• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಕೆ ಗೋಕಾಕರ ಒಂದು-ನೂರು ನೆನಪು

By Super
|

ಜ್ಞಾನಪೀಠ ಪ್ರಶಸ್ತಿಯ ಮಾತು ಬಂದಾಗಲೆಲ್ಲ ಬೇಂದ್ರೆ, ಕುವೆಂಪು, ಮಾಸ್ತಿ, ಕಾರಂತ, ಕಾರ್ನಾಡ, ಅನಂತಮೂರ್ತಿ ಹೆಸರು ಪ್ರಸ್ತಾಪವಾಗುವುದು ಲೋಕಾರೂಢಿ. ಕನ್ನಡಕ್ಕೆ ಇನ್ನೂ ಒಂದು ಜ್ಞಾನಪೀಠ ತಂದುಕೊಟ್ಟ ಕವಿ, ವಿಮರ್ಶಕ, ವಿದ್ವಾಂಸರ ಹೆಸರು ವಿನಾಯಕ ಕೃಷ್ಣ ಗೋಕಾಕ. ಅವರ ನೆನೆಯಲು ಕಡೆಯಪಕ್ಷ ಅವರ ಜನ್ಮ ಶತಮಾನೋತ್ಸವವಾದರೂ ನೆಪವಾಗಲಿ ಎಂದು ದಟ್ಸ್ ಕನ್ನಡ ಆಶಿಸುತ್ತದೆ. ವಿನಾಯಕರ ಸ್ಮರಣೆ ಭಾಗ ಒಂದನ್ನು ಒಪ್ಪಿಸಿಕೊಳ್ಳಿ- ಸಂಪಾದಕ.

* ಡಾ|ಜೀವಿ ಕುಲಕರ್ಣಿ, ಮುಂಬೈ

ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿಗಳಲ್ಲಿ ಅಗ್ರಪಂಕ್ತಿಯಲ್ಲಿರುವವರೆಂದರೆ ಕುವೆಂಪು, ಮಾಸ್ತಿ, ಡಿವಿಜಿ, ಗೋವಿಂದ ಪೈ, ಶಿವರಾಮ ಕಾರಂತ, ಬೇಂದ್ರೆ, ಗೋಕಾಕ ಮತ್ತು ಮಧುರಚೆನ್ನರು. ಕನ್ನಡದ ಸಾಂಸ್ಕೃತಿಕ ಪ್ರಮುಖ ಕೇಂದ್ರಗಳಾದ ಮೈಸೂರು, ಮಂಗಳೂರು, ಧಾರವಾಡ ಸೀಮೆಗಳನ್ನು ಪ್ರತಿನಿಧಿಸುವ ಅಷ್ಟದಿಗ್ಗಜಗಳಲ್ಲಿ ಒಬ್ಬರಾದ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ಈ ವರ್ಷ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಬೇಂದ್ರೆಯವರ ಅನಂತರ ನನಗೆ ಅತ್ಯಂತ ಸಮೀಪದವರಾದ ಗುರುಗಳೇ ಗೋಕಾಕರು.

