ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-1

By Staff
|
Google Oneindia Kannada News

'ಎಂಥ ಅದ್ಭುತ ಯಂತ್ರ ನಮ್ಮ ದೇಹ! ಎಷ್ಟು ಅದ್ಭುತ ಶಕ್ತಿ ಹುದುಗಿದೆ ನಮ್ಮಲ್ಲಿ! ಆದರೂ ಕಣ್ಣನ್ನು ಮುಚ್ಚಿಕೊಂಡು ಕತ್ತಲೆ ಎಂದು ಅಳುವವರು ನಾವು."

'ನಿಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಬಡಿದೆಬ್ಬಿಸಬೇಕಾದರೆ ನಿಮ್ಮ ಜೀವನಕ್ಕೊಂದು ಗುರಿ ಇರಬೇಕು. ಗುರಿ ಎಂದರೆ ಮೋಕ್ಷಾಕಂಕ್ಷೆ ಒಂದೇ ಆಗಬೇಕೆಂದಿಲ್ಲ....ನೀವು ಸಭೆಯೊಂದರಲ್ಲಿ ಭಾಷಣ ಮಾಡಲು ಯೋಚಿಸಿರಬಹುದು. ವ್ಯಾಪಾರ ಮಾಡಲು ಯೋಜನೆ ಹಾಕಿರಬಹುದು. ಕಲಾವಿದನಾಗಲು, ಕಾದಂಬರಿಕಾರನಾಗಲು ಇಚ್ಛಿಸಿರಬಹುದು. ನಿಮ್ಮ ಉದ್ಯೋಗದಲ್ಲೇ ಚೆನ್ನಾಗಿ ದುಡಿದು ಹೆಚ್ಚು ಹಣ ಗಳಿಸುವ ಯೋಚನೆ ಇರಬಹುದು. ಏನೇ ಇರಲಿ. ನಿಮ್ಮ ಉದ್ದೇಶವನ್ನು ಕುರಿತು ಸ್ಪಷ್ಟವಾದ ಅರಿವು ನಿಮಗಿರಬೇಕಾಗುತ್ತದೆ. ಆ ಒಂದು ವಿಶಿಷ್ಟ ಆಸೆ ಅಥವಾ ಭಾವನೆ ನಿಮ್ಮನ್ನು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ." ಎನ್ನುತ್ತಾರೆ.

ಜರ್ಮನ್ ದೇಶದ ಫ್ರ್ಯಾಂಕಫರ್ಟ ನಗರದ ಡಾ| ಹೆರಾಲ್ಡ್ ಸ್ರುಜ್ ಎಂಬವರಿಗೆ 300 ಭಾಷೆ ಬರುತ್ತಿದ್ದವಂತೆ. ಓದು, ಬರೆಹ, ಮಾತನಾಡುವುದು, ಅಷ್ಟೇ ಅಲ್ಲ, ಸರಾಗವಾಗಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವ ಸಾಮರ್ಥ್ಯವೂ ಇತ್ತಂತೆ. 'ಇದೆಲ್ಲ ನೀವು ಹೇಗೆ ಸಾಧಿಸಿದಿರಿ?" ಎಂದು ಕೇಳಿದರೆ ಅವರು ಹೇಳುತ್ತಿದ್ದರಂತೆ, “ಬಹುಭಾಷಾ ಜ್ಞಾನ ಪಡೆಯಲು ಮೂರು ಸಂಗತಿಗಳು ಬೇಕು; 1) ಕಲಿಯಬೇಕು, ತಿಳಿಯಬೇಕು ಎಂಬ ತೀವ್ರ ಹಂಬಲ, 2) ಅನವರತ ಶ್ರದ್ಧೆಯಿಂದ ಕೂಡಿದ ಪರಿಶ್ರಮ, 3) ಅವಕಾಶ." ಎಂದು.

ಅಬ್ರಹಾಂ ಲಿಂಕನ್‌ಗೆ ದೊಡ್ಡ ಲಾಯರ್ ಆಗಬೇಕೆಂಬ ತೀವ್ರ ಹಂಬಲ ಇತ್ತಂತೆ. ಒಮ್ಮೆ ಅವನು 'ಬ್ಲ್ಯಾಕ್‌ಸ್ಟೋನ್" ಎಂಬ ಲೇಖಕನ ಪುಸ್ತಕ ಪಡೆಯಲು 40 ಮೈಲು ನಡೆದು ಹೋಗಿದ್ದನಂತೆ.

ನೋಬೆಲ್ ಪಾರಿತೋಷಕ ಪಡೆದ ಡಾ| ಎಲೆಕ್ಸಿಸ್ ಕಾರೆಲ್ ತಮ್ಮ 'ರೆಫ್ಲೆಕ್ಶನ್ಸ್ ಆಫ್ ಲೈಫ್" ಎಂಬ ಗ್ರಂಥದಲ್ಲಿ ಹೇಳುತ್ತಾರೆ, “ಸತ್ಯದ ಮಹಾಸಾಗರದಲ್ಲಿ ಮನುಷ್ಯನು ಏನನ್ನು ಬಯಸುತ್ತಾನೋ ಅದನ್ನು ಪಡೆಯುತ್ತಾನೆ. ದೇವರಿಗಾಗಿ ಕಾತರಿಸಿದ ಅಸೆಸ್ಸಿಯ ಸಂತ ಫ್ರಾನ್ಸಿಸ್ ದೈವ ಸಾಕ್ಷಾತ್ಕಾರ ಪಡೆದ. ಸೃಷ್ಟಿಯ ಹಿನ್ನೆಲೆಯ ನಿಯಮಗಳನ್ನು ಹುಡುಕಾಡಿದ ಐನ್‌ಸ್ಟೀನ್ ವಿಶ್ವ ವ್ಯಾಪಕ ನಿಯಮಗಳನ್ನು ಕಂಡುಹಿಡಿದ." ಎನ್ನುತ್ತಾರೆ.

ಮನುಷ್ಯ ಮುನ್ನಡೆಯಬೇಕಾದರೆ ಗುರಿ ಬೇಕು, ಅದಕ್ಕೆ ದಾರಿಯನ್ನು ಕಂಡುಕೊಳ್ಳಬೇಕು. ಇದರ ಬಗ್ಗೆ ವಿವೇಕಾನಂದರು ಸಾಕಷ್ಟು ಬರೆದಿದ್ದಾರೆ. ಬಿಥೋವನ್ ಎಂಬ ಅಭಿಜಾತ ಸಂಗೀತಜ್ಞನ ಪ್ರತಿಭೆ ದೇವರ ಕೊಡುಗೆಯೆಂದು ಕೆಲವರು ಭಾವಿಸಿದ್ದರೆ, ಅವನು ಅವರಿಗೆ ಕೊಡುವ ಉತ್ತರವೇ ಬೇರೆಯಾಗಿತ್ತು. “ ...ಈ ಅಸಾಧಾರಣ ಪ್ರತಿಭೆ ದೇವರ ಕೊಡುಗೆ ಎನ್ನುತ್ತೀರಾ? ನೀವೂ ಈ ಕೊಡುಗೆ ಪಡೆಯಬಹುದು. ದಿನಕ್ಕೆ ಎಂಟು ಗಟೆಗಳ ಕಾಲ, ನಾಲ್ವತ್ತು ವರ್ಷಗಳ ವರೆಗೆ ಪಿಯಾನೋ ಅಭ್ಯಾಸ ಮಾಡಿರಿ, ಅಷ್ಟೇ ಸಾಕು. ನೀವೂ ನನ್ನಂತೆ ಅದ್ಭುತ ಕೊಡುಗೆಯನ್ನು ಪಡೆಯುತ್ತೀರಿ."

'ಮಕ್ಕಳಿಗಾಗಿ ಸರಳ ಸುಂದರ ರೂಪದಲ್ಲಿ ಅನುಬಂದೋಪಾಧ್ಯಾಯ ಬರೆದ 'ಬಹುರೂಪಿ ಗಾಂಧಿ" ಎಂಬ ಆಂಗ್ಲ ಭಾಷೆಯಲ್ಲಿರುವ ಪುಸ್ತಕ ಮಕ್ಕಳು ಓದಲೇಬೇಕಾದ ಪುಸ್ತಕ, ಇದು ಪಾಠ್ಯವಾಗಬೇಕು" ಎನ್ನುತ್ತಾರೆ. ಇದರಲ್ಲಿ ಗಾಂಧೀಜೀಯವರ ದಿನದಿನದ, ಕ್ಷಣಕ್ಷಣದ ಪ್ರತಿ ಕೆಲಸದಲ್ಲಿ ಹೇಗೆ ಅವರ ಹಿರಿಮೆ, ದೊಡ್ಡತನ ವ್ಯಕ್ತವಾಗುತ್ತದೆ ಎಂಬುದು ಚಿತ್ರಿತವಾಗಿದೆಯಂತೆ.

'ಯಾವುದೇ ಕಲೆ ಅಥವಾ ಕೆಲಸದಲ್ಲಿ ನಮಗೆ ಪೂರ್ಣ ದಕ್ಷತೆ ಬರಬೇಕಾದರೆ ಅದರ ಕಾರ್ಯ ವಿಧಾನ ನಮ್ಮ ಸುಪ್ತಮನದಲ್ಲಿ ಸರಿಯಾಗಿ ನೆಲೆ ನಿಲ್ಲಬೇಕು."

ಪ್ರಸಿದ್ಧ ಜನನಾಯಕ, ಉದ್ಯಮಿಯೊಬ್ಬ ತನ್ನ ಕೋಣೆಯ ಮೇಜಿನ ಕೊನೆಯ ತುದಿಗೆ 'ನನ್ನ ಸಮಯ ಅಮೂಲ್ಯವಾಗಿದೆ" ಎಂಬ ಪುಟ್ಟ ಬೋರ್ಡ್(ಫಲಕ) ಹಾಕಿದ್ದನಂತೆ. ದಿನಕ್ಕೆ ಹದಿನಾರು ಗಂಟೆ ಕೆಲಸ ಮಾಡುತ್ತಿದ್ದನಂತೆ. 'ನೆನಪಿನಲ್ಲಿಡಿರಿ, ಸಮಯದ ಸದ್ವಿನಿಯೋಗವೇ ಯಶಸ್ಸಿನ ಗುಟ್ಟು" ಎನ್ನುತ್ತಾರೆ. ಹೆಚ್ಚಿನ ಸಮಯ ತಲೆಹರಟೆಯಲ್ಲಿ, ಮೋಜಿನಲ್ಲಿ ಕಳೆದು ನಂತರ ಪಶ್ಚಾತ್ತಾಪ ಪಡುವ ವಿಧ್ಯಾರ್ಥಿಗಳು ತಮ್ಮ ಸಮಯದ ಬೆಲೆಯನ್ನು ಅರಿಯಬೇಕು. 'ನೀವು ಗಡ್ಡವನ್ನೇಕೆ ಕ್ಷೌರ ಮಾಡಿಕೊಳ್ಳುತ್ತಿಲ್ಲ?" ಎಂದು ಮಿತ್ರರೊಬ್ಬರು ಕೇಳಿದಾಗ ಪ್ರಸಿದ್ಧ ನಾಟಕಕಾರ ಜಾರ್ಜ್ ಬರ್‌ನಾರ್ಡ ಶಾ ಉತ್ತರಿಸಿದರಂತೆ, “ಗಡ್ಡ ಮಾಡಿಕೊಂಡರೆ ಸಮಯ ವ್ಯರ್ಥ ಹಾಳಾಗುತ್ತದೆ. ನಾನು ದಿನಕ್ಕೆ ನಾಲ್ಕು ನಿಮಿಷಗಳಂತೆ ನನ್ನ ಜೀವನದಲ್ಲಿ ಹತ್ತು ತಿಂಗಳು ಗಳಿಸಿದ್ದೇನೆ." ಎಂದು.

'ಶಕ್ತಿಯೇ ಜೀವನ, ದುರ್ಬಲತೆಯೇ ಮರಣ." ಇದು ದೊಡ್ಡ ಸತ್ಯ. “ಶಕ್ತಿ ಸೌಭಾಗ್ಯ, ಚಿರ ಜೀವನದ ಒಳಗುಟ್ಟು. ದುರ್ಬಲತೆ-ಚಿಂತೆ ದುಃಖಗಳ ಮೂಲ." ಎಂದು ವಿವೇಕಾನಂದರು ಸಾರಿದರು. “ಬಲಿಷ್ಠರಾಗಿರಿ, ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ, ವಿದ್ಯುತ್ತಿನ ಇಚ್ಛಾಶಕ್ತಿ ಬಲ ಇವುಗಳನ್ನು ಬೆಳೆಸಿಕೊಂಡು ನಿಮ್ಮ ಕಾಲ ಮೇಲೆ ನಿಲ್ಲಿರಿ." ಎಂದು ಯುವಕರನ್ನು ಹುರಿದುಂಬಿಸಿದರು.

ದುರ್ಬಲರೇ ಬಲಿಪಶು ಆಗುತ್ತಾರೆ. ಕುದುರೆ, ಆನೆ, ಹುಲಿಗಳನ್ನು ಯಾರೂ ಬಲಿಕೊಡುವದಿಲ್ಲ. ಆದ್ದರಿಂದ ನಾವು ಕುರಿಗಳಾಗಬಾರದು. ಪುರುಷಸಿಂಹ ಆಗಬೇಕು.

ಯೋಚನೆಯೇ ರೂವಾರಿ. ಪ್ರಗತಿ ಪಥದಲ್ಲಿ ನಡೆಯಬೇಕೆನ್ನುವ ಯಾವ ವ್ಯಕ್ತಿಯೇ ಆಗಲಿ 'ಯೋಚನೆ"ಯ ಈ ಮಹಾಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. 'ನಿಮ್ಮ ಮನಸ್ಸಿನಲ್ಲಿಯ ಪ್ರಬಲ ಯೋಚನೆ ನಿಮ್ಮ ಮೇಲೆ ಮಾತ್ರವಲ್ಲ, ಸಮೀಪದಲ್ಲಿರುವ ಇತರರ ಮೇಲೂ ಪ್ರಭಾವ ಬೀರುತ್ತದೆ". “ಯೋಚನೆಗಳು ಅಲೆಯಂತೆ ಚಲಿಸುತ್ತವೆ. ತಮಗೆ ವ್ಯಕ್ತವಾಗಲು ಅನುಕೂಲವಾದ ಮನಸ್ಸನ್ನು ಹುಡುಕುತ್ತವೆ" ಎಂದು ಮಹರ್ಷಿ ಶ್ರೀ ಅರವಿಂದರು ಹೇಳುತ್ತಾರೆ.

ಅಭ್ಯಾಸದಿಂದ ಅದ್ಭುತಗಳನ್ನು ಸಾಧಿಸಬಹುದು. ವೇದೋಪನಿಷತ್ತುಗಳನ್ನು ಶಿಷ್ಯರು ಕಂಠಪಾಠ ಮಾಡುತ್ತಿದ್ದರು. ತಲೆತಲಾತರದಿಂದ ಸನಾತನ ಜ್ಞಾನ ಉಳಿದುಬಂದಿದೆ, ಇದಕ್ಕೆ ಅಭ್ಯಾಸವೇ ಕಾರಣ.

'ಮಕ್ಕಳಿಗೆ ಸ್ಕೂಲ್ ಮನೆಯಲ್ಲಲ್ವೇ", 'ಹಿರಿಯಕ್ಕನ ಚಾಳಿ ಮನೆಮಂದಿಗೆ", 'ಮೂರು ವರ್ಷದ ಬುದ್ಧಿ ನೂರು ವರ್ಷದ ವರೆಗೆ" ಇವು ಅನುಭವದ ಮಾತುಗಳು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳಿಗೆ ಕತೆ ಎಂದರೆ ಪಂಚಪ್ರಾಣ. ಸಂಶೋಧಕರ, ವಿಜ್ಞಾನಿಗಳ, ಸಾಹಸಿಗಳ, ಉದ್ಯಮಶೀಲ ವ್ಯಕ್ತಿಗಳ, ಸ್ವಾರ್ಥತ್ಯಾಗಿಗಳ, ಕರ್ಮವೀರರ, ದೇಶಪ್ರೇಮಿಗಳ, ಸಮಾಜಸೇವಕರ, ಸಾಧುಸಂತರ ಜೀವನಗಾಥೆಯನ್ನು ಮಕ್ಕಳಿಗೆ ಬಿಂಬಿಸುವಂತೆ ಹೇಳಬೇಕು ಎನ್ನುತ್ತಾರೆ.

ಆತ್ಮವಿದ್ಯೆಯ ಅಭ್ಯಾಸದ ಅವಶ್ಯಕತೆಯನ್ನು ಬಿಂಬಿಸುತ್ತಾರೆ. 'ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಹಂಬಲ ನಮಗಿದ್ದರೆ, ನಮ್ಮ ಏಳ್ಗೆಯ ಶಿಲ್ಪಿ ನಾವೇ ಆಗಬೇಕೆಂದಿದ್ದರೆ, 'ಸಿಹಾವಲೋಕನ"ದ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಎಂಬುದು ಅನುಭವಿಗಳ ಆದೇಶ." ಎನ್ನುತ್ತಾರೆ.

'ಸಹನೆಯಿಂದ ಸಿದ್ಧಿ". ಈ ಮಾತಿಗೆ ಉದಾಹರಣೆಯಾಗಿ ಹೇಳಿದ, ಕ್ರಿಸ್ತಪೂರ್ವ 384 ರಲ್ಲಿ ಗ್ರೀಸ್ ದೇಶದಲ್ಲಿ ಜನಿಸಿದ ಡಿಮೊಸ್ತನೀಸನ ಕತೆ ರೋಚಕವಾಗಿದೆ. ಇವನು ಜನಿಸಿದಾಗ ಜೋತಿಷಿಗಳು 'ಇವನೊಬ್ಬ ಸಾಮಾನ್ಯ ಮನುಷ್ಯನಾಗಿ ಬಾಳುತ್ತಾನೆ" ಎಂದಿದ್ದರಂತೆ. ಉಗ್ಗು(ಗುಗ್ಗು)ದನಿಯ, ಕುಗ್ಗುನುಡಿಯ ಹುಡುಗ ರೋಗಪೀಡಿತನಾಗಿಯೇ ಬೆಳೆದ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡು ತಬ್ಬಲಿಯಾದ. ಇವನ ಆಸ್ತಿಯನ್ನು ಸ್ವಂತ ಚಿಕ್ಕಪ್ಪನೇ ಎತ್ತಿಹಾಕಿದ. ಇವನು ನ್ಯಾಯಾಲಯದ ಕದ ತಟ್ಟಿದ. ಆದರೆ ಇವನಿಗೆ ನ್ಯಾಯ ದೊರೆಯಲಿಲ್ಲ. ಆ ಕಾಲದ ಪ್ರಸಿದ್ಧ ವಾಗ್ಮಿಯೊಬ್ಬನ ಮಾತಿನ ಮೋಡಿಗೆ ಮರುಳಾಗಿ ತಾನೂ ವಾಗ್ಮಿಯಾಗಬೇಕೆಂದು ದೃಡಸಂಕಲ್ಪ ಮಾಡಿದ. ಬಾಯಿ ತೆರೆದರ ಉಗ್ಗು(ಗುಗ್ಗು) ಅವನನ್ನು ಬಾಧಿಸುತ್ತಿತ್ತು. ಒಬ್ಬ ವೈದ್ಯನ ಸಲಹೆಯಂತೆ ನಾಲಗೆಯ ಮೇಲೆ ಬೆಣಚುಕಲ್ಲುಗಳನ್ನು ಇಟ್ಟುಕೊಂಡು ಸ್ಪಷ್ಟ ಮಾತಾಡಲು ಕಲಿತ. ಎತ್ತರವಾದ ದಿನ್ನೆ ಬೆಟ್ಟಗಳನ್ನು ಏರುತ್ತ, ಇಳಿಯುತ್ತ, ದೀರ್ಘ ಉಸಿರೆಳೆಯುವ ಅಭ್ಯಾಸ ಮಾಡಿದ. ಉದ್ದವಾದ ವಾಕ್ಯಗಳನ್ನು ತಡೆಯಿಲ್ಲದೇ ಉಚ್ಚರಿಸತೊಡಗಿದ.

ದಿನಾಲೂ ಸಮುದ್ರದ ದಂಡೆಯ ಮೇಲೆ ನಿಂತು ಸಮುದ್ರದ ಘೋಷವನ್ನು ಮೀರಿಸುವ ಧ್ವನಿತೆಗೆದು ಮಾತನಾಡಲು ಅಭ್ಯಾಸ ಮಾಡಿದ. ಕಾಯದೆ ಕಾನೂನು ಗ್ರಂಥಗಳನ್ನು, ಗ್ರೀಕ ಮಹಾಕಾವ್ಯಗಳನ್ನು ದಿನಕ್ಕೆ ಹದಿನಾರು ತಾಸಿಗೆ ಮೀರಿ ಅಭ್ಯಾಸ ಮಾಡಿದ. ಅಧ್ಯಯನ ಕಾಲಕ್ಕೆ ಇವನು ಜನರೊಂದಿಗೆ ಬೆರೆಯುತ್ತಿರಲಿಲ್ಲ. ಜನರೊಂದಿಗೆ ವ್ಯವಹಾರ ಕಡಿಮೆಗೊಳಿಸಲು ಅರ್ಧತಲೆ ಬೋಳಿಸಿಕೊಂಡು, ವಿಕಾರ ರೂಪಿಯಾಗಿ, ನೆಲಮನೆಯಲ್ಲಿಯೇ ಏಕಾಕಿಯಾಗಿ ಹೆಚ್ಚಿನ ಸಮಯ ಕಳೆಯುತ್ತಿದ್ದ. ಪ್ರಭಾವಿ ಹಾವಭಾವ ಪ್ರದರ್ಶಿಸಲಿಕ್ಕಾಗಿ, ಪರಿಣಾಮಕಾರಿ ಅಂಗಾಭಿನಯ ಪರಿಣತಿಗಾಗಿ ದೊಡ್ಡ ನಿಲವುಗನ್ನಡಿಯ ಮುಂದೆ ನಿಂತು ಗಂಟೆಗಟ್ಟಲೆ ರಂಗತಾಲೀಮು(ರಿಹರ್ಸಲ್) ಮಾಡುತ್ತಿದ್ದ. ಮೂರು ವರ್ಷಗಳ ಅಜ್ಞಾತವಾಸದ ತರುವಾಯ ಹೊರಬಿದ್ದಾಗ ಅವನೊಬ್ಬ ಜ್ಞಾನನಿಧಿಯಾಗಿದ್ದ. ಇವನ ಬಗ್ಗೆ ಫಿಲಿಪ್ ದೊರೆ ಹೇಳುತ್ತಿದ್ದನಂತೆ, “ ಇಡೀ ಜಗತ್ತನ್ನೇ ಜಯಿಸಬಹುದು; ಆದರೆ, ಡೆಮೋಸ್ತನೀಸನ ನಾಲಿಗೆಯನ್ನು ಜಯಿಸುವುದು ಅಸಾಧ್ಯ" ಎಂದು. ವಾಗ್ದೇವಿ ಅವನ ನಾಲಿಗೆಯ ಮೇಲೆ ನರ್ತಿಸುತ್ತಿದ್ದಳು. ಇದೆಲ್ಲ ಇವನ ದೃಡಸಂಕಲ್ಪದ ಫಲವಾಗಿತ್ತು.

ಕಡುಬಡತನ, ವಿಷಮ ಪರಿಸರದಲ್ಲಿ ಬೆಳೆದು ಅಸಾಧ್ಯವನ್ನು ಸಾಧಿಸಿದವರಲ್ಲಿ ಡಾ| ಬಾಬಾಸಾಹೇಬ ಅಂಬೇಡಕರರೂ ಒಬ್ಬರು. ಅವರು ಲಂಡನ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಲೈಬ್ರರಿಯ ಜವಾನ ಕದಹಾಕುವಾಗ ಇವರೆಡೆಗೆ ಬಂದು ಇವರನ್ನು ಎಚ್ಚರಿಸುವ ವರೆಗೆ ಇವರು ತಮ್ಮ ಓದಿನಲ್ಲಿ ಮಗ್ನರಾಗುತ್ತಿದ್ದರಂತೆ. ಯಾರೂ ಕಂಡರಿಯದ ಜಗತ್ತನ್ನು ಕಂಡು ಹಿಡಿದ ಕೋಲಂಬಸನ ಧೈರ್ಯ ಎಂತಹದಿರಬೇಕು. ವಿದ್ಯುದ್ದೀಪವನ್ನು ಆವಿಷ್ಕಾರಗೊಳಿಸಿದ ಥಾಮಸ್ ಎಡಿಸನ್ ಒಂಬೈನೂರು ಬಾರಿ ತನ್ನ ಪ್ರಯೋಗದಲ್ಲಿ ವಿಫಲನಾಗಿದ್ದ. ಆದರೂ ಧೈರ್ಯಗೆಡದೇ ಹೋರಾಡಿ ಜಯಗಳಿಸಿದ. ಇಂತಹ ಅಸಂಖ್ಯ ಉದಾಹರಣೆಗಳನ್ನು ಲೇಖಕರು ನೀಡುತ್ತಾರೆ.

'ವಯಸ್ಸಿಗೂ ಯಶಸ್ಸಿಗೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ" ಎನ್ನುತ್ತ ಕಲವು ಮಹತ್ವದ ಸಂಗತಿಗಳನ್ನು ತಿಳಿಸುತ್ತಾರೆ. 'ಇಂಗ್ಲಂಡದ ಪಿಟ್ಸ್ ಎಂಬಾತ ತನ್ನ 24ನೆಯ ವಯಸ್ಸಿಗೆ ಪ್ರಧಾನ ಮಂತ್ರಿಯಾಗಿದ್ದರೆ ಗ್ಲಾಡ್‌ಸ್ಟೋನ್ ಪ್ರಧಾನಿಯಾದದ್ದು ತನ್ನ 83ನೆಯ ವಯಸ್ಸಿನಲ್ಲಿ. ಜರ್ಮನ್ ಕವಿ ಗಯಟೆ (ಕಾಳಿದಾಸನ ಶಾಕುಂತಲ ನಾಟಕ ಓದಿ ತನ್ನ ತಲೆಯ ಮೇಲಿಟ್ಟುಕೊಂಡು ಕುಣಿದಾಡಿದ ಖ್ಯಾತಿಯ ಕವಿ) ತನ್ನ ಹತ್ತನೇ ವರ್ಷ ಕವನ ಬರೆಯಲು ಪ್ರಾರಂಭಿಸಿದ, ಅವನ ಅಮೂಲ್ಯ ಕೃತಿ 'ಫೌಸ್ಟ್" ರಚಿಸಿದ್ದು ತನ್ನ 80ನೆಯ ವಯಸ್ಸಿನಲ್ಲಿ. (ಸಂತ ಜ್ಞಾನೇಶ್ವರ ಭವದ್ಗೀತೆಯನ್ನು ವ್ಯಾಖ್ಯಾನಿಸಿದ ಮಹಾಕಾವ್ಯ 'ಜ್ಞಾನೇಶ್ವರಿ" ರಚಿಸಿದ್ದು 13ನೆಯ ವಯಸ್ಸಿನಲ್ಲಿ). ಇಂಗ್ಲಿಶ್ ಕವಿ ಕೊಲ್ರಿಜ್ ತನ್ನ ಪ್ರಸಿದ್ಧ ಕಾವ್ಯ 'ಎನ್‌ಶೆಂಟ್ ಮ್ಯಾರಿನರ್" ಬರೆದಾಗ ಅವನಿಗೆ 25 ವರ್ಷ. ಇಟಾಲಿಯನ್ ಕಲಾವಿದ ಲಿಯೋನಾರ್ಡೊ ಡಾ ವಿಂಚಿಯ ಪ್ರಸಿದ್ಧ ಕಲಾಕೃತಿ 'ಲಾಸ್ಟ ಸಪರ್" ರೂಪತಾಳಿದ್ದು ಅವನ 77ನೆಯ ವಯಸ್ಸಿನಲ್ಲಿ. ... ದೇಹಾರೋಗ್ಯ ಮತ್ತು ಸ್ವಸ್ಥ ಶರೀರವೇ ಮಹಾ ಯಶಸ್ಸಿಗೆ ಕಾರಣ ಎನ್ನಬಹುದೇ? ಮಿಲ್ಟನ್ ಕುರುಡನಾಗಿದ್ದ. (ಸೂರದಾಸನೂ ಕುರುಡನಾಗಿದ್ದ). (ಕುಳ್ಳ)ನೆಪೋಲಿಯನ್ ಚರ್ಮರೋಗಪೀಡಿತನಾಗಿದ್ದ. ಜ್ಯೂಲಿಯಸ್ ಸೀಝರ್‌ಗೆ ಮೂರ್ಛೆರೋಗವಿತ್ತು. ಬಿಥೋವನ್ ಕಿವುಡನಾಗಿದ್ದ."

'ಯಾರು ಇತರರಿಗಾಗಿ ದುಡಿವರೋ ಅವರೇ ಅತ್ಯಂತ ಸುಖಿಗಳು. ಇತರರಿಗೆ ಯಾವುದೇ ಸಹಾಯ ಮಾಡದವರು ಅತ್ಯಂತ ದುಃಖಿಗಳು" ಎನ್ನುತ್ತಾರೆ. ಈ ಮಾತಿನಲ್ಲಿ ಕಳಕಳಿ ಇದೆ. ಆಪ್ತಸಲಹೆ ನೀಡುವ ಒಂದು ವಿಶಿಷ್ಟ ಶೈಲಿ ಇದೆ.

'ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಮಟ್ಟದ ಸಿದ್ಧಿಯನ್ನು ಸಾಧಿಸಬೇಕಾದರೆ ಅದು ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯ" ಎಂಬ ಮಾತನ್ನು ಲೇಖಕರು ಮನಕ್ಕೆ ನಾಟುವಂತೆ ಹೇಳುತ್ತಾರೆ. 'ಮೋಸ ವಂಚನೆಯಿದ ಯಾವ ಮಹತ್ಕಾರ್ಯವೂ ಸಾಧ್ಯವಾಗಿಲ್ಲ. ಸತ್ಕರ್ಮದಿಂದಲೇ ಶ್ರೇಯಸ್ಸು ಎಂಬ ದೃಡಸಂಕಲ ನಮ್ಮಲ್ಲಿ ಉದಿಸಬೇಕು" ಎಂಬ ಮಾತನ್ನೂ ಹೇಳುತ್ತಾರೆ. ಇಂಥ ಮಾತು ಯುವ ಜನಾಂಗಕ್ಕೆ ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ.

“ಯಶಸ್ವಿ ಪುರುಷರು ಬೇರೆ ಏನನ್ನೂ ಮಾಡುವುದಿಲ್ಲ. ಆದರೆ,
ಅವರು ಮಾಡುವ ರೀತಿ ಮಾತ್ರ ಬೇರೆಯಾಗಿರುತ್ತದೆ." ಎಂದರು ಶಿವ ಖೇರಾ.
ಸೋತವರೆಲ್ಲ ಇತರರನ್ನು ದೂರುತ್ತಾರೆ, ಆತ್ಮನಿರೀಕ್ಷಣೆ ಮಾಡುವುದಿಲ್ಲ.
ಯಶಸ್ವಿ ಪುರುಷರು ತಮ್ಮ ಸುಖದುಃಖ, ಸಂತೆಯ ಚಿಂತೆ, ಬದಿಗಿಡುತ್ತಾರೆ.
ಪ್ರಯತ್ನದಲ್ಲಿ ಪರಮಾರ್ಥ ಕಾಣಿತ್ತಾರೆ, ಸೋಲಿನ ಮೇಲೆ ಯಶದ ಸೌಧ ಕಟ್ಟುತ್ತಾರೆ!

ಹಿಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X