• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು

By Staff
|

ಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 5.

ಗೋಕಾಕರು ತಮ್ಮ ಒಬ್ಬ ವಿದ್ಯಾರ್ಥಿಗೆ(ಮಾರ್ತಾಂಡ ವರಗಿರಿ) ಸವಣೂರಲ್ಲಿ ವಾಯುವಿಹಾರಕ್ಕೆ ಹೋದಾಗ ತಮ್ಮ ಜೀವನದ ಮೂರು ಕನಸುಗಳ ಬಗ್ಗೆ ಹೇಳಿದ್ದರಂತೆ. ಅದರಲ್ಲಿ ಒಂದು ತಾವು ಕಲಿತ ಕರ್ನಾಟಕ ಕಾಲೇಜಿನ ಪ್ರಾಂಶುಪಾಲನಾಗುವುದು ಆಗಿತ್ತು. ಕೊಲ್ಲಾಪುರಕ್ಕೆ ಬಂದ ಮೇಲೆ ಈ ಕನಸು ಸಾಕಾರಗೊಳ್ಳುವುದು ಸುಲಭವಾಯಿತು. ಡಿ.ಸಿ.ಪಾವಟೆಯವರ ಸಹಕಾರದಿಂದ ಇವರಿಗೆ ಧಾರವಾಡಕ್ಕೆ 1952ರಲ್ಲಿ ವರ್ಗವಾಯಿತು. ನಂತರ ಧಾರವಾಡದಲ್ಲಿ ಕಳೆದ ಆರು ವರ್ಷಗಳು(1952-58) ಗೋಕಾಕರ ಜೀವನದಲ್ಲಿಯ ಅವಿಸ್ಮರಣೀಯ ದಿನಗಳಾದವು. 'ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎಂದು ಆದಿಕವಿ ಪಂಪ ನುಡಿದ. ಅದರಂತೆ ಧಾರವಾಡ ಮಣ್ಣಿನ ಸವಿಯನ್ನು ಉಂಡವರಿಗೆ ಧಾರವಾಡದ ನೆನಪು ಸದಾ ಹಚ್ಚಗೆ ಉಳಿಯುತ್ತದೆ'. 'ಗೆಳೆಯರ ಗುಂಪಿನ ಸಾಹಿತಿಗಳಿಗೆ, ಅದರ ನೇರ ಸಂಪರ್ಕ ಪಡೆದ ನಮ್ಮಂತಹರಿಗೆ, ಧಾರವಾಡವನ್ನು ಮರೆಯುವುದು ಹೇಗೆ ಸಾಧ್ಯ?'. 'ಬಾರೋ ಸಾಧನಕೇರಿಗೆ ಎಂದು ವರಕವಿ ಬೇಂದ್ರೆ ನುಡಿದಂತೆ, ನಮ್ಮನ್ನೂ ಧಾರವಾಡ ಕರೆಯುತ್ತದೆ'. ಗೋಕಾಕರಿಗೂ ಧಾರವಾಡದ ವಾಸ್ತವ್ಯ ವಿಶೇಷ ಆನಂದ ಉತ್ಸಾಹಗಳನ್ನು ತುಂಬಿತ್ತು.

