• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)

By Staff
|

ಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.

* ಡಾ|ಜೀವಿ ಕುಲಕರ್ಣಿ

1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ ವಿಲೀನಗೊಂಡಿತು, ಬೃಹನ್ ಮುಂಬೈರಾಜ್ಯ ಸೇರಿತು. ಅಂದಿನ ಮುಂಬೈ ರಾಜ್ಯದಲ್ಲಿ ಮಹಾರಾಷ್ಟ್ರ, ಗುಜರಾತ, ಮತ್ತು ಉತ್ತರ ಕರ್ನಾಟಕದ 4 ಜಿಲ್ಲೆಗಳು (ಧಾರವಾಡ, ಬೆಳಗಾವ, ವಿಜಾಪುರ, ಕಾರವಾರ) ಸೇರಿದ್ದವು. ಸ್ವಾತಂತ್ರ್ಯದ ನಂತರ ಬರೋಡಾ ಸಂಸ್ಥಾನದಲ್ಲಿದ್ದ ವೀಸನಗರ ಮುಂಬೈ ರಾಜ್ಯ ಸೇರಿತ್ತು. ಮುಂಬೈ ರಾಜ್ಯದ ಉಚ್ಚ ಶಿಕ್ಷಣಾಧಿಕಾರಿಗಳಾಗಿದ್ದ ಡಿ.ಸಿ.ಪಾವಟೆಯವರು ಗೋಕಾಕರನ್ನು ಕೊಲ್ಲಾಪುರಕ್ಕೆ ವರ್ಗಮಾಡಲು ಸಹಾಯ ಮಾಡಿದರು. ಮುಂದೆ ಅವರಿಗೆ ಧಾರವಾಡಕ್ಕೆ ಬರಲು ದಾರಿಮಾಡಿಕೊಟ್ಟರು. 1949ರಲ್ಲಿ ಗೋಕಾಕರಿಗೆ ಕೊಲ್ಲಾಪುರಕ್ಕೆ ವರ್ಗವಾಗಿದೆ ಎಂದು ಆರ್ಡರ್ ಬಂತು. ವೀಸನಗರದ ಕಾಲೇಜಿನ ಬಿಲ್ಡಿಂಗ್ ಇನ್ನೂ ಅರ್ಧವಾಗಿತ್ತು. ಗೋಕಾಕರನ್ನು ಬಿಡಲು ಊರಿನ ಪ್ರತಿಷ್ಠಿತರು, ವಿದ್ಯಾರ್ಥಿಗಳು ಸಿದ್ಧರಿರಲಿಲ್ಲ. ಅವರ ವರ್ಗಾವಣೆ ರದ್ದು ಮಾಡಲು ಸ್ಥಳೀಯರು ಪ್ರಯತ್ನಿಸುತ್ತಿದ್ದರು. ಆದರೆ ಗೋಕಾಕರು ಕೊಲ್ಲಾಪುರಕ್ಕೆ ಹೋಗಲು ಸಿದ್ಧರಾಗಿದ್ದರು. ಧಾರವಾಡಕ್ಕೆ ಅದು ಸಮೀಪವಾಗಿದೆ ಎಂಬ ಆನಂದ ಅವರನ್ನು ಆವರಿಸಿತ್ತು. ಕೊನೆಗೂ ಗೋಕಾಕರನ್ನು ಬೀಳ್ಕೊಡುವ ಪ್ರಸಂಗ ಬಂತು. ಗೋಕಾಕರು ಹೊರಟ ಟ್ರೇನ್ ಪೂರ್ತಿಯಾಗಿ ಹೂವುಗಳಿಂದ ಅಲಂಕೃತವಾಗಿತ್ತು. ವಿದ್ಯಾರ್ಥಿಗಳಂತೂ ಮಕ್ಕಳಂತೆ ಅತ್ತು ಬಿಟ್ಟರು. ಕೆಲವು ವಿದ್ಯಾರ್ಥಿಗಳು ಟ್ರೇನ್ ಹತ್ತಿ ಗೋಕಾಕರೊಡನೆ ಕೊಲ್ಲಾಪುರಕ್ಕೆ ಬಂದರು. ಒಬ್ಬ ಹುಡುಗನಂತೂ ಕೊಲ್ಲಾಪುರದಲ್ಲೇ ವಾಸ್ತವ್ಯ ಹೂಡಿ ಅವರ ಶಿಷ್ಯತ್ವ ಮುಂದುವರಿಸಿದ್ದ.

