• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)

By Staff
|

ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.

* ಡಾ|ಜೀವಿ ಕುಲಕರ್ಣಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು ಮರಳಿ ಭಾರತಕ್ಕೆ ಬಂದಾಗ(1938ರಲ್ಲಿ) ಅವರಿಗೆ ಎಲ್ಲೆಡೆಯಲ್ಲಿಯೂ ಅಭೂತಪೂರ್ವ ಸ್ವಾಗತ ದೊರೆಯಿತು. ಇಂಗ್ಲೆಂಡಿನಲ್ಲಿರುವಾಗ ಅವರ ಮೇಲೆ ಕಾರ್ಲ್ ಮಾರ್ಕ್ಸ್‌ನ ಪ್ರಭಾವ ಬಿದ್ದಿತು. ಪುಣೆಯಲ್ಲಿ ನಡೆದ ಸತ್ಕಾರದಲ್ಲಿ ಅವರು ಉತ್ತರ ರೂಪದಲ್ಲಿ ಮಾತಾಡುತ್ತ ಸಾಮಾಜಿಕ ಕ್ರಾಂತಿಯ ಕಹಳೆ ಊದಿದಾಗ ಶ್ರೋತೃಗಳಿಗೆ ಅಚ್ಚರಿಯಾಗಿತ್ತು. ಕನಸಿಗ ಗೋಕಾಕರು ಈಗ ಕ್ರಾಂತಿಕಾರಿಯಾಗಿದ್ದರು.

ಡೆಕ್ಕನ್ ಎಜ್ಯುಕೇಶನ್ ಸೊಸೈಟಿಯವರು ಅವರನ್ನು ಸಾಂಗಲಿಯ ವಿಲಿಂಗ್‌ಡನ್ ಕಾಲೇಜಿಗೆ ವರ್ಗಮಾಡಿ ಉಪಪ್ರಾಂಶುಪಾಲ ಹುದ್ದೆ ನೀಡಿ ಗೌರವಿಸಿದ್ದರು. ಅಷ್ಟರಲ್ಲಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ ಹುದ್ದೆ ತೆರವಾಗಿತ್ತು. ಇವರನ್ನು ಅಲ್ಲಿ ತರುವ ಪ್ರಯತ್ನ ನಡೆಯಿತು. ಇವರ ಪ್ರೊಫೆಸರರಾಗಿದ್ದ ನೀಲಕಂಠ ಥಕಾಕಾವ್ ಅವರಿಗೆ ಇವರು ಕರ್ನಾಟಕಕ್ಕೆ ಬರುವ ಮನಸ್ಸಿತ್ತು. ಇವರಿಗೆ ಪುಣೆಯ ಡೆಕ್ಕನ ಎಜ್ಯುಕೇಶನ್ ಸೊಸೈಟಿ ಶಿಕ್ಷಣಕ್ಕಾಗಿ ಹತ್ತು ಸಾವಿರ ರೂಪಾಯಿ ಕೊಟ್ಟಿತ್ತು. ಅದನ್ನು ಮರಳಿ ಕೊಡಲು ಸವಣೂರ ನವಾಬ ಮಂದೆ ಬಂದರು. ಆದರೆ ಗೋಕಾಕರು ತನ್ನನ್ನು ನಂಬಿ ಕಳಿಸಿದ ಸಂಸ್ಥೆಗೆ ಎರಡು ಬಗೆಯಲು ಸಿದ್ಧರಿರಲಿಲ್ಲ. ಎರಡು ವರ್ಷಗಳ ಮೇಲೆ, 1940ರಲ್ಲಿ, ಅವರಿಗೆ ಶುಕ್ರದೆಶೆ ಪ್ರಾರಂಭವಾಗಿರಬೇಕು. ಅವರಿಗೆ 32 ವಯಸ್ಸಿಗೇ ಪ್ರಾಂಶುಪಾಲ ಪದವಿ ದೊರೆಯಿತು. ಎರಡು ಕನ್ಯಾಮಣಿಗಳ ತರುವಾಯ ಮನೆಯಲ್ಲಿ ಪುತ್ರೋತ್ಸವವೂ ಆಯಿತು.(ಅನಿಲಕುಮಾರ, ಮುಂದೆ ಅವನೇ ಐಎಎಸ್ ಅಧಿಕಾರಿಯಾದನು). ಧಾರವಾಡದ ಗೆಳೆಯರಗುಂಪಿನ ಸದಸ್ಯರೂ ಒಂದು ವರ್ಷ ಕಾಲೇಜಿನಲ್ಲಿ ಅವರಿಗಿಂತ ಮುಂದಿದ್ದ ಸಹಪಾಠಿ ರಂಗನಾಥ ಮುಗಳಿಯವರು ಕನ್ನಡ ಪ್ರಧ್ಯಾಪಕರಾಗಿ ವಿಲಿಂಗ್‌ಡನ್ ಕಾಲೇಜು ಸೇರಿದರು. ಇದಕ್ಕೆ ಗೋಕಾಕರ ಸಹಕಾರವಿತ್ತು. ಅಂದಿನಿಂದ ಸಾಂಗಲಿ ಕನ್ನಡ ಅಧ್ಯಯನ ಕೇಂದ್ರವಾಗಿ ಕನ್ನಡ ವಿದ್ಯಾರ್ಥಿಗಳನ್ನು ಆಕರ್ಷಿಸತೊಡಗಿತು.

