ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ

By Staff
|
Google Oneindia Kannada News

Bendre with VK Gokak
ಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ ಬಾಧೆಯಾಗಿ ಪರಿಣಮಿಸಲಿಲ್ಲ. ಎಂ.ಎ. ಪರೀಕ್ಷೆಯಲ್ಲಿಯೂ ಅವರು ಪ್ರಥಮ ಶ್ರೇಣಿಯಲ್ಲಿ ಪ್ರಥಮಸ್ಥಾನ ಪಡೆದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಒಂದು ಹೊಸ ವಿಕ್ರಮವನ್ನೇ ಸ್ಥಾಪಿಸಿದರು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಇವರಿಗೆ ಇಂಗ್ಲಿಷ್ ಪ್ರಾಧ್ಯಾಪಕ ಕೆಲಸ ದೊರೆಯಿತು. ಅಲ್ಲಿ ಐದು ವರ್ಷ ಕೆಲಸ ಮಾಡಿ (1931-36). ಮುಂದೆ ಎರಡು ವರ್ಷ ಇಂಗ್ಲಂಡಿಗೆ ಹೆಚ್ಚಿನ ವ್ಯಾಸಂಗಕ್ಕಾಗಿ ತೆರಳಿದರು.

ಬೇಂದ್ರೆ ಗೋಕಾಕರ ವಿದ್ಯಾರ್ಥಿ ಆದ ಪ್ರಸಂಗ

ಬೇಂದ್ರೆಯವರನ್ನು ಗೋಕಾಕರು ತಮ್ಮ ಕಾವ್ಯಗುರುಗಳನ್ನಾಗಿ ಗೌರವಿಸುತ್ತಿದ್ದರು. ಅವರ ಪ್ರಭಾವದಿಂದಾಗಿ ಗೋಕಾಕರು ಕನ್ನಡದಲ್ಲಿ ಕಾವ್ಯ ಹಾಗೂ ವಿಮರ್ಶೆ ಬರೆಯತೊಡಗಿದ್ದರು. ಆದರೆ ಗುರುಗಳೇ ಶಿಷ್ಯನ ವಿದ್ಯಾರ್ಥಿಯಾಗಬಹುದೆಂದು ಅವರು ಕನಸುಮನಸಿನಲ್ಲಿಯೂ ಎಣಿಸಿರಲಿಕ್ಕಿಲ್ಲ. ಗೋಕಾಕರು ಪುಣೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಮದಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಮಾಡಲು ತಾವು ಹಿಂದೆ ಬಿ.ಎ. ಓದಿದ ಫರ್ಗ್ಯೂಸನ್ ಕಾಲೇಜಿಗೆ ಬೇಂದ್ರೆ ಬಂದರು. ಅವರಿಗೆ ಎಂ.ಎ. ಕ್ಲಾಸಿನಲ್ಲಿ ಮಾರ್ಗದರ್ಶನ ಮಾಡಲು ಅಲ್ಲಿಯ ಯಾವ ಪ್ರಾಧ್ಯಾಪಕರಿಗೂ ಯೋಗ್ಯ ಪದವಿಗಳು ಇರಲಿಲ್ಲ. ಕಾಲೇಜಿನ ಅಧಿಕಾರಿಗಳಿಗೆ ಗೋಕಾಕರ ನೆನಪಾಯಿತು. ಗೋಕಾಕರು ತಮ್ಮ ಬಿ.ಎ. ಮತ್ತು ಎಂ.ಎ. ಡಿಗ್ರಿಗಳಲ್ಲಿ ಇಂಗ್ಲಿಷ್ ವಿಷಯವನ್ನು ಮೇಜರ್ ಆಗಿ ಆಯ್ದುಕೊಂಡಿದ್ದರೂ ಮೈನರ್ ಆಗಿ ಕನ್ನಡ ಮತ್ತು ಹಳಗನ್ನಡ ಆಯ್ದುಕೊಂಡಿದ್ದರು. ಅವರಿಗೆ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ದೊರೆತದ್ದರಿಂದ, ಅವರ ಡಿಗ್ರಿಗಳನ್ನು ಪರಿಶೀಲಿಸಲು ಮುಂಬೈ ವಿಶ್ವ ವಿದ್ಯಾಲಯಕ್ಕೆ ಕಳಿಸಲಾಗಿತ್ತು. ಅವರು ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ಪಾಠಮಾಡಲು ಅರ್ಹರು ಎಂದು ವಿಶ್ವವಿದ್ಯಾಲಯದಿಂದ ಒಪ್ಪಿಗೆ ಪತ್ರ ಬಂತು. ಹೀಗಾಗಿ ಬೇಂದ್ರೆಯವರೇ ತಮ್ಮ ಶಿಷ್ಯ ಗೋಕಾಕರ ವಿದ್ಯಾರ್ಥಿಯಾಗುವ ಪ್ರಸಂಗ ಬಂತು. ನಾನೊಮ್ಮೆ ಗೋಕಾಕರಿಗೆ ಕೇಳಿದ್ದೆ, ಬೇಂದ್ರೆ ನಿಮ್ಮ ಗುರುಗಳು. ಅವರು ನಿಮ್ಮ ವಿದ್ಯಾರ್ಥಿಯಾದಾಗ ನಿಮಗೆ ಹೇಗೆ ಅನಿಸುತ್ತಿತ್ತು? ಆಗ ಗೋಕಾಕ ಉತ್ತರಿಸಿದ್ದರು, ಅದು ಕೇವಲ ಕಾಗದದಲ್ಲಿ ಮಾತ್ರ ಇತ್ತು. ಅದು ಅನಿವಾರ್ಯವೆಂಬುದು ನನ್ನ ಗುರುಗಳಿಗೂ ಗೊತ್ತಿತ್ತು. ನಾವು ಕ್ಲಾಸ್‌ರೂಮಿಗೆ ಹೋಗುವವರೆಗೆ ಟೀಚರ್-ಸ್ಟೂಡೆಂಟ್ ಆಗಿರುತ್ತಿದ್ದೆವು. ಕ್ಲಾಸು ಸೇರಿದ ಮೇಲೆ ಬೇಂದ್ರೆಯವರಿಗೆ ಕುರ್ಚಿಯ ಮೇಲೆ ಕೂಡಲು ಹೇಳುತ್ತಿದ್ದೆ. ನಾನು ವಿದ್ಯಾರ್ಥಿಯಂತೆ ಡೆಸ್ಕಿನಲ್ಲಿ ಕೂತು ಅವರ ಮಾತು, ಲೆಕ್ಚರ್ ಕೇಳುತ್ತಿದ್ದೆ. It was a great experience! ಎಂದು ನಕ್ಕಿದ್ದರು. ನಾವು ಆ ಸಮಯದಲ್ಲಿ ಕವಿತೆ ಬರೆದೆವು, ಸಾನೆಟ್ (ಸುನೀತ)ದ ಪ್ರಯೋಗ ಮಾಡಿದೆವು ಎಂದಿದ್ದರು.

