ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮದ್ ಭಗವದ್ಗೀತೆಯಲ್ಲಿ ಆರೋಗ್ಯ ಸೂತ್ರಗಳು

By Staff
|
Google Oneindia Kannada News

Karma yoga and dhyna yoga in Bhagavad Gita
ಭಗವದ್ಗೀತೆಯಲ್ಲಿ ಬರುವ ಹದಿನೆಂಟು ಯೋಗಶಾಸ್ತ್ರಗಳಲ್ಲಿ ಆರೋಗ್ಯ ಕಾಪಾಡಲು ಸೂತ್ರಗಳನ್ನು ಅಳವಡಿಸಲಾಗಿದೆ. ಮಹತ್ವದ ಯೋಗಗಳಾದ ಕರ್ಮಯೋಗ ಮತ್ತು ಧ್ಯಾನಯೋಗ ರೋಗಗಳನ್ನು ವಾಸಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅನಾರೋಗ್ಯವೆಂಬುದು ಹತ್ತಿರ ಕೂಡ ಸುಳಿಯಲಾರದು.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಶ್ರೀಮದ್ ಭಗವದ್ಗೀತೆ ಒಂದು ಯೋಗಶಾಸ್ತ್ರ. ಭವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಕೊನೆಗೆ ಓಂತತ್ಸತ್ ಇತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ.... ಯೋಗೋನಾಮ (ಪ್ರಥಮದಿಂದ ಅಷ್ಟಾದಶ) ಅಧ್ಯಾಯಃ ಎಂದೇ ಹೇಳಲಾಗಿದೆ. (ಮೊದಲನೆಯ ಅಧ್ಯಾಯ ಅರ್ಜುನ ವಿಷಾದಯೋಗವಾದರೆ ಎರಡನೆಯದು ಸಾಂಖ್ಯಯೋಗ. ಮೂರನೆಯದು ಕರ್ಮಯೋಗ, ನಾಲ್ಕನೆಯದು ಜ್ಞಾನಯೋಗ, ಐದನೆಯದು ಸಂನ್ಯಾಸಯೋಗ, ಆರನೆಯದು ಆತ್ಮಸಂಯಮಯೋಗ, ಏಳನೆಯದು ಜ್ಞಾನ-ವಿಜ್ಞಾನಯೋಗ, ಎಂಟನೆಯದು ಅಕ್ಷರಬ್ರಹ್ಮಯೋಗ, ಒಂಭತ್ತನೆಯದು ರಾಜವಿದ್ಯಾ ರಾಜಗುಹ್ಯಯೋಗ, ಹತ್ತನೆಯದು ವಿಭೂತಿಯೋಗ, ಹನ್ನೊಂದನೆಯದು ವಿಶ್ವರೂಪದರ್ಶನಯೋಗ, ಹನ್ನೆರಡನೆಯದು ಭಕ್ತಿಯೋಗ, ಹದಿಮೂರನೆಯದು ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ, ಹದಿನಾಲ್ಕನೆಯದು ಗುಣತ್ರಯವಿಭಾಗಯೋಗ, ಹದಿನೈದನೆಯದು ಪುರುಷೋತ್ತಮಯೋಗ, ಹದಿನಾರನೆಯದು ದೈವಾಸುರ ಸಂಪದ್ ವಿಭಾಗಯೋಗ, ಹದಿನೇಳನೆಯದು ಶ್ರದ್ಧಾತ್ರಯವಿಭಾಗಯೋಗ, ಹದಿನೆಂಟನೆಯದು ಮೋಕ್ಷಸಂನ್ಯಾಸಯೋಗ.)

