ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-1

By Staff
|
Google Oneindia Kannada News

ಜೀವಿ ಕುಲಕರ್ಣಿನಮ್ಮಲ್ಲಿ ದುರ್ಬಲರನ್ನು ನಿಂದಿಸುವ ಹಾಗೂ ತಿರಸ್ಕರಿಸುವ ಸುವ್ಯವಸ್ಥಿತ ಜನರ ಗುಂಪೇ ಇದೆ. ದುರ್ಬಲರ ಆತ್ಮಗೌರವಕ್ಕೆ ಆಘಾತವಾದಾಗ ಅವರ ಪ್ರಗತಿ ಕುಂಠಿತವಾಗುತ್ತದೆ, ಅವರ ಬದುಕಿಗೆ ಹಾನಿಯುಂಟಾಗುತ್ತದೆ. ಇಂಥ ವ್ಯಕ್ತಿಗಳು ತಮ್ಮ ಆತ್ಮಗೌರವ ಸ್ಥಾಪಿಸಿಕೊಳ್ಳಲು, ಸರಿಯಾದ ಮಾರ್ಗವನ್ನು ತೋರಿಸಿಕೊಡಬೇಕು. ಇಂಥ ಉದಾತ್ತ ಭಾವನೆಯಿಂದ ಈ ಗ್ರಂಥವನ್ನು ಲೇಖಕರು ರಚಿಸಿದ್ದಾರೆ.

ಪೀಠಿಕೆ

ರಾಮಕೃಷ್ಣಾಶ್ರಮದ ಸ್ವಾಮಿ ಜಗದಾತ್ಮಾನಂದ ಅವರು ಬರೆದ 'ಬದುಕಲು ಕಲಿಯಿರಿ" ಎಂಬ ಪುಸ್ತಕ ಕನ್ನಡ ಪ್ರಕಾಶನದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿದೆ. ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಯ್ತು. ಹದಿಮೂರನೆಯ ಮುದ್ರಣ 2003 ರಲ್ಲಿ ಪ್ರಕಟವಾಯ್ತು. ಒಟ್ಟು 85 ಸಾವಿರ ಪ್ರತಿಗಳು ಮಾರಾಟವಾದವು. ಇದರ ಎರಡನೆಯ ಭಾಗ1986ರಲ್ಲಿ ಬೆಳಕಿಗೆ ಬಂತು. ಇದರ ಒಂಭತ್ತನೆಯ ಮುದ್ರಣ 2002 ರಲ್ಲಿ ಪ್ರಕಟವಾಯ್ತು. ಒಟ್ಟು 78,000 ಮಾರಾಟವಾಗಿವೆ. ಇವುಗಳ ಮೂರು ಪರಿಷ್ಕೃತ ಸಂಯುಕ್ತ ಆವೃತ್ತಿಗಳು ಪ್ರಕಟವಾಗಿವೆ. ಮತ್ತೆ 20,000 ಪ್ರತಿಗಳು ಮಾರಾಟವಾಗಿವೆ.(ಪುಟಗಳು, 414; ಬೆಲೆ ಕೇವಲ ರೂ.90) ಕನ್ನಡದ ಮಟ್ಟಿಗೆ ಇದೊಂದು ದಾಖಲೆಯೇ. (ಇಲ್ಲಿಯ ವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ.)

ಮೊದಲು ಈ ಪುಸ್ತಕವನ್ನು ಮೆಚ್ಚಿ ಬೆಳಕಿಗೆ ತಂದ ಶ್ರೇಯಸ್ಸು 'ವಿವೇಕ ಪ್ರಕಾಶನದ" ಡಾ| ಎ. ಚಂದ್ರಶೇಖರ್ ಉಡುಪರಿಗೆ ಸಲ್ಲಿತ್ತದೆ. ಈ ಪುಸ್ತಕವನ್ನು ಓದಿದವರಿಗೆ ಇದರ ಮಹತ್ವ ತಿಳಿದಿದೆ. ಇದನ್ನು ಓದಲು ಅವಕಾಶ ದೊರೆಯದ ಅಸಂಖ್ಯ ವಾಚಕರಿಗಾಗಿ ಈ ಪುಸ್ತಕದ ಸಾರ ಉಣಬಡಿಸುವುದು ಅವಶ್ಯ ಎನಿಸುತ್ತದೆ.