ಧಾರವಾಡ ಎಂದೊಡನೆ ಬೇಂದ್ರೆ-ಗೋಕಾಕರ ಹೆಸರು ನೆನಪಿಗೆ ಬರುತ್ತದೆ. ಆದರೆ ಇವರಿಬ್ಬರೂ ತಮ್ಮ ಜೀವನದಲ್ಲಿ ನೌಕರಿಗಾಗಿ ಹೆಚ್ಚು ಕಾಲ ಧಾರವಾಡದ ಹೊರಗೆ ಇರಬೇಕಾದ ಪ್ರಸಂಗ ಬಂತು. ಅವರು ಕೂಡ ಹೊರನಾಡ ಕನ್ನಡಿಗರಾಗಿದ್ದರು. ಆದರೆ, ಕನ್ನಡದ ಕಂಪನ್ನು ಹರಡುವಲ್ಲಿ ಎಂದಿಗೂ ಅವರು ಹಿಂಜರಿಯಲಿಲ್ಲ. ಗೋಕಾಕರು ಧಾರವಾಡಕ್ಕೆ ಬರುತ್ತಾರೆ ಎಂಬ ಸುದ್ದಿ ಧಾರವಾಡದವರಿಗೆ ಅಮಿತ ಆನಂದ-ಉತ್ಸಾಹ ತಂದಿತ್ತು. ಇವರು ಬಂದ ಮೇಲೆ ಧಾರವಾಡದ ಸಾಹಿತ್ಯಿಕ ವಾತವರಣವೇ ಬದಲಾಯಿತು, ಹೆಚ್ಚಿನ ಉತ್ಸಾಹ ಹುಮ್ಮಸ್ಸು ಧಾರವಾಡದ ಕನ್ನಡ ಲೇಖಕರಲ್ಲಿ ಕಂಡುಬಂದಿತು. ಧಾರವಾಡದಲ್ಲಿ ಬೆಟಗೇರಿ ಕೃಷ್ಣಶರ್ಮರ ಜಯಂತಿ ಪತ್ರಿಕೆಯ ಮಹಡಿ, ದ.ಬಾ. ಅವರ ಲಲಿತ ಗ್ರಂಥಮಾಲೆಯ ಅಂಗಡಿ, ಹೆಚ್ಚಾಗಿ ಜಿ.ಬಿ.ಜೋಶಿಯವರ ಮನೋಹರ ಗ್ರಂಥ ಮಾಲೆಯ ಅಟ್ಟ, ಹಿರಿಯ ಮತ್ತು ಕಿರಿಯ ಸಾಹಿತಿಗಳಿಗೆ ಜೇಂಗೊಡಗಳಂತಿದ್ದವು. ವರಕವಿ ಬೇಂದ್ರೆಯವರು ಸೊಲ್ಲಾಪುರ ಕಾಲೇಜಿನಿಂದ ನಿವೃತ್ತರಾದ ಮೇಲೆ ವಾಸಿಸಲು ಮರಳಿ ಧಾರವಾಡಕ್ಕೆ ಬಂದರು. ಆ ಕಾಲದಲ್ಲಿ ಧಾರವಾಡದಲ್ಲಿರುವುದೇ ಒಂದು ಸುಯೋಗವಾಗಿತ್ತು. ರಾಮಕೃಷ್ಣ-ವಿವೇಕಾನಂದರ ಗುರುಶಿಷ್ಯ ಜೋಡಿಯನ್ನು ಹೋಲುವ ಅನ್ಯೋನ್ಯ ಜೋಡಿಯನ್ನು ಕನ್ನಡಿಗರೆಲ್ಲ ಬೇಂದ್ರೆ-ಗೋಕಾಕರಲ್ಲಿ ಕಂಡಿದ್ದರು. ಗೋಕಾಕರು ವಿದ್ಯಾರ್ಥಿ ದೆಸೆಯಲ್ಲಿ ಧಾರವಾಡದಲ್ಲಿ ಆರು ವರ್ಷ ಬೇಂದ್ರೆಯವರ ಸಹವಾಸದಲ್ಲಿದ್ದರು. ಈಗ ಅವರಿಬ್ಬರು ಎರಡು ವರ್ಷ ಮತ್ತೆ ಜೊತೆಗೆ ಕಳೆದರು. ಅದನ್ನು ಕಾಣುವ ಭಾಗ್ಯ ನಮಗೆ ಲಭಿಸಿತ್ತು.

ಗೋಕಾಕರು ಧಾರವಾಡಕ್ಕೆ ಬಂದ ವರ್ಷವೇ ನಾನು ಕೂಡ ಧಾರವಾಡಕ್ಕೆ ಕಾಲೇಜು ವ್ಯಾಸಂಗಕ್ಕಾಗಿ ಬಂದೆ. ಸಂಕ್ಷಿಪ್ತವಾಗಿ ಗೋಕಾಕರ ಧಾರವಾಡ ವಾಸ್ತವ್ಯದ ಬಗ್ಗೆ, ಅವರು ಬೀರಿದ ಪ್ರಭಾವದ ಬಗ್ಗೆ ಬರೆಯುವೆ.

