• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರಕವಿ ಬೇಂದ್ರೆಯವರ ಮೌನಯೋಗ - ಭಾಗ 2

By Staff
|

ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮೌನದ ಅವಸ್ಥಾ ಶಿಖರ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ, ಧವಲಗಿರಿ ಎನ್ನುತ್ತಾರೆ ಬೇಂದ್ರೆ. ಕಾಯ-ವಾಕ್-ಮನಗಳಲ್ಲಿ ಈಶ್ವರೀ ವಾಣಿಗೆ ಎಡೆಮಾಡಿಕೊಡುವದೇ ಮೌನ ಎಂಬ ಮಾತಿನ ಅನುಭೂತಿ ಬೇಂದ್ರೆಯವರಿಗೆ ಮೊದಲ ಮೌನವಾರದಲ್ಲಿ ಆಗುತ್ತದೆ.

* ಡಾ. 'ಜೀವಿ' ಕುಲಕರ್ಣಿ, ಮುಂಬೈ

ಮಾತಿನ ಮಲ್ಲರೆಂದೇ ಪ್ರಖ್ಯಾತರಾಗಿರುವ ಬೇಂದ್ರೆಯವರು ಮೌನಯಜ್ಞದ ದೀಕ್ಷಿತರಾಗಿ ಮಿತ್ರರೊಂದಿಗೆ ಮೊದಲನೆಯ ಮೌನವಾರ ಆಚರಿಸಿದ್ದು ಅವರ ಜೀವನದಲ್ಲಿಯ ಒಂದು ಮಹತ್ವದ ಘಟನೆ. ಧಾರವಾಡದಲ್ಲಿ, ನ್ಯಾಯವಾದಿಗಳಾಗಿದ್ದ ನರಸಿಂಗರಾವ ದೀಕ್ಷಿತರ ಮನೆಯಲ್ಲಿ 21 ಮೇ 1948ರಿಂದ 27 ಮೇವರೆಗೆ, ಒಂದು ವಾರ ಮೌನ ಆಚರಿಸಿದರು. (1944ರಿಂದ 1956ರವರೆಗೆ ಬೇಂದ್ರೆಯವರು ಸೊಲ್ಲಾಪುರದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಮೌನವಾರಕ್ಕಾಗಿಯೇ ಧಾರವಾಡಕ್ಕೆ ಬಂದಿದ್ದರು.) ಬೇಂದ್ರೆಯವರು 'ನಮ್ಮ ಮೌನ ಸಪ್ತಾಹ' ಎಂಬ ಲೇಖನದಲ್ಲಿ ತಮಗೆ ಮೌನವಾರ ಆಚರಿಸಲು ಸಕಲ ರೀತಿಯ ಅನುಕೂಲತೆ ಒದಗಿಸಿಕೊಟ್ಟ ದೀಕ್ಷಿತ ಪರಿವಾರದ ಸದಸ್ಯರನ್ನು ಮೆಚ್ಚುತ್ತಾರೆ. ಜೊತೆಗಿದ್ದವರ ಗುಣಗ್ರಹಣ ಮಾಡುತ್ತಾರೆ. ಮಳಗಿಯವರ ಪ್ರಬಲವಾದ, ಪ್ರಸನ್ನವಾದ ಜಿಜ್ಞಾಸೆ, ಗೋಕಾಕರ ಕಾರ್ಯವ್ಯಾಪಕತೆ, ಮುಗಳಿಯವರ ವಿವಿಧ ತತ್ಪರತೆ, ವಿನೀತರ ವ್ಯಗ್ರತೆಯಲ್ಲಿಯ ಧ್ಯಾನಮಗ್ನತೆ, ದೀಕ್ಷಿತರ ಬಿಚ್ಚುಮನಸ್ಸು, ಇನಾಮದಾರರ(ದೀಕ್ಷಿತರ ಅಳಿಯ) ಮೈತುಂಬ ಎಚ್ಚರದ ಹವಣು, ಟಿಮ್ಮಿ (ದೀಕ್ಷಿತರ ಕಿರಿಯಮಗ) ಸಹಜ ಸೇವಾಬುದ್ಧಿಯನ್ನು ಮೆಚ್ಚುತ್ತಾರೆ.