ಕೊಲ್ಲಾಪುರ ರಾಜಾರಾಮ ಕಾಲೇಜಿನ ಪ್ರಾಂಶುಪಾಲರಾಗಿ ಗೋಕಾಕರು 3 ವರ್ಷ ಸೇವೆ ಸಲ್ಲಿಸಿದರು. ಪಯಣ ಮತ್ತು ಸಂಘರ್ಷ ಗೋಕಾಕರ ಜೀವನದಲ್ಲಿ ಹಾಸುಹೊಕ್ಕಾದಂತೆ ತೋರುತ್ತದೆ. ದೈವ ಇವರನ್ನು ಮುಳ್ಳಿನ ದಾರಿಯಲ್ಲಿ ನಡೆಯಲು ಹಚ್ಚುತ್ತಿತ್ತು, ನಂತರ ಅಲ್ಲೇ ಹೂವು ಚೆಲ್ಲಿದ ದಾರಿಗೆ ಎಡೆಮಾಡಿಕೊಡುತ್ತಿತ್ತು. ಹಿಂದೆ ಗೋಕಾಕರು ಸಾಂಗಲಿಯಲ್ಲಿ ಪ್ರಾಂಶುಪಾಲರಾಗಿದ್ದಾಗ ಇವರು ಮರಾಠಿ ವಿರೋಧಿ ಎಂಬ ಅಪಪ್ರಚಾರ ನಡೆದಿತ್ತು. ಒಂದು ಪತ್ರಿಕೆಯಲ್ಲಿ ಇವರ ವಿರುದ್ಧ ಲೇಖನ ಬಂದರೆ, ಇನ್ನೊಂದರಲ್ಲಿ ಇವರ ಪರವಾಗಿ ಲೇಖನ ಬರುತ್ತಿದ್ದವು. ಇವರನ್ನು ಬಹಳ ಟೀಕಿಸಿದ ಒಬ್ಬ ಮಾರಾಠಿ ಕಾದಂಬರಿಕಾರ ಕೊಲ್ಲಾಪುರ ಕಾಲೇಜಿನಲ್ಲಿ ತತ್ವಜ್ಞಾನದ ಪ್ರಾಧ್ಯಾಪಕನಾಗಿದ್ದ. ಕಾಲೇಜಿನ ಮೊದಲ ದಿನ ಅವನನ್ನು ಕಂಡಾಗ ಗೋಕಾಕರಿಗೆ ಆನಂದವಂತೂ ಆಗಿರಲಿಲ್ಲ. ವಿದ್ಯಾರ್ಥಿಗಳಲ್ಲಿ ಅಶಿಸ್ತು ಇತ್ತು. ದಂಗೆ ಮಾಡುತ್ತಿದ್ದರು. 4-5 ವರ್ಷಗಳಿಂದ ಕಾಲೇಜ್ ಗ್ಯಾದರಿಂಗ ಆಗಿರಲಿಲ್ಲ. ಗೋಕಾಕರು ಎಲ್ಲ ವರ್ಗಗಳಿಗೂ ಪಾಠ ಮಾಡುತ್ತಿದ್ದರು, ಆದ್ದರಿಂದ ಎಲ್ಲ ವಿದ್ಯಾರ್ಥಿಗಳೊಡನೆ ಸಂಪರ್ಕ ಸಾಧಿಸುತ್ತಿದ್ದರು. ಗೋಕಾಕರು ಮೊದಲ ದಿನ ಪಾಠ ಮಾಡಿದಾಗ ಒಬ್ಬ ವಿದ್ಯಾರ್ಥಿ ಆನಂದಭರಿತನಾಗಿ ಗೋಕಾಕರನ್ನು ಕೇಳಿದ್ದನಂತೆ, "ಇಷ್ಟು ಒಳ್ಳೆಯ ಇಂಗ್ಲಿಷ್ ಪಾಠಮಾಡುವವರು ನೀವಾರು ಸರ್? ನಿಮ್ಮ ಹೆಸರೇನು?" ಆಗ ಗೋಕಾಕರು ಉತ್ತರಿಸಿದ್ದರಂತೆ, "ಒಂದೆರಡು ದಿನಗಳಲ್ಲಿ ನಾನಾರು ಎಂಬುದು ನಿನಗೆ ಗೊತ್ತಗುತ್ತದೆ" ಎಂದು. ಅವರೇ ತಮ್ಮ ಹೊಸ ಪ್ರಿನ್ಸಿಪಾಲ್ ಎಂದು ತಿಳಿದಾಗ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂತಸ ಉಂಟಾಗಿತ್ತು. ಮೊದಲ ವರ್ಷ ಕಾಲೇಜಿನ ಗ್ಯಾದರಿಂಗ (ವಾರ್ಷಿಕೊತ್ಸವ) ಆಗುತ್ತದೆ ಎಂದು ಗೋಕಾಕರು ಘೋಷಿಸಿದರು. ಈ ನಿರ್ಣಯ ಕೈಕೊಂಡಾಗ ವಿದ್ಯಾರ್ಥಿ ಪ್ರಮುಖರ ಸಲಹೆ ಕೇಳಿರಲಿಲ್ಲ ಎಂಬ ಆಪಾದನೆ ಇವರ ಮೇಲಿತ್ತು. ವಿದ್ಯಾರ್ಥಿಗಳು ಗ್ಯಾದರಿಂಗ ಬಾಯ್‌ಕಾಟ್ ಮಾಡಲು ನಿರ್ಧರಿಸಿದರು. ಗೋಕಾಕರೇ ಇಂಗ್ಲಿಷ್‌ನಲ್ಲಿ ಒಂದು ನಾಟಕ ಬರೆದು ಪ್ರಯೋಗಿಸಲಿದ್ದರು. ಅವರೇ ಪ್ರಮುಖ ಪಾತ್ರ ವಹಿಸಿದ್ದರು. (ದಿ ಗಾಡೆಸ್ ಸ್ಪೀಕ್ಸ್). ನಾಟಕ ನೋಡಬೇಕಾದವರು ಸಭಾಗೃಹದ ಒಳಗೆ ಬನ್ನಿ ಎಂದು ಗೋಕಾಕರು ಕರೆದಾಗ 600 ವಿದ್ಯಾರ್ಥಿಗಳು ಸಭಾಗೃಹ ಪ್ರವೇಶಿಸಿದರು. ಹೊರಗೆ ನಿಂತ ವಿದ್ಯಾರ್ಥಿಗಳಿಗೆ ಮುಖಭಂಗವಾಗಿತ್ತು. ಅವರೂ ಒಬ್ಬೊಬ್ಬರೆ ಒಳಗೆ ಬಂದರು. ಪ್ರಾರಂಭದಲ್ಲಿ ಗೋಕಾಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣ ಉದ್ಬೋಧಕವಾಗಿತ್ತು.