ಈ ಪುಸ್ತಕವನ್ನು ಯುವಕ-ಯುವತಿಯರು ಅವಶ್ಯವಾಗಿ ಓದಬೇಕು. ಕಾನ್ವೆಂಟ್ ಮಕ್ಕಳಿಗೆ ಕನ್ನಡ ಓದಲು ಸರಿಯಾಗಿ ಬರುವದಿಲ್ಲ, ಬಂದರೂ ಹೆಚ್ಚಿನ ಓದಿನ, ವ್ಯಾಸಂಗದ ಅಭಿರುಚಿ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕನ್ನಡ ಅರಿತ ಪಾಲಕರು ಈ ಪುಸ್ತಕವನ್ನು ಓದಿ ತಮ್ಮ ಮಕ್ಕಳಿಗೆ ಇಲ್ಲಿಯ ರಸಭರಿತ ಕತೆ, ಉಪಕತೆ, ಉದಾಹರಣೆಗಳನ್ನು ತಿಳಿಸಬೇಕು, ಅವರಲ್ಲಿ ಉತ್ಸಾಹ ಕುಗ್ಗಿದಾಗ ಈ ಪುಸ್ತಕದಲ್ಲಿಯ ವಿಚಾರಗಳು ಸಂಜೀವನಿಯಂತೆ ಪ್ರಭಾವ ಬೀರುತ್ತವೆ.

ಸಾಹಿತ್ಯದಲ್ಲಿ ಮೂರು ರೀತಿಯಲ್ಲಿ ಪ್ರಭಾವ ಬೀರುವ ಕೃತಿಗಳಿರುತ್ತವೆ. ಪ್ರಭುವಿನಂತೆ ಅಧಿಕಾರ ವಾಣಿಯಿಂದ ಹೇಳುವ ಶಾಸ್ತ್ರಗಳು, (ಪ್ರಭುಸಮ್ಮಿತಿ); ಮಿತ್ರನಂತೆ ಹೇಳುವ ಇತಿಹಾಸ-ಪುರಾಣಗಳು, (ಮಿತ್ರಸಮ್ಮಿತಿ); ಇನ್ನು ಕಾಂತೆಯಂತೆ, ಮನದನ್ನೆಯಂತೆ ಹಿತವಚನ ನುಡಿಯುವ ಕಾವ್ಯಗಳು, (ಕಾಂತಾಸಮ್ಮಿತಿ). ಪ್ರೊ|ಕು.ಶಿ. ಹರಿದಾಸಭಟ್ಟರು ಈ ಪುಸ್ತಕವು 'ಮಿತ್ರಸಮ್ಮಿತಿ"ಯಂತೆ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ, '...ಒಟ್ಟಿನಲ್ಲಿ ಕನ್ನಡದಲ್ಲೇ ಇರುವ ಹೊಸಯುಗದ ಉಪನಿಷತ್ತು ಇದು" ಎನ್ನುತ್ತಾರೆ.

ಬಹುಶ್ರುತರಾದ ಸ್ವಾಮಿ ಜಗದಾತ್ಮಾನಂದರು ಇಂಥದೊಂದು ಪುಸ್ತಕದ ಕೊರತೆ ಕನ್ನಡದಲ್ಲಿದೆ ಎಂಬುದನ್ನು ಕಂಡರು. ಸ್ಮೈಸ್ ಅವರ 'ಸೆಲ್ಫ್ ಹೆಲ್ಪ್" ಎಂಬ ಆಂಗ್ಲ ಪುಸ್ತಕದಿಂದ ಸ್ಪೂರ್ತಿ ಪಡೆದು ಪ್ರಸ್ತುತ ಗ್ರಂಥವನ್ನು ಎರಡು ಭಾಗಗಳಲ್ಲಿ ರಚಿಸಿದರು. 'ಸೆಲ್ಫ್ ಹೆಲ್ಪ್" ಎಂಬ ಪುಸ್ತಕ ನೂರೈವತ್ತು ವರ್ಷಗಳ ಹಿಂದೆ ಪ್ರಕಟಗೊಂಡಿತ್ತು (1858), ಹಲವಾರು ಭಾಷೆಗಳಲ್ಲಿ ನೂರಾರು ಸಂಸ್ಕರಣಗಳನ್ನು ಪಡೆದಿದೆ.

