ಒಲವು ಮೂಡಿತ್ತಂತೆ. ಇವರ ತಂದೆಯನ್ನು(ನರಸಿಂಹಂ ಅವರನ್ನು) ದೇವಡು ಎಂದು ಕರೆಯುತ್ತಿದ್ದರಂತೆ. ದೇವಡು, ಈ ಹಾಡಿನಲ್ಲಿ ಹೀಗಂತಾರಲ್ಲ, ಅದರ ಅರ್ಥವೇನು? ಎಂದು ಕೇಳುತ್ತಿದ್ದರಂತೆ. ಅಜ್ಜಿ ಇವರ ತಂದೆಯ ಮನೆಯಲ್ಲೇ ಹೆಚ್ಚಾಗಿ ವಾಸಿಸುತ್ತಿದ್ದರಂತೆ. ಅದಕ್ಕೆ ಅವರು ಕೊಡುವ ಕಾರಣ ಮೋಜಿನದಾಗಿತ್ತು. ಇವರ ತಂದೆ ಮಗುವಾಗಿದ್ದಾಗ ಆರು ವರ್ಷ ಮೊಲೆಹಾಲು ಕುಡಿದಿದ್ದರಂತೆ. (ತಾಯಿಯ ಮೊಲೆಹಾಲು ದೀರ್ಘಕಾಲ ಕುಡಿದ ಮಕ್ಕಳು ಹೆಚ್ಚು ರೋಗನಿರೋಧಕ ಶಕ್ತಿ ಪಡೆದಿರುತ್ತಾರಂತೆ. ಇದು ವೈಜ್ಞಾನಿಕವಾಗಿ ಸಿದ್ಧವಾಗಿದೆಯಂತೆ. ಮತ್ತೂರ ಕೃಷ್ಣಮೂರ್ತಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಇದರ ಪ್ರಸ್ತಾಪ ಮಾಡುತ್ತ ತಾವು ಮೂರು ವರ್ಷದ ಬಾಲಕನಾಗಿರುವವರೆಗೆ ತಮ್ಮ ತಾಯಿಯ ಹಾಲು ಕುಡಿದ ಬಗ್ಗೆ ಬರೆಯುತ್ತಾರೆ. ನರಸಿಂಹಂ ಅವರು ಆರು ವರ್ಷ ತಾಯಿಯ ಹಾಲು ಕುಡಿದಿದ್ದರು ಎಂದರೆ ಅವರದು ಒಂದು ವಿಕ್ರಮವೆಂದೇ ಹೇಳಬೇಕು.) ಅಜ್ಜಿ ಇವರ ತಂದೆಯ ಬಳಿಯಲ್ಲೇ ಹೆಚ್ಚುಕಾಲ ಇದ್ದರು ಎಂಬುದರ ಪ್ರಸ್ತಾಪ ಮಾಡುತ್ತ, ಅಜ್ಜಿ ಹೇಳುತ್ತಿದ್ದರಂತೆ, "ದೇವಡು, ನೀನೇ ಉಳಿದವರೆಲ್ಲರಿಗಿಂತ ನನ್ನ ಋಣ ತಿಂದಿರುವವನು, ಅದಕ್ಕೇ ನೀನೇ ನೋಡಿಕೊಳ್ಳಬೇಕು ನನ್ನ." (ಹೆಚ್ಚು ವರ್ಷ ಹಾಲು ಕುಡಿಸಿದ್ದನ್ನು ಇಲ್ಲಿ ನೆನೆಯುತ್ತಿದ್ದರು). ಅಜ್ಜಿ ವೈದ್ಯದಲ್ಲಿ ನಿಪುಣರು ಎಂಬ ವಿಷಯ ಪ್ರಸ್ತಾಪಿಸಿ ಅವರು ಖರ್ಜೂರದ ವೈದ್ಯಕೀಯ ಗುಣಗಳನ್ನು ಅರಿತಿದ್ದರೆಂದು ಬರೆಯುತ್ತ ಒಮ್ಮೆ ಹುಳಿಯಲ್ಲೇ ಖರ್ಜೂರ ಬೇಯಿಸಿ ಸೇವಿಸಿದ್ದ ಬಗ್ಗೆ ಬರೆಯುತ್ತಾರೆ.