'ವಿನಾಯಕ' ಎಂಬ ಕಾವ್ಯನಾಮದಿಂದ ಖ್ಯಾತರಾದ ಸಮನ್ವಯಾಚಾರ್ಯ ಗೋಕಾಕರು ಕವಿಗಳಾಗಿ, ವಿಮರ್ಶಕರಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ, ಶಿಕ್ಷಣತಜ್ಞರಾಗಿ, ಆಂಗ್ಲಭಾಷೆಯ ಪ್ರಾಧ್ಯಾಪಕರಾಗಿ, ಕನಸಿಗರಾಗಿ, ಆದರ್ಶಜೀವಿಗಳಾಗಿ ತಮ್ಮ ಅಷ್ಟ-ಪೈಲು ವ್ಯಕ್ತಿತ್ವದಿಂದ ಇಪ್ಪತ್ತನೆಯ ಶತಮಾನದ ಹೆಚ್ಚಿನ ಭಾಗ ತಮ್ಮ ಶ್ರೀಮದ್‌ಗಂಭೀರ ವ್ಯಕ್ತಿತ್ವದಿಂದ ಮೆರೆದಿದ್ದಾರೆ; ಕಾಲಪ್ರವಾಹದ ಮರಳದಂಡೆಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಶಾಶ್ವತವಾಗಿ ಮೂಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ಎಂಬ ಊರಲ್ಲಿ ವಾಸಿಸುತ್ತಿದ್ದ ವಿನಾಯಕರಾವ ಎಂಬವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳ ಮೇಲಿನ ಪ್ರಭುತ್ವದಿಂದ ಮಿರಜ ಸಂಸ್ಥಾನಿಕರ ಮೆಚ್ಚುಗೆ ಗಳಿಸಿದ್ದರು. ಗೋಕಾಕದಲ್ಲಿ ಬರಗಾಲದ ಬಾಧೆ ಉಂಟಾದಾಗ ಲಕ್ಷ್ಮೇಶ್ವರಕ್ಕೆ ವಲಸೆ ಬಂದು ಅಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ಇವರು ಗೋಕಾಕದಿಂದ ಬಂದವರೆಂದು ಅವರಿಗೆ ಗೋಕಾಕ ವಕೀಲರೆಂದು ಜನ ಕರೆದರು. ಗೋಕಾಕ ಎಂಬುದು ಅವರ ಅಡ್ಡಹೆಸರು(surname) ಆಯಿತು. ಅವರಿಗೆ ಮಕ್ಕಳಿರಲಿಲ್ಲ. ತಂಗಿ ಭಾಗೀರಥಮ್ಮನ ಮಗ ಕೃಷ್ಣನನ್ನೇ ದತ್ತಕ ಪಡೆದರು. ಕೃಷ್ಣನಿಗೆ ಹದಿನಾರು ವರ್ಷ ಇರುವಾಗಲೇ ಲಕ್ಷ್ಮೇಶ್ವರದ ಪಾಂಡುರಂಗ ಜೋಯಿಸರ ಮಗಳಾದ ಸುಂದರಕ್ಕನೊಂದಿಗೆ ವಿವಾಹ ಮಾಡಿದರು.

ಕೃಷ್ಣ ಮೆಟ್ರಿಕ್ ಪಾಸಾಗುವ ಮೊದಲೇ ದತ್ತಕ ತಂದೆ ಸ್ವರ್ಗಸ್ಥರಾದರು. ಮೆಟ್ರಿಕ್ ಆಗಿರದಿದ್ದರೂ ಸಂಸ್ಥಾನಿಕರ ಕೃಪೆಯಿಂದ ಸನದು ಪಡೆದು ವಕೀಲಿವೃತ್ತಿಯನ್ನು ಕೃಷ್ಣ ಪ್ರಾರಂಭಿಸಿದರು. ಆ ಕಾಲದಲ್ಲಿ ಮಾಸಿಕ ಗಳಿಕೆ 400 ರೂಪಾಯಿ, ಅಂದರೆ ಉತ್ತಮ ಆದಾಯವಿತ್ತು. ಇವರಿಗೆ ಅಧ್ಯಾತ್ಮದಲ್ಲೂ ಆಸಕ್ತಿ ಇತ್ತು. ಸದ್ಗುರು ಬಾಳೇಕುಂದ್ರಿ ಪಂತ ಮಹಾರಾಜರ ಶಿಷ್ಯರಾಗಿದ್ದರು. ಜೋತಿಷ್ಯಶಾಸ್ತ್ರದಲ್ಲಿಯೂ ಗತಿ ಇತ್ತು. ಮುಖನೋಡಿ ಜಾತಕ ಬರೆಯುವ ಕಲೆ ಇವರಿಗೆ ಕರಗತವಾಗಿತ್ತು. ಇದನ್ನು ಪ್ರತ್ಯಕ್ಷ ನೋಡಿದ ಬರೋಡಾದ ದೊರೆ ಸಯಾಜಿರಾವ ಗಾಯಕವಾಡ ಇವರಿಗೆ ಬಹುಮಾನ ನೀಡಿದ್ದರು. ಇವರು ಲಕ್ಷ್ಮೇಶ್ವರದಿಂದ ಬಂದು ಸವಣೂರಲ್ಲಿ ನೆಲೆಸಿದರು, ವಕೀಲಿ ವೃತ್ತಿಯಲ್ಲಿ ಸಫಲರಾದರು.