ಈ ಯೋಗಶಾಸ್ತ್ರದಲ್ಲಿ ಆರೋಗ್ಯವನ್ನು ಕಾಪಾಡಲು ಆರೋಗ್ಯಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಅದರ ಬಗ್ಗೆ ವಿವರವಾದ ಅಭ್ಯಾಸದ ಅವಶ್ಯಕತೆ ಇದೆ. ನನಗೆ ಎರಡು ಶ್ಲೋಕಗಳು ಬಹಳ ಮಹತ್ವದ್ದಾಗಿ ತೋರಿವೆ. ಅವುಗಳ ಪ್ರಸ್ತಾಪವನ್ನಿಲ್ಲಿ ಮಾಡಬಯಸುವೆ. ಬಹಳ ಮಹತ್ವದ ಯೋಗಗಳು ಕರ್ಮಯೋಗ ಮತ್ತು ಧ್ಯಾನಯೋಗಗಳು. ಕರ್ಮಯೋಗವು ಜ್ಞಾನವನ್ನು ಪಡೆಯುವ ಬಹಿರಂಗ ಉಪಾಯವಾದರೆ ಧ್ಯಾನಯೋಗವು ಜ್ಞಾನವನ್ನು ಪಡೆಯುವ ಅಂತರಂಗದ ಉಪಾಯವಾಗಿದೆ. ಉದ್ಧರೇತ್ ಆತ್ಮನಾ ಆತ್ಮಾನಂ ಎಂಬ ಮಾತೂ ಗೀತೆಯಲ್ಲಿ ಬರುತ್ತದೆ. ತಾನೇ ತನಗೆ ಬಂಧು ಆಗಿರುವಂತೆ ತಾನೇ ತನಗೆ ಶತ್ರು ಎಂಬ ಮಾತೂ ಅಲ್ಲಿ ಬರುತ್ತದೆ. ಮನೋಹಿ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ ಎಂದು ಮನು ಹೇಳಿದ. ಪತಂಜಲಿ ಮಹರ್ಷಿಗಳು ಯೋಗವನ್ನು ಚಿತ್ತವೃತ್ತಿನಿರೋಧಃ ಎಂದು ಕರೆದರು. ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಚಿತ್ತದ ವಿಕಾರಗಳೆ ಮಹತ್ವದ ಪಾತ್ರವಹಿಸುತ್ತವೆ. ಇಂದಿನ ಹೆಚ್ಚಿನ ಕಾಯಿಲೆಗಳು ಆತಂಕ, ಒತ್ತಡ, ಉದ್ವೇಗಗಳಿಂದ ಸಂಭವಿಸುತ್ತವೆ ಎಂಬ ಮಾತನ್ನು ವೈದ್ಯವಿಜ್ಞಾನ ಅರಿತಿದೆ. ಅದಕ್ಕೆ ಔಷಧಿಗಳನ್ನು ತಯಾರಿಸುತ್ತಿದೆ. ಔಷಧಿ ಸೇವನೆ ಕಾಯಿಲೆಯ ಪ್ರಶ್ನೆಗೆ ಉತ್ತರವಲ್ಲ. ಹೆಚ್ಚಿನ ಆಧುನಿಕ ಔಷಧಿಗಳು ಪಾರ್ಶ್ವ ಪರಿಣಾಮಗಳಿಗೆ ಆಸ್ಪದಕೊಡುವುದರಿಂದ, ಒಂದು ಕಾಯಿಲೆ ವಾಸಿಮಾಡಲು ಹೋಗಿ ಇನ್ನೊಂದು ಕಾಯಿಲೆಗೆ ಆಸ್ಪದ ಮಾಡಿಕೊಡುವ ಔಷಧಿಗಳ ವಿಷಯದಲ್ಲಿ ಎಚ್ಚರಿಕೆ ವಹಿಸುವುದು, ಅವಶ್ಯವಾಗಿದೆ, ಅಪೇಕ್ಷಣೀಯವೂ ಆಗಿದೆ. ಯೋಗಾಭ್ಯಾಸ ಹಾಗೂ ಪಥ್ಯಾಹಾರ ರೋಗಗಳನ್ನು ವಾಸಿಮಾಡುವಲ್ಲಿ ಇಂದು ಮಹತ್ವದ ಪಾತ್ರ ವಹಿಸುತ್ತಿವೆ.

ಆರನೆಯ ಅಧ್ಯಾಯದಲ್ಲಿ ಬರುವ ಎರಡು ಶ್ಲೋಕಗಳು ಸ್ವಸ್ಥ ಆರೋಗ್ಯ ಕಾಪಾಡಲು ಮಾರ್ಗದರ್ಶಿಯಾಗಿವೆ.

