ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕಾಕರಂಥ ಮಹಾನ್ ಚೇತನಕ್ಕೆಂದೂ ಅಳಿವಿಲ್ಲ

By Staff
|
Google Oneindia Kannada News

VK Gokak, a scholar par excellence
ವಿನಾಯಕ ಕೃಷ್ಣ ಗೋಕಾಕರು ದೈಹಿಕವಾಗಿ ಮಾತ್ರವಲ್ಲ ಸಾಹಿತ್ಯಿಕವಾಗಿಯೂ ಕನ್ನಡ ಸಾರಸ್ವತ ಲೋಕ ಕಂಡ ಮೇರು ಪರ್ವತ. ಅವರು ಒಬ್ಬ ಮಹಾ ಕವಿ, ವಿಮರ್ಶಕ ಮಾತ್ರವಾಗಿರಲಿಲ್ಲ ಒಬ್ಬ ಉತ್ತಮ ಶಿಷ್ಯ, ಶಿಕ್ಷಕ, ಮಗ, ತಂದೆ, ಸ್ನೇಹಿತ ಎಲ್ಲ ಆಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಕನ್ನಡಿಗರಾಗಿದ್ದರು. ಗೋಕಾಕರಂತಹ ಮಹಾನ್ ಜೀವಗಳಿಗೆ ಕೊನೆ ಇರುವುದಿಲ್ಲ, ಅವರ ಚೇತನ ಅವರ ಶಿಷ್ಯರ, ವಿದ್ಯಾರ್ಥಿಗಳ ಮೂಲಕ, ಗ್ರಂಥರಾಶಿಗಳ ಮೂಲಕ ನಿರಂತರ ಕ್ರಿಯಾಶೀಲವಾಗಿರುತ್ತದೆ. ನಿಜವಾಗಿಯೂ ಗೋಕಾಕ್ ಕನ್ನಡದ ಪೀಕಾಕ್.

* 'ಜೀವಿ' ಕುಲಕರ್ಣಿ, ಮುಂಬೈ

ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಡ್‌ವಾನ್ಸಡ್ ಸ್ಟಡೀಜ್ ಸಂಸ್ಥೆಯ ಡೈರೆಕ್ಟರ್ ಆಗಿ ಒಂದುವರೆ ವರ್ಷ ಗೋಕಾಕರು ಕೆಲಸ ಮಾಡಿದರು. ಇದೇ ವೇಳೆಯಲ್ಲಿ ವಿನಾಯಕರ ಮನದಲ್ಲಿ ಒಂದು ಬೃಹದ್ ಯೋಜನೆ ಬೀಜ ರೂಪದಲ್ಲಿತ್ತು. ಅದಕ್ಕೆ ನೀರೆರೆದು ಬೆಳೆಸಿ ವಟವೃಕ್ಷವಾಗಿಸಲು ಅವರಿಗೆ ಒಂದು ಪ್ರಶಾಂತ ವಾತಾವರಣ ಬೇಕಾಗಿತ್ತು. ಶ್ರೀಸತ್ಯಸಾಯಿಬಾಬಾ ಅವರ ಪ್ರಶಾಂತಿ ನಿಲಯ ಅಂತಹ ವಾತಾವರಣವನ್ನು ನೀಡಲಿತ್ತು. ಬೆಂಗಳೂರಿಗೆ ಮರಳಿ ಬಂದರು (1971). ವೈಟ್‌ಫೀಲ್ಡ್‌ನಲ್ಲಿ ವಾಸಿಸತೊಡಗಿದರು. ಅಲ್ಲೆ ಮಹಾಕಾವ್ಯ ಬರೆಯಲು ಸಿದ್ಧತೆ ನಡೆಸಿದರು. ಏಳು ವರ್ಷಗಳ ಕಾಲ ತಪಸ್ವಿಯಂತೆ ಅಧ್ಯಯನದಲ್ಲಿ ತೊಡಗಿದರು. ಅವರ ಮಹಾಕಾವ್ಯ 'ಭಾರತ ಸಿಂಧುರಶ್ಮಿ' ರೂಪುಗೊಳ್ಳುತ್ತಿತ್ತು. ಅದರ ವಿಷಯ ವೇದಕಾಲೀನವಾಗಿದ್ದುದರಿಂದ ವಿನಾಯಕರು ವೈದಿಕ ಇತಿಹಾಸ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಇದ್ದ ಎಲ್ಲ ಗ್ರಂಥಗಳನ್ನು ಅರೆದು ಕುಡಿದರು. ಶ್ರೀ ಅರವಿಂದರ 'ಆನ್ ವೇದಾಜ್' ಪುಸ್ತಕ ವಿನಾಯಕರಿಗೆ ವೈಚಾರಿಕ ಚೌಕಟ್ಟನ್ನು ಒದಗಿಸಿದರೆ, ಶ್ರೀ ಅರವಿಂದರ ಮಹಾಕಾವ್ಯ 'ಸಾವಿತ್ರಿ' ಅವರಿಗೆ ಮಹಾಕಾವ್ಯದ ಒಂದು ಮಾದರಿಯನ್ನು ನೀಡಿತ್ತು. ಮೊದಲ ಕರಡುಪ್ರತಿಯಲ್ಲಿ ಸಾವಿತ್ರಿಯಲ್ಲಿದ್ದಂತೆ 24,000 ಸಾಲುಗಳಿದ್ದವು. ಮುಂದೆ ಪರಿಷ್ಕಾರಗೊಂಡು 35,000 ಸಾಲುಗಳವರೆಗೆ ಬೆಳೆಯಿತು. ಆಧುನಿಕ ಕಾಲದಲ್ಲಿ ಭಾರತೀಯ ಯಾವುದೇ ಭಾಷೆಯಲ್ಲಿ ಬರೆಯಲಾದ ಮಾಹಾಕಾವ್ಯಗಳಲ್ಲೆ ಇದು ಅತ್ಯಂತ ದೊಡ್ದದಾಗಿದೆ. ಇವರ ತಪಸ್ಸು ಹಾಗೂ ಅಭ್ಯಾಸವನ್ನು ನೋಡಿದ, ಮಹಾಕಾವ್ಯದ ವಿಮರ್ಶೆ ಬರೆದ, ಸಂಸ್ಕೃತ ವಿದ್ವಾಂಸ ಡಾ|ಕೆ.ಕೃಷ್ಣಮೂರ್ತಿಯವರು, "ಗೋಕಾಕರ ಪಾಂಡಿತ್ಯವನ್ನು ಕಂಡರೆ ನಡುಕ ಉಂಟಾಗುತ್ತದೆ" ಎಂಬ ಉದ್ಗಾರ ತೆಗೆದಿದ್ದಾರೆ. (I shudder at his scholarship). 1981ರಿಂದ ಆರು ವರ್ಷಗಳ ಕಾಲ ಸತ್ಯಸಾಯಿ ಇನ್‌ಸ್ಟೀಟ್ಯೂಟ್ ಆಫ್ ಹೈಯರ್ ಲರ್ನಿಂಗ್- ಎ ಡೀಮ್ಡ್ ಯುನಿವರ್ಸಿಟಿಯ ಕುಲಪತಿಗಳಾಗಿ ಗೋಕಾಕರು ಕೆಲಸ ಮಾಡಿದರು.