ಕೃಷ್ಣ-ಸುಂದರಾಬಾಯಿ ದಂಪತಿಗಳಿಗೆ ಆರು ಮಕ್ಕಳು. ಎರಡು ಹೆಣ್ಣುಮಕ್ಕಳ ತರುವಾಯ ಹುಟ್ಟಿದ ಗಂಡು ಮಗುವಿಗೆ ದತ್ತಕ ತಂದೆಯ ಹೆಸರನ್ನೇ ಇಡಲಾಯಿತು. ಅವರೇ ವಿನಾಯಕ ಕೃಷ್ಣ ಗೋಕಾಕರು. ಸವಣೂರಲ್ಲಿ ಜನನ (9-8-1909). ಆ ಕಾಲದಲ್ಲಿ ಸವಣೂರು ಮುಸ್ಲಿಮ ದೊರೆಯ ಚಿಕ್ಕ ಸಂಸ್ಥಾನವಾಗಿತ್ತು. ವಿನಾಯಕರ ತಾಯಿಯ ತಂದೆ ಪಾಂಡುರಂಗ ಜೋಯಿಸರೂ ಸವಣೂರಲ್ಲೇ ಮನೆಮಾಡಿದ್ದರು. ಅವರು ಇಂಗ್ಲಿಷ್ ಶಿಕ್ಷಕರಾಗಿದ್ದರಿಂದ ಮೊಮ್ಮಗನಿಗೆ ಇಂಗ್ಲಿಷ್ ವಿಷಯದಲ್ಲಿ ಚೆನ್ನಾಗಿ ತರಬೇತಿ ನೀಡಿದ್ದರು. ಹನ್ನೊಂದು ವರ್ಷದ ಬಾಲಕ ಇಂಗ್ಲಿಷ್‌ನಲ್ಲಿ ಕಾವ್ಯರಚನೆ ಮಾಡ ತೊಡಗಿದ್ದ. ಸವಣೂರು ನವಾಬನ ಮೇಲೆ ಒಂದು ಪದ್ಯ ಬರೆದಿದ್ದ. ಅದನ್ನು ಆಸ್ಥಾನದಲ್ಲಿ ಓದಿ ಮೆಚ್ಚಿಗೆ ಪಡೆದಿದ್ದ. ತಾನೊಬ್ಬ ಆಸ್ಥಾನ ಕವಿ ಎಂಬ ಹೆಮ್ಮೆ ಉಂಟಾಗಿರಬೇಕು. ಜಾನಪದ ಹಾಡು ಕೇಳಿ ಗೀತ ರಚನೆ ಮಾಡಿ ಹಾಡುವುದು, ಕಥೆ ಕಾದಂಬರಿ ಓದುವುದು, ಅವನ ಹವ್ಯಾಸಗಳಾಗಿದ್ದವು.

ಗೋಕಾಕರಿಗೆ ತಂತ್ರಿ ಎಂಬ ಶಿಕ್ಷಕರು ಇಂಗ್ಲಿಷ್ ಛಂದಸ್ಸು ಹೇಳಿಕೊಟ್ಟರು. ಲಾಂಗ್‌ಫೆಲೊ, ವರ್ಡ್ಸ್‌ವರ್ತ್, ಟೆನಿಸನ್, ಶೆಲ್ಲಿ- ಇವರ ಕಾವ್ಯದಿಂದ ಸ್ಫೂರ್ತಿ ಪಡೆದು, ಮೆಟ್ರಿಕ್ (ಈಗಿನ ಎಸ್.ಎಸ್.ಸಿ) ಕ್ಲಾಸಿಗೆ ಬರುವಾಗಲೇ ಸಾವಿರಾರು ಸಾಲುಗಳ ಕಾವ್ಯ ರಚನೆಯಿಂದ ಇವರ ನೋಟ್‌ಬುಕ್ ತುಂಬಿತ್ತಂತೆ. ಟೆನಿಸನ್ನನ 'ಗಿನೀವಿಯರ್' ಎಂಬ ದೀರ್ಘ ಕಥನಕಾವ್ಯ ಆಗ ಪಠ್ಯವಾಗಿತ್ತು. ಅದನ್ನು ಓದಿ, 'ಲೀಲಾ ಎಂಬ ಕಥನ ಕಾವ್ಯ ರಚಿಸಿದ್ದನು. ಇವರ ಇಂಗ್ಲಿಷ್ ಟೀಚರ್ ತಂತ್ರಿಯವರಿಗೆ ಬೇರೆ ಊರಿಗೆ ವರ್ಗವಾದಾಗ ತಮ್ಮ ಶಿಷ್ಯನಿಗೆ ಅಲ್ಲಿಂದ ಪತ್ರ ಬರೆದಿದ್ದರು, “You will sing sweet songs in the future" ಎಂದು ಹರಸಿದ್ದರು. ಇದನ್ನು ವಿನಾಯಕರು 'ಪತ್ರಪುಷ್ಪ'ವೆಂಬ ಲೇಖನದಲ್ಲಿ ನೆನೆಯುತ್ತಾರೆ. ('ಕಂನಾಡ ಸಾಹಿತ್ಯಜ್ಞರ ಆತ್ಮಕಥನ ಮಿಂಚಿನಬಳ್ಳಿ ಪ್ರಕಾಶನ).