* ಕರ್ನಾಟಕ ಕಾಲೇಜಿನಲ್ಲಿ ನಡೆಯುತ್ತಿದ್ದ ಗೋಕಾಕರ ಇಂಗ್ಲಿಷ್ ಉಪನ್ಯಾಸಗಳು ಊರಿನ ಗಮನವನ್ನೇ ಸೆಳೆದಿದ್ದವು. ಈಗಿನ ಕಾಲದಲ್ಲಿ ಕ್ಲಾಸ್‌ರೂಮಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದು ಸರ್ವ ಸಾಮನ್ಯ. ಆ ಕಾಲದಲ್ಲಿ ಗೋಕಾಕರ ಕ್ಲಾಸಿನಲ್ಲಿ ಒಂದು ಡೆಸ್ಕಿನಲ್ಲಿ ನಾಲ್ಕು ವಿದ್ಯಾರ್ಥಿಗಳು ಕುಳಿತರೂ ಸ್ಥಳ ಸಾಲುತ್ತಿರಲಿಲ್ಲ, ವಿದ್ಯಾರ್ಥಿಗಳು ಎದ್ದು ನಿಲ್ಲುತ್ತಿದ್ದರು. ಬೇರೆ ಕ್ಲಾಸಿನವರು, ಸಾಯನ್ಸ್ ವಿಭಾಗಕ್ಕೆ ಸೇರಿದವರು, ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಅವರ ಕ್ಲಾಸಿನಲ್ಲಿ ನೆರೆಯುತ್ತಿದ್ದರು. ಮೈಕ್ ಇಲ್ಲದೆ ನಾಲ್ಕು ನೂರರಷ್ಟು ವಿದ್ಯರ್ಥಿಗಳಿಗೆ ಪಾಠ ಮಾಡುವ ಗೋಕಾಕರ ಧ್ವನಿ ಬದಿಯ ಕ್ಲಾಸಿನವರೂ ಕೇಳುತ್ತಿತ್ತು. ಅವರು ಶೇಕ್ಸ್‌ಪಿಯರನ ನಾಟಕಗಳನ್ನು ಕಲಿಸುವಾಗ ಸ್ಪೆಶಲ್ ಕ್ಲಾಸ್ ರವಿವಾರ ತೆಗೆದುಕೊಂಡಾಗ ಗ್ಯಾಲರಿ ಇದ್ದ ವಿಶೇಷ ಸಭಾಗೃದಲ್ಲಿ ನಡೆಸುವ ಪ್ರಸಂಗ ಬರುತ್ತಿತ್ತು. ಅದೊಂದು ವಿದ್ಯಾರ್ಥಿಗಳಿಗೆ ಸಮಾರಾಧನೆಯ ಊಟವಿದ್ದಂತೆ. ಅಂಥ ಪ್ರಧ್ಯಾಪಕರನ್ನು ಧಾರವಾಡ ಹಿಂದೆ ಕಂಡಿರಲಿಲ್ಲ, ಮುಂದೆ ಕಾಣಲಿಕ್ಕಿಲ್ಲ.

* ವಿದ್ಯಾರ್ಥಿಗಳೊಡನೆ ಆತ್ಮೀಯ ಒಡನಾಟಕ್ಕೆ ಕಮಲ ಮಂಡಲ, ಹೊತ್ತಿಗೆ ಬಳಗ ಇದ್ದವು, ಶ್ರಮದಾನ ಶಿಬಿರ ನಡೆಸಿ ವಿದ್ಯಾರ್ಥಿಗಳು ಕಾಡಿನಲ್ಲಿ ವಿಶ್ವವಿದ್ಯಾಲಯದವರೆಗೆ ರಸ್ತೆ ತಯಾರಿಸುವಾಗ ಗೋಕಾಕರೂ ಭಾಗವಹಿಸುತ್ತಿದ್ದರು. ಗೋಕಾಕರು ಪ್ರತಿ ದಿನ ಸಂಜೆ ವಾಯು ವಿಹಾರಕ್ಕೆ ಹೊರಟಾಗ ವಿದ್ಯಾರ್ಥಿಗಳ ಒಂದು ತಂಡವೇ ಅವರೊಡನೆ ಹೊಡುತ್ತಿತ್ತು, ಮಾರ್ಗದ ಉದ್ದಕ್ಕೂ ಗೋಕಾಕರು ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರು, ಮಾರ್ಗದರ್ಶನ ಮಾಡುತ್ತಿದ್ದರು. ಅಂಥ ದೃಶ್ಯ ಇಂದು ಕಾಣಲು ಸಿಗುವುದಿಲ್ಲ. ಗೋಕಾಕರು ಎತ್ತರ ಅಜಾನುಬಾಹು ವ್ಯಕ್ತಿ (6 ಫೂಟು ಮೂರು ಇಂಚು). ಬೌದ್ಧಿಕವಾಗಿಯೂ ಬಹಳ ಎತ್ತರ ವ್ಯಕ್ತಿ (ಆಕಫರ್ಡ್‌ನಲ್ಲಿ ವಿಕ್ರಮ). ಗೋಕಾಕರು ಇಂದು ಒಂದು ದಂತಕತೆ, ಒಂದು ಐತಿಹ್ಯ ಮಾತ್ರ.