1989ರಲ್ಲಿ ಗೋಕಾಕರು ಮಗನ ಮನೆಯಲ್ಲಿರಲು ಮುಂಬೈಗೆ ಬಂದರು. ಅವರ ಮಗ ಅನಿಲಕುಮಾರ ಐಎಎಸ್ ಅಧಿಕಾರಿಯಾಗಿದ್ದ. ಮುಂಬೈಗೆ ಬಂದಾಗ ಗೋಕಾಕರ ಪ್ರಕೃತಿ ಅಸ್ವಸ್ಥಗೊಂಡಿತ್ತು. ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇತ್ತು. 1991ರಲ್ಲಿ ಅವರಿಗೆ ಭಾರತದ ಸರ್ವೋಚ್ಚ ಸಾಹಿತ್ಯಿಕ ಗೌರವವಾದ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಕನ್ನಡ, ಇಂಗ್ಲಿಷ್, ಮರಾಠಿ ಮೊದಲಾದ ಭಾಷೆಯ ಪತ್ರಿಕೆಗಳಲ್ಲಿ ವಿನಾಯಕರ ಪ್ರಶಂಸೆ ಪ್ರಕಟವಾಯ್ತು. ಮುಂಬೈಯಲ್ಲಿ 'ಲೋಕಸತ್ತಾ' ಎಂಬ ಮರಾಠಿ ಪತ್ರಿಕೆಯ ಸಂಪಾದಕೀಯ ಬಹಳೇ ಆಕರ್ಷಕವಾಗಿತ್ತು. ಅದರ ಸಂಪಾದಕರು ಸಾಹಿತಿಗಳಾದ ಗಡಕರೀ ಎಂಬ ಪ್ರಸಿದ್ಧ ಲೇಖಕರು. 'ಕನ್ನಡ ಸಾರಸ್ವತ ಧ್ವಜ' ಎಂಬ ಶೀರ್ಷಿಕೆಯ ಕೆಳಗೆ ಅವರ ಅಗ್ರಲೇಖವಿತ್ತು. "ಕನ್ನಡ ಸಾರಸ್ವತರು(ಸರಸ್ವತಿಯ ಆರಾಧಕರು) ಅಖಿಲ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಯೋಗ್ಯತೆಯ ವಿಕ್ರಮವನ್ನೇ ಸ್ಥಾಪಿಸಿದ್ದಾರೆ" ಎಂದು ಮೊದಲನೆಯ ವಾಕ್ಯವಿತ್ತು. ಮುಂದೆ ಹೀಗೆ ಬರೆಯಲಾಗಿತ್ತು. "ಇಲ್ಲಿಯವರೆಗೆ ಹಿಂದಿಭಾಷೆಯವರದೇ ಮೇಲುಗೈ ಇತ್ತು. ಆದರೆ ಕನ್ನಡ ಸಾಹಿತ್ಯವು ಕೆಲವು ಬೆರಳು ಹೆಚ್ಚು ಎಂದು ತೋರಿದ್ದಾರೆ. ವಿನಾಯಕ ಕೃಷ್ಣ ಗೋಕಾಕರಂಥ ಉಚ್ಚಕೋಟಿಯ ವಿದ್ವಾನ್- ಸಂಶೋಧಕ- ಅಭ್ಯಾಸಿ-ಸಮೀಕ್ಷಕ ಚತುರಸ್ರ ಸಾಹಿತ್ಯಕಾರರಿಗೆ ಈ ಸಲದ ಜ್ಞಾನಪೀಠದ ಗೌರವ ಲಭಿಸಿದೆ" ಎಂದು ಬರೆದಿದ್ದರು. ಅವರ ಸಂಪಾದಕೀಯದ ಕೊನೆಯ ಸಾಲುಗಳು ಇಂತಿವೆ : "ಧನ್ಯಳು ಕನ್ನಡ ವಾಣಿ, ಯಾರಿಗಾಗಿ ಒಂದು ಎರಡಲ್ಲ ಐದು ಮಹಾರಥಿಗಳು ವಿಕ್ರಮಸ್ಥಾನ ನಿರ್ಮಾಣಗೊಳಿಸಿದ್ದಾರೆ. ಸಮಸ್ತ ಭಾರತೀಯ ಸಾಹಿತ್ಯಕ್ಕೆ ಪಥದರ್ಶಿಯಾಗಿ ಅವಳ (ವಾಣಿಯ) ಯೋಗ್ಯತೆಯನ್ನು ಶಿಖರಕ್ಕೆ ಒಯ್ದಿದ್ದಾರೆ. ಗೋಕಾಕರ ಬಗ್ಗೆ ಇನ್ನೊಂದು ಕೌತುಕದ ವಿಷಯ ಹೇಳಲೇಬೇಕು. ಇವರು ಇಂಗ್ಲಿಷ್ ವಿದ್ವಾಂಸರು, ಸಂಸ್ಕೃತ ಪಂಡಿತರು ಹಾಗೂ ಕನ್ನಡ ಪುತ್ರರು. ಇಂದು ಕರ್ನಾಟಕದಲ್ಲಿ ಕನ್ನಡ ಭಾಷೆಯ ಶಿಕ್ಷಣ ಕಡ್ಡಾಯ ಮಾಡಿದ ಅಭ್ಯಾಸ ಕ್ರಮದ ಶಿಲ್ಪಿಯಾಗಿದ್ದಾರೆ. ಸುಪ್ರಸಿದ್ಧ ಗೋಕಾಕ ಸಮಿತಿಯ ಅಧ್ವರ್ಯ, ಇಂದು ಜ್ಞಾನಪೀಠದ ವಿಜೇತ ಗೋಕಾಕರೇ ಆಗಿದ್ದಾರೆ. ಮಾತೃಭಾಷೆಯ ಮೇಲೆ ಬರಿ ಪ್ರೀತಿ ತೋರಿಸುವುದಷ್ಟೇ ಅಲ್ಲ, ರಾಜಕೀಯ ಕ್ಷೇತ್ರದಲ್ಲೂ ಆ ಮಾತೃಭಾಷೆಗೆ ಸಮ್ಮಾನ ದೊರಕಿಸಿ ಕೊಡುವ ಶ್ರೇಯಸ್ಸು ಗೋಕಾಕರಿಗೆ ಕೊಡಬೇಕು".

ಗೋಕಾಕರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಅವರ ಕಟು ಟೀಕಾಕಾರರೆಂದೇ ಪ್ರಸಿದ್ಧರಾದ ಸಾಹಿತಿ ಪಿ.ಲಂಕೇಶ್ ಅವರು ಗೋಕಾಕರ ಬಗ್ಗೆ ಹೀಗೆ ಬರೆದರು : "ಕನ್ನಡಕ್ಕೆ ನಾಲ್ಕು ಸಲ ಜ್ಞಾನಪೀಠ ಪ್ರಶಸ್ತಿ ದೊರೆಯುವಲ್ಲಿ ಗೋಕಾಕರ ವರ್ಚಸ್ಸು ಕೆಲಸ ಮಾಡಿದೆ ; ಕನ್ನಡದ ಕಂಪನ್ನು ಎಲ್ಲೆಡೆಗೆ ಹರಡಿದವರಲ್ಲಿ ಗೋಕಾಕ್ ಪ್ರಮುಖರು. ಶ್ರೇಷ್ಠ ಅಧ್ಯಾಪಕರಾಗಿ ಸಾವಿರಾರು ಜನಕ್ಕೆ ಸಾಹಿತ್ಯ ಕಲಿಸಿದ ಗೋಕಾಕ್ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಕೆಲಸ ಮಾಡಿದರು. ಕನ್ನಡ ನವ್ಯ ಕಾವ್ಯದ ಹೆಸರನ್ನು ಕೂಡ ಕೇಳದೆ ಇದ್ದಾಗ ನವ್ಯ ನುಡಿಗಟ್ಟು ಅನುಭವದ ಬಗ್ಗೆ ಬರೆದವರು ಅವರು. ಸಾಹಿತ್ಯ ಸೇವೆಯನ್ನು ಏಕಾಗ್ರಚಿತ್ತದಿಂದ, ಶುದ್ಧ ಅಂತಃಕರಣದಿಂದ ಮಾಡಿದ ಜನಾಂಗಕ್ಕೆ ಸೇರಿದವರು ಗೋಕಾಕ್. ಅವರ ಒಟ್ಟಾರೆ ಸಾಧನೆ ವ್ಯಕ್ತಿತ್ವ ನೆನೆದು ಅವರ ಈ ಸಂತೋಷದ ಗಳಿಗೆಯಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಬೇಕಾದದ್ದು ಕನ್ನಡಿಗರ ಕರ್ತವ್ಯ. (ಲಂಕೇಶ ಪತ್ರಿಕೆ -ಅಗಸ್ಟ್ 25, 1991).