1925ರಲ್ಲಿ ಸವಣೂರು ಮಜೀದ ಹೈಸ್ಕೂಲಿನಿಂದ 29ವಿದ್ಯಾರ್ಥಿಗಳು ಮೆಟ್ರಿಕ್ ಪರೀಕ್ಷೆ ಕಟ್ಟಿದ್ದರು. ನಾಲ್ಕು ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದರು. ಅವರಲ್ಲಿ ವಿನಾಯಕರು ಮೊದಲಿಗರು. ಇವರು ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಧಾರವಾಡದಲ್ಲಿ ಪರಿಚಯಸ್ಥರಾದ ರಾ.ಬಾ.ಅಭ್ಯಂಕರ್ ಎಂಬವರ ಮನೆಯಲ್ಲಿ ಅವರ ಮನೆಯ ಹುಡುಗನಂತೆ ಇದ್ದರು. ವಿದ್ಯಾರ್ಥಿಯಾಗಿರುವಾಗ ಇವರಲ್ಲಿದ್ದ ಸಾಹಿತ್ಯಾಸಕ್ತಿಯು ವಿದ್ಯಾರ್ಥಿ ಮಿತ್ರರ ಗಮನ ಸೆಳೆದಿತ್ತು. ಆಗ ಬೇಂದ್ರೆಯವರು ಧಾರವಾಡದ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಬೇಂದ್ರೆಯವರು ಗೋಕಾಕರಿಗಿಂತ 13 ವರ್ಷ ಹಿರಿಯರಾಗಿದ್ದರು. ಕನ್ನಡ ಇಂಗ್ಲಿಷ್ ಸಂಸ್ಕೃತ ಪಾಂಡಿತ್ಯದಿಂದ, ಕನ್ನಡ ಕಾವ್ಯ ರಚನೆಯಿಂದ, ಬಹುಶ್ರುತತ್ವದಿಂದ, ವಾಕ್‌ಚಾತುರ್ಯದಿಂದ ಬೇಂದ್ರೆ ಹೆಸರು ಧಾರವಾಡದಲ್ಲಿ ಮನೆಮಾತಾಗಿತ್ತು. ಅಭ್ಯಂಕರ್ ಅವರಿಗೆ ಬೇಂದ್ರೆಯವರ ಪರಿಚಯವಿತ್ತು. ಅಭ್ಯಂಕರ್ ಅವರು ಬೇಂದ್ರೆಯವರ ಸುತ್ತಲೂ ಇರುವ ಸಾಹಿತ್ಯಪ್ರೇಮಿ ಮಿತ್ರರ, 'ಗೆಳೆಯರ ಗುಂಪಿ'ನ ಸದಸ್ಯರಾಗಿದ್ದರು. ಗೋಕಾಕರು ತಮ್ಮ ಇಂಗ್ಲಿಷ್ ಪದ್ಯ ಮಿತ್ರರಿಗೆ, ಅಭ್ಯಂಕರ್ ತಿವಾರಿಯವರಿಗೆ ತೋರಿಸಿದಾಗಲೆಲ್ಲ 'ಇದನ್ನು ಬೇಂದ್ರೆಯವರಿಗೆ ತೋರಿಸಬೇಕು' ಎನ್ನುತ್ತಿದ್ದರಂತೆ. ಈ ಬೇಂದ್ರೆ ಯಾರು ಎಂಬ ಕೂತೂಹಲ ಗೋಕಾಕರನ್ನು ಕಾಡತೊಡಗಿತು. ರಸ್ತೆಯಲ್ಲಿ ಬೇಂದ್ರೆಯವರನ್ನು ನೋಡಿದ್ದರು, ಭೆಟ್ಟಿಯಾಗಿರಲಿಲ್ಲ, ಮಾತಾಡಿರಲಿಲ್ಲ.