ಮತ್ತೆ ಹೇಳುತ್ತಾರೆ, "ನಾನು ಓದುವುದಕ್ಕಿಂತ ಹೆಚ್ಚು ಮನನ ಮಾಡಿದೆ. ಅಷ್ಟೂ ಓದಿದೆ ಎಂದಲ್ಲ. ಓದುವುದಕ್ಕಿಂತ ಹೆಚ್ಚು ಬರೆದೆ. ವಾಙ್ಮಲ ಸೇರಿತ್ತು ಎಂದು ಕಾಣುತ್ತದೆ. ಅದರಿಂದ (ಮೌನದಿಂದ) ನನ್ನಲ್ಲಿ ಹೆಚ್ಚು ಶುಚಿತ್ವ ಬಂದಿದೆ. . . . ನನ್ನ ಮಾತಿನ, ಹರಟೆಯ, ದಿನದ ಅಭ್ಯಾಸ, ಉದ್ಯೋಗಗಳ ಚರಿತ್ರೆ ನೋಡಿದಾಗ, ಈ ಮೌನವು ನನಗೆ ಧೈರ್ಯ ಕೊಟ್ಟಿದೆ. . . . ಶ್ರೀ ತಾಯಿಯವರ, ಶ್ರೀ ಅರವಿಂದರ, ಅವರ ವಚನಗಳ ಮತ್ತು ಆಶ್ರಮದ ರೀತಿಯ ಬಗ್ಗೆ ನನ್ನ ವಿಶ್ವಾಸ ಶ್ರದ್ಧೆ ಆಳವಾಗುತ್ತಲಿದೆ. . . . ಅಖಂಡ ಕಾರ್ಯ ವ್ಯಾಪಕತೆಯ ಮೌನಗಳು ಶ್ರೀ ಅರವಿಂದ ಆಶ್ರಮ, ಶ್ರೀ ರಮಣಾಶ್ರಮ, ಶ್ರೀ ರಾಮದಾಸ, ಶ್ರೀ ಮೆಹರಬಾಬಾ ಮೊದಲಾದವರಲ್ಲಿ ಇವೆ. ನಮ್ಮದು ನಮಗೆ ತಕ್ಕ ಮಕ್ಕಳಾಟ."

ಬೇಂದ್ರೆಯವರ ಮಾತಿಗೆ ಪ್ರತಿಸ್ಪಂದಿಸಿ ಗೋಕಾಕರು ಬರೆಯುತ್ತಾರೆ, "ನನಗೆ ಹೇಳಬೇಕಾದುದನ್ನು ಬೇಂದ್ರೆಯವರು ಇಲ್ಲಿ ಎತ್ತರದಿಂದ ಹೇಳಿದ್ದಾರೆ. ನನ್ನ ಭಾವನೆಗಳು ಇವೇ ಎಂದು ಸಹಿ ಹಾಕುತ್ತೇನೆ. ಕೃತಜ್ಞತೆ ಇನ್ನೊಮ್ಮೆ ಒತ್ತಿ ಸೂಚಿಸುತ್ತೇನೆ" ಎಂದು.

ಮುಗಳಿಯವರು ಚಿಂತನಸಾರವೆಂದು ಮೌನವಾರದ ಬಗ್ಗೆ ಬಗ್ಗೆ ಬರೆಯುತ್ತಾರೆ. ಅವರ ಪ್ರಕಾರ ಮೌನದಲ್ಲಿ ಎರಡು ಪ್ರಕಾರ. ಒಂದು ನಿಯತಕಾಲಿಕ, ಇನ್ನೊಂದು ಸರ್ವಕಾಲಿಕ. ಎರಡರಲ್ಲೂ ಮೂಕತೆ ಸ್ವಂತ ಆಯ್ಕೆಯೇ ಹೊರತು ಬೇರೆಯವರು ಹೇರಿದ್ದಲ್ಲಾ. ಅವರೆನ್ನುತ್ತಾರೆ, "ಮಾತು ಬಲ್ಲವರಾಗಬೇಕಾದರೆ ಮೌನ ಬಲ್ಲವರಾಗಬೇಕು. ಮಾತು ಹೊರಗೆ ಕೇಳುವ ರೂಪದಲ್ಲಿಂದ್ದಂತೆ ಮೌನ ಒಳಗೆ ಕೇಳುವ ರೂಪದಲ್ಲಿರುತ್ತದೆ. ಮೌನದ ಟಂಕಸಾಲೆಯಲ್ಲಿ ಮಾತು ಎಲ್ಲ ಪ್ರಕ್ರಿಯೆಗಳಲ್ಲಿ ಹಾದು ಸಿದ್ಧವಾಗಿ, ಹೊರಗೆ ಬಂದು ನಾಣ್ಯವಾಗುತ್ತದೆ. ನಾಣ್ಯಕ್ಕೆ ಹೆಚ್ಚಿನ ಬೆಲೆ ಬರಬೇಕಾದರೆ, ಟಂಕಸಾಲೆಯಲ್ಲಿ ಅದಕ್ಕೆ ರೂಪ ಬರಬೇಕು, ಮಾನ್ಯತೆ ದೊರೆಯಬೇಕು. ಖೊಟ್ಟಿನಾಣ್ಯಗಳನ್ನು ಬೇಕಾದಷ್ಟು ತಯಾರಿಸಬಹುದು. ಅದಕ್ಕೆ ಲೋಕದಲ್ಲಿ ಮಾನ್ಯತೆ ದೊರೆಯದು. ಮಾತಿಗೆ ಬೆಲೆ ಬರಬೇಕಾದರೆ, ಮೌನದಲ್ಲಿ ಅದಕ್ಕೆ ರೂಪ ಬರಬೇಕು. ಇದು ಸುಲಭವಾಗಿ ಪ್ರಾಪ್ತವಾಗುವಂಥದಲ್ಲ. ಇದನ್ನು ಒಲಿಸಿಕೊಳ್ಳಬೇಕಾಗುತ್ತದೆ."