ನಮ್ಮಲ್ಲಿ ದುರ್ಬಲರನ್ನು ನಿಂದಿಸುವ ಹಾಗೂ ತಿರಸ್ಕರಿಸುವ ಸುವ್ಯವಸ್ಥಿತ ಜನರ ಗುಂಪೇ ಇದೆ. ದುರ್ಬಲರ ಆತ್ಮಗೌರವಕ್ಕೆ ಆಘಾತವಾದಾಗ ಅವರ ಪ್ರಗತಿ ಕುಂಠಿತವಾಗುತ್ತದೆ, ಅವರ ಬದುಕಿಗೆ ಹಾನಿಯುಂಟಾಗುತ್ತದೆ. ಇಂಥ ವ್ಯಕ್ತಿಗಳು ತಮ್ಮ ಆತ್ಮಗೌರವ ಸ್ಥಾಪಿಸಿಕೊಳ್ಳಲು, ಸರಿಯಾದ ಮಾರ್ಗವನ್ನು ತೋರಿಸಿಕೊಡಬೇಕು. ಇಂಥ ಉದಾತ್ತ ಭಾವನೆಯಿಂದ ಈ ಗ್ರಂಥವನ್ನು ಲೇಖಕರು ರಚಿಸಿದ್ದಾರೆ. ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿಯನ್ನು ಪಡೆದ ಸ್ವಾಮಿಗಳು ಅವರ ವಿಚಾರಗಳನ್ನು ಪುಸ್ತಕದುದ್ದಕ್ಕೂ ಉದ್ಧರಿಸಿದ್ದಾರೆ.

“ನಾವು ಬದುಕು ಎಂದು ತಿಳಿದುಕೊಂಡದ್ದು ವೃತ್ತದ ಅರ್ಧಭಾಗ ಮಾತ್ರ. ಇನ್ನರ್ಧ ಭಾಗ ಬದುಕಿನ ಆಚೆಗೆ, ದೇಹಕ್ಕೆ ಅತೀತವಾದ ಅಸ್ತಿತ್ವದಲ್ಲಿ ಅಡಗಿಕೊಂಡಿದೆ." ... “ಕಷ್ಟ, ನೋವು, ನರಳಾಟಗಳಲ್ಲಿ ಸಿಲುಕಿದವರನ್ನು ಕಂಡು ಅವರಿಗೆ ತಮ್ಮಿಂದಾದ ಸಹಾಯ ಮಾಡುವುದು ಸತ್ಕರ್ಮವೆನಿಸುತ್ತದೆ." ...“ಕರ್ಮ ಸಿದ್ಧಾಂತವನ್ನು ತಪ್ಪಾಗಿ ತಿಳಕೊಂಡು, ಅದನ್ನು ವಿಧಿ-ವಾದ, ಮತ್ತು ಆಲಸ್ಯಕ್ಕೆ ಕಾರಣವಾದ ಸಿದ್ಧಾಂತವೆಂದು ಟೀಕಿಸುವವರು ನಮ್ಮಲ್ಲಿ ಸರ್ವತ್ರ ಕಂಡುಬರುತ್ತಾರೆ. (ಪ್ರತಿಯೊಂದು ಸಿದ್ಧಾಂತವನ್ನೂ ತಪ್ಪು ತಿಳಿದುಕೊಳ್ಳುವವರೂ, ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವವರೂ ಇದ್ದೇ ಇರುತ್ತಾರೆ.)" ಈ ಮಾತುಗಳನ್ನು ಲೇಖಕರು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ.