ಒಂದು ಸುಂದರ ಸಂಜೆ ಅನಿವಾರ್ಯವಾಗಿದ್ದ ಘಟನೆಯೊಂದು ಘಟಿಸಿತು. ಗೋಕಾಕರು ಬೇಂದ್ರೆಯವರನ್ನು ಕಾಣಲು ಮಿತ್ರ ಅಭ್ಯಂಕರ್ ಜೊತೆಗೆ ಬೇಂದ್ರೆಯವರ ಮನೆಗೆ ಬಂದರು. ಗೋಕಾಕರು ತಾವು ರಚಿಸಿದ ಇಂಗ್ಲಿಷ್ ಪದ್ಯಗಳನ್ನು ಬೇಂದ್ರೆಯವರಿಗೆ ಓದಿ ತೋರಿಸಿದರು. ಬೇಂದ್ರೆಯವರು ಶಾಂತವಾಗಿ ಆಲಿಸಿದರು. ನಂತರ ಮೂರು ಗಂಟೆ ಬೇಂದ್ರೆ ಮಾತಾಡಿದರು. ರಾತ್ರಿಯ ಊಟಕ್ಕೆ ತಡವಾಗುತ್ತಿತ್ತು. ಬೇಂದ್ರೆಯವರ ಪತ್ನಿ ಮೂರು ಸಲ ಇಣುಕಿ ನೋಡಿದರು. ಕಾವ್ಯಲೋಕದಲ್ಲಿ ತಲ್ಲೀನರಾದ ಕವಿಗಳಿಗೆ ಭಂಗತರಲು ಮನಸ್ಸಿಲ್ಲದೆ, ಮರಳಿ ಹೋಗಿದ್ದರು. ಬೇಂದ್ರೆಯವರ ಕಲ್ಪನೆಯ ಹಕ್ಕಿ ಅಡುಗೆಯ ಮನೆಯಿಂದ ಹಾರುತ್ತ ನಕ್ಷತ್ರಲೋಕ ಸೇರಿತ್ತು. ಅವರ ತಾತ್ವಕ ಮಾತಿನ ಪ್ರವಾಹದಲ್ಲಿ ಗೋಕಾಕರ ಮನಸ್ಸು ಬಂಧಿತವಾಗಿತ್ತು. ಈ ಸಂದರ್ಭವನ್ನು ನೆನೆಯುತ್ತ, 'ಬೇಂದ್ರೆಯವರ ಮನೆಯಿಂದ ಎದ್ದೆ, ಆಗ ನಾನು ಬೇರೆ ವ್ಯಕ್ತಿಯಾಗಿದ್ದೆ' ಎಂದು ಗೋಕಾಕರು ಬರೆಯುತ್ತಾರೆ.

ಬೇಂದ್ರೆಯವರನ್ನು ತಮ್ಮ ಕಾವ್ಯಗುರು ಎಂದು ಗೋಕಾಕರು ಸ್ವೀಕರಿಸಿದರು. ಬೇಂದ್ರೆಯವರ ಭೆಟ್ಟಿ ಗೋಕಾಕರ ದೈವವನ್ನೇ ಬದಲಿಸಿತು 'ನನ್ನ ಆತ್ಮಕ್ಕೆ ತೃಪ್ತಿ ನೀಡುವ ಪದ್ಯ ಬರೆಯಲು ಪ್ರಾರಂಭಿಸಿದ್ದು ಬೇಂದ್ರೆಯವರ ಭೇಟಿಯ ನಂತರವೇ' ಎಂದು ಗೋಕಾಕರು ಬರೆಯುತ್ತಾರೆ. 'ತಾವು ಭಯಪಡುವ ಒಬ್ಬ ವಿಮರ್ಶಕ ಅಂದರೆ ಅವರು ಬೇಂದ್ರೆ' ಎಂದೂ ಬರೆಯುತ್ತಾರೆ. ಒಂದು ವೇಳೆ ಗೋಕಾಕರು ಬೇಂದ್ರೆಯವರನ್ನು ಭೇಟಿಯಾಗಿರದಿದ್ದರೆ, ಅವರ ಪ್ರಭಾವದ ವಲಯಕ್ಕೆ ಸಿಗದಿದ್ದರೆ, ಅವರು ಇಂಗ್ಲಿಷಿನಲ್ಲಿ ಮಾತ್ರ ಬರೆಯುತ್ತಿದ್ದರು. ಗೋಕಾಕರ ಮಾತಿನಲ್ಲಿ ಹೇಳುವುದಾದರೆ, “ಅವರು(ಬೇಂದ್ರೆ) ನನಗೆ ನನ್ನ ಮಾತೃಭಾಷೆಯಲ್ಲಿ ಅಭ್ಯಾಸಮಾಡಿ ಬರೆಯಲು ಪ್ರೇರೇಪಿಸಿದರು. ಅವರಿಲ್ಲದಿದ್ದರೆ ನನ್ನ ಕಾವ್ಯವಾಹಿನಿ ಇಂಡೊ-ಇಂಗ್ಲಿಷ್ ಕಾವ್ಯದ ಮರುಭೂಮಿಯಲ್ಲಿ ನಶಿಸಿಹೋಗುತ್ತಿತ್ತು. 'He(Bendre) made me study and write in my mother-tongue. I am sure that, but for him, my muse would have perished in the deserts of Indo-English verse.' (Bendre- Poet and Seer by V.K.Gokak).