ಗೋಕಾಕರು ಪುಣೆಯಲ್ಲಿರುವಾಗ ತಾಯವ್ವನ ಸಮಾಧಿ ಎಂಬ ಹೊಸ ಬಗೆಯ ಪದ್ಯವನ್ನು ಬರೆದರು. ಜನನಾಯಕ ಎಂ ನಾಟಕವನ್ನು ಬರೆದರರು, ಪ್ರಯೋಗಿಸಿದರು, ಸ್ವತಃ ದಿಗ್ದರ್ಶನವನ್ನೂ ಮಾಡಿದರು. ಗೋಕಾಕರಿಗೆ ಉಚ್ಚ ಶಿಕ್ಷಣಕ್ಕಾಗಿ ಇಂಗ್ಲಂಡಿಗೆ ಹೋಗುವ ಹೆಬ್ಬಯಕೆ ಇತ್ತು. ಅದಕ್ಕೆ ಅವರಿಗೆ ಹತ್ತು ಸಾವಿರ ರೂಪಾಯಿ ಸಾಲದ ಅವಶ್ಯಕತೆ ಇತ್ತು. ಫರ್ಗ್ಯೂಸನ್ ಕಾಲೇಜನ್ನು ನಡೆಸುತ್ತಿದ್ದ ಡೆಕ್ಕನ್ ಎಜ್ಯುಕೇಶನ್ ಸೊಸೈಟಿಯು ಇವರಿಗೆ ಬಡ್ಡಿರಹಿತ ಸಾಲ ಕೊಡಲು ಮುಂದೆ ಬಂತು. ಒಂದು ವೇಳೆ ಇಂಗ್ಲಂಡಿನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾದರೆ, ಸಾಲವಾಗಿ ಪಡೆದ ಹಣ ಮರಳಿಕೊಡುವ ಅವಶ್ಯಕತೆ ಇಲ್ಲ ಎಂದಿತ್ತು. ಅದಕ್ಕವರು ಸಂಸ್ಥೆಯ ಆಜೀವ ಸದಸ್ಯರಾಗಬೇಕಿತ್ತು. ಗೋಕಾಕರಿಗೆ ಇದು ಸುವರ್ಣ ಸಂಧಿಯಂತೆ ಕಂಡಿತು. ಪತ್ನಿ ಶಾರದಾ ಅವರನ್ನು, ತಮ್ಮ ಎರಡು ಹೆಣ್ಣುಮಕ್ಕಳನ್ನು ಧಾರವಾಡಕ್ಕೆ (ತವರುಮನೆಗೆ) ಕಳಿಸಿ ವಿನಾಯಕರು ಪ್ರವಾಸಕ್ಕೆ ಸಿದ್ಧರಾದರು. ಆಗ ಅವರು ಬರೆದ ಪ್ರಸಿದ್ಧ ಪದ್ಯದ ಸಾಲುಗಳು ಹೀಗಿವೆ:

