ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೀತೆಯಲ್ಲಿ ಆರೋಗ್ಯ ಸೂತ್ರಗಳು (ಭಾಗ 2)

By Staff
|
Google Oneindia Kannada News

Health tips in Bhagavad Gita
ಮನ ಒಂದು ದೈತ್ಯ ಇದ್ದಹಾಗೆ. ಅದಕ್ಕೆ ಸದಾ ಕೆಲಸ ಇರಬೇಕು. ಇಲ್ಲದಿದ್ದರೆ ಅದು ನಿಮ್ಮ ತಲೆ ತಿನ್ನುತ್ತದೆ. ಎಲ್ಲ ರೋಗಗಳಿಗೂ ಮನವೇ ಕಾರಣವಾಗುತ್ತದೆ. ಕೈಯಲ್ಲಿ ಒಂದು ಜಪಮಾಲೆ ಕೊಡಬೇಕು. ಕೆಲಸವಿಲ್ಲದೇ ಇದ್ದಾಗ ಜಪಮಾಲೆ ಎಣಿಸುತ್ತಿರಬೇಕು. ಕೆಲಸ ಬಂದಾಗ ಜಪ ಬದಿಗಿಟ್ಟು ಕೆಲಸ ಮಾಡಬೇಕು.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ನಮ್ಮ ಜೀವನದಲ್ಲಿಯ ಅಧ್ಯಾತ್ಮಿಕ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಮೂಲ ಕಾರಣ ನಮ್ಮ ಮನಸ್ಸು. ನಾವು ಸಮಾನತೆಯ ಬಗ್ಗೆ ಮಾತಾಡುತ್ತೇವೆ, ಆದರೆ ನಾವು ಇತರರನ್ನು ಸಮಾನರಾಗಿ ಕಾಣುವುದೇ ಇಲ್ಲ. ಆದ್ದರಿಂದ ಶ್ರೀ ಕೃಷ್ಣ ಹೇಳುತ್ತಾನೆ, ಸಮತ್ವಂ ಯೋಗಮುಚ್ಯತೇ (2-48) ಎಂದು. ಯೋಗಿಯಾದವನೇ ಎಲ್ಲವನ್ನೂ ಸಮದೃಷ್ಟಿಯಿಂದ ನೋಡುತ್ತಾನೆ. ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ (6-29). ಅರ್ಜುನನಿಗೆ ಒಂದು ಪ್ರಶ್ನೆ ಕಾಡುತ್ತದೆ. ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣವಾದ ಮನಸ್ಸನ್ನು ಹಿಡಿತದಲ್ಲಿಡುವ ಉಪಾಯವೇನು? ಶ್ರೀಕೃಷ್ಣನಿಗೆ ಪ್ರಶ್ನಿಸುತ್ತಾನೆ.

ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಮ್ |
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್||-(6-34)
(ಹೇ ಕೃಷ್ಣ, ಮನಸ್ಸು ಚಂಚಲವಾದದ್ದು. ದೇಹ ಇಂದ್ರಿಯಗಳಿಗೆ ಇಚ್ಛೆಯನ್ನು ಹುಟ್ಟಿಸುವ ಮೂಲಕ ಕ್ಷೋಭೆಯನ್ನು ಉಂಟುಮಾಡುತ್ತದೆ. ವಿವೇಕದಿಂದಲೂ ಕೂಡ ಜಯಿಸಲು ಅಶಕ್ಯವಾದದ್ದು, ದುರ್ವಿಷಯಗಳಲ್ಲಿ ಆಸಕ್ತವಾದದ್ದು ಎನ್ನಿಸುತ್ತಿದೆ. ಇದು ಗಾಳಿಯನ್ನು ಬಟ್ಟೆಯಲ್ಲಿ ಅಥವಾ ಕೊಡದಲ್ಲಿ ತುಂಬಿ ಕಟ್ಟಲು ಯತ್ನಿಸಿದಂತೆ ಅಸಾಧ್ಯ ಎಂದು ನನ್ನ ಅಭಿಪ್ರಾಯ.)