'ಗೆಳೆಯರಗುಂಪು ಉತ್ತರ ಕರ್ಣಾಟಕದ ಅತಿ ಮಹತ್ವದ ಸಾಹಿತ್ಯಿಕ ಬಳಗವಾಗಿ ಕನ್ನಡಿಗರ ಗಮನ ಸೆಳೆಯಿತು. ವಿಜಾಪುರ ಸಾಹಿತ್ಯ ಸಮ್ಮೇಲನದಲ್ಲಿ ಅದಕ್ಕೆ ಮನ್ನಣೆ ದೊರೆಯಿತು. 'ಸ್ವಧರ್ಮ' ಪತ್ರಿಕೆಯನ್ನು ಗುಂಪು ಎರಡು ವರ್ಷ ನಡೆಸಿತು. ನಾಡಿನ ಅಗ್ರಮಾನ್ಯವಾದ ಸಾಹಿತ್ಯಿಕ ಪತ್ರಿಕೆಯಾದ 'ಜಯಕರ್ನಾಟಕ'ವನ್ನು ಸಂಪಾದಿಸುವ ಹೊಣೆಯನ್ನು ಗುಂಪು ವಹಿಸಿಕೊಂಡಿತ್ತು. ಪುಸ್ತಕಗಳ ಪ್ರಕಾಶನಕ್ಕಾಗಿ ಗ್ರಂಥಮಾಲೆಯನ್ನೂ ಪ್ರಾರಂಭಿಸಿತು. ನಾಡಹಬ್ಬವನ್ನು ಅಚರಣೆಗೆ ತಂದಿತಲ್ಲದೇ ಪಂಪೋತ್ಸವ, ವಿದ್ಯಾರಣ್ಯೋತ್ಸವ, ಶಾಂತಕವಿ ಪುಣ್ಯತಿಥಿ ಮೊದಲಾದ ದಿನಗಳ ಆಚರಣೆ ಪ್ರಾರಂಭಿಸಿತು. ಗುಂಪಿನ ಕೇಂದ್ರ ಧರವಾಡವಾಗಿದ್ದರೂ ಇತರ ಪ್ರದೇಶಗಳಿಂದ ಸಾಹಿತಿ ಮಿತ್ರರು ಬಂದು ಸೇರತೊಡಗಿದರು. ಶ್ರೀಧರ್ ಖಾನೋಳಕರ್, ಹಲಸಂಗಿ ಚೆನ್ನಮಲ್ಲಪ್ಪ (ಮಧುರಚೆನ್ನ), ಬೆಟಗೇರಿ ಕೃಷ್ಣಶರ್ಮ(ಆನಂದಕಂದ), ಸಿದ್ದವನಹಳ್ಳಿ ಕೃಷ್ಣಶರ್ಮ, ರಂ.ಶ್ರೀ.ಮುಗಳಿ(ರಸಿಕರಂಗ), ಜಿ.ಬಿ.ಜೋಶಿ(ಜಡಭರತ), ಶಂ.ಬಾ ಜೋಶಿ, ವಿನೀತ ರಾಮಚಂದ್ರರಾವ ಮುಂತಾದವರು ಸದಸ್ಯರಾಗಿದ್ದರು.