ಇಲ್ಲೆ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು |
ನೇಹಕೆಂದು ನಲುಮೆಗೆಂದು ಗುರುತನಿರಿಸಿ ಬರುವೆನು||
(ಭಾವಗೀತೆ, ಪಯಣ)

ಗೋಕಾಕರು ಹಡಗನ್ನೇರಿ ಇಂಗ್ಲಂಡಿಗೆ ಪ್ರವಾಸ ಮಾಡುತ್ತಿದ್ದರು. ಈ ಅನುಭವವು ಅವರಿಗೆ ಸಮುದ್ರಗೀತಗಳನ್ನು ಬರೆಯಲ ಪ್ರೇರಣೆ ನೀಡಿತ್ತು. ಮುಂದೆ ಅದು ಪುಸ್ತಕರೂಪದಲ್ಲಿ ಪ್ರಕಟವಾದಾಗ ಕನ್ನಡ ಕಾವ್ಯದಲ್ಲಿ ಅನನ್ಯ ಸ್ಥಾನ ಗಳಿಸಿತು. ಸಮುದ್ರಗೀತಗಳ ಬಗ್ಗೆ ಡಾ| ಜಿ.ಎಸ್.ಶಿವರುದ್ರಪ್ಪನವರು ಹೀಗೆ ಬರೆಯುತ್ತಾರೆ, ಸಮುದ್ರವನ್ನು ಸೆರೆಹಿಡಿದವರುಂಟೇ? ಸಮುದ್ರ ವರ್ಣನೆಯಿಂದಲೇ ಕಾವ್ಯ ಆರಂಭವಾಗಬೇಕೆಂಬ ಪರಂಪರೆಯನ್ನು ಒಪ್ಪಿಕೊಂಡ ನಮ್ಮ ಹಳೆಯ ಕವಿಗಳಲ್ಲಿ ರಾತ್ನಾಕರವರ್ಣಿಯೊಬ್ಬನ ಹೊರತು, ಉಳಿದ ಯಾರೂ ಈ ಮೇಲಿನ ಪ್ರಶ್ನೆಗೆ ಸಮರ್ಪಕವಾದ ಉತ್ತರ ಕೊಡಲಿಲ್ಲವೆಂದೇ ಹೇಳಬೇಕಾಗುತ್ತದೆ. . . .ಆದರೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ. . .ಸಮುದ್ರವನ್ನು ಸೆರೆಹಿಡಿದವರಲ್ಲಿ ಒಬ್ಬರು ಕಾರಂತರು, ಮತ್ತೊಬ್ಬರು ವಿನಾಯಕರು. ಒಬ್ಬರು ಗದ್ಯ ರೂಪದಲ್ಲಿ, ಮತ್ತೊಬ್ಬರು ಪದ್ಯರೂಪದಲ್ಲಿ ಸಮುದ್ರವನ್ನು ಮೊತ್ತ ಮೊದಲಿಗೆ ನೈಜವಾಗಿ, ಪ್ರಾಮಾಣಿಕವಾಗಿ ಸೆರೆಹಿಡಿದು ತೋರಿಸಿದ್ದಾರೆ. (ವಿನಾಯಕ ವಾಙ್ಮಯ, ಪು.117)