ಮೌನ ಸಪ್ತಾಹದ ಕೊನೆಗೆ ಗೋಕಾಕರು ಚಿಂತನಸಾರ ಬರೆಯುತ್ತ ಮೌನದ ಪ್ರಸನ್ನತೆಯ ಬಗ್ಗೆ ಹೇಳುತ್ತಾರೆ, "ಮೌನ ಸಪ್ತಾಹದಿಂದ - ಮಾತು ಹೇಗಿರಬೇಕೆಂಬುದು ನನಗೆ ನಿಚ್ಚಳವಾಗಿ ಹೊಳೆಯುತ್ತಲಿದೆ. ಕಾಲೇಜಿನಲ್ಲಿಯೂ ಮೌನದಿಂದ ವ್ಯಾಖ್ಯಾನ ಕೊಡುವುದು ಸಾಧ್ಯವಾದರೆ, ಹಾಗೆ ಮಾಡಬೇಕೆಂದೇ ಎನಿಸುತ್ತದೆ. ನಾವು ಆಚರಿಸಿದ ಮೌನ ಪೂರ್ಣವಾಗಿರದಿದ್ದರೂ, ಮೌನದ ಪೂರ್ಣತೆಯನ್ನು ಅದು ತಿಳಿಸಿಕೊಟ್ಟಿರುತ್ತದೆ. ಗೋಕಾಕರ ಈ ಮಾತು ಓದಿದಾಗ ಆದಿ ಶಂಕರಾಚಾರ್ಯರ ಬಗ್ಗೆ ಹೇಳಲಾದ ಒಂದು ಮಾತು ನೆನಪಾಗುತ್ತದೆ. 'ಗುರುಸ್ತು ಮೌನಂ ವ್ಯಾಖ್ಯಾನಂ, ಶಿಷ್ಯಸ್ತು ಛಿನ್ನ ಸಂಶಯಃ'( ಗುರು ಮೌನದಿಂದ ವ್ಯಾಖ್ಯಾನ ಮಾಡಿದಾಗ ಶಿಷ್ಯನ ಸಂಶಯಗಳೆಲ್ಲವೂ ಪರಿಹಾರಗೊಂಡಿದ್ದವಂತೆ. ಆದರೆ ಇಂಥ ಸ್ಥಿತಿ ತಲುಪುವದೆಂದರೆ ಸಾಧನೆಯ ಉಚ್ಚ ಶಿಖರ.)"

ಮಿತ್ರರೆಲ್ಲರು ಮೌನದ ಅಭ್ಯಾಸದಲ್ಲಿ ತಮಗೆ ಇಷ್ಟವಾದುದನ್ನು ಓದಿದರು, ತಮಗೆ ಹೊಳೆದದ್ದನ್ನು ಬರೆದಿಟ್ಟರು. ಈ ಅವಧಿಯಲ್ಲಿ ಬೇಂದ್ರೆಯವರು ಕೆಲವು ಮಹತ್ವದ ಪದ್ಯಗಳನ್ನು ಬರೆದರು, ಗದ್ಯ ಲೇಖನಗಳನ್ನೂ ಬರೆದರು. ಮೊದಲನೆಯ ದಿನದ ಚಿಂತನೆಯ ಫಲವಾಗಿ ಬೇಂದ್ರೆಯವರು 'ಅಸ್ಮಿತಾ' ಎಂಬ ಪದ್ಯವನ್ನು ಬರೆದರು. (ಇದನ್ನು ಅವರು ನಂತರ 'ಸೂರ್ಯಪಾನ'ದಲ್ಲಿ ಪ್ರಕಟಿಸಿದರು.) ಸ್ಮಿತರಹಿತ ಗಾಂಭೀರ್ಯದಲ್ಲಿ 'ಅಸ್ಮಿತಾ' ದೇವತೆ ನೆಲೆಸಿದ್ದಾಳೆ. ಆಕೆಯ ಗುಹೆ ಹೊಕ್ಕು ಅಷ್ಟ ದರ್ಶನ ಪಡೆಯುವುದೇ ಪಾವನತೆ ಎಂಬ ಭಾವ ಈ ಕವನದಲ್ಲಿದೆ. ಅಸ್ಮಿತಾ ಎಂದರೆ ನಾನು ಇದ್ದೇನೆ ಎಂಬ ಅರಿವು.