ಮಿತ್ರರಿಗೆ ಮಹರ್ಷಿ ಅರವಿಂದರ 'ಆರ್ಯಾ'ಪತ್ರಿಕೆಯನ್ನು ಬೇಂದ್ರೆಯವರು ಓದಿತೋರಿಸುತ್ತಿದ್ದರು. ರವೀಂದ್ರರ ಸಾಹಿತ್ಯದಿಂದ ಮಿತ್ರರೆಲ್ಲ ಪ್ರಭಾವಿತರಾಗಿದ್ದರು. ಗುಂಪಿನ ಸದಸ್ಯರಾಗಿದ್ದ, ಬೇಂದ್ರೆಯವರ ಶಿಷ್ಯರಾಗಿದ್ದ ನಾಲ್ವರು (ಪ್ರಹ್ಲಾದ ನರೇಗಲ್. ನಾರಾಯಣ ಸಂಗಮ, ಕೃಷ್ಣಕುಮಾರ ಕಲ್ಲೂರ, ಶೇಷಗಿರಿ ಕುಲಕರ್ಣಿ) ಬಂಗಾಲಿಭಾಷೆ ಕಲಿತರು, ಕವಿ ರವೀಂದ್ರರ ಶಾಂತಿನಿಕೇತನಕ್ಕೆ ಹೋದರು, ವಿಶ್ವಭಾರತಿಯ ವಿದ್ಯಾರ್ಥಿಗಳಾಗಿ ಪದವಿ ಗಳಿಸಿ ಕರ್ಣಾಟಕಕ್ಕೆ ಹಿಂದಿರುಗಿದರು. ಗೆಳೆಯರ ಗುಂಪಿನ ವಾತಾವರಣದಲ್ಲಿ ಕನ್ನಡ ಕವಿಗಳಾಗಿ, ವಿಮರ್ಶಕರಾಗಿ ಗೋಕಾಕರು ಅರಳಿದರು. ಗೆಳೆಯರ ಗುಂಪಿನ ತ್ರಿಮೂರ್ತಿಗಳೆಂದರೆ ಬೇಂದ್ರೆ-ಗೋಕಾಕ-ಮಧುರಚೆನ್ನರು. ಗೋಕಾಕರು ತಮ್ಮ 'ಬಾಳದೇಗುಲ'ದಲ್ಲಿ ಎಂಬ ಕವನ ಸಂಗ್ರಹದಲ್ಲಿ 'ಕವಿ ಅನುಭಾವಿ' ಎಂಬ ಪದ್ಯವನ್ನು ಮಧುರಚೆನ್ನರ ಬಗ್ಗೆ ಬರೆದಿದ್ದಾರೆ. ಅಲ್ಲಿಯ ಈ ನುಡಿ ತ್ರಿಮೂರ್ತಿಗಳನ್ನು ಉಲ್ಲೇಖಿಸುತ್ತಿದೆ.

ನಮ್ಮ ಕೆಳೆ ತ್ರಿಮೂರ್ತಿಯಂತೆ

ಮಧ್ಯಮುಖವೆ ನಮ್ಮ ಪ್ರಾಣ

ಎಡಬಲದಲಿ ನನ್ನ ನಿನ್ನ ವಾಣಿ ನುಡಿದವು

ನನ್ನ ಕೈಯಲಿತ್ತು ಕೊಳಲು

ನಿನ್ನ ಕರದಿ ನಾಗಸ್ವರವು

ನಡುಗೈಗಳು ಶಂಖ ಚಕ್ರಗಳನು ಹಿಡಿದವು.