ಹೊಸಗನ್ನಡ ಕಾವ್ಯದಲ್ಲಿ ಸ್ವಚ್ಛಂದದ ಬಳಕೆಯನ್ನು ಮೊದಲು ಮಾಡಿದವರು ವಿನಾಯಕರು. ಸಮುದ್ರದ ಸ್ವಾತಂತ್ರ್ಯವನ್ನು ಕಂಡು, ಸ್ಫೂರ್ತಿ ಪಡೆದು, ವಿನಾಯಕರು ಯಾವುದೇ ಪ್ರಯತ್ನವಿಲ್ಲದೆಯೇ ಅನಾಯಸವಾಗಿ ಸ್ವಚ್ಛಂದದಲ್ಲಿ ಛಂದಲ್ಲಿ ಹಾಡಿದರು:

ಸ್ವಚ್ಛಂದ ಛಂದದಲ್ಲಿ
ಜಲಕ್ರೀಡಾವೃತ್ತದಲ್ಲಿ
ಅನುದಿನವು ತೆರೆಗಳು ಹಿಡಿದ ತಾಳಲಯದಲ್ಲಿ
ಗೀತವನೊರೆದೆನೆಂದು ಗೀಳ್ ಮಾಡಬೇಡ!
ಸಮುದ್ರವ ಸೆರೆಹಿಡಿದವರುಂಟೇ?
ಬಾವಿಯ ತೋಡಿ ಮುನ್ನೀರ ಬತ್ತಿಸಬಹುದೇ?
ಅಬ್ಜಶಬ್ದಗಳ ಪ್ರಾರಬ್ಧದಲ್ಲಿ ಸಹ
ಮಹಾಬ್ಧಿಯ ಕಣವೊಂದು ಸೆರೆಸಿಕ್ಕದಯ್ಯಾ!
ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು!
(ಪ್ರತಿಜ್ಞೆ, ಸಮುದ್ರಗೀತಗಳು)

ಗೋಕಾಕರು ಎರಡು ವರ್ಷ ಇಂಗ್ಲಂಡಿನಲ್ಲಿ ಕಳೆದರು. ಅವರ ಪ್ರವಾಸ ಲೇಖನಗಳ ಸಂಗ್ರಹ ಸಮುದ್ರದಾಚೆಯಿಂದ ಪ್ರವಾಸ ಸಾಹಿತ್ಯದಲ್ಲಿಯೆ ಒಂದು ಮೈಲುಗಲ್ಲಿನಂತಿದೆ. ಅವರು ತಮ್ಮ ಅರ್ಧಾಂಗಿ ಶಾರದಾ ಅವರಿಗೆ ಬರೆದ 165 ಪತ್ರಗಳು ಇಲ್ಲಿವೆ. ಹಡಗದ ವರ್ಣನೆ, ಲಂಡನ್ ನಗರದ ವರ್ಣನೆ, ಆಕ್ಸ್‌ಫರ್ಡ್ ಯುನಿವರ್ಸಿಟಿ ಕ್ಯಾಂಪಸ್‌ನ ವರ್ಣನೆ, ಅಲ್ಲಿ ನೋಡಿದ ನಾಟಕಗಳ ವಿವರ, ಅಲ್ಲಿ ಇವರು ಕಂಡ ವ್ಯಕ್ತಿಗಳ ಜೀವನ ಚಿತ್ರಣ, ಅಲ್ಲಿಯ ಸಾಮಾಜಿಕ ಜೀವನ, ಅಲ್ಲಿ ಅನುಭವಿಸಿದ ಏಕಾಕಿತನ ಮತ್ತು ರಾಷ್ಟ್ರಪ್ರೇಮ ಇವುಗಳ ಹೃದಯಂಗಮ ಚಿತ್ರಣ ಇಲ್ಲಿದೆ.