ನಾತ್ಯಶ್ನಸ್ತು ಯೋಗೋಸ್ತಿ ನಚೈಕಾಂತಮನಶ್ನತಃ |
ನ ಚಾತಿ ಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ ||
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |
ಯುಕ್ತಸ್ವಪ್ನಾವಬೋಧಸ್ಯ ಯೋಗೋಭವತಿ ದುಃಖಹಾ ||
(ಗೀತಾ- ಅಧ್ಯಾಯ 6, ಶ್ಲೋಕ 16-17)

ಅತಿಯಾಗಿ ಉಣ್ಣುವವನು, ಏನೂ ಉಣ್ಣದೇ ಇರುವವನು, ಅತಿಯಾಗಿ ನಿದ್ರೆಮಾಡುವವನು (ಸ್ವಪ್ನಶೀಲನು), ನಿದ್ರೆ ಇಲ್ಲದೇ ಇರುವವನು (ಧ್ಯಾನಯೋಗಕ್ಕೆ) ಅನರ್ಹನು. ಯೋಗ್ಯವಾದ (ಅವಶ್ಯಕವಾದ) ಆಹಾರ ಹಾಗೂ ವಿಹಾರದಲ್ಲಿ (ದೈಹಿಕ ಚಟುವಟಿಕೆಯಲ್ಲಿ) ಕರ್ಮದಲ್ಲಿ ತೊಡಗಿದವನು, ಅವಶ್ಯಕವಾದ ನಿದ್ರೆ ಹಾಗೂ ಎಚ್ಚರವನ್ನು ಕಾಪಾಡಿಕೊಂಡು ಬಂದವನು ಧ್ಯಾನಯೋಗದಿಂದ ಸಂಸಾರಿಕ ದುಃಖಗಳನ್ನೆಲ್ಲ ಕಳೆದುಕೊಳ್ಳಲು ಸಾಧ್ಯ.

ವಿಷಯಾ ವಿನಿವರ್ತಂತೇ ನಿರಾಹರಸ್ಯ ದೇಹಿನಃ ಎಂದು 2ನೆಯ ಅಧ್ಯಾಯದಲ್ಲಿ (ಶ್ಲೋ.59) ಹೇಳಲಾಗಿದೆ. ಸ್ಥಿತಪ್ರಜ್ಞನು ಇಂದ್ರಿಯಜಯ ಸಾಧಿಸಬೇಕಾದರೆ ನಿರಾಹಾರ ಮಾಡಬೇಕು ಎಂದು ಹೇಳಿದೆ. ಅಲ್ಲಿಯ ಸಂದರ್ಭ ಬೇರೆಯಾಗಿದೆ. ಮೇಲಿನ ಎರಡು ಶ್ಲೋಕಗಳಲ್ಲಿ ಮೂರು ಸಂಗತಿಯ ಮೇಲೆ ಒತ್ತು ಕೊಡಲಾಗಿದೆ. 1) ಆಹಾರ ಮತ್ತು ಉಪವಾಸ, 2) ನಿದ್ರೆ ಮತ್ತು ಎಚ್ಚರ, 3) ಕಾರ್ಯ ಮತ್ತು ವಿಶ್ರಾಂತಿ.

ಊಟ ಮತ್ತು ಉಪವಾಸಗಳ ಸಂತುಲನ ಸಾಧಕ ಜೀವನದ ಆರೋಗ್ಯಕ್ಕೆ ಮಹತ್ವದ್ದು. ಏಕಾದಶಿಯು ಒಂದು ವ್ರತವಾಗಿರುವುದರಿಂದ ಅದರ ಪಾಲನೆ ಅವಶ್ಯಕ. ಯೋಗಿಯ ಮುಖ್ಯ ಲಕ್ಷ್ಯ ಧ್ಯಾನವಾಗಿರುವುದರಿಂದ ಯುಕ್ತ ಶಬ್ದದ ಬಳಕೆ ಇಲ್ಲಿ ಮಹತ್ವದ್ದಾಗಿದೆ. ಯೋಗಿಯಾದವ ನಿದ್ರೆ ಹಾಗೂ ಎಚ್ಚರದ ವಿಷಯದಲ್ಲಿ ಕೂಡ ಎಚ್ಚರಿಕೆ ವಹಿಸುವುದು ಅವಶ್ಯ. ಯೋಗ ಶಾಸ್ತ್ರದ ಪ್ರಕಾರ ರಾತ್ರಿ ಕನಿಷ್ಠ ನಾಲ್ಕು ತಾಸು ಅಬಾಧಿತ ನಿದ್ರೆ ದೇಹಕ್ಕೆ ಅವಶ್ಯ. ಇನ್ನು ಕಾರ್ಯ ಮತ್ತು ವಿಶ್ರಾಂತಿಯೂ ಮಹತ್ವದ್ದು. ಇಲ್ಲಿ ವಿಹಾರ ಶಬ್ದವು ನಡೆದಾಟವನ್ನು ಚಲನೆಯನ್ನು ಸೂಚಿಸುತ್ತದೆ (ಚರಾತಿ ಚರತೋಭಗಃ). ಸ್ಮೃತಿಗಳ ಪ್ರಕಾರ ಪ್ರತಿದಿನ ಒಂದು ಯೋಜನ (ಮೂರು ಮೈಲು) ನಡೆದಾಡುವುದು ದೇಹಕ್ಕೆ ಅವಶ್ಯಕ.