ಭಾರತೀಯ ಜ್ಞಾನಪೀಠ ಪ್ರಶಸ್ತಿ ಪ್ರದಾನ ಸಮಾರಂಭವು ಸಾಮಾನ್ಯವಾಗಿ ದೆಹಲಿಯಲ್ಲಿಯೇ ನಡೆಯುತ್ತದೆ. ಗೋಕಾಕರ ಆರೋಗ್ಯ ಸರಿ ಇಲ್ಲದ್ದರಿಂದ ಆ ಸಮಾರಂಭವನ್ನು ಮುಂಬೈಯಲ್ಲಿ ನಡೆಸಲಾಯಿತು, ನೆಹರು ಸೆಂಟರ್‌ನಲ್ಲಿ ಬಹುಮಾನವನ್ನು ಕೊಡಲಾಯಿತು. (ನವೆಂಬರ್ 1, 1991). ಆಗ ಪ್ರಧಾನಿಯಾಗಿದ್ದ ನರಸಿಂಹರಾವ್ ಅವರು ಭಾರತ ಸಿಂಧುರಶ್ಮಿಯ ಬಗ್ಗೆ ಬಹಳ ಚೆನ್ನಾಗಿ ಮಾತನಾಡಿದರು. ನಾವೆಲ್ಲ ಅಭಿಮಾನಿಗಳು ಈ ಸಮಾರಂಭವನ್ನು ಕಣ್‌ತುಂಬಿ ನೋಡಿ ನಲಿದಾಡಿದೆವು. ಡಾ|ಹಾ.ಮಾ.ನಾಯಕ, ಪ್ರೊ. ಚಿ.ನ. ಮಂಗಳಾ, ಪ್ರೊ.ಆರ್.ಜಿ.ಕುಲಕರ್ಣಿ ಬೆಂಗಳೂರಿಂದ ಆಗಮಿಸಿದ್ದರು. ಆ ದಿನಗಳು ಅವಿಸ್ಮಣೀಯವಾಗಿದ್ದವು.

ಗೋಕಾಕರು ಬಹು ಎತ್ತರದ ವ್ಯಕ್ತಿ(6 ಫೂ. 3 ಇಂ.). ಸಾಹಿತ್ಯದಲ್ಲೂ ಅವರು ಬಹಳ ಎತ್ತರದ ವ್ಯಕ್ತಿ. ಅವರ ಕಂಠ ಜೋಗದ ಜಲಪಾತ. ಕನ್ನಡದ ಹೆಸರನ್ನು ಭಾರತದ ಮಟ್ಟದಲ್ಲಿ ಅಷ್ಟೇ ಏಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಎತ್ತಿ ಹಿಡಿದ ಕನ್ನಡ ಸೇನಾನಿ ಅವರು. 'ಅರ್ಪಣ ದೃಷ್ಟಿ' ಎಂಬ ತಮ್ಮ ಒಂದು ಪ್ರಬಂಧದಲ್ಲಿ ಅವರು ತಮ್ಮ ಜೀವನದ ಕೋಷ್ಟಕವನ್ನು ಕೊಡುತ್ತಾರೆ. 1) ಮಗ, ಪತಿ, ತಂದೆ 2) ಜೊತೆಗಾರ, ಸ್ನೇಹಿತ, ಶಿಷ್ಯ 3) ವಿದ್ಯಾರ್ಥಿ, ಶಿಕ್ಷಕ, ಆಡಳಿತಗಾರ 4) ಕನ್ನಡಿಗ, ಭಾರತೀಯ, ವಿಶ್ವಮಾನವ 5) ಕವಿ, ತಾತ್ವಿಕ, ವಿಮರ್ಶಕ 6) ಜಾಗೃತ, ಸ್ವಾಪ್ನೋದ್ದೀಪಿತ, ಸುಷುಪ್ತ. ಗೋಕಾಕರು ಈ ಹದಿನೆಂಟು ಪಾತ್ರಗಳನ್ನು ಬಹಳ ಯಶಸ್ವಿಯಾಗಿ ಸಾಧಿಸಿದರು. ಎಲ್ಲೆಡೆ ಅವರಿಗೆ ಫರ್ಸ್ಟ್‌ಕ್ಲಾಸ್ ಫರ್ಸ್ಟ್ ಕಾದಿತ್ತು. ಅವರೊಬ್ಬ ಆದರ್ಶ ಮಗ ಆಗಿದ್ದರು. ಅವರ ಜೀವನದಲ್ಲಿ ಅದಕ್ಕೆ ರುಜುವಾತು ದೊರೆಯುತ್ತದೆ. ಅವರು ಆದರ್ಶ ಪತಿಯಾಗಿದ್ದರು. ಅವರ ಅರ್ಧಾಂಗಿ ಶಾರದಾ ಗೋಕಾಕರ ಆತ್ಮಚರಿತ್ರೆ 'ಒಲವೆ ನಮ್ಮ ಬದುಕು' ಇದಕ್ಕೆ ನಿದರ್ಶನವಾಗಿದೆ. ಅವರು ಆದರ್ಶ ತಂದೆಯಾಗಿದ್ದರು. ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರು, ಹೆಚ್ಚಿನ ಕಾಲ ಅವರು ಕರ್ನಾಟಕದ ಹೊರಗೆ ಇದ್ದರೂ, ಮಕ್ಕಳು ಗುಜರಾತಿ, ಮರಾಠಿಯಲ್ಲಿ ಕಲಿಯುವುದು ಅನಿವಾರ್ಯವಾಗಿದ್ದರೂ, ಎಲ್ಲ ಮಕ್ಕಳಿಗೆ ಕನ್ನಡ ಕಲಿಸಿದರು. ಬರಿ ಓದಲಿಕ್ಕೆ ಬರುವ ಕನ್ನಡವಲ್ಲ, ಗ್ರಂಥರಚನೆ ಮಾಡುವಷ್ಟು ಉತ್ತಮ ಕನ್ನಡ ಕಲಿಸಿದರು. ಅವರಂತಹ ಜೊತೆಗಾರ ದೊರೆಯುವುದು ಅಪರೂಪ. ಸ್ನೇಹಕ್ಕೆ ಅವರು ಇನ್ನೊಂದು ಹೆಸರಾಗಿದ್ದರು. ಬೇಂದ್ರೆಯವರ ಗೆಳೆಯರ ಗುಂಪಿನ ಸೇನಾನಿಯಗಿದ್ದರು. ಅವರು ಆದರ್ಶ ಶಿಷ್ಯರಾಗಿದ್ದರು. ಅರವಿಂದರು ಗೋಕಾಕರ ಅಧ್ಯಾತ್ಮಗುರುಗಳಾಗಿದ್ದರೆ, ದ.ರಾ.ಬೇಂದ್ರೆಯವರು ಅವರ ಕಾವ್ಯಗುರು ಆಗಿದ್ದರು. ಇಬ್ಬರ ಮೇಲೆ ಅಪೂರ್ವ ಗ್ರಂಥಗಳನ್ನು ರಚಿಸಿ ಗುರುಗಳ ಋಣವನ್ನು ತೀರಿಸಿದ್ದಾರೆ. ಅವರ ವಿದ್ಯಾರ್ಥಿ ಜೀವನ ಎಲ್ಲ ವಿದ್ಯಾರ್ಥಿಗಳಿಗೊಂದು ರೋಲ್ ಮಾಡೆಲ್ ಆಗಿತ್ತು, ಎಂದೂ ಅವರು ಪ್ರಥಮ ಸ್ಥಾನ ಬಿಟ್ಟುಕೊಡಲಿಲ್ಲ. ಶಿಕ್ಷಕನಾಗಿ ಅವರು ಪಡೆದ ಸಹಾಸ್ರಾರು ವಿದ್ಯಾರ್ಥಿಗಳು ಅವರನ್ನು ಹಾಡಿಹರಸುತ್ತಾರೆ. ಗೋಕಾಕರಂತಹ ಶಿಕ್ಷಕರು ಶತಮಾನಕ್ಕೊಬ್ಬರು ದೊರೆತಾರು. ಆಡಳಿತಗಾರರಾಗಿ ಅವರು ತಮ್ಮ ಹಿರೆಮೆ ಹಾಗೂ ಗರಿಮೆಯನ್ನು ತೋರಿಸಿದರು. ಪುನಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರ ಆಯ್ಕೆ ಸಮಿತಿಯ ಅಧ್ಯಕ್ಷರು ಇವರು ಆಗಿದ್ದಾಗ, ಇಂಟರ್‌ವ್ಯೂಗೆ ಬಾರದ, ಅಪ್ರತಿಮ ಪ್ರತಿಭಾವಂತ ಅರ್ಜಿದಾರನನ್ನು ಆಯ್ಕೆ ಮಾಡಿ, ನಿಯಮಗಳನ್ನು ಹೊಸತಾಗಿ ಬರೆದು, ಪ್ರತಿಭಾಪಲಾಯನ ತಪ್ಪಿಸಿದ ಅಪೂರ್ವ ಆಡಳಿತ ನಿಪುಣರವರು.