ಅವರ ಮಹತ್ವದ ವಿಚಾರ ಹೀಗಿದೆ: “ವಿಜ್ಞಾನದ ಪರಿಮಿತಿ, ಮೌಲ್ಯದ ಮಹತ್ವ, ನಿಸ್ವಾರ್ಥ ಪ್ರೇಮದ ಶಕ್ತಿ, ಮನಶ್ಶಾಂತಿಯ ಮಾರ್ಗ, ಚಾರಿತ್ರ್ಯ ಬಲ ಸಂವರ್ಧನೆಯ ವಿಧಾನ, ನೀತಿಯ ನೆಲೆಗಟ್ಟು, ಸುಖದುಃಖಗಳ ಮರ್ಮ, ಪವಾಡ ಮತ್ತು ಅದ್ಭುತ ಘಟನೆಗಳ ಹಿನ್ನೆಲೆ, ಪ್ರಾರ್ಥನೆ, ಉಪವಾಸ, ಧ್ಯಾನ ವಿಧಾನಗಳ ರಹಸ್ಯ, ವ್ಯಕ್ತಿಯ ಅಭ್ಯುದಯ ಹಾಗೂ ಸಮಾಜ ಕಲ್ಯಾಣದ ಒಳಗುಟ್ಟು, ದೇವರು, ಧರ್ಮಗಳ ಮೂಲ ಸ್ವರೂಪ - ಇವೆಲ್ಲಾ ಈ ಗ್ರಂಥದಲ್ಲಿ ಚರ್ಚಿಸಿ ಆಧುನಿಕರ ಕೆಲವು ಸಂಶಯಗಳಿಗೆ ಉತ್ತರ ಕೊಡುವ ವಿನಮ್ರ ಪ್ರಯತ್ನ ಮಾಡಲಾಗಿದೆ."

ಈ ಹೊತ್ತಿಗೆಯಲ್ಲಿ ಏಳು ಅಧ್ಯಾಯಗಳಿವೆ. ಮೊದಲನೆಯದು 'ಪ್ರಯತ್ನದಿಂದ ಪರಮಾರ್ಥ". ಇಲ್ಲಿಯ ಪರಮಾರ್ಥ ಕೇವಲ ಅಧ್ಯಾತ್ಮಿಕವಾಗಿಲ್ಲ, ಇದು ಪರಮ+ಅರ್ಥ(ತಿರುಳು), ಪರಮ+ಅರ್ಥ(ಸಂಪಾದನೆ)ಯೂ ಆಗಿದೆ.

ನೂರಾರು ಕಥೆ, ಉಪಕಥೆ, ಕಥಾನಕ, ಉದಾಹರಣೆ ಕೊಟ್ಟು ಮನುಷ್ಯನ ಪ್ರಯತ್ನ ಬಹು ಮುಖ್ಯವಾದುದು ಎಂಬ ಮಾತನ್ನು ಪ್ರತಿಪಾದಿಸುತ್ತಾರೆ. ಯಾವುದೇ ಪ್ರತಿಭೆ, ಕಲೆ, ಕಾರ್ಯವೈಖರಿಯ ಹಿಂದೆ ಅಗಾಧ ಪರಿಶ್ರಮ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ ಎಂಬ ಮಾತನ್ನು ಬಿಂಬಿಸುತ್ತಾರೆ.

ಅಧ್ಯಾಯ ಒಂದು

ಪ್ರಯತ್ನದಿಂದ ಪರಮಾರ್ಥ

“ಸ್ವಪ್ರಯತ್ನದಿಂದ ಸರ್ವತೋಮುಖ ಏಳ್ಗೆ ಸಾಧಿಸಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಈ ವಿಶ್ವದಲ್ಲಿ ಖಂಡಿತವಾಗಿಯೂ ಇದ್ದಾನೆ- ಆತ ನೀನೇ."
-ಆಲ್ಡಸ್ ಹಕ್ಸ್‌ಲೀ