* ಧಾರವಾಡದ ವಾಸ್ತವ್ಯದಲ್ಲಿ ಗೋಕಾಕರ ಮಹತ್ವದ ಕೃತಿಗಳು ಬೆಳಕಿಗೆ ಬಂದವು. ಬಾಳದೇಗುಲದಲ್ಲಿ (1953), ಉಗಮ (1955), ದ್ಯವಾ ಪೃಥಿವಿ(1957) ಪ್ರಕಟಗೊಂಡವು. ಮನೋಹರ ಗ್ರಂಥ ಮಾಲೆಯವರು ಗೋಕಾಕರ ಇಜ್ಜೋಡು ಮೊದಲಾದ ಕಾದಂಬರಿಗಳ 'ಸಮರಸವೇ ಜೀವನ' ಎಂಬ ಹೆಸರಿನಲ್ಲಿ ಬೃಹತ್ ಸಂಪುಟಮಾಡಿ ಹೊರತಂದರು(1956). ಅದಕ್ಕೆ 50 ಪುಟಗಳ ಬೃಹತ್ ಮುನ್ನುಡಿಯನ್ನು ಗೋಕಾಕರೇ ಬರೆದರು. ತಮ್ಮ ಕಾದಂಬರಿಯ ಹೊರಗೆ ನಿಂತು ವಿಮರ್ಶಾತ್ಮಕವಾಗಿ, ವಿಶ್ಲೇಷಣಾತ್ಮಕವಾಗಿ ದೀರ್ಘ ಮುನ್ನುಡಿ ಬರೆದ ಉದಾಹರಣೆ ಕನ್ನಡದಲ್ಲಿ ಮತ್ತೊಂದಿಲ್ಲ.

* 1957ರಲ್ಲಿ ಗೋಕಾಕರು ಪಿ.ಇ.ಎನ್. ಅಂತಾರಾಷ್ಟ್ರೀಯ ಸಮ್ಮೇಲನಕ್ಕೆ ಭಾರತದ ಪ್ರತಿನಿಧಿಯಾಗಿ ತೆರಳಿದರು. ಮುಂದೆ ಇದೇ ಅನುಭವ 'ಸಮುದ್ರದಾಚೆಯಿಂದ' ಎಂಬ ಪ್ರವಾಸ ಪುಸ್ತಿಕೆಯಾಗಿ ಹೊರ ಬಂತು.

* 1957ರಲ್ಲಿ ಧಾರವಾಡದಲ್ಲಿ 39ನೆಯ ಕನ್ನಡ ಸಾಹಿತ್ಯ ಸಮ್ಮೇಲನ ನಡೆಯಿತು. ಮಹಾಕವಿ ಕುವೆಂಪು ಸಮ್ಮೇಲದ ಅಧ್ಯಕ್ಷತೆ ವಹಿಸಿದ್ದರು. ಗೋಕಾಕ ಮತ್ತು ಕುವೆಂಪು ಅವರ ಮೈತ್ರಿ ಜನರಿಗೆ ಆನಂದವನ್ನು ತಂದಿತ್ತು. ಕುವೆಂಪು ಅವರ ಕವಿತೆ ಓ ನನ್ನ ಚೇತನ, ಆಗು ನೀ ಅನಿಕೇತನವನ್ನು ಗೋಕಾಕರು ಇಂಗ್ಲಿಷಿಗೆ ಅನುವಾಸಿದಿ ಓದಿದರು.

* ಗೋಕಾಕರು 1958ರಲ್ಲಿ ಬಳ್ಳಾರಿಯಲ್ಲಿ ನಡೆದ 40ನೆಯ ಕನ್ನಡ ಸಾಹಿತ್ಯ ಸಮ್ಮೇಲದ ಅಧ್ಯಕ್ಷರಾದರು. ಅದರ ಪೂರ್ವಭಾವಿಯಾಗಿ ಧಾರವಾಡದಲ್ಲಿ ಹಬ್ಬದ ವಾತವರಣವಿತ್ತು. ಎಲ್ಲೆಡೆ ಗೋಕಾಕರ ಸನ್ಮಾನ ನಡೆಯಿತು. ಸಾಹಿತಿಯ ಜೀವನದಲ್ಲಿ ಇದೊಂದು ದೊಡ್ಡ ಸಾಧನೆಯ ಶಿಖರ.