ಕೊಲ್ಲಾಪುರದಲ್ಲಿರುವಾಗ ಗೋಕಾಕರ ಜೀವನದಲ್ಲಿಯ ಅತ್ಯಂತ ಮಹತ್ವದ ಘಟನೆ ಎಂದರೆ ಗೋಕಾಕರು ಪಾಂಡಿಚೇರಿಯ ಯಾತ್ರೆ ಮಾಡಿದ್ದು. ಅದರ ವಿವರಗಳನ್ನು ಗೋಕಾಕರು ತಮ್ಮ ಮಹತ್ವದ ಪುಸ್ತಕ: Sri Aurobindo: Seer and Poetದಲ್ಲಿ ಬರೆಯುತ್ತಾರೆ. 24, ಎಪ್ರಿಲ್ 1950 ವಿಶೇಷ ದರ್ಶನದ ದಿನ ಗೋಕಾಕರು ಶ್ರೀಮಾತಾ ಹಾಗೂ ಶ್ರೀ ಅರವಿಂದರ ದರ್ಶನ ಪಡೆದರು. ಆಗ ಅವರಿಗಾದ ಅನುಭವದ ಬಗ್ಗೆ ಬರೆಯುತ್ತಾರೆ: For a moment I stood before them. Sri Aurobindo threw at me a searching glace which penetrated my heart through my eyes and shook the very roots of my being. He then looked at the Mother who saw me in return, her pupils moving like little fish in the depths of her eyes. I at once realized that I was recognized for what and who I was. This glance of recognition made all the helplessness in my heart surge up and I bowed down to them and stretched my hands in vain to touch their feet."(Sri Aurobindo: Seer and Poet, p.13)