“ಏಳು! ಎದ್ದೇಳು! ನಿನ್ನ ಭವಿಷ್ಯವನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊರು. ನಿನ್ನ ಉತ್ತರೋತ್ತರ ಶ್ರೇಯಸ್ಸಿಗೆ ಬೇಕಾದ ಎಲ್ಲ ಶಕ್ತಿ ಸಾಮರ್ಥ್ಯಗಳೂ ನಿನ್ನೊಳಗೇ ಇವೆ. ನೋಡು ಮನಮಾಡು. ಎದ್ದೇಳು. ಭವ್ಯ ಭವಿಷತ್ತಿನ ನಿರ್ಮಾಣಕ್ಕೆ ಇಂದೇ ಅಡಿ ಇಡು."
-ಸ್ವಾಮಿ ವಿವೇಕಾನಂದ


ಎರಡು ಸಾವಿರಕ್ಕೂ ಹೆಚ್ಚು ಯಂತ್ರಗಳನ್ನು ಸೃಷ್ಟಿಸಿದ ಥಾಮಸ್ ಎಡಿಸನ್ ಹೆಚ್ಚು ಕಲಿತಿರಲಿಲ್ಲ. ಆದರೆ ಅಸಾಧಾರಣ ಪ್ರತಿಭಾವಂತ. ಅವನ ಪ್ರಕಾರ 'ಆವಿಷ್ಕಾರಗಳು ಆಕಸ್ಮಿಕಗಳಲ್ಲ - ಅವು ನಿರಂತರ ಶ್ರಮಕ್ಕೆ ಒಲಿದ ವರಗಳು." ಪ್ರತಿ ಯಶಸ್ಸಿನ ಹಿಂದೆ ಪರಿಶ್ರಮ ಇದ್ದೇ ಇರುತ್ತದೆ. ಇಂಗ್ಲೀಷಿನಲ್ಲಿ ಹೇಳುವುದಾದರೆ 'ವರ್ಕ್(ಕಾರ್ಯ)ಕ್ಕಿಂತ ಸಕ್ಸೆಸ್(ಯಶ) ಎಂಬ ಶಬ್ದ ಮೊದಲು ಬರುವುದು ಕೇವಲ ಇಂಗ್ಲಿಷ್ ನಿಘಂಟುವಿನಲ್ಲಿ ಮಾತ್ರ.

ಕೊಲೆಗಡುಕನೂ ಕ್ರೂರಿಯೂ ಆದ ಎಡ್ಡಿ ಎಂಬ ಹುಡುಗನನ್ನು ಫಾದರ್ ಫ್ಲೈನಾಗನ್ ಎಂಬವನು ಸುಧಾರಿಸಿ ಉತ್ತಮ ನಾಗರಿಕನನ್ನಾಗಿ ಪರಿವರ್ತಿಸಿದ ಚೇತೋಹಾರಿ ಕಥೆ 'ಮಕ್ಕಳ ಪಟ್ಟಣದ ಫಾದರ್ ಫ್ಲೆನಾಗನ್" ಎಂಬ ಪುಸ್ತಕದಲ್ಲಿದೆ. ಅದನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.