ಇದರಿಂದ ನಾವು ಕಲಿಯಬೇಕಾದ ಪಾಠಗಳು

1) ಅತಿಯಾಗಿ ಊಟಮಾಡಬಾರದು. ಅತಿ ಸರ್ವತ್ರ ವರ್ಜಯೇತ್ ಎನ್ನುವುದು ಊಟಕ್ಕೂ ಅನ್ವಯಿಸುತ್ತದೆ. ಆಯುರ್ವೇದದಲ್ಲಿ ಇದರ ಬಗ್ಗೆ ಹೆಚ್ಚು ವಿವರವಾಗಿ ಹೇಳುತ್ತಾರೆ. ಡಾ|ಬಿ.ಎಂ.ಹೆಗಡೆಯವರು ಒಂದು ಕಡೆ ಬರೆದಿದ್ದಾರೆ. ನಾವು ಹೊಟ್ಟೆತುಂಬಾ ಊಟಮಾಡಬಾರದು. ಜಠರದ ಅರ್ಧ ಆಹಾರದಿಂದ ತುಂಬಿದರೆ, ಕಾಲುಭಾಗ ನೀರು ಸೇವಿಸಬೇಕು, ಇನ್ನು ಕಾಲು ಭಾಗ ಹವೆಗಾಗಿ ಬಿಡಬೇಕು.ಎಂದು. ಇದನ್ನೆ ಹಿಂದೆ ನಮ್ಮ ಆಯುರ್ವೇದದಲ್ಲಿಯೂ ಹೇಳಲಾಗಿವೆ. ಅರ್ಧಂ ಸವ್ಯಂಜನಮನ್ನಸ್ಯ ತೃತೀಯಂ ಉದಕಶ್ಚ ಚ | ವಾಯೋಃ ಸಂಚರಣಾರ್ಥಂ ತು ಚತುರ್ಥಮವಶೇಷಯೇತ್|| (ವಾಗ್ಭಟ, ಅಷ್ಟಾಂಗಹೃದಯ).

2) ಅಹಾರವನ್ನು ಸೇವಿಸದೇ ಇರಬಾರದು. ಇದು ಕೂಡ ಮಹತ್ವದ್ದು. ಉಪವಾಸದಿಂದ ಕರುಳುಗಳು ತಮ್ಮ ಪಚನ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹಸಿವೆಗೂ ಒಂದು ನಿಯಮಿತ ಸಮಯವಿರುತ್ತದೆ. ಆ ನಿಯಮಿತತೆಯನ್ನು ಪಾಲಿಸದಿದ್ದರೆ ಹಸಿವೆ ಉಡುಗಿಹೋಗುತ್ತದೆ. ಮನಸ್ಸು ಪ್ರಫುಲ್ಲಿತವಾದಾಗ ಉಂಡ ಅನ್ನ ಪಚನವಾಗುತ್ತದೆ. ದುಃಖ ಆವರಿಸಿದಾಗ, ಕೋಪ ಬಂದಾಗ ಹಸಿವೆ ಆಗುವುದಿಲ್ಲ. ಒಂದು ವೇಳೆ ಜುಲುಮೆಯಿಂದ ಉಂಡರೂ ಅನ್ನ ಪಚನವಾಗುವುದಿಲ್ಲ. (ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ, ಬಿಸಿಗೂಡಿ ತಂಗಳುಣಬೇಡ, ವೈದ್ಯನ ಬೆಸನ ಬೇಡೆಂದ ಸರ್ವಜ್ಞ.)