(ನಾ ಕಂಡ ಗೋಕಾಕ, ಪು.193-94). ತಾವೊಬ್ಬ ಉತ್ತಮ ಕನ್ನಡಿಗ (ಗೋಕಾಕ ವರದಿ), ಒಬ್ಬ ಒಳ್ಳೆಯ ಭಾರತೀಯ ಹಾಗೂ ವಿಶ್ವಮಾನವ ಎಂಬುದನ್ನು ತಮ್ಮ ಕಾರ್ಯದಿಂದ ತೋರಿದ್ದಾರೆ. ಕವಿಯಾಗಿ ಅವರು ಮಹಾಕವಿಯಾಗಿ ಅರಳಿನಿಂತರು. ತಾತ್ವಿಕತೆಯನ್ನು ತಮ್ಮ ಜೀವನದುದ್ದಕ್ಕೂ ತೋರಿಸಿದರು. ಅವರು ಬಹಳ ದೊಡ್ಡ ವಿಮರ್ಶಕರಾಗಿದ್ದರು. ಅವರು ತಮ್ಮ ಜೀವನದ ಜಾಗೃತ, ಸ್ವಪ್ನೋದ್ದೀಪಿತ, ಸುಷುಪ್ತ ಅವಸ್ಥೆಗಳನ್ನು ತಮ್ಮ ಮಹಾಕಾವ್ಯ ಭಾರತ ಸಿಂಧುರಶಿಯಲ್ಲಿ ತೋರಿದ್ದಾರೆ.

ಗೋಕಾಕರು ತಮ್ಮ ಜೀವನದ ಕೊನೆಯ ದಿನಗಳನ್ನು ಮುಂಬೈಯಲ್ಲಿ ಕಳೆದರು. ಅಲ್ಲಿ ಕೂಡ ತಮ್ಮ ಕನ್ನಡ ಬರವಣಿಗೆಗಳ ಇಂಗ್ಲಿಷ್ ಅನುವಾದಗಳನ್ನು ಪ್ರಕಟಿಸುವ ಕೆಲಸದಲ್ಲಿ ತೊಡಗಿದ್ದರು. ಅವರ ಪ್ರಕೃತಿ ಕ್ಷೀಣವಾಗಿದ್ದರೂ ಭಾರತೀಯ ಸಂಸ್ಕೃತಿಯ ಬಗ್ಗೆ ವ್ಯಾಖ್ಯಾನಗಳನ್ನು ನೀಡಿದರು. ತಮ್ಮ ಗುರು ಬೇಂದ್ರೆಯವರಂತೆ ಇವರೂ ಮುಂಬೈಯಲ್ಲೆ ತಮ್ಮ ಜೀವನದ ಕೊನೆಯ ಉಸಿರನ್ನು ಎಳೆದರು. ಎಪ್ರಿಲ್ 28, 1992 ಗೋಕಾಕರು ತಮ್ಮ ಮಗನ ಮನೆಯಲ್ಲಿ, ಮುಂಬೈಯಲ್ಲಿ ಸ್ವರ್ಗಸ್ಥರಾದರು. ಗೋಕಾಕರಂತಹ ಮಹಾನ್ ಜೀವಗಳಿಗೆ ಕೊನೆ ಇರುವುದಿಲ್ಲ, ಅವರ ಚೇತನ ಅವರ ಶಿಷ್ಯರ, ವಿದ್ಯಾರ್ಥಿಗಳ ಮೂಲಕ, ಗ್ರಂಥರಾಶಿಗಳ ಮೂಲಕ ನಿರಂತರ ಕ್ರಿಯಾಶೀಲವಾಗಿರುತ್ತದೆ.

(ಮುಗಿಯಿತು)

ಗೋಕಾಕ್ ಲೇಖನ ಸರಣಿ

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 1)</a>, <a href=(ಭಾಗ 2), (ಭಾಗ 3), (ಭಾಗ 4), (ಭಾಗ 5), (ಭಾಗ 6), (ಭಾಗ 7)" title="ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 1), (ಭಾಗ 2), (ಭಾಗ 3), (ಭಾಗ 4), (ಭಾಗ 5), (ಭಾಗ 6), (ಭಾಗ 7)" />ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 1), (ಭಾಗ 2), (ಭಾಗ 3), (ಭಾಗ 4), (ಭಾಗ 5), (ಭಾಗ 6), (ಭಾಗ 7)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X