* 1958ರಲ್ಲಿ ಇನ್ನೊಂದು ಮಹತ್ವದ ಘಟನೆ ನಡೆಯಿತು. ಗೋಕಾಕರು ನಾಲ್ಕು ತಿಂಗಳ ಕಾಲ ಅಮೇರಿಕೆ ಪ್ರವಾಸಕ್ಕೆ ತೆರಳಿದರು. ಅಮೇರಿಕೆಯ ಕಾಲೇಜುಗಳಲ್ಲಿಯ ಪರೀಕ್ಷಾ ಪದ್ಧತಿಯನ್ನು ಅಭ್ಯಸಿಸಲು ಭಾರತ ಸರಕಾರ ಶಿಕ್ಷಣ ತಜ್ಞರ ಒಂದು ನಿಯೋಗವನ್ನು ಕಳಿಸಿದರು. ಅದರ ನೇತಾರರಾಗಿ ಗೋಕಾಕರನ್ನು ಆಯ್ಕೆ ಮಾಡಲಾಗಿತ್ತು. ಗೋಕಾಕರು 120 ದಿನಗಳ ಪ್ರವಾಸದಲ್ಲಿ ಪ್ರತಿದಿನ ಒಂದರಂತೆ (ನೂರಿಪ್ಪತ್ತು) ಕವಿತೆಗಳನ್ನು ಬರೆಯಲು ಸಂಕಲ್ಪಿಸಿದ್ದರು. ಮುಂದೆ ಪ್ರಕಟವಾದ 'ಇಂದಿಲ್ಲ ನಾಳೆ' ಕವನ ಸಂಗ್ರಹದಲ್ಲಿ ಅವು ಪ್ರಕಟಗೊಂಡವು.

ಗೋಕಾಕರು ಮರಳಿ ಬರುವ ವೇಳೆಗೆ ಗೋಕಾಕರು ಧಾರವಾಡವನ್ನು ಬಿಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದಕ್ಕೆ ಕಾರಣ ಕರ್ನಾಟಕ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತಕ್ಕೆ ಸೇರಿತು. ಅದು ಸರಕಾರಿ ಕಾಲೇಜು ಆಗಿ ಉಳಿಯಲಿಲ್ಲ. ಗೋಕಾಕರಿಗೆ ವಿದೇಶದಲ್ಲಿ ನೆಲೆಸಲು ಅನೇಕ ಆಮಂತ್ರಣಗಳಿದ್ದವು. ಗೋಕಾಕರು ಭಾರತದಲ್ಲೇ ಇರಲು ನಿಶ್ಚಯಿಸಿದರು. 'ಇದು ನನ್ನ ಭಾರತ' ಎಂಬ ಕವಿತೆ ಅವರ ಆಗಿನ ಮನಸ್ಥಿತಿಯನ್ನು ಚೆನ್ನಾಗಿ ಚಿತ್ರಿಸುತ್ತದೆ. ಚಿಂತೆಯ ಕಾರ್ಮೋಡದಲ್ಲಿ ಅವರಿಗೆ ಆಶೆಯ ಮಿಂಚು ಕಂಡಿತು. ಅವರಿಗೆ ಭಾರತದ ಅತ್ಯುಚ್ಚ ಇಂಗಿಷ್ ಬೋಧನೆಯ ಸಂಸ್ಥೆಯ ಡೈರೆಕ್ಟರ್ ಹುದ್ದೆ ದೊರಕಿತು. ಹೈದ್ರಾಬಾದಿನ ಸಿ.ಇ.ಐ.ನ ಪ್ರಥಮ ಭಾರತೀಯ ನಿರ್ದೇಶಕರಾಗಿ ಇವರು ಕೆಲಸಕ್ಕೆ ಸೇರಿದರು. ಧಾರವಾಡಕ್ಕೆ ವಿದಾಯ ಹೇಳಿ ಗೋಕಾಕರು ಹೈದರಾಬಾದಿಗೆ ತೆರಳಿದರು.

ಗೋಕಾಕ್ ಲೇಖನ ಸರಣಿ

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 1)

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 2)

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more