ಬೇಟೆಗಾರಿಕೆ ಕಣ್ಗೆ ಮಣ್‌ಹೊಯ್ದು ಎಂದಾರೆ

ಹಕ್ಕಿಗಳ ಕೇಳಿರುವೆಯಾ ?

ಬಣ್ಣರೂಪದ ಮಾಲೆ ಬದಿಗಿರಿಸಿ ನರುಗಂಪ

ಹಾಡನ್ನು ಹೇಳಿರುವೆಯಾ ?

*

ಕಲ್ಲ ಕಂಬನಿ ಸುರಿಸಿ, ಬೆಲ್ಲ ಸಪ್ಪಗೆ ಇರಿಸಿ,

ಮೆಲ್ಲೆದೆಯ ಮುಟ್ಟಿರುವೆಯಾ ?

ಏರಿಳವುಗಳದಾರಿ ಉದಯಾಸ್ತಗಳ ಮೀರಿ

ರವಿಯಾಗಿ ಹುಟ್ಟಿರುವೆಯಾ ?

*

ತಾಯಿ ಕೂಸಿನ ಮುದ್ದು ಮೌನದಲಿ ಮಿಡಿದಾಗ

ಶ್ರುತಿಯನ್ನು ಹಿಡಿದಿರುವೆಯಾ ?

ಧ್ಯಾನ ಪಕ್ವತೆ ಪಡೆದು ಮೌನ ಬೀಜವು ಸಿಡಿದು

ಓಂವೇದ ಪಡೆದಿರುವೆಯಾ ?

*

ಸ್ಮಿತವೆ ವಿಸ್ಮಿತವಾಯ್ತು ಅಸ್ಪರ್ಶ ಸ್ಪರ್ಶದಲಿ

ಅಸ್ಮಿತೆಯು ಸ್ಫೂರ್ತಿಸಿತ್ತು

ವಿಸ್ಮಿತದ ಸ್ತಿಮಿತದಲಿ ಮೌನವೇ ಧ್ವನಿಸುತಿರೆ

ಸ್ಮಿತವಾಗಿ ಮೂರ್ತಿಸಿತ್ತು.

ಮಾತಿನಮಲ್ಲ ಬೇಂದ್ರೆಯವರು ಮೌನವನ್ನು ಯಜ್ಞವಾಗಿ ಕಂಡರು, ತಾವೇ ಯಜ್ಞ-ದೀಕ್ಷಿತರಾದರು. 'ಮಾತು-ಮೌನ' ಪದ್ಯದಲ್ಲಿ, ಮಾತು ಮೌನದ ಪ್ರತಿಮೆ, ಮೌನ ಮಾತಿನ ದೈವ ಎಂಬ ಭಾವವಿದೆ. "ನಿನ್ನ ಕುರಿತು ಮಾತಾಡದಿರುವುದೇ ಮೌನಯಜ್ಞವೆಂಬೆ | ನನ್ನ ಬಣ್ಣನೆಯ ಸಣ್ಣ ಮಾತಿನಲು ನೀನೆ ಪೂಜೆಗೊಂಬೆ" ಎನ್ನುತ್ತಾರೆ.

ಓ ಸುಮ್ಮನಿರು ಓ ಮಾತೆ ಎಂಬ ಪದ್ಯ ಒಂದು ಸುನೀತ.

ಸುಮ್ಮನಿರು ಓ ಮಾತೆ ! ಭಾವಗೀತ ಪುನೀತೆ

ಓ ಜಾತೆ, ಓ ಮಾತೆ, ಓ ಆತ್ಮಸುಪ್ರೀತೆ,

ನೋಡಿದರು ತಿಳಿಯದಾ ಗೂಢ ಹೇಳಿದರೇನು ?