ನೀರಜ ಅಚ್ಯುತರಾವ್ ಎಂಬ ಮೊಮ್ಮಗಳು ಅಜ್ಜಿಯ ಬಗ್ಗೆ ಬರೆದ ಲೇಖನ ಬಹಳ ಸ್ವಾರಸ್ಯಕರವಾಗಿದೆ. ಇದು ಅವರ ಜೀವನದ ಕೊನೆಯ ದಿನಗಳ ಚಿತ್ರಣವನ್ನೂ ನೀಡುತ್ತದೆ. ಅಜ್ಜಿ ಕನ್ನಡ, ತೆಲುಗು, ಸಂಸೃತ, ಮರಾಠಿ, ಹಿಂದಿ ಹಾಡುಗಳನ್ನು ಹಾಡುತ್ತಿದ್ದರಂತೆ. ಹೆಂಗಳೆಯರು ಹೊಸ ಊರಿಗೆ ಹೋದರೆ ಒಂದು ಸೀರೆ ಕೊಂಡು ತರುವಂತೆ ಅಜ್ಜಿ ಹೊಸ ಊರಿಗೆ ಹೋದಾಗ ಒಂದು ಹೊಸ ಹಾಡು ಕಲಿತು ಬರುತ್ತಿದ್ದರಂತೆ. ಮೈಸೂರು ಅರಮನೆ ಬ್ಯಾಂಡಿನ ಬಹುಭಾಷೆ ಬೆರೆತ ಹಾಡು ಅವರ ಜ್ಞಾಪಕದಲ್ಲಿತ್ತಂತೆ. ಅಜ್ಜಿ ಚಿಕ್ಕವರಾಗಿದ್ದಾಗ ವಾಗ್ಗೇಯಕಾರ ಮೈಸೂರು ಸದಾಶಿವರಾಯರನ್ನು ಕಂಡಿದ್ದರು, ಅವರ ಹಾಡುಗಳನ್ನು ಕಲಿತಿದ್ದರು. ಸಂಗೀತ ಕಲಾಭಿವರ್ಧಿನಿ ಸಭೆಯವರು ಮೈಸೂರು ಸದಾಶಿವರಾಯರ ಕೃತಿಗಳು ಎಂಬ ಪುಸ್ತಕವನ್ನು ಪ್ರಕಟಿಸಿದಾಗ ಅಜ್ಜಿಯ ಸ್ಮರಣೆಯಲ್ಲಿದ್ದ ಎರಡು ಅಪೂರ್ವ ಹಾಡುಗಳು ಆ ಪುಸ್ತಕದಲ್ಲಿ ಪ್ರಕಟವಾಗಿದ್ದವು. ಆ ಪುಸ್ತಕ ಪ್ರಕಟವಾದ ಎಷ್ಟೋ ವರ್ಷಗಳ ನಂತರ (1960ರಲ್ಲಿ) ಒಂದು ದಿನ ಮಗನನ್ನು ಕರೆದು, "ದೇವಡು, ಒಂದು ಪೆನ್ನು ಕಾಗದ ತೆಗೆದುಕೊಂಡು ಬಾ ಬೇಗ. ನನಗೆ ಸದಾಶಿವರಾಯರ ಹಾಡೊಂದು ಜ್ಞಾಪಕಕ್ಕೆ ಬಂದಿದೆ. ಮತ್ತೆ ಅದು ಮರೆತು ಹೋಗುವುದರಲ್ಲಿ ಬರೆದುಕೋ" ಎಂದರಂತೆ. ಅವರು ಬರೆದುಕೊಂಡರು. ಅದುವೆ ಕಾಲವರ್ಧಿನಿ ರಾಗದ 'ಪಾಹಿಪಾಹಿ ಶ್ರೀ ಗಜಾನನಾ' ಎಂಬ ಕೃತಿ. ಆ ವರ್ಷ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವದಲ್ಲಿ ಇದನ್ನು ಹಾಡಲು