ಗೋಕಾಕರು ಹೋದಲ್ಲೆಲ್ಲ ವಿದ್ಯಾರ್ಥಿಗಳ ಗುಂಪು ಅವರ ಅಯಾಸ್ಕಾಂತ ಸದೃಶ ಪ್ರಭಾವಕ್ಕೆ ಒಳಗಾಗುತ್ತಿತ್ತು. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಪ್ರತಿಭಾವಂತ ವಿದ್ಯಾರ್ಥಿಗಳು ಇವರ ಹಿರಿತನದಲ್ಲಿ ವರುಣಕುಂಜದ ನಕ್ಷತ್ರಗಳಾಗಿ ಬೆಳಗತೊಡಗಿದರು. ಸಾಹಿತ್ಯಕೃಷಿಯಲ್ಲಿ ಪರಿಣತಿ ಪಡೆದರು. 1940ರಲ್ಲಿ ಶ್ರೀ ಅರವಿಂದರ ಲೈಫ್ ಡಿವೈನ್ ಪುಸ್ತಕರೂಪದಲ್ಲಿ ಪ್ರಕಟವಾಯಿತು. ಅದನ್ನು ಗೋಕಾಕರು ಓದಿದ ಮೇಲೆ ಶ್ರೀ ಅರವಿಂದರ ಭಕ್ತರಾದರು. ಮಾರ್ಕ್ಸ್‌ನ ಪ್ರಭಾವ ಕರಗಿ ಹೋಯಿತು. ಅರವಿಂದರ ಸಾಹಿತ್ಯ ಅವರ ವ್ಯಕ್ತಿತ್ವದಲ್ಲೇ ಮೂಲಭೂತ ಬದಲಾವಣೆಯನ್ನು ತಂದಿತ್ತು. 1944ರಲ್ಲಿ ಗೋಕಾಕರಿಗೆ ಮುಂಬೈ ವಿಶ್ವವಿದ್ಯಾಲಯದ ಮಹತ್ತರವಾದ Wilson Philological Lecture ನೀಡಲು ಆಮಂತ್ರಣ ಬಂತು. ಅವರ ಉಪನ್ಯಾಸದ ಮಟ್ಟ ಎಷ್ಟು ಉಚ್ಚವಾಗಿತ್ತೆಂದರೆ, ಅದು ಮುಂದೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ The Poetic Approach to Language ಎಂಬ ಪುಸ್ತಕ ರೂಪದಲ್ಲಿ ಪ್ರಕಾಶಗೊಂಡಿತು, ಆಕ್ಸ್‌ಫರ್ಡ್‌ನಿಂದ ಅವರಿಗೆ ಗೌರವ ಸ್ನಾತಕೋತ್ತರ ಪದವಿ ದೊರೆಯಲು ಆಸ್ಪದ ಮಾಡಿಕೊಟ್ಟಿತು.