ಗೋಕಾಕರು ಬಿ.ಎ.ಪರೀಕ್ಷೆಯಲ್ಲಿ ಮುಂಬೈ ವಿಶ್ವವಿದ್ಯಾಲಕ್ಕೆ ಪ್ರಥಮ ದರ್ಜೆಯಲ್ಲಿ ಪ್ರಥಮಸ್ಥಾನ ಪಡೆದು ವಿಕ್ರಮ ಸ್ಥಾಪಿಸಿದರು. ದಕ್ಷಿಣಾ ಫೆಲೊ ಆದರು. ಗೋಕಾಕರು ಆಗ ಉತ್ತಮ ಅಭ್ಯಾಸಕ್ಕಾಗಿ ಹಾಸ್ಟೆಲ್‌ನಲ್ಲಿ ಇರುತ್ತಿದ್ದರು. ಅವರಿಗೆ ಆಟಪಾಠಗಳಿಗಿಂತ ಅಭ್ಯಾಸ ಮಾಡುವುದರಲ್ಲೇ ಹೆಚ್ಚಿನ ಆಸಕ್ತಿ ಇತ್ತು. ಜ್ಯೂನಿಯರ್ ಎಂ.ಎ.ಕ್ಲಾಸಿನಲ್ಲಿರುವಾಗಲೇ ಇವರಿಗೆ ಮದುವೆಯ ಪ್ರಸ್ತಾಪ ಬಂತು. ಅವರ ತಾಯಿಗೆ ಬಹಳ ಕಾಯಿಲೆಯಾಗಿತ್ತು. ಮಗನ ಮದುವೆ ನೋಡಿ ಕೊನೆಯ ಉಸಿರು ಎಳೆಯುವುದಾಗಿ ತಾಯಿ ಹಟ ಹಿಡಿದದ್ದರಿಂದ ತಾಯಿಯ ಒತ್ತಾಯಕ್ಕೆ ಮಣಿದು ಇವರು ಮದುವೆಗೆ ಒಪ್ಪಬೇಕಾಯ್ತು.

ಧಾರವಾಡದ ಪ್ರಸಿದ್ಧ ವಕೀಲರಾದ ಬೆಟದೂರ ವಕೀಲರ ಮಗಳಾದ ಶಾರದಾ ಅವರ ಜಾತಕ ನೋಡಿ ಇವರ ತಂದೆ ಮದುವೆಗೆ ಒಪ್ಪಿದರು. ಇವರಿಗೆ ಆಗ 19 ವರ್ಷ, ಶಾರದಾ ಅವರಿಗೆ 13. ಮದುವೆಯಲ್ಲಿ ಗಂಡನ ಹೆಸರು ಹೇಳುವುದು ಒಂದು ಸರಸ ಕ್ರೀಡೆಯಾಗಿದ್ದ ಕಾಲವದು. ಆ ಕಾಲದಲ್ಲಿ ಧಾರವಾಡದಲ್ಲಿ ಮರಾಠಿ ಪ್ರಭಾವ ಬಹಳ ಇತ್ತು. ಶಾರದಾ ತನ್ನ ಗಂಡನ ಹೆಸರು ಹೇಳುವಾಗ ಮರಾಠಿಯಲ್ಲೆ ಒಗಟು ಹಾಕಿದ್ದರು. ವಿನಾಯಕರ ಸರತಿ ಬಂತು. ಅವರೂ ಒಗಟಹಾಕಿ ಹೆಂಡತಿಯ ಹೆಸರು ಹೇಳಬೇಕಾಗಿತ್ತು. ಅವರ ಕನ್ನಡಾಭಿಮಾನ ಜಾಗ್ರತಗೊಂಡಿತ್ತು. ಅವರು ಹಾಕಿದ ಒಗಟು ಹೀಗಿತ್ತು 'ಆ ಕ್ವಾಟಿ, ಈ ಕ್ವಾಟಿ, ಕರ್ನಾಟಕದಾಗಿನ ಬಾಗಿಲ ಕ್ವಾಟಿ (ಬಾಗಲಕೋಟೆ), ಇನ್ನೊಮ್ಮೆ ಮರಾಠಿ ಒಗಟ ಹಾಕಿದರೆ ಹಿಂಡತೇನಿ ಶಾರದಾನ ಸ್ವಾಟಿ(ಗಲ್ಲ)'. ಧಾರವಾಡದಲ್ಲಿ ಆ ಕಾಲದಲ್ಲಿ ಗೋಕಾಕರ ಕನ್ನಡಾಭಿಮಾನ ಮನೆಮಾತಾಗಿತ್ತು.

ಗೋಕಾಕ್.. ಕನ್ನಡದ ಪೀಕಾಕ್

English summary
GnanaPheeta Award Winning Kannada poet, scholor Dr.Vinayaka Krishna Gokak Centenary ( 1909-2009). A peep into the life and times of an outstanding student of Kannada, English Literature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more