ಎಡ್ಡಿ ಎಂಬ ಹುಡುಗ ತನ್ನ ನಾಲ್ಕನೆಯ ವಯಸ್ಸಿನಲ್ಲಿ ತಂದೆತಾಯಿ ಕಳೆದುಕೊಂಡು ಅನಾಥನಾಗುತ್ತಾನೆ. ಎಂಟನೆಯ ವಯಸ್ಸಿಗೆ ತುಂಟ ಹುಡುಗರ ತಂಡದ ಮುಖ್ಯಸ್ಥನಾಗುತ್ತಾನೆ. ಇವನಿಗಿಂತ ವಯಸ್ಸಿನಲ್ಲಿ ಹಿರಿಯರಾದ ಹದಿವಯದ ಬಾಲಕರು ಇವನನ್ನು ತಮ್ಮ 'ಗುರು" ಎಂದು ಮನ್ನಿಸಿ ಅನುಸರಿಸುತ್ತಾರೆ. ಏಕಾಂಗಿಯಾಗಿ ಈ ಹುಡುಗ ಬ್ಯಾಂಕೊಂದನ್ನು ಲೂಟಿಮಾಡಿ ಸಹಸ್ರಾರು ಡಾಲರ ಕದ್ದು ತನ್ನ ಪರಾಕ್ರಮ ತೋರಿಸುತ್ತಾನೆ. ಒಂದು ಪಿಸ್ತೂಲ್ ಸಂಪಾದಿಸಿ ಎಷ್ಟೋ ತಿಂಡಿಯ ಅಂಗಡಿಗಳನ್ನು ಲೂಟ್ ಮಾಡುತ್ತಾನೆ. ಒಮ್ಮೆ ಒಂದು ಮುದುಕಿಯನ್ನು ಕೊಲ್ಲಲು ಪಿಸ್ತೂಲನ್ನು ಅಣಿಗೊಳಿಸುತ್ತಿದ್ದಾಗ ಪೋಲೀಸರ ಕೈಯಲ್ಲಿ ಸಿಗುತ್ತಾನೆ. 'ಮಕ್ಕಳ ಪಟ್ಟಣ" ಸೇರುತ್ತಾನೆ (ರಿಮಾಂಡ್ ಹೋಮ್‌ನಂತಹದು). ಇಲ್ಲಿ ಕೂಡ ಇವನು ಇತರ ಮಕ್ಕಳನ್ನು ಬೈಯುತ್ತಾನೆ, ತನ್ನ ದರ್ಪ ತೋರಿಸುತ್ತಾನೆ. ಅಲ್ಲಿ ಎಲ್ಲರ ಗೌರವ ಸಂಪಾದಿಸಿದ ಕಾರ್ಯಕರ್ತ ಫಾದರ್ ಫ್ಲೆನಾಗನ್ ಅವರನ್ನೂ ಅವಾಚ್ಯ ಶಬ್ದಗಳಿಂದ ಬೈಯುತ್ತಾನೆ. ಆಟ ಆಡುವುದು, ಹೊಲದಲ್ಲಿ ಕೆಲಸ ಮಾಡುವುದು, ಬ್ಯಾಂಡ್ ಬಾರಿಸುವುದು, ಅವನಿಗೆ 'ಬೋರ್"(ಬೇಸರ) ತರುವ ಕೆಲಸಗಳಾಗುತ್ತವೆ. ಪ್ರಾರ್ಥನೆಯ ವೇಳೆ ಬೆಕ್ಕಿನಂತೆ ಕೂಗುತ್ತಾನೆ. ಯಾವುದೇ ಕೆಲಸ ಹಾಳುಗೆಡವುದರಲ್ಲಿ ಅವನು ನಿಸ್ಸೀಮ. ಅವನ ಮುಖದಲ್ಲಿ ನಗೆಯನ್ನಾಗಲೀ, ಕಣ್ಣುಗಳಲ್ಲಿ ನೀರನ್ನಾಗಲೀ ಯಾರೂ ಕಾಣರು. ಕಾಲಿನಿಂದ ತಲೆಯ ವರೆಗೆ ದ್ವೇಷ ತುಂಬಿದ ವಿಷಜೀವಿ ಅವನಾಗಿದ್ದ.