ಮುಂದೆ ಎಂಟು ತಿಂಗಳಲ್ಲಿ ಗೋಕಾಕರು ಅತ್ಯಂತ ದುಃಖದ ವಾರ್ತೆ ಕೇಳಿದರು. ಡಿಸೆಂಬರ್ 5ನೆಯ ತಾರೀಖಿನ ದಿನ ಶ್ರೀ ಅರವಿಂದರು ಮಹಾಸಮಾಧಿಯನ್ನು ಸೇರಿದ್ದರು. ತಾವು ಪ್ರೀತಿಸಿ ಆರಾಧಿಸಿದ ಗುರುಗಳು ಇನ್ನಿಲ್ಲ ಎಂಬುದು ಅವರ ಮನದ ಮೇಲೆ ಆಘಾತವನ್ನೇ ಉಂಟುಮಾಡಿತ್ತು. ಚಿಕ್ಕ ಮಗುವಿನಂತೆ ಅತ್ತುಬಿಟ್ಟರು. ಮಹರ್ಷಿ ಶ್ರೀ ಅರವಿಂದರು ಮಾನವ ಜನಾಂಗಕ್ಕೆ ನೀಡಿದ ಕಾಣಿಕೆಯ ಬಗ್ಗೆ ಗೋಕಾಕರು ವಿವರವಾಗಿ ಬರೆಯುತ್ತಾರೆ. ಅವರು ಹೇಳಿದ ಕೆಲವು ಮಹತ್ವದ ಮಾತುಗಳನ್ನು ಹೀಗೆ ಸಂಗ್ರಹಿಸಬಹುದು:

ಶ್ರೀ ಅರವಿಂದರು ತಮ್ಮ ಲೈಫ್ ಡಿವೈನ್ ಪುಸ್ತಕದಲ್ಲಿ ನಮಗೆ ಒಂದು ವಿನೂತನ ವಿಶ್ವಶಾಸ್ತ್ರ(ಕಾಸ್ಮಾಲಜಿ) ಹಾಗೂ ತತ್ತಶಾಸ್ತ್ರ (ಮೆಟೆಫಿಜಿಕ್ಸ್) ನೀಡಿದ್ದಾರೆ. ತಮ್ಮ ದಿವ್ಯ ಜೀವನ ದಲ್ಲಿ ಹಾಗೂ ಪತ್ರಗಳಲ್ಲಿ ಮನಶ್ಶಾಸ್ತ್ರದ ಬಗ್ಗೆ ಇದ್ದ ತಿಳಿವಳಿಕೆಯಲ್ಲೇ ಕ್ರಾಂತಿಯನ್ನು ತಂದಿದ್ದಾರೆ. ತಮ್ಮ ದಿ ಹ್ಯುಮನ್ ಸೈಕಲ್ ಗ್ರಂಥದಲ್ಲಿ ಸಮಾಜಶಾಸ್ತ್ರಕ್ಕೆ ಒಂದು ಹೊಸ ಮಾರ್ಗ ತೋರಿಸಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ವಿವರಗಳನ್ನು ವಿಶ್ಲೇಷಿಸಿ ಅದರಲ್ಲಿ ಅಧ್ಯಾತ್ಮಿಕ ದೃಷ್ಟಿಯ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಇದೇ ವಿಚಾರ ವಿಸ್ತರಿಸುತ್ತ ದಿ ಐಡಿಯಲ್ ಆಫ್ ಹ್ಯೂಮನ್ ಯುನಿಟಿ ಗ್ರಂಥದಲ್ಲಿ ಶ್ರೀ ಅರವಿಂದರು ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಣೆ ಮಾಡಿದ್ದಾರೆ. ತಮ್ಮ ದಿ ಸಿಂಥೆಸಿಸ್ ಆಫ್ ಯೋಗ ಪುಸ್ತಕದಲ್ಲಿ ಯೋಗ ಮಾರ್ಗವು ನಮ್ಮನ್ನು ಸುಪರ್ ಮೈಂಡವರೆಗೆ ಹೇಗೆ ಒಯ್ಯುವುದೆಂಬುದನ್ನು ತೋರಿಸಿದ್ದಾರೆ. ಅವರ ಗ್ರಂಥಗಳಾದ ದಿ ಸಿಕ್ರೆಟ್ ಆಫ್ ದಿ ವೇದ, ಎಸ್ಸೇಜ ಆನ್ ದಿ ಗೀತಾ, ಮತ್ತು ಉಪನಿಷತ್‌ಗಳ ಮೇಲಿನ ಬರವಣಿಗೆಗಳು ಭಾರತೀಯ ಪುರಾತನ ಗ್ರಂಥಗಳ ಕ್ರಾಂತಿಕಾರಿ ಅಭ್ಯಾಸಗಳಾಗಿವೆ, ಭಾಷಾಶಾಸ್ತ್ರ, ಮಾನವಶಾಸ್ತ್ರಗಳ ಮೇಲೆ ಕೂಡ ಬೆಳಕು ಚೆಲ್ಲಿವೆ. ಅವರ ಫೌಂಡೆಶನ್ಸ್ ಆಫ್ ಇಂಡಿಯನ್ ಕಲ್ಚರ್ ಪುಸ್ತಕ ಭಾರತೀಯ ಸಂಸ್ಕೃತಿಯ ದೇದೀಪ್ಯಮಾನವಾದ ಹೊಸ ವ್ಯಾಖ್ಯಾನವಾಗಿದೆ.