ಸಾಂಗಲಿಯಲ್ಲಿ ಕಳೆದ ಆರು ವರ್ಷಗಳು ಸುವರ್ಣ ಕಾಲದಂತಿತ್ತು ಎಂದು ಗೋಕಾಕರು ಕಾಲೇಜಿನ ರಜತವರ್ಷದ ಸೊವೆನಿಯರ್‌ದಲ್ಲಿ ಬರೆದರು. ಆದರೆ ಅದು ಬಹುಕಾಲ ಮುಂದುವರಿಯಲಿಲ್ಲ. ಕಾಲೇಜಿನ ಆಡಳಿತ ವರ್ಗದ ಕಿರುಕಳದಿಂದಾಗಿ, ಪಂಗಡ-ರಾಜಕೀಯದಿಂದಾಗಿ ಗೋಕಾಕರು ತಮ್ಮ ಆತ್ಮಗೌರವ ಕಾಪಾಡಿಕೊಳ್ಳಲು ರಾಜೀನಾಮೆ ನೀಡುವ ಪ್ರಸಂಗ ಬಂತು. ಮುಂದೆ ನಿರುದ್ಯೋಗದ ಸ್ಥಿತಿಯಲ್ಲಿ ಧಾರವಾಡಕ್ಕೆ ಬಂದರು. ಅವರು ಶಿಕ್ಷಣಕ್ಕಾಗಿ ಪಡೆದ ಸಾಲವನ್ನು ಮರಳಿಕೊಡುವ ಪ್ರಸಂಗ ಉದ್ಭವಿಸಿತು. ಆಗ ಇವರ ಸಹಾಯಕ್ಕೆ ಬಂದವರು ಧಾರವಾಡದ ಸಾಹಿತ್ಯಪ್ರೇಮಿ ವಕೀಲರಾದ ನರಸಿಂಗರಾಯ ದೀಕ್ಷಿತರು ಮತ್ತು ಸವಣೂರಿನ ನವಾಬರು. ಮುಂದೆ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕ ಕೆಲಸ ದೊರೆಯಿತು. ಅಲ್ಲಿ ಕೂಡ ಗೋಕಾಕರು ವಿದ್ಯಾರ್ಥಿಗಳು ಬಳಗಕ್ಕೆ ಸ್ಫೂರ್ತಿ ನೀಡಿದರು. ಜಯತೀರ್ಥ ರಾಜಪುರೋಹಿತ ಮೊದಲಾದ ನಚ್ಚಿನ ವಿದ್ಯಾರ್ಥಿಗಳು ಅವರು ಸ್ಥಾಪಿಸಿದ ಜಿಜ್ಞಾಸು ಕೂಟದ ಸದಸ್ಯರಾಗಿದ್ದರು. ಪ್ರತಿ ಶನಿವಾರ, ತಪ್ಪಿದರೆ ರವಿವಾರ ವಿದ್ಯಾರ್ಥಿಗಳು ಗೋಕಾಕರ ಮನೆಯಲ್ಲಿ ಸೇರುತ್ತಿದ್ದರು. ಅಲ್ಲಿ ಸಾಹಿತ್ಯಿಕ ಚರ್ಚೆ, ಕಾವ್ಯವಾಚನ, ನಾಟಕವಾಚನ, ವಿಮರ್ಶೆ ನಡೆಯುತ್ತಿತ್ತು. ಅವರು ತಮ್ಮ ಯುಗಾಂತರ ನಾಟಕವನ್ನು ಹೈದರಾಬಾದಿನಲ್ಲಿ ಪ್ರಯೋಗಿಸಿದರು.