ಇವನ ಸಹವಾಸ ಸಾಕಾದಾಗ ಶಿಕ್ಷಕರೆಲ್ಲ ಫಾದರ್ ಕಡೆ ದೂರುತ್ತಾರೆ, ಪತ್ರ ಬರೆಯುತ್ತಾರೆ. ಒಮ್ಮೆ ಎಡ್ಡಿಗೆ ವಿಪರೀತ ಜ್ವರ ಬರುತ್ತದೆ. ಫಾದರ್ ಅತ್ಯಂತ ಕರುಣೆಯಿಂದ ಅವನ ಆರೈಕೆ ಮಾಡುತ್ತಾರೆ. ಅವನು ಗುಣಮುಖನಾದಾಗ ಶಿಕ್ಷಕರೂ ಸಹಪಾಠಿ ವಿಧ್ಯಾರ್ಥಿಗಳೂ ಅವನನ್ನು ವಿಶ್ವಾಸದಿಂದ ನೋಡುತ್ತಾರೆ. ಒಂದು ದಿನ ಎಡ್ಡಿಯು ಫಾದರ್ ಕೋಣೆಯನ್ನು ನೇರವಾಗಿ ಪ್ರವೇಶಿಸುತ್ತಾನೆ ಮತ್ತೆ ಪ್ರಶ್ನಿಸುತ್ತಾನೆ, “ನೀವು ನನ್ನನ್ನು ಒಳ್ಳೆಯವನನ್ನಾಗಿ ಸರಿಪಡಿಸಲು ಪ್ರಯತ್ನಿಸುತ್ತಿದ್ದೀರಿ, ಆದರೆ ಅದೆಷ್ಟು ಸಫಲರಾಗಿದ್ದೀರಿ? ಇಲ್ಲಿ ಬರುವ ಮುನ್ನ ನಾನು ಒಬ್ಬ ಸಿಸ್ಟರ್‌ಗೆ ಒಂದು ಒದಿಕೆ ಕೊಟ್ಟೇ ಬಂದೆ, ಎನು ಹೇಳ್ತೀರಿ?" ಆಗ ಫಾದರ್ ಫ್ಲೆನಾಗನ್ ಉತ್ತರಿಸುತ್ತಾರೆ, “ಈಗಲೂ ಹೇಳುತ್ತೇನೆ, ನೀನು ಸ್ವಭಾವತಃ ಒಳ್ಳೆಯ ಹುಡುಗನೇ." ಆಗ ಎಡ್ಡಿ ಅಂದ, “ ನಿಮಗೆ ಚೆನ್ನಾಗಿ ಗೊತ್ತಿದೆ ನಾನು ಒಳ್ಳೆಯ ಹುಡುಗನಲ್ಲ ಎಂದು.

ಆದರೆ ನೀವು ಸುಳ್ಳು ಯಾಕೆ ಹೇಳುತ್ತೀರಿ? ಒಂದು ಸುಳ್ಳನ್ನು ಮತ್ತೆ ಮತ್ತೆ ಹೇಳುವ ಮಹಾಸುಳ್ಳರು ನೀವಲ್ಲವೇ?" ಆಗ ಫಾದರ್ ಅವನಿಗೆ ಒಂದು ಪ್ರಶ್ನೆ ಕೇಳುತ್ತಾರೆ: “ಒಳ್ಳೆಯ ಹುಡುಗ ಹೇಗಿರುತ್ತಾನೆ? ಶಿಕ್ಷಕರಿಗೆ ವಿಧೇಯನಾಗಿ ಇರುತ್ತಾನೆ ಅಲ್ಲವೇ?" ಆಗ ಎಡ್ಡಿ, “ಹೌದು" ಎಂದ. “ಇಲ್ಲಿಯ ವರೆಗೆ ನಿನಗೆ ದೊರೆತ ಶಿಕ್ಷಕರು ಬೀದಿಗಳ್ಳರು, ತುಂಟರು, ದುಷ್ಟರು. ಅವರ ಮಾರ್ಗ ಅನುಸರಿಸಿ ನೀನೂ ದುಷ್ಟನೆಂದೇ ಭಾವಿಸಿದೆ. ಇಲ್ಲಿ ಒಳ್ಳೆಯ ಶಿಕ್ಷಕರು ದೊರೆತಿದ್ದಾರೆ. ಅವರಿಗೆ ವಿಧೇಯನಾಗಿ ನಡೆದರೆ ನೀನೂ ಒಳ್ಳೆಯವ ಆಗುವದಿಲ್ಲವೇ?" ಎಂಬ ಪ್ರಶ್ನೆ ಎಡ್ಡಿಯ ಮರ್ಮವನ್ನೇ ಭೇದಿಸಿತು. ಆ ಕ್ಷಣದಿಂದ ಅವನ ಜೀವನದ ನಕ್ಷೆಯೇ ಬದಲಾಯಿತು. ಹತ್ತು ವರ್ಷಗಳಲ್ಲಿ ಪದವಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ. ಮುಂದೆ ಮಿಲಟರಿ ಸೇರಿದ. ಉನ್ನತ ಸೈನ್ಯಾಧಿಕಾರಿಯಾದ. ಗೆಳೆಯರಿಗೆ, ಸಹೋದ್ಯೋಗಿಗಳಿಗೆ ಅಚ್ಚುಮೆಚ್ಚಿನವನಾದ, ಅವರ ಪ್ರೀತಿ ವಿಶ್ವಾಸ ಗಳಿಸಿದ. 'ಸ್ವಭವತಃ ನೀನು ಒಳ್ಳೆಯವ" ಎಂಬ ಬೀಜಮಾತು ಅವನ ಮನದಾಳದಲ್ಲಿ ಬೇರುಬಿಟ್ಟಿತು. ಅವನಲ್ಲಿ ಬೇರೂರುದ್ದ 'ತಾನು ಕೆಟ್ಟವ"ನೆಂಬ ಭಾವನೆಯನ್ನು ನಿರ್ಮೂಲಗೊಳಿಸಿತು. ಇಂತಹ ಕತೆಗಳು ವಿಧ್ಯಾರ್ಥಿಗಳಿಗೆ ದಾರಿದೀಪ ಆಗುವದಿಲ್ಲವೇ?