ಈ ಪ್ರಶ್ನೆಗೆ ಶ್ರೀ ಕೃಷ್ಣ ಅಷ್ಟೇ ಮಾರ್ಮಿಕ ಉತ್ತರ ಕೊಡುತ್ತಾನೆ.
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್|
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ|| -(6-35)
(ಕುಂತೀ ಪುತ್ರನಾದ ಮಹಾ ಬಲಶಾಲಿಯಾದ ಅರ್ಜುನನೇ, ಮನಸ್ಸು ಚಂಚಲ ಎಂಬುವುದರಲ್ಲಿ ಸಂಶಯವಿಲ್ಲ. ಅದನ್ನು ಸ್ವಾಧೀನಪಡಿಸಿಕೊಳ್ಳುವುದು ಅತ್ಯಂತ ಕಷ್ಟಕರವಾದುದು. ಆದರೆ ಕ್ರಮಪ್ರಾಪ್ತವಾದ ಅಭ್ಯಾಸದಿಂದ, ಮತ್ತು ವೈರಾಗ್ಯದಿಂದ (ಇಂದ್ರಿಯಾದಿಗಳ ಜಯಸಾಧಿಸಲು ವಿಷಯಾದಿಗಳ ನಿವೃತ್ತಿಯಿಂದ) ಮನವನ್ನು ಗೆಲ್ಲಲು ಸಾಧ್ಯ.)

ಪತಂಜಲಿ ಮಹರ್ಷಿಗಳು ಕೂಡ ಇದೇ ಮಾತನ್ನು ಪುನರುಚ್ಚರಿಸುತ್ತಾರೆ. ಮನಸ್ಸನ್ನು ಅಭ್ಯಾಸ ಹಾಗೂ ವೈರಾಗ್ಯಗಳಿಂದ ನಿರೋಧಿಸಬಹುದು ಎನ್ನುತ್ತಾರೆ. (ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ- ಯೋಗಸೂತ್ರ: 1-2). ಟಿಪ್ಪಣಿಕಾರರು ಈ ಸೂತ್ರವನ್ನು ವಿವರವಾಗಿ ವಿಶ್ಲೇಷಿಸುತ್ತಾರೆ.

ಮೇಲಿನ ಎರಡು ಸೂತ್ರಪ್ರಾಯವಾದ ಶ್ಲೋಕಗಳು ನನ್ನ ಮೇಲೆ ಬಹಳ ಪರಿಣಾಮವನ್ನುಂಟು ಮಾಡಿದ ಸಂದರ್ಭ ನೆನಪಾಗುತ್ತದೆ. ಒಂದು ದಶಕದ ಹಿಂದೆ ರಾಮೇಶ್ವರ ಪ್ರಯಾಣಕ್ಕೆ ಹೊರಟಾಗ ಮಾರ್ಗದಲ್ಲಿ (ಕುಂಭಕೋಣಂದಲ್ಲಿ) ಶ್ರೀ ವಾದಿರಾಜಾಚಾರ್ಯ ಸುಬ್ಬಣ್ಣಾಚಾರ್ಯ ಪಂಚಮುಖಿಯವರ ಭೆಟ್ಟಿಯಾಯ್ತು. ಅವರು ಭವದ್ಗೀತೆ ನಿತ್ಯಪಾಠ ಎಂಬ ಮೂರು ಭಾಗಗಳ ಪುಸ್ತಕ ಬರೆದಿದ್ದಾರೆ. (ಈಗ ಅವರು ಸಂನ್ಯಾಸಾಶ್ರಮ ಸ್ವೀಕರಿಸಿ ಪ್ರಯಾಗದಲ್ಲಿ ಪಾಠಪ್ರವಚನದಲ್ಲಿ ತೊಡಗಿದ್ದಾರೆ.) ಆರನೆಯ ಅಧ್ಯಾಯದಲ್ಲಿ ಬರುವ ಮೇಲಿನ ಎರಡು ಶ್ಲೋಕಗಳನ್ನು ಅವರೊಡನೆ ಚರ್ಚಿಸಿದೆ. ಆಗ ಅವರು ಒಂದು ಕತೆಯನ್ನು ನನಗೆ ಹೇಳಿದರು.

ಒಬ್ಬ ಧನಿಕ ಜಮೀನುದಾರನಿದ್ದ. ಅವನ ಹೊಲಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೊರತೆ ಇತ್ತು. ಕೆಲಸದವರು ನಿಯಮಿತವಾಗಿ ಕೆಲಸ ಮಾಡುತ್ತಿರಲಿಲ್ಲ. ಅವನು ಶಿವನ ಉಪಾಸಕನಾಗಿದ್ದ. ಒಳ್ಳೆಯ ಕೆಲಸಗಾರರನ್ನು ಕಳಿಸಲು ದೇವರಲ್ಲಿ ಮೊರೆಯಿಟ್ಟ. ಸ್ವಪ್ನದಲ್ಲಿ ಶಿವನು ಪ್ರತ್ಯಕ್ಷನಾದ. 'ನಾನು ಭೂತಗಣದಲ್ಲಿ ಒಬ್ಬನನ್ನು ಕಳಿಸುವೆ. ನಿನ್ನ ಎಲ್ಲ ಕೆಲಸಗಳನ್ನು ಅವನು ಮಾಡುವನು. ಆದರೆ ಅವನಿಗೆ ಯಾವಾಗಲೂ ಕೆಲಸ ಕೊಡಬೇಕು. ಕೆಲಸವಿಲ್ಲದಿದ್ದರೆ ಅವನು ನಿನ್ನ ಜೀವತಿನ್ನುತ್ತಾನೆ.' ಎಂದು ಹೇಳಿದ. ತನ್ನ ಹೊಲದಲ್ಲಿ ಸಾಕಷ್ಟು ಕೆಲಸ ಇದ್ದುದರಿಂದ ಆ ಪ್ರಸಂಗ ಬರಲಿಕ್ಕಿಲ್ಲವೆಂದು ಧನಿಕ ಒಪ್ಪುತ್ತಾನೆ. ಶಿವನ ಭೂತ ದೈತ್ಯಶಕ್ತಿಯುಳ್ಳವ. ಹಲವಾರು ಜನರ ಕೆಲಸ ಒಬ್ಬನೇ ಮಾಡುತ್ತಾನೆ. ಹೊಲ ಹರಗುತ್ತಾನೆ, ನೀರು ತರುತ್ತಾನೆ, ಎಲ್ಲ ಕೆಲಸಗಳನ್ನು ಮುಗಿಸಿಬಿಡುತ್ತಾನೆ. ಒಳ್ಳೆಯ ಕೆಲಸಗಾರ ದೊರೆತ ಎಂಬ ಸುಖ ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ. ಕೆಲಸವಿಲ್ಲದ ಭೂತ ಯಜಮಾನನಿಗೆ ತಲೆಶೂಲೆಯಾಗುತ್ತಾನೆ. ಯಜಮಾನನಿಗೆ ಬೇರೆ ಯಾವ ಕೆಲಸ ಮಾಡಲು ಬಿಡದೆ, ಏನು ಮಾಡಲಿ ಎನ್ನುತ್ತ ತಲೆತಿನ್ನುತ್ತಾನೆ. ಅವನ ಕಾಟದಿಂದ ಬೇಸತ್ತು ಮತ್ತೆ ಭಕ್ತ ಶಿವನಿಗೆ ಮೊರೆಹೋಗುತ್ತಾನೆ. ಶಿವ ಮತ್ತೆ ಸ್ವಪ್ನದಲ್ಲಿ ಪ್ರತ್ಯಕ್ಷನಾಗುತ್ತಾನೆ. ತನ್ನ ಗೋಳು ಭಕ್ತ ತೋಡಿಕೊಳ್ಳುತ್ತಾನೆ. ಶಿವ ಹೇಳುತ್ತಾನೆ, 'ಭೂತನನ್ನು ದುಡಿಸಿಕೊಳ್ಳುವ ಕಲೆ ನಿನಗೆ ಗೊತ್ತಿಲ್ಲವೇ. ಅವನಿಗೆ ಯಾವಾಗಲೂ ಮುಗಿಯದಂತಹ ಕೆಲಸ ಕೊಡು' ಎಂದು. ಎಂಥ ಕೆಲಸ ಕೊಡಲಿ ಪ್ರಭು ಎಂದು ಕೇಳಿದಾಗ ಶಿವ ಹೇಳುತ್ತಾನೆ. 'ನಿನ್ನ ಮನೆಯ ಮುಂದೆ ದೀಪಸ್ಥಂಭ ಇದೆಯಲ್ಲ, ಅದನ್ನು ಇಡೀದಿನ ಸುತ್ತಲು ಹೇಳು. ಎಷ್ಟು ಸಲ ಸುತ್ತಿದ ಎಂಬ ಬಗ್ಗೆ ಲೆಕ್ಕ ಇಡಲು ಹೇಳು. ಅವನು ಇಡೀ ದಿನ ಸುತ್ತುತ್ತಿರಲಿ. ನಿನಗೆ ಬೇರೆ ಕೆಲಸ ಹೇಳುವ ಮನಸ್ಸಾದಾಗ, ಅವನನ್ನು ನಿಲ್ಲಿಸು, ಆ ಕೆಲಸ ಹೇಳು, ಅದು ಮುಗಿದ ಮೇಲೆ ಮತ್ತೆ ಕಂಭವನ್ನು ಸುತ್ತಲು ಹೇಳು. ಧನಿಕನ ಸಮಸ್ಯೆ ಬಗೆಹರಿದು ಸುಖಿಯಾಗಿ ಬಾಳುತ್ತಾನೆ.

ಈ ಕತೆಯ ನೀತಿಪಾಠ ಏನೆಂದರೆ, ಮನ ಒಂದು ದೈತ್ಯ ಇದ್ದಹಾಗೆ. ಅದಕ್ಕೆ ಸದಾ ಕೆಲಸ ಇರಬೇಕು. ಇಲ್ಲದಿದ್ದರೆ ಅದು ನಿಮ್ಮ ತಲೆ ತಿನ್ನುತ್ತದೆ. ಎಲ್ಲ ರೋಗಗಳಿಗೂ ಮನವೇ ಕಾರಣವಾಗುತ್ತದೆ. ಕೈಯಲ್ಲಿ ಒಂದು ಜಪಮಾಲೆ ಕೊಡಬೇಕು. ಕೆಲಸವಿಲ್ಲದೇ ಇದ್ದಾಗ ಜಪಮಾಲೆ ಎಣಿಸುತ್ತಿರಬೇಕು. ಕೆಲಸ ಬಂದಾಗ ಜಪ ಬದಿಗಿಟ್ಟು ಕೆಲಸ ಮಾಡಬೇಕು.

ಈ ಕಥೆ ನನಗೆ ಬಹಳ ಸೇರಿತು. ನಾನು ಒಂದು ಸತ್ಯ ಕಥೆಯನ್ನು ಪಂಚಮುಖಿಯವರಿಗೆ ಹೇಳಿದೆ. ಅದನ್ನಿಲ್ಲಿ ಹೇಳುವುದು ಪ್ರಸ್ತುತವೆನಿಸುತ್ತಿದೆ.

"ನಮ್ಮ ಕಾಲೇಜಿನ ಪ್ರಿನ್ಸಿಪಾಲ ಗುಜರಾತಿ ಜನ. ಅವರ ಹೆಂಡತಿಗೆ ವಿಚಿತ್ರವಾದ ಕಾಯಿಲೆ ಬಂದಿತ್ತು. ಹಸಿವೆ ಆಗುತ್ತಿರಲಿಲ್ಲ. ಮತ್ತೆ ನಿದ್ರೆಯೂ ಬರುತ್ತಿರಲಿಲ್ಲ. ಎಲ್ಲ ಡಾಕ್ಟರರು ಸೋತುಹೋದರು. ಬಾಂಬೇ ಹಾಸ್ಪಿಟಲ್‌ನಲ್ಲಿ ಎಲ್ಲ ಬಗೆಯ ಟೆಸ್ಟ್ ಮಾಡಿಸಿದರು. ಯಾವುದೇ ದೋಷ ಕಾಣಲಿಲ್ಲ. ಏನೂ ತಿಳಿಯದಾಗ ಅಲರ್ಜಿ ಎಂದು ಹಣೆಚೀಟಿ ಅಂಟಿಸುವುದು ವೈದ್ಯವಿಜ್ಞಾನದ ಅಜ್ಞಾನದ ಒಂದು ಮುಖ. 40-50 ಸಾವಿರ ಖರ್ಚಾಯಿತು, ಯಾವ ಕಾಯಿಲೆ ಎಂಬುದು ಗೊತ್ತಾಗಲಿಲ್ಲ. ಒಮ್ಮೆ ಗುಜರಾತದಿಂದ ಒಬ್ಬ ಯತಿವರೇಣ್ಯರು ಇವರ ಮನೆಗೆ ಬಂದಿದ್ದರು. ಮನೆಯಲ್ಲಿ ಯತಿಗಳ ಪಾದಪೂಜೆಯಾಯಿತು. ಹೆಂಡತಿಯ ಕಾಯಿಲೆಯ ಬಗ್ಗೆ ಹೇಳಿದರು. ಯತಿಗಳು ಅವಳಿಗೆ ಒಂದು ಮಂತ್ರೋಪದೇಶ ಮಾಡಿದರು. ಕೈಯಲ್ಲಿ ಜಪಮಾಲೆ ಕೊಟ್ಟು ಎಣಿಸಲು ಹೇಳಿದರು. ಒಂದೆರಡು ವಾರಗಳಲ್ಲಿ ಕಾಯಿಲೆ ಗುಣಮುಖವಾಗಿತ್ತು."

ಈ ಕತೆಯನ್ನು ಹೇಳಿದ ಮೇಲೆ ನಾನು ಪಂಚಮುಖಿಯವರಿಗೆ ಹೇಳಿದೆ, "ಈಗ ನನಗೆ ನೀವು ಹೇಳಿದ ಕತೆಯ ಅರ್ಥವಾಗುತ್ತಿದೆ. ಜಪದಿಂದ ಆ ಮಹಿಳೆಯ ಮನದ ಕಾಯಿಲೆಗಳಿಗೆ ಉಪಶಮನ ದೊರೆತಿತ್ತು. ಜಪಮಾಲೆ ಹಿಡಿದಾಗ ನಮ್ಮ ಹೆಬ್ಬೆರಳಿನ ಜೊತೆ ತರ್ಜನೀಯ ಮತ್ತು ಮಧ್ಯಮ ಬೆರಳಿನ ಘರ್ಷಣೆಯಾಗುತ್ತದೆ. ಅದು ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ತಲೆಯಲ್ಲಿ ಸುಳಿಯುವ ಋಣಾತ್ಮಕ ವಿಚಾರಗಳು ಬದಲಾಗಿ ಧನಾತ್ಮಕ ವಿಚಾರಗಳು ಸುಳಿಯತೊಡಗುತ್ತವೆ. ಇದೂ ಒಂದು ರೀತಿಯ ಮುದ್ರ್ರಾವಿಜ್ಞಾನದಂತೆ ಕೆಲಸಮಾಡಿರಬೇಕು ಎಂದೆನಿಸುತ್ತದೆ ಎಂದು.

ಜಪ, ತಪ, ಅನುಷ್ಠಾನ, ಮಂತ್ರೋಚ್ಚಾರಣ, ಪಾರಾಯಣದಿಂದ ಕೂಡ ಕಾಯಿಲೆಗಳು ವಾಸಿಯಾಗುತ್ತವೆ. ಈ ದಿಶೆಯಲ್ಲಿ ಅನುಸಂಧಾನ, ಶೋಧ ನಡೆಯಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X