ಗೋಕಾಕರಿಗೆ ಹೈದರಾಬಾದದಲ್ಲಿಯ ಕೆಲಸ ತೃಪ್ತಿಕರವಾಗಿರಲಿಲ್ಲ. ಬೇರೆ ಕಡೆಗಳಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರು. ಗುಜರಾತದ ವಿಸನಗರದ ಹೊಸ ಕಾಲೇಜಿನಲ್ಲಿ ಪ್ರಾಂಶುಪಾಲ ಕೆಲಸಕ್ಕೆ ಕರೆ ಬಂತು. ವೀಸನಗರಕ್ಕೆಂದು ಕೈಯ ಬೀಸುತ ನಡೆದೆ | ಬಾ ಎಂದು ಕರೆದಿಹುದು ದೈವವಿಲ್ಲಿ ಎಂದು ಹಾಡುತ್ತ ನಡೆದರು. ಮಕ್ಕಳನ್ನು ಗುಜರಾತಿ ಶಾಲೆಗೆ ಕಳಿಸಬೇಕಾಯ್ತು. ಕಾಲೇಜಿಗೆ ಕಟ್ಟಡ ಇರಲಿಲ್ಲ. ಅದನ್ನು ಪೂರ್ಣ ರೂಪಿಸುವ ಜವಾಬ್ದಾರಿ ಇವರದಾಗಿತ್ತು. ಶ್ರೀ ಅರವಿಂದರ ಗ್ರಂಥಗಳ ಅಭ್ಯಾಸ ತೀವ್ರಗತಿಯಿಂದ ನಡೆದಿತ್ತು. ಅವರ ಕಾಲೇಜಿನ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಅರವಿಂದರು ಪ್ರತ್ಯಕ್ಷರಾಗುತ್ತಿದ್ದರು. ಇದನ್ನು ಗಮನಿಸಿದ ಪಂಡಾ ಎಂಬ ಇವರ ವಿದ್ಯಾರ್ಥಿಯೊಬ್ಬ ಗುರುಗಳಿಗೆ ವಿನೂತನ ಕಾಣಿಕೆ ಕೊಡಲು ಬಯಸಿದ. ಅವನಿಗೆ ಪರಿಚಿತರಾದ ದೇಸಾಯಿ ಎಂಬ ವಕೀಲರೊಬ್ಬರು ನಿಯಮಿತವಾಗಿ ಪಾಂಡಿಚೇರಿ ಸಂದರ್ಶಿಸುತ್ತಿದ್ದರು. ಅವರ ಮುಖಾಂತರ ಶ್ರೀಮಾತಾ ಹಾಗೂ ಶ್ರೀ ಅರವಿಂದರ ಸ್ವಹಸ್ತಾಕ್ಷರಗಳುಳ್ಳ ದೊಡ್ಡ ಸೈಜಿನ ಫೋಟೋಗಳನ್ನು ತರಿಸಿ ಅವಕ್ಕೆ ಫ್ರೇಮ್ ಹಾಕಿಸಿ ಗೋಕಾಕರಿಗೆ ಕಾಣಿಕೆಯಾಗಿ ಕೊಡಲು ಅವರ ಆಫೀಸಿಗೆ ಬಂದ. ಗೋಕಾಕರಿಗೆ ಅಚ್ಚರಿಯೊಂದಿಗೆ ಪರಮಾನಂದವೂ ಆಯಿತು. ಗೋಕಾಕರು ಅಂದರು, ಇವು ಆಫೀಸಿನಲ್ಲಿ ಸ್ವೀಕರಿಸುವ ಸರಕಲ್ಲ. ಇವು ಆಶ್ರಮದಿಂದ ಮೊದಲು ಬಂದದ್ದು ನಿಮ್ಮ ಮನೆಗೆ. ಆದ್ದರಿಂದ ಇವನ್ನು ನಿಮ್ಮ ಮನೆಗೇ ಬಂದು ಸ್ವೀಕರಿಸುವೆ. ಎಂದು. ಒಂದು ರವಿವಾರ ವೀಸನಗರದಿಂದ ಮ್ಹೆಸಾನಾಕ್ಕೆ, ಆ ಹುಡುಗ ವಾಸಿಸಿದ್ದ ಊರಿಗೆ ಪ್ರಯಾಣ ಬೆಳೆಸಿದರು. ಹೊರಟ ದಿನ ಎಂಟು ವರ್ಷದ ಮಗನಿಗೆ ವಿಪರೀತ ಜ್ವರ ಬಂದಿತ್ತಂತೆ. ಅನಿಲ ಮಲಗಿದ ರೂಮಿನಲ್ಲಿ ಮಹಾಮಾತೆಯ ಭಾವಚಿತ್ರವಿದ್ದ ಕ್ಯಾಲೆಂಡರ್ ಇತ್ತು. ನಸುಕಿನಲ್ಲಿ ಅವನಿಗೆ ಎಚ್ಚರವಾದಾಗ ಆ ಭಾವಚಿತ್ರದ ಕಡೆಗೆ ನೋಡಿದ್ದ. ಆಗ ಝಗ್ಗನೆ ಅದರೊಳಗಿಂದ ಒಂದು ಜ್ಯೋತಿ ಹೊಳೆದುಬಂದು ಅದರ ಕಿರಣ ಅನಿಲನ ಮೈ ಮುಟ್ಟಿತು. ಆಶ್ಚರ್ಯ! ಅವನ ಜ್ವರವಿಳಿದು ನಾರ್ಮಲ್‌ಗೆ ಬಂತು. ಆತ ಬೆವರತೊಡಗಿದ. ಎಂದು ಶಾರದಾ ಗೋಕಾಕ ನೆನೆಯುತ್ತಾರೆ. (ಒಲವೆ ನಮ್ಮ ಬದುಕು,ಪು. 94).