3) ಯುಕ್ತವಾದ ಆಹಾರ ಸೇವಿಸಬೇಕು. ಯುಕ್ತ ಆಹಾರ ಮಿತಾಹಾರವಲ್ಲ, ಹಿತಾಹಾರ. ಪ್ರತಿಯೊಬ್ಬರಿಗೂ ಅವರವರ ಜೀರ್ಣಶಕ್ತಿಗೆ ಅನುಗುಣವಾಗಿ ಆಹಾರ ಸೇವಿಸಬೇಕಾಗುತ್ತದೆ. ಶ್ರಮದ ಕೆಲಸ ಮಾಡುವವರು ಅಲ್ಪ ಆಹಾರ ಸೇವಿಸಿದರೆ ಅದು ಅವರ ಆರೋಗ್ಯಕ್ಕೆ ಸರಿಯಲ್ಲ. ಹಿತಭುಕ್, ಮಿತಭುಕ್, ಕ್ಷುದಭುಕ್, ಋತಭುಕ್ ಎಂದು ನಮ್ಮ ಮುನಿಗಳು ಹೇಳಿದರು. ಹಿತವಾದುದನ್ನೇ ತಿನ್ನಬೇಕು, ಆಹಾರದ ವಿಷಯದಲ್ಲಿ ಮಿತಿ ಇರಲಿ, ಹಸಿವೆ ಆದಾಗಲೇ ಊಟಮಾಡಬೇಕು, ಸತ್ಯ ಹಾಗೂ ಋಜು ಮಾರ್ಗದಿಂದ ಸಂಪಾದಿಸಿದ ಅನ್ನವನ್ನೇ ಭುಂಜಿಸಬೇಕು ಎಂದರು.

4) ಅತಿಯಾಗಿ ನಿದ್ದೆ ಮಾಡುವುದು ಆಲಸಿಗಳ ಲಕ್ಷಣ. ನಿದ್ರೆ ದೇಹಕ್ಕೆ ಅವಶ್ಯಕವಾಗಿರುವ ಅವಸ್ಥೆ. ಎಷ್ಟೋಸಲ ಮಾನಸಿಕ ಕಾರಣಗಳಿಂದಾಗಿ ನಿದ್ರೆ ಬರದೇ ಹೋಗಬಹುದು. ನಿದ್ರಾಹೀನತೆ (ಇನ್‌ಸೋಮ್ನಿಯಾ) ಒಂದು ರೋಗ. ಅದಕ್ಕೆ ಕೆಲವರು ಮಾತ್ರೆ ಸೇವಿಸುತ್ತಾರೆ. ಅದು ದೇಹಕ್ಕೆ ಒಳ್ಳೆಯದಲ್ಲ. ಚೆನ್ನಾಗಿ ನಿದ್ರೆಬರಲು ಧ್ಯಾನಮುದ್ರೆ ಸಹಕಾರಿಯಾಗುತ್ತದೆ. ಶವಾಸನ ಕೂಡ ಒಳ್ಳೆಯದು.

5) ಅತಿ ಕಡಿಮೆ ನಿದ್ರೆ ಕೂಡ ದೇಹದ ಆರೋಗ್ಯಕ್ಕೆ ಹಾನಿಕರ.

6) ಕೊನೆಯದಾಗಿ ವಿಹಾರ ಆಹಾರದಷ್ಟೇ ಮಹತ್ವದ್ದು. ವ್ಯಾಯಾಮ, ದೈಹಿಕ ಚಟುವಟಿಕೆ ಅವಶ್ಯ. (ಉಂಡು ನೂರಡಿ ಎಣಸಿ, ಕೆಂಡಕ್ಕೆ ಕೈ ಕಾಸಿ, ಗಂಡುಮೇಲಾಗಿ ಮಲಗಿದವ, ವೈದ್ಯನ ಗಂಡಕಾಣಯ್ಯ ಸರ್ವಜ್ಞ.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X