ಇಂಗ್ಲಂಡದಲ್ಲಿ ಕಳೆದ ದಿನಗಳು ದೈವ ಎಂಬ ಪ್ರಬಂಧದಲ್ಲಿ ಸುಂದರವಾಗಿ ಮೂಡಿ ಬಂದಿವೆ. 1938, ಜುಲೈ 4ರಂದು ಅಂತಿಮ ಪರೀಕ್ಷೆ ಮುಗಿದಿತ್ತು. ಅವರ ಬಾಯಿಪರೀಕ್ಷೆಗೆ(ವೈವಾ) ಎರಡು ವಾರ ಅವಕಾಶವಿದ್ದಾಗ ಇಂಗ್ಲಡದ ಸುತ್ತಲಿನ ಪ್ರದೇಶಗಳನ್ನು ನೋಡಲು ಹೋದರು. ಸ್ಕಾಟಲಂಡದ ಔದ್ಯೋಗಿಕ ರಾಜಧಾನಿಯಾದ ಗ್ಲಾಸ್‌ಗೋದಲ್ಲಿ ನಡೆದ ಎಂಪಾಯರ್ ಪ್ರದರ್ಶನ ನೋಡಿ ಎಡಿನ್‌ಬರೂ ತಲುಪಿದಾಗ ಇವರಿಗೆ ಹೊಟ್ಟೇಶೂಲೆ ಶುರುವಾಗಿತ್ತು. ಭಾರತೀಯ ಡಾಕ್ಟರನ ಸಹಾಯದಿಂದ ಅಲ್ಲಿಯ ಅಸ್ಪತ್ರೆ ಸೇರಿದಾಗ ಅದು ಅಪೆಂಡಿಕ್ಸ್ ಎಂದು ಗೊತ್ತಾಯಿತು. ಎಮರ್ಜನ್ಸೀ ಶಸ್ತ್ರಕ್ರಿಯೆಯಾಯಿತು. ಅವರಿಗೆ ವೈವಾ ಪರೀಕ್ಷೆಗೆ ಕೂಡಲು ಸಾಧ್ಯವಾಗಲಿಲ್ಲ. ಒಂದು ವರ್ಷ ಮತ್ತೆ ಇರಬೇಕಾದೀತೆಂಬ ದುರ್ಧರ ಪ್ರಸಂಗ. ವೈವಾ ಪರೀಕ್ಷೆ ಮುಂದು ಹಾಕಲು ವಿನಂತಿಸಿ ಪತ್ರ ಬರೆದದ್ದು, ಅಲ್ಲಿ ಅವರು ಅನುಭವಿಸಿದ ನರಕಯಾತನೆಯ ಮಧ್ಯೆ, ಕಾವೂಡಗಳ ಮಧ್ಯೆ, ಬೆಳ್ಳಿರೇಖೆ ಕಂಡದ್ದು. ಪರೀಕ್ಷರು ಇವರಿಗೆ ಮೌಖಿಕ ಪರೀಕ್ಷೆ ಅನಗತ್ಯವೆಂದು ತೀರ್ಮಾನಿಸಿ, ಇವರ ಅತ್ಯುತ್ತಮ ಉತ್ತರಪತ್ರಿಕೆಗಳನ್ನು ಮೆಚ್ಚಿ ಪ್ರಥಮ ದರ್ಜೆ ನೀಡಿದ್ದರು, ಆಸ್ಪತ್ರೆಗೆ ಪರಿಣಾಮ ತಿಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಎಂಬ ತಂತಿ ಕಳಿಸಿದ್ದರು, ಇವುಗಳ ವರ್ಣನೆ ರೋಮಾಂಚಕಾರಿಯಾಗಿದೆ. ಹದಿನೈದು ದಿನ ವಿಶ್ರಾಂತಿ ಪಡೆದು ಭಾರತಕ್ಕೆ ಮರಳಿ ಬರುವಾಗ ತಮ್ಮ ದೈವವನ್ನು ಕುರಿತು ಬರೆದ ಸಾಲುಗಳು ಮಾರ್ಮಿಕವಾಗಿವೆ:

ಬದುಕಿಸಿದೆ ನೀನೆನ್ನ, ಯಾವ ಬದುಕೇನೆನಗೆ
ನಿನ್ನಾಣತಿಯೆ ನನ್ನ ಜೀವಿತದ ಗುರಿಯು
ನೀನಿತ್ತೆ ಕೀರ್ತಿಯನು; ಹೇಗೆ ಬಳಸುವದೆಂಬ
ಅರಿವನೀವುದು, ಅದುವೆ ಜೀವಿತದ ಝರಿಯು!

ಪೂರಕ ಓದಿಗೆ

ವಿಕೆ ಗೋಕಾಕರ ಒಂದು-ನೂರು ನೆನಪು</a><br><a href=ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ವಿಜೇತರು
ಗೋಕಾಕ್.. ಕನ್ನಡದ ಪೀಕಾಕ್" title="ವಿಕೆ ಗೋಕಾಕರ ಒಂದು-ನೂರು ನೆನಪು
ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ವಿಜೇತರು
ಗೋಕಾಕ್.. ಕನ್ನಡದ ಪೀಕಾಕ್" />ವಿಕೆ ಗೋಕಾಕರ ಒಂದು-ನೂರು ನೆನಪು
ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ವಿಜೇತರು
ಗೋಕಾಕ್.. ಕನ್ನಡದ ಪೀಕಾಕ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X