ತಾನಾಗಿ ಬಿಡುವನಕ ತೊಡಕು ನಾನೂ ನೀನು.

ಇಲ್ಲಿ ಮಾತು ಮಾತೆಯಾಗಿದೆ. 'ಮೌನವಾರ' ಎಂಬ ಕವಿತೆಯಲ್ಲಿ ಭಾಗವಹಿಸಿದ ಎಲ್ಲರ ಹೆಸರುಗಳು ಮೂಡಿಬಂದಿವೆ.

ಪದ್ಯಗಳಷ್ಟೇ ಪ್ರಭಾವಿಯಾದ ಗದ್ಯ ಲೇಖನಗಳನ್ನು ಮೌನವಾರದಲ್ಲಿ ಬೇಂದ್ರೆಯವರು ಬರೆದರು. 'ಮಾತಿನ ಜಾಡು' ಎಂಬ ಪ್ರಬಂಧದಲ್ಲಿ ಹೇಳುತ್ತಾರೆ, "ಮಾತೇನು, ಮೌನವೇನು, ಎರಡೂ ಹೊದಿಕೆಗಳೇ ! ಒಳಗಿನ ತಿರುಳು ಬೇರೆಯದೆ ಇದೆ. ಆ ಒಳಗಿನ ತಿರುಳು ಜೀವಭಾವ" ಎನ್ನುತ್ತಾರೆ. ಮಾತುಗೀತು ಊರಸಂತೆ | ಇರುವ ಮನೆಯ ಮೌನ ಎನ್ನುತ್ತಾರೆ. ಮೌನದ ವ್ಯತ್ಪತ್ತಿ ಎಂಬ ಪ್ರಬಂಧದಲ್ಲಿ ಒಂದೊಂದು ವರ್ಣದಲ್ಲಿ ವಿಶ್ವವೇ ಅಡಗಿದೆ ಎನ್ನುತ್ತಾರೆ. ಅಕಾರಣವಾದ ಎಂಬ ಲೇಖನದಲ್ಲಿ, ಜಗತ್ತಿನೊಳಗಿನ ಅನೇಕಾನೇಕ ನಿಷ್ಕಾರಣವಾದಗಳಿಗೆ ಕಾರಣವಾದವೇ ಮೂಲ ಎನ್ನುತ್ತಾರೆ. ಅಂಕಿಗಳ ಅರ್ಥ ಎಂಬ ಲೇಖನದಲ್ಲಿ ಒಂದು, ಎರಡು, ಮೂರು, ನಾಲ್ಕು ಅಂಕಿಗಳ ಬಗ್ಗೆ ಬರೆಯುತ್ತಾರೆ. ನಾಲ್ಕರಲ್ಲಿ 'ನಲ್' ಕಾಣುತ್ತಾರೆ. ಇದು ಓಂ ತುರೀಯ ಸ್ಥಿತಿ ಎನ್ನುತ್ತಾರೆ. ಕೃತ್ಸ್ನ ಮಾರ್ಗ ಹಾಗೂ ಕಂಸ ಮಾರ್ಗದ ಬಗ್ಗೆ ಬರೆಯುತ್ತಾರೆ. ಕೃತ್ಸ್ನ ಎಂದರೆ ನಾಲ್ಕು ಕೂಡಿದ ಎಲ್ಲ, ಕಂಸ ಎಂದರೆ ಒಂದು ಭಾಗ ಮಾತ್ರ. ಮೌನದ ತಪ ಎಂಬ ಲೇಖನದಲ್ಲಿ ಒಂದು ಮಹತ್ವದ ಮಾತು ಬರೆಯುತ್ತಾರೆ. "ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮೌನದ ಅವಸ್ಥಾ ಶಿಖರ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ, ಧವಲಗಿರಿ" ಎನ್ನುತ್ತಾರೆ. ಕಾಯ-ವಾಕ್-ಮನಗಳಲ್ಲಿ ಈಶ್ವರೀ ವಾಣಿಗೆ ಎಡೆಮಾಡಿಕೊಡುವದೇ ಮೌನ ಎಂಬ ಮಾತಿನ ಅನುಭೂತಿ ಬೇಂದ್ರೆಯವರಿಗೆ ಮೊದಲ ಮೌನವಾರದಲ್ಲಿ ಆಗುತ್ತದೆ.

ವರಕವಿ ಬೇಂದ್ರೆಯವರ ಮೌನಯೋಗ-1

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
GV Kulkarni writes about DR Bendre's Mouna Yoga, which he followed in Dharwad in company with Gokak, Mugali and others.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more