ಅವಕಾಶ ಬೇಡಿ ಪತ್ರ ಬರೆದಿದ್ದರಂತೆ. ಅಕಾಡೆಮಿಯವರು ಸಂತೋಷದಿಂದ ಒಪ್ಪಿದ್ದರಂತೆ. ಆದರೆ ಅದೇ ಡಿಸೆಂಬರ್ ತಿಂಗಳಲ್ಲಿ 97 ವರ್ಷದ ಅವರ ತಾಯಿ (ಅಜ್ಜಿ) ತೀರಿಹೋದರು, ಅವರಿಗೆ ಮದ್ರಾಸಿಗೆ ಹೋಗಲು ಸಾಧ್ಯವಾಗಲಿಲ್ಲವಂತೆ. ಮುಂದೆ ಆ ಅಪೂರ್ವ ಕೃತಿಯು ದಿ ಜರ್ನಲ್ ಆಫ್ ಮ್ಯುಸಿಕ್ ಅಕಾಡೆಮಿಯಲ್ಲಿ, A Rare and Unpublished Kriti of Mysore Sadashiva Rao ಎಂಬ ಲೇಖನದೊಂದಿಗೆ ಪ್ರಕಟವಾಯಿತಂತೆ.

ಅಜ್ಜಿಯ ಕೊನೆಯ ಸಂದೇಶ ಅವರ ಆಶೀರ್ವಾದವಾಗಿತ್ತು. ನಮ್ಮ ಬಂಧುಗಳು ಯಾರ್ಯಾರಿದ್ದಾರೋ, ಕೊಟ್ಟಮನೆ, ತಂದ ಮನೆ, ಎಲ್ಲರಿಗೂ ನನ್ನ ಆಶೀರ್ವಾದ ತಿಳಿಸಿಬಿಡಿ. ನಮ್ಮ ನೆಂಟರೆಲ್ಲರ ಪೈಕಿ ನಾನೇ ಹಿರಿಯವಳು. ನನಗಿಂತ ಎಲ್ಲರೂ ಕಿರಿಯರು. ಎಲ್ಲರೂ ಚೆನ್ನಾಗಿರಲಿ. ಎಲ್ಲರಿಗೂ ನನ್ನ ಆಶೀರ್ವದಗಳು." ಅಜ್ಜಿ ಕೊನೆಯ ಉಸಿರು ಎಳೆದಾಗ ಒಂದು ನಿಧಿಯನ್ನು ಕಳೆದುಕೊಂಡ ಅನುಭವ ಸಂಬಂಧಿಕರಿಗೆ ಆಪ್ತರಿಗೆ ಆದುದರಲ್ಲಿ ಸಂದೇಹವಿಲ್ಲ. ಈ ಪುಸ್ತಕ ಓದುತ್ತಿರುವಂತೆ ನಾನೊಂದು ಹಳೆಯ, ಆದರೂ ಹೊಚ್ಚ ಹೊಸ ಪ್ರಪಂಚದಲ್ಲಿದ್ದಂತೆ ಭಾಸವಾಯಿತು. ಇಂಥದೊಂದು ಪುಸ್ತಕ ಓದಲು ಎರವಲುಕೊಟ್ಟ ಮಿತ್ರ ಶ್ರೀನಿವಾಸ ರಾವ್‌ಗೆ ನಾನು ಉಪಕೃತ.

ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ : ಭಾಗ 1ಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ : ಭಾಗ 1

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X