ಗೋಕಾಕರು ಮ್ಹೆಸಾನಾಕ್ಕೆ ಹೋಗುತ್ತರೆಂಬ ಸುದ್ದಿ ವೀಸನಗರದಲ್ಲಿ ಹಬ್ಬಿತ್ತು. ಹಲವಾರು ಪ್ರಾಧ್ಯಾಪಕರು ಅದೇ ಟ್ರೇನು ಹಿಡಿದು ಪಂಡಾನ ಮನೆಯ ಸಮಾರಂಭಕ್ಕೆ ಆಗಮಿಸಿದರು. ವಕೀಲ ದೇಸಾಯಿಯವರೂ ಆಗಮಿಸಿದ್ದರು. ವಿದ್ಯಾರ್ಥಿಯ ಮನೆಯಲ್ಲಿ ಊರಿನ 30-40 ಪ್ರತಿಷ್ಠಿತರೂ ಸೇರಿದ್ದರು, ಪಂಡಾನ ತಂದೆ ವೈದಿಕರು. ಅಗ್ನಿಕುಂಡ ಹೊತ್ತಿಸಿ ಹೋಮಹವನ ಪ್ರಾರಂಭಿಸಿದ್ದರು. ಗೋಕಾಕರನ್ನು ಅಗ್ನಿಯ ಮುಂದೆ ಕುಳ್ಳಿರಿಸಿ ವೇದಘೋಷಗಳ ಮಧ್ಯದಲ್ಲಿ ಸ್ವಾಗತಿ ಶ್ರೀ ಮತಾ ಶ್ರೀ ಅರವಿಂದರರ ಫೋಟೋಗಳನ್ನಿ ಕಾಣಿಕೆಯಾಗಿಕೊಟ್ಟರು. ಆಗ ಗೋಕಾಕರು ಕೃತಜ್ಞತೆ ವ್ಯಕ್ತಪಡಿಸುತ್ತ ಹೇಳಿದ್ದರು. ಆಯುಷ್ಯದಲ್ಲಿ ಎರಡು ಸಂಸ್ಕಾರಗಳೊಳಗಿಂದ ಹಾಯ್ದಿದ್ದೆ. ಒಂದು ಉಪನಯನ. ಇನ್ನೊಂದು ವಿವಾಹ. ಇಂದು ನಡೆಯುತ್ತಿರುವದು ಮೂರನೆಯ ಸಂಸ್ಕಾರ. ಅತ್ಯಾಧುನಿಕರಾದ ನನ್ನ ಗುರುಗಳಿಗೆ ನನ್ನನ್ನು ಈ ರೀತಿ ಸಾಂಪ್ರದಾಯಿಕವಾಗಿ ಸ್ವೀಕರಿಸುವ ಇಚ್ಛೆ ಬಂದಿದೆ ಎಂದು. (ಒಲವೆ ನಮ್ಮ ದುಕು, ಪು.95).

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 1)

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 2)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more