ಶ್ರೀ ಅರವಿಂದರ ಮಹಾಕಾವ್ಯ ಸಾವಿತ್ರಿ ನವಯುಗದ ಮಹಾಕಾವ್ಯವಾಗಿದೆ. ಪೆರಡೈಜ್ ಲಾಸ್ಟ್, ಹೈಪೀರಿಯನ್ಗಿಂತ ಅಧಿಕ ಆತ್ಮಚರಿತ್ರೆಯ ಅಂಶಗಳನ್ನೊಳಗೊಂಡಿದ್ದು ಡಿವೈನ್ ಕಾಮಿಡಿಗಿಂತ ಅಧಿಕ ತೇಜಸ್ವಿಯಾಗಿದೆ. ಇಲಿಯಡ್ ಮತ್ತು ಓಡೆಸ್ಸಿಗಳಿಗಿಂತ ಹೆಚ್ಚು ಮಾನವೀಯ ಗುಣ ಪಡೆದಿದೆ. ಶ್ರೀ ಅರವಿಂದರ ಲೈಫ್ ಡಿವೈನ್ ಗದ್ಯ ಗ್ರಂಥದ ಸಾರಸರ್ವಸ್ವ ಸಾವಿತ್ರಿಯಲ್ಲಿ ಸೆರೆಹಿಡಿಯಲಾಗಿದೆ. ಶ್ರೀ ಅರವಿಂದರು ಭಾರತೀಯ ಪ್ರೊಮೀಥಿಯಸ್‌ನಂತೆ ಮಾನವರಿಗೆ ಬೆಳಕನ್ನು ತಂದರು. ಪುರಾತನ ಮಹಾ ಕಾವ್ಯವಾದ ಮಹಾಭಾರತವನ್ನು ಬರೆದ ವೇದವ್ಯಾಸರ ತರುವಾಯ ನಾವು ಶ್ರೀ ಅರವಿಂದರನ್ನು ನೆನೆಯಬೇಕು. ಹಿಂದೆ ವ್ಯಾಸರು ಮಾಡಿದ ಕಾರ್ಯವನ್ನೇ ಇಂದಿನ ಯುಗದಲ್ಲಿ ಶ್ರೀ ಅರವಿಂದ ಮಾಡಿದ್ದಾರೆ.

ಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 1)

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 2)

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more