ವೈದ್ಯ-ವಿಜ್ಞಾನವನ್ನು ಓದಿದ, ಶ್ರೀ ವಿವೇಕಾನಂದರ ಜೀವನದಿಂದ ಪ್ರಭಾವಿತರಾಗಿ ರಾಮಕೃಷ್ಣ ಮಿಶನ್ ಸೇರಿದ, ಒಬ್ಬ ಸ್ವಾಮಿಗಳ ಜೀವನದಲ್ಲಿಯ ಒಂದು ಪ್ರಸಂಗವನ್ನು ಲೇಖಕರು ದಾಖಲಿಸುತ್ತಾರೆ. ಎಂ.ಬಿ.ಬಿ.ಎಸ್. ಪದವಿಯ ನಂತರ ಅವರಿಗೆ ಔಷಧೋಪಚಾರ ವಿಭಾಗದಲ್ಲಿ ಒಂದು 'ಡೆಮೋನ್‌ಸ್ಟ್ರೇಟರ್" ಕೆಲಸ ದೊರೆತಿತ್ತಂತೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ, ಆಸ್ಪತ್ರೆಯ ರೋಗಿಗಳನ್ನು ಪರೀಕ್ಷಿಸಿ, ಅವರ ರೋಗದ ಕಾರಣವನ್ನು ಕಂಡುಹಿಡಿಯುವ ವಿಧಾನವನ್ನು (ಡಯಗ್ನಾಸಿಸ್) ಬೋಧಿಸುವ ಕೆಲಸ ಇವರದಾಗಿತ್ತಂತೆ. ಹಿಂದಿನ ಪರೀಕ್ಷೆಯಲ್ಲಿ ಫೇಲಾದ ೧೩ ವಿದ್ಯಾರ್ಥಿಗಳ ಬ್ಯಾಚ್ ಇವರ ಪಾಲಿಗೆ ಬಂದಿತ್ತು. ಇಂಥ ವಿದ್ಯಾರ್ಥಿಗಳಿಗೆ ಪಾಠ ಹೇಳುವದೂ ಒಂದು ಸಮಸ್ಯೆಯೇ ಆಗಿತ್ತು. ಆ ವಿಧ್ಯಾರ್ಥಿಗಳಲ್ಲಿ 'ಆತ್ಮವಿಶ್ವಾಸ"ದ ಕೊರತೆಯನ್ನು ಇವರು ಗಮನಿಸಿದರು. ಮೊದಲು ಆತ್ಮವಿಶ್ವಾಸವನ್ನು ಇವರು ತುಂಬಿದರು. ಇವರ ಮಾರ್ಗದರ್ಶನದಲ್ಲಿ ಅವರೆಲ್ಲರೂ ಪಾಸಾದರು ಅಷ್ಟೇ ಅಲ್ಲ, ಮುಂದೆ ಯಶಸ್ಸಿನ ಮೆಟ್ಟಲು ಏರತೊಡಗಿದರಂತೆ.

ಮುಂದಿನ